ಮಣ್ಣಿನ ಮಮತೆ
ಹೆತ್ತತಾಯಿ ಉದರದಲ್ಲಿ
ಜನಿಸಿದ ನಾವೇ ಭಾಗ್ಯವಂತರು
ಈ ಪುಣ್ಯಭೂಮಿಯಲ್ಲಿ
ಬೆಳೆದ ನಾವೇ ಪುಣ್ಯವಂತರು
ಹಚ್ಚ ಹಸಿರು, ಚಿನ್ನದಂತಹ ಪೈರು
ತೊನೆದಾಡುವುದ ನೋಡಿರಿ
ಬಣ್ಣಬಣ್ಣದ ಸುಮಗಳಿಂದ
ಅರಳಿದ ಲತೆಯ ಕಾಣಿರಿ
ಖಗ ಮಿಗಗಳು ನೇಹದಿಂದ
ಕಾಡಿನಲಿ ಬಾಳುತಿವೆ
ಹಕ್ಕಿಗಳ ಕಲವರಕೆ
ಎನ್ನೀ ಮನ ಸೋಲುತಿದೆ
ಜನನ ಇಲ್ಲೇ ಮರಣ ಇಲ್ಲೇ
ಅಪ್ಪಿಕೊಳ್ವುದು ಭೂಮಿಯು
ಆಡಿ ಕುಣಿದು ಬೆಳೆದ ಎಮ್ಮ
ಕೈಬಿಡಳು ಭೂಮಿ ತಾಯಿಯು
ಬೆಳೆಬೆಳೆವ ರೈತರು
ಭೂತಾಯಿಗೆ ನಮಿಸುವರು
ಕಷ್ಟ ನಷ್ಟವ ಎಲ್ಲವನು
ಸಮನಾಗಿ ಕಾಣ್ವರು
ಮಣ್ಣಿನ ಮಮತೆಯ ಎಂದಿಗೂ
ಮರೆಯಲಾಗದು ಗೆಳೆಯಾ
ಈ ಮಣ್ಣಿನ ಋಣವ ಎಂದಿಗೂ
ತೀರಿಸಲಾಗದು ಗೆಳೆಯಾ
–ಸಿಂಧು ಭಾರ್ಗವ್
ಜೀವನ ಚಕ್ರ…..!
ಕದಿಯಲು ಬಂದ ಕಳ್ಳನಿಗೆ
ಶ್ರೀಮಂತನಾಗುವ ಆಸೆ
ನಿದ್ದೆ ಬಾರದೇ ಶ್ರೀಮಂತನಿಗೆ
ಕಳೆದುಕೊಳ್ಳುವ ಭೀತಿ
ಶ್ರೀಮಂತನ ಬೆಂಬತ್ತಿದ ಕಳ್ಳ
ಕಳ್ಳತನದಿಂದಲೇ ಸಿರಿವಂತನಾದ ಶ್ರೀಮಂತ
ದುರಾಸೆ ಎಂಬದು ಮನುಷ್ಯ
ತನ್ನ ಬದುಕಿಗೆ ಹಾಕಿಕೊಂಡಿರುವ ಕಗ್ಗಂಟು
ಬಿಡಿಸಲಾಗದೆ ಸಿಲುಕಿರುವ ಸುಳಿಯಲ್ಲಿ
ಚಕ್ರವಿದು ಒಂದರ ಹಿಂದೆ ಮತ್ತೊಂದು
ಆಸೆ ಮುಂದೆ ಭೀತಿ ಅದರ ಹಿಂದೆ
ಆಸೆ ದುಃಖಕ್ಕೆ ಮೂಲವೋ
ಏನೂ ಇಲ್ಲವೆಂಬ ದುಃಖ
ಆಸೆಗೆ ಮೂಲವೋ
ಇಲಿ – ಬೆಕ್ಕಿನ ಈ ಚಕ್ರ
ಮಾನವ ಜೀವನದ
ಬಹುದೊಡ್ಡ ಸಂಕಟ ….!
-ಶಶಿಧರ ರುಳಿ
ಭುವಿಗೆಲ್ಲಿಯದು ಬರ..
ಕಟ್ಟಿದ ಮೋಡವೆಲ್ಲ
ಗಟ್ಟಿ ಮಳೆ ಸುರಿಸಿದರೆ
ಭುವಿಗೆಲ್ಲಿಯದು ಬರ..!?
ಹುಟ್ಟಿದ ಭಾವಗಳೆಲ್ಲ
ಎದೆ ಕದವ ತಟ್ಟಿದರೆ
ಮಧುರವಾಗದೇ ಜೀವಸ್ವರ.!?
ತಿಳಿ ತಿಳಿಯ ಮೇಘವು
ತುಸು ತಾಳಿ ನಿಂತಿರಲು
ತಡೆದು ಕೂಡದೇ ಮೋಡ…!?
ಸುಳಿ ಸುಳಿವ ಸಾರವು
ಸುರಿದು ಎದೆ ಸೇರಿರಲು
ಕಲೆತು ಹೊಮ್ಮದೇ ಕಾವ್ಯ…!?
ರವಿ ತಾಪಕೆ ಬೆಮರಿ
ಆವೀರ್ಭವಿಸಲು ಜಲ
ಆರಾಧಿಸದೇ ಮುಗಿಲ ಮಾಡ..!?
ಕವಿ ಮನವು ಅರಳಿ
ಆವಿಷ್ಕರಿಸಲು ಭಾವ
ಆದ್ಯದಿ ಆದರಿಸದೇ ಮೌನ..!?
ಗಿರಿ ಶಿಖರ ಚುಂಬಿಸಿ
ಸಂಧಿಸುತಿರೆ ಮೇಘಮಾಲಾ
ಭೊರ್ಗರೆಯದೇ ವರುಣಲೀಲಾ..!?
ಎದೆಪದರದಿ ಒಲವಾಯ್ದು
ಡವಡವದಿ ಮೇಳೈಸಿವೆ
ಮನದಿ ತೋಂತನನತಾನಾ…..
-ಸರೋಜ ಪ್ರಶಾಂತಸ್ವಾಮಿ
ಭಗ್ನ ಹೃದಯಿ…
ನಿನ್ನ ಗುಂಗಿನಲ್ಲಿ ಇರುವಾಗ
ಸಂಜೆ ತುಂತುರು ಮಳೆ ಬಿದ್ದಾಗ
ಮೈಯಲ್ಲಾ ನೆನಪಿನ ಮೊಳಕೆ ಬಂದಿದೆ
ಹೃದಯಕ್ಕೆ ಎರಡನೆ ಚಿಗುರಿದೆ
ಹೂ ಆಗುವ ಮುನ್ನ ನಗುನಗುತಾ
ಕಾರಣವಿಲ್ಲದೆ ಅವಳು ಕೈಕೊಟ್ಟಾಗ
ಹೃದಯದ ಮೇಲೆ ಬರೆ…!
ಚಿಗುರು ಬಾಡಿತು ಪ್ರೀತಿಯ ನೆನಪಿನ
ಜಾಗದಲ್ಲಿ ಮಧ್ಯಪ್ರವೇಶಿದೆ ‘ಮದ್ಯ’
ಅದರಸಂಗದಲ್ಲಿ ನಾನು ನಿತ್ಯಯೋಗಿ
ಹೊಗೆ ಬತ್ತಿ ಕೊಳಾಯಿಲ್ಲಿ ಕರುಳು
ದುರಸ್ತಿಗಾಗಿ ಕಾದು ನಿಂತಿದೆ ಹೃದಯ
ಮನಸೆಂಬ ಹಳೆಯ ಗುರಿಯಲ್ಲಿ
ದುರಸ್ತಿ ಆಗುವುದು ದೂರದ ಮಾತು…!
ಹೊಸ ಒಲವಿಗಾಗಿ ಕಾತರಿಸಿದೆ
ಹಳೆಯ ಹೃದಯ ದಿಕ್ಕಿಲ್ಲ ದೆಸೆಯಿಲ್ಲ
ಮಳೆಯಲಿ ನೆನೆದ ಕ್ಷಣ ನಿನ್ನ ನೆನಪು
ಸುರಳಿ ಚಕ್ರದಂತೆ
ಕಾಲನ ಕೈಯಲ್ಲಿ ದೇಹದ ಅವಸಾನ
ನಿನ್ನ ನೆನಪು ಚಿರಂತನ…!
“ಭಗ್ನ ಪ್ರೇಮಿ”ಯೆಂಬ ಹೆಸರಿನಲಿ
ಗೋರಿ ಕಲ್ಲಿನ ಮೇಲಿನ…
-ವೃಶ್ಚಿಕಮುನಿ
ಸುಪಾರಿ ಚಿಂತಕ
ಅವರ ತೆರೆದಬಾಯಿಯೋಲೆಗಳು
ನಂಜುಗುಳಾಗಿ ತೇಲುತ ಮನದಂಚೆಯಲ್ಲೇ
ಬಿದ್ದು ಸೋಂಕುನಾರು,
ಗಿಡಮರಕ್ಕಿಯೂದಿದ ತಿಳಿಫಸಲಗಾಳಿಯೀರಲು
ನಾನು ಸದಾ ಸಿದ್ದ।।
ಊರುತುಂಬೆಲ್ಲಾ ಸುಪಾರಿಚಿಂತಕರ
ಸಂತೆ; ಕೊಳ್ಳುವವರು ಕೊಂಡುಕೊಂಡು
ಬರಸೆಳೆದ ಸ್ವರ್ಗದಾನಂದ
ಉಕ್ಕಿದೆ,
ನಿರ್ಮಲವು ಹಾದರವಾಗಿ
ತಲೆಹಿಡಿಯುವವನ ನೆತ್ತಿಯಲಿ
ಕಾಗೆಬಂಗಾರದ ಹಂದರ।।
ಕರಗಿಣಿಯು ಬೆಂಮಾಲಿಕನ ಪಂಜರದೊಳಗೆ
‘ಉದೋ’ ತತ್ತಿಯಿಡುತ ತನ್ನ ರೂಪಕೆ
ಕಪ್ಪಿನಲಂಕಾರದ ವಿರೂಪ ಮುದ್ರೆ,
ಪಂಜರದೊಡೆಯನಂಗೈಯ್ಯೂ ಹುಣ್ಣು ಹುಣ್ಣು;
ತಿಳಿಯದ ಒಳಗಣ್ಣಿಗೆ ಹೊಡೆದ ಉದ್ದುದ್ದ ಮೊಳೆ॥
ಗೊಂಗಡಿಯೊದ್ದು ಒಳಗುಸುರಾಡುವ
ಚಿಂತನೆಗೆಂದು ಬಯಲುಮಂದಿರದ
ಗರುಡಗಂಬಕೆ ನೇಣು,
ಕೊರಡುಮೆದುಳಲಿ ದೃಷ್ಟಿಯ
ಚಿಗುರೊಡೆದೇಳುವುದೇ ಕಾಣಬೇಕು ನಾನು.॥
–ಚಿಕ್ಕಜಾಜೂರು ಸತೀಶ.(ಸಜಲ).
ಭೂತಕಾಲದ ಗುಳಿಕೆನ್ನೆ
ಹುಡುಕುವೆ ನನ್ನನು ಅವರಿವರಲ್ಲಿ
ಸಿಗಬಹುದು ಹೂವಿನ ಗುಚ್ಛ
ಬರುವದೋ…! ನೆನಪು
ಉಕ್ಕಿ ಹರಿಯುವದು ಸಾಗರ ಅಕ್ಷಿಯಂಗಳದಲಿ
ನಡೆಯಬಹುದು ಕೆಲವೊಮ್ಮೆ ಹೀಗೂ
ಜೀವನಪರ್ಯಂತ ಸಂಬಂಧವು
ದೀರ್ಘವಾಗುವದು ಮಾತು…! ಸೇರಿದಾಗ
ಸುದೀರ್ಘವಾಗುವುದು ನೆನಪು ಇಲ್ಲವೆಂದಾಗ
ಅಗತ್ಯವೆನಿಸಿದೆ ಛಾಯಾಚಿತ್ರಿಸುವದು
ಜೀವನದ ವಾಸ್ತವತೆಯಲಿ
ತೋರಿಸುವದಿಲ್ಲ ದರ್ಪಣ
ಭೂತಕಾಲದ ಚಿತ್ರಣವ…! ವಾಸ್ತವತೆ ತೋರಿಸುವಂತೆ
ಕೇಳುತಿಹರು ಯಾರೋ ಮಹಾನುಭಾವ
ಬದುಕಿನ ಮೌಲ್ಯವೇನೆಂದು
ನೆನಪಾಗುತಿದೆ…!
ಗುಳಿಕೆನ್ನೆಯ ನಿನ್ನ ಮುಗುಳ್ನಗೆ
ಎಷ್ಟು ಸುಂದರವಾಗಿ ಕಾಣುವದು
ಆ ಸಮಯದಲಿ ಬದುಕು
ನನ್ನವರಾರೋ…! ನೆನಪಾಗುತಿರುವೆ
ನೀ ಎಂದು ಹೇಳಿದಾಗ
–ರಾಘವೇಂದ್ರ ದೇಶಪಾಂಡೆ
ಬೀದಿಗೆ ಬಿದ್ದ ನಕ್ಷತ್ರ
ನೀಲಿ ನಭದ ಬತ್ತಳಿಕೆಯಲ್ಲಿ ಎಣಿಸಿದಷ್ಟು
ಹೆಚ್ಚಾಗುವ ನಕ್ಷತ್ರಗಳು
ಒಂದರ ಪಕ್ಕ ಮತ್ತೊಂದು
ಒಂದು ನೋಡಿ ಇನ್ನೊಂದು
ನಕ್ಕಷ್ಟು ಬಾನು ತುಂಬ ಮಿನುಗು
ಮಿಕ್ಕಷ್ಟು ಚಲ್ಲಾಪಲ್ಲಿಯಾದ ಸೊಬಗು
ಗುಂಪು ಗುಂಪು ಮಾಡಿ,
ಎಣಿಸುತ್ತಾ ಹೋದರೆ ತಪ್ಪಿಸಿಕೊಂಡವು ಹಲವು
ನಮ್ಮನೆಯ ಬೀದಿಯ ಪಕ್ಕ
ಚುಕ್ಕಿಯೊಂದು ತೇಲುತ್ತಿರುವಂತೆ
ಹಾರುತ್ತಿರುವಂತೆ,
ಮತ್ತೆ ಎಲ್ಲೋ ಉದುರಿಬಿದ್ದಂತೆ
ನಿತ್ಯವೂ ಹೀಗೆ
ಆತಂಕವೊಂದು ಕಾಡುತ್ತಿರುವಾಗ
ಬಾನಿನಲ್ಲೂ ಕಾಣದ ಸೂತಕ
ನಿತ್ಯರಾತ್ರಿ ಬಾನು ಸೆರಗಿನಾಚೆ ತೇಲುತ್ತಿದ್ದರೆ
ಬತ್ತಳಿಕೆಯಲ್ಲಿದ್ದ ಎಲ್ಲವೂ ಖಾಲಿ ಖಾಲಿ
ಆಕಾಶ ಮಾತ್ರ ನೀಲಿ ನೀಲಿ
ನಿನ್ನೆ,
ಬಾನಂಗಳ ದಾಟಿ ಆಡುತ್ತಿದ್ದ
ನಕ್ಷತ್ರವೊಂದು ದುಪ್ಪೆಂದು ಬಿದ್ದಾಗ
ಅದೇ ಬಾನಂಗಳದಲ್ಲಿ ಮಿನುಗುತ್ತಿದ್ದ
ಯಾವ ನಕ್ಷತ್ರಗಳು ಕಣ್ಣೀರು ಹಾಕಲಿಲ್ಲ
ಎದೆ ಬಡಿದು ಅಳಲಿಲ್ಲ
ಅದಕ್ಕಾಗಿಯೇ ವಿಷಾದವ್ಯಕ್ತಪಡಿಸಲಿಲ್ಲ
ನೆಲಕ್ಕುದುರಿದ ನಕ್ಷತ್ರ ಏನೋ ಬಯಸಿ
ಮಾಯವಾಯಿತು ಮತ್ತೆ ಆಕಾಶ ಸೇರಿತು.
-ಪ್ಯಾರಿಸುತ
ಗಜಲ್
ಜೀವನದಿ ಬಡತನ ಕಲಿಸಿದ್ದು ಬಹಳ
ಹಸಿವಿನ ಅನುಭವ ತಿಳಿಸಿದ್ದು ಬಹಳ.
ಗೆದ್ದಾಗ ಅರಿವಿಗೆ ಬಾರದ ಎಷ್ಟೋ ವಿಷಯ
ಸೋಲುಂಡ ಸ್ಥಿತಿಯಲಿ ಅರಿತದ್ದು ಬಹಳ.
ಆನಂದಭಾಷ್ಪ ಕಣ್ಣಲಿ ಕೆಲಬಾರಿ ಮೂಡಿತ್ತು
ಕಷ್ಟದಿ ಕಣ್ಣೀರು ಹರಿಸುತ ಬೆಳದದ್ದು ಬಹಳ
ಶುದ್ಧ ಸ್ನೇಹದಲಿ ಪಡೆದ ಲೋಕಾನುಭವಕಿಂತ
ವೈರಿಯ ತಂತ್ರಗಳನು ನೋಡಿ ನಡೆದದ್ದು ಬಹಳ
ರಸ ಜನನ ವಿರಸ ಮರಣ ಸಮರಸವೇ ಜೀವನ
“ಕೃಷ್ಣಾ” ಕವಿವಾಣಿ ತಿಳಿದು ಜೀವಿಸಿದ್ದು ಬಹಳ
–ಬಾಗೇಪಲ್ಲಿ ಕೃಷ್ಣಮೂರ್ತಿ,
ಹರಿದ ಪ್ರೀತಿ ಬಿರಿದ ಮನ.
ತೊರೆದಮೇಲೆ ಬರೆವೆ ಏಕೆ ? ಹರಿದ ಪ್ರೀತಿಗೆ,
ಗಿರವಿ ಇಟ್ಟ ಶೃದ್ಧೆಯನ್ನು ನಂಬಿ ಬದುಕಿಗೆ
ಕುಟ್ಟಿ ಅಗೆದು ಬಿಗಿದ ಹಾಗೆ ಮೇಲೆ ಚಪ್ಪರ
ಬಿರಿದು ಭಾರ ಸವೆದು ನೇರ ತಡೆಯ ಆತುರ
ಹೊಳೆವ ಮುತ್ತು ವಜ್ರ ಕೊರೆದ ಕುಸುರಿ ಕೆಲಸಕೆ
ಚಿತ್ತಾರ ಮನಸ್ಸು, ಸರಕೆ ಕೊರಳ ಹಾರ ಚೆಂದಕೆ
ಮಿದುಳಿನಲ್ಲಿ ಹದುಳವಿಲ್ಲ ಗುಲಾಬಿ ಹೆಣ್ಣಿಗೆ
ಚತುರವಲ್ಲ ಮಧುರ ಭಾವ ಉದರ ಹುಳ್ಳಗೆ
ಹೊರಗೆ ದೊಡ್ಡಿ ಒಳಗೆ ಚಡ್ಡಿ ಗಟ್ಟಿ ಕಟ್ಟದೇ
ಬಿಚ್ಚಿತೆಲ್ಲ ಹಸುವ ಕಂಡು ನುಸುಳ ಲಾಗದೇ
ಗುಳಿಯ ಕೆನ್ನೆ ಮಾತು ಬೆಣ್ಣೆ ಒಲವು ಇಲ್ಲವೇ?
ತಿಕ್ಕಿ ನೋವು ಸೆಳವಿ ನೆಣ್ಣೆ ತನುವು ಗೆಲ್ಲುವೆ..!
ಪಿಸುಮಾತು ಗೋಡೆ ತೂತು ಕಿವಿಯು ನಿಮಿರಿತು
ಹೃದಯ ಉಬ್ಬಿ ಬೀಗಿ ನಿಗುರಿ ಮನವು ಚಿಗುರಿತು
ತೂರುವಾಸೆ ಬೇರು ಕೊಳೆತು ಒಣಗಿ ಒರಗಿತು
ಸೆಳೆತ ರಭಸ ಹರಿದ ಧಾರೆ ಸಿಲುಕಿ ಚಿಮ್ಮಿತು
-ಮನೋಹರ ಜನ್ನು
ಮೋಹದ ಮಾತು
ಮೋಹದ ಮಾತಲಿ
ಮರಳು ಮಾಡುತ್ತಾ
ಮೋಜಿನ ಭಾಷೆಗಳಲಿ
ಹರಳು ಸುರಿಸುತ್ತಾ
ಕಣ್ಣ ಬಿಂಬದೊಳಗೆ
ಕಾಂತಿ ಹುಟ್ಟಿಸುತ್ತಾ
ಹೃದಯದ ಗೂಡಲಿ
ಒಲವ ಹೂವ ಚೆಲ್ಲುತ್ತಾ
ಕನಸುಗಳ ಕಟ್ಟಿದಿ
ನನಸು ಮಾಡ್ತಿನಿ
ಪೊಳ್ಳು ಭರವಸೆಯ
ಸುಳ್ಳು ಪೋಣಿಸುತ್ತಾ
ಮರ್ಕಟ ಮನದ
ಮೋಸದ ಅಲೆಯ
ಅರಿಯದ ಮುಗ್ಧ
ಮನ ಬೇಗುದಿಯಲಿ
ಕಣ್ಣ ಕಂಬನಿಯ
ಅಳಿಸದ ದೇವನು
ಮರ್ಕಟ ಮನದ
ಪರಕೆ ನಿಂತಿಹನು.
-ಚೈತ್ರಾ ವಿ ಮಾಲವಿ
1) ನಿನ್ನ ಬಳಿ ಇದೆ ಔಷದ
ನೀ ಬರೆದ ಸಾಲುಗಳು
ನನ್ನ ಮನದಲೇ ಇರಲು
ಹೊಸ ಸಾಲುಗಳೇನು ಮೂಡುತ್ತಿಲ್ಲ
ನಿನ್ನ ತುಟಿಗಳ ರುಚಿಯು
ನನ್ನ ತುಟಿಗಳಲ್ಲಿರಲು
ಬೇರೆ ಯಾವುದು ರುಚಿಸುತಿಲ್ಲ
ನಿನ್ನ ರೂಪವೇ
ಕಂಗಳಲಿ ತುಂಬಿರಲು
ಬೇರೆ ಏನು ಕಾಣಿಸುತ್ತಿಲ್ಲ
ನೀ ಮರಳಿ ನನ್ನ ಬಳಿ
ಬರದಿರೆ ನನ್ನ ಜೀವನೇಕೆ
ಬೆಲೆಯೇ ಇಲ್ಲ
ಕಾದು ಕುಳಿತಿರುವೆ
ವಿರಹದಿ ನೊಂದಿರುವೆ
ನಿನ್ನ ಬಳಿ ಇದೆ ಔಷಧವೆಲ್ಲಾ
2) ಅಭಿಲಾಷೆ
ಚಿಪ್ಪಿನಿಂದ ಹೊರಬಂದು ಜಗವ ನೋಡೋ ಅಸೆ
ಭಾವಿಯಿಂದ ಹೊರಜಿಗಿದು ಊರ ಸೇರೋ ಅಭಿಲಾಷೆ
ಗ್ರಂಥದಿಂದ ನಿರ್ಗಮಿಸಿ ಕೇಳಬೇಕು ಜನಗಳ ಭಾಷೆ
ಅನುಭವದ ನಡುವಿನಲ್ಲೆ ಪಡೆಯುವೆನು ದೀಕ್ಷೆ
ಕಥೆಗಳಲ್ಲಿ ಅರಿವಾಗದು ಹಸಿವು
ಗೋಪುರದಿ ಕಾಣದು ಬಿಸಿಲಿನ ಕಾವು
ದುಡಿದು ತಿನ್ನುವರಿಗೆ ಗೊತ್ತು ಸಂಜೆಗುಳಿವ ನೋವು
ಅಣ್ಣ ಕೊಡುವ ರೈತರಿಗೆ ಗಡಿ ಕಾಯುವ ಸೈನಿಕರಿಗೆ
ಕೈ ಮುಗಿದು ವಂದಿಸಿ ಜೈ ಹೇಳುವ ನಾವು
-ಡಾ|| ನ. ಸೀತಾರಾಮ್
ಧನ್ಯವಾದಗಳು💐 ಸರ್. ನಿಮ್ಮ ಪ್ರೋತ್ಸಾಹ ಸದಾ ಇರಲಿ…
ಧನ್ಯವಾದಗಳು
ಮಣ್ಣಿನ ಮಮತೆ ಕವಿತೆಯಲ್ಲಿ ಗೇಯತೆ ಇದೆ, ಸುರಾಗ ಸೇರಿದರೆ ಹಾಡಲು ಸರಾಗ……..ಇನ್ನು ಮುಂದಿನ ಕವಿತೆಗಳಲ್ಲಿ ಕವಯಿತ್ರಿಯಾದ ಸಿಂಧು ಅವರು ಹೇಳಿಕೆಗಳಿಗೆ ಬದಲಾಗಿ ಕಾವ್ಯಮಯ ಶಿಲ್ಪವನ್ನು ಕಟ್ಟಿದರೆ, ಸಂಕೇತ ಮತ್ತು ಪ್ರತಿಮೆಗಳಲ್ಲಿ ಹಿಡಿದಿರಿಸಿದರೆ ಇನ್ನಷ್ಟು ಚೆಂದವಾಗುತ್ತದೆ. ಇದು ನನ್ನ ಅನಿಸಿಕೆ.
ಹೆಚ್ಚೆನ್ ಮಂಜುರಾಜ್, ಮೈಸೂರು 9900119518