“ಬಯಲುಡುಗೆಯ ಬೊಂತಾ – ಕತ್ತಲ ಗರ್ಭದ ಬೇಗೆಯಲಿ ಬೇಯುವ ಸಾವಿರದ ಒಂದು ಚಿತ್ರಕಾವ್ಯ”: ಎಂ.ಜವರಾಜ್

“ಸಂಸಾರವೆಂಬುದೊಂದು ಗಾಳಿಯ ಸೊಡರು,
ಸಿರಿಯೆಂಬುದೊಂದು ಸಂತೆಯ ಮಂದಿ, ಕಂಡಯ್ಯ!
ಇದ ನೆಚ್ಚಿ ಕೆಡಬೇಡ ಸಿರಿಯೆಂಬುದ!
ಮರೆಯದೆ ಪೂಜಿಸು
ಆಚಾರವೇ ಸ್ವರ್ಗ, ಅನಾಚಾರವೇ ನರಕ,
ನೀವೇ ಪ್ರಮಾಣು ಕೂಡಲಸಂಗಮದೇವ”
(-ಬಸವಣ್ಣ)

ಲೇಖಕ, ತಾನು ಅನುಭಿಸಿದ ನೋವು, ಯಾತನೆ, ತುಮುಲ, ರಂಜನೆ, ಕಾಮ, ಭೋಗ, ಶೀಲ, ಶೋಷಣೆ, ಚಳುವಳಿ, ಹೋರಾಟ, ಧರ್ಮ, ದೇವರು, ಜಾತಿ, ಮತ, ಪಂಥ, ಕುರಿತಾದ ತನ್ನೊಳಗಿನ ಅನುಭವವನ್ನು ಹೊಸದೇ ಎನುವ ಸೃಜನಶೀಲ ಕತೆ ಕವಿತೆ ಕಾದಂಬರಿ ಮತ್ತು ಮಹಾಕಾವ್ಯವಾಗಿ ಚಿತ್ರಿಸಿದ್ದಿದೆ.

ಇದರ ಆಚೆಗು ಲೇಖಕನೊಬ್ಬನ ಮೂಲಕ ತಾನು ಹುಟ್ಟುವ ಮುನ್ನಿನ – ಈಗಾಗಲೇ ನಡೆದು ಹೋಗಿರುವ ಪುರಾವೆ ರೂಪದಲ್ಲಿ ಸಿಗುವ ಘಟಿಸಿದ ಇತಿಹಾಸದ ಘಟನೆಗಳನ್ನು, ಪುರಾಣ, ಜಾನಪದ ಅಥವಾ ದಂತಕತೆ ಎನುವಂಥವುಗಳನ್ನು ಅದರಲ್ಲು ಬುದ್ಧನ ಜಾತಕ ಕತೆಗಳನ್ನು ಇಟ್ಟುಕೊಂಡು ಆಯಾ ತಲೆಮಾರಿನ ಪ್ರಸ್ತುತತೆಗೆ ಪೂರಕವಾಗಿ ಕತೆಗಳಾಗಿ ಕಾದಂಬರಿಗಳಾಗಿ ನಾಟಕಗಳಾಗಿ ಮಹಾಕಾವ್ಯಗಳಾಗಿ ಅಕ್ಷರ ರೂಪ ಪಡೆದಿವೆ.

ಈ ತರಹದ ಇತಿಹಾಸದ ಘಟನಾವಳಿಗಳನ್ನು ಕನ್ನಡದಲ್ಲಿ ಕುವೆಂಪು, ವಿ.ಕೃ.ಗೋಕಾಕ್, ಗಿರೀಶ್ ಕಾರ್ನಾಡ್, ಪಿ.ಲಂಕೇಶ್, ಕೆ.ಎಸ್. ನಿಸಾರ್ ಅಹಮ್ಮದ್, ಚಂದ್ರಶೇಖರ ಕಂಬಾರ ಇನ್ನು ಕೆಲ ಲೇಖಕರು ಇಂತಹ ಪ್ರಯತ್ನಗಳ ಪ್ರಮುಖ ರೂವಾರಿಗಳು. ಕನ್ನಡೇತರವಾಗಿಯೂ ಭಾರತೀಯ ಸಾಹಿತ್ಯ ವಿವಿಧ ಪ್ರಾದೇಶಿಕ ಭಾಷೆಗಳಲ್ಲು ಇಂತಹ ಘಟನಾವಳಿ ಆಧರಿಸಿದ ಸಾಕಷ್ಟು ಕೃತಿ ಬಂದಿವೆ.

ಸುಮಾರು ತೊಂಬತ್ತು ಭಾಗದಷ್ಟು ಭಾರತೀಯ ದೇಶೀ ಸಾಹಿತ್ಯದ ಪರಂಪರೆಯಲ್ಲಿ ಕ್ರಿಸ್ತಪೂರ್ವದ ಐತಿಹಾಸಿಕ ಬುದ್ಧನ ಬಗ್ಗೆ ಮುಪ್ಪು, ರೋಗ, ಸಾವು, ಬಿಳಿ ಆನೆ, ಜ್ಯೋತಿಷಿ, ಸ್ವಪ್ನ, ರಾಜ್ಯ ಪರಿತ್ಯಾಗದ ಒಂದೆಳೆ ಕತೆ – ಒಂದು ರೂಪದ ಪುನರಾವರ್ತಿತ ಇತಿಹಾಸ ಹೇಳಿದ್ದಿದೆ. ಅದೇ ಒಂದೆಳೆಯ ಕತೆಯನ್ನು ಇನ್ನೊಂದು ಬಗೆಯಲ್ಲಿ ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಓದು ಅಧ್ಯಯನದ ಅನುಭವದ ಭಿತ್ತಿಯೊಳಗಿಂದ – ಎರಡು ಊರುಗಳ ನಡುವಿನ ರೋಹಿಣಿ ನದೀ ನೀರು ಹರಿಸುವಿಕೆ ವಿಚಾರದಲ್ಲಿ ‘ಎರಡು ಭಾಗದ ಜನರೂ ರೋಹಿಣಿ ನದೀ ನೀರಿನ ಹಕ್ಕುದಾರರು’ ಎಂಬ ಬುಧ್ದನ ಪ್ರತಿಪಾದನೆ ವಿರುದ್ಧವಾಗಿ ಆಳುವ ರಾಜಾಡಳಿತ ಬುದ್ಧನನ್ನು ರಾಜ್ಯದ್ರೋಹ ದೇಶದ್ರೋಹ ಜನದ್ರೋಹದ ಆಪಾದನೆ ಮೇಲೆ ರಾಜ್ಯ ಬಿಟ್ಟು ಹೋಗುವಂತೆ ಅದೂ ರಾಜ್ಯ ಪರಿತ್ಯಾಗದಂತೆ ಚಿತ್ರಿಸಿ ಹೊಸದೇ ಎನುವ ಇತಿಹಾಸದ ವಿವರವನ್ನು ದಾಖಲಿಸುತ್ತಾರೆ. ಈ ಹೊಸ ವಿಚಾರದ ಬೆನ್ನು ಬಿದ್ದ ಕೆಲ ವಿರಳಾತಿ ವಿರಳ ಲೇಖಕರು ಸನ್ನಿವೇಶದ ಚಿತ್ರಣವನ್ನು ಸಾಹಿತ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ. ಅದರಲ್ಲಿ ಕನ್ನಡದಲ್ಲಿ ಮ.ನ.ಜವರಯ್ಯ ಈ ರೋಹಿಣಿ ನದೀ ಸೀಕ್ವೆನ್ಸ್ ಕನೆಕ್ಟ್ ಇಟ್ಟುಕೊಂಡು ‘ಜಲ’ ಎಂಬ ನಾಟಕ ರಚಿಸಿದ್ದಾರೆ.

ಮಹಾದೇವ ಹಡಪದ ನಟುವರ

ಬಿ.ಎಂ.ಶರ್ಮಾ ಅವರು ಕ್ರಿಸ್ತಪೂರ್ವ ಆರು ಸಾವಿರದಿಂದ ಕ್ರಿಸ್ತಶಕ ಸಾವಿರದ ಒಂಬೈನೂರ ನಲವತ್ತೆರಡರ ತನಕದ ಮಾನವ ಸಮಾಜದ ಐತಿಹಾಸಿಕ, ಆರ್ಥಿಕ, ರಾಜನೈತಿಕವಾದ ವೈಚಾರಿಕವೂ ಸಾಂಪ್ರದಾಯಿಕವೂ ಅನಿಸುವಂತಹ ಇಪ್ಪತ್ತು ಕಥಾರೂಪದ ಪೂರ್ಣ ಚಿತ್ರ ಹೇಳುವ ರಾಹುಲ ಸಾಂಕೃತ್ಯಾಯನನ ಹಿಂದಿಯ ‘ವೋಲ್ಗಾ-ಗಂಗಾ’ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ಬಹುಶಃ ಭಾರತೀಯ ಸಾಹಿತ್ಯ ಚೆರಿತ್ರೆಯಲ್ಲಿ ಇದೊಂದು ಕಥಾರೂಪದ ಸೃಜನಶೀಲ ಕೃತಿಗಳಲ್ಲೊಂದು. ನಿಶಾ, ದಿವಾ, ಅಮೃತಾಶ್ವ, ಪುರುಹೂತ, ಪುರುಧಾನ, ಅಂಗಿರಾ, ಸುದಾಸ, ಪ್ರವಾಹಣ, ಬಂಧುಲಮಲ್ಲ, ನಾಗದತ್ತ, ಪ್ರಭಾ, ಸುಪರ್ಣ ಯೌಧೇಯ, ದುರ್ಮುಖ, ಚಕ್ರಪಾಣಿ, ಬಾಬಾ ನೂರುದ್ದೀನ್, ಸುರಯ್ಯಾ, ರೇಖಾ ಭಗತ್, ಮಂಗಲಸಿಂಹ, ಸಫ್ದರ್, ಸುಮೇರ ಹೆಸರಿನ ವಿಶಿಷ್ಟ ಕತೆಗಳಲ್ಲಿ ಒಂದೊಂದು ತಲೆಮಾರಿನ ಜೀವನ ವಿಧಾನ ಸಂಘರ್ಷ ಬದುಕಿನ ಹೋರಾಟದ ಯಕ್ಕಃಶ್ಚಿತ್ ಪಾತ್ರಗಳು ಮತ್ತು ಆಳುವ ಮನೆತನಗಳ ಚಿತ್ರಣವನ್ನು ವಿಶಿಷ್ಟ ರೀತಿಯಲ್ಲಿ ಕಟ್ಟಿಕೊಟ್ಟಿರುವ ಕಥಾ ಹೆಣಿಗೆ ಇದೆ. ಜೊತೆಗೆ ಅನೇಕ ಪ್ರಾಚೀನ ಇತಿಹಾಸ ಬರಹಗಳು ಸಹ ಅವತ್ತಿನ ಘಟನಾವಳಿಯ ಪ್ರಸ್ತುತಿ ಆಯಾಯ ತಲೆಮಾರಿನ ಸಾಹಿತ್ಯ ಕೃತಿಗಳಲ್ಲಿ ಕಾಣಬಹುದು.

ಮಾತೃಭಾಷೆ ಪಂಜಾಬಿಯಾಗಿದ್ದರು ಸಂಸ್ಕೃತ ಹಿಂದಿ ಭಾಷೆಯ ಮೇಲೆ ಅಪಾರ ಹಿಡಿತವಿದ್ದ ಮೋಹನ್ ರಾಕೇಶ್ – ಮದನ ಮೋಹನ ಗುಗಲಾಣೀ ಅವರು ಹಿಂದಿಯಲ್ಲಿ ಐತಿಹಾಸಿಕವೂ ಪುರಾಣವೂ ಜಾನಪದವೂ ಅನಿಸುವಂಥ ಕಾಳಿದಾಸನ ಜೀವನ ವೃತ್ತಾಂತ ಕುರಿತ ‘ಆಷಾಡ್ ಕಾ ಏಕ್ ದಿನ್’ ನಾಟಕವನ್ನು ರಚಿಸಿ ಗಮನ ಸೆಳೆದವರು. ಅದನ್ನು ಸಿದ್ದಲಿಂಗ ಪಟ್ಟಣಶೆಟ್ಟಿ ಕನ್ನಡದಲ್ಲಿ “ಆಷಾಡದ ಒಂದು ದಿನ” ವನ್ನಾಗಿ ತಂದಿದ್ದಾರೆ. ಇದನ್ನು ಓದುತ್ತಾ ಕಾಳಿದಾಸ ಬಗ್ಗೆ ನಾವು ತಿಳಿದಿದ್ದಂಥ ಕತೆಯ ಹೂರಣವನ್ನು ಒಡೆದು ಹೊಸದೇ ಆದ ಚಿತ್ರಣವನ್ನು ನಮ್ಮ ಮುಂದೆ ಇಡುತ್ತದೆ. ಅವಳು ಅವನ ಮೇಲೆ ಹೊಂದಿದ್ದ ಪ್ರೀತಿ,‌ ನಡುವೆ ಅನೇಕ ಕನಸು, ಕಾಳಿದಾಸ ಲೋಕಸಂಚಾರದ ನಂತರದ ಆಗಮವಾದ ಒಂದು ಆಷಾಡ ದಿನದ ಚಿತ್ರಣ ಬೆರಗು ಹುಟ್ಟಿಸುವಂಥದ್ದು. ಇದು ಲೇಖಕನೊಬ್ಬ ಇತಿಹಾಸ ಜಾನಪದ ಪುರಾಣದ ಪಾತ್ರಗಳನ್ನು ತನ್ನೊಳಗೆ ಇಳಿಸಿಕೊಂಡು ತನ್ನದೇ ಬಗೆಯಲ್ಲಿ ಹೇಗೆ ತನ್ನ ಕಾಲಘಟ್ಟಕ್ಕೆ ಪೂರಕವಾಗಿ ರಚಿಸುತ್ತಾನೆ ಎನ್ನುವುದೇ ಆಗಿದೆ. ಇವು ಬರಹಗಾರನೊಳಗೆ ಸೃಜಿಸಿ ರೂಪಿತವಾದ ಸಾಹಸದ ದಟ್ಟ ಸೃಜನಶೀಲತೆ.

ಇಂಥ ಸೃಜನಶೀಲ ಬರಹಗಳು ಬ್ರಿಟೀಷ್-ಭಾರತ ನಡುವಿನ ಸ್ವಾತಂತ್ರ್ಯ ಹೋರಾಟದ ಚಿತ್ರಣವನ್ನು ಚಿತ್ರಿಸಿದ್ದಿದೆ. ಬ್ರಿಟೀಷ್ ಶೃಂಖಲೆಯಿಂದ ಭಾರತೀಯರು ಬಿಡುಗಡೆ ಪಡೆವ ಉಮೇದಿನ ಕರ್ನಾಟಕ ಮತ್ತು ಮೂರು ಆಂಗ್ಲೋ ಮೈಸೂರು ಯುದ್ದ, ಟಿಪ್ಪು, ಹೈದರ್ ಜೀವನ ವೃತ್ತಾಂತಗಳು ಕತೆ, ನಾಟಕ, ಕಾದಂಬರಿಗಳಾಗಿ ಸಾಹಿತ್ಯ ರೂಪ ಪಡೆದಿವೆ.

ವಿ.ಕೃ.ಗೋಕಾಕ್ ಅವರ ‘ಭಾರತ ಸಿಂಧೂ ರಶ್ಮೀ’ ಪುರಾಣೇತಿಹಾಸ ಹೊಂದಿರುವ ಒಂದು ಮಹಾಕಾವ್ಯ. ಇದು ಋಗ್ವೇದ ಕಾಲದ ಜನಜೀವನದ ಒಟ್ಟು ಚಿತ್ರಕಾವ್ಯವಾಗಿದೆ. ಹಾಗೆ ತ.ರಾ.ಸು ಅವರ ‘ದುರ್ಗಾಸ್ತಮಾನ’ ಮತ್ತು ಪ್ರಭುಶಂಕರರ ‘ಪ್ರೇಮಭಿಕ್ಷು’ ತರಹದ ಇನ್ನು ಅನೇಕ ಕೃತಿಗಳು ಐತಿಹಾಸಿಕ ಘಟನಾವಳಿಗಳ ಸಾಹಿತ್ಯದ ಬರಹಗಳ ಭಾಗವಾಗಿವೆ.

ಇಷ್ಟು ದೀರ್ಘ ವಿವರಗಳ ದಾಖಲೆ ಸಹಿತದ ಸಾಹಿತ್ಯ ಹೇಳುವುದರ ಹಿಂದೆ ಮತ್ತು ಇಂತಹ ಒಂದು ಐತಿಹಾಸಿಕ ಘಟನಾವಳಿಗಳ ಕಥಾವಸ್ತುವಿನ ಓದಿನ ಕೌತುಕತೆ ಇರುವ ಭಿನ್ನ ಕೃತಿ ಮಹಾದೇವ ಹಡಪದ ನಟುವರ ಅವರ “ಬಯಲುಡುಗೆಯ ಬೊಂತಾ”.

“ಬಯಲುಡುಗೆಯ ಬೊಂತಾ” ಪ್ರತ್ಯೇಕ ಆರು ಕತೆಗಳ ಒಟ್ಟು ಗುಚ್ಚ. ಅವು ಪ್ರತ್ಯೇಕ ಕತೆಗಳು ಅನಿಸದೆ ಒಂದರ ನಂತರ ಒಂದು ಓದುತ್ತಾ ಆ ಆರು ಕತೆಗಳು ಒಟ್ಟಾಗಿಯೇ ಸೇರಿಸಿ ಒಂದೇ ಕತೆಯೇನೋ ಅನಿಸುವಷ್ಟು ಪಾತ್ರಗಳು ಪ್ರವೇಶ ಪಡೆದು ನಡೆಯುತ್ತ ಮಾತಾಡುತ್ತವೆ. ಇಲ್ಲಿ ಶಿವನ ಕುದುರೆ, ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ, ಬಯಲುಡುಗೆಯ ಬೊಂತಾ, ಮಹಾದೇವ ಭೂಪಾಲ ಮಾರಯ್ಯನಾದುದು, ಕನ್ನಗತ್ತಿಯ ಮಾರಯ್ಯ, ಕರ್ತಾರನ ಕಮ್ಮಟ – ಓದುತ್ತಾ ಓದುತ್ತಾ ಹನ್ನೆರಡನೇ ಶತಮಾನದ ಭಾಗಶಃ ಚಿತ್ರಣ ಕಣ್ಣ ಮುಂದೆ ಚಿತ್ರ ಚಿತ್ರವಾಗಿ ಮೂಡಿ ನಿಲ್ಲುತ್ತದೆ. ಹಾಗೆ ಓದುಗನಿಗೆ ಕೌತುಕ ಹುಟ್ಟಿಸುವಂತೆ ಕತೆಗಳ ನಿರೂಪಣಾ ಶೈಲಿ ಇದೆ. ಅದನ್ನು ಕಟ್ಟಿಕೊಟ್ಟಿರುವ ರೀತಿ ಕಥೆಗಾರನ ಕಥನ ತಂತ್ರ ವಿಭಿನ್ನವಾಗಿದೆ.

ಹಡಪದ ಅವರ ಕತೆಯ ಹುಟ್ಟಿನ ಮೂಲ
‘ಕತೆ ಹೇಳುವ ಮೊದಲು ಕೇಳುವುದ ಕಲಿಯಬೇಕು ಎಂದು ಹೇಳಿದವಳು ನನ್ನವ್ವ’ ಎಂದು ತುಂಬ ಆಪ್ತವಾಗಿ ಸೆರಗಿನೊಳಗೆ ಅಂಟಿಸಿಕೊಂಡು ಧ್ವನಿಸುವ ಅವರ ಅವ್ವ ಹೇಳುತ್ತಿದ್ದ ತೂಕದ ಮಾತನ್ನು ಗಂಭೀರವಾಗಿ ಪರಿಗಣಿಸಿರುವುದರ ಹಿಂದಿದೆ.

ಹಡಪದರ ಅವ್ವ ಹೇಳಿದ ಈ ಮಾತನ್ನು ಬಿಗಿಯಾಗಿ ಹಿಡಿದುಕೊಂಡು ಬಹುತೇಕ ಲೇಖಕರ ಬರಹಗಳನ್ನು ಒರೆಗೆ ಹಚ್ಚಿದಾಗ ಓದದೇ, ಕೇಳದೇ, ಅನುಭವಿಸದೇ ಬರೆದವರೇ ಹೆಚ್ಚು ಸಿಗುತ್ತಾರೆ. ಆದರೆ ಹಡಪದರ ವಿಚಾರದಲ್ಲಿ ಹಾಗೆ ಅನಿಸದೆ ಅವರ ಓದಿನ ಗಂಭೀರ ಅಧ್ಯಯನ ‘ಬಯಲುಡುಗೆಯ ಬೊಂತಾ’ ದಲ್ಲಿ ಕಾಣಬಹುದು.

ಇಲ್ಲಿ ಕಳ್ಳರು ಸುಳ್ಳರು ಕೊಲೆಗಡುಕರು ದರೋಡೆಕೋರರು ಇರುವಂತೆ ನೀತಿವಂತರು, ಮಾನವೀಯತೆವುಳ್ಳವರು, ಶ್ರಮಜೀವಿಗಳು, ಸಾಧು ಸಂತರು, ಕಲ್ಯಾಣ ಕಾರ್ಯದಲ್ಲಿ ತೊಡಗಿರುವವರು ಕಾಣ ಸಿಗುತ್ತಾರೆ. ಇದರೊಂದಿಗೆ ಮೇಲು ಕೀಳಿನ ಭಾವದಲ್ಲಿ ಮುಳುಗಿರುವವರೂ ಇರುವಂಥಲ್ಲಿ ‘ಕಾಯಕ ಮಾಡುವ ಜೀವಿಗಳೆಲ್ಲ ಒಂದು’ ಎನುವ ಮನಸ್ಥಿತಿಗಳ ಶರಣ ತತ್ವದ ಪ್ರತಿಪಾದಕ ಚಿತ್ರರೂಪವೂ ಇದೆ.

ಇಲ್ಲಿನ ಮೊದಲ ಕತೆ ‘ಶಿವನ ಕುದುರೆ’ ಯಲ್ಲಿ ಅವ್ವನ ತೊಡೆಯ ಮೇಲೆ ಮಲಗಿದ ಭೋಲಾ- ಭೋಲಾಶಂಕರ ‘ಅಮ್ಮಾ ಈ ಬುದ್ದ ಅಂದರೆ ಯಾರು’ ಅಂತ ಕೇಳುತ್ತಾನೆ. ಈ ಮಾತು ಇಲ್ಲಿನ ಭೋಲಾ ಶಂಕರನ ಮನಸ್ಥಿತಿಯೂ ಅವನ ಅವ್ವನ ಮನಸ್ಥಿತಿಯೂ, ಹಾಗೆ ಈ ಮೇಲೆ ದಾಖಲಿಸಿದ ಲೇಖಕ ಹಡಪದರ ಮನಸ್ಥಿತಿಯೂ ಅವರ ಅವ್ವನ ಮನಸ್ಥಿತಿಯೂ ಒಂದು ತೂಕದಲ್ಲಿ ಸಮಾನವಾಗಿ ತೂಗುವ ಸ್ಥಿತಿಸ್ಥಾಪಕತ್ವದಂತಿದೆ.

ಈ ಭೋಲಾಶಂಕರನ ಪ್ರಶ್ನೆಗೆ ಅವನ ಅವ್ವ ಹೇಳುವ ಸಮಜಾಯಿಸಿ, ಬುದ್ದನ ಹುಟ್ಟು ಬೆಳವಣಿಗೆ ಪರಿತ್ಯಾಗ ಮತ್ತು ಸತ್ಯದ ಬೆಳಕಿನಲ್ಲಿ ಮೂಡುವ ಹೊಸದೇ ಕತೆ ರೂಪಿತವಾಗಿದೆ. ಹೀಗೆ ಕತೆ ಕೇಳಿ ಪ್ರಭಾವಿತನಾಗಿ ದಿನಗಳೆದಂತೆ ಅವ್ವ ಹೇಳುವ ಕತೆಗಳ ಪ್ರಭಾವವೂ, ಅದರೊಂದಿಗೆ ಅವನ ಅವ್ವನ ಆಸೆಗಳು ಕರಗುತ್ತಿರುವ ಸಂದಿಗ್ಧತೆಯಲ್ಲೆ ಪ್ರತ್ಯಕ್ಷನಾಗುವ ಫಕೀರನ ದಮ್ಮಡಿ ಬಡಿತದ ಹಾಡೇ ಅವನ ಭವಿಷ್ಯದ ಬದುಕಿನ ಅಂಕಿತಕ್ಕೆ ಮುನ್ನುಡಿ. ಅದು ಅವನಿಗೆ ತಾನಾಗೇ ದಕ್ಕುವ ಸಾಧನೆಯ ಉತ್ತುಂಗ. ಆ ಉತ್ತುಂಗ ಏರಿ ಏರಿ ಏರುತ್ತಾ ಆಗುವ ಪರಿಯೇ ‘ಕಲ್ಯಾಣದಲ್ಲಿ ಲೀನ’ವು ಶರಣರೊಳಗೆ ಶರಣ ಮರುಳಶಂಕರದೇವ.

ಇದೇ ಕಲ್ಯಾಣದ ಬೆನ್ನತ್ತಿದರೆ ಚೋರಚಿಕ್ಕ ಅಪ್ಪಳಿಸುತ್ತಾನೆ. ಈ ಕತೆಯಲ್ಲಿ ದಾರಿಹೋಕರನ್ನು ಹೆದರಿಸಿ ಬೆದರಿಸಿ ಸಿಕ್ಕಿದ್ದನ್ನು ಕಸಿವ ಚಿಕ್ಕನ ಪ್ರಯಾಣದಲ್ಲಿ ಒಂದು ಆಕಸ್ಮಿಕ ಜರುಗುತ್ತದೆ. ಈ ಚಿಕ್ಕ ದಾರಿಯಲ್ಲಿ ಬೆದರಿಸಲು ಹೋದ ಒಬ್ಬ ವ್ಯಾಪಾರಿಯನ್ನು ಬೆದರಿಸಲಾಗದೆ ಅವನ ಮಾತಿಗೇ ಮರುಳಾಗಿ ಅವನ ಹಿಂದೆ ಹೋಗುತ್ತಾನೆ. ಈ ವ್ಯಾಪಾರಿ ಸವಾಲಕ್ಷ ದೇಶಕ್ಕೆ ಕಾಲಿಟ್ಟು ತನ್ನ ನಿಗಧಿತ ಜಾಗೆಯಲ್ಲಿ ಒಂದು ಪುಟ್ಟ ಗುಂಡುಕಲ್ಲು ಲಿಂಗವನ್ನು ಪೂಜಿಸುತ್ತ ಧ್ಯಾನಸ್ಥನಾಗುತ್ತಾನೆ. ಅದೇ ಕಾಲಕ್ಕೆ ಈ ಚಿಕ್ಕ ಸೈನಿಕರಿಂದ ಬಂಧಿಯಾಗಿದ್ದ ಅವನ ಸಹಚರರನ್ನು ಬಿಡಿಸಲು ಅವನಿಂದ ಬೇರ್ಪಟ್ಟು ಕಳ್ಳ ದಾರಿ ಹಿಡಿವಾಗ ರಾಜ ಮಹಾದೇವಭೂಪಾಲನ ಸೈನಿಕರ ಕಣ್ಣಿಗೆ ಬೀಳುತ್ತಾನೆ. ಭೂಪಾಲನ ಸೈನಿಕರು ಚಿಕ್ಕನನ್ನ ಅಟ್ಟಿಸಿಕೊಂಡು ಬರುವಾಗ ಪುಟ್ಟ ಗುಂಡುಕಲ್ಲು ಲಿಂಗದ ಮುಂದೆ ಧ್ಯಾನಸ್ಥನಾದ ವ್ಯಾಪಾರಿಯ ಉದ್ದಟತನವನ್ನು ಕಂಡ ಸೈನಿಕರು ಅವನನ್ನು ಬಂಧಿಸಿ ರಾಜನಲ್ಲಿಗೆ ಕರೆತರುತ್ತಾರೆ. ಅದುವರೆಗು ಅರಮನೆ ಆವರಣದಲ್ಲಿ ಬೃಹತ್ ಮಲ್ಲಿಕಾರ್ಜುನ ಲಿಂಗವಿದ್ದು ಅದಕ್ಕೆ ಎಲ್ಲರೂ ನಡೆದುಕೊಳ್ಳಬೇಕೆಂಬ ರಾಜನ ಕರಾರು ಅಲ್ಲಿರುತ್ತದೆ. ಅದಕ್ಕೆ ವಿರುದ್ಧವಾಗಿ ಒಂದು ಪುಟ್ಟ ಗುಂಡುಕಲ್ಲಿನ ಗಾತ್ರದ ಲಿಂಗವನ್ನು ಪೂಜಿಸುವ ಮೂಲಕ ಕಲ್ಯಾಣ ರಾಜ್ಯದ ತತ್ವವನ್ನು ಪಸರಿಸುವುದು ತಿಳಿಯುತ್ತದೆ.ಇದು ರಾಜ ಮಹಾದೇವಭೂಪಾಲನ ಆಜ್ಞೆಯನ್ನೆ ಈ ವ್ಯಾಪಾರಿ ಹಂಗಿಸುವಂತೆ ಎಂದು ಭಾವಿಸಿ ಆ ವ್ಯಾಪಾರಿಯನ್ನು ಶಿಕ್ಷಿಸಲು ಹಕೀಕತ್ತು ಜರುಗುತ್ತದೆ.

ಅತ್ತ ಹಾರಿ ಹೋದ ಚೋರಚಿಕ್ಕ ಮತ್ತು ಸಹಚರರು ಕಲ್ಯಾಣದಲ್ಲಿ ಲೀನವಾಗಿ ಬಸವಣ್ಣನ ಪ್ರಭಾವಕ್ಕೆ ಒಳಗಾಗುತ್ತಾರೆ. ಚೋರಚಿಕ್ಕನು ತನ್ನ ಸಹಚರರನ್ನು ಅಪಾಯದಿಂದ ಪಾರುಮಾಡಲು ಮತ್ತು ದಾಸೋಹ ಸವಿಯಲು ಶರಣರ ವೇಷ ಧರಿಸಿ ಸರದಿಯಂತೆ ಗುಂಪಿನಲ್ಲಿ ಬರುತ್ತಾನೆ. ಬಂದನಿಗೆ ‘ನೀವು ಲಿಂಗಪೂಜೆ ಮಾಡಿಕೊಳ್ಳಿ ದಾಸೋಹಕ್ಕೆ ಹೊತ್ತಾಗತದೆ’ ಎಂದಾಗ ಅದರ ಬಗ್ಗೆ ಅರಿವಿರದ ಚಿಕ್ಕ ಪೆಚ್ಚಾಗುತ್ತಾನೆ. ನಿಜ ಶರಣರು ಅನುಮಾನಗೊಂಡು ಅವನ ಕೊರಳ ಬಟ್ಟೆ ಸಡಿಲಿಸಿದಾಗ ಲಿಂಗದ ಬದಲು ‘ಬದನೆಕಾಯಿ’ ಕಂಡು ಶರಣರೆಲ್ಲ ಗಲಾಟೆ ಮಾಡುತ್ತಾರೆ. ಚಿಕ್ಕನಿಗೆ ದಾರಿ ಕಾಣದೆ ಬಸವಣ್ಣನವರ ಕಾಲಿಗೆ ಬೀಳುತ್ತಾನೆ. ಆಗ ಚಿಕ್ಕನನ್ನು ಬಾಚಿ ತಬ್ಬಿ ಎಬ್ಬಿಸಿ ಮೈದಡವಿದ ಬಸವಣ್ಣ ‘ಆಹಾ ಎಂಥ ಘನ ಮಹಿಮರು ನೀವು, ನಾವು ಸಾಕ್ಷಾತ್ ಲಿಂಗವನ್ನೇ ಕಟ್ಟಿಕೊಂಡು , ಆ ಲಿಂಗವನ್ನೆ ಕೈಯಲ್ಲಿಟ್ಟುಕೊಂಡು ಧ್ಯಾನಿಸಿದರು ಎಲ್ಲೊ ಒಂದು ಮೂಲೆಯಲ್ಲಿ ಅದು ಕಲ್ಲು ಎಂಬ ಅಳುಕು ಕಾಡುತ್ತದೆ. ನೀವು ಕಟ್ಟಿಕೊಂಡ ಬದನೆಕಾಯಲ್ಲೆ ಆ ಕೂಡಲಸಂಗಮನನ್ನು ಕಾಣುತ್ತೀರಲ್ಲ. ನಿಮ್ಮ ನಿಷ್ಕಲ್ಮಶ ಅಂತಸ್ಸಾಕ್ಷಿಗೆ ಶರಣೆಂದು ಶುದ್ಧನು’ ಎಂದಾಗ ಕೊಲ್ಲಲು ದೋಚಲು ಭಯ ಹುಟ್ಟಿಸಲು ಬಂದವನ ಕಣ್ಣುಗಳು ತುಂಬಿ ಬಂದು ಶರಣರೊಳಗೊಬ್ಬ ಶರಣನಾಗುತ್ತಾನೆ.

ಈ ಕತೆಯಲ್ಲಿ ಹಡಪದರು ಬಹುಮುಖ್ಯವಾದ ಬಸವಣ್ಣನ ಆಕರ್ಷಕ ವ್ಯಕ್ತಿತ್ವವನ್ನು ಮತ್ತು ಅದೇ ಕಾಲಕ್ಕೆ ಕಟುಕನೊಳಗಿನ ‘ಕಠೋರ ಮನಸ್ಥಿತಿಯನ್ನು ಕೊಲ್ಲುವ’ ಆದಿಗನಂತೆ ಬಸವಣ್ಣನನ್ನು ಚಿತ್ರಿಸಿದ್ದಾರೆ. ಇಲ್ಲಿ ಆದಿಗ ಪದ ‘ಮೊದಲಿಗ’ ಎನುವುದೇ ಆಗಿದೆ. ಹಾಗಾಗಿ ಬಸವಣ್ಣ ಇಲ್ಲಿ ಕೊಲ್ಲುವ ಮನಸ್ಥಿತಿಯನ್ನು ಕೊಂದ ಮಹಾ ಆದಿಗ – ‘ಮಹಾದಿಗ’ ಎನಬಹುದು. ಹಾಗಾಗಿಯೇ ಆ ಕಾಲದ ಸಹಜ ಸನ್ನಿವೇಶವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾ ಹೋದಂತೆ ‘ಕೊಲ್ಲುವನು ಮಾದಿಗ’ ವಚನದ ಸಾಲನ್ನು ಈ ಪರಿಭಾಷೆಯಲ್ಲಿ ಯಾಕೆ ನೋಡಬಾರದು? ಸಾಮಾನ್ಯ ಭಾಷೆಯಲ್ಲಿ ‘ಮಹಾರಾಜ’ನನ್ನು ‘ಮಾರಾಜ’ ಎನುವಂತೆ ‘ಮಹಾದಿಗ’ (ಮಹಾ ಆದಿಗ) – ಮಾದಿಗ ಆಗಿರಬಹುದೇ? ಕ್ರಿಸ್ತಶಕದ ಬಸವಣ್ಣ ಕ್ರಿಸ್ತಪೂರ್ವ ಬುದ್ದನ ಯಥಾವತ್ ಮನಸ್ಥಿತಿಯವನಂತೆ ಗೋಚರವಾಗುತ್ತಾನೆ. ಹಾಗಾಗಿ ಕ್ರಿಸ್ತಶಕದಲ್ಲಿ ಬಸವಣ್ಣ ಕ್ರೌರ್ಯ ಕೊಂದ ಮೊದಲ ಆದಿಗನಾದರೆ ಕ್ರಿಸ್ತಪೂರ್ವದಲ್ಲಿ ಕ್ರೌರ್ಯ ಕೊಂದ ಮೊದಲ ಆದಿಗ ಬುದ್ಧ ಆಗಿದ್ದಾನೆ.

ಪ್ರಭುಶಂಕರ ಅವರ ‘ಪ್ರೇಮ ಭಿಕ್ಷು’ ಐತಿಹಾಸಿಕ ಕಥಾವಸ್ತುವುಳ್ಳ ಕಾದಂಬರಿಯಲ್ಲಿ ಇದರ ಪ್ರಸ್ತಾಪವಿದೆ. ಕ್ರಿಸ್ತಪೂರ್ವದಲ್ಲಿ ಅಂಗುಮಾಲ ಅಂತೊಬ್ಬ ಕಟುಕನಿದ್ದ. ರಾಜ ಪ್ರಸೇನಜಿತನೂ ಇವನ ಕ್ರೌರ್ಯಕ್ಕೆ ಬೆದರಿದ್ದ. ಅವನನ್ನು ಅಡಗಿಸಲು ಸೈನ್ಯವನ್ನೇ ನಿಯೋಜನೆ ಮಾಡಿದ್ದ. ಆದರೂ ಕಟುಕ ಅಂಗುಲಿಮಾಲನನ್ನು ಅಡಗಿಸಲು ಆಗದೆ ಕೈಚೆಲ್ಲಿದ. ಆದರೆ ಗೌತಮ ಬುದ್ದ ಅವನ ವಿಚಾರ ತಿಳಿದು ತಮ್ಮ ವ್ಯಕ್ತಿತ್ವದಿಂದ ಅಂಗುಲಿಮಾಲನ ಕ್ರೌರ್ಯವನ್ನು ಕೊಂದು ಸಾಮಾನ್ಯರಲ್ಲಿ ಸಾಮಾನ್ಯನಾಗಿಸುತ್ತಾನೆ. ಕ್ರಿಸ್ತಪೂರ್ವದ ಬುದ್ಧನ inspiration ಕ್ರಿಸ್ತಶಕ ಹನ್ನೆರಡನೇ ಶತಮಾನದ ಬಸವಣ್ಣನಲ್ಲಿ ಕಾಣುತ್ತೇವೆ. ಹಾಗಾಗಿ ಕ್ರೌರ್ಯ ಕೊಂದ ಆದಿಗ ಬುದ್ಧನ ನಂತರ ಬಸವಣ್ಣನೇ ಆಗಿರುವುದರಿಂದ ಬಸವಣ್ಣನ ‘ಕೊಲ್ಲುವನು ಮಾದಿಗ’ ವಚನದ ಸಾಲು ಬೇರೊಂದು ಅರ್ಥವನ್ನು ಧ್ವನಿಸುತ್ತದೆ. ಇಲ್ಲಿ ಕ್ರಿಸ್ತಪೂರ್ವದ ಅಂಗುಲಿಮಾಲ ಮತ್ತು ಕ್ರಿಸ್ತಶಕದ ಚೋರಚಿಕ್ಕನ ಎರಡೂ ಸನ್ನಿವೇಶಗಳ ಚಿತ್ರಣ ಒಂದಕ್ಕೊಂದು ಪೂರಕವಾಗಿರುವುದರಿಂದ ‘ಮಾದಿಗ’ ಎನ್ನುವುದು ಜಾತಿ ಸೂಚಕವಾಗಿರದೆ ಅದಕ್ಕಿಂತಲೂ ಉನ್ನತವಾದ ಪದವಾಗಿರಬಹುದಾ?

ಕತೆಗಾರ ಹಡಪದರು ಬುದ್ದ ಮತ್ತು ಬಸವಣ್ಣನವರನ್ನು, ಪಾತ್ರಗಳ ಕೆತ್ತನೆಯೊಳಗಿಂದ ಉದಿಸುವ ಕತೆಗಳೊಳಗೆ ಬುದ್ದನ ಕತೆಯನ್ನು ಜಾಣ್ಮೆಯಿಂದ ತೂರಿಸುತ್ತಾರೆ. ಇದು ಈ ಕೃತಿಯ ಮೊದಲ ಕತೆ ‘ಶಿವನ ಕುದುರೆ’ ಯಲ್ಲಿ ಭೋಲಾ ‘ಅಮ್ಮ ಈ ಬುದ್ದ ಅಂದರೆ ಯಾರು?’ ಅನ್ನುವುದನ್ನು ಗ್ರಹಿಸಬಹುದು. ಶರಣ ಕಾಲದ ಕತೆಯೊಳಗೆ ಬುದ್ಧನ ಪ್ರಸ್ತಾಪವಾಗುವುದು ಇಲ್ಲಿನ ಬಹು ದೊಡ್ಡ ಬೆಳವಣಿಗೆ.‌ ಅದರೊಂದಿಗೆ ಭೋಲಾನ ಅವ್ವ ಹೇಳುವ ಸಮಜಾಯಿಸಿಯಲ್ಲಿ ಬುದ್ದನ ತತ್ವ ಚಿಂತನೆ ಪರಿವರ್ತನಾ ಪಲ್ಲಟ ಹಾಗು ಬುದ್ದನ ಪೂರ ವ್ಯಕ್ತಿತ್ವ ಗೋಚರಿಸುತ್ತದೆ. ಇದರ ಆಳಕ್ಕೆ ಹೋದಂತೆ ಬಸವಣ್ಣ ಬುದ್ಧನನ್ನು ಅನುಕರಿಸಿರಬಹುದಾ? ಹೀಗಾಗಿ ಬಸವಣ್ಣ ಈ ‘ಕೊಲ್ಲುವನು ಮಾದಿಗ’ ವಚನದ ಸಾಲನ್ನು ಯಾವ ಸಂದರ್ಭದಲ್ಲಿ ಯಾತಕ್ಕಾಗಿ ಹೇಳಿದ್ದಾ? ಎಂಬುದನ್ನು ವಚನಾಧ್ಯಯನಕಾರರು ಮತ್ತೊಮ್ಮೆ ಪರಾಮರ್ಶಿಸಬೇಕಾಗಿದೆಯೇನೋ ಅನಿಸುತ್ತಿದೆ.

‘ಬಯಲುಡುಗೆಯ ಬೊಂತಾ’ ಪ್ರಕೃತಿಗೆ ಒಡ್ಡಿಕೊಂಡ ಕತೆ. ಇಡೀ ಕೃತಿಗೆ ಇದೊಂದು ವಿಶಿಷ್ಟ ಅರ್ಥಪೂರ್ಣ ಶೀರ್ಷಿಕೆ. ಕಲ್ಯಾಣದ ವಚನ ತತ್ವಗಳನ್ನು ಎಲ್ಲೆಡೆ ಹರಡುತ್ತಿದ್ದ ಶರಣ ವ್ಯಾಪಾರಿಯೊಬ್ಬನನ್ನು ತಮ್ಮ ಅಂಕೆ ಮೀರಿ ವರ್ತಿಸಿದ ಕಾರಣ ರಾಜ ಮಹಾದೇವ ಭೂಪಾಲನ ಸೈನಿಕರು ಅವನನ್ನು ಬಂಧಿಸಿದ ನಂತರ ನಡೆದ ಘಟನಾವಳಿಗಳೇ ಇದರ ಕಥಾವಸ್ತು. ಅದು ‘ಮಹಾದೇವ ಭೂಪಾಲ ಮಾರಯ್ಯನಾದುದು’ ಕತೆಯ ತನಕ ಎಳೆದೊಯ್ಯುತ್ತದೆ. ದೇಹ ಸೌಂದರ್ಯವನು ನೋಡಿ ಬೆರಗಾಗಿ ಭೋಗಿಸಿ ಅನುಭವಿಸುವ ಕಾಮ ಮನಸುಗಳನೆ ಮೆಟ್ಟುವ ಮನಸ್ಥಿತಿಯೇ ನಿಜದೇವಿ. ಈ ನಿಜದೇವಿ ತನ್ನ ಮೈ ಸೌಂದರ್ಯವನು ಮರೆಮಾಚಿ ಕಾಮುಕ ಆಸೆ ಹುಟ್ಟಿಸುವ ಮೈ ಬಟ್ಟೆಯನು ಬಿಸುಟು ಬಯಲೇ ನನ್ನುಡುಗೆ ಎನುವ ಅವಳ ತಾರ್ಕಿಕ ನಿಲುವೆ ಬೊಂತಾದೇವಿ ಆಗುವ ರೂಪಾಂತರ. ಇಲ್ಲಿರುವ ನಿಜದೇವಿ ಅರ್ಥಾತ್ ಬೊಂತಾದೇವಿ ಚೆನ್ನಮಲ್ಲಿಕಾರ್ಜುನೇ ತನ್ನವನೆಂದು ಧ್ಯಾನಿಸುವ ಅಕ್ಕಮಹಾದೇವಿಯೇ? ಏಕೆಂದರೆ ಇಲ್ಲಿನ ಕತೆಯ ನಿಜದೇವಿಯ ಅಣ್ಣ ಮಹಾದೇವ ಭೂಪಾಲ ತನ್ನ ಅರಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದ ಬೃಹತ್ ಮಲ್ಲಿಕಾರ್ಜುನ ಲಿಂಗಕ್ಕು ಅಕ್ಕಮಹಾದೇವಿಯ ವಚನದ ಚೆನ್ನಮಲ್ಲಿಕಾರ್ಜುನ ಧ್ಯಾನಸ್ಥ ರೂಪ ಎರಡೂ ಒಂದೇ ಎನುವಂತೆ ಕತೆ ಉದ್ದಕ್ಕು ಭಾಸವಾಗುತ್ತದೆ. ಹಾಗೆ ನಿಜದೇವಿಯ ಅಣ್ಣ ಮಹಾದೇವ ಭೂಪಾಲ ಎನುವ ರಾಜನೊಬ್ಬ ಕಲ್ಯಾಣದ ಬಸವಣ್ಣನ ವ್ಯಕ್ತಿತ್ವಕ್ಕೆ ಮಾರುಹೋಗಿ ಕಾಡಿಗೆ ಹೋಗಿ ಮರ ಕತ್ತರಿಸಿ ಕಟ್ಟಿಗೆ ತಂದು ಕಾಯಕದಲ್ಲಿ ತೊಡಗಿ ಅರಮನೆ ಗಿರಿಮನೆ, ಆಳುಕಾಳಿನ ಸರದಾರ, ಮೃಷ್ಠಾನ್ನ ಭೋಜಕ ಶರಣ ತತ್ವ ಪರಿಪಾಲನೆ ಮಾಡುತ್ತ ನೆರಕೆಯ ಮನೆಯಲ್ಲಿ ಅಂಬಲಿಯನೇ ಉಣ್ಣುತ್ತ ಧ್ಯಾನಸ್ಥನಾಗಿ ಶರಣ ಮಾರಯ್ಯನಾಗುವುದೇ ಕಲ್ಯಾಣದ ಕ್ರಾಂತಿಯ ದ್ಯೂತಕ.

ಇನ್ನೊಂದು ಕನ್ನಗತ್ತಿ ಮಾರಯ್ಯನದು! ಅದು ರಾಜ ಬಿಜ್ಜಳನು ನಿದ್ರಿಸುವಾಗ ಖಜಾನೆಗೆ ಕನ್ನ ಹಾಕುವಾಗ ಸಿಕ್ಕಿ ಬಿದ್ದ ಮಾರಯ್ಯನನ್ನ ಪ್ರಧಾನಿ ಬಸವಣ್ಣ ಹಾಗೆ ಬಿಟ್ಟು ಕಳುಹಿಸುವ ಸನ್ನಿವೇಶ. ಅದೇಕೋ ಏನೋ ಮಾರಯ್ಯ ತನ್ನ ಕಾಲು ಎಳೆಯುತ್ತ ಅಂತರಂಗದ ಹೊಯ್ದಾಟದಲಿ ತನ್ನ ಸೊಂಟದಲ್ಲಿದ್ದ ಕನ್ನಗತ್ತಿಯನ್ನ ಕಿತ್ತೆಸೆದಾಗ ಅದು ಬಂಡೆಗೆ ತಾಕಿ ಟಳೀರೆಂದು ಕಿಡಿ ಹೊತ್ತಿಕೊಳ್ಳುತ್ತದೆ. ಅದು ಬಸವಣ್ಣನವರಿಗೆ ಬೆಳಕಾಗಿ ಜ್ಯೋತಿಯಂತೆ ಭಾಸವಾಗಿ ಇದುವರೆಗೆ ನೀವು ಕನ್ನದ ಮಾರನಾಗಿದ್ದಿರಿ ಈಗ ಕನ್ನದ ಅಂದರೆ ಲೋಕದ ಅಜ್ಞಾನವನ್ನು ಕದ್ದು ಜ್ಞಾನ ಹಂಚುವ ಮಾರಯ್ಯನಾಗಿರಿ ಎನುವಾಗ ಕಳ್ಳ ಕನ್ನಗತ್ತಿ ಮಾರ ಜ್ಞಾನಜ್ಯೋತಿಯ ಮಾರಯ್ಯನಾಗುತ್ತಾನೆ. ಈ ಸನ್ನಿವೇಶವು ಸಹ ಬುದ್ದನ ಸತ್ಯದ ಬೆಳಕಿನ ಸತ್ಯವನ್ನು ಬಸವಣ್ಣ ಕನ್ನಗತ್ತಿಯಿಂದ ಸಿಡಿಯುವ ಸುಡುವ ಬೆಂಕಿ ಕಿಡಿಯೊಳಗೆ ಜ್ಞಾನದ ಜ್ಯೋತಿಯನ್ನು ಕಾಣುವುದರಲ್ಲಿ ಇದಿಯೇನೋ ಅನಿಸುವಷ್ಟು ಪ್ರಜ್ಞಾಪೂರಕ ಹೂರಣದಂತಿದೆ.

‘ಕರ್ತಾರನ ಕಮ್ಮಟ’- ಎಂಬುದು ‘ಬಯಲುಡುಗೆಯ ಬೊಂತಾ’ ಕೃತಿಯ ಒಟ್ಟು ಆರು ಕತೆಗಳಲ್ಲೆ ಎಪ್ಪತ್ತು ಪುಟಗಳ ಅತ್ಯಂತ ದೀರ್ಘವಾದ ಕೊನೆಯ ಕತೆ. ಇದು ಸರಿಸುಮಾರು ದೇವನೂರ ಮಹಾದೇವ ಅವರ ‘ಕುಸುಮ ಬಾಲೆ’ first edition ಪುಟಗಳ ಕಾದಂಬರಿಯಷ್ಟಗುತ್ತದೆ. ಈ ಒಂದು ದೀರ್ಘ ಕತೆಯಲ್ಲಿ ಧೂಳಯ್ಯ ಎಂಬ ಅದುವರೆಗೂ ಮಾತನಾಡದ ಪೆದ್ದನಂತೆ ದಡ್ಡನಂತೆ ಸಿನಿಕನಂತೆ ವಿಚಿತ್ರ ಸ್ವಭಾವದ ಅಂತರ್ಮುಖಿಯಂತೆ ಮಹಾಮೌನಿಯಂತಿದ್ದ ಹುಡುಗ ಸನ್ಯಾಸಿಯೊಬ್ಬನ ಆಕಸ್ಮಿಕ ಭೇಟಿಯಿಂದ ‘ಸಿದ್ದ’ ನಾಮಾಂಕಿತನಾಗಿ ಹರಳು ಹುರಿದಂತೆ ಮಾತನಾಡುತ್ತ ಕೂಗುತ್ತ ಸಾರುತ್ತ ಧ್ಯಾನಸ್ಥನಾಗುತ್ತ ಸಿದ್ದರಾಮ ಶಿವಯೋಗಿ ಆಗುವ ಪರಿಣಾಮಕಾರಿ ಕಥಾವಸ್ತು.

ಇಲ್ಲಿ ಕರ್ತೃವು, ಕಾರಣವು, ಸೃಷ್ಠಿಯು, ಮೂಲವು – ಸಮಷ್ಠಿ ಪ್ರಜ್ಞೆಯ ಮಿಳಿತದ ಬೇಗೆಯ ಬೆಸುಗೆಯಲ್ಲಿ ‘ಕರ್ತಾರನ ಕಮ್ಮಟ’ದ ಕಥಾತಂತ್ರ ನಿರೂಪಿತಗೊಂಡಿದೆ.

ಸಿದ್ದರಾಮನು ನಡೆವ ದಾರಿಯಲ್ಲಿ ಅಲ್ಲಮ ಪ್ರಭುವಿನ ಪ್ರವೇಶಿಕೆಯಾಗುತ್ತದೆ. ಇಲ್ಲಿಂದ ಕತೆ ಮತ್ತೊಂದು ಮಗ್ಗುಲಿಗೆ ಹೊರಳುತ್ತದೆ. ಧೂಳಯ್ಯ ಅರ್ಥಾತ್ ಸಿದ್ದರಾಮನಲ್ಲಿ ಶರಣ ತತ್ವ ಮತ್ತು ಅವನ ಚಿಂತನಾಕ್ರಮವು ಔನ್ನತ್ಯದತ್ತ ಒಯ್ಯುತ್ತದೆ. ಈ ನಡುವೆ ಕಲ್ಯಾಣದಲ್ಲಿ ಬದಲಾವಣೆ ಗಾಳಿ ಬಿರುಗಾಳಿಯಾಗಿ ಮಾರ್ಪಡುತ್ತದೆ. ಇದು ಪರಿವರ್ತನೆಯಾಗದೆ ಬಸವಣ್ಣನ ಅನುಪಸ್ಥಿತಿಯಲಿ ಪರಿವೃತ್ತವಾಗಿ ಅದು ಒಂದರೊಳಗೊಂದು ಬೆಸೆದುಕೊಂಡು ಅತ್ಯಂತ ಕ್ಲಿಷ್ಟವಾಗುತ್ತ ಸಾಗುತ್ತದೆ. ಬೆಂಕಿ ಕಿಡಿ ಹೊತ್ತಿ ಉರಿಯುತ್ತದೆ. ಊರುಗಳು ಬೇಯುತ್ತವೆ. ರಕ್ತ ಚೆಲ್ಲುತ್ತದೆ. ಮುಸುಧಾರಿಗಳು ರಾತ್ರಿಗಳಲಿ ತಿರುಗುತ್ತ ಶೀತಲ ಸಮರದಂಥ ಅವ್ಯಕ್ತ ಮತ್ತು ನೇರವಾಗಿ ಎರಗುವ ವ್ಯಕ್ತ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಯಾಕೆ ಹೀಗಾಯ್ತು ಕಲ್ಯಾಣದಲ್ಲಿ? ಅಲ್ಲಿ ಬಸವಣ್ಣನ ಪ್ರಸ್ತಾಪವಾಗುತ್ತದಷ್ಟೆ. ಆದರೆ ಅಲ್ಲಿ ಬಸವಣ್ಣನಿಲ್ಲದ್ದು ಧ್ವನಿಸುತ್ತದೆ. ಕಪ್ಪಡಿ ಕ್ಷೇತ್ರದ ಪ್ರಸ್ತಾಪವಾಗುತ್ತದಷ್ಟೆ. ಆದರೆ ಮಾತು ಮರೆತವರಂತೆ ಕಣ್ಣುಮುಚ್ಚಿ ನದಿಗಳ ಸಂಗಮಸ್ಥಾನದ ನಟ್ಟನಡುವಲ್ಲಿ ಕುಳಿತ ಅನುಮಾನಿತ ಮಾತುಗಳಷ್ಟೆ ಅಲ್ಲಿಗೆ ಹೋಗಿ ಬಂದ ಶರಣರ ತುಟಿಯಂಚಲ್ಲಿ ಉದುರುತ್ತ ಕಣ್ಣುಗಳು ಅಳ್ಳಕವಾಗಿ ಕ್ಷೀಣವಾಗಿರುವ ಸನ್ನಿವೇಶದ ಚಿತ್ರಣ ಒಂದು ರೇಖಾಚಿತ್ರದಂತೆ ಓದುಗನ ಮುಂದೆ ನಿಲ್ಲುತ್ತದೆ.

ಇದಕ್ಕೆ ಪೂರಕವಾಗಿ ಕತೆಗಾರ ಮಹಾದೇವ ಹಡಪದರು “ಆ ದಿವಸ ಮದ್ಯಾಹ್ನ ಕಳೆದು ಅಪ್ಪಣ್ಣ ಮತ್ತೆ ಕಪ್ಪಡಿ ಸಂಗಮಕ್ಕೆ ಹೊರಟು ನಿಂತಾಗ ನೀಲಮ್ಮಳೂ ಬರುವುದಾಗಿ ಹೊರಟು ನಿಂತಳು. ಯಾರಿಗೆ ಯಾರೂ ಯಾವ ಮಾತನ್ನೂ ಹೇಳುವಷ್ಟು ಸಮತೆ ಯಾರೊಳಗೂ ಇರಲಿಲ್ಲವಾಗಿ ಅಪ್ಪಣ್ಣ-ನೀಲಮ್ಮರನ್ನೂ ಬೀಳ್ಕೊಟ್ಟ ಶರಣರು ಮುಂದೇನು ಎಂಬ ಆತಂಕದಲ್ಲಿದ್ದರು. ಅವರಿಬ್ಬರೂ ಯೋಜನದಷ್ಟು ದೂರ ಹೋಗುವವರೆಗು ಹಿಂದಿನಿಂದ ಕಾವಲಾಗಿ ಹೋಗಿದ್ದ ಗುಡ್ಡರಿಬ್ಬರು ಸೂರ್ಯದೇವನು ತುಸುವೇ ಕೆಂಪಾಗಿ ಇಂಚಿಂಚೇ ಮುಳುಗುತ್ತಿರುವಾಗ್ಗೆ ಅವಸರವಸರದಲ್ಲಿ ಓಡೋಡಿ ಬಂದು ಸಿದ್ದರಾಮರ ಕಿವಿಯಲ್ಲಿ ಏನೋ ಹೇಳಿದರು” ಎಂದು ಸನ್ನಿವೇಶದ ಚಿತ್ರಣವನ್ನು‌ ಗಾಢವಾಗಿ ಕಟ್ಟಿಕೊಡುತ್ತಾರೆ.

ಈ ಗಂಭೀರ ಸನ್ನವೇಶದ ಘಟನೆಗೆ ಪೂರಕವಾಗಿ ಶಿವಯೋಗಿಯ ಪ್ರಶ್ನೆಗೆ ಶರಣ ಅಮುಗಿದೇವನು ‘ಸೂವಿದೇವನ ಪ್ರವೇಶ ಆದದ್ದೇ ತಡ ಬಸವಣ್ಣನವರು ಪ್ರಧಾನರ ಪಟ್ಟದ ಕುರುಹನ್ನು ಬಿಜ್ಜಳರಾಜನ ಕೈಗೊಪ್ಪಿಸುವ ಬಗ್ಗೆ ಚಿಂತಿಸುತ್ತಿದ್ದರು. ಅದೇ ಹೊತ್ತಿಗೆ ಸರಿಯಾಗಿ ಶರಣರು ನೀಲ-ಶೀಲರ ಮದುವೆ ಮಾಡಿಸಿದರು. ಜಡಗೊಂಡ ಬದುಕನ್ನು ಚೈತನ್ಯಗೊಳಿಸಿ ಶರಣಳೊಳಗೆ ಉತ್ಸಾಹ ತುಂಬಿತ್ತು ಈ ಮದುವೆ. ಆದರೆ ಅದೇ ನೆಪ ಮಾಡಿಕೊಂಡ ಕಿಡಿಗೇಡಿಗಳು ಇಡೀ ಕಲ್ಯಾಣವನ್ನೇ ಸುಡುತ್ತಿದ್ದಾರೆ” ಎಂಬಲ್ಲಿಗೆ ಕಲ್ಯಾಣದ ಅದುವರೆಗಿನ ಕಲ್ಲೋಲಕ್ಕೆ ಕಾರಣವಾದ ಭಾಗಶಃ ಕಥಾ ಚಿತ್ರಣವನ್ನು ಮತ್ತು ಒಟ್ಟು ಕಲ್ಯಾಣದಲ್ಲಿ ಜರುಗುವ ಘಟನಾವಳಿಗಳನ್ನು ಹಡಪದರು ಚಿತ್ರವತ್ತಾಗಿ ಬಿಡಿಸಿಟ್ಟಿದ್ದಾರೆ. ಹಾಗೆ ಈ ಕೊನೆಯ ‘ಕರ್ತಾರನ ಕಮ್ಮಟ’ ಕತೆಯ ಚಿತ್ರ ಒಳಗಿಂದೊಳಗೆ ಬೇಯುತ್ತ ದುಮುಗುಡುತ್ತ ಓದುಗನಲ್ಲಿ ಮತ್ತೆ ಮತ್ತೆ ಪುಟ ತಿರುವುತ್ತ ಕೃತಿಯ ಮೊದಲಿನ ಕತೆಯತ್ತ ಚಿತ್ತ ಹರಿಸುತ್ತ ಅದೇ ಚಿತ್ತವನ್ನು ಸಾವಕಾಶವಾಗಿ ಒಂದು ದಾರದಲ್ಲಿ ಮಣಿಗಳನ್ನು ಪೋಣಿಸುತ್ತ ಹೋಗುವಂತೆ ಇಲ್ಲಿನ ಆರೂ ಕತೆಗಳನ್ನು ಒಂದರ ಹಿಂದೆ ಜೋಡಿಸುತ್ತಾ ಹೋಗುವಷ್ಟು ಒಂದು ಒಂದರೊಳಗೊಂದು ಬೆಸೆದು ಒಂದು ಗುಚ್ಚವಾಗಿ ಕೊರಳಿಗೆ ಮಾಲೆಯಾಗುಳಿವಂತೆ ‘ಬಯಲುಡುಗೆಯ ಬೊಂತಾ’ ಕೃತಿ ರಚಿತವಾಗಿದೆ.

ಪಿ.ಲಂಕೇಶರು ತಮ್ಮ ‘ಸಂಕ್ರಾಂತಿ’ ನಾಟಕದ ಬೆನ್ನುಡಿಯಲ್ಲಿ ‘ಹನ್ನೆರಡನೇ ಶತಮಾನದ ಧಾರ್ಮಿಕ, ಸಾಮಾಜಿಕ, ಅಲ್ಲೋಲ ಕಲ್ಲೋಲದಲ್ಲಿ ಹುಡುಗ-ಹುಡುಗಿಯ ನಡುವಿನ ಸರಳ ಪ್ರೇಮ ಕೂಡ ವಿಚಿತ್ರ ರೀತಿಯಲ್ಲಿ ‘ಭಂಗ’ಕ್ಕೊಳಗಾಯಿತು’ ಎಂದು ಹೇಳುವ ಮೂಲಕ ಕಲ್ಯಾಣದ ಚಿತ್ರಣವನ್ನು ಸಂಕ್ಷಿಪ್ತವಾಗಿ ಹೇಳುತ್ತಾರೆ. ಇದು ಆ ಒಂದು ಶತಮಾನದ ಮಡಿವಂತರ ಅಂಗುಳಿಗೆ ‘ವಿಷ ಬೀಜ’ ದಂತೆ, ಹಾಗೆ ಅದೇ ‘ಸಂಕ್ರಾಂತಿ’ ನಾಟಕ ಆರಂಭಕ್ಕು ಮುನ್ನ

“ಚೆನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇಬ್ಬರೂ ಹೊಲದಲ್ಲಿ ಬೆರಣಿಗೆ ಹೋಗಿ
ಸಂಗವ ಮಾಡಿದರು;
ಇವರಿಬ್ಬರಿಗೆ ಹುಟ್ಟಿದ ಮಗ ನಾನು,
ಕೂಡಲ ಸಂಗಮದೇವ ಸಾಕ್ಷಿಯಾಗಿ”

ಎಂಬ ವಚನವನ್ನು ದಾಖಲಿಸುವ ಮೂಲಕ ಬಸವಣ್ಣನು ಕಲ್ಯಾಣದಲ್ಲಿ ಅದೇ ಮಡಿವಂತರ ಕಿಚ್ಚಿಗೆ ಕಾರಣೀಭೂತನಾಗುವ ಉದಾಹರಣೆಯ ಚಿತ್ರಣದಲ್ಲಿ ಕಾಣುವ ಕಲ್ಲೋಲದ ಕೆನ್ನಾಲಿಗೆ, ಹಡಪದರ ‘ಕರ್ತಾರನ ಕಮ್ಮಟ’ ದಲ್ಲಿ ಮತ್ತೊಂದು ರೀತಿಯಲ್ಲಿ ಜರುಗುತ್ತದೆ. ಅದು ನೀಲ-ಶೀಲರ ಮದುವೆ ಮತ್ತು ಅದಕ್ಕು ಮೊದಲಿನ ಬಸವಣ್ಣನ ಸಾಮಾಜಿಕ ಪರಿವರ್ತನಾ ದಾರಿಗಳಲ್ಲಿ ಎಬ್ಬಿಸುವ ದೊಂಬಿ ಗಲಾಟೆ ಬೆಂಕಿಯ ಕಿಡಿ ಹೊತ್ತಿ ಉರಿಯಲು ಕಾರಣವಾಗಿರಬಹುದಾದ ಸಾಧ್ಯತೆಯ ಬಗ್ಗೆ.

ಹಡಪದರು ಈ ಘಟನಾವಳಿಗಳನ್ನು ಎಲ್ಲೂ ನೇರವಾಗಿ ದಾಖಲಿಸದೆ ಪಾತ್ರಗಳು ಚಲಿಸುತ್ತಾ ನಾಟಕೀಯವಾಗಿ ರಂಗದ ಮೇಲೆ ತೂರಿ ಬಂದು ಸಂಭಾಷಣೆ ಹೇಳುವ ಸನ್ನಿವೇಶದ ಮೇಲ್ ಚಿತ್ರಣದಂತೆ ಹಾಗೇ ಹಾದು ಹೋಗುತ್ತಾ ಒಪ್ಪಿಸುತ್ತವೆ. ಇದು ಅವತ್ತಿನ ಸಾಮಾಜಿಕ ಧಾರ್ಮಿಕ ಆರ್ಥಿಕ ರಾಜಕಾರಣದ ಕುತ್ಸಿಕ ಮೇಲಾಟದ ಪರಿಣಾಮಕಾರಿ ಚಾರಿತ್ರಿಕ ಘಟನಾವಳಿಯನ್ನು ಕೃತಿಯುದ್ದಕ್ಕು ಹಿಡಿದಿಡುವಲ್ಲಿ ಹಡಪದರ ಸೃಜನಶೀಲತೆ ಗೋಚರಿಸಿದೆ.

ಹಾಗೆ ಮೇಲ್ಕಾಣಿಸಿರುವ ‘ವೋಲ್ಗಾ- ಗಂಗಾ’ ಕೃತಿಯ ಇಪ್ಪತ್ತು ಕತೆಗಳ ಪಾತ್ರಗಳು ಮತ್ತು ಮನೆತನಗಳು ನಾಲ್ಕು ಶತಮಾನಗಳ ಕತೆ ಆರ್ಥಿಕ ಸಾಮಾಜಿಕ ರಾಜನೈತಿಕ ಜೀವನ ವಿಧಾನದ ಚಿತ್ರಣವನ್ನು ಕೊಟ್ಟರೆ, ಹಡಪದರ ‘ಬಯಲುಡುಗೆಯ ಬೊಂತಾ’ ಕೃತಿಯ ಕತೆಗಳೊಳಗಿನ ಹನ್ನೆರಡನೇ ಶತಮಾನದ ಪ್ರತಿಪಾತ್ರಗಳೂ ಒಂದೊಂದು ಕತೆಗಳಾಗಿ ‘ವೋಲ್ಗಾ- ಗಂಗಾ’ ದ ನಾಲ್ಕು ಶತಮಾನಗಳ ಆರ್ಥಿಕ ಸಾಮಾಜಿಕ ರಾಜ ನೈತಿಕ ಚಿತ್ರಣವನ್ನು ‘ಬಯಲುಡುಗೆಯ ಬೊಂತಾ’ ಕೃತಿಯೊಳಗಿನ ವಿವರ ಓದುತ್ತಾ ಇದ್ದಂತೆ ಇವೆಲ್ಲವು ಈ ಒಂದೇ ಶತಮಾನದಲ್ಲಿ ಚಿತ್ರಿತವಾಗಿರುವಂತೆ ಇದೊಂದು ಸಾಧ್ಯತೆ ಒಂದು ಚಿತ್ರಕಾವ್ಯವಾಗಿಸಬಹುದಾದ ದಟ್ಟತೆಯನ್ನು ಹೊಂದಿವೆ.

ಹಾಗೆ ಬಂಜಗೆರೆ ಜಯಪ್ರಕಾಶರು ಒಂದು ‘ಅನುಮಾನಿತ ಸತ್ಯ’ವನ್ನು ಇಟ್ಟುಕೊಂಡು ಸಾಂಸ್ಕೃತಿಕವಾದ ಬಸವಣ್ಣನ ಜಾತಿ ಮೂಲದ ವಿಶ್ಲೇಷಣೆ ಇರುವ ತಮ್ಮ ‘ಆನುದೇವ ಹೊರಗಣವನು’ ಕೃತಿಯಲ್ಲಿ ‘ಆಫ್ಘಾನಿಸ್ತಾನದ ಮೂಲದವನೆನ್ನಲಾದ ಮರುಳಶಂಕರದೇವನ ಬಗ್ಗೆಯಾಗಲೀ ಕಾಶ್ಮೀರ ಮೂಲದವನೆನ್ನಲಾದ ಮೋಳಿಗೆಯ ಮಾರಯ್ಯನ ಬಗ್ಗೆಯಾಗಲೀ..’ ಎಂಬುದನ್ನು ಪ್ರಸ್ತಾಪಿಸುತ್ತಾರೆ. ಬಂಜಗೆರೆಯವರ ಈ ವಿಶ್ಲೇಷಣೆಯನ್ನು ಬೆನ್ನು ಹತ್ತಿದಾಗ ನಮಗೆ ಗೋಚರಿಸುವ ಇನ್ನೊಂದು ಸತ್ಯ ಮಹಾದೇವ ಹಡಪದರು ಈ ಕೃತಿಯೊಳಗಿನ ಕತೆಗಳನ್ನು ಕಟ್ಟುವಲ್ಲಿ ವಹಿಸಿರಬಹುದಾದ ಸಿದ್ದತೆಯತ್ತ ಗಮನಹರಿಸುವಂತೆ ಮಾಡಿದೆ. ಇದು ಸೂಕ್ಷ್ಮಗ್ರಾಹಿಯಾಗಿ ಗಾಢವಾದ ಅವರ ಇತಿಹಾಸ ಅಧ್ಯಯನಕ್ಕೆ ಸಾಕ್ಷ್ಯ ಒದಗಿಸುತ್ತದೆ. ಈ ಸಾಕ್ಷ್ಯ ಈ ಕೃತಿಯ ಮೊದಲ ಕತೆ ‘ಶಿವನ ಕುದುರೆ’ ಯ ಮೊದಲ ಪ್ಯಾರದ ಮೊದಲ ಸಾಲಿನಲ್ಲಿ ಸೈನಿಕರು, ಕಣಿವೆ ಪ್ರದೇಶ, ಯುದ್ದದ ಸನ್ನಿವೇಶವನ್ನು ಕ್ವಚಿತ್ತಾಗಿ ತಂದಿದ್ದಾರೆ. ಹಾಗೆ ಅಲ್ಲಿ ಬರುವ ಭೋಲಾನ ರೂಪಾಂತರ ಮರುಳಶಂಕರ ಮತ್ತು ಕಾಶ್ಮೀರದ ಮೋಳಿಗೆ ಮಾರಯ್ಯನ ಪ್ರಸ್ತಾಪಗಳು ಮಹಾದೇವ ಹಡಪದರ ‘ಬಯಲುಡುಗೆಯ ಬೊಂತಾ’ ಕೃತಿಯ ಓದುಗನಲ್ಲಿ ಓದಿನ ವಿಸ್ತಾರತೆಯನ್ನು ಹೆಚ್ಚಿಸುತ್ತದೆ.

ಜೊತೆಗೆ ಇದುವರೆವಿಗೂ ಕಲ್ಯಾಣದ ಶರಣ ಇತಿಹಾಸ ಕತೆಗಳನ್ನು ಓದುವಾಗ ಸಿಗುವ ಹರಳಯ್ಯ, ಮಧುವರಸಯ್ಯ, ಅಕ್ಕಮಹಾದೇವಿಯರು ಸಿಗದೆ ಆ ಜಾಗದಲ್ಲಿ ನೀಲ-ಶೀಲ, ನಿಜದೇವಿಯರು ಸ್ಥಾನ ಪಡೆದು ಓದುಗನನ್ನು ಚಕಿತಗೊಳಿಸುತ್ತಾ ಹೋಗುತ್ತವೆ. ಹಾಗಾಗಿ ಹಡಪದರ ಈ ಕೃತಿಯನ್ನು ಬಂಜಗೆರೆಯವರ ‘ಒಂದು ಅನುಮಾನಿತ ಸತ್ಯ’ದೊಂದಿಗೆ ಓದುತ್ತಾ ಅವಲೋಕಿಸಬಹುದು! ಈ ದೃಷ್ಟಿಯಲ್ಲಿ ಈ ಕೃತಿಯೊಳಗಿನ ಅನೇಕ ಲೋಪಗಳನ್ನು ಮೆಟ್ಟಿ ಅದರಾಚೆ ಗ್ರಹಿಸಬಹುದಾದ ಕೃತಿಯ ಬಗೆಗಿನ ಸತ್ಯ ಸಂಗತಿ ಎಂದರೆ ಕುತೂಹಲ ಹುಟ್ಟಿಸುವ ಶರಣರ ಬದುಕಿನ ಭಾಗಶಃ ಸರಳವಾದ ಕ್ಲಿಷ್ಟವಾದ ಗತ ವೈಭವದ ಕಲ್ಯಾಣದೊಳಗೆ ಕತ್ತಲ ಗರ್ಭದ ಬೇಗೆಯಲಿ ಬೇಯುವ ಸಾವಿರದ ಒಂದು ಚಿತ್ರಕಾವ್ಯ!

ಎಂ.ಜವರಾಜ್


ಬಯಲುಡುಗೆಯ ಬೊಂತಾ ಪುಸ್ತಕಗಳು ಇಲ್ಲಿ ಸಿಗುತ್ತವೆ.
ಸಮಕಾಲೀನ ಓದು ಬರಹ-+919538650944
ಬೆಂಗಳೂರಿನಲ್ಲಿ ಅನಿಲ್ ರೇವೂರು -+919606604776
ಗಾಯತ್ರಿ ಹೆಗ್ಗೋಡು -8277145167
ಸಂಪರ್ಕಿಸಿರಿ….


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x