ಹನಿಗಳು..
ನಗಲು ಹೇಳಿದ
ಬುದ್ಧ
ಆದರೆ
ಮಾನವ ನಗದು ಗಾಗಿ
ನಗುವುದನ್ನೇ
ಮರೆತ
ಬುದ್ಧ
ಮೌನನಾದ…
ನಾನು ಅಹಂಕಾರದಲ್ಲಿ
ಶಾಂತಿ ನೆಮ್ಮದಿಗಾಗಿ
ಊರೂರು
ಅಲೆದೆ
ಶಾಂತಿ ತನ್ನೊಳಗೆ ಇದೆ
ಎಂದು ತಿಳಿದಾಗ
ಅವನ್ನಲ್ಲಿನ
‘ನಾನು’ ಚಿರನಿದ್ರೆಗೆ
ಜಾರಿತ್ತು…
ನಾ
ಕಷ್ಟವೆಂದು
ಬುದ್ಧನೆಡೆಗೆ ಹೋದೆ
ಬುದ್ಧನ ನಗುಕಂಡ
ನನ್ನ ಕಷ್ಟಗಳು
ನನ್ನಲ್ಲಿಯೇ
ಲೀನವಾದವು…
ಬುದ್ಧನೆಂಬ ಬೆಳಕು
ಇಲ್ಲಿ ಹಚ್ಚಿಟ್ಟ ದೀಪದ ಪ್ರಭೆ
ಬೆಳಕ ನಡುವೆ
ದುಃಖ
ಕಷ್ಟ
ಅಹಿಂಸೆ
ಅಶಾಂತಿ
ಅಸುನಿಗಿದ್ದವು…
ಜಗತ್ತಿನ್ನು ನಿದ್ದೆಯಿಂದ ಎಬ್ಬಿಸಲು
ನಡುರಾತ್ರಿ ನಿದ್ದೆ
ತೊರೆದ ಬುದ್ದು
ಜಗತ್ತಿನ ನಿದ್ದೆಯಿಂದ ಏಳುವ
ಯಾವ ಪ್ರಯತ್ನ
ಮಾಡಲಿಲ್ಲ..
ನಗುವಿನ ಶಾಂತಿಯ
ಮಹತ್ವ ಹೇಳಿದ
ಬುದ್ದ
ನಗರದ ಗದ್ದಲದ
ನಡುವೆ
ಬುದ್ದ ನಗುವಿತ್ತು
ಯಾರ ಮನಸ್ಸಿನಲ್ಲಿ
ನಗುವಿನ ಕುರುಹು ಇರಲಿಲ್ಲ..
ಬುದ್ದನ
ಪ್ರತಿಮೆಗೆ
ಗೆದ್ದಲು ಕಟ್ಟಿರಬಹುದು
ಪ್ರತಿ ಎದೆಯಲ್ಲಿ ನೆಲೆಸಿರುವ
ಬುದ್ಧನ
ವಿಚಾರಗಳಿಗಲ್ಲ..
-ವೃಶ್ಚಿಕ ಮುನಿ..
ಶಾಲ್ಮಲೆಯ ಸ್ವಗತ
ಧಾರವಾಡದ ಸೋಮೇಶ್ವರ ತಾಣದಿ
ಹುಟ್ಟುವೆ ನಾನು ಚಿಕ್ಕ ಚಿಲುಮೆಯ ರೂಪದಿ
ಶಾಲ್ಮಲಾ ಎಂದೆನುವ ಸುರನದಿಯು ನಾನು
ನನ್ನ ಕಷ್ಟವ ನೀವು ಆಲಿಸುವಿರೇನು ?
ಉದಯಿಸುವ ಜಾಗದಲಿ ಮರಗಳು ತರತರ
ಹಿಂದಿನ ಹಾಗಿಲ್ಲ ಈಗಿನಾ ಪರಿಸರ
ಸುತ್ತ ಕಟ್ಟಡಗಳು ನಿತ್ಯ ಏಳುತಿವೆ
ಶುದ್ಧ ಪರಿಸರವನ್ನು ಹದಗೆಡಿಸುತ್ತಿವೆ
ನಿತ್ಯ ನಡೆಯುವುದಿಲ್ಲಿ ಎಲ್ಲ ಮಾಲಿನ್ಯ
ಇಲ್ಲಿರುವ ಜನಗಳಿಗೆ ಇದುವೆ ಸಾಮಾನ್ಯ
ನಗರದ ನಿತ್ಯ ನರಕ ಅನುಭವಿಸುತ್ತ
ಗುಪ್ತಗಾಮಿನಿಯಾದೆ ಉಸಿರ ಹಿಡಿಯುತ್ತ
ಧಾರವಾಡ ನಗರವು ನನ್ನ ತವರು ಮನೆ
ಇಲ್ಲಿ ಅರಿಯುವರಿಲ್ಲ ನನ್ನಯ ಭಾವನೆ
ಕಸಕಡ್ಡಿ ಎಲ್ಲವನು ಸುರಿಯ ಬರುತಾರೆ
ಸಂಕಟಗಳನು ನೆನೆದು ನಾನು ಅಳಲಾರೆ
ಹುಬ್ಬಳ್ಳಿಯ ಸೋದರಿ ಬೇಡ್ತಿ ಜೊತೆ ಸೇರಿ
ಹಿಡಿದೆ ಕಾರವಾರದ ಕಾನನದ ದಾರಿ
ದಟ್ಟ ಅಡವಿಯೆಂದರೆ ನಿಮಗಿದೆ ಭಯವು
ಕಷ್ಟ ಕಡಿಮೆಯು ನನಗದು ಅಭಯಧಾಮವು
ಸಹಸ್ರ ಲಿಂಗದಲ್ಲಿ ಶಿವನ ಸಂಧಿಸಿ
ಶಿರಸಿಗೆ ಬರುವವರನು ಕರೆದೆ ಕೈ ಬೀಸಿ
ಶಿವರಾತ್ರಿಯಲಿ ಜನರು ಮೀಯಲು ಬರುವರು
ದೇವರಿಗೆ ನಮಿಸುತ್ತ ಪುಣ್ಯ ಗಳಿಸುವರು
ಬಂಡೆಗಳ ಮೇಲಿಂದ ಬಳುಕುತ್ತ ಹರಿದೆ
ಮಾಗೋಡು ಹಳ್ಳಿಯಲಿ ಜಲಪಾತವಾದೆ
ದಟ್ಟಡವಿಯಲಿ ನಗುತ ಹರಿಯುವುದು ಚೆನ್ನ
ಕಡಲ ಸೇರಲು ಹರಿವೆ ಮೈದುಂಬಿ ಇನ್ನ
ಕಡಲ ಕಾಣುವ ತವಕ ಹೆಚ್ಚಿತೆನಗೀಗ
ಕಾನನ, ಕಲ್ಲು ಬಂಡೆ ಕಾಣದೆನಗೀಗ
ಗಂಗಾವಳಿ ಎನ್ನುವ ಹೆಸರಲ್ಲಿ ಮುಂದೆ
ಮಂಜುಗುಣಿಯ ಕಡಲನು ನಾ ಸೇರಬಂದೆ
-ಹಲವಾಗಲ ಶಂಭು
ಛಲದ ಬದುಕು
ಅಂಜದಿರು ಅಳುಕದಿರು
ಸೋತೆನೆಂದು ಮರುಗದಿರು
ಹೇಡಿತನದಿ ಕೈ ಕಟ್ಟಿ ಕುಳ್ಳದೆ
ವೀರತನದಿ ಹೋರಾಡಲಿ ನಿನ್ನ ಕೆಚ್ಚೆದೆ
ಅವಿರತ ಯತ್ನದಿ ನಿನಗೆ ಯಶಸ್ಸು
ಕಾಯಕ ನಿಂತರೆ ಸಿಗದು ಶ್ರೇಯಸ್ಸು
ಗುರಿ ಮುಟ್ಟುವ ತನಕ ನಿನ್ನ ದುಡಿಮೆ
ಎಲ್ಲರೂ ಹೊಗಳುವರು ನಿನ್ನ ಪ್ರೌಢಿಮೆ
ಭೂತದ ಹಿನ್ನೋಟ ಸಲ್ಲದು
ಚಿಂತಿಸಲು ಬರದು ಮಿಂಚಿ ಹೋದದ್ದು
ಉಜ್ವಲ ಭವಿಷ್ಯದತ್ತ ಹೊರಳಲಿ ನಿನ ಚಿತ್ತ
ಪ್ರಜ್ವಲ ಜ್ಯೋತಿಯು ಸುಳಿಯಲಿ ನಿನ್ನತ್ತ
ಸಿಕ್ಕ ಅವಕಾಶವನು ಬಾಚು
ಬೆಂಬಿಡದೆ ಹಿಂದೆ ಓಡು
ಗೆಲುವಿನ ವರ್ಷಧಾರೆಯ ಹರಿಸು
ಒಂದೊಮ್ಮೆ ವಿಫಲನಾದರೆ ಮತ್ತೆ ಯತ್ನಿಸು
ವಿಜ್ಞಾನ ಆವಿಷ್ಕಾರದ ಹಿಂದಡಗಿದೆ
ಹಲವು ವಿಜ್ಞಾನಿಗಳ ಸೋಲು
ಮತ್ತದೇ ಮಾರ್ಗದಿ ಸಾಗಿದರು ಬೆಂಬಿಡದೆ
ಕೊನೆಗೂ ಸಾಧಿಸಿದರು ಗೆಲುವು
ಜಗವೆ ನಾಟಕ ರಂಗವಾಗಿರಲು
ನಿನ್ನ ಸೋಲಿಗೆ ಚಪ್ಪಾಳೆ ತಟ್ಟುವರು ಕೆಲವರು
ಬೆನ್ನು ತಟ್ಟಿ ಹುರಿದುಂಬಿಸುವರು ಹಲವರು
ಜನ್ಮ ಪಾವನವಾಗುವುದು ಧನಾತ್ಮಕತೆಯಲಿ ನೀ ಸಾಗಲು
-ಗಾಯತ್ರಿ ನಾರಾಯಣ ಅಡಿಗ
ಗಮ್ಯ ಸೇರದು….
ಹಗೆತನದ ಹಗೆಯೊಳು
ಬಿದ್ದು ನಗುತಿದೆ ಬಾಳು ನಾಚಿಕೆಯಿಲ್ಲ…
ಬೇಡದ ಮಾತು ಬಾಡಿದ ಮೇಲೂ
ಆಂತರ್ಯದಿ
ಸೇಡಿನ ಸಂಚಿಕೆ ಮುಗಿಯದ ಹೊರತು
ವೈಷಮ್ಯದ ಬಾಳು ಗಮ್ಯ ಸೇರುವುದಿಲ್ಲ
ಜಾತಿ ಧರ್ಮದ ಗೊಡವೆಗಳನೇ ಜನ
ಒಡವೆ ಎಂದು ದರಿಸಿರುವಾಗ
ಗೊಡವೆಗಳನೇ ಜನ ಗಿಡಗಳೆಂದು
ನೀರೆರೆದು ಬೆಳೆಸುವಾಗ
ಅಳಿಸುವುದಾದರು ಹೇಗೆ
ಪೌರತ್ವ ಪಡೆದ ಪೌರರೊಳಗಿರೊ ವೈರತ್ವವ
ಇರುಳು ಹಗಲುಗಳ ಹೊಂದಾಣಿಕೆ
ಕಂಡು ಕಲಿಯದೆ ಕತ್ತಿ ಹಿಡಿವಾಗ
ಧರೆಯ ಸಹನೆಯ ಕಿಂಚಿಂತು ಅನುಕರಿಸದೆ
ಅನ್ಯರೇಳಿಗೆ ಅರಿತು
ಒಳಗೊಳಗೆ ಜನ ಜ್ವಾಲೆಯಾಗಿ ಉರಿಯುವಾಗ
ಬೆಳೆಸುವುದಾದರು ಹೇಗೆ
ಜನಮನದೊಳು ಮನುಷತ್ವವ
–ಅಬಕಂ
ಕರುಣೆ ಒಡಲಾದರೆ…
ಭವಿಸೋ ಪ್ರತಿ ಆವಿಯು ಮಳೆಯಾದರೆ,
ಇಳೆಯ ಒಡಲೆಲ್ಲ ನಲಿವ ಸೆಲೆಯಾಗದೇ..
ಭುವಿಯ ಪ್ರತಿ ಕಣವು ಕರುಣೆ ಒಡಲಾದರೆ,
ಕರಗೊ ಹನಿಹನಿಯು ಹಸಿರಾಗದೇ…
ಮಿಡಿವ ನವ ಭಾವ ನವಿರಾದರೆ,
ನುಡಿವ ಪ್ರತಿ ನುಡಿಯು ಸವಿಯಾಗದೇ..
ನಗುವ ನಸುಗೆನ್ನೆ ಹೊಸದಾದರೆ,
ಬಿರಿವ ಅಧರಗಳು ಜತೆಗೂಡವೇ…
ತೊದಲೋ ಪದಪದವು ಹದವಾದರೆ,
ತೆರೆದ ಕರಣಗಳು ಮಧುರವಾಗವೇ..
ನೋಡೋ ನೋಟಗಳು ಹೊಸದಾದರೆ,
ಕಾಡೊ ಕನಸುಗಳು ಹಸಿರಾಗವೇ
-ಸರೋಜ ಪ್ರಶಾಂತಸ್ವಾಮಿ
ಗಝಲ್
ಧರೆಯಲ್ಲಿ ಮರೆಯಾಗಿ ಪ್ರೀತಿಯ ತಂಗಾಳಿ
ನೆರಳಿಂದು ಒಲವಿನ ಭಾವ||
ಕರೆವೆನು ಮನದಲ್ಲಿ ಭಾವದರಸಿಯನು
ವರಿಸುತ ಚೆಲುವಿನ ಭಾವ||
ಮಂಗಳ ಶ್ಲೋಕದಿ ಗೀತೆಯ ಹಾಡಿದೆ
ತಿಂಗಳ ಕೌಮುದಿ ಚೆಲುವೆ|
ರಂಗದಿ ನೃತ್ಯವ ಗೈಯುವ ಮೋಹಿನಿ
ಕಂಗಳ ಗೆಲುವಿನ ಭಾವ||
ಕಂಕರಿ ವಾದ್ಯದ ನಾದಕೆ ಸೋತೆನು
ಕುಂಕುಮ ಫಾಲದಿ ಧರಿಸಿ|
ಸಂಕೋಲೆಯಲ್ಲಿಯೆ ಬಂಧಿಸಿ ನಿಂತೆನು
ತೆಂಕಣ ನಿಲುವಿನ ಭಾವ||
ವದನದಿ ಗುಳಿಕೆನ್ನೆ ತೋರಿಸಿ ನಲ್ಲನ
ಹೃದಯದ ಸೂರೆಯ ಮಾಡಿ|
ನದಿಯಲಿ ತೇಲುವ ಹಡಗಿನ ತೆರದಲಿ
ಮದನಿಕೆ ನಗುವಿನ ಭಾವ||
ಅಭಿನವ ಬರೆದಿಹ ಕವಿತೆಯ ಸೊಬಗಿದು
ರಭಸದಿ ಹರಿಯುವ ಕಡಲು|
ನಭದಲಿ ಹೊಳೆಯುವ ತಾರೆಯ ಹಾಗೆಯೆ
ಶುಭದೊಳು ನೆರವಿನ ಭಾವ||
-ಶಂಕರಾನಂದ ಹೆಬ್ಬಾಳ