ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 45 & 46): ಎಂ. ಜವರಾಜ್

-೪೫-
ಈ ಅಯ್ನೋರು
ತೂರಾಡ್ತ ಬಂದು
ಮನ ಬಾಗುಲ್ಗ ಕಾಲೂರವತ್ಗ
ಮೂರ್ಗಂಟ ರಾತ್ರ
ಒಳಗ ನೀಲವ್ವೋರು
‘ಅಯ್ಯೊ ಉಸ್ಸೊ’ ಅನ್ತ
ನಳ್ಳಾಡದು ಕೇಳ್ತಿತ್ತು

ಈ ಅಯ್ನೋರು
ಬಾಗ್ಲ ತಟ್ಟಿ
ಕಾಲ್ನ ಒದರ ರಬುಸುಕ್ಕ
ನಾ ದಿಕ್ಕಾಪಾಲಾದಿ
ಒಳಕೋದ ಆಸಾಮಿ
ಕೆಮ್ನು ಇಲ್ಲ
ಕ್ಯಾಕುರ್ಸ್ನು ಇಲ್ಲ
‘ಇದೇನ
ಯಾಕಿಂಗ ನಳ್ಳಾಡಿಯೆ’
ಅನ್ತ
ಕೇಳ್ದ ಮಾತು
ನಂಗಂತೂ ಕೇಳ್ನಿಲ್ಲ.
ಆದ್ರ
ಈ ನೀಲವ್ವೋರು
‘ಅಯ್ಯೊ ಉಸ್ಸೊ
ಅಯ್ಯಯ್ಯಪ್ಪಾ’ ಅನ್ತ
ನರಳಾಡದ
ನಂಗ ತಡಿಯಕಾಗ್ದೆ
‘ದೊಡ್ಡವ್ವಾ…’ ಅನ್ತ
ನಾನ್ಯಂಗ್ ಕೂಗ್ಲಿ..
ಸಂಕ್ಟ ಕಿತ್ತು ಕಿತ್ತು ಬತ್ತಿತು.


ಮೊಬ್ಗೆ
ಬಂದೊರ್ಯಾರ ಕಾಣಿ
ಒಬ್ಬೆಂಗ್ಸು ಒಬ್ಬ ಗಂಡ್ಸು
ನಡ್ಬಾಗುಲ್ಲಿ ಕುಂತ್ರು

ಈ ದೊಡ್ಡವ್ವ
ಬಾಗುಲ್ ತಗ್ದು
ಸದ್ದ ಮಾಡ್ಕಂಡು
ಈಚ್ಗ ಬಂದು
ಇತ್ತಗ ನೋಡ್ಬುಟ್ಟು
ಸಂದಿದಿಕ ಹೋಗಿ
ಮೂತ್ರುಸ್ಬುಟ್ಟು ಬಂದಗಾಯ್ತು.

‘ಕುಸೈ ಇದೇನವ್ವ ಇಸ್ಟೊತ್ಗೆ
ಬಾಣಳ್ಳಿಯಿಂದ ಇಬ್ರೆ
ಎಲ್ಲ ಚಂದಗಿದ್ದರ ಇದೇನ್ ಬಂದ್ರಿ’
‘ಅಮೈ ಚಂದಗರ
ಇದೇನಾಗಿದ್ದು ಇವುಳ್ಗ
ಇದ ಇವ್ಳ
ನೋಡಂವ್ ಅನ್ತ ಬಂದಿ
ನೆನ್ನ ಶಂಕ್ರ ಬಂದು ಹೇಳುದ್ನ
ಅವೆಣ್ಣ ನೋಡಕಿಲ್ವ
ಅವೆಣ್ಗಿಂತ
ಇವ್ರ್ ಎಲಕ್ಷನೆ ಹೆಚ್ಚಾಯ್ತ’
ಅನ್ತ
ಮಾತಾಡ್ತ ಗೋಳಾಡ್ತ
ವಾಲಾಡ್ತ
ದೊಡ್ಡವ್ನ್ ಕೈಯ ಹಿಂಡ್ಕಂಡ್ರು.

ಆಮ್ಯಾಲ ಇವ್ರು
ನೀಲವ್ವೋರ ಅವ್ನು ಅಪ್ನು
ಅನ್ತ ಗೊತ್ತಾಯ್ತು.

ಆಗ ಬಾಗ್ಲು ಕಿರ್ ಅನ್ತು

ಈ ಅಯ್ನೋರು
ಮೊಖನ ಸಿಂಡ್ರುಸ್ಕಂಡು
‘ಏನ ವತರನೆ ನಿಮ್ದು
ನಾಲ್ಗ ಬಿಗಿ ಇರ್ಬೇಕು’
ಅನ್ತ ಗದರಿದರಲ್ಲೊ..
ಈ ದೊಡ್ಡವ್ವ
‘ಕುಸೈ ಸುಮ್ಕಿರು
ಕರುಳ್ ಸಂಕ್ಟ
ಏನ ಒಪ್ಸುದ್ರು’
‘ಅಲ್ಲಕಾ ದೊಡ್ಡವ್ವ
ಬಂದವ್ರು ಹೆಂಗ್ ಇರ್ಬೇಕು..
ಒಳಕ ಬಂದು
ಅದೇನ ಅನ್ತ ಕೇಳ್ಬೇಕು
ಈಚ ಬೀದಿಲಿ ನಿಂತ್ಗಂಡು
ಏನೇನ ಅನ್ಕಂಡು ಗೋಳಾಡುದ್ರ
ಮನ ಮಾನ ಮರ್ವಾದಿ ಏನಾದ್ದು…
ನಾ ಏನ ಅವ್ಳ ಸಾಯ್ಲಿ ಅಂದಿನ
ನಂಗು ಹೇಳದು ಮಸ್ತಗದ
ಅದು ನಿಂಗು ಗೊತ್ತು.
ಮಾತಾಡಿ
ಮಾನ ಕಳಿಬೇಕಾ..
ಹೇಳು ನೀನು ಸಾಕ್ಸಿಗ ಇದ್ದಯಲ್ಲ
ಏನೇನಾಯ್ತು ಅನ್ತ’
ಅನ್ತ ರೇಗ್ತ
ನನ್ನ ತಳ್ಕಂಡು ಮೆಟ್ಗಂಡು
ಮೋರಿ ದಾಟುದ್ರಲ್ಲೊ…


ಹೊಳಕರ ಮಗ್ಗುಲ್ಗ ಬಂದು
ನೀರ್ ಮುಟ್ಟಿ
ನೀರಂಜಿ ಬುಡ್ದಲ್ಲಿ ಕುಂತ್ರು

ಈ ಜನ ಎಲ್ಲಿಗೋದ್ರು ಬತ್ತರ
ಎಲಕ್ಷನೆ ಹಿಂಗ
ಕುಂತ್ರ ಕುಂದ್ರಕ್ಬುಡಲ್ಲ
ನಿಂತ್ರ ನಿಂದ್ರಕ್ಬುಡಲ್ಲ

ಈ ಅಯ್ನೋರು
ಕುಂತಿರದ ನೋಡಿ
ಸುತ್ತ ಬಂದು ನಿಂತ್ರು
ಎಲ್ರುನು ನೋಡ್ತ
ಹಂಗೆ ಕುಂತ್ರು.

ಈ ಅಯ್ನೋರು
ಮ್ಯಾಕ್ಕೆದ್ದು
ಪುರಪುರನೆ ನಡುದ್ರು
ಈ ಜನಾನು ನಡುದ್ರು
ನಡಿತಾ ನಡಿತಾ
ಸೇತ್ವ ಕೆಳಗಿಂದ
ಕಾಲ್ದಾರಿಲಿ ನಡುದ್ರು
ಆ ಕಾಲ್ದಾರಿ ತುದಿಗಂಟು ಬಂದು
ರಸ್ತ ಮಗ್ಗುಲ್ಲಿರ
ಗುಳ್ಳೋಟ್ಲು ಒಳಕ ಹೋದ್ರು.

ಆ ಗುಳ್ಳೊಟ್ಲು ಒಳಗ
ಒಂದ್ಕಡ
ಚೊರ್ ಚೊರ್ ಅನ್ತ
ಕಲ್ಮೇಲ ದ್ವಾಸ ಉಯ್ತಿದ್ರು
ಇನ್ನೊಂದ್ಕಡ
ಇಡ್ಲಿ ಬೇಯಕಿಟ್ಟಿದ್ರು
ಎಣ್ಣ ಬಾಂಡ್ಲಿಲಿ
ವಡ ಬೇಯ್ತ ಗಮಗುಟ್ಟದು.

ಈ ಅಯ್ನೋರು
ಗುಳ್ಳೊಳಕೋಗ್ದೆ
ಇಲ್ಲೆ ನಿಂತ್ಕಂಡು
ಸನ್ನ ಮಾಡ್ದಗಾಯ್ತು
ಅಯ್ನೋರ್ ಸನ್ನುಕ್ಕ
ಇಸ್ರಿ ಎಲಲಿ
ದ್ವಾಸ ತಿನ್ನರ್ವ್ಗ ದ್ವಾಸ
ಇಡ್ಲಿ ತಿನ್ನರ್ವ್ಗ ಇಡ್ಲಿ
ಅದರೊಂದ್ಗ
ಒಂದೊಂದ್ ವಡ
ಮುಂದುಕ್ಬಂತು.

ಈ ಅಯ್ನೋರ್ ಕೈಗ
ಟಿ ತಂದ್ಕೊಟ್ಟ ಸಣ್ಣಪ್ಪ
‘ಅಯ್ನೋರೆ ಬನ್ನಿ ಇಲ್ಲಿ ವಸಿ’
ಅನ್ತ ಗುಳ್ಳಿಂದ ಹೊರುಕ್ ಬಂದು
‘ಚೆಂಗುಲಿ ಇಲ್ವಂತಲ್ಲ ಅಳಿ..
ಅವುರೊವ್ವ ಊರಿಂದ
ಅವ್ನ್ ತಮ್ಮುನ್ ಕರಸಿ
ಕಂಪ್ಲೆಂಟ್ ಕೊಡಕೇನ
ಮಾತಾಡ್ತಿದ್ಲಂತ’
‘ಊ್ಞ ಸಣ್ಣ..
ನಂತವ್ಕು ಬಂದಿದ್ದ
ಅವ್ನ ನಾ ಎಲ್ಲಿ ಹುಡುಕುಸ್ಲಿ
ಎಲಕ್ಷನ್ ಅದ ಕಳಿಲಿ ಅಂದಿ
ನಾನೇನ್ ಮಾಡ್ಲಿ
ಏನಾ ಮಾಡ್ಕಳ್ಳಿ ಬುಡು ಸಣ್ಣ’
‘ಇನ್ನೊಂದು ಅಯ್ನೋರೇ,
ಆ ಕಾಲ
ಜೋಡೊಲಿತನಲ್ಲ
ಅವ್ನೆಣ್ಣಿತ್ತಲ್ಲ ಚೆನ್ನಗಿತ್ತು ಅಲ್ವ
ಅದೂ ಇಲ್ವಂತಲ್ಲ ಅಳಿ..
ಅದೇನ ಇವ್ನೆ ಅನ್ಸರಿಸ್ಕಂಡು
ಹೋಗಾನ ಅನ್ನದು ಮಾತದ
ಹಂಗೆ‌,
ಆ ಕಾಲಯ್ನ್ ಗಂಡು
ಪರ್ಶುಗು ಚೆಂಗುಲಿಗು
ಹೊಡ್ದಾಟ ಆಗಿತ್ತಂತ ಆಗ್ಲೆ
ವರ್ಸುದ್ ಮಾತು ಇದು
ಅದ್ಕ ಏನೇನ ಗೋಳಾಡ್ತ
ಬೀದ್ಬೀದಿಗು ಒಪ್ಪುಸ್ತ ಇದ್ದ’
ಅನ್ತನ್ತ ಸಣ್ಣ ಹಾಗೆ ಒಳಕ್ಕೋದ.

ಈ ಅಯ್ನೋರು
ಹಂಗೆ ತಿರುಗಿ
ಟಿ ಕುಡ್ದಾಯ್ತಲ್ಲ
ಲೋಟ ಅಲ್ಲಿಟ್ಟು
ಬೀಡಿ ಎತ್ಕಂಡು
ಬಾಯ್ಗಿಟ್ಗಂಡು
ಕಡ್ಡಿ ಗೀರಿ ಹಚ್ಕಂಡು
ನಿಧಾನುಕ್ಕ ದಮ್ಮೆಳಿತಾ ಕುಂತ್ರು..


೪೬-
ಸೂರ್ಯ ನತ್ತಿಲಿದ್ದ
ಕಲ್ಬುಟ್ರ ಓಣಿ
ಬಿಸುಲ್ಗ
ಕಲ್ಲು ಕಾದು
ಸುಡ್ತಿತ್ತು
ಸುಡು ಮದ್ಯಾಹ್ನ
ಇಲ್ಲಿಗ
ಯಾರೂ ಕಾಲಕಲ್ಲ

ಈ ಅಯ್ನೋರು

ರವ್ಗುಟ್ಟ ಬಿಸುಲ್ಲಿ
ಓಣಿಗ ಬಕ್ಕಂಡಿರ
ಗೊಬ್ಳಿ ಮರದ ನೆಳ್ಗ
ನಿಂತಿದ್ರು

ಅಂವ
ಕೆಳಗಿಂದ ಬಂದ
ಅಂವ
ಯಾವಾಗ್ಲು ಕೆಳಗಿಂದೇ
ಬರದು
ಕಲ್ಬುಟ್ರ ಓಣಿಗ

ಬೆವ್ರು ಕಿತ್ತರಿತಿತ್ತು
ಅವ್ನೂ ಒರುಸ್ಕಂಡ
ಅಯ್ನೋರೂ ಒರುಸ್ಕಂಡ್ರು

‘ಅಯ್ನೋರಾ
ಎಲಕ್ಷನು ಇನ್ನು ಅದ
ಕೊಡದು ಬುಡದು
ನೋಡಿ ಮಾಡಿ’
‘ಇವ್ನೆ ನೀ ಹೇಳದು
ಸರಿ
ಆದ್ರ ಈ ಜನ ಹಿಂಗೆ
ಅನ್ತ ಅನ್ನಕಾಗಲ್ಲ..
ಆದ್ರ ಆಯ್ತುದ
ಒಂತಿಂಗ ನೋಡದ ಬುಡು’
‘ಇವ್ನೆ ನಿ ಉಸಾರು
ಪೋಲೀಸು ಕೇಸು
ಏನೇನಾ ನಡಿತಾ ಅದ’
‘ಅಯ್ನೋರಾ
ನಾಕ್ತಿಂಗ ಆಯ್ತು
ಬೂದಿನು ಇಲ್ಲ’
‘ಗೊತ್ತದ. ನಿಂಗ ಗ್ಯಾಪುಸ್ದಿ’
ಅನ್ತ ಮ್ಯಾಲುಕ್ಕ ನೋಡ್ತ
ಟವಲ್ಲಿಂದ ಗಾಳಿ ಬೀಸ್ಕಂಡ್ರು.

ಸೂರ್ಯ ನತ್ತಿ ಬುಟ್ಟು
ಇಳಿತಿದ್ದ.

ಇಬ್ರುಗು ಬೆವುರ್ಗ
ಇಕ್ಕಿರ ಅಂಗಿ ನೆನ್ದು
ಅದ್ದೋಗಿತ್ತು

‘ಇವ್ನೆ
ಜನ ಬರ ಹೊತ್ತು
ಏನ್ಮಾಡ್ದೈ …
ಈಗ ನೀ ಹೋಗು
ಯಾರ್ ಕಣ್ಗು ಕಾಣುಸ್ದೆ
ನಾ ಬತ್ತಿನಿ
ತ್ವಾಟುತವ್ಕ ಬಾ
ಈ ಜನಾನ
ಹಂಗೆ ಹಿಡ್ಕಬೇಕು
ಇಲ್ಲಂದ್ರ ಬುಟ್ಟೊಯ್ತರ
ಆ ಶಿವ್ಲಿಂಗ
ಏನಾ ಮಾಡನ ಅನ್ತ
ಕೇಳ್ಪಟ್ಟಿ
ಅಂವ ನಂಗೇ
ಗೂಟ ನೆಡ್ತಿದ್ದನಂತ
ಅದ್ಕ ಬತ್ತಿನಿ ನೀ ಬಾ’
ಅನ್ತ ಎದ್ರು.

ಅಂವ
ಹಂಗೆ ಕೆಳಕೋದ
ಈ ಅಯ್ನೋರು
ಹಂಗೆ ಮ್ಯಾಕ್ಬಂದ್ರು


ಇನ್ನು ಬಿಸ್ಲು
ಹಂಗೆ ಇತ್ತು
ಕಪಲ ಬಾವಿಲಿ
ನೀರು
ತಿಳ್ಯಾಗಿತ್ತು
ಈ ಅಯ್ನೋರು
ನಡ್ಕಟ್ಟಾಕಂಡು
ನಿಂತ್ಗ ನೋಡುದ್ರು
ಆ ನೋಡ ನೋಟ್ಕ
ಆ ಆಳು
ಆ ತ್ವಾಟ್ದ ಮನಲಿಂದ
ಪಂಚ ಟವಲ್ಲ ತಂದು
ಕಪಲ ಬಾವಿ
ಕಟ್ಟ ಮ್ಯಾಕ್ಕ ಹಾಕ್ದ
ಈ ಅಯ್ನೋರು
ಮೆಲ್ಗ ನನ್ನ ಬುಟ್ಟು
ಅಂಗಿ ಪಂಚ ಬಿಚ್ಚಿ
ಮೆಲ್ಗ ಬಾವಿಗಿಳಿತಾ
‘ಏಯ್, ನೋಡ್ಕ’
ಅನ್ತ ಆ ಆಳ್ಗೇಳಿ
ನೀರೋಳಕ ದುಮುಕುದ್ರು
ನೀರೊಳ್ಗ ಈಜ್ತ
ಬಾಯ್ಲಿ ನೀರ ಮುಕ್ಕುಳುಸ್ತ
ಹಂಗೆ ಅಂತ್ಕಂಡು
ಪುರ್ ಅನ್ತ
ಆ ನೀರಾ ಉಗಿತಾ
ಇರ
ಆ ಅಯ್ನೋರಾ ನೋಡ್ತ
ಅಲ್ಕಿರಿತಾ ನಗ್ತಾ
ತ್ವಾಟ್ಗ ಬರೋರ
ಬಂದು ಕುಂತವ್ರ
ಹೆಸ್ರ ಹೇಳ್ತ
ಆ ಅಯ್ನೋರು
ಆ ಆಳ್ ಮಾತ್ಗ
ತಲ ಆಡುಸ್ತ ಮ್ಯಾಕ್ಬಂದ್ರು.

ಈಗ
ಗಾಳಿ
ತಿಸ್ಸಂತ ಬೀಸ್ತು
ಈ ಅಯ್ನೋರು
ಆ ಗಾಳಿಗ
ಮೊಖ ಕೊಟ್ಗಂಡು
ಬಂದು ಕಲ್ಲಾಸ್ಮೇಲ ಕುಂತ್ಕಂಡ್ರು

‘ಆ್ಞ..
ಆ ಶಿವ್ಲಿಂಗುಂದ ಕೇಳ್ದಿ
ಅಂವ ಗೆದ್ರ
ಚೇರ್ಮನ್ ಗಿರಿ ಕನ್ಸೆ ನಂಗ’
ಆ ಆಳು,
‘ಅಯ್ನೋರಾ ಇದೂ ಒಂದ್ಮಾತ..’
ಅನ್ತ ಸುಮ್ನಾದ.
‘ಏಯ್ ಬಂಚೊತ್
ನಿನ್ಯಾರಲೇ ಮಾತಾಡು
ಅಂದೋರು
ಎದ್ದೋಗಲೇಯ್’
ಅನ್ತ
ಈ ಅಯ್ನೋರು ಕೆಕ್ಕುರ್ಸ್ಕ
ನೋಡುದ್ರು.
ಆ ಆಳು,
‘ಅಯ್ನೋರಾ
ನನ್ಮೇಲ
ಕ್ಯಾಣಾಡುದ್ರು ಸೈ
ಈ ತ್ವಾಟ್ದಿಂದ
ಹೋಗು ಅಂದ್ರು ಸೈ
ಆದ್ರ ಆ ಶಿವ್ಲಿಂಗು
ನಿಮ್ಸಮ್ಕ ಬರ’
ಅನ್ತ ಕಡ್ಡಿ ತುಂಡಾಗ ತರ ಅಂದ.

ಈಗ
ಈ ಅಯ್ನೋರು
ಮ್ಯಾಕ್ಕೆದ್ದು
ಆ ಆಳಾಡ್ದ ಮಾತ್ಗ
ತಲದೂಕ್ಕಂಡು
ಅವ್ನ ಹೆಗಲ್ ಮ್ಯಾಲ
ಕೈಯಾಕಂಡು ತಟ್ತ ತಟ್ತ
‘ನಿನ್ ಮಾತ್ನ ಒಪ್ತಿನಿ
ನನ್ ಆಳ್ತನ ನಿಂಗ
ಚೆನ್ನಾಗೆ ಒಗ್ಗದ ಅನ್ಸುತ್ತ’
ಅಂದ್ಮೇಲ
ಆ ಆಳು ಉಬ್ಬಿ
ಈ ಅಯ್ನೋರೂ
ಆ ಆಳ್ಗ ಸನ್ನ ಮಾಡಿ
ಆ ಸನ್ನುಕ್ಕ
ಆ ಆಳೂ
ತಿಗುನ್ ಗರಿ ಗುಡ್ಡುಕ್ಕ ಓಡಿ
ಹೆಂಡ್ದ ಬಾಟ್ಲಿ
ತಂದು ತಂದು
ಉಳ್ಳಾಡ್ಸುದ್ನಲ್ಲೊ…

-ಎಂ.ಜವರಾಜ್


ಮುಂದುವರಿಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x