“ಸಮಾನತೆಯ ಹರಿಕಾರ” ಕುವೆಂಪು: ಡಾ. ಅವರೆಕಾಡು ವಿಜಯ ಕುಮಾರ್

ಪ್ರತಿಯೊಂದು ಮಗುವೂ ಹುಟ್ಟುತ್ತಲೇ
ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವ’ನನ್ನಾಗಿ ಮಾಡುತ್ತೇವೆ.
ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೇ ಶಿಕ್ಷಣದ ಕರ್ತವ್ಯವಾಗಬೇಕು.

-ಕುವೆಂಪು

ಪ್ರಕೃತಿಯ ತಾಣವಾದ ಮಲೆನಾಡಿನ ಅಪ್ರತಿಷ್ಠಿತ ಮನೆತನ ಒಂದರಲ್ಲಿ 1904, ಡಿಸೆಂಬರ್ 29ರಂದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆ ಗ್ರಾಮದಲ್ಲಿ ಶ್ರೀ ವೆಂಕಟಪ್ಪ ಮತ್ತು ಶ್ರೀಮತಿ ಸೀತಮ್ಮ ಅವರ ಬಾಳಿನ ಬೆಳಕಾಗಿ ಪುಟ್ಟಪ್ಪನವರು ಜನಿಸಿದರು. ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ ಗ್ರಾಮದಲ್ಲಿ ಬೆಳೆದವರು ವಿಶ್ವಮಾನವರಾಗಿ ವಿಜೃಂಭಿಸಿ ಇತಿಹಾಸ ಪುಟದ ಸ್ವರ್ಣ ಅಕ್ಷರಗಳಲ್ಲಿ ಸೇರ್ಪಡೆಯಾದರು. ಆಗಿನ ಕಾಲದ ಬಡತನ, ದಾರಿದ್ರ್ಯ, ಅಸಾಯಕತೆ ಇವುಗಳನ್ನು ಕಣ್ಮುಂದೆ ಕಂಡ ಪುಟ್ಟಪ್ಪನವರು ಸಹಜವಾಗಿಯೇ ಸಾಮಾಜಿಕ ಪ್ರಜ್ಞೆ, ಸಾಮಾಜಿಕ ಚಿಂತನೆ, ಮಾನವೀಯ ಮೌಲ್ಯಗಳ ಪರವಾಗಿ ಧ್ವನಿಯೆತ್ತಿದವರು. ಮಾನವಕುಲದ ಏಕತೆಯ ಬಗ್ಗೆ ಅತೀವ ಕಾಳಜಿ ಹೊಂದಿದವರು. ಶತಮಾನಗಳಿಂದಲೂ ಪುರೋಹಿತವರ್ಗದ ತುಳಿತಕ್ಕೆ ಸಿಕ್ಕಿ ಶೋಷಿತರಾದ ಬಹುಜನರ ಆಶಾಕಿರಣವಾಗಿ ಶ್ರಮಿಸಿದವರು. ಅಲ್ಲದೆ ದೇಶ ಸ್ವತಂತ್ರ ಪಡೆದ ಶುಭ ಸಂದರ್ಭದಲ್ಲಿ ನಾಡಿನ ಶ್ರೀಸಾಮಾನ್ಯರೆಲ್ಲರೂ ನವ ಬದುಕನ್ನ ಆರಂಭಿಸಬೇಕೆಂದು ಕರೆ ನೀಡಿದ ನಾಡಿನ ಕನ್ನಡದ ಮಹಾಚೇತನ ಪುಟ್ಟಪ್ಪನವರು. ಬರೀ ಕವಿಯಾಗಿ ಕವಿವಾಣಿಗೆ ಸೀಮಿತವಾಗಿರದೆ ಶ್ರೇಷ್ಠ ಸಂಸ್ಕೃತಿ ಚಿಂತಕರು, ನವೋದಯ ಕಾಲದಲ್ಲಿನ ಧಾರ್ಮಿಕ ನಿಲುವಿನ ಜೊತೆಗೆ ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ, ಅರವಿಂದ ಮಹರ್ಷಿ ಮತ್ತು ಮಹಾತ್ಮ ಗಾಂಧೀಜಿಯವರಂತಹ ದೈವ ಪುರುಷರುಗಳ ಪ್ರಬಲವಾದ ಪ್ರಭಾವಕ್ಕೆ ತಮ್ಮ ಸಂಪೂರ್ಣ ವೈಚಾರಿಕತೆಯನ್ನು ವಿಸ್ತರಿಸಿ ಬಲಪಡಿಸಬೇಕೆಂದರು ಇವರು.

ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಹೇಳಿಕೆಯಂತೆ ಈ ದೇಶದ ಚರಿತ್ರೆ ಮತ್ತು ಸಂಸ್ಕೃತಿಯನ್ನು ಆರೋಗ್ಯಪೂರ್ಣವಾದ ಚರ್ಚೆಗೆ ಗುರಿಪಡಿಸಿದ ನಾಡಿನ ಕೆಲವೇ ಕೆಲವು ಲೇಖಕರಲ್ಲಿ ಕುವೆಂಪು ಅವರು ಮುಖ್ಯರಾಗುತ್ತಾರೆ. ಆರೋಗ್ಯ ಭರಿತವಾದ ನವ ಸಮಾಜದ ನಿರ್ಮಾಣ ನಮ್ಮ ಯುವಜನಾಂಗದ ಅವರಿಂದ ಮಾತ್ರ ಸಾಧ್ಯ ಎಂಬ ಮಹತ್ವವನ್ನು ಅಪಾರವಾಗಿ ನಂಬಿದವರು ಪುಟ್ಟಪ್ಪನವರು. ಶಾಸ್ತ್ರಗಳ ಬಗ್ಗೆ ಕಿಂಚಿತ್ತು ನಂಬಿಕೆಯಿರಲಿಲ್ಲ ಜಾತಿ-ಮತ-ಧರ್ಮಗಳ ಬಗ್ಗೆ ನಿಸ್ಸಂದೇಹವಾದ ತಿರಸ್ಕಾರ ವೈಚಾರಿಕ ಮನೋಧರ್ಮದಲ್ಲಿ ವೈಜ್ಞಾನಿಕ ದೃಷ್ಟಿಕೋನ ಕುವೆಂಪು ಅವರನ್ನು ತುಂಬಾ ಆಕರ್ಷಣೆಗೆ ಸಿಲುಕಿಸಿದ್ದ ವಸ್ತುವಿಷಯಗಳು. ನಿರಂಕುಶಮತಿಗಳಾಗಿ ದೂರದೃಷ್ಟಿಯನ್ನು ಬೆಳೆಸಿ,ಬಳಸಿ ಸರ್ವರೂ ಸಮಾನರು ಎಂಬ ಏಕತೆಯ ಜೊತೆಗೆ ನವ ಸಮಾಜದ ನಿರ್ಮಾಣಕ್ಕೆ ಮುನ್ನಡೆಯಬೇಕು. ಇದು ಕುವೆಂಪು ಅವರ ಹೆಬ್ಬಯಕೆಯಾಗಿತ್ತು. ಮನುಜಮತಕೆ ಸೇರಿಕೊಂಡು ನಾವೆಲ್ಲರೂ ವಿಶ್ವಮಾನವರಾಗಬೇಕೆಂಬುದು ಇವರ ಕನಸಿನ ಕೂಗು. ಕನ್ನಡದ ಮಣ್ಣಲ್ಲಿ ಹುಟ್ಟಿ, ಬೆಳೆದು, ಕಲಿತು ಕನ್ನಡದ ಕಂಪಿನಿಂದ, ಕನ್ನಡದ ಸಂಪತ್ ಎಲ್ಲವನ್ನು ಇಡೀ ವಿಶ್ವ ಮಟ್ಟದ ಪ್ರಚಾರಕ್ಕೆ ಕೊಂಡೊಯ್ದು ಧೀಮಂತ ಕನ್ನಡ ಪ್ರಜೆ ಎಂದರೆ ಪುಟ್ಟಪ್ಪನವರು. ಇವರು ಶ್ರೇಷ್ಠ ಮಾನವತವಾದಿಯು ಹೌದು.

ಕನ್ನಡ ಸಾರಸ್ವತ ಲೋಕದಲ್ಲಿ ಅಚ್ಚಳಿಯದ ಹೆಸರು ಕುವೆಂಪು. ಶಿಕ್ಷಕರಾಗಿ, ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಕುಲಪತಿಯಾಗಿ, ಆದರ್ಶ ಕವಿ, ಸಾಹಿತಿಯಾಗಿ ಶೈಕ್ಷಣಿಕ ವಲಯದಲ್ಲಿ ಮಹತ್ತರವಾದ ಕೊಡುಗೆ ನೀಡಿದ್ದಾರೆ. ಕಾವ್ಯ, ಕಥೆ, ಗದ್ಯ, ನಾಟಕ, ವಿಮರ್ಶೆ, ಜೀವನಚರಿತ್ರೆ, ಸಂಪಾದನೆ, ಅನುವಾದ, ಇತ್ಯಾದಿ ಜ್ಞಾನಶಿಸ್ತುಗಳ ಬಗ್ಗೆ ಅಪಾರವಾದ ಕಾಳಜಿ ಹೊಂದಿದವರು ಇವರು. ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕೃಷಿ ನಡೆಸಿ ಸೈ ಎನಿಸಿಕೊಂಡ ಶ್ರೇಷ್ಠ ರಾಷ್ಟ್ರಕವಿ ಇವರು. ಕವನಗಳು, ಮಹಾಕಾವ್ಯ,ಅನುಭವ ಕವನಗಳು,ಪ್ರಕೃತಿ ಕವನಗಳು,ದರ್ಶನ ಕವನಗಳು,ಪ್ರೇಮ ಗೀತೆಗಳು,ಶಿಶು ಗೀತೆಗಳು, ಕಾವ್ಯಮೀಮಾಂಸೆ, ಸಾನೆಟ್ಗಳು, ನಾಟಕ, ಮಕ್ಕಳ ನಾಟಕ, ಸಾಹಿತ್ಯ ವಿಮರ್ಶೆ, ಭಾಷಣ ಲೇಖನ, ವಚನಗಳು, ಮುನ್ನುಡಿಗಳು, ಜೀವನ ಚರಿತ್ರೆ,ಕಾದಂಬರಿಗಳು,ಅನುವಾದ ಸಾಹಿತ್ಯ, ಇತ್ಯಾದಿ ಪ್ರಕಾರಗಳಲ್ಲಿ, ಹೀಗೆ ಕನ್ನಡ ಸಾಹಿತ್ಯಲೋಕಕ್ಕೆ ತನ್ನ ವಿಶೇಷ ಕೃತಿಗಳ ಮೂಲಕ ಸಾಧನೆಗೈದ ಜಗದ ಕವಿಯ ಪರಿಚಯಾತ್ಮಕ ನೆಲೆಗಟ್ಟಿನ ಬರಹ ಮಾತ್ರ ನನ್ನದಾಗಿದೆ.

ನಾಡು ಕಂಡಂತಹ ಶ್ರೇಷ್ಠ ಸಂಸ್ಕೃತಿ ಚಿಂತಕ, ಆರಾಧಕ, ಮೇಲಾಗಿ ಮಾನವೀಯ ಅಂತಃಕರಣದ ಸತ್ವ ಮತ್ತು ತತ್ವಗಳನ್ನು ತನ್ನ ನಡೆ-ನುಡಿಯಲ್ಲಿ ಅಳವಡಿಸಿಕೊಂಡ ಸಾಂಸ್ಕೃತಿಕ ನಾಯಕರು. ಪ್ರಸ್ತುತ ಕಾಣಸಿಗುವ ಜಾತಿ ಸಂಘರ್ಷಗಳ ವಾತಾವರಣದಲ್ಲಿ ಕುವೆಂಪು ಅವರ ಚಿಂತನೆಗಳು ಮತ್ತು ಆದರ್ಶಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಜೊತೆಗೆ ಸಮ ಸಮಾಜದ ಪರಿಕಲ್ಪನೆಯನ್ನು ಶ್ರೀಸಾಮಾನ್ಯರಲ್ಲಿ ಇಮ್ಮಡಿಗೊಳಿಸಿದಾರೆ.

ಹಳೆಮತದ ಕೊಲೆಯಲ್ಲಿ
ಹೊಸಮತಿಯ ಹೊಳೆಯಲ್ಲಿ
ಕೊಚ್ಚಿ ಹೋಗಲಿ,
ಬರಲಿ ವಿಜ್ಞಾನ ಬುದ್ಧಿ
ವೇದ ಪ್ರಮಾಣತೆಯ
ಮರು ಮರಿಚಿಕೆಯಲ್ಲಿ
ನೀರರಸಿ ಕೆಡದಿರಲಿ
ಸ್ವಾತಂತ್ರ್ಯ ಸಿದ್ಧಿ
ತರುಣರಿರಾ ಎದ್ದೇಳಿ!
ಎಚ್ಚರಗೊಳ್ಳಿ! ಬಾಳಿ!

ನಿಜ, ನಮ್ಮ ಯುವ ಪೀಳಿಗೆ ಎಚ್ಚರಗೊಳ್ಳದಿದ್ದರೆ ಈ ನಾಡಿಗೆ ಉಳಿಗಾಲವಿಲ್ಲ. ನಮ್ಮ ಬದುಕನ್ನು ಆವರಿಸಿಕೊಂಡಿರುವ ಮೌಡ್ಯಗಳಿಂದ ನನ್ಮೇಲೆ ಏರ್ಪಟ್ಟಿರುವ ಬೌದ್ಧಿಕ ದಾಸ್ಯದಿಂದ ನಾವು ಬಿಡಿಸಿಕೊಳ್ಳಲೇಬೇಕು.ಅಂಧಶ್ರದ್ಧೆಗಳ, ಮತೀಯ ಮೂಲಭೂತವಾದ ಬಲೆಯಿಂದ ಸ್ವತಂತ್ರರಾಗಬೇಕು.ಮತಧರ್ಮಗಳ ಮೋಹದಿಂದ ಹೊರಬಂದು,ವಿಜ್ಞಾನ ಅವಿಷ್ಕಾರಗಳ ಸತ್ಯಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಬೇಕು.ಇದು ಶ್ರೀಸಾಮಾನ್ಯರಿಗೆ ಎಲ್ಲರಿಗೂ ಕುವೆಂಪು ಅವರು ಸಾರಿದ ‘ಎಚ್ಚರ ವಾಣಿ’.

ಗುಡಿ, ಚರ್ಚು,ಮಸೀದಿಗಳ ಬಿಟ್ಟು ಹೊರಬನ್ನಿ!
ಬಡತನವ ಬುಡಮಟ್ಟ ಕೀಳಬನ್ನಿ!
ಮೌಢ್ಯತೆಯ ವರದಿಯನ್ನು ಹೊರದೂಡಲೈ ತನ್ನಿ!
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ
ಓ ಬನ್ನಿ ಸೋದರರೆ ಬೇಗ ಬನ್ನಿ!

ಹೀಗೆ ಎಲ್ಲಾ ಸಾಮಾಜಿಕ ವಿಕೃತಿಗಳನ್ನು ಮೀರಿದ ‘ಮಾನವ ಧರ್ಮ’ ಎಂಬ ಆಶಯವನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕು. ನಿರಂಕುಶಮತಿಗಳಾಗಿ ಮಾನವೀಯ ಸಮಾಜ ನಿರ್ಮಾಣಮಾಡುವ ದಾರಿಯಲ್ಲಿ ಹೆಜ್ಜೆ ಇಡಬೇಕೆಂದು ಸದಾ ಬಯಸುತ್ತಿದ್ದರು. ಪ್ರಸ್ತುತ ಸಮಾಜ ಅವೆಲ್ಲವನ್ನು ಮರೆತು ನಡೆಯುತ್ತಿದೆ. ಧರ್ಮ ಸಹಜವಾಗಿಯೇ ಆಧರ್ಮವಾಗಿದೆ. ಮಾನವೀಯತೆ ಆಮಾನವೀಯತೆಯಾಗಿದೆ. ಧರ್ಮ ಮತ್ತು ರಾಜಕಾರಣದ ಮೈತ್ರಿ ನಮ್ಮ ಸಮಾಜದ ಆರೋಗ್ಯವನ್ನು ನಾಶಮಾಡುತ್ತಿದೆ. ಹೀಗೆ ಕುವೆಂಪು ಅವರು ಕ್ರಮಿಸಿದ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದೆಷ್ಟು ಅಗೋಚರ ಸಾಮಾಜಿಕ ವಿಸ್ಮಯಗಳು ನಮ್ಮ ಅನುಭವಕ್ಕೆ ಸಿಲುಕುತ್ತವೆ. ಅಷ್ಟು ಕನ್ನಡದ ಮನಸ್ಸು ಕುವೆಂಪು ಅವರದಾಗಿತ್ತು. ಇವರ ‘ ಶ್ರೀ ರಾಮಾಯಣ ದರ್ಶನಂ’ ಎಂಬ ಮಹಾನ್ ಗ್ರಂಥಕ್ಕೆ ಅತ್ಯುನ್ನತವಾದ’ ಜ್ಞಾನಪೀಠ ಪ್ರಶಸ್ತಿ’ ಲಭಿಸಿದ್ದು ಕನ್ನಡದ ಪಾಲಿಗೆ ಸುಸಂದರ್ಭವೇ ಸರಿ. ಇವರ ಸಂವೇದನೆಯ ಪ್ರತೀಕವಾಗಿ ಅನೇಕ ಪ್ರಶಸ್ತಿ, ಪುರಸ್ಕಾರಗಳು ಆಧರಿಸಿ ಬಂದಿವೆ.1958 ‘ಪದ್ಮಭೂಷಣ’, 1964′ ರಾಷ್ಟ್ರಕವಿ ಪ್ರಶಸ್ತಿ’ ಪಡೆದ ಮೊದಲಿಗ ಕನ್ನಡ ಎಂಬ ಗೌರವ, 1966 ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ, 1968 ಕನ್ನಡದ ಮೊದಲ ” ಜ್ಞಾನ ಪೀಠ ಪ್ರಶಸ್ತಿ ಗರಿ’.1969 ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ, 1979 ಕನ್ನಡ ಭಾಷೆ ಮತ್ತು ಸಾಹಿತ್ಯದ ಅನುಪಮ ಸೇವೆಗಾಗಿ ‘ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, 1995 ಮರಣೋತ್ತರವಾಗಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿ, 1992′ ಕರ್ನಾಟಕ ರತ್ನ ಗೌರವ’,1957 ಧಾರವಾಡದಲ್ಲಿ ಜರುಗಿದ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ,1960 ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳ ಸ್ಥಾಪನೆ.1985 ಮೈಸೂರಿನಲ್ಲಿ ನಡೆದ ಮೊದಲ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆ ನೆರವೇರಿಸಿದ್ದು ಇವೆಲ್ಲ ಕನ್ನಡದ ಪಾಲಿಗೆ, ಕನ್ನಡದ ಅಗ್ರಗಣ್ಯ ವ್ಯಕ್ತಿಗೆ ದೊರೆತಂತಹ ಗೌರವಗಳಾಗಿವೆ.

ಕನ್ನಡದ ಕಂಪನ್ನು ನಡೆ-ನುಡಿ, ಆಚಾರ-ವಿಚಾರ, ಆಡಳಿತಗಳ ಮೂಲಕ ಸೂಚಿಸಿದ ಕನ್ನಡದ ಅಗ್ರಮಾನ್ಯ ಚೇತನ ಕುವೆಂಪು ಅವರು. ಇವರನ್ನ ನೆನೆದು ನಾವು ಬದುಕಿನಲ್ಲಿ ಮುನ್ನಡೆದರೆ ಅದೇ ಕನ್ನಡದ ಶ್ರೇಷ್ಠ ಕೆಲಸ, ಇವರ ‘ ವಿಶ್ವಮಾನವ ಸಂದೇಶ’ವನ್ನು ಜೀವನ ಉದ್ದಕ್ಕೂ ಅನುಷ್ಟಾನಗೊಳಿಸುವ ಕಾರ್ಯದಲ್ಲಿ ಮುಂದಾದರೆ ನಾವು ಅವರ ದಿವ್ಯ ಸ್ಮರಣೆಗೆ ಸಲ್ಲಿಸಬಹುದಾದ ಕನ್ನಡದ ಕಾಣಿಕೆ. ಪ್ರಸ್ತುತ’ ಯುಗ ಸಂವೇದನೆಯ’ ನೆಲೆಗಟ್ಟಿನಲ್ಲಿ ಸಾಹಿತ್ಯ ಮತ್ತು ಸಾಹಿತ್ಯ ಪ್ರಕಾರಗಳು ಅಷ್ಟೇ ಪರಿಣಾಮಕಾರಿಯಾಗಬಲ್ಲವು, ಅವುಗಳ ಪ್ರಸ್ತುತ ಚರ್ಚೆಅತ್ಯವಶ್ಯಕ ಕೂಡ. ‘ ಓ ನನ್ನ ಚೇತನ, ಆಗು ನೀ ಅನಿಕೇತನ,

-ಡಾ. ಅವರೆಕಾಡು ವಿಜಯ ಕುಮಾರ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x