ಒಂದು ನಾಯಿಮರಿಗಾಗಿ….: ಜೆ.ವಿ.ಕಾರ್ಲೊ

ಅಂದು ಸಂಜೆ ಲಂಡನಿನಲ್ಲಿ ಮೈ ಕೊರೆಯುವಂತ ಚಳಿ. ಬಸ್ಸಿನೊಳಗೆ ಹಲ್ಲು ಕಚ್ಚಿಕೊಂಡು ಮುದುಡಿ ಕುಳಿತಿದ್ದ ಪ್ರಯಾಣಿಕರಿಗೆ ಯಾರೋ ಎಡೆಬಿಡದೆ ಚೂರಿಯಿಂದ ಕೊಚ್ಚುತ್ತಿರುವಂತ ಅನುಭವವಾಗುತ್ತಿತ್ತು. ಸದ್ದು ಮಾಡುತ್ತಾ ರೊಂಯ್ಯನೆ ಬಸ್ಸಿನೊಳಗೆ ನುಗ್ಗುತ್ತಿದ್ದ ಗಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಜನ ಹರಸಾಹಸ ಪಡುತ್ತಿದ್ದರು. ಬಸ್ಸು ಮುಂದಿನ ಸ್ಟಾಪಿನಲ್ಲಿ ನಿಂತಾಗ ಇಬ್ಬರು ಮಹಿಳೆಯರು, ಮತ್ತೊಬ್ಬ ಪುರುಷ ಬಸ್ಸು ಹತ್ತಿ ಖಾಲಿ ಇದ್ದ ಸೀಟುಗಳಲ್ಲಿ ಆಸೀನರಾದರು, ಮಹಿಳೆಯರಲ್ಲಿ ಒಬ್ಬಾಕೆಗೆ ಅಷ್ಟೇನೂ ವಯಸ್ಸಾಗಿರಲಿಲ್ಲ. ಆಕೆ ಸೀಲ್ ಚರ್ಮದ ಕೋಟು ಧರಿಸಿದ್ದಳು. ಅಂದಿನ ಮೇಲ್ಮಧ್ಯಮ ವರ್ಗದ ಸ್ತ್ರೀಯರ ವಾಡಿಕೆಯಲ್ಲಿದ್ದ ಫ್ಯಾಶನಿನಂತೆ ಅವಳೊಂದು ಪುಟ್ಟ ಪೆಕಿಂಗಿಸ್ ನಾಯಿಮರಿಯನ್ನು (ಪುಟ್ಟ ಗೊಂಬೆಯಂತ ಜೂಲು ನಾಯಿ) ತೊಡೆಯ ಮೇಲೆ ಇರಿಸಿಕೊಂಡಿದ್ದಳು..
” ಟಿಕೆಟ್, ಟಿಕೆಟ್.” ಎಂದು ಹತ್ತಿರ ಬಂದ ಕಂಡಕ್ಟರನನ್ನು ಗೊಂಬೆಯಂತಿದ್ದ ಆ ಪುಟ್ಟ ನಾಯಿ ಮರಿ ಪಿಳಿ ಪಿಳಿ ಕಣ್ಣು ಬಿಡುತ್ತಾ ನೋಡಿತು.

ಇಂಗ್ಲಿಷಿನಲ್ಲಿ: ಎ.ಜೆ.ಗಾರ್ಡಿನೆರ್
ಅನುವಾದ: ಜೆ.ವಿ.ಕಾರ್ಲೊ

ಕಂಡಕ್ಟರ್ ದುರುಗುಟ್ಟಿಕೊಂಡು ಒಂದು ಗಳಿಗೆ ನಾಯಿ ಮರಿಯನ್ನೇ ನೋಡಿದ. ಅವನು ಇಂತ ಒಂದು ಸಂದರ್ಭಕ್ಕೇ ಎದುರು ನೋಡುತ್ತಿದ್ದವನಂತೆ, ಅದರ ಪೂರ್ಣ ಲಾಭವನ್ನು ಪಡೆಯುವತ್ತ ಕಾರ್ಯೋನ್ಮುಖನಾದ.
ನಾನು ಬಸ್ಸು ಹತ್ತಿದಾಗಲೇ, ಈ ಕಂಡಕ್ಟರ್ ಮಹಾಶಯ ಬಲು ರಗಳೆಯ ಮನುಷ್ಯನಿರಬಹುದೆಂದು ಊಹಿಸಿದ್ದೆ. ಕಾರಣ ಹುಡುಕಿ, ಹುಡುಕಿ ಜಗಳಕ್ಕಿಳಿಯುವ ಮನುಷ್ಯನಂತೆ ಕಾಣಿಸುತ್ತಿದ್ದ! ಇಡೀ ಜಗತ್ತಿನ ಮೇಲೆಯೇ ಅವನು ಮುನಿಸಿಕೊಂಡಿರುವಂತೆ ಭಾಸವಾಗುತ್ತಿತ್ತು! ಮೈ ಮೂಳೆ ಮೂಳೆಗಳೂ ಚಳಿಯಿಂದ ಕರಗುಟ್ಟುತ್ತಿದ್ದು ಪ್ರಯಾಣಿಕರೆಲ್ಲಾ ಕೋಟುಗಳನ್ನು ಬೆಚ್ಚಗೆ ಮೈಗೆ ಸುತ್ತಿಕೊಂಡಿರುವಾಗ ತಾನೊಬ್ಬ ಬಸ್ಸಿನ ತೆರೆದ ಬಾಗಿಲ ಬಳಿ ನಿಂತುಕೊಂಡಿರುವುದು ಅವನಿಗೆ ಸಿಟ್ಟು ಬರಲು ಕಾರಣವಾಗಿರಲೂ ಬಹುದು!
“ಮೇಡಮ್, ನಾಯಿಮರಿಯೊಂದಿಗೆ ನೀವು ಈಗಿಂದೀಗಲೇ ಕೆಳಗಿಳಿಯಬೇಕು” ಕಂಡಕ್ಟರ್ ಅಧಿಕಾರವಾಣಿಯಿಂದ ಹೇಳಿದ.

ಆದರೆ ಆಕೆ ಅಷ್ಟು ಸುಲಭವಾಗಿ ಮಣಿದು ಕೆಳಗಿಳಿಯುವ ಹೆಣ್ಣುಮಗಳಂತೆ ಕಾಣಿಸಲಿಲ್ಲ. ಈ ಕಂಡಕ್ಟರ್ ಏನಾದರೂ ವಿಘ್ನ ತಂದೊಡ್ಡುತ್ತಾನೆಂದು ಆಕೆ ಮೊದಲೇ ಊಹಿಸಿ ತಯಾರಾಗಿ ಬಂದಂತೆ ಕಾಣಿಸುತ್ತಿತ್ತು.
“ನನ್ನ ಸ್ಟಾಪ್ ಬರುವವರೆಗೂ ನಾನು ಇಳಿಯುವವಳಲ್ಲ. ಬೇಕಾದರೆ ನೀವು ನನ್ನ ಹೆಸರು ವಿಳಾಸ ಬರೆದು ಕೊಳ್ಳಬಹುದು.” ಸೀಟಿನ ಮೇಲೆ ಮತ್ತಷ್ಟು ಒತ್ತರಿಸಿ ಕುಳಿತುಕೊಳ್ಳುತ್ತಾ ಆಕೆ ಹೇಳಿದಳು.
“ನೀವು ಕೆಳಗಿಳಿಯಲೇ ಬೇಕು! ಇದು ನನ್ನ ಆರ್ಡರ್!!” ಕಂಡಕ್ಟರ್ ದನಿ ಎತ್ತರಿಸಿ ಹೇಳಿದ. “ನೀವು ಬೇಕಾದರೆ ನಾಯಿಯೊಂದಿಗೆ ಮೇಲಿನ ಡೆಕ್ಕಿನ ಮೇಲೆ ಕುಳಿತುಕೊಳ್ಳಬಹುದು. ನನ್ನದೇನೂ ಅಭ್ಯಂತರವಿಲ್ಲ.”
ಕಾನೂನಿನ ಪ್ರಕಾರ ನಾಯಿ, ಬೆಕ್ಕುಗಳೊಂದಿಗೆ ಮೇಲಿನ ಡೆಕ್ಕಿನ ಮೇಲೆ ಕುಳಿತುಕೊಳ್ಳಬಹದಿತ್ತು.

“ಅಯ್ಯೋ!..ಈ ಚಳಿಯೊಳಗೆ ಡೆಕ್ಕಿನ ಮೇಲೆ ಕುಳಿತುಕೊಂಡರೆ ನಾನು ಖಂಡಿತವಾಗಿಯೂ ಸತ್ತೇ ಹೋಗುತ್ತೇನೆ!” ಆಕೆಯನ್ನು ಬೆಂಬಲಿಸುತ್ತಾ ಮತ್ತೊಬ್ಬ ಮಹಿಳೆ,
“ನೀನು ಹೇಳುವುದು ಸರಿಯಾಗಿಯೇ ಇದೆ. ಈಗಾಗಲೇ ಕೆಮ್ಮಿ, ಕೆಮ್ಮಿ ಆರ್ಧ ಜೀವಚ್ಛವ ಆಗಿದ್ದೀಯ!”
“ಕಂಡಕ್ಟರ್ ಸಾಹೇಬರೇ, ನಿಮ್ಮ ತೀರ್ಮಾನ ಅತ್ಯಂತ ಲಜ್ಜದಾಯಕ ಮತ್ತು ಕೆಟ್ಟದಾಗಿದೆ.” ಅವರ ಜತೆ ಬಸ್ಸು ಹತ್ತಿದ್ದ ಗಂಡಸು ಹೇಳಿದ.
ಕಂಡಕ್ಟರ್ ಅವರ ಮಾತಿಗೆ ಸೊಪ್ಪು ಹಾಕುವವನಂತೆ ಕಾಣಿಸಲಿಲ್ಲ. ಸ್ವಲ್ಪ ಜೋರಾಗಿಯೇ ಗಂಟೆಯನ್ನು ಎಳೆದ. ಬಸ್ಸು ನಿಂತಿತು.
“ನಾಯಿಯನ್ನು ಇಳಿಸುವವರೆಗೂ ಈ ಬಸ್ಸು ಮುಂದಕ್ಕೆ ಚಲಿಸುವುದಿಲ್ಲ!” ಎಂದು ಖಡಕ್ಕಾಗಿ ಹೇಳುತ್ತಾ ಕಂಡಕ್ಟರ್ ಕೆಳಗಿಳಿದು ಫುಟ್ಪಾತಿನ ಮೇಲೆ ನಿಂತುಕೊಂಡ. ಅದು, ಅವನ ವಿಜಯದ ಘಳಿಗೆಯಾಗಿತ್ತು. ಕಾನೂನು ಅವನ ಪಕ್ಷದಲ್ಲಿತ್ತು. ಅರ್ಧ ದಾರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಪ್ರಯಾಣಿಕರ ಅಸಹಾಯಕ ಸಿಟ್ಟಿನಿಂದ ಅವನು ವಿಕೃತ ಆನಂದಪಡತೊಡಗಿದ.
ಬಸ್ಸಿನೊಳಗೆ ಕುಳಿತ್ತಿದ್ದ ಇತರ ಪ್ರಯಾಣಿಕರ ಅಸಹಾಯಕ ಗೊಣಗಾಟ ಕಂಡಕ್ಟರನ ಕಲ್ಲು ಹೃದಯವನ್ನು ಕರಗಿಸಲಿಲ್ಲ. ಎಲ್ಲರೂ ಅವನನ್ನು ಶಪಿಸತೊಡಗಿದರು.

“ಇವನು ಹಿಟ್ಲರನ ಅಪ್ಪನಂತೆ ಕಾಣಿಸುತ್ತಿದ್ದಾನೆ. ಕಂಡಕ್ಟರನಾಗುವ ಬದಲು ಸೈನ್ಯಕ್ಕೆ ಸೇರಿದ್ದರೆ ಒಳಿತಿತ್ತು. ಇವನ ಮೇಲಾಧಿಕಾರಿಗಳಿಗೆ ದೂರು ಕೊಟ್ಟು ನಮ್ಮ ಹಣವನ್ನು ವಾಪಸ್ ಪಡೆಯೋಣ.” ಅವರೆಲ್ಲಾ ಮಾತನಾಡಿಕೊಂಡರು.
ಬಸ್ಸಿನೊಳಗಿದ್ದ ಪ್ರಯಾಣಿಕರೆಲ್ಲಾ ಆ ಯುವ ಹೆಣ್ಣುಮಗಳು ಮತ್ತು ಆ ಪುಟ್ಟ ನಾಯಿ ಮರಿಯ ಪರವಾಗಿದ್ದರು. ಆದರೆ, ಈ ಎಲ್ಲಾ ರಂಪಾಟಕ್ಕೆ ಕಾರಣವಾಗಿದ್ದ ಆ ಪುಟ್ಟ ನಾಯಿಮರಿ ಮಾತ್ರ ಇದ್ಯಾವುದರ ಪರಿವೆಯೂ ಇಲ್ಲದೆ ಪಿಳಿ ಪಿಳಿ ಕಣ್ಣು ಬಿಡುತ್ತಾ ಕಿಟಕಿಯ ಹೊರಗೆ ನೋಡುತ್ತಿತ್ತು. ಕಂಡಕ್ಟರ್ ಬಾಗಿಲ ಬಳಿಗೆ ಬಂದ.
“ನಿನ್ನ ಐ.ಡಿ.ನಂಬರ್ ಏನಪ್ಪ ಕಂಡಕ್ಟರ್ ಸಾಹೇಬ?” ಯಾರೋ ಒಬ್ಬ ಪ್ರಯಾಣಿಕ ಅವನ ಗ್ರಹಚಾರ ಬಿಡಿಸುವ ದನಿಯಲ್ಲಿ ಕೇಳುತ್ತಾ ಜೇಬಿನಿಂದ ಒಂದು ಪುಟ್ಟ ನೋಟು ಬುಕ್ಕು ಮತ್ತು ಪೆನ್ನನ್ನು ಹೊರತೆಗೆದ.
ಕಂಡಕ್ಟರ್ ಸಾಹೇಬ ಇಂತ ಒಣ ಗದರಿಕೆಗಳಿಗೆಲ್ಲಾ ಹೆದರುವ ಅಸಾಮಿಯಂತೆ ಕಾಣಿಸಲಿಲ್ಲ.

“ನನ್ನ ಸಮವಸ್ತ್ರದ ಮೇಲೆಯೇ ಇಷ್ಟು ದೊಡ್ಡದಾಗಿ ಬರೆದಿದೆಯಲ್ಲ ಸ್ವಾಮಿ!” ಒಂದು ವ್ಯಂಗ್ಯ ನಗೆ ಬೀರುತ್ತಾ ಅವನು ಉತ್ತರಿಸಿದ.
“ಹೋಗಲಿ ಬಿಡಪ್ಪ. ನಮ್ಮ ದುಡ್ಡು ವಾಪಸ್ಸು ಕೊಡು. ನಾವು ಇಳಿದು ಹೋಗುತ್ತೇವೆ. ನೀನು ಇವತ್ತು ರಾತ್ರಿಯೆಲ್ಲಾ ಬಸ್ಸಿನೊಳಗೆ ಕುಳಿತುಕೊಂಡಿರಲು ನಿರ್ಧರಿಸಿದರೆ ನಮಗೇನು ಹುಚ್ಚೇ?” ಮತ್ತ್ಯಾರೋ ಹೇಳಿದರು.
“ಟಿಕೆಟ್ ಒಮ್ಮೆ ಹರಿದು ಕೊಟ್ಟ ನಂತರ ದುಡ್ಡು ವಾಪಸ್ಸು ಕೊಡುವ ನಿಯಮವಿಲ್ಲ.” ಅವನ ದನಿಯಲ್ಲಿ ಕಿಂಚಿತ್ತೂ ಕರುಣೆ ಇರಲಿಲ್ಲ. ಇನ್ನು ಕಾದು ಪ್ರಯೋಜನವಿಲ್ಲವೆಂದು ಕೆಲವರು ಇಳಿದು ಹೋದರು. ಕಂಡಕ್ಟರ್ ಫೂಟ್ಪಾತಿನ ಮೇಲೆ ಅತ್ತಿಂದಿತ್ತ ಹೆಜ್ಜೆ ಹಾಕತೊಡಗಿದ. ಡ್ರೈವರನ ಜತೆ ಸಮಾಲೋಚನೆ ನಡೆಸಿದ. ಅಷ್ಟರಲ್ಲಿ, ಅದೇ ದಾರಿಯಲ್ಲಿ ಮತ್ತೊಂದು ಬಸ್ಸು ಬಂದಿತು. ಅದು ಆ ರೂಟಿನ ಕೊನೆಯ ಬಸ್ಸು. ಬಹಳಷ್ಟು ಪ್ರಯಾಣಿಕರು ಇಳಿದು ಅದನ್ನು ನಿಲ್ಲಿಸಲು ಕೈ ಅಡ್ಡ ಹಾಕಿದರೂ ಅದು ನಿಲ್ಲದೆ “ಭರ್ರ’ನೇ ಹೊರಟು ಹೋಯಿತು.

“ಇವರೆಲ್ಲಾ ಒಂದೇ…” ಮತ್ತೊಬ್ಬ ಶಪಿಸತೊಡಗಿದ.. ಇನ್ನೊಬ್ಬ ಸಿಟ್ಟಿನಿಂದ ಬಸ್ಸಿನ ಗಂಟೆಯನ್ನು ಎಳೆಯತೊಡಗಿದ.
“ಯಾರಪ್ಪಾ ಹೊಸ ಕಂಡಕ್ಟರ್?” ಕಂಡಕ್ಟರ್ ಮೇಲೆ ಹತ್ತಿ ವ್ಯಂಗ್ಯದಿಂದ ಕೇಳಿದ. ಯಾರೂ ಉತ್ತರಿಸಲಿಲ್ಲ. ಕಂಡಕ್ಟರ್ ಮತ್ತೆ ಶತಪಥ ಹಾಕತೊಡಗಿದ. ಚಳಿ ತೀವ್ರವಾಗಿತ್ತು. ಎರಡೂ ಅಂಗೈಗಳನ್ನು ಬಲವಾಗಿ ಉಜ್ಜಿ ಎದೆಗೆ ಶಾಖ ಕೊಡಲಾರಂಭಿಸಿದ. ಕೊನೆಗೆ ಬಸ್ಸು ಹತ್ತಿ ತನ್ನ ಆಸನದಲ್ಲಿ ಕುಳಿತುಕೊಂಡ.
ಅಷ್ಟರಲ್ಲಿ ಅಲ್ಲೊಬ್ಬ ಪೋಲಿಸ್ ಬಂದ. ಅವನು ಬಸ್ಸು ಹತ್ತಿ ಒಳಕ್ಕೆ ಬರುತ್ತಿದ್ದಂತೇ ಪ್ರಯಾಣಿಕರೆಲ್ಲಾ ಅವನಿಗೆ ದೂರು ಕೊಡಲಾರಂಭಿಸಿದರು.
“ಕಂಡಕ್ಟರನೂ ಕಾಯ್ದೆ ಕಾನೂನುಗಳನ್ನು ಪಾಲಿಸಬೇಕಲ್ಲ?” ಅವರ ದೂರುಗಳನ್ನು ಕೇಳಿದ ನಂತರ ಪೋಲಿಸ್ ತೀರ್ಪು ಕೊಟ್ಟ.”ಇರಲಿ. ನಿಮ್ಮ ಹೆಸರು ವಿಳಾಸಗಳನ್ನು ಕೊಡಿ.” ಎಂದ ಕೊನೆಗೆ.
“ನಾವು ಯಾವುದಕ್ಕೂ ತಯಾರಿದ್ದೇವೆ. ಆದರೆ ಈ ಕಂಡಕ್ಟರ್ ಮಹಾಶಯ ತುಂಬಾ ಹಠಮಾರಿ. ಯಾವುದಕ್ಕೂ ಬಗ್ಗುತ್ತಿಲ್ಲ.”
“ಓಹೋ…” ಪೋಲಿಸನಿಗೆ ಮುಂದೆ ಏನು ಹೇಳುವುದೆಂದೇ ಗೊತ್ತಾಗಲಿಲ್ಲ. ಅವನು ಅನತಿ ದೂರದಲ್ಲಿ ನಿಂತಿದ್ದ ಮತ್ತಿಬ್ಬರು ಪೋಲಿಸರನ್ನು ಸೇರಿಕೊಂಡ..

ಆ ಪುಟ್ಟ ನಾಯಿಮರಿ ಮಾತ್ರ ಇದು ಯಾವುದರ ಪರಿವೆಯೂ ಇಲ್ಲದೆ ಕಿಟಕಿಯ ಹೊರಗೆ ಕುತೂಹಲದಿಂದ ಪಿಳಿ ಪಿಳಿ ಕಣ್ಣು ಬಿಟ್ಟು ನೋಡುತ್ತಿತ್ತು. ಕಂಡಕ್ಟರನ ಮೊಗದಲ್ಲಿ ವಿಜಯದ ನಗು ವಿಜೃಂಭಿಸುತ್ತಿತ್ತು. ಒಬ್ಬಳು ಹುಡುಗಿ ಏರುದನಿಯಲ್ಲಿ ಚೀರುತ್ತಾ ಕಂಡಕ್ಟರನನ್ನು ಹೊಡೆದುರುಳಿಸುವಂತೆ ಧಾವಿಸಿ ಬರತೊಡಗಿದಳು.
ಆದರೆ, ಕಂಡಕ್ಟರನ ಹೃದಯ ಹೊರಗಿನ ಸಿಮೆಂಟಿನ ಕಾಲುಹಾದಿಯಂತೆ ಕಠೋರವಾಗಿತ್ತು. ಅವನು ಆ ಹುಡುಗಿಯ ಕಡೆಗೆ ಕಣ್ಣೆತ್ತಿಯೂ ನೋಡಲಿಲ್ಲ. ಹುಡುಗಿ ದುಮುಗುಡುತ್ತಾ ಪೋಲಿಸರು ನಿಂತಿದ್ದೆಡೆಗೆ ದೂರು ಹೊತ್ತು ಹೋದಳು. ಅವರೂ ಅವಳನ್ನು ಕಡೆಗಣಿಸಿದ್ದು ನೋಡಿ ಮತ್ತೆ ಬಸ್ಸಿನೆಡೆಗೇ ವಾಪಸ್ಸು ಬಂದಳು. ಇಲ್ಲೀವರೆಗೆ ಇದಾವ್ಯೂದರ ಕಡೆಗೂ ಗಮನ ಕೊಡದೆ, ಬುದ್ಧನಂತೆ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತ್ತಿದ್ದ ಅವಳ ಪ್ರಿಯಕರನನ್ನು ಕೈ ಸನ್ನೆ ಮಾಡುತ್ತಾ ಕೆಳಗಿಳಿಸಿ ಕತ್ತಲೆಯಲ್ಲಿ ಎಲ್ಲೋ ಮಾಯವಾಗಿ ಬಿಟ್ಟಳು.!
ಟಿಕೆಟ್ಟಿನ ದುಡ್ಡು ಸಿಗುವವರೆಗೆ ಕದಲುವುದಿಲ್ಲವೆಂದು ಹಠ ಹಿಡಿದು ಕುಳಿತಿದ್ದ ಮಹಾಶಯನೊಬ್ಬನು ಈಗ ಕಾಣಿಸುತ್ತಿರಲಿಲ್ಲ. ವೇಳೆ ಸರಿದಂತೆಯೇ ಬಸ್ಸೂ ಖಾಲಿಯಾಗತೊಡಗಿತು.

ಇದುವರೆಗೆ ಕಂಡಕ್ಟರನ ವಿರುಧ್ದ ಠೊಂಕ ಕಟ್ಟಿ ನಿಂತಿದ್ದ ನಾಯಿಯ ಕಡೆಯವರು ಮಣಿಯುತ್ತಿರುವ ಲಕ್ಷಣಗಳು ಕಾಣಿಸತೊಡಗಿದವು. ಕೊನೆಗೂ ನಾಯಿಯೊಡತಿ, ನಾಯಿಯೊಂದಿಗೆ ಬಸ್ಸ್ ಮೇಲಿನ ಡೆಕ್ಕಿಗೆ ಹತ್ತಿ ಹೋಗಲು ರಾಜಿಯಾದಳು. ಆದರೆ, ಅವಳೊಂದಿಗಿದ್ದ ಗಂಡಸು, “ಬೇಡ ಡಿಯರ್. ನಿನಗೆ ಮೊದಲೇ ಚಳಿಯಾಗುವುದಿಲ್ಲ! ಗ್ಯಾರಂಟಿ ನ್ಯೂಮೋನಿಯ!! ನಾನೇ ನಾಯಿಮರಿ ಜೊತೆ ಮೇಲೆ ಹೋಗುತ್ತೇನೆ.” ಎನ್ನುತ್ತಾ ಒಬ್ಬ ಆದರ್ಶ ಪತಿಯಂತೆ ನಟಿಸತೊಡಗಿದ.
ಆದರೆ ಆಕೆ ಅವನ ತ್ಯಾಗವನ್ನು ಸ್ವೀಕರಿಸಲಿಲ್ಲ. ಸತ್ತರೆ ತಾನೇ ನಾಯಿಮರಿಯೊಂದಿಗೆ ಸಾಯುತ್ತೇನೆಂದು ಬಲಿದಾನಕ್ಕೆ ತಯಾರಾಗಿರುವವಳಂತೆ ಮೇಲೆ ಹತ್ತತೊಡಗಿದಳು. ಕಂಡಕ್ಟರನ ಗಂಟು ಮುಖದಲ್ಲಿ ಮಂದಹಾಸ ಮೂಡಿತು. ಅವನು ಕೊಂಚ ಜೋರಾಗಿಯೇ ಬೆಲ್ಲು ಎಳೆದ. ಬಸ್ಸು ಹೊರಟಿತು. ಅವನ ಮುಖದಲ್ಲಿ ಜಗತ್ತನ್ನೇ ಗೆದ್ದ ಖುಶಿಯ ಭಾವ ಮಿಂಚುತ್ತಿದ್ದರೆ ಉಳಿದ ಪ್ರಯಾಣಿಕರು ಹೇಸಿಗೆಯನ್ನು ಕಂಡಂತೆ ಮುಖ ಕಿವುಚಿಕೊಂಡಿದ್ದರು.

ದುರಾದೃಷ್ಟಕ್ಕೆ, ಸ್ವಲ್ಪ ದೂರ ಹೋಗಿದ್ದ ಬಸ್ಸು ಕೆಟ್ಟು ನಿಂತಿತು. ಕಂಡಕ್ಟರ್, ಡ್ರೈವರನ ಸಹಾಯಕ್ಕೆ ಧಾವಿಸಿದ.. ಹೇಗೋ, ಬಸ್ಸು ಮತ್ತೆ ಹೊರಟಿತು. ಕಂಡಕ್ಟರ್ ಒಳಗೆ ಬಂದ. ನಾಯಿಮರಿಯೊಂದಿಗೆ ಮೇಲೆ ಹತ್ತಿದ್ದ ಮಹಿಳೆ ಮತ್ತೆ ಕೆಳಗೆ ಬಂದಿದ್ದಳು. ಆಕೆಯನ್ನು ನೋಡುತ್ತಿದ್ದಂತೆಯೇ ಕಂಡಕ್ಟರ್ ಮತ್ತೆ ಗಂಟೆ ಬಾರಿಸಿ ನಿಲ್ಲುವ ಸೂಚನೆ ಕೊಟ್ಟ. ಡ್ರೈವರ್ ಹಿಂದಿರುಗಿ ನೋಡಿದ. ಕಂಡಕ್ಟರ್ ಅವನಿಗೆ ನಾಯಿಮರಿಯನ್ನು ತೋರಿಸಿದ. ಮತ್ತೊಮ್ಮೆ ಹಳೆ ನಾಟಕದ ಪುನರಾವರ್ತನೆಯಾಯ್ತು. ಕಂಡಕ್ಟರ್ ಕೆಳಗಿಳಿದು ಕಾಲು ಹಾದಿಯ ಮೇಲೆ ಶತಪಥ ಹಾಕತೊಡಗಿದ. ಡ್ರೈವರ್ ಸ್ಟೇರಿಂಗ್ ಚಕ್ರದ ಮೇಲೆ ತಬಲ ಬಾರಿಸತೊಡಗಿದ. ನಾಯಿಮರಿ ದೂರದಲ್ಲಿ ಮಿನುಗುತ್ತಿದ್ದ ದೀಪಗಳನ್ನು ಕುತೂಹಲದಿಂದ ನೋಡುತ್ತಿತ್ತು. ಜೀವ ಹೋದರೂ ಮತ್ತೆ ಮೇಲೆ ಹೋಗುವುದಿಲ್ಲವೆಂದು ಖಡಾಖಂಡಿತವಾಗಿ ಹೇಳುತ್ತಿದ್ದ ನಾಯಿಯ ಒಡತಿ ಮತ್ತು ಅವರ ಪಂಗಡ ಕೆಳಗಿಳಿದು ಕತ್ತಲೆಯಲ್ಲಿ ಎಲ್ಲೋ ಮರೆಯಾಯಿತು.

ಕೊನೆಗೆ ಬಸ್ಸಿನಲ್ಲಿ ಉಳಿದುಕೊಂಡ ಪ್ರಯಾಣಿಕನೆಂದರೆ ನಾನೊಬ್ಬನೇ. ಕದನ ಗೆದ್ದು ಯುದ್ಧ ಸೋತ ದಂಡನಾಯಕನ ಪಾಡು ಕಂಡಕ್ಟರನದಾಗಿತ್ತು. ಹತಾಶೆ ಅವನ ಮುಖದಲ್ಲಿ ಎದ್ದು ಕಾಣಿಸುತ್ತಿತ್ತು. ಅವನಿಗೆ ಪಾಪ ಪ್ರಜ್ಞೆ ಕಾಡತೊಡಗಿತೋ ಏನೋ? ನನ್ನ ಬಳಿ ಬಂದು ತನ್ನನ್ನು ಸಮರ್ಥಿಸಿಕೊಳ್ಳತೊಡಗಿದ.
“ಕಾನೂನುಬದ್ಧನಾಗಿ ನಡೆದುಕೊಂಡಿದ್ದು ನನ್ನ ತಪ್ಪು ಅಂತೀರಾ?” ಎಂದ, ನನ್ನ ಸಮರ್ಥನೆಯನ್ನು ನಿರೀಕ್ಷಿಸುವವನಂತೆ.
ಇದೇ ಸಂದರ್ಭಕ್ಕೆ ಕಾದು ಕುಳಿತಿದ್ದ ನನಗೆ ಎರಡು ಮಾತುಗಳನ್ನಾಡಲು ಅವಕಾಶ ಸಿಕ್ಕಿತು.

“ಕಾನೂನು, ಕಟ್ಟಳೆಗಳನ್ನು ಪಾಲಿಸುವುದು ಅತೀ ಅವಶ್ಯವೆನ್ನುವುದೇನೋ ಸರಿಯೇ. ಆದರೆ ಎಲ್ಲಾ ಸಂದರ್ಭಗಳು ಒಂದೇ ಸಮನಾಗಿರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಕಾನೂನು ಪಾಲನೆಯಲ್ಲಿ ರಿಯಾಯಿತಿ ತೋರಿಸಲೇ ಬಾರದು. ಉಧಾಹರಣೆಗೆ ಸಂಚಾರ ನಿಯಮಗಳ ವಿಷಯದಲ್ಲಿ. ಇದರಿಂದ ನಮಗಷ್ಟೇ ಅಲ್ಲದೆ ಇತರರ ಜೀವಕ್ಕೂ ಹಾನಿಯಾಗುವ ಸಂದರ್ಭಗಳಿರುತ್ತವೆ. ಮತ್ತೆ ಕೆಲವು ಕಾನೂನು ನಿಯಮಗಳು ನಮ್ಮ ಮಾರ್ಗದರ್ಶನಕ್ಕೆಂದು ಮಾಡಿದ್ದಾರೆ. ಅವುಗಳನ್ನು ಚಲಾಯಿಸುವ ಅಧಿಕಾರದಲ್ಲಿರುವವರು ತಮ್ಮ ಅನುಭವದ ಆಧಾರದಲ್ಲಿ ವಿವೇಚನೆಯಂದ ಬಳಸಬೇಕು. ಇವುಗಳ ಅನುಷ್ಠಾನದಲ್ಲಿ ಚೌಕಶಿಗೆ ಅವಕಾಶವಿರುತ್ತದೆ. ಅದರಲ್ಲಿ ಇತರರಿಗೆ ಅಪಾಯವಾಗುವ ಸಂದರ್ಭಗಳು ತುಂಬಾ ಕಡಿಮೆ.

ನಾಯಿ, ಬೆಕ್ಕುಗಳನ್ನು ಬಸ್ಸಿನೊಳಗೆ ತರಬಾರದು ಎಂಬ ನಿಯಮವಿರುವುದೇನೋ ಸರಿ. ಆದರೆ, ಆ ಪುಟ್ಟ ನಾಯಿ ಮರಿಯಿಂದ ಯಾರಿಗಾದರೂ ತೊಂದರೆ ಆಗುತ್ತದೆಯೇ ಎಂಬುದು ಯೋಚಿಸಬೇಕಾದ ವಿಷಯ. ನಿಯಮವಿದೆ ಎಂಬುದನ್ನೇ ನೆಪವಾಗಿಟ್ಟುಕೊಂಡು ಎಷ್ಟೊಂದು ಪ್ರಯಾಣಿಕರ ಸಮಯ, ಹಣ ವ್ಯರ್ಥವಾಗಿದ್ದೇ ಅಲ್ಲದೆ ಮನಸ್ಸುಗಳು ಕೂಡ ಕಹಿಗೊಳಿಸುವ ಅಗತ್ಯವಿತ್ತೆ? ತುರ್ತು ಸಂದರ್ಭಗಳಲ್ಲಿ ಮಾತ್ರ ಪಾಲಿಸಬೇಕಾದ ನಿಯಮವದು. ಕಣ್ಣು ಮುಚ್ಚಿಕೊಂಡು ಪಾಲಿಸಬೇಕಾದಂತ ನಿಯಮವಲ್ಲ ಅದು. ಕಾನೂನಿನ ಉದ್ದೇಶ ಮತ್ತು ಅದರ ಕುರುಡು ಪರಿಪಾಲನೆಯ ಮಧ್ಯದ ವ್ಯತ್ಯಾಸ ನೀನು ಅರಿಯದೆ ಹೋದದ್ದು ದುರದೃಷ್ಟಕರ. ನೀನು ಕಾನೂನನ್ನೇನೋ ಪಾಲಿಸಿದೆ. ಆದರೆ ಅದರ ಆತ್ಮವನ್ನು ಕಡೆಗಣಿಸಿದೆ. ಕಾನೂನುಗಳನ್ನು ಒಳ್ಳೆಯ ಮನಸ್ಸು ಮತ್ತು ತಾಳ್ಮೆಯಿಂದ ಪರಿಪಾಲಿಸುವುದು ಮುಖ್ಯ.”
ಕಂಡಕ್ಟರ್ ಏನೂ ಮಾತನಾಡಲಿಲ್ಲ. ನನ್ನ ಮಾತುಗಳು ಅವನ ಹೃದಯವನ್ನು ನಾಟಿದವೆಂದು ನಾನು ಭಾವಿಸುತ್ತೇನೆ. ನಾನು ಬಸ್ಸಿನಿಂದ ಇಳಿಯುವಾಗ ಅವನು ಮುಗುಳ್ನಕ್ಕು ನನಗೆ ಶುಭರಾತ್ರಿಯನ್ನು ಕೋರಿದಾಗ ನನಗೆ ಹಾಗೆನಿಸಿತು.

-ಜೆ.ವಿ.ಕಾರ್ಲೊ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x