ದೊಡ್ಡೂರು ಮತ್ತು ಅವಲಕ್ಕಿ: ಗುರುಪ್ರಸಾದ ಕುರ್ತಕೋಟಿ

ನಾನು ಬೆಳೆದ ಲಕ್ಷ್ಮೇಶ್ವರ (ಈಗಿನ ಗದಗ ಜಿಲ್ಲೆ) ನಾನಾ ಕಾರಣಗಳಿಂದ ನನಗೆ ಇಷ್ಟ. ಅದೊಂದು ಐತಿಹಾಸಿಕ ಮಹತ್ವವುಳ್ಳ ಊರು. ಅದರ ಸುತ್ತಲೂ ತುಂಬಾ ಹಳ್ಳಿಗಳು ಇವೆ. ಅದರಲ್ಲೇ ಕಳಶಪ್ರಾಯವಾದ ಹಳ್ಳಿಯ ಹೆಸರು ದೊಡ್ಡೂರು. ಅದೊಂದು ಚಿಕ್ಕ ಹಳ್ಳಿ ಆದರೂ ಹೆಸರು ಮಾತ್ರ ದೊಡ್ಡೂರು. ಒಂದು ಕಾಲದಲ್ಲಿ ಆ ಪ್ರದೇಶದಲ್ಲಿ ಅದೇ ದೊಡ್ಡ ಊರಾಗಿತ್ತೋ ಏನೋ. ಒಟ್ಟಿನಲ್ಲಿ ನನ್ನ ತಲೆಯಲ್ಲಿ ಹಳ್ಳಿಗಳ ಬಗ್ಗೆ ಒಂದು ವಿಶಿಷ್ಟ ಗೌರವ ಹುಟ್ಟಿಸಿ, ಕೃಷಿ ಬಗ್ಗೆ ನನ್ನ ತಲೆಯಲ್ಲಿ ಆಳವಾಗಿ ಬೀಜ ಬಿತ್ತಿದ ನನ್ನ ಪ್ರೀತಿಯ ದೊಡ್ಡೂರಿಗೆ ನಾನು ಯಾವಾಗಲೂ ಋಣಿ!
ದೊಡ್ಡೂರು ನಮ್ಮೂರಿನಿಂದ ಸುಮಾರು ೮ ಕಿಲೋಮೀಟರುಗಳ ಅಂತರದಲ್ಲಿ ಇದೆ. ಅಲ್ಲಿ ನನ್ನ ಅಪ್ಪನ ಅಕ್ಕ (ನನ್ನ ಸೋದರತ್ತೆ) ಅವರ ಕುಟುಂಬ ನೆಲೆಸಿತ್ತು. ಅವರನ್ನು ನಾವು ದೊಡ್ಡೂರ ಅತ್ತೆವ್ವಾ ಅಂತಲೇ ಕರೆಯುತ್ತಿದ್ದೆವು. ಈಗ ಅವರಿಲ್ಲ, ಅವರ ಮಗ ಅಲ್ಲಿ ಇದ್ದಾರೆ. ಅವರದು ದೊಡ್ಡ ಕುಟುಂಬ. ಅವರಿಗೆ ೫ ಜನ ಮಕ್ಕಳು. ಆಗೆಲ್ಲ ಕಾರು ಭಾರು ಇರಲಿಲ್ಲವಾದ್ದರಿಂದ ದೊಡ್ಡೂರಿಗೆ ಬಸ್ಸಿನಲ್ಲೇ ಹೋಗುತ್ತಿದ್ದುದೇ ಹೆಚ್ಚು.

ಬಸ್ಸಿನಿಂದ ಇಳಿಯುತ್ತಲೇ ಅವರ ದೊಡ್ಡ ಮನೆ ಕಾಣುತ್ತಿತ್ತು. ಮನೆಯವರೆಗೂ ಕಾಲು ದಾರಿಗಿಂತ ತುಸು ದೊಡ್ಡದಾದ ಮಣ್ಣಿನ ರಸ್ತೆ. ದಾರಿಗುಂಟ ಅಕ್ಕಪಕ್ಕದಲ್ಲಿ ಒಂದಿಷ್ಟು ಮನೆಗಳು. ಅವುಗಳಿಂದ ಬರುವ ಸಗಣಿಯ ಪರಿಮಳ ಹಾಗೂ ದನಕರು, ಕುರಿಗಳ ಮೇಳ! ಊರಿನಲ್ಲೆಲ್ಲ ದೊಡ್ಡ ಮನೆ ಅವರದೇ ಆಗಿತ್ತು ಅನ್ನೋದು ನನ್ನ ಭಾವನೆ. ಕಲ್ಲು, ಗಚ್ಚು, ಕಟ್ಟಿಗೆ ಹಾಗೂ ಹಂಚು ಬಳಸಿ ಕಟ್ಟಿದ ಎರಡು ಅಂತಸ್ತಿನ ಹಳೆಯದಾದರೂ ಗಟ್ಟಿಮುಟ್ಟಾದ ಮನೆ ಅದು. ಇಡೀ ಮನೆ ಕಾಂಪೌಂಡಿನಿಂದ ಆವೃತ ಆಗಿತ್ತು. ಹಿತ್ತಿಲಲ್ಲಿದ್ದ ಕೊಟ್ಟಿಗೆ ಎಷ್ಟು ದೊಡ್ಡದಿತ್ತು ಅಂದರೆ ಎಷ್ಟೋ ಎಮ್ಮೆ ದನಕರುಗಳನ್ನು ಅಲ್ಲಿ ಕಟ್ಟಿರುತ್ತಿದ್ದರು. ಕೊಲ್ಕತ್ತಾದ ಎಮ್ಮೆ ಅಂತ ಒಂದಿರುತ್ತದೆ ಎಂದು ಮೊದಲ ಬಾರಿ ನೋಡಿದ್ದೇ ಅಲ್ಲಿ. ಒಂದು ಕಾಲಕ್ಕೆ ಅಲ್ಲಿ ೨೫ ದನಗಳು ಇದ್ದವು ಎಂಬ ನೆನಪು.

ನನ್ನ ಅತ್ತೆವ್ವನ ಯಜಮಾನರಿಗೆ ನಾವು ನಾನಿ ಮಾಮ ಅಂತ ಕರೆಯುತ್ತಿದ್ದೆವು. ಗೌಡ್ರು ಅಂತಲೂ ಗೌರವದಿಂದ ಜನ ಕರೆಯುತ್ತಿದ್ದರು. ಅವರು ದೊಡ್ಡ ಜಮೀನುದಾರರು. ಅವರದು ತುಂಬಾ ತಮಾಷೆ ಸ್ವಭಾವ. ನನ್ನನ್ನು ಯಾವಾಗಲೂ ಬೇರೆ ಬೇರೆ ಹೆಸರಿನಿಂದಲೇ ಕರೆಯೋರು. ಬೇಕಂತಲೇ ಕರೆಯುತ್ತಿದ್ದರೋ ಅಥವಾ ಅವರಿಗೆ ನಿಜವಾಗಿಯೂ ನನ್ನ ಹೆಸರು ಮರೆಯುತ್ತಿತ್ತೋ ಗೊತ್ತಿಲ್ಲ. ಪ್ರಶಾಂತಾ, ಗುರುದತ್ತ, ಗುರುರಾಜಾ, ಪ್ರಕಾಶಾ, ಪ್ರಸನ್ನ ಹೀಗೆ… ಪ್ರಸಾದ ಒಂದು ಬಿಟ್ಟು ಎಲ್ಲ ಹೆಸರಿನಿಂದ ಕರೆಯುತ್ತಿದ್ದರು. ಒಮ್ಮೆ ಅಪ್ಪಿ ತಪ್ಪಿ ಪ್ರಸಾದ ಅಂದೇ ಬಿಟ್ಟಿದ್ದರು. ನನಗೆ ಎಷ್ಟು ಖುಷಿ ಆಗಿತ್ತು ಅಂದರೆ ಹೇಳೋಕೆ ಆಗಲ್ಲ. ಆದರೆ ಮರುಕ್ಷಣವೇ ಛೆ ಛೆ ಅಂತ ಏನೋ ದೊಡ್ಡ ತಪ್ಪು ಮಾಡಿದವರ ತರಹ “ಏ ಪ್ರಕಾಶಾ ಬಾರೋ ಇಲ್ಲೆ” ಅಂದುಬಿಡೋದೇ!

ಅವರು ಓದಿದ್ದು ವಕೀಲಿ. ಕೆಲವು ವರ್ಷ ಕೋರ್ಟ್ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು ಕೂಡ. ಸಿಕ್ಕಾಪಟ್ಟೆ ತೋಟ, ಗದ್ದೆ, ಹೈನುಗಾರಿಕೆ ಇದ್ದ ಮನೆತನ ಅವರದು ಹೀಗಾಗಿ ಅವರಿಗೆ ಕೆಲಸ ಮಾಡುವ ಅವಶ್ಯಕತೆ ಇರಲಿಲ್ಲ. ಏನೇ ಇರಲಿ ಅವರು ತುಂಬಾ interesting personality. ಅವರ ಮಾತುಗಳನ್ನು ಕೇಳೋದೆ ಚಂದ. ಅವರು ಯಾರನ್ನು ಉದ್ದೇಶಿಸಿ ಮಾತಾಡುತ್ತಿದ್ದರೋ ಅವನನ್ನು ಬಿಟ್ಟು ಉಳಿದವರಿಗೆಲ್ಲ ಅದು ಮನರಂಜನೆ! ಒಂದು ಸಲ ದೊಡ್ಡೂರಿನಿಂದ ಲಕ್ಷ್ಮೇಶ್ವರಕ್ಕೆ ಬಸ್ಸಿನಲ್ಲಿ ಪಯಣಿಸುತ್ತಿದ್ದೆವು. ಡ್ರೈವರ್ ತನ್ನ ಪಕ್ಕಕ್ಕೆ ಕುಳಿತವರ ಜೊತೆಗೆ ಮಾತಾಡುತ್ತ ಗಾಡಿ ಓಡಿಸುತ್ತಿದ್ದರು. ಅವರಿಗೂ ದಿನಾಲೂ ಅದೇ ರಸ್ತೆಯಲ್ಲಿ ಓಡಿಸಿ ಬೇಜಾರಲ್ಲವೇ. ಕೈ ಕಾಲು ಕಣ್ಣುಗಳು ತಮ್ಮ ಕೆಲಸ ಮಾಡಿಕೊಂಡು ಗಾಡಿ ಓಡುತ್ತಿರುತ್ತದೆ, ಹೀಗಾಗಿ ಬಾಯಿಗೂ ಒಂದು ಕೆಲಸ ಇರಲಿ ಅಂತ ಪಕ್ಕದವರ ಜೊತೆ ಹರಟೆ ಹೊಡೆಯುತ್ತಿದ್ದರು ಬಸ್ಸಿನ ಡ್ರೈವರ್ರು. ಸ್ವಲ್ಪ ಹೊತ್ತು ಅವರ ಮಾತುಕತೆಯನ್ನು ಗಮನಿಸಿದ ನಾನಿ ಮಾಮ ಈಗ ಮಾತಾಡಲು ಶುರು ಮಾಡಿದ್ದರು. ಗಾಡಿ ಓಡ್ಸೋವಾಗ ಬ್ಯಾರೆಯವ್ರ ಜೋಡಿ ಮಾತಾಡ್ತೀಯ? ಆಕ್ಸಿಡೆಂಟ್ ಆದ್ರ ಯಾರ್ ಪಾ ಜವಾಬ್ದಾರಿ? ಹಂಗ ಮಾತಾಡಬಾರದು ಅಂತ ಕಾನೂನು ಅದ, ಗೊತ್ತಿಲ್ಲೇನ್ ನಿನಗ?… ಅದು ಇದು ಅಂತ ಎಷ್ಟೋ ಹೊತ್ತು ಕ್ಲಾಸ್ ತೊಗೊಂಡ್ರು ತೊಗೊಂಡ್ರು…

ಇವರ ಕಡೆಯಿಂದ ಹಿಗ್ಗಾಮುಗ್ಗ ಬೈಸಿಕೊಂಡು ಡ್ರೈವರ್ ಲಕ್ಷ್ಮೇಶ್ವರ ಮುಟ್ಟಿದ ಕೂಡಲೇ ತನ್ನ ಕೆಲಸಕ್ಕೆ ರಾಜಿನಾಮೆ ಕೊಟ್ಟೆ ಕೊಟ್ಟಿರುತ್ತಾರೆ ಅಂತ ನಾನು ಅವತ್ತು ಬಲವಾಗಿ ನಂಬಿದ್ದೆ! ಅವರ ಮಾತುಗಳೆಲ್ಲವೂ ಕಾನೂನು ಬದ್ಧವಾಗಿರುತ್ತಿದ್ದವಾದರೂ ಸತ್ಯ ಎಲ್ಲರಿಗೂ ರುಚಿಸೋಲ್ಲ ಅಲ್ಲವೇ? ತುಂಬಾ ಜನ, ಗೌಡರು ಬರುತ್ತಾರೆ ಅಂದರೆ ಅಲ್ಲಿಂದ ಕಾಲು ತೆಗೆಯುತ್ತಿದ್ದರು!

ಇನ್ನು ನನ್ನ ಅತ್ತೆವ್ವ ನಗುಮುಖದ ಚೆಲುವೆ. ಅವಳು ಎಷ್ಟು ಬೆಳ್ಳಗೆ ಇದ್ದಳೋ ಅಷ್ಟೇ ನಿಷ್ಕಲ್ಮಶ ಅವಳ ಮನಸ್ಸು ಕೂಡ. ಅವಳು ಹಾಗೂ ನನ್ನ ಅಪ್ಪ ಇಬ್ಬರೂ ಚಿಕ್ಕಂದಿನಿಂದಲೂ ತುಂಬಾ ಕಷ್ಟದಲ್ಲೇ ಬೆಳೆದವರು. ಯಾರು ಎಷ್ಟೇ ಕಷ್ಟ ಕೊಟ್ಟರೂ ತಾವು ಬದುಕಿರುವವರೆಗೆ ಯಾರನ್ನೂ ದ್ವೇಷ ಮಾಡಿದ್ದು ನಾನು ಕಂಡಿಲ್ಲ. ಇಬ್ಬರದೂ ಯಾವಾಗಲೂ ನಗು ಮುಖವೇ, ಕಪಟವೆ ಇಲ್ಲದ ಜೀವಗಳು. ಕಷ್ಟಗಳನ್ನು ಮೆಟ್ಟಿ ನಿಲ್ಲಲು ನಗುವೇ ಅವರ ಅಸ್ತ್ರ ಆಗಿತ್ತೋ ಏನೋ!ಮನೆಯ ಒಳಗೆ ಹೋಗುತ್ತಲೇ ಅವಳ ನಗು ಮುಖದ ಸ್ವಾಗತ ಸಿಗುತ್ತಿತ್ತು. “ಬರ್ರಿ ಬರ್ರಿ…” ಅನ್ನುತ್ತ ಖುಷಿ ಪಡುತ್ತಿದ್ದಳು. ಅವಳ ಜೊತೆಗೆ ನನ್ನ ಅಣ್ಣಂದಿರು ಅಕ್ಕಂದಿರು ಕೂಡ ತುಂಬಾ ಅಕ್ಕರೆ ತೋರುತ್ತಿದ್ದರು. ಅಲ್ಲಿಗೆ ಹೋದ ತಕ್ಷಣ ನನಗೆ ಹಸಿವೆ ಆಗಿಯೇ ಬಿಡುತ್ತಿತ್ತು. ಯಾಕಂದರೆ ಅತ್ತೆವ್ವ ಅಡುಗೆ ಮನೆಗೆ ಕರೆದೊಯ್ದು ಹಚ್ಚಿದ ಅವಲಕ್ಕಿ, ಹಾಲು, ಕೆನೆ ಕೆನೆ ಮೊಸರು ಹಾಕಿ ತಿನ್ನಲು ಕೊಡುತ್ತಿದ್ದಳು. ಹಚ್ಚಿದ ಅವಲಕ್ಕಿ ಅಂದರೆ ಮೀಡಿಯಂ ಅವಲಕ್ಕಿಗೆ ಒಗ್ಗರಣೆ ಕೊಟ್ಟು ಉಪ್ಪು, ಖಾರ ಹಾಗೂ ಮೆಂತೆ ಹಿಟ್ಟು ಹಾಕಿ ಅದು ಕೆಂಪಾಗುವಂತೆ ಕಲಿಸಿ ಮಾಡುವುದು. ಅದರಂತಹ ರುಚಿಕರ ಖಾದ್ಯ ನಾನು ಬೇರೆ ಕಾಣೆ. ಅವಲಕ್ಕಿ ಸರ್ವ ಕಾಲಕ್ಕೂ ನನಗೆ ಅಚ್ಚು ಮೆಚ್ಚು. ಅದು ನಮ್ಮ ಖಂದಾನಿ ಖಾದ್ಯ! ಅದರಲ್ಲಿ ಅಂಥದ್ದು ಏನು ಇದೆಯೋ ದೇವರೇ ಬಲ್ಲ. ದೊಡ್ಡ ಅಡುಗೆಮನೆಯಲ್ಲಿ ಹೀಗೆ ಅವಲಕ್ಕಿ ಸವಿಯುತ್ತ ದೊಡ್ಡವರು ಚಿಕ್ಕವರು ಎಲ್ಲರೂ ಕೂತು ಹರಟೆ ಹೊಡೆಯುವುದೇ ಒಂದು ದೊಡ್ಡ ಸಂಭ್ರಮ. ಅತ್ತೆವ್ವನದು ದೊಡ್ಡ ದನಿ. ಅವಳು ಹರಟೆ ಹೊಡೆಯುವ ಪರಿಯೇ ನನಗೆ ಇಷ್ಟ. “ಅಲ್ಲೋ ಪ್ರಸಾದಾ…” ಅಂತ ಅವಳು ಮಾತಾಡುತ್ತಿದ್ದ ಅವಳ ಧಾಟಿ ಅವಳನ್ನು ನೆನೆಸಿಕೊಂಡಾಗಲೆಲ್ಲ ಇನ್ನೂ ನನ್ನ ಕಿವಿಯಲ್ಲಿ ಧ್ವನಿಸುತ್ತದೆ. ಹೀಗೆ ಎಲ್ಲರ ಜೊತೆಗೆ ಹರಟೆ ಹೊಡೆಯುತ್ತ ಕೂತರೆ ಎಷ್ಟು ಸುಖ ಅಂತೀರಿ! ಪುಣ್ಯಕ್ಕೆ ಅವಾಗ ಸ್ಮಾರ್ಟ್ ಫೋನುಗಳು ಇರಲಿಲ್ಲ. ಇದ್ದಿದ್ದರೆ ದೊಡ್ದೂರಿನ ಅವಲಕ್ಕಿ ಯನ್ನು whatsapp ಸ್ಟೇಟಸ್ ಅಲ್ಲಿ ನೋಡಿ ಬಾಯಲ್ಲಿ ನೀರು ಸುರಿಸುತ್ತ ಒಂದು ಲೈಕ್ ಒತ್ತುತ್ತಿದ್ದೆವೋ ಏನೋ! ಒಟ್ಟಿನಲ್ಲಿ ನಾವು ಪುಣ್ಯವಂತರು.

ಅವಲಕ್ಕಿಯನ್ನು ಒಂದು ರೌಂಡ್ ಗಬಗಬನೆ ತಿಂದು ಮತ್ತೆ ಹಾಕಿಸಿಕೊಳ್ಳುತ್ತಿದ್ದೆ. ಆದರೆ ಅಮ್ಮನ ಕಣ್ಣು ತಪ್ಪಿಸುತ್ತಿದ್ದೆ! ಯಾಕಂದರೆ ತಿನ್ನೋ ವಿಷಯದಲ್ಲಿ ನಾನು ತುಂಬಾ ಹಪಹಪಿ ಮನುಷ್ಯ. ಆಮೇಲೆ ಹೊಟ್ಟೆ ಕೆಡಿಸಿಕೊಳ್ಳುತ್ತೇನೆ ಎಂಬುದು ಅಮ್ಮನ ಕಾಳಜಿ. ಆದರೆ ಮುಂದಿನದು ಮುಂದೆ ಸದ್ಯಕ್ಕಂತೂ ತಿಂದುಬಿಡಬೇಕು ಎಂಬುದು ನನ್ನ ಸಿದ್ಧಾಂತ. ಹೀಗಾಗಿ ಅವಲಕ್ಕಿ ಹಾಕಿಸಿಕೊಳ್ಳುವಾಗ ಅಮ್ಮ ಬೈಯುತ್ತಾಳೆ ಎಂಬ ಹೆದರಿಕೆ ಇರುತ್ತಿತ್ತು. ಈಗ ಹೆಂಡತಿಯ ಕಣ್ಣು ತಪ್ಪಿಸಬೇಕು. ಒಟ್ಟಿನಲ್ಲಿ ಗಂಡಸರ ಮೇಲೆ ನಡೆಯುವ ಶೋಷಣೆ ಯಾರಿಗೆ ಹೇಳೋಣ?! ಹಾಗೂ ಒಂದೊಮ್ಮೆ ತಲೆ ಕೆಟ್ಟು ಅಮ್ಮ ಬೈದೆ ಬಿಡುತ್ತಿದ್ದಳು. ಆಗ ಅತ್ತೆವ್ವ “ಇರ್ಲಿ ಬಿಡs ನಮ್ಮವ್ವ.. ಪಾಪ ಬೆಳಿಯೋ ಹುಡುಗ.. ನೀ ತಿನ್ನು ಪ್ರಸಾದಾ… ಇನ್ನೊಂದಿಷ್ಟು ಹಾಕ್ಲ್ಯಾ…” ಅಂತ ನನ್ನ ರಕ್ಷಣೆ ಮಾಡಿ ಬೋನಸ್ ಅವಲಕ್ಕಿ ಹಾಕುತ್ತಿದ್ದಳು! ಇದೆಲ್ಲ ಮುಗಿದ ಮೇಲೆ ತೋಟಕ್ಕೆ ನಮ್ಮ ಸವಾರಿ ಸಾಗುತ್ತಿತ್ತು. ಎಲ್ಲಿ ನೋಡಿದರೂ ಹಸಿರು, ಆಳವಾದ ಬಾವಿ, ದೊಡ್ಡ ಮರಗಳು, ದಾರಿಗುಂಟ ಅಲ್ಲಲ್ಲಿ ಸಗಣಿ, ದನ ಕರುಗಳು, ನಾಯಿಗಳು. ಎಷ್ಟೊಂದು ಜೀವಂತಿಕೆ ಇತ್ತು ಆಗ. ಇವೆಲ್ಲವ ಕಣ್ಣು ತುಂಬಿಕೊಳ್ಳುತ್ತಿದ್ದ ಅನುಭವಿಸುತ್ತ ನಮಗೆ ಹೊತ್ತು ಹೋಗಿದ್ದೆ ಗೊತ್ತಾಗುತ್ತಿರಲಿಲ್ಲ. ಅಲ್ಲಿಂದ ವಾಪಸ್ಸು ಬಂದ ಮೇಲೆ ಊಟ ಮತ್ತೆ ಹರಟೆ…

ಸಂಜೆಯಾಗುತ್ತಿದ್ದಂತೆ ಲಕ್ಷ್ಮೇಶ್ವರಕ್ಕೆ ಮರಳಿ ಹೋಗುವ ಸಿದ್ಧತೆಗಳು ನಡೆಯುತ್ತಿದ್ದಂತೆ ನನಗೆ ಬೇಜಾರಾಗುತ್ತಿತ್ತು. ಅಲ್ಲೆ ಉಳಿದುಕೊಳ್ಳೋಣ ಅಂತ ಹಠ ಮಾಡುತ್ತಿದ್ದೆ. ನಾಳೆ ನನ್ನ ಶಾಲೆ ಇದೆ ಅದಕ್ಕೆ ಹೋಗಲೇಬೇಕು ಅಂತ ಅಮ್ಮ ಹೇಳುತ್ತಿದ್ದಳು. ಶಾಲೆಯೇ ಬೇಡ, ದೊಡ್ದೂರಲ್ಲೇ ಇದ್ದು ದನ ಬೇಕಾದರೂ ಕಾಯುತ್ತೇನೆ ಎಂದು ಹೇಳುತ್ತಿದ್ದೆ. ಮುಂದೆ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುವಾಗಲೂ ಹೀಗೆ ಅನಿಸುತ್ತಿತ್ತು. ಅಲ್ಲಿದ್ದ ವಿಚಿತ್ರ ಜನಗಳ ಜೊತೆ ಬಡಿದಾಡುವುದಕ್ಕಿಂತ ದನ ಕಾಯುವುದೇ ಲೇಸು ಅಂತ. ನೋಡಿ ನಾನು ಯಾವಾಗಲೂ ಬದಲಾಗಲೇ ಇಲ್ಲ! ಅಂತೂ ಭಾರವಾದ ಮನಸ್ಸಿನೊಂದಿಗೆ ದೊಡ್ಡೂರಿನಿಂದ ಲಕ್ಷ್ಮೇಶ್ವರಕ್ಕೆ ನಮ್ಮ ಪಯಣ ಸಾಗುತ್ತಿತ್ತು…
ಮುಂದೆ ನಾನು ಎಲ್ಲಾ ಬಿಟ್ಟು ಕೃಷಿಯನ್ನು ಅಯ್ದುಕೊಳ್ಳುವುದರಲ್ಲಿ, ಅಮೆರಿಕೆಗೆ ಹೋದಾಗಲೂ ಹಳ್ಳಿಯ ವಾತಾವರಣ ಹುಡುಕಿಕೊಂಡು ಹೋಗುತ್ತಿದ್ದುದರಲ್ಲಿ, ಹಳ್ಳಿಯ ಹುಡುಗಿಯನ್ನೇ ಹುಡುಕಿ ಮದುವೆ ಆಗಿದ್ದರಲ್ಲಿ, ರೈತರನ್ನು ನೋಡಿದರೆ ಒಂದು ಗೌರವ, ಪ್ರೀತಿ ನಮ್ಮಲ್ಲಿ ಉಕ್ಕಿ ಹರಿವಂತೆ ಮಾಡಿದ್ದರಲ್ಲಿ ದೊಡ್ಡೂರಿನ ಪಾತ್ರ ತುಂಬಾ ದೊಡ್ಡದು! ಮೊದಲಿನ ವೈಭವಗಳು ಈಗ ಅಲ್ಲಿ ಇಲ್ಲ. ಹಿರಿಯರೂ ಕೂಡ ಒಬ್ಬೊಬ್ಬರಾಗಿ ವಯೋಸಹಜವಾಗಿ ನಮ್ಮನ್ನಗಲಿ ಹೋದರು. ಆದರೂ ಈಗ ಕೂಡ ಅಲ್ಲಿಗೆ ಹೋದರೆ ನಾನು ಬೆರಗುಗಣ್ಣಿನ ಚಿಕ್ಕ ಹುಡುಗನಾಗಿಬಿಡುತ್ತೇನೆ. ಕೊಟ್ಟಿಗೆಯಲ್ಲಿ ದನಗಳನ್ನು ಹುಡುಕುತ್ತೇನೆ!
ಗುರುಪ್ರಸಾದ ಕುರ್ತಕೋಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

14 Comments
Oldest
Newest Most Voted
Inline Feedbacks
View all comments
ಸಂತೋಷ. ಕೆ ಆರ್
ಸಂತೋಷ. ಕೆ ಆರ್
3 years ago

ಅದ್ಭುತ ನಿರೂಪಣೆ ಗುರು.ದೊಡ್ಡೂರಿನ ಕಥೆ ಓದಲಿಲ್ಲ. ತಾನೇ ಓದಿಸಿಕೊಂಡು ಹೋಯಿತು. ಕನ್ನಡದ ಹಿರಿಯ ಸಾಹಿತಿಗಳು ನೆನಪಾದರು. ಗೊರೂರು ಅಯ್ಯಂಗಾರ್, ಎನ್ಕೆ, ನಾಗತಿಹಳ್ಳಿ ಸರ್. ನಾಡಿನ ಪ್ರಮುಖ ಪತ್ರಿಕೆಗಳಿಗೆ ಕಳಿಸು. ಕನ್ನಡದ ಕಥೆಗಾರನಾಗಿ ಯಶಸ್ಸು ಗಳಿಸು

Sudheendra Raichur
Sudheendra Raichur
3 years ago

Happy to read your blog. Very much interesting as you have narrated the experience of village life. I am also from the Gojanur nearby to Laxmeshwar and gone several times to Doddoor

Mahesh Viraktamath
Mahesh Viraktamath
3 years ago

ಶ್ರೀ.ಗುರುಪ್ರಸಾದ ಕುರ್ತಕೋಟಿ- ಅದ್ಭುತ ನಿರೂಪಣೆ,

ನಾನು ಕೂಡ ಅದೇ ಹಳ್ಳಿಯವನು, ನನ್ನ ಬಾಲ್ಯದಿಂದಲೂ ಶ್ರೀ ನಾನಪ್ಪ ಗೌಡ್ರು ನನಗೆ ಗೊತ್ತು. ಬಹಳ ಆಸಕ್ತಿದಾಯಕ ವ್ಯಕ್ತಿತ್ವ. ಈ ಆರ್ಟೆಕಲ್ ಅನ್ನು ಓದುವ ಮೂಲಕ ನಮ್ಮ ಹಳ್ಳಿಯ ಸುಶಿಕ್ಷಿತ ಓಲ್ಡ್ ಜೆಂಟಲ್ ಮ್ಯಾನ್ ಅನ್ನು ನಾನು ನೆನಪಿಸಿಕೊಂಡಿದ್ದೇನೆ.

“ಎಲ್ಲಿ ನೋಡಿದರೂ ಹಸಿರು, ಆಳವಾದ ಬಾವಿ, ದೊಡ್ಡ ಮರಗಳು, ದಾರಿಗುಂಟ ಅಲ್ಲಲ್ಲಿ ಸಗಣಿ, ದನ ಕರುಗಳು, ನಾಯಿಗಳು. ಎಷ್ಟೊಂದು ಜೀವಂತಿಕೆ ಇತ್ತು ಆಗ. ಇವೆಲ್ಲವ ಕಣ್ಣು ತುಂಬಿಕೊಳ್ಳುತ್ತಿದ್ದ ಅನುಭವಿಸುತ್ತ ನಮಗೆ ಹೊತ್ತು ಹೋಗಿದ್ದೆ ಗೊತ್ತಾಗುತ್ತಿರಲಿಲ್ಲ”.

ಧನ್ಯವಾದಗಳು, ಈ ಸಾಲುಗಳು, ನಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುತ್ತವೆ, ಏಕೆಂದರೆ ಆ ದಿನಗಳಲ್ಲಿ ನಮ್ಮ ಗ್ರಾಮವು ಹಾಗೆ ಇತ್ತು.

ಮತ್ತು ಅವಲಕ್ಕಿ ಸಹ,ನನ್ನ ಅಚ್ಚುಮೆಚ್ಚಿನ ಉಪಹಾರವಾಗಿದೆ.

ಧನ್ಯವಾದಗಳು ಮತ್ತು ಅಭಿನಂದನೆಗಳು,
ಮಹೇಶ್ ವಿರಕ್ತಮಠ

H B Guddannavar
H B Guddannavar
3 years ago

ದೊಡ್ಡುರಿನ ಬಗ್ಗೆ ನಿಮಗಿರುವ ಅಭಿಮಾನಕ್ಕೆ ದೊಡ್ಡುರಿನಲ್ಲಿ ಹುಟ್ಟಿದ ನನ್ನಿಂದ ತುಂಬು ಹೃದಯದ ಅಭಿನಂದನೆಗಳು.

ಗುರುಪ್ರಸಾದ ಕುರ್ತಕೋಟಿ

ಸಂತೋಷ, ಓದಿ ಮೆಚ್ಚಿದ್ದಕ್ಕೆ ಹಾಗೂ ನಿಮ್ಮ ಹಾರೈಕೆಗೆ ಧನ್ಯವಾದಗಳು! ಒಬ್ಬ ಬರಹಗಾರನಿಗೆ ತನ್ನ ಲೇಖನ ಸರಾಗವಾಗಿ ಓದಿಸಿಕೊಂಡು ಹೋಯಿತು ಎಂದರೆ ಎಂಬ ಸಂಗತಿಯೇ ಖುಷಿ ಅಪಾರ ಖುಷಿ ಕೊಡುತ್ತದೆ 🙂

ಗುರುಪ್ರಸಾದ ಕುರ್ತಕೋಟಿ

ಸುಧೀಂದ್ರ, ಮಹೇಶ್ ಹಾಗೂ H B Gddannavar,

ನಿಮ್ಮ ಮೆಚ್ಚುಗೆಯ ಮಾತುಗಳು ನಿಜಕ್ಕೂ ಸ್ಪೂರ್ತಿ ಕೊಡುತ್ತವೆ! ಧನ್ಯವಾದಗಳು. ನೀವೆಲ್ಲ ದೊಡ್ಡೂರಿನ ಪರಿಸರವನ್ನು ಬಲ್ಲವರು ಹಾಗೂ ಅನುಭವಿಸಿದವರು ಎಂದು ತಿಳಿದು ಖುಷಿಯಾಯ್ತು. ಒಂದು ಸಲ ನಮ್ಮ ನೆಚ್ಚಿನ ಊರಿನಲ್ಲಿ ಭೇಟಿಯಾಗೋಣ 🙂

Mahesh Somakkanavar
Mahesh Somakkanavar
3 years ago

ಸುಂದರ ಬರಹ. ಅಭಿನಂದನೆಗಳು. ಓದುತ್ತಿರುವಂತೆ ಮುನಸಿಪಲ್ ಕ್ವಾರ್ಟರ್ಸ್ ನಲ್ಲಿ ಕಳೆದ ಬಾಲ್ಯದ ನೆನಪುಗಳು ಮನದಾಳದಿಂದ ಹೊರಹೊಮ್ಮಿದವು. ಪ್ರಸಾದ್ ಶುಭವಾಗಲಿ.

Mahantesh.P.Joger
Mahantesh.P.Joger
3 years ago

Nanna hutturina bagge barediruva nimma baravanigege tumba Danyavadagalu. Nanappagoudra bagge helodadre avarontara miltri man idda hage enadru tappu madidre 20 baski hodibeku , nanondina avara jamininalli kattige kadidu tagondu hoguvaga sikkibiddu 20 baski hodida mele kattige kottu innomme e tara madabardu Anta heli kalisidru.

ಮಾಂತೇಶ ಅಕ್ಕುರ
ಮಾಂತೇಶ ಅಕ್ಕುರ
3 years ago

ಸಾರ್ ನಾನು ನಿಮ್ಮ ಊರಿನ ಪಕ್ಕದ ಊರು ಯಲ್ಲಾಪುರದವನು
ನನಗೂ ಅವಲಕ್ಕಿ ಅಂದ್ರೆ ಇಷ್ಟಾ ತುಂಬಾ ಖುಷಿಯಾಯಿತು ಓದಿ ಚೆನ್ನಾಗಿದೆ ಸರ್

Gerald Carlo
Gerald Carlo
3 years ago

ಗುರುಪ್ರಸಾದ್ ಚೆನ್ನಾಗಿ ಬರೆದಿದ್ದೀರ. ನೀವು ತಿನ್ನುತ್ತಿದ್ದ ಅವಲಕ್ಕಿಯ ಸರಿಯಾದ ರೆಸಿಪಿ ಹಾಕುತ್ತೀರಾ? ಆ ಥರದ ಅವಲಕ್ಕಿ ತಿನ್ನಬೇಕು ಅನ್ನಿಸುತ್ತದೆ.

ಗುರುಪ್ರಸಾದ ಕುರ್ತಕೋಟಿ

ಕಾರ್ಲೋ ಸರ್, ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು! ಖಂಡಿತವಾಗಿ ಅವಲಕ್ಕಿ ರೆಸೆಪಿ ಯ ಒಂದು ವೀಡಿಯೊ ಮಾಡಿ ನಿಮ್ಮ ಜೊತೆ ಹಂಚಿಕೊಳ್ಳುವೆ! ನಮ್ಮ ಮನೆಗೂ ಒಂದು ಸಲ ಬನ್ನಿ, ಅವಲಕ್ಕಿಯ ಮೃಷ್ಟಾನ್ನ ಭೋಜನ ಸವಿಯಲು 🙂

ಗುರುಪ್ರಸಾದ ಕುರ್ತಕೋಟಿ

ಮಹೇಶ್, ಮಹಾಂತೇಶ್ ಜೋಗೆರ್ ಹಾಗೂ ಮಂತೆಶ್,

ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿ ನಿಮ್ಮ ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು!

Sharad Patil
Sharad Patil
3 years ago

ಪ್ರಸಾದ್ ನಮ್ಮ ಊರಿನ ಬಗ್ಗೆ ಬರೆದದ್ದು ತುಂಬಾ ಖುಷಿ ಆಯ್ತು…ನಾವು ಗೌಡರ ಮನೆ ಸಂತಾನ…ನಾವು ಚಿಕ್ಕವರಿದ್ದಾಗ ಎರಡು ತಿಂಗಳು ಅಲ್ಲಿಯೇ ನಮ್ಮ ಠಿಕಾಣಿ… ಭಾವಿ ಸ್ನಾನ, ಹುಡುಗರ ಜೊತೆ ಎಲ್ಲ ಗುಂಡ ಆಡೋದು…ಜೀವಮಾನದಲ್ಲಿ ಮರೆಯಲು ಸಾಧ್ಯವಿಲ್ಲ

Ramesh Navale
Ramesh Navale
2 years ago

ಪ್ರಸಾದ, ತುಂಬಾ ಆತ್ಮೀಯತೆ ತುಂಬಿದ ನಿರಾಡಂಬರ ಸರಳ ಬರವಣಿಗೆ ನಿನಗೊಲಿದಿದೆ. ಓದಿ ಖುಷಿ ಆಯ್ತು.
ನಾನು ನಿನ್ನ ತಂದೆಯವರ ವಿದ್ಯಾರ್ಥಿ ಜೊತೆಗೆ ನೆರೆಮನೆಯವನೂ ಹೌದು! ನೆನಪಿರಬಹುದು.
ನಿನ್ನ ಬರವಣಿಗೆ ನಿರಂತರ ವಿರಲಿ.

14
0
Would love your thoughts, please comment.x
()
x