ಕಾವ್ಯಧಾರೆ

ಪಂಜು ಕಾವ್ಯಧಾರೆ

"ಮೇಘ ಶಾಮಲೆ"

ಹೊಳಪು ಕಣ್ಣು ನೀಳ ಮೂಗು 
ಕೆಂದುಟೀಯ ಸುಂದರಿ
ನೀಲ ಮೇಘ ಶಾಮಲೆದೆಗೆ
ಕನ್ನ ಹೊಡೆದ ಕಿನ್ನರಿ
ನುಣುಪು ಕೇಶ ನೀಳ ಹುಬ್ಬು
ನಾಗಜಡೆಯ ಸುಂದರಿ
ನೆನೆವ ಮನಕೆ ಕಂಪನೀವ
ಮುದ್ದು ಮನದ ಕಿನ್ನರಿ
ಜಗದ ಸೊಬಗ ಸೆರೆಯೊಳಿಟ್ಟ
ಎದೆಯ ಭಾರ ನಿನ್ನದು
ಕೊಂಚ ಕೆಳಗೆ ಬಳುಕುತಿರುವ
ನಡುವು ತೀರಾ ಸಣ್ಣದು
ನಿನ್ನ ಅಂದ ಹೊಗಳಲಿಕ್ಕೆ
ಇಷ್ಟು ಮಾತ್ರ ಸಾಲದು
ಪೂರ್ಣ ಬರೆದು ಹೇಳಲಿಕ್ಕೆ
ನನ್ನಿಂದಂತೂ ಆಗದು
-ಉಶಿರು

 

 

 


ಎರಡು ಸಾಮಾನ್ಯರ ಕವಿತೆಗಳು

ರಣಹದ್ದುಗಳಿವೆ

ನಿರ್ವೀಯ ಗಂಡಸರು
ಒರೆಯಿಂದ ಹೊರಬಾರದ ಖಡ್ಘಗಳು
ಬತ್ತಿದೆದೆಯ ಹೆಂಗಸರು!
ಷಂಡತನದಲ್ಲಿ ತಲೆ ತಗ್ಗಿಸಿ
ನಡು ಬಗ್ಗಿಸಿ
ಪ್ರಭುಗಳ ಪದತಲದಲಿ ಕೂತ ಗಂಡಸರು!
ಚಿಂದಿ ಆರಿಉತ್ತ ಸಿಕ್ಕ ಅರೆಬರೆ ಕಾಫ್ ಸಿರಪ್ಪಿನ
ಹೀರುತ್ತ ಪಿಕ್ ಪಾಕೇಟುರುಗಳಾಗಲು
ಸರತಿಯಲಿ ನಿಂತ ಮಕ್ಕಳು!
ಬಂದ ಗಿರಾಕಿಯಿಂದ ಏನೂ ಸಿಕ್ಕದೆ 
ಬಾರದ ಗಿರಾಕಿಯಲಿ ಎಲ್ಲವ ದಕ್ಕಿಸಿಕೊಳ್ಳಲು 
ಕಾದು ನಿಂತ ಬತ್ತಿದ ಮೊಲೆಗಳ ಬಡ ಹೆಂಗಸರು!

*****

ಬಂಗಾಳದ ಬಾರ್ ಡಾನ್ಸರ್

ಅವಳು ತನ್ನ ಸುತ್ತಲೇ ಸುತ್ತುತ್ತಿದ್ದಾಳೆ ಬುಗುರಿಯಂತೆ
ಸುತ್ತಣದ ಪರಿವೆಯಿರದೆ
ಯಾರೊ ಬಂದರು
ಯಾರೋ ಕೇಕೆ ಹಾಕಿದರುಮತ್ತಿನ್ಯಾರೋ ಕುಣಿದರು
ಅರಿವಿಲ್ಲ ಅವಳಿಗೆ
ಡಾನ್ಸ್ ಬಾರಿನಾ ವದಿಕೆಯ
ಹತ್ತು ಹತ್ತು ಅಳತೆಯ
ಚೌಕಾಕೃತಿಯ ಒಳಗೆ
ಕಿವಿಗಡಚಿಕ್ಕುವ ಸಂಗೀತದಬ್ಬರಕೆ
ಸುಮ್ಮನೆ ಕುಣಿಯುವುದಷ್ಟೇ ಕೆಲಸ
ನಡುನಡುವೆ ಕೇಳಿಬರುವ
ಪ್ರೇಕ್ಷಕರ ಕಿರುಚಾಟಗಳು
ಕಾಮೋದ್ರಿಕ್ತ ಕೊಳಕು ಮನಸುಗಳ ಕೇಕೆಗಳು
ಅಎಚಟಗಳ ಲೆಕ್ಕಕ್ಕೆ ತೆಗೆದುಕೊಳ್ಳದವಳ ಏಕಾಗ್ರತೆಗೆ
ಎಂತಾ ಋಷಿಮುನಿಗಳೂ ನಾಚಬೇಕು
ಕೊಟ್ಟ ಅವಧಿ ಮುಗಿದ ಮೇಲೆ
ಕುಣಿತ ಮಣಿತಗಳಿಗೆವಿರಾಮವನಿಟ್ಟು
ನೆಲದ ಮೇಲೆ ಬಿದ್ದ ನೋಟುಗಳನ್ನಾರಿಸಿಕೊಳ್ಳುವಾಗ
ಬಂಗಾಳದ ಹಳ್ಳಿಯಲ್ಲಿರುವ
ಅಮ್ಮ ಅಪ್ಪನ ಅಕ್ಕತಂಗಿಯರ ಮುಖಗಳು
ಕಣ್ಮುಂದೆ ಕುಣಿಯುತ್ತವೆ
ಸಂಗೀತದ ಹಂಗಿರದೆ
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

 

 

 

 


ಕರಿಬೇವು              

ಅಂತ ತುಟ್ಟಿಯೇನಲ್ಲ
ಇವತ್ತೇನು ಒಗ್ಗರಣೆಗೆ
ಕರಿಬೇವು ಬಿದ್ದೇ ಇಲ್ಲ…
ಸಣ್ಣ ಗೊಣಗಾಟದೊಂದಿಗೆ
ಎಲ್ಲರ ಮನೆಯ ಊಟವೂ ಸಾಗುತ್ತದೆ
ನಿರಾಯಾಸ.

ನಾಳೆಗೆ ಮತ್ತದೇ ಹುಳಿ ರಗಳೆ
ಬೇಡವೆಂದು ಚಟ ಪಟ  ಸಾಸಿವೆ
ಸಿಡಿಯುವುದು ಜೋರಾದಾಗ
ಒಮ್ಮೆಗೇ ಎಚ್ಚೆತ್ತವರಂತೆ
ಬೀಳಿಸಿದ್ದಾಯಿತು ಕಾದ ಎಣ್ಣೆಗೆ
ಎಂದಿಗಿಂತ ನಾಲ್ಕು ಎಲೆ ಹೆಚ್ಚಿಗೆ.

ಚಪ್ಪರಸಿ ಬೆರಳು ನೆಕ್ಕಿ
ತಿಂದುಂಡ ಖಾಲಿ ತಟ್ಟೆಯಲ್ಲಿ
ಅನಾಥವಾಗಿ ಉಳಿದಿದೆ ನೆಲೆ
ಕಾಣದ ಬೇವಿನೆಲೆ.

ಊಟದ ಜೊತೆಗೆ
ಎಲೆಯೂ ಸೇವಿಸಿದರೆ
ಆರೋಗ್ಯವೂ ವೃದ್ಧಿ
ನಮಗೂ ತೃಪ್ತಿ
ಹಿಡಿದಿಡಲಾಗದ ಮನ
ಮೆಲ್ಲನುಸುರಿ ಬಿಟ್ಟರೆ…

ಪ್ರಾಣಿಗಳಾಗಿಯೇ ಹುಟ್ಟಿ
ಸೊಪ್ಪು ಸದೆ ತಿನ್ನುತ್ತೇವೆ
ಇನ್ನೊಂದು ಜನುಮದಲ್ಲಿ
ಮಣ ಮಣಿಸುತ್ತಲೇ ಮೆಲ್ಲನೆದ್ದು
ಕೈ ಬಾಯಿ ಒರೆಸಿಕೊಳ್ಳುತ್ತಾರೆ
ನಮಗೇ ಇರಲೆಂಬಂತೆ ಎಲೆಯನ್ನು
ತಟ್ಟೆ ಕೊನೆಯಲ್ಲೇ ಉಳಿಸಿ.

ಘಂ ! ಘಮಲಿಗೆ
ಅಡುಗೆಯ ಪರಿಪೂರ್ಣತೆಗೆ
ಸೈ ಎಂದು ಟೊಂಕ ಕಟ್ಟಿ ನಿಂತ
ಕರಿಬೇವು
ಪಾತ್ರ ಮುಗಿದಾದ ಮೇಲೆ
ನೇಪಥ್ಯದಲ್ಲುಳಿದು ನಾಪತ್ತೆಯಾಗುವುದು
ಯಾತರ ನ್ಯಾಯ?

ತರ್ಕಿಸುತ್ತಲೇ ಹಠಕ್ಕೆ ಬಿದ್ದವರಂತೆ
ನಾವುಗಳೋ ರುಬ್ಬುವ ಕಲ್ಲಿಗೂ
ಎರಡು ಗೆರೆ ಬೇವಿನೆಲೆ  ಜಾಸ್ತಿಯೇ ಉದುರಿಸಿ
ನಿಟ್ಟುಸಿರಾಗುತ್ತೇವೆ.

ಮನೆಯ ಮುಂದಣದಲ್ಲಿ ಕಣ್ಣು
ನಿರುಕಿಸಿದರೂ ನೋಟಕ್ಕೆ ಸಿಗದ
ಕರಿಬೇವು
ಹಿತ್ತಲ ಬೆಳಕಲ್ಲೇ ಒಪ್ಪವಾಗಿ ಹರವಿಕೊಳ್ಳುತ್ತದೆ.
ಚಿವುಟಿದಷ್ಟೂ ಚಿಗುರಿಕೊಳ್ಳುತ್ತದೆ.
ನಮ್ಮ ಎದೆಯಾಳದ ಮೂಕ ದನಿಗೆ ಸಾಕ್ಷಿಯಾಗುತ್ತಿದೆ.
-ಸ್ಮಿತಾ ಅಮೃತರಾಜ್

 

 

 

 


ಮಂಗಳ ಮುಖಿ
ಆ ಜೀವ ಅದೆಷ್ಟು 
ಪರಿತಪಿಸಿರಬಹುದು ತಾನು
ಹೆಣ್ಣೂ ಅಲ್ಲದೆ ಗಂಡೂ ಅಲ್ಲದೆ
ಪ್ರಪಂಚದ ಕಣ್ಣಿಗೆ ನಗೆಪಾಟಲಾದಾಗ

ಆ ದೇವರನ್ನೂ
ಶಪಿಸಿರಬಹುದು 
ಮನೆ-ಮಂದಿ ಬಳಗದಿಂದ
ಅಸಾಹಾಯಕರಾಗಿ ದೂರವಾದಾಗ

ಕನಸುಗಳೆಲ್ಲವೂ 
ನುಚ್ಚು ನೂರಾಗಿರಬಹುದು
ತಾನು ವ್ಯಕ್ತಿತ್ವವನ್ನು ಗುರುತಿಸಲು
ಸಾಧ್ಯವಿಲ್ಲ ಎಂಬ ಸತ್ಯ ಅರಿವಾದಾಗ

ಸಭೆ-ಸಮಾರಂಭಗಳಿಗೆ 
ಹೋಗಲು ಮುಜುಗರವೆನಿಸಿರಬಹುದು
ಎಲ್ಲಾ ಕಣ್ಣುಗಳು ತನ್ನನ್ನೇ ಗುರುತಿಸಿ
ಹಿಂಬಾಲಿಸುತ್ತಿದೆ ಎಂದೆನಿಸಿದಾಗ

ಕತ್ತಲ ಕೋಣೆಯಲ್ಲಿ
ಬಿಕ್ಕಳಿಸಿ ಅತ್ತಿದ್ದಿರಬಹುದು
ತಾನು ಎಲ್ಲರ ಮುಂದೆ “ಮಂಗಳ ಮುಖಿ” ಎಂಬ
ಒಂದೇ ಹೆಸರಿನಿಂದ ಗುರುತಿಸಿಕೊಂಡಾಗ
ಪವಿತ್ರ ಬಿ. ಎಸ್ ಆಚಾರ್ಯ 

 

 

 

 


    
ನಾನವಳ ಒಡಲಾಳದ ಮೂಲೆಯಲಿ
ಮುತ್ತಾಗಿ ಮೂಡಿದಾಗ ಅದೆಷ್ಟು ಸಂಭ್ರಮಿಸಿತೋ..
ತಾಯ್ತನವೆಂಬ ದಿವ್ಯ ಹೊಯ್ದಾಟದ ಬದಲಾವಣೆಗಳ ಉಮೇದುಗಳನು ಅನುಭವಿಸಿ
ದಿನಗಳನ್ನೆಲ್ಲ ಕ್ಷಣಮಾಡಿ ಕೋಟಿಕನಸುಗಳನು
ಜತನದಿ ಹೇಗೆ ಹೆಣೆದೀತೋ ಆ ಜೀವ ನನ್ನವ್ವ!

ಪ್ರಸವಸಂಭವದ ಸಾವ-ನೋವಿನ ಸಮರದಿ
ಗೆದ್ದು ಜನ್ಮಕೊಡುತ ಪುನರ್ಜನ್ಮ ಕಂಡಳು
ನಾನಾಗ ಹಸುಳೆ,ಮಾಂಸದ ಮುದ್ದೆ ತನ್ನ ಮಿದುವೆದೆಗವುಚತು ಸುಧೆ ಸುರಿದವಳು ಮುಗಿಯದಾನಂದದಲಿ ಮಿಂದವಳು ನನ್ನವ್ವ.
ಉಚ್ಚೆಹೊಯ್ದು ನಾರಚ್ಚೆಹಿಡಿದಾಗ ಬಾರೋ
ನಮ್ಮವ್ವನ ಹಿರಿಯ ನೀನೆಂದು ಹಿರಿಹಿರಿ ಹಿಗ್ಗಿಸಿದವಳು,ತೊಡೆಮಡಿಲಮೇಲೆ ಅವಳ ಜೋಗುಕಳೆ ನಾನಿದ್ದೆ ಹೋದಾಗ ಮುದ್ದುಮಾಡಿ
ಹುಬ್ಬುಗದ್ದ ಹಾಲ್ಗಲ್ಲ ಅಂಗಾಲಿಗೆ ಕಾಡಿಗೆಯ
ನೆದರುಚುಕ್ಕೆಯಿಟ್ಟು ಮುದ್ದಿಸಿದವಳು ನನ್ನವ್ವ.

ನಾನೆಂದರೆ ಅವಳಿಗೆ ನಾಕ,ನನ್ನ ಕಾಪಿಟ್ಟುಕೊಳ್ಳುತ
ವಿಶ್ವರೂಪ ಕಂಡವಳು,ಕರುಳಬಳ್ಳಿಯ ಈ ಮಿಡಿಯ
ತನ್ನ ಮುಂಗಾಲಮೇಲೆ ಮಲಗಿಸಿ ಬೆಳ್ಳಿಗಿಂಡಿಲೆ
ಬಿಸಿನೀರೆರೆದು,ತಿದ್ದಿತೀಡಿ ಮುತ್ತಿನಮಳೆಗರೆದವಳು
ಸಾಲುಗುಬ್ಬಿಗಳ ಚಿತ್ತಾರದ ಜುಲೂಪಿ ಕೊಂಚಿಗೆ ಕಟ್ಟಿ,ಬೆಳ್ಳಿಉಡುದಾರ, ಹಾಲ್ಗಡಗದ ಪೋಷಾಕು
ತೊಡಿಸಿ ನನ್ನ ಸಹಜ ಹಾವಭಾಗಳಿಗೆ ನೂರರ್ಥ
ಅಹಮ್ಮಿಲೆ ಹೇಳಿದವಳು ನನ್ನ ಆನಂದದಲಿ ನಂದಗೋಕುಲವ ಕಂಡವಳಾಕೆ ನನ್ನವ್ವ.
ಅಂಬೆಗಾಲಿಟ್ಟು ಅಂಗಳದಲಿ ಬಿದ್ದಾ ಹಂಬಲಿಸಿ
ಎತ್ತಿ ಮುದ್ದಾಡಿದವಳು,ಗೊಂಬೆಯಂತಿದ್ದ ನನ್ನ ಬೆರಳಿಗೆ ಬೆರಳಾಗಿ ಆಸರೆಯಾಗಿ ಮುನ್ನಡೆಸಿದಳು
ನಾ ಹಸಿದು ಚಂಡಿಹಿಡಿದಾಗ ತನ್ನಹಸಿವು ಕಟ್ಟಿ ಮುತ್ತು,ಕೈತುತ್ತು ಕೊಟ್ಟವಳು ನನ್ನನ್ನ.

ಕಾಡಿದಾಗ ಬೇಡಿದಾಗ ನಾ ಹಟಮಾಡಿ ಅಳುವಾಗ
ಸೆರಗಿನಲಿ ಬರಸೆಳೆದು ಸಂತೈಸಿ,ನಕ್ಕುನಗಿಸಿದಾಕೆ
ನೀತಿವಂತ,ಗುಣವಂತ ನಾನಾಗಬೇಕೆಂದು ಬಳಪ
ಹಿಡಿಸಿ,ಬಾಳಿನದಾರಿ ತೋರಿದಾಕೆ ನನ್ನವ್ವ.
ಪರಿವರ್ತನೆ ಜಗದನಿಯಮ! ಎಂದರು ಅರಿತವರು
ಆದರೆ,ನನ್ನವ್ವ ಬದಲಾಗಿಲ್ಲ ಬಹುಶಃ ಬದಲಾಗಲಿಕ್ಕಿಲ್ಲ! ಜಗದನಿಯಮವನ್ನೇ ಬದಲಾಯಿಸಬಲ್ಲಳು ಆ ಜೀವ ನನ್ನವ್ವ…

-ಸಿದ್ದು ಬ ನೇಸರಗಿ ಬೈಲಹೊಂಗಲ       


 

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಪಂಜು ಕಾವ್ಯಧಾರೆ

  1. ಬರವಣಿಗಗೆ ಬಂದಂತಿದೆ ಬರಗಾಲ
    ಮೊರೆಯಿಟ್ಟರೂ ಬರುವಂತೆ ತೋರುತ್ತಿಲ್ಲ ಮಳೆಗಾಲ
    ಒಮ್ಮೊಮ್ಮೆ ಬೇಡವೆಂದರೂ ಮಾಡಿ ಹೋಗುತ್ತಿತ್ತು ಅತಿವೃಷ್ಠಿ
    ಇಂದೇಕೋ ಕಟ್ಟಿ ಹಾಕುತಿದೆ ನನ್ನದೇ ಮುಷ್ಠಿ
    ಬಂಜೆಯಾಗುವ ಬದಲು ನಂಜಾದರೂ ಇರಲೆಂದು
    ಹಿಂಜಿ ತೆಗೆದರೆ ಅದೆಂತದೋ ತಲೆಬುಡವಿಲ್ಲದ ಹಸಿಗೂಸು
    ಸತ್ತೆ ಬಂದಂತಿದೆ ಉದರದೊಳಗೆ.

  2. ತುಂಬಾ ಚೆನ್ನಾಗಿ ಬರೆದಿದ್ದಾರೆ.
    ಎಲ್ಲರಿಗೂ ಶುಭವಾಗಲಿ…

Leave a Reply

Your email address will not be published. Required fields are marked *