1990 ರ ಡಿಸೆಂಬರ್ ನಲ್ಲಿ ಕೊಲೆಯಾದ ಟ್ಯಾಮಿಯ ಘಟನೆಯಿಂದ ಸ್ವಲ್ಪ ಹಿಂದಕ್ಕೆ ಹೋಗೋಣ. 1989 ಕಳೆದು 1990 ಆಗಲೇ ಬಂದಾಗಿದ್ದರೂ, ಅತ್ತ ಸ್ಕಾರ್-ಬೋರೋ ನಗರದ ವಿಶೇಷ ತನಿಖಾ ದಳದಿಂದ ಸರಣಿ ಅತ್ಯಾಚಾರದ ಬಗ್ಗೆ ಮಹತ್ವದ ಸುಳಿವೇನೂ ಸಿಕ್ಕಿರದಿದ್ದರೂ, ಸ್ಕಾರ್-ಬೋರೋದ ನಿವಾಸಿಗಳು ಯೋಚಿಸುತ್ತಿರುವಂತೆ ತನಿಖಾ ದಳವೇನೂ ನಿದ್ದೆ ಮಾಡುತ್ತಿರಲಿಲ್ಲ. ಏಕೆಂದರೆ ನಡೆದ ಪ್ರಕರಣಗಳನ್ನು ಆಧರಿಸಿ ಈ ಸ್ಯಾಡಿಸ್ಟ್ ರೇಪಿಸ್ಟ್ ನ ಒಂದು ಪ್ರೊಫೈಲ್ ಅನ್ನು ಇಲಾಖೆಯು ಪಕ್ಕದಲ್ಲೇ ಇರುವ ಅಮೇರಿಕಾದ ಎಫ್.ಬಿ.ಐ ಯ ಸಹಯೋಗದಿಂದ ಆಗಲೇ ತಯಾರು ಮಾಡಿತ್ತು.
ಶಂಕಿತ ಅಪರಾಧಿಯು ಇಪ್ಪತ್ತರಿಂದ ಮೂವತ್ತರ ವಯಸ್ಸಿನ, ನೋಡಲು ಸುಂದರವಾಗಿರುವ, ಹೊಂಬಣ್ಣದ ಕೂದಲಿನ, ಸಾಧಾರಣ ಮೈಕಟ್ಟಿನ ಪುರುಷ ಎಂಬ ಜನರಲ್ ಪ್ರೊಫೈಲ್ ಇಲಾಖೆಯ ಕಡತಗಳಲ್ಲಿ ತಯಾರಾಗಿ ಕುಳಿತಿತ್ತು. ಅಲ್ಲದೆ 1990 ರ ಮೇ ತಿಂಗಳಲ್ಲಿ ಸ್ಕಾರ್-ಬೋರೋ ನಗರದಲ್ಲಿ ಹತ್ತೊಂಬತ್ತರ ತರುಣಿಯ ಮೇಲೆ ಮತ್ತೊಂದು ಅತ್ಯಾಚಾರದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣವೂ ಬಹುಚರ್ಚಿತ `ದಿ ಸ್ಕಾರ್-ಬೋರೋ ರೇಪಿಸ್ಟ್' ನಿಂದಲೇ ನಡೆದಿದ್ದು ಎಂಬುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟವಾಗಿತ್ತು. ಅದರಲ್ಲೂ ಮುಖ್ಯವಾಗಿ ಅತ್ಯಾಚಾರಕ್ಕೆ ಬಲಿಯಾದ ಈ ಯುವತಿಯು, ತನ್ನ ಮೇಲೆರಗಿ ಮಾನಹಾನಿಮಾಡಿದ ಆ ಆಗಂತುಕನ ಮುಖಚರ್ಯೆಯನ್ನು ತಕ್ಕಮಟ್ಟಿಗೆ ಹೇಳಬಲ್ಲವಳಾಗಿದ್ದಳು. ಕೂಡಲೇ ಕಾರ್ಯಪ್ರವೃತ್ತರಾದ ಇಲಾಖೆಯ ಅಪರಾಧ ವಿಭಾಗದ ಫಾರೆನ್ಸಿಕ್ ಆರ್ಟಿಸ್ಟ್ ಗಳು ಯುವತಿಯ ವಿವರಣೆಯನ್ನು ಆಧರಿಸಿ ಅಪರಾಧಿಯ ಒಂದು ಸ್ಕೆಚ್ ಅನ್ನು ಸಿದ್ಧಪಡಿಸಿದರು. 1990 ರ ಮೇ ತಿಂಗಳ ಕೊನೆದಿನಗಳಲ್ಲಿ ಕೆನಡಾ ದೇಶವು ತನ್ನ ಇತಿಹಾಸದಲ್ಲೇ ಕಂಡುಕೇಳರಿಯದ ಮೋಸ್ಟ್ ವಾಂಟೆಡ್ ರೇಪಿಸ್ಟ್ ಒಬ್ಬನ ರೇಖಾಚಿತ್ರವು ಟೋರಾಂಟೋ ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿ, ಸುದ್ದಿವಾಹಿನಿಗಳಲ್ಲಿ ಬಿತ್ತರವಾದವು. ಈ ರೇಪಿಸ್ಟ್ ನ ತಲೆಗೆ ಬಹುಮಾನದ ಮೊತ್ತವನ್ನೂ ಇರಿಸಲಾಗಿತ್ತು.
ಇತ್ತ ತನ್ನ ಪ್ರಿಯತಮ ಪೌಲ್ ಬರ್ನಾರ್ಡೊನ ತೋಳತೆಕ್ಕೆಯಲ್ಲಿ ಬೆಚ್ಚಗಿದ್ದ ಕಾರ್ಲಾ ಹೊಮೋಲ್ಕಾಗೂ ರೇಖಾಚಿತ್ರದ ಬಿಡುಗಡೆಯ ವಿಚಾರ ಕೇಳದೇನೂ ಇರಲಿಲ್ಲ. ಆದರೆ ಪತ್ರಿಕೆಗಳನ್ನು ಓದುತ್ತಿದ್ದ ಪೌಲ್ ನ ಸ್ನೇಹಿತರು ಪ್ರಕಟಿತ ರೇಖಾಚಿತ್ರವನ್ನು ನೋಡಿ ದಂಗಾಗಿದ್ದರು. ಆ ರೇಖಾಚಿತ್ರವು ಥೇಟು ಪೌಲ್ ಬರ್ನಾರ್ಡೊನನ್ನು ಹೋಲುತ್ತಿತ್ತು. ಈ ವಿಚಾರದ ಗಾಳಿಮಾತುಗಳು ಕಾರ್ಲಾಳ ಕಿವಿಗೆ ಬಿದ್ದಿದ್ದರೂ ಅವಳು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಪೌಲ್ ಇತರರಿಗಿಂತ ಸ್ವಲ್ಪ ಭಿನ್ನವಾಗಿದ್ದ ಅನ್ನುವುದು ಸತ್ಯವಾಗಿದ್ದರೂ, ಆತ `ರೇಪಿಸ್ಟ್' ಅನ್ನುವುದು ಒಂದು ಅತಿರಂಜಿತ ಕಲ್ಪನೆಯಷ್ಟೇ ಎಂಬುದು ಅವಳ ಅಭಿಪ್ರಾಯವಾಗಿತ್ತು. ಕಾರ್ಲಾಳನ್ನು ಲೋಹದ ಕೈಕೋಳದಲ್ಲಿ ಬಂಧಿಸಿ ಮುತ್ತಿನ ಮಳೆಗರೆಯುತ್ತಿದ್ದ ಪೌಲ್ ಒಮ್ಮೆ ಆಕೆಯಲ್ಲಿ “ಆ ಸ್ಕಾರ್-ಬೋರೋ ರೇಪಿಸ್ಟ್ ತಾನೇ'' ಎಂದು ಹೇಳಿಕೊಂಡಿದ್ದರೂ, ಆಕೆ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಅಥವಾ ವಿಷಯಗಳು ಅಲ್ಪಸ್ವಲ್ಪವಾಗಿ ತಿಳಿದಿದ್ದರೂ ಪೌಲ್ ನನ್ನು ಎದುರು ಹಾಕಿಕೊಂಡು ಅವನನ್ನು ಕಳೆದುಕೊಳ್ಳುವುದು ಕಾರ್ಲಾಗೆ ಬೇಕಿರಲಿಲ್ಲ.
ಇತ್ತ ರೇಖಾಚಿತ್ರದ ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ಪೋಲೀಸ್ ಇಲಾಖೆಯ ಟೆಲಿಫೋನುಗಳು ಬಿಡುವಿಲ್ಲದೆ ರಿಂಗಣಿಸಲಾರಂಭಿಸಿದವು. ಈ ಕಾರ್ಯಕ್ಕೆಂದೇ ಅಳವಡಿಸಲಾಗಿದ್ದ ಐದು ಹಾಟ್-ಲೈನ್ ಗಳಿಗೆ ದಿನಕ್ಕೆ ಮೂರರಿಂದ ನಾಲ್ಕು ಸಾವಿರ ಕರೆಗಳು ಆಗಂತುಕನ ಮಾಹಿತಿಯನ್ನು ಕೊಡುವ ಸಂಬಂಧ ಬರತೊಡಗಿದವು. ಬಂದ ಕರೆಗಳನ್ನೆಲ್ಲಾ ದಾಖಲಿಸಿಕೊಂಡು ಅದರಲ್ಲಿ ನಿಜವಾದದ್ದೆಷ್ಟು, ಪೊಳ್ಳಾಗಿರುವುದೆಷ್ಟು ಎಂಬ ವಿಂಗಡಣೆಯನ್ನೆಲ್ಲಾ ಮುಗಿಸಿ ತಕ್ಕಮಟ್ಟಿನ ಮಾಹಿತಿಗಳನ್ನು ತನಿಖಾ ತಂಡವು ಕಲೆಹಾಕಿತ್ತು. 1990 ರ ಅಕ್ಟೋಬರ್ ನಲ್ಲಂತೂ ಶಂಕಿತ ಆರೋಪಿಗಳ ಸಂಖ್ಯೆ ಒಂಭೈನೂರ ಮೂವತ್ತು ದಾಟಿತ್ತು.
ಓರ್ವ ಬ್ಯಾಂಕ್ ಉದ್ಯೋಗಿ ಸೇರಿದಂತೆ, ಪೌಲ್ ನ ಖಾಸಾ ಗೆಳೆಯ ಅಲೆಕ್ಸ್ ಸ್ಮಿರ್ನಿಸ್ ನ ಪತ್ನಿಯಾಗಿದ್ದ ಟೀನಾ ಸ್ಮಿರ್ನಿಸ್ ಇಲಾಖೆಗೆ ಕರೆ ಮಾಡಿ ಪ್ರಕಟಿತ ರೇಖಾಚಿತ್ರವು ಸ್ಕಾರ್-ಬೋರೋದ ನಿವಾಸಿ ಪೌಲ್ ಬರ್ನಾರ್ಡೊನನ್ನು ಹೋಲುತ್ತದೆಂದೂ, ತಡಮಾಡದೆ ಆತನನ್ನು ವಿಚಾರಣೆಗೊಳಪಡಿಸಬೇಕೆಂದೂ ಮಾಹಿತಿಯನ್ನು ನೀಡಿದ್ದರು. ಪೌಲ್ ನ ಗೆಳೆಯನ ಪತ್ನಿ ಟೀನಾರನ್ನು ಭೇಟಿಯಾದ ತನಿಖಾದಳದ ಅಧಿಕಾರಿಗಳ ತಂಡ ಪೌಲ್ ಬರ್ನಾರ್ಡೊ ಬಗ್ಗೆ ಕೆಲ ಮಾಹಿತಿಗಳನ್ನು ಪಡೆದುಕೊಂಡಿತು. ಪೌಲ್ ನ ಖಾಸಾ ಗೆಳೆಯನಿಗಷ್ಟೇ ಗೊತ್ತಿದ್ದ ಆತನ ಕೆಲ ಲೈಂಗಿಕ ಫ್ಯಾಂಟಸಿಗಳನ್ನು ಟೀನಾ ಪೋಲೀಸರ ಮುಂದೆ ಬಿಚ್ಚಿಡಲಾರಂಭಿಸಿದಳು. ಎಲ್ಲವನ್ನೂ ಕೇಳಿ ಹಿಂತಿರುಗಿದ ಅಧಿಕಾರಿಗಳು ಈ ಕಥೆಗಳನ್ನು ಟೀನಾಳ ಅತಿರಂಜಿತ ಕಲ್ಪನೆಗಳಷ್ಟೇ ಎಂದು ಯೋಚಿಸಿ, ಟೀನಾ ಸ್ಮಿರ್ನಿಸ್ ಈ ಹೈ-ಪ್ರೊಫೈಲ್ ಪ್ರಕರಣದ ಸಂದರ್ಭದ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾಳಷ್ಟೇ ಎಂದು ಲೆಕ್ಕಹಾಕಿ ಕೈತೊಳೆದುಕೊಂಡರು. ಟೀನಾ ಪೋಲೀಸರಿಗೆ ವಿವರಿಸಿದ ಲೈಂಗಿಕತೆಯ ಕುರಿತ ಆ ಕಥೆಗಳು ಎಷ್ಟು ವಿಚಿತ್ರವಾಗಿದ್ದವೆಂದರೆ, ಮನುಷ್ಯನೊಬ್ಬ ಹಾಗೆ ಯೋಚಿಸಬಹುದು ಎಂದು ಕ್ಷಣಮಾತ್ರಕ್ಕಾದರೂ ನಂಬಲು ಅಸಾಧ್ಯವಾಗಿದ್ದವು.
ಅಲ್ಲದೆ ಪ್ರಕರಣದ ಸಂಬಂಧ ಟೀನಾಳ ಪತಿ ಅಧಿಕಾರಿಗಳಿಗೆ ಹೀಗೆಂದು ಹೇಳಿಕೆಯನ್ನು ಕೊಡುತ್ತಾನೆ: “ಪೌಲ್ ಮತ್ತು ನಾನು ಬಾಲ್ಯದ ಸ್ನೇಹಿತರು. ಪೌಲ್ ಬರ್ನಾರ್ಡೊ ಗಾತ್ರದಲ್ಲಿ ಚಿಕ್ಕದಾಗಿರುವ, ಅಷ್ಟೇನೂ ಬುದ್ಧಿಮತ್ತೆಯಿಲ್ಲದ ಹೆಣ್ಣುಮಕ್ಕಳನ್ನು ಇಷ್ಟಪಡುತ್ತಿದ್ದ. ತನ್ನ ಪರಿಚಯದ ಹುಡುಗಿಯರನ್ನು ಮನೆಗೆ ಆಹ್ವಾನಿಸಿ, ಮಾತುಮಾತಲ್ಲೇ ಮದ್ಯವನ್ನು ಕುಡಿಸಿ ಅವರನ್ನು ಬಳಸಿಕೊಳ್ಳುವುದು ಅವನ ಅಭ್ಯಾಸವಾಗಿತ್ತು. ಕಾರ್ಲಾ ಹೊಮೋಲ್ಕಾಳ ಜೊತೆ ಸಂಬಂಧವನ್ನಿಟ್ಟುಕೊಂಡಿದ್ದರೂ, ಇಬ್ಬರೂ ಶೀಘ್ರದಲ್ಲೇ ನಿಶ್ಚಿತಾರ್ಥದ ಉಂಗುರಗಳನ್ನು ಬದಲಾಯಿಸಲಿದ್ದರೂ, ಪೌಲ್ ಇನ್ನೂ ಒಂದಿಬ್ಬರ ಜೊತೆಗೆ ತನ್ನ ಆಪ್ತ ಒಡನಾಟವನ್ನು ಇಟ್ಟುಕೊಂಡಿದ್ದಾನೆ. ಅಲ್ಲದೆ ತನ್ನ ಕಾರಿನಲ್ಲಿ ಯಾವಾಗಲೂ ಚಾಕುವೊಂದನ್ನು ಇಟ್ಟುಕೊಂಡು ತಿರುಗಾಡುತ್ತಾನೆ. ಅವನನ್ನು ವಿವಾಹವಾಗಲಿರುವ ಹುಡುಗಿಯಾದ ಕಾರ್ಲಾಗೆ ಬಹುಷಃ ಇವನ ಈ ವಿಲಕ್ಷಣತೆಗಳ ಅರಿವಿದ್ದರೂ ಅವಳು ಹಾಗೇನೂ ತಲೆಕೆಡಿಸಿಕೊಂಡದ್ದನ್ನು ನಾನು ನೋಡಿಲ್ಲ. ಅಲ್ಲದೆ ಒಂದೆರಡು ಬಾರಿ ನನ್ನ ತಮ್ಮನೊಂದಿಗೆಯೂ ಏಕಾಂಗಿಯಾಗಿ ಓಡಾಡುತ್ತಿರುವ ಬಾಲಕಿಯರನ್ನು ಅಪಹರಿಸಿ, ಅತ್ಯಾಚಾರ ಮಾಡಿ, ಕೊಲ್ಲುವ ಬಗ್ಗೆ ಹೇಳಿಕೊಂಡಿದ್ದನಂತೆ''. ಪೋಲೀಸ್ ಅಧಿಕಾರಿಗಳು ಈ ಹೇಳಿಕೆಗಳನ್ನು ದಾಖಲಿಸಿಕೊಂಡರೂ ದಿನಗಳೆದಂತೆ ಈ ಹೇಳಿಕೆಗಳು ಅಧಿಕಾರಿಗಳ ದಿವ್ಯನಿರ್ಲಕ್ಷ್ಯಕ್ಕೊಳಗಾಗುತ್ತದೆ.
ಆದರೂ 1990 ರ ನವೆಂಬರ್ ತಿಂಗಳಲ್ಲಿ ತನಿಖಾ ದಳದ ಅಧಿಕಾರಿಗಳ ತಂಡ ಮೇಲ್ನೋಟಕ್ಕೆಂದು ಸ್ಕಾರ್-ಬೋರೋದಲ್ಲಿದ್ದ ಪೌಲ್ ನ ನಿವಾಸಕ್ಕೆ ತೆರಳಿ ಸಂಕ್ಷಿಪ್ತವಾದ ವಿಚಾರಣೆಯನ್ನು ನಡೆಸಿತು. ಆದರೆ ಪೌಲ್ ನ ಗೆಳೆಯ ಮತ್ತು ಆತನ ಪತ್ನಿ ಟೀನಾ ಹೇಳಿಕೆಗಳನ್ನು ನೀಡಿ ಎರಡು ತಿಂಗಳುಗಳೇ ಕಳೆದಿದ್ದವು. ಅಧಿಕಾರಿಗಳನ್ನು ಆದರದಿಂದ ಬರಮಾಡಿಕೊಂಡ ಪೌಲ್ ಬರ್ನಾರ್ಡೊ ಅಗತ್ಯ ಬಿದ್ದರೆ ತಾನು ಎಲ್ಲಾ ರೀತಿಯಲ್ಲೂ ತನಿಖೆಗೆ ಸಹಕರಿಸುವೆನೆಂದು ಹೇಳಿದನಲ್ಲದೆ, ಸ್ವಇಚ್ಛೆಯಿಂದ ತನ್ನ ಕೂದಲು, ಎಂಜಲು ಮತ್ತು ರಕ್ತದ ಮಾದರಿಯನ್ನು ಡಿ.ಎನ್.ಎ ಮಾದರಿಯ ಹೋಲಿಕೆಗಾಗಿ ಹಸ್ತಾಂತರಿಸಿದನು. ಇಲಾಖೆಯ ದಾಖಲೆಗಳ ಪ್ರಕಾರ ಪೌಲ್ ಗೆ ಅಪರಾಧದ ಯಾವುದೇ ಹಿನ್ನೆಲೆಯಿರಲಿಲ್ಲ. ಸಜ್ಜನ, ವಿನಯವಂತ, ಸುಸಂಸ್ಕøತನಂತೆ ಕಾಣುತ್ತಿದ್ದ ಮತ್ತು ಯೌವನದ ಲವಲವಿಕೆಯಲ್ಲಿ ಮಿಂಚುತ್ತಿದ್ದ ಪೌಲ್ ಬರ್ನಾರ್ಡೊ ಎಂಬ ಯುವಕನೊಬ್ಬ ಇಂಥಾ ಬರ್ಬರವಾದ ಸರಣಿ ಅತ್ಯಾಚಾರಗಳನ್ನು ನಡೆಸಲು ಸಾಧ್ಯವೇ ಇಲ್ಲ ಎಂಬುದು ಪೋಲೀಸರಿಗೆ ಮೊದಲ ಭೇಟಿಯಲ್ಲೇ ಖಾತ್ರಿಯಾಗಿತ್ತು. ಡಿ.ಎನ್.ಎ ಪರೀಕ್ಷೆಗಾಗಿ, ಲ್ಯಾಬೋರೇಟರಿಯ ಹವಾನಿಯಂತ್ರಿತ ಶೆಲ್ಫ್ ಗಳಲ್ಲಿ ಕಾಯುತ್ತಿದ್ದ ನೂರಕ್ಕೂ ಹೆಚ್ಚು ಮಾದರಿಗಳ ಮಧ್ಯೆ ಪೌಲ್ ಬರ್ನಾರ್ಡೊನ ಮಾದರಿಯೂ ಅನಾಥವಾಗಿ ಸೇರಿಹೋಯಿತು.
ಇವೆಲ್ಲದರ ಮಧ್ಯೆ ಸ್ಕಾರ್-ಬೋರೋ ನಗರದಲ್ಲಿ ಅತ್ಯಾಚಾರದ ಪ್ರಕರಣಗಳು ಹಟಾತ್ತನೆ ನಿಂತುಹೋಗಿ ಪಕ್ಕದ ಸೈಂಟ್-ಕ್ಯಾಥರೀನ್ ನಗರದಲ್ಲಿ ಹೊಸ ಅಪರಾಧದ ಪ್ರಕರಣಗಳು ಬೆಳಕಿಗೆ ಬರಲಾರಂಭಿಸಿದ್ದವು. ಸ್ಕಾರ್-ಬೋರೋ ನಗರವನ್ನು ಬರೋಬ್ಬರಿ ಎರಡು ವರ್ಷಗಳ ಮಟ್ಟಿಗೆ ನರಳಿಸಿದ ನಿಗೂಢ ಶಾಪವೊಂದು ಈಗ ಸೈಂಟ್-ಕ್ಯಾಥರೀನ್ ನಗರವನ್ನು ಕಚ್ಚಿಕೊಂಡಿತ್ತು.
ಕಾಕತಾಳೀಯವೋ ಎಂಬಂತೆ ಪೌಲ್ ಬರ್ನಾರ್ಡೊ ಸ್ಕಾರ್-ಬೋರೋ ನಗರವನ್ನು ಬಿಟ್ಟು ತನ್ನ ಪ್ರಿಯತಮೆಯ ವಾಸಸ್ಥಾನದ ಸೈಂಟ್-ಕ್ಯಾಥರೀನ್ ನಗರಕ್ಕೆ ಶಾಶ್ವತವಾಗಿ ನೆಲೆಸಲೆಂದೇ ತೆರಳಿದ್ದ. ಆದರೆ ಈ ಬಗ್ಗೆ ಪೋಲೀಸರಿಗೆ ಯಾವ ಸುಳಿವೂ ಇರಲಿಲ್ಲ. ಅಸಲಿಗೆ ಸ್ಕಾರ್-ಬೋರೋ ನಗರದಲ್ಲಿ ತನಿಖೆಯು ಮುಂದುವರಿದಿತ್ತಾದರೂ, `ಪೌಲ್ ಬರ್ನಾರ್ಡೊ' ಎಂಬ ಹೆಸರು ಮುಖ್ಯ ಶಂಕಿತ ಅಪರಾಧಿಗಳ ಪಟ್ಟಿಯಲ್ಲಿ ಇರಲೇ ಇಲ್ಲ.
***************
ಹದಿನೈದರ ಬಾಲಕಿ ಟ್ಯಾಮಿಯ ಅನಿರೀಕ್ಷಿತ ಮರಣ ಆಕೆಯ ಹೆತ್ತವರನ್ನು ದುಃಖದ ಕೂಪಕ್ಕೆ ತಳ್ಳುತ್ತದೆ. ಟ್ಯಾಮಿ ತನ್ನ ಕೊನೆಯ ಕ್ಷಣಗಳನ್ನು ಆಸ್ಪತ್ರೆಯಲ್ಲಿ ಎಣಿಸುತ್ತಿದ್ದ ಸಂದರ್ಭದಲ್ಲಿ ಮನೆಗೆ ಭೇಟಿ ಕೊಡುವ ಸೈಂಟ್-ಕ್ಯಾಥರೀನ್ ನಗರದ ಪೋಲೀಸ್ ಅಧಿಕಾರಿಗಳು ಪೌಲ್ ಮತ್ತು ಕಾರ್ಲಾರನ್ನು ಮಾಹಿತಿಗಾಗಿ ಸಂದರ್ಶಿಸುತ್ತಾರೆ. “ನಾವೆಲ್ಲರೂ ಜೊತೆಯಾಗಿ ಮೂವೀ ನೋಡುತ್ತಿದ್ದೆವು. ತಿನ್ನುತ್ತಾ, ಕುಡಿಯುತ್ತಾ ಹರಟುತ್ತಿದ್ದ ನಾವು ಒಳ್ಳೆಯ ಒಂದು ಸಂಜೆಯನ್ನು ಜೊತೆಯಾಗಿ ಕಳೆಯುತ್ತಿದ್ದೆವು. ಆದರೆ ಟ್ಯಾಮಿ ಹಟಾತ್ತನೆ ಉಸಿರುಗಟ್ಟಿದವಳಂತೆ ಕೆಮ್ಮಲಾರಂಭಿಸಿದಳು. ನಾನು ಭಯಪಟ್ಟು ಅವಳ ಬಳಿ ಸಹಾಯಕ್ಕಾಗಿ ಹೋದೆ. ಆದರೆ ಕೆಮ್ಮು ತಕ್ಷಣ ನಿಂತುಹೋಗಿ ಟ್ಯಾಮಿ ಮೂರ್ಛೆಹೋದಳು. ಏನು ಮಾಡಬೇಕೆಂದು ತಿಳಿಯದೆ ನಾನು ಆಂಬ್ಯುಲೆನ್ಸ್ ಗೆ ಕರೆ ಮಾಡಿದೆ'', ಎಂದು ಇಪ್ಪತ್ತರ ಹರೆಯದ ಸುಂದರಿ ಕಾರ್ಲಾ ಬಿಕ್ಕುತ್ತಾ ನುಡಿದಳು. “ತಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಅವಳನ್ನು ಉಳಿಸಿಕೊಳ್ಳಲಾಗಲಿಲ್ಲ'', ಎಂದು ನಿಡುಸುಯ್ಯುತ್ತಾ, ಉಕ್ಕುತ್ತಿದ್ದ ಕಣ್ಣೀರನ್ನು ತಡೆಯಲು ಶಕ್ತಿಮೀರಿ ಪ್ರಯತ್ನಿಸುತ್ತಾ ಪೌಲ್ ನುಡಿದ. ತನ್ನ ಪ್ರೀತಿಯ ತಂಗಿಯನ್ನು ಕಳೆದುಕೊಂಡ ನೋವು ಆಕೆಯ ಮುಖದಲ್ಲಿ ದಟ್ಟವಾಗಿತ್ತು. ಅತ್ತು, ಅತ್ತು ಅವಳ ಆಕರ್ಷಕ ಕಣ್ಣುಗಳು ಕೆಂಪಗಾಗಿದ್ದವು. ಮುದ್ದಾದ ಕೆಂಪು ಕೆನ್ನೆಗಳು ಬಣ್ಣಗೆಟ್ಟಿದ್ದವು. ಅವಳನ್ನು ಪ್ರೀತಿಯಿಂದ ನೇವರಿಸುತ್ತಾ ಸಂತೈಸುತ್ತಿದ್ದ ಇಪ್ಪತ್ತಾರರ ಸ್ಫುರದ್ರೂಪಿ ಯುವಕ ಪೌಲ್ ನಿಸ್ತೇಜನಾಗಿ ಮೌನದಲ್ಲೇ ಕಳೆದುಹೋಗಿದ್ದ.
ಅಲ್ಲದೆ ವೈದ್ಯಕೀಯ ಪರೀಕ್ಷೆಯ ವರದಿಯು ಟ್ಯಾಮಿಯ ರಕ್ತದಲ್ಲಿ ಆಲ್ಕೋಹಾಲ್ ಅಂಶ ಇರುವ ಸಂಗತಿಯನ್ನಷ್ಟೇ ದೃಢಪಡಿಸಿತು. ಟ್ಯಾಮಿಯ ವಯಸ್ಸಿನ ಹರೆಯದ ಹುಡುಗ-ಹುಡುಗಿಯರು ಪೋಷಕರ ವಿರೋಧದ ಹೊರತಾಗಿಯೂ ಗುಟ್ಟಾಗಿ ಮದ್ಯಸೇವನೆಯನ್ನು ಮಾಡುವುದು ನಗರದಲ್ಲಿ ಸಾಮಾನ್ಯವಾದ ಸಂಗತಿಯಾಗಿತ್ತು. ಪಂಚನಾಮೆಯನ್ನು ನಡೆಸಿ ವರದಿಯನ್ನು ಬರೆದ ಇಲಾಖೆಯು ಇದೊಂದು ಮದ್ಯಪಾನದ ಬಳಿಕ ವಾಂತಿಯು ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ, ಉಸಿರುಗಟ್ಟುವಿಕೆಯಿಂದಾದ ಆಕಸ್ಮಿಕ ಮತ್ತು ಸ್ವಾಭಾವಿಕ ಸಾವು ಎಂದು ಷರಾ ಬರೆಯಿತು. ಯಾವುದೇ ಸಂಶಯಾಸ್ಪದ ಆಯಾಮಗಳೇ ಇಲ್ಲದ ಟ್ಯಾಮಿಯ ಸಾವು ಒಂದು ಆಕಸ್ಮಿಕ ಸಾವಷ್ಟೇ ಎಂದು ಮರುಗಿ ಸ್ಥಳೀಯ ಪೋಲೀಸ್ ಇಲಾಖೆಯು ಪ್ರಕರಣವನ್ನು ಮುಚ್ಚಿಬಿಟ್ಟಿತು. ಹೀಗೆ ಮುದ್ದಾದ ಹದಿನೈದರ ಬಾಲಕಿ ಟ್ಯಾಮಿಯ ಸಾವಿನ ರಹಸ್ಯವು ಅವಳೊಂದಿಗೆಯೇ ಸಮಾಧಿಯಾಯಿತು.
ನಂತರದ ಕೆಲವು ರಾತ್ರಿಗಳಲ್ಲಿ ಕಾರ್ಲಾ ತನ್ನ ಮೃತ ತಂಗಿಯಾದ ಟ್ಯಾಮಿಯ ದಿರಿಸುಗಳನ್ನು ಧರಿಸಿ, ಅವಳಂತೆಯೇ ನಟಿಸುತ್ತಾ, ಅವಳ ಬಾಲಿಶ ದನಿಯನ್ನೇ ಅನುಕರಿಸಿ ಮಾತನಾಡುತ್ತಾ, ಪೌಲ್ ಜೊತೆ ಆತನ ಲೈಂಗಿಕತೆಯ ಪರಾಕಾಷ್ಠತೆಯ ಆಟಗಳಲ್ಲಿ ಮೈಚೆಲ್ಲುತ್ತಾ ಸುಖಿಸಿದಳು. ಕೆಲವೇ ದಿನಗಳ ಹಿಂದಷ್ಟೇ ಅದೇ ಕೋಣೆಯಲ್ಲಿ ಟ್ಯಾಮಿಯ ಉಸಿರಾಟವು ಶಾಶ್ವತವಾಗಿ ನಿಂತುಹೋಗಿತ್ತು. ಆದರೆ ಹಾಸಿಗೆಯಲ್ಲಿ ಪವಡಿಸಿದ ಈ ಪ್ರೇಮಪಕ್ಷಿಗಳ ಕಣ್ಣುಗಳಲ್ಲಿ ಯಾವ ಸೂತಕದ ಛಾಯೆಯೂ ಇರಲಿಲ್ಲ.
ಅತ್ತ ಕೋಣೆಯ ಹಾಸಿಗೆಯ ಮೇಲೆ ಪೌಲ್ ಮತ್ತು (ಟ್ಯಾಮಿಯ ಪಾತ್ರವನ್ನು ನಟಿಸುತ್ತಿದ್ದ) ಕಾರ್ಲಾ ನಗ್ನರಾಗಿ ಸುಖೋನ್ಮತ್ತರಾಗಿ ಹೊರಳಾಡುತ್ತಿದ್ದರೆ, ಇತ್ತ ಹಾಸಿಗೆಯ ಪಕ್ಕದಲ್ಲಿಟ್ಟಿದ್ದ ಟೆಲಿವಿಷನ್ ಸೆಟ್, “ಆಕಸ್ಮಿಕ'' ಸಾವಿನ ಮೊದಲು ನಡೆಯುತ್ತಿದ್ದ ಕಾರ್ಲಾ ಮತ್ತು ಟ್ಯಾಮಿಯ ದೇಹಸಂಬಂಧದ ವೀಡಿಯೋ ಅನ್ನು ಬಿತ್ತರಿಸುತ್ತಲಿತ್ತು. ದೇ ಸಿಂಪ್ಲೀ ಲವ್ಡ್ ವಾಚಿಂಗ್ ಇಟ್.
***************
ಟ್ಯಾಮಿಯ ಸಾವಿನ ನಂತರ ಪೌಲ್ ಸರಿಹೋಗುತ್ತಾನೋ ಎಂದು ತಿಳಿದರೆ ಅಂಥಾ ಯಾವ ಲಕ್ಷಣಗಳೂ ಕಂಡುಬರಲಿಲ್ಲ. 1991 ರ ಫೆಬ್ರವರಿಯಲ್ಲಿ ಕಾರ್ಲಾ ಮತ್ತು ಪೌಲ್, ಟ್ಯಾಮಿಯ ಸಾವಿನ ನಂತರ ಸೈಂಟ್-ಕ್ಯಾಥರೀನ್ ನಗರದ ಮನೆಯನ್ನು ಬಿಟ್ಟು ಕೊಂಚ ದೂರದಲ್ಲಿರುವ ಪೋರ್ಟ್ ಡಾಲ್-ಹೌಸಿಯ ಒಂದು ಪುಟ್ಟ ಬಂಗಲೆಗೆ ಸೇರಿಕೊಳ್ಳುತ್ತಾರೆ. ಪೌಲ್ ಕೆಲ ರಾತ್ರಿಗಳಲ್ಲಿ ಅಚಾನಕ್ಕಾಗಿ ಮಾಯವಾಗುತ್ತಿದ್ದ. ಸಿಗರೇಟಿನ ಸ್ಮಗ್ಲಿಂಗ್ ದಂಧೆ ಮುಂದುವರಿದಂತೆಯೇ ಅರ್ಧರಾತ್ರಿಗಳಲ್ಲಿ ಸ್ನೇಹಿತರೊಂದಿಗೆ ಕಂಠಪೂರ್ತಿ ಕುಡಿಯುತ್ತಾ, ವಿಚಿತ್ರವಾದ ಪಾರ್ಟಿಗಳನ್ನು ಮಾಡುತ್ತಾ ಪೌಲ್ ಕಾಲಕಳೆಯುತ್ತಿದ್ದ. ಸ್ನೇಹಿತರೊಂದಿಗೆ ವಾಕರಿಕೆಯಾಗುವಷ್ಟು ತನ್ನ ಸ್ತ್ರೀಲೋಲತನದ ಬಗ್ಗೆ ಕೊಚ್ಚಿಕೊಳ್ಳುವುದಷ್ಟೇ ಅಲ್ಲದೆ, ಮನೆಯ ಹೊರಗೆ ತಾನು ನಡೆಸುತ್ತಿದ್ದ ಸ್ತ್ರೀಲಂಪಟತನದ ಕಥೆಗಳನ್ನು ಆತ ಕಾರ್ಲಾಗೆ ಸ್ವಾರಸ್ಯಕರವಾಗಿ ವರ್ಣಿಸುತ್ತಿದ್ದ. ಪೌಲ್ ನ ದಿನನಿತ್ಯದ ಒರಟುತನ, ಕೊಳಕು ಬೈಗುಳಗಳು, ದೈಹಿಕ ಹಿಂಸೆ… ಎಲ್ಲವೂ ಸದ್ದಿಲ್ಲದೆ ಮುಂದುವರಿಯುತ್ತಲೇ ಇದ್ದವು.
ಕಾರ್ಲಾ ಮತ್ತು ಪೌಲ್ ರ ನಿಶ್ಚಿತಾರ್ಥವಷ್ಟೇ ನೆರವೇರಿತ್ತು. ಕಾನೂನಿನ ಪ್ರಕಾರ ಅವರು ದಂಪತಿಗಳಾಗಿರಲಿಲ್ಲ. ಕಾರ್ಲಾ ಈ ಹೊತ್ತಿನಲ್ಲಾದರೂ ಪೌಲ್ ನ ರಾಕ್ಷಸಮುಷ್ಟಿಯಿಂದ ಪಾರಾಗಬೇಕಿತ್ತು. ಆದರೆ ಹಾಗೇನೂ ಆಗಲಿಲ್ಲ. ತಾನು ಪೌಲ್ ನನ್ನು ಬಿಟ್ಟು ಹೋದರೆ ಟ್ಯಾಮಿಯ ಸಾವಿನ ರಹಸ್ಯ ಹೊರಬರುವ ಬಗ್ಗೆ ಅವಳಿಗೆ ಚಿಂತೆಯುಂಟಾಗಿತ್ತು. ಅದಕ್ಕಿಂತಲೂ ಮೇಲಾಗಿ ಕಾರ್ಲಾ ಹೋಮೋಲ್ಕಾ ಇಂದಿಗೂ ಪೌಲ್ ನನ್ನು ಅಷ್ಟೇ ತೀವ್ರತೆಯಿಂದ ಪ್ರೀತಿಸುತ್ತಿದ್ದಳು. ಅವನ ಕುತಂತ್ರ, ದಾಷ್ಟ್ರ್ಯ, ಪೈಶಾಚಿಕತೆ, ಕಚ್ಚೆಹರುಕತನ, ಮುಂಗೋಪ ಯಾವುದೂ ಅವಳನ್ನು ಅಲ್ಲಾಡಿಸಿರಲಿಲ್ಲ. ಆತ ಮನೆಗೆ ಬಂದು ಏನಾದರೊಂದು ತಂದುಹಾಕುತ್ತಿದ್ದ, ಮತ್ತು ಆತ ಖುಷಿಯಾಗಿದ್ದ ಎಂಬ ಸತ್ಯವಷ್ಟೇ ಅವಳಿಗೆ ಬೇಕಾಗಿದ್ದಿದ್ದು. ಕನಸು ಮನಸಿನಲ್ಲೂ ಆತನಿಂದ ದೂರವಾಗುವ ಬಗ್ಗೆ ಕಾರ್ಲಾ ಯೋಚಿಸಲೇ ಇಲ್ಲ. ಕ್ರಮೇಣ ಪೌಲ್ ನ ಅಪಾಯಕಾರಿ ದೇಹತೃಷೆಯ ಬೇಟೆಯಲ್ಲಿ ಕಾರ್ಲಾಳೂ ಕೈಜೋಡಿಸತೊಡಗಿದ್ದಳು. ಬಹಳಷ್ಟು ಬಾರಿ ಪೌಲ್ ನ ಒತ್ತಡಕ್ಕೆ ಬಂದು ಮಾನವಬೇಟೆಗಳಲ್ಲಿ ಭಾಗಿಯಾಗುತ್ತಿದ್ದರೂ, ಇನ್ನು ಕೆಲವು ಬಾರಿ ಸ್ವಇಚ್ಛೆಯಿಂದಲೇ ತನ್ನನ್ನೂ ಆತನ ವಿಲಕ್ಷಣತೆಯಲ್ಲಿ ಒಂದಾಗಿಸುತ್ತಿದ್ದಳು. ಪೌಲ್ ನನ್ನು ಭೇಟಿಯಾಗುವ ಮುನ್ನ ಇದ್ದ ಸುಂದರಿ, ಮುಗ್ಧೆ ಕಾರ್ಲಾ ಹೊಮೋಲ್ಕಾ ಎಲ್ಲೋ ಕಳೆದುಹೋಗಿದ್ದಳು. ಈಗ ಇದ್ದಿದ್ದು ಪೌಲ್ ಬರ್ನಾರ್ಡೊನ ಒಂದು ಪ್ರತಿರೂಪವಷ್ಟೇ.
1991 ರ ಜೂನ್ ತಿಂಗಳಲ್ಲಿ ಕಾರ್ಲಾ ಹದಿನೈದರ ಹರೆಯದ ಜೇನ್ ಡೋ (ಪ್ರಚಲಿತ ಹೆಸರು) ಎಂಬ ಬಾಲಕಿಯನ್ನು ಪುಸಲಾಯಿಸಿ ಗಲ್ರ್ಸ್ ನೈಟ್-ಔಟ್ ಪಾರ್ಟಿಯ ನೆಪದಲ್ಲಿ ಪೋರ್ಟ್ ಡಾಲ್-ಹೌಸಿಯ ಬಂಗಲೆಗೆ ಕರೆತರುತ್ತಾಳೆ. ತನ್ನ ಮೃತ ಸಹೋದರಿ ಟ್ಯಾಮಿಗೆ ಮಾಡಿದಂತೆಯೇ ಮದ್ಯದಲ್ಲಿ ಹ್ಯಾಲ್ಸಿಯನ್ ಎಂಬ ಅಮಲಿನ ಮದ್ದನ್ನು ಬೆರೆಸಿ ಅವಳಿಗೆ ಕುಡಿಸುತ್ತಾಳೆ. ಪ್ರಜ್ಞೆ ತಪ್ಪಿ ಮಲಗಿದ ಬಾಲಕಿಯ ಮೇಲೆ ಇಬ್ಬರೂ ಸರದಿಯಂತೆ ಅತ್ಯಾಚಾರ ನಡೆಸುತ್ತಾ, ಜೊತೆಗೇ ವಿಡಿಯೋ ಚಿತ್ರೀಕರಣವನ್ನು ಮಾಡುತ್ತಾ ರಾತ್ರಿಯನ್ನು ಕಳೆಯುತ್ತಾರೆ. ಮರುದಿನ ಮೈಭಾರವೆಂದೆನಿಸಿದ ಜೇನ್ ಗೆ ತನ್ನ ಮೇಲೆ ನಡೆಸಿದ ಯಾವುದೇ ದೌರ್ಜನ್ಯದ ಅರಿವಿರುವುದಿಲ್ಲ. ಕುಡಿದು ಹೆಚ್ಚಾದ ಪರಿಣಾಮವೋ ಏನೋ ಎಂದು ಗೊಣಗುತ್ತಾ, ಆತಿಥೇಯರಿಗೆ ಕೈ ಬೀಸುತ್ತಾ ಜೇನ್ ಮನೆಗೆ ಮರಳುತ್ತಾಳೆ. ಕಾರ್ಲಾ-ಪೌಲ್ ರಿಂದ 1991 ರ ಆಗಸ್ಟ್ ತಿಂಗಳಲ್ಲಿ ತನಗರಿವಿಲ್ಲದಂತೆಯೇ ಜೇನ್ ಡೋ ಎರಡನೇ ಬಾರಿಗೆ ಅತ್ಯಾಚಾರಕ್ಕೊಳಗಾಗುತ್ತಾಳೆ. ಮುಂದೆ ವಿಚಾರಣೆಯಲ್ಲಿ ಕಾರ್ಲಾ ಹೊಮೋಲ್ಕಾ ದಾಖಲಿಸಿದ ಪ್ರಕಾರ ಇದೇ ಮಾದರಿಯ ಇನ್ನೂ ಕೆಲವು ಪ್ರಕರಣಗಳನ್ನು ಇಬ್ಬರೂ ಸೇರಿ ಮಾಡಿದ್ದರು. ಮತ್ತು ಈ ಬಾರಿ ಟ್ಯಾಮಿಯ ಒಂದಿಬ್ಬರು ಗೆಳತಿಯರು ಈ ಅಮಾನುಷ ದೌರ್ಜನ್ಯಕ್ಕೆ ಅವರಿಗೆ ಅರಿವಿಲ್ಲದಂತೆಯೇ ಬಲಿಯಾಗಿದ್ದರು.
***************
1991 ರ ಜೂನ್ ತಿಂಗಳಿನಲ್ಲಿ ಜೇನ್ ಡೋ ಪ್ರಕರಣದ ನಂತರದ ಕೆಲ ದಿನಗಳಲ್ಲೇ ಪೌಲ್ ಬರ್ನಾರ್ಡೊ ಕಾರಿನ ಲೈಸೆನ್ಸ್ ಪ್ಲೇಟುಗಳನ್ನು ಕದಿಯಲು ತನ್ನ ಕಾರಿನಲ್ಲಿ ಅಡ್ಡಾಡುತ್ತಿರುತ್ತಾನೆ. ಇದೇ ಹೊತ್ತಿನಲ್ಲಿ ಬರ್ಲಿಂಗ್ಟನ್ ಬ್ಲಾಕಿನ ಆಸುಪಾಸಿನಲ್ಲಿ ಅಡ್ಡಾಡುತ್ತಿರುವ ಹದಿನಾಲ್ಕರ ಬಾಲಕಿಯ ಮೇಲೆ ಈತನ ಕಾಕದೃಷ್ಟಿ ಬೀಳುತ್ತದೆ. ಕಾರನ್ನು ರಸ್ತೆಯ ಒಂದು ಮೂಲೆಯಲ್ಲಿ ಪಾರ್ಕಿಂಗ್ ಮಾಡುವ ಪೌಲ್ ಆಕೆಯೆಡೆಗೆ ತೆರಳಿ ನಿಧಾನವಾಗಿ ಮಾತಿಗೆಳೆಯುತ್ತಾನೆ. ನೋಡಲು ಸುಸಂಸ್ಕøತನಂತೆ ಕಾಣುವ, ಆಕರ್ಷಕವಾಗಿಯೂ ಇರುವ ಹಸನ್ಮುಖಿ ಪೌಲ್ ನನ್ನು ನೋಡಿ ಬೆಚ್ಚಿಬೀಳುವ ಅವಶ್ಯಕತೆಯೇನೋ ಅವಳಿಗೆ ಕಾಣಬರುವುದಿಲ್ಲ. ಹದಿನಾಲ್ಕರ ಪ್ರಾಯದ ಮುದ್ದು ಬಾಲಕಿ ಲೆಸ್ಲೀ ಮಹಾಫಿ ಪಾರ್ಟಿ ಮುಗಿಸಿ ತಡವಾಗಿ ಬಂದ ಪರಿಣಾಮ ಶಿಕ್ಷೆಯ ರೂಪವಾಗಿ ಮನೆಯ ಬಾಗಿಲು ಮುಚ್ಚಿರುತ್ತದೆ. ಲೆಸ್ಲಿಯ ಬೇಜವಾಬ್ದಾರಿತನ, ಹುಡುಗಾಟ, ಬಾಯ್ ಫ್ರೆಂಡ್ ಗಳ ಜೊತೆಗಿನ ಮಿತಿಮೀರಿದ ಒಡನಾಟ ಮುಂತಾದವುಗಳಿಂದ ರೋಸಿಹೋಗಿದ್ದ ಆಕೆಯ ಹೆತ್ತವರು ಮನೆಗೆ ಮರಳಲು ಒಂದು ನಿಗದಿತ ಅವಧಿಯನ್ನು ಗೊತ್ತುಮಾಡಿರುತ್ತಾರೆ. “ಕೊಟ್ಟ ಸಮಯದ ಒಳಗೆ ಮನೆಗೆ ಬಂದರೆ ಮುಗೀತು, ಇಲ್ಲದಿದ್ದರೆ ಇದೇ ಗತಿ'', ಎಂದು ಹೇಳಿ ಮುಗುಳ್ನಗುವ ಲೆಸ್ಲೀ ರಾತ್ರಿಯನ್ನು ಎಲ್ಲಿ ಕಳೆಯಲೆಂದೇ ಗೊತ್ತಾಗುತ್ತಿಲ್ಲ ಎಂದು ಹೇಳುತ್ತಾಳೆ. ಹಾಗೆಯೇ ಒಂದು ಸಿಗರೇಟ್ ಇದ್ದರೆ ಕೊಡು ಎಂದೂ ಲೆಸ್ಲಿ ಪೌಲ್ ನಲ್ಲಿ ಕೇಳುತ್ತಾಳೆ.
ಅವಕಾಶಕ್ಕಾಗೇ ಕಾದವನಂತೆ ಇದ್ದ ಪೌಲ್ ಬರ್ನಾರ್ಡೊ “ಸಿಗರೇಟು ಕಾರಿನಲ್ಲಿದೆ, ನನ್ನ ಜೊತೆ ಬಾ… ಕೊಡುವೆ…'' ಎಂದು ಹೇಳಿ ಕರೆದೊಯ್ಯುತ್ತಾನೆ. ಕಾರಿನ ಹತ್ತಿರ ಬರುತ್ತಿದ್ದಂತೆಯೇ ಬಲವಂತವಾಗಿ ಬಟ್ಟೆಯೊಂದನ್ನು ಅವಳ ಕಣ್ಣಿಗೆ, ಬಾಯಿಗೆ ಕಟ್ಟಿ, ಕಾರಿನೊಳಕ್ಕೆ ತಳ್ಳಿ, ಚಾಕು ತೋರಿಸಿ ನಿಮಿಷಕ್ಕೊಮ್ಮೆ ಕೊಲ್ಲುವೆನೆಂದು ಹೆದರಿಸುತ್ತಾ ಅವಳನ್ನು ತನ್ನ ಪೋರ್ಟ್ ಡಾಲ್-ಹೌಸಿಯ ಬಂಗಲೆಗೆ ಕರೆದೊಯ್ಯುತ್ತಾನೆ. ತನ್ನನ್ನು ಅತ್ತಿತ್ತ ಯಾರೂ ಗಮನಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಬಾಲಕಿಯನ್ನು ಸದ್ದಿಲ್ಲದೆ ಮನೆಯೊಳಕ್ಕೆ ಕರೆದುಕೊಂಡು ಬಂದು ಕೋಣೆಯಲ್ಲಿ ಕೂಡಿಹಾಕುತ್ತಾನೆ. ಬಟ್ಟೆ ಬದಲಾಯಿಸಲು ಒಳಕ್ಕೆ ತೆರಳುತ್ತಿದ್ದಂತೆಯೇ, “ಡಾರ್ಲಿಂಗ್.. ಇವತ್ತು ಆಟವಾಡಲು ಹೊಸ ಗೊಂಬೆಯನ್ನು ತಂದಿದ್ದೇನೆ'' ಎಂದು ಕಾರ್ಲಾಳನ್ನುದ್ದೇಶಿಸಿ ಹೇಳುತ್ತಾನೆ. ಬಡಪಾಯಿ ಲೆಸ್ಲೀ ಜೊತೆಗೂ ಟ್ಯಾಮಿ ಮತ್ತು ಜೇನ್ ಜೊತೆ ನಡೆದ ದೌರ್ಜನ್ಯಗಳೇ ಪುನರಾವರ್ತನೆಯಾಗುತ್ತವೆ. ಒಂದೇ ವ್ಯತ್ಯಾಸವೆಂದರೆ ಈ ಪ್ರಕರಣದಲ್ಲಿ ಲೆಸ್ಲೀ ಎಚ್ಚರವಾಗಿರುತ್ತಾಳೆ ಮತ್ತು ಅವಳ ಕಣ್ಣುಗಳಿಗೆ ಪಟ್ಟಿಯನ್ನು ಕಟ್ಟಿರಲಾಗುತ್ತದೆ.
ಒತ್ತಾಯದಿಂದ ಬೇಕಾಬಿಟ್ಟಿ ಮದ್ಯವನ್ನು ಲೆಸ್ಲಿ ಗೆ ಕುಡಿಸುವ ಕಾರ್ಲಾ ಮತ್ತು ಪೌಲ್, ಹದಿನಾಲ್ಕರ ಪುಟ್ಟ ಜೀವ ರೋದಿಸುತ್ತಿರುವಂತೆಯೇ ಇಬ್ಬರಿಂದಲೂ ಸರದಿಯಂತೆ ಬರ್ಬರ ಅತ್ಯಾಚಾರ, ಭೀಕರ ಹೊಡೆತ, ವೀಡಿಯೋ ಚಿತ್ರೀಕರಣಗಳು ನಡೆಯುತ್ತವೆ. ಹಿನ್ನೆಲೆಯಲ್ಲಿ ತಣ್ಣಗೆ ಬಾಬ್ ಮಾರ್ಲೆ ಮತ್ತು ಡೇವಿಡ್ ಬೋವಿಯರ ಹಾಡುಗಳು ಕೋಣೆಯ ಸ್ಪೀಕರ್ ನಲ್ಲಿ ಪ್ಲೇ ಆಗುತ್ತಿರುತ್ತವೆ. ಒಣಗಿದ ತರಗೆಲೆಯಂತೆ ನಡುಗುತ್ತಾ ತನ್ನನ್ನು ಬಿಟ್ಟುಬಿಡುವಂತೆ ಗೋಗರೆವ ಲೆಸ್ಲೀಯ ಕೂಗು ಅರಣ್ಯರೋದನವಾಗುತ್ತದೆ. ಈ ಗಡಿಬಿಡಿಯಲ್ಲಿ ಬಾಲಕಿಯ ಕಣ್ಣಿಗೆ ಕಟ್ಟಿದ ಪಟ್ಟಿಯು ಜಾರಿದ ಪರಿಣಾಮ ಪೌಲ್ ಕಂಗಾಲಾಗುತ್ತಾನೆ. ಲೆಸ್ಲೀಯನ್ನು ಬಿಟ್ಟರೆ ಅವಳು ಪೋಲೀಸರ ಬಳಿ ಹೋಗುತ್ತಾಳೆ ಮತ್ತು ತಮ್ಮಿಬ್ಬರನ್ನೂ ಕಂಬಿ ಎಣಿಸುವಂತೆ ಮಾಡುತ್ತಾಳೆ ಎಂದು ಯೋಚಿಸಿ, ಗಾಬರಿಯಾಗುವ ಪೌಲ್ ತಂತಿಯೊಂದನ್ನು ಬಾಲಕಿಯ ಕತ್ತಿಗೆ ಬಿಗಿದು ಸಾಯಿಸುತ್ತಾನೆ. ಲೆಸ್ಲೀಯ ದೇಹವನ್ನು ಬಂಗಲೆಯ ಬೇಸ್ ಮೆಂಟಿನಲ್ಲಿ ತಾತ್ಕಾಲಿಕವಾಗಿ ಬಚ್ಚಿಡಲಾಗುತ್ತದೆ. ಹೀಗೆ ಪೌಲ್ ಮತ್ತು ಕಾರ್ಲಾಳ ಪೈಶಾಚಿಕ ವಾಂಛೆಗೆ ಬಲಿಯಾದ ನತದೃಷ್ಟೆ ಲೆಸ್ಲಿ, 1991 ರ ಜೂನ್ 15 ರಂದು ಶವವಾಗುತ್ತಾಳೆ.
ಮರುದಿನ ಕಾರ್ಲಾಳ ತಂದೆ, ತಾಯಿ ಮತ್ತು ಕಾರ್ಲಾಳ ಮತ್ತೊಬ್ಬ ತಂಗಿ ಲೋರಿ ಹೊಮೋಲ್ಕಾ, ಪೋರ್ಟ್ ಡಾಲ್-ಹೌಸಿಯ ಬಂಗಲೆಗೆ ಬಂದು ಕಾರ್ಲಾ ಮತ್ತು ಪೌಲ್ ಜೊತೆ ಊಟ ಮಾಡಿ ತೆರಳುತ್ತಾರೆ. ಬಂದವರು ವಾಪಾಸು ಹೋದ ಮೇಲೆ ಬೇಸ್-ಮೆಂಟಿನಲ್ಲಿರುವ ಬಾಲಕಿಯ ಮೃತದೇಹವನ್ನೇನು ಮಾಡಬೇಕೆಂದು ಇಬ್ಬರಲ್ಲೂ ಚರ್ಚೆಯಾಗುತ್ತದೆ. ಕೊನೆಗೂ ಸಿಮೆಂಟ್ ಬಾಕ್ಸ್ ಗಳಲ್ಲಿ ದೇಹದ ತುಂಡುಗಳನ್ನು ತುರುಕಿ ಎಲ್ಲಾದರೂ ಎಸೆದು ಬರಲು ಪೌಲ್ ನಿರ್ಧರಿಸುತ್ತಾನೆ. ಮರುದಿನವೇ ಹತ್ತರಿಂದ ಹದಿನೈದು ಸಿಮೆಂಟು ಬ್ಯಾಗು ಮತ್ತು ಡಬ್ಬಗಳನ್ನು ಪಕ್ಕದ ಹಾರ್ಡ್ವೇರ್ ಅಂಗಡಿಯಿಂದ ಖರೀದಿಸುವ ಪೌಲ್, ಮನೆಗೆ ಬಂದು ಹಳೆಯ ವೃತ್ತಾಕಾರದ ಗರಗಸವೊಂದರಿಂದ ಲೆಸ್ಲೀಯ ಮೃತದೇಹವನ್ನು ಹಲವು ತುಂಡುಗಳಲ್ಲಿ ಕತ್ತರಿಸುತ್ತಾನೆ. ಡಬ್ಬಗಳಲ್ಲಿ ಬಾಲಕಿಯ ಒಂದೊಂದೇ ಕತ್ತರಿಸಿದ ಭಾಗಗಳನ್ನು ಇರಿಸಿ ಅದರಲ್ಲಿ ದಪ್ಪ ಸಿಮೆಂಟ್ ಮಿಶ್ರಣವನ್ನು ಸುರಿಯಲಾಗುತ್ತದೆ. ಕೊನೆಗೂ ಕಾರ್ಲಾಳ ಸಹಾಯದಿಂದ ಡಬ್ಬಗಳನ್ನು ಕಾರಿನಲ್ಲಿ ತುಂಬಿಸಿ, ಮನೆಯಿಂದ ಹದಿನೆಂಟು ಕಿಲೋಮೀಟರುಗಳಷ್ಟು ದೂರವಿದ್ದ ನಯಾಗರಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಲೇಕ್ ಗಿಬ್ಸನ್ ಎಂಬ ಕೊಳದಲ್ಲಿ ಭಾರದ ಡಬ್ಬಗಳನ್ನು ನೀರಿನಲ್ಲಿ ಎಸೆದು ಇಬ್ಬರೂ ವಾಪಾಸಾಗುತ್ತಾರೆ.
ಇಪ್ಪತ್ತನಾಲ್ಕು ಘಂಟೆಗಳು ಸರಿದರೂ ಮಗಳು ಮನೆಗೆ ಮರಳಿ ಬಾರದ ಪರಿಣಾಮ ಚಿಂತಿತರಾದ ಲೆಸ್ಲಿಯ ಹೆತ್ತವರು ಸ್ಥಳೀಯ ಸೈಂಟ್-ಕ್ಯಾಥರೀನ್ ಪೋಲೀಸರ ಮೊರೆ ಹೋಗುತ್ತಾರೆ. ಒಂದು ವಾರ ಸರಿದರೂ ನಾಪತ್ತೆಯಾದ ಲೆಸ್ಲಿಯ ಯಾವ ಸುಳಿವೂ ಪೋಲೀಸರಿಗೆ ಸಿಕ್ಕುವುದಿಲ್ಲ. ದಿನಗಳು ಉರುಳುತ್ತಿದ್ದಂತೆ ಬಾಲಕಿಯ ಹೆತ್ತವರಲ್ಲೂ, ಪೋಲೀಸ್ ಇಲಾಖೆಯಲ್ಲೂ ಬಾಲಕಿ ಜೀವಂತ ಉಳಿದಿರುವ ಸಾಧ್ಯತೆಗಳು ಕ್ಷೀಣಿಸುತ್ತಾ ಹೋಗುತ್ತವೆ. ಪಕ್ಕದ ಸ್ಕಾರ್-ಬೋರೋ ದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳಿಗೂ, ಈ ಪ್ರಕರಣಕ್ಕೂ ಯಾವುದೇ ಕೊಂಡಿಗಳಿರಬಹುದೇ ಎಂಬ ಮಾತುಗಳೂ ಹರಿದಾಡುತ್ತವೆ. ಲೆಸ್ಲಿಯ ಕೊಲೆಯಾದ ಎರಡು ವಾರಗಳ ಬಳಿಕ, ಅಂದರೆ 1991 ರ ಜೂನ್ 29 ರಂದು ಪ್ರತ್ಯಕ್ಷದರ್ಶಿಗಳೊಬ್ಬರು ಕೊಳದ ಬದಿಯಲ್ಲಿ ತೇಲುತ್ತಿರುವ ಕೆಲವು ಕಾಂಕ್ರೀಟ್ ಡಬ್ಬಗಳನ್ನು ಕಂಡು ಹೈರಾಣಾಗಿ ಸ್ಥಳೀಯ ಪೋಲೀಸರಿಗೆ ಸುದ್ದಿ ಮುಟ್ಟಿಸುತ್ತಾರೆ. ಅದರಲ್ಲೂ ತಲೆ ಮತ್ತು ಕೈಕಾಲುಗಳಿಂದ ಹೊರತಾಗಿದ್ದ ದೇಹದ ಭಾಗವು ಕಾಂಕ್ರೀಟಿನ ಡಬ್ಬದಿಂದ ಬೇರ್ಪಟ್ಟು, ತೇಲುತ್ತಾ ಕೊಳದ ದಂಡೆಗೆ ಬಂದು ಬಿದ್ದಿತ್ತು.
ಇಲಾಖೆಯ ಅಪರಾಧ ವಿಭಾಗದ ತಜ್ಞರು ಹತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಈ ಕಾಂಕ್ರೀಟು ಡಬ್ಬಗಳ ರಹಸ್ಯವನ್ನು ಬೇಧಿಸುತ್ತಾ, ಇವುಗಳು ನಾಪತ್ತೆಯಾದ ಹದಿನಾಲ್ಕರ ಬಾಲಕಿ ಲೆಸ್ಲೀ ಮಹಾಫಿಯ ದೇಹದ ಭಾಗಗಳು ಎಂಬುದನ್ನು ದೃಢಪಡಿಸುತ್ತಾರೆ. ಪತ್ತೆಯಾದ ದೇಹದ ಭಾಗಗಳ ಗುರುತು ಹಚ್ಚುವ ಪ್ರಕ್ರಿಯೆಯಲ್ಲೇ ಒಂದು ವಾರಗಳು ಕಳೆದಿರುತ್ತವೆ. ಲೆಸ್ಲಿ ಧರಿಸುತ್ತಿದ್ದ ದಂತಪಟ್ಟಿಗಳ ನೆರವಿನಿಂದ ಮತ್ತು ಇತರ ಡೆಂಟಲ್ ರೆಕಾರ್ಡುಗಳಿಂದಲೇ ಆ ದೇಹವು ಲೆಸ್ಲಿ ಮಹಾಫಿಯದ್ದೇ ಎಂದು ನಿಖರವಾಗಿ ಹೇಳುವಂತಾಯಿತು. ಲೆಸ್ಲಿಯ ಸಾವಿನೊಂದಿಗೆ ಸೈಂಟ್-ಕ್ಯಾಥರೀನ್ ಪೋಲೀಸರ ಸುಖನಿದ್ರೆಯೂ ಹಾರಿಹೋಗುತ್ತದೆ. ಕೊಲೆಯ ಭೀಕರತೆಯು ಸ್ಥಳೀಯ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತಲೇ ನಗರಕ್ಕೆ ನಗರವೇ ಬೆಚ್ಚಿಬೀಳುತ್ತದೆ. ಇಂಥಾ ಬರ್ಬರವಾದ ಕೊಲೆಯನ್ನೆಸಗಿದ ಕೊಲೆಗಾರನನ್ನು ಹಿಡಿಯಲು ಪೋಲೀಸರು ರಾತ್ರಿಹಗಲೆನ್ನದೆ ಬಲೆಬೀಸತೊಡಗುತ್ತಾರೆ.
ಸಿಮೆಂಟ್ ಮತ್ತು ಚೀಲಗಳ ಮಾದರಿಯನ್ನು ಪರೀಕ್ಷಿಸುವ ಇಲಾಖೆಯು ನಗರದ ಸುತ್ತಮುತ್ತಲ ಪ್ರದೇಶದಲ್ಲೇ ಇದನ್ನು ಖರೀದಿಸಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತದೆ. ಈ ಸಂಬಂಧ ಸಿಮೆಂಟುಗಳನ್ನು ನಿಗದಿತ ದಿನಗಳಲ್ಲಿ ಯಾರ್ಯಾರು ಖರೀದಿಸಿದ್ದಾರೆ ಎಂಬ ಕ್ಷೀಣ ಸುಳಿವಿನ ಬೆನ್ನುಹತ್ತುವ ಪೋಲೀಸರು, ಈ ಸಂಬಂಧ ಒಂದು ಸಾವಿರದ ನಾಲ್ನೂರಕ್ಕೂ ಹೆಚ್ಚಿನ ವ್ಯಕ್ತಿಗಳನ್ನು ಈಗಾಗಲೇ ಸಂದರ್ಶಿಸಿರುತ್ತಾರೆ. ದುರದೃಷ್ಟವಶಾತ್ ತಮ್ಮ ಕ್ಷಿಪ್ರ ಕಾರ್ಯಾಚರಣೆಗಳ ಹೊರತಾಗಿಯೂ ಸಫಲತೆಯೆಂಬುದು ದೂರದಲ್ಲೇ ನಿಂತು ಪೋಲೀಸರನ್ನು ಅಣಕಿಸುತ್ತಿರುತ್ತದೆ.
***************
(ಮುಂದುವರೆಯುವುದು)