ಪಂಜು ಕಾವ್ಯಧಾರೆ

ಮಳೆ – ಇಳೆ

ಮಳೆಯ ಹನಿಗೆ ಇಳೆಯು ನಡುಗಿದೆ
ಎದೆಯ ಗೂಡಿಗೆ ಮನವು ಮಿಡಿದಿದೆ
ಹಸಿರು ತೋರಣವ ತೊಳೆದು ಬೆಳಗಿದೆ
ಮನಕೆ ಮುದವ ತಂದು ಹಿತವಾಗಿದೆ

ಬೀಸುವ ತಂಗಾಳಿ ನಿನ್ನ ನೆನಪಿಸಿದೆ
ತೋಳು ಬಯಸಿ ಕೈಬೀಸಿ ಕರೆದಿದೆ
ಬಂದು ಸೇರುವ ಬಯಕೆ ಮನದಲಿ ನೆಟ್ಟಿದೆ
ಪಿಳಿಪಿಳಿಸುತ ಕಣ್ಣದೃಷ್ಟಿ ನಿನ್ನತ್ತಲೇ ನಾಟಿದೆ.

ನೆನಪು ಬರಿಸುತ ತಿಳಿಗಾಳಿ ಚೇಡಿಸುತಿದೆ
ಮಳೆಯ ಹನಿಯೂ ಸಾತ್ ನೀಡುತಿದೆ
ಬಾ ಎನ್ನ ಬಳಿಗೆ ಹೇ… ಜೀವ ಒಲವೆ
ಮೋಡ ಸರಿದು ಬಾನು ಭೂಮಿ ಒಂದಾಗಿವೆ.

ನಿನ್ನಿಧ್ವನಿ ಕೇಳದೆ ಕರ್ಣಪಟಲವೇ ಮಂಕಾಗಿದೆ
ನಿನ್ನಿನಿಯನ ಮನವು ಕಾದು ಕಾದು ಸೋತಿದೆ
ಕಣ್ಣ ಕಾಂತಿಯಲೇ ಎಲ್ಲವನು ಉಣಿಸು
ಬಳಿ ಬಂದು ಬಿಸಿ ಉಸಿರನು ತಣಿಸು.

ಶಿವಪುತ್ರ ಮೇಟಿ


ಗಝಲ್

ನಿನ್ನ ರೂಪದ ದಿವ್ಯಕಾಂತಿ ಕಣ್ಣು ತುಂಬಿಕೊಂಡು ಮಲಗಿ ಬಿಡುವೆ/
ನಿನ್ನ ನೆನಪುಗಳ ಮೃದು ಚಾದರ ಹೊದ್ದುಕೊಂಡು ಮಲಗಿ ಬಿಡುವೆ//

ಪ್ರೀತಿ ಸವಿದ ಸವಿಗಳಿಗೆಗಳು ಮನಕೆ ಮುದ ನೀಡುವುವು ಸದಾ/
ಕಳೆದ್ಹೋದ ಸಂತಸದ ಕ್ಷಣಗಳು ಎಣಿಸಿಕೊಂಡು ಮಲಗಿ ಬಿಡುವೆ//

ನಿನ್ನದೆ ಕನವರಿಕೆಯಲಿ ಹನಿ ಹನಿಯಾಗಿ ಕರಗುವುದು ರಾತ್ರಿ/
ಕಾಡುವ ಕನಸುಗಳು ಎದೆಯ ಮೇಲೆ ಎಳೆದುಕೊಂಡು ಮಲಗಿ ಬಿಡುವೆ//

ನೀನು ಪ್ರೇಮಕಾವ್ಯವೋ ವಿರಹಗಾನವೋ ಗೊತ್ತಿಲ್ಲ ನನಗೆ/
ನಿನ್ನ ಖಯಾಲಿನಲಿ ಗಜಲೊಂದು ಬರೆದುಕೊಂಡು ಮಲಗಿ ಬಿಡುವೆ//

ನಿನ್ನ ಸೌಂದರ್ಯ ಬಿಂಬ ಆಕಾಶಕ್ಕೆ ನೆಗೆದು
ನಕ್ಷತ್ರಗಳಾಗಿವೆ/
ಮಿನುಗುವ ತಾರೆಗಳಾ ನಿನ್ನ ಕಂಗಳಿಗೆ ಹೋಲಿಸಿಕೊಂಡು ಮಲಗಿ ಬಿಡುವೆ//

ಖಯ್ಯಾಮನ ರುಬಾಯಿ, ಕಬೀರನ ದೋಹೆಗಳ ಸಂಗಮ ನೀನು/
ಕಲ್ಪನೆಯ ಗ್ರಂಥದಲಿ ಮಹಾಕಾವ್ಯ ಓದಿಕೊಂಡು ಮಲಗಿ ಬಿಡುವೆ//

ಸಿಹಿಕಹಿ ಅನುಭವಗಳಿಂದ ಜೀವನ ಪಾವನವಾಗದಂತು ನಿಜ/
ಕಹಿ ಘಟನೆಗಳೇ ಬದುಕಿನ ಭಾಗವೆಂದುಕೊಂಡು ಮಲಗಿ ಬಿಡುವೆ//

ಒಲವ್ ಸಾಕ್ಷಾತ್ಕಾರ ಸ್ಮರಣೆಗಳಿಂದಲೇ ಜೀವಂತ ಈ ಕವಿ “ಪೀರ”/
ಸ್ಮರಣಶಕ್ತಿ ಕುಂದಿದಾಗ ಮಸಣದತ್ತ ಕೈಚಾಚಿಕೊಂಡು ಮಲಗಿ ಬಿಡುವೆ.//

ಅಶ್ಫಾಕ್ ಪೀರಜಾದೆ.


ದಯಾಮಯಿ

ಅವಳು ಗಂಗೆಯಾದಳು,
ಯಮುನೆಯಾದಳು,
ಸಿಂಧು, ಗೋದಾವರಿ, ನರ್ಮದಾ
ಹೀಗೆ ಎಲ್ಲವೂ ಆದಳು
ಜೀವನುದ್ದಕ್ಕೂ ಹರಿಯುತ್ತಲೇ ಹೋದಳು
ಕಷ್ಟಸಹಿಸಿ ಬೆಳೆಯುತ್ತಲೇ ನಡೆದಳು

ಇವರಿಲ್ಲಿ ಸಹಿಸುತ್ತಾಳೆಂದು
ಕತ್ತಲಲ್ಲಿ ಮುಳುಗಿ ಬೆಳಗಾಗುವಷ್ಟರಲ್ಲಿ
ತಂದ ಕರ್ಮಾದಿಗಳನ್ನು
ಸುರಿದು, ಮೂರು ಬಾರಿ
ಮುಳುಗಿ, ದೇಹ ನೆನಸಿ
ಬಾಯಿಬಡಿಸುತ್ತ ಹೊರ ನಡೆದರು
ಪಾಪದ ಭಾರ ಅಲ್ಪವೆನಿಸಿ
ನೆಮ್ಮದಿ ನಿದ್ದಿಗೆ ಮಾರು ಹೋದರು

ಅವಳು ದ್ವೀಪದ ಆಚೆ ನಿಂತು
ಒಡಲಿಗೆ ಹಾಕಿಕೊಂಡ ಎಲ್ಲವುಗಳ
ಲೆಕ್ಕ ಮಾಡುತ್ತಾ,ಕೂಗಿ ಕರೆದಳು
ದೂರದ ಪರಿಣಾಮ ಯಾರೂ ಓಗೊಡಲಿಲ್ಲ
ಅವಳು ಮತ್ತೆ ಲೆಕ್ಕದಲ್ಲಿ ತೊಡಗಿ
ಎಲ್ಲವನ್ನು ಮರೆತಳು
ಅಂಕಿಸಂಖ್ಯೆ ಸರಿಯಿಲ್ಲವೆಂದು
ಭೂಮಿಯನ್ನೇ ದೂರಿದಳು.

ಪ್ಯಾರಿಸುತ
ಆರ್ ಎನ್ ದರ್ಗಾದವರ


ಗಾಂಧಿ ಮತ್ತು ದೇವರು

ನಮ್ಮ ದೇವತೆಗಳ
ಕೈಯಲ್ಲಿ ಆಯುಧಗಳನ್ನು
ಕಂಡಾಗಲೆಲ್ಲ
ಗಾಂಧಿ ಕೈಯಲ್ಲಿನ
ಚರಕ ನೆನಪಾಗುತ್ತದೆ

ನಮ್ಮ ದೇವತೆಗಳು
ರಕ್ತಹರಿಸಿ ವಿಜಯವನ್ನು
ಪಡೆದ ಕಥೆಗಳನ್ನು
ಕೇಳಿದಾಗಲೆಲ್ಲಾ
ಗಾಂಧಿಯ ಅಹಿಂಸೆಯ
ಹೋರಾಟ ಕೇಳಿಬರುತ್ತದೆ

ನಮ್ಮ ದೇವತೆಗಳು
ನರ ಮಾನವರಂತೆ
ಕಿತ್ತಾಡಿರುವುದನ್ನು ತಿಳಿದಾಗ
ಗಾಂಧಿಯ ಸತ್ಯದ
ನಡೆ ನುಡಿಗಳು
ಕಣ್ಣ ಮುಂದೆ ಬರುತ್ತವೆ

ದಿಟ್ಟಿಸಿ ನೋಡಿದಂತೆಲ್ಲಾ
ಗಾಂಧಿ ದೇವರಿಗಿಂತ
ಎತ್ತರೆತ್ತರವಾಗಿ
ಮನದ ಮೂಲೆಯಲ್ಲಿ
ಶಾಶ್ವತವಾಗಿ ನೆಲೆಯೂರುತ್ತಾರೆ.

-ರೇಣುಕಾ ಕೋಡಗುಂಟಿ.


ಹುಣಿಸೆಮರದ ನೆರಳು

ಅಲ್ಲೊಂದು ಮುದುಕಿಯ ಸೂರು
ಸೂರಿನ ಪಕ್ಕದಲ್ಲೊಂದು ಹುಣಸೆಮರ
ಹುಣಿಸೆಮರದ ಮೇಲೊಂದು ಗುಬ್ಬಕ್ಕಿಗೂಡು
ಗೂಡಿನಲ್ಲೆರಡು ಗುಬ್ಬಕ್ಕಿ ಪಿಳ್ಳೆಗಳು
ಚಿವ್ ಚಿವ್ ಗುಟ್ಟುತ್ತಿವೆ…
ತನ್ನವ್ವನ ನೆನೆದೋ? ಆರದೋ ಮಸಲತ್ತಿಗೆ ಸಿಕ್ಕೋ?.

ಹುಣಿಸೆಮರದ ಬುಡದಲ್ಲೊಂದು ಇರುವೆಗೂಡು
ಎಲ್ಲಿಂದಲೋ ಒಂದಗಲನ್ನವ
ಕದ್ದೊತ್ತು ಬರುವ ಇರುವೆಗಳ ಸಾಲು
ಇರುವೆಗೊಡಿನ ತೆಕ್ಕೆಯಲಿ ಗುಬ್ಬಕ್ಕನ ಹಿಂಡು
ಕುಕ್ಕಿ ಹಾಯ್ತಿವೆ
ಮಣ್ಣಲ್ಲಿ ಮರೆಯಾದ ಕಾಳ್ಗಳನು
ಉದರಚೀಲ ತುಂಬಲೋ…?ಪಿಳ್ಳೆಗಳಿಗುಣಬಡಿಸಲೋ…?

ಅಲ್ಲೊಂದು ಇಲ್ಲೊಂದು ಮುರಿದು ಬಿದ್ದಿವೆ
ಹುಣಿಸೆಮರದ ರೆಂಬೆಗಳು
ಬಿದ್ದ ರೆಂಬೆಗಳ ಮುರಿದು ಜೋಪಡಿಯ
ತೆಕ್ಕೆಗೊಟ್ಟುತ್ತಿರುವಳು ಮುದುಕಿ
ಉರಿವ ಕೆಂಡದ ಒಲೆಗೆಂದೋ..?
ತನ್ನ ಚರಮ ಸಾಧನೆಗೆಂದೋ..?

ಹುಣಿಸೆಮರದ ನೆರಳಿನಲಿ
ಮುರುಕಲು ಕುರ್ಚಿಯಲಿ
ಮೌನದಿ ಕುಂತಿರುವನು
ಮುದುಕಿಯ ಮೊಮ್ಮಗನು
ಹುಣಿಸಮರದ ಹುಳಿಯ ತಿಳಿಯಲೋ..?
ತನ್ನೊಳಗಿನ ಬಿಷವ ಕುಡಿಯಲೋ..?

ಮಸಿಯಣ್ಣ ಆರನಕಟ್ಟೆ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x