(ಅ)ನ್ಯಾಯದಾನಕ್ಕೂ ಹದಿನೆಂಟು ವರ್ಷವೇ???: ಅಖಿಲೇಶ್ ಚಿಪ್ಪಳಿ


ಈ ದಿನ ಬೆಳಗ್ಗೆ (26/07/2016) ದಿನಪತ್ರಿಕೆಯ ಮುಖಪುಟದಲ್ಲೊಂದು ಸುದ್ಧಿಯಿತ್ತು. ಬಾಲಿವುಡ್ ನಟ ಸಲ್ಮಾನ್ ಖಾನ್ ನಿರಾಳ. ರಾಜಸ್ಥಾನದಲ್ಲಿ 1998ರಲ್ಲಿ ಕೊಂದ ಕೃಷ್ಣಮೃಗಗಳ ಮೊಕದ್ದಮೆಯಿಂದ ಬಿಡುಗಡೆ. ಪುಟ ತಿರುವಿದಾಗೆ ಇನ್ನೊಂದು ಸುದ್ದಿಯೂ ಇತ್ತು. ಮೂಡಿಗೆರೆಯಲ್ಲಿ ಅರಣ್ಯ ಪ್ರದೇಶವನ್ನು ಒತ್ತುವರಿ  ಮಾಡಿದವರಿಂದಲೇ 430 ಮರಗಳ ಮಾರಣ ಹೋಮ. ಇನ್ನೊಂದು ಪುಟ ಮಗುಚಿದರೆ ಬೀಜಿಂಗ್‍ನಲ್ಲಿ ಕಾರಿನಿಂದಿಳಿದ ಮಹಿಳೆಯನ್ನು ಹೊತ್ತೊಯ್ದ ಸಿಂಹ. ಇವು ಬೇರೆ ಬೇರೆ ಸುದ್ದಿಯೆಂದು ಮೇಲ್ನೋಟಕ್ಕೆ ಅನಿಸಿದರು, ಇವು ಒಂದಕ್ಕೊಂದು ಬೆಸೆದು ಕೊಂಡಿರುವುದನ್ನು ಕಾಣಬಹುದು. ಇರಲಿ ಇದು ಹೇಗೆ ಎಂಬುದನ್ನು ಕೊನೆಯಲ್ಲಿ ನೋಡೋಣ.

1998ನೇ ಇಸವಿ ಸೆಪ್ಟೆಂಬರ್ 26ನೇ ತಾರೀಖು, ರಾಜಸ್ಥಾನದ ಕಂಕಣಿ ಹಳ್ಳಿಯ ಗಿಡಗಂಟಿಗಳ ಮಧ್ಯದಲ್ಲಿ ಮೇಯುತ್ತಿದ್ದ ಕೃಷ್ಣಮೃಗಗಳ (ಬ್ಲಾಕ್ ಬಕ್) ಗುಂಪಿನ ಮೇಲೆ ಉನ್ಮತ್ತ ಸೆಲೆಬ್ರಿಟಿಗಳು ಗುಂಡು ಹಾರಿದರು. ಉದ್ದ ಕೋಡಿನ 2 ಸಾರಂಗಗಳು ಧರಾಶಾಯಿಯಾದವು. ಗುಂಡಿನ ಮತ್ತಿನಲ್ಲಿದ್ದ ಮನ್ಮಥರೂ ಆದ ಸಲ್ಮಾನ್ ಖಾನ್, ಸೈಫ್ ಆಲಿ ಖಾನ್ ಹಾಗೂ ಅಪ್ಸರೆಯರೂ ಆದ ಟಬು ಹಾಗೂ ಸೋನಾಲಿ ಬೇಂದ್ರೆಯೆಂಬ ಬಾಲಿವುಡ್ ನಟ-ನಟಿಯರ ಕೇಕೆ ಮುಗಿಲು ಮುಟ್ಟಿತು. ಕೊಂದ ತಪ್ಪಿಗೆ ತಿಂದೂ ಪರಿಹಾರವನ್ನು ಮಾಡಿದರು. ಇದು ಸಾಲದೆಂಬಂತೆ ಮತ್ತೆ ಸೆಪ್ಟೆಂಬರ್ 28ರಂದು ಸಂಜೆ ಮತ್ತೆ ಮೋಜು ಮಸ್ತಿ ಮಾಡುತ್ತಾ ಭಾವಡ್ ಹಾಗೂ ಮಥಾನಿಯ ಹಳ್ಳಿಗಳಲ್ಲಿ ಮತ್ತೆರೆಡು ಅಪರೂಪದ ಚಿಂಕಾರವನ್ನು ಬೇಟೆಗೈಯ್ದು ತಿನ್ನುತ್ತಾರೆ. ಮತ್ತಿನಲ್ಲಿ ತಾವೇನು ಮಾಡುತ್ತಿದ್ದೇವೆ ಎಂಬ ಅರಿವೇ ಅವರಿಗೆ ಇರಲಿಲ್ಲ. ತಾವು ಕೊಂದದ್ದು ಭಾರತದ ಅಪರೂಪದ ಪ್ರಾಣಿಯೆಂದು ತಿಳಿದಿರಲಿಲ್ಲ. ಇವರ ಕೃತ್ಯಗಳನ್ನೆಲ್ಲಾ ಗಮನಿಸಿದ ಅಲ್ಲಿನ ಬಿಷ್ಣೋಯ್ ಜನಾಂಗದವರು ಅಕ್ಟೋಬರ್ 2ರಂದು ದೂರನ್ನು ನೀಡುತ್ತಾರೆ. 10 ದಿನಗಳ ನಂತರ ಸಲ್ಮಾನ್ ಖಾನ್‍ನನ್ನು ಬಂಧಿಸಿ 5 ದಿನಗಳ ವಿಚಾರಣೆ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆ.

ಭಾರತದಲ್ಲಿ ಹಣವಿರುವವರು, ಯಶಸ್ಸಿನ ತುದಿಯಲ್ಲಿರುವ ಸೆಲೆಬ್ರಿಟಿಗಳು ಸುಲಭವಾಗಿ ಕಾನೂನಿನ ಕುಣಿಕೆಯಿಂದ ಪಾರಾಗುತ್ತಾರೆ. ಅಂತೂ 2006ರಲ್ಲಿ ವನ್ಯಜೀವಿ ಸಂರಕ್ಷಣಾ ಕಾನೂನಿನಡಿಯಲ್ಲಿ ಸಲ್ಮಾನ್ ಖಾನ್‍ಗೆ ಕೆಳಗಿನ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 25,000 ರೂಪಾಯಿಗಳ ದಂಡವನ್ನು ವಿಧಿಸುತ್ತದೆ. ಇದನ್ನು ಪ್ರಶ್ನಿಸಿ ಇದೇ ಸಲ್ಮಾನ್ ಖಾನ್ ಜಿಲ್ಲಾ ನ್ಯಾಯಾಲಯದ ಮೊರೆ ಹೋಗುತ್ತಾನೆ. 2007ರಲ್ಲಿ ತೀರ್ಪು ನೀಡಿದ ಜಿಲ್ಲಾ ನ್ಯಾಯಾಲಯ ಕೆಳಗಿನ ನ್ಯಾಯಾಲಯದ ಆದೇಶವನ್ನೇ ಎತ್ತಿ ಹಿಡಿಯುತ್ತದೆ. ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮತ್ತೆ ರಾಜಸ್ಥಾನದ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗುತ್ತದೆ. ಸುಧೀರ್ಘ 12 ವರ್ಷಗಳ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯ ಇದೇ ಸೆಲಬ್ರಿಟಿಯನ್ನು ನಿರ್ದೋಷಿ ಎಂದು ಬಿಡುಗಡೆ ಮಾಡುತ್ತದೆ. 

ಇಲ್ಲಿ ಕೆಲವೊಂದು ಪ್ರಶ್ನೆಗಳು ಮೂಡಿ ಬರುವುದು ಸಹಜ. ಇದನ್ನೇ ಇನ್ನೊಬ್ಬ ಖ್ಯಾತ ಅಭಿನೇತ್ರಿ ರೇಣುಕಾ ಸಹಾನೆ ಎತ್ತಿದ್ದಾರೆ. ಸಾರಂಗದ ಭೇಟೆಯಾಟದ ಮೊಕದ್ದಮೆಯಲ್ಲಿ ಸೈಫ್ ಆಲಿ ಖಾನ್, ಟಬು ಹಾಗೂ ಸೋನಾಲಿಯನ್ನು ಯಾಕೆ ಕೈಬಿಡಲಾಯಿತು. ಸಲ್ಮಾನ್ ಖಾನ್ ಜಿಂಕೆಗಳನ್ನು ಕೊಂದಿಲ್ಲವೆಂದರೆ, ಮತ್ಯಾರು ಕೊಂದದ್ದು? ಇಂಗ್ಲೀಶ್‍ನಲ್ಲಿ ಸಲ್ಮಾನ್ ಖಾನ್ ಹತ್ಯೆ ಮಾಡಿದ ಜಿಂಕೆಗಳಿಗೆ ಬ್ಲಾಕ್ ಬಕ್ ಎನ್ನುತ್ತಾರೆ. ಹಣಕ್ಕೂ ಬಕ್ ಎಂದು ಹೇಳಲಾಗುತ್ತದೆ. ಹಾಗಾದರೆ ಇಲ್ಲಿ ಕೊಂದ ನಾಲ್ಕು ಬಕ್‍ಗಳಿಗೆ (2 ಬ್ಲಾಕ್ ಬಕ್ ಹಾಗೂ 2 ಚಿಂಕಾರ) ಬದಲಾಗಿ ಎಷ್ಟು ಬಕ್ (ಹಣ)ವನ್ನು ಎರಚಲಾಯಿತು???

ತನ್ಮಧ್ಯೆ ತಾನೊಬ್ಬ ಅತೀ ಗಣ್ಯ ವ್ಯಕ್ತಿಯಾಗಿದ್ದು, ನನ್ನಿಂದ ಈ ದೇಶಕ್ಕೆ ಆರ್ಥಿಕವಾಗಿ ಲಾಭವಿದೆ. ಹಾಗಾಗಿ ತನಗೆ ವಿದೇಶಕ್ಕೆ ಹೋಗಲು ಅನುಮತಿ ನೀಡಬೇಕು, ತನ್ನ ವಿದೇಶ ಪ್ರವಾಸದಿಂದ ಭಾರತ ಸರ್ಕಾರಕ್ಕೆ ವಿದೇಶಿ ವಿನಿಮಯದ ಮೂಲಕ ಲಾಭವಾಗುತ್ತದೆ ಎಂದು ಉಚ್ಛ ನ್ಯಾಯಾಲಯಕ್ಕೆ ಮನವಿ ಸಲ್ಲಿಸುತ್ತಾನೆ. ಯಾವುದೇ ವಿದೇಶ ಭೇಟಿಗೆ ಅವಕಾಶವಿಲ್ಲವೆಂದು ಜಿಲ್ಲಾ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿ ಉಚ್ಛ ನ್ಯಾಯಾಲಯವು ಆತನಿಗೆ ಲಂಡನ್‍ಗೆ ಹೋಗಲು ಅನುಮತಿ ನೀಡಿತ್ತದೆ.

1998ರಲ್ಲಿ ದೇಶದಲ್ಲಿ ಅತ್ಯಂತ ದೊಡ್ಡ ಸುದ್ದಿಯಾಗಿದ್ದ ಕೃಷ್ಣಮೃಗಗಳ  ಹತ್ಯೆ ಜನಮಸ್ತಕದಲ್ಲಿ ಕ್ರಮೇಣ ಅಳಿಸಿಹೋಯಿತು. ಹಾಗಂತ ತಪ್ಪನ್ನು ಸರಿಪಡಿಸಿಕೊಂಡು ಸಭ್ಯ ನಾಗರೀಕನಾಗುವತ್ತ ಸಲ್ಮಾನ್‍ನ ಮನಸ್ಸು ಬದಲಾಯಿತೇ? ಇಲ್ಲ. ಕುಡಿದು ಗಾಡಿ ಚಲಾಯಿಸಿ, ಅಮಾಯಕರನ್ನು ಹತ್ಯೆಗೈದ. ಹಾಗೂ ಹಣ ವಶೀಲಿಬಾಜಿಯಿಂದ ಆ ಮೊಕದ್ದಮೆಯಿಂದಲೂ ಬಚಾವಾದ. ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪರಿಚ್ಛೇದ 1 ರಲ್ಲಿ ದಾಖಲಾಗಿರುವ ಬ್ಲಾಕ್ ಬಕ್ ಮತ್ತು ಚಿಂಕಾರಗಳನ್ನು ಕೊಂದು, ತಿಂದು ಬಚಾವಾಗುತ್ತಾನೆಂದರೆ, ಹೇಗಿದೆ ನಮ್ಮಲ್ಲಿ ನ್ಯಾಯದಾನದ ವ್ಯವಸ್ಥೆ? ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮೊನ್ನೆ ಡ್ಯೂಪ್ ಪರೀಕ್ಷೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದ ನರಸಿಂಗನೆಂಬ ಕುಸ್ತಿಪಟು ಸಿಕ್ಕಿಬಿದ್ದು ಅನರ್ಹಗೊಂಡನಲ್ಲ. ನರಸಿಂಗನ ಬದಲಿಗೆ ಸಲ್ಮಾನ್ ಖಾನ್‍ನನ್ನು ಕಳುಹಿಸಿದ್ದರೆ, ಡ್ಯೂಪ್ ಪರೀಕ್ಷೆಯಲ್ಲಿ ಸಿಕ್ಕಿಬೀಳುತ್ತಿರಲಿಲ್ಲವೆಂದೂ ವ್ಯಂಗ್ಯವಾಡಲಾಗಿದೆ.

ಮೂಡಿಗೆರೆ ತಾಲ್ಲೂಕಿನ ಹಾದಿಓಣಿ ಗ್ರಾಮದಲ್ಲಿನ 430 ಬೆಳೆದ ಮರಗಳನ್ನು ಸಾಯಿಸಲಾಗಿದೆ. ಇದಕ್ಕೆ ಕಾರಣವಾಗಿದ್ದು ಫಿಲೋಮಿನ ಪೆರಿಸ್ ಎಂಬ ಮಹಿಳೆ. ಈಕೆ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದರು. ರಾಜಕೀಯ ಸ್ಥಿತ್ಯಂತರಗಳಲ್ಲಿ ಲಾಭ ಹುಡುಕುವ ಸಲುವಾಗಿ ಅತ್ತ ಬಿಜೆಪಿಗೂ ಹಾಗೂ ಜೆ.ಡಿ.ಎಸ್.ಗೂ ಜಿಗಿದು ಸುದ್ದಿ ಮಾಡಿದ್ದರು. ಅರಣ್ಯ ಇಲಾಖೆಯ ಪ್ರಕಾರ 134 ಎಕರೆ ಪರಿಭಾವಿತ ಅರಣ್ಯವನ್ನು ಆರೋಪಿ ಒತ್ತುವರಿ ಮಾಡಿಕೊಂಡಿದ್ದಾರೆ ಹಾಗೂ ಅರಣ್ಯ ಪ್ರದೇಶದ ಭೌಗೋಳಿಕ ಲಕ್ಷಣಗಳನ್ನು ಅಳಿಸಿಹಾಕುವ ಸಲುವಾಗಿ ಅಂಚಿನಲ್ಲಿರುವ 430 ಮರಗಳ ತೊಗಟೆಯನ್ನು ಕೆತ್ತಿ ಕೊಂದು ಹಾಕಲಾಗಿದೆ ಎಂದು ದೂರಿದ್ದಾರೆ. ಈ ಕುರಿತು ತೊಗಟೆ ತೆಗೆದಿದ್ದರಿಂದಲೇ ಮರಗಳ ಸಾವು ಆಗಿದೆಯೇ ಅಥವಾ ಇನ್ಯಾವುದೋ ಬೇರೆ ಕಾರಣವಿದೆಯೇ ಎಂದು ಪತ್ತೆ ಮಾಡಲು ಕೊಪ್ಪದ ಉಪಸಂರಕ್ಷಣಾಧಿಕಾರಿಗಳು ಬೆಂಗಳೂರಿನ ಮರ ವಿಜ್ಞಾನ ಸಂಸ್ಥೆಯೊಂದಿಗೆ ಪತ್ರ ವ್ಯವಹಾರವನ್ನು ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಮರ ವಿಜ್ಞಾನಿಗಳ ತಂಡ ಜನವರಿ 19 ಹಾಗೂ 20, 2016ರಂದು ಫಿಲೋಮಿನ ಒಡೆತನದ ಆವಂತಿ ಎಸ್ಟೇಟ್‍ಗೆ ಭೇಟಿ ನೀಡಿ ಪರಿಶೀಲಿಸಿ, ಎಲ್ಲಾ 430 ಮರಗಳ ಸುತ್ತಲಿನ ತೊಗಟೆಗಳನ್ನು ಕೆತ್ತಿದ್ದರಿಂದಲೇ ಮರಗಳ ಸಾವು ಆಗಿದೆ ಎಂದು ವರದಿ ನೀಡಿದ್ದಾರೆ. ಈ ವರದಿಯನ್ನು ಆಧರಿಸಿ ಅಲ್ಲಿನ ವಲಯ ಅರಣ್ಯಾಧಿಕಾರಿಗಳು ಎಫ್.ಐ.ಆರ್ ದಾಖಲಿಸಿ ಮುಂದಿನ ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಯಥಾ ಪ್ರಕಾರ ರಾಜಕೀಯವಾಗಿ ಪ್ರಬಲವಾಗಿರುವ ಫಿಲೋಮಿನ ಪೆರಿರಾ ಅರಣ್ಯ ಇಲಾಖೆಗೆ ಸವಾಲು ಎಸೆದಿದ್ದಾರೆ. ನಾನಾಗಲಿ ಅಥವಾ ನನ್ನ ಕೆಲಸಗಾರರಾಗಲಿ ಮರಗಳ ತೊಗಟೆಯನ್ನು ಕೆತ್ತಿದ್ದೇವೆ ಎಂಬುದಕ್ಕೆ ಸಾಕ್ಷಿ ಏನಿದೆ. ಅರಣ್ಯ ಇಲಾಖೆಯವರು ಫೋಟೊ ಹೊಡೆದು ಇಟ್ಟುಕೊಂಡಿದ್ದಾರೋ?. ಸದರಿ ತೋಟವನ್ನು ನಾನು 1985ರಲ್ಲಿ ಖರೀದಿ ಮಾಡಿದ್ದೇನೆ. 25 ಎಕರೆ ಒತ್ತವರಿ ಇದ್ದದ್ದು ನಿಜ. ಅದನ್ನೂ ಮಂಜೂರು ಮಾಡಿಕೊಡಲು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ತೊದಲಿದ್ದಾರೆ. 

ಈ ಮೂರನೇ ಘಟನೆ ಮೇಲಿನ ಎರಡು ಘಟನೆಗಳಿಗಿಂತಲೂ ಭಿನ್ನವಾಗಿದೆ. ಇದರಲ್ಲಿ ಖುದ್ದು ಮಹಿಳೆಯೊಬ್ಬಳು ಸಿಂಹದ ಬಾಯಿಗೆ ಆಹಾರವಾಗಿದ್ದಾಳೆ. ಈ ಘಟನೆ ನಡೆದದ್ದು ಚೀನಾದ ಬೀಜಿಂಗ್‍ನಲ್ಲಿ. ಇದರಲ್ಲಿ ವನ್ಯಜೀವಿ ಸಂರಕ್ಷಣಾ ಪ್ರದೇಶದಲ್ಲಿ ನಿಯಮ ಮೀರಿ ಕಾರಿನಿಂದ ಇಳಿದ ಮಹಿಳೆ ಪ್ರಾಣ ತೆರಬೇಕಾಗಿ ಬಂದಿದೆ. ಭಾರತದಲ್ಲಿ ಸಾಮಾನ್ಯವಾಗಿ ರಾಷ್ಟ್ರೀಯ ಉದ್ಯಾನವನಗಳಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶ ನಿರಾಕರಿಸಲಾಗುತ್ತದೆ. ಆದರೆ ಚೀನಾದಲ್ಲಿ ಖಾಸಗಿ ವಾಹನವನ್ನು ರಾಷ್ಟ್ರೀಯ ಉದ್ಯಾನದ ಪರಿಧಿಯಲ್ಲಿ ತೆಗೆದುಕೊಂಡು ಹೋಗಬಹುದು. ನಿಯಮದ ಪ್ರಕಾರ ಕಾರಿನಿಂದ ಯಾವುದೇ ಕಾರಣಕ್ಕೂ ಇಳಿವಂತಿಲ್ಲ. ಈ ಘಟನೆಯಲ್ಲಿ ಹಿಂಸ್ರಪಶುವೆಂದು ಕರೆಯಲಾಗುವ ಸಿಂಹವು ಸ್ವಾಭಾವಿಕವಾಗಿಯೇ ವರ್ತಿಸಿದೆ. ಮಂಗನಾಗಲಿ ಅಥವಾ ಮಾನವನಾಗಲಿ ಅದಕ್ಕೆ ವ್ಯತ್ಯಾಸವಿಲ್ಲ. ಅದು ಅದರ ರೂಡಿಗತ ಆಹಾರಪದ್ಧತಿಯಷ್ಟೆ ಆಗಿದೆ. ಹೀಗಾಗಿ ಇಲ್ಲಿ ಸಿಂಹವನ್ನು ಹಿಂಸ್ರಪಶುವೆಂದು ದೂರುವುದು ಹಾಗೂ ಮಹಿಳೆಯ ಪರವಾಗಿ ನಿಲ್ಲುವುದು ಮೂರ್ಖತನವಾಗುತ್ತದೆ. ಆತ್ಮಹತ್ಯೆಗೆ ಸಮೀಪವಾದ ಅಚಾತುರ್ಯದ ಕೆಲಸವನ್ನು ಆ ಮಹಿಳೆ ಎಸಗಿದ್ದಾಳೆ ಎಂದಷ್ಟೇ ಹೇಳಬಹುದು. 

ಕೃಷ್ಣಮೃಗಗಳ ಭೇಟೆಯಾಡುವ ಪ್ರಸಂಗ ಸೃಷ್ಟಿಯಾದದ್ದು ಒಂದು ಸಿನಿಮಾದ ಶೂಟಿಂಗ್‍ಗೋಸ್ಕರ ರಾಜಸ್ಥಾನಕ್ಕೆ ತೆರಳಿದಾಗ. ಆ ಸಿನಿಮಾದ ಹೆಸರನ್ನು ಕನ್ನಡಿಸಿದರೆ, ಅದ ಅರ್ಥ ಹೀಗಿರುತ್ತದೆ “ನಾವೆಲ್ಲಾ ಒಂದು” (ಹಮ್ ಸಾಥ್ ಸಾಥ್ ಹೈ). ಕೃಷ್ಣಮೃಗದ ಭೇಟೆಗೆ ಸಂಬಂಧಿಸಿದಂತೆ ಚಲನಚಿತ್ರದ ಶೀರ್ಷಿಕೆಯನ್ನು ವಿಶ್ಲೇಷಿಸಿದರೆ, ನಾವು ಮನುಷ್ಯರು ಮಾತ್ರ ಒಂದು ಎಂದಾಗಲಿ, ಅಥವಾ ನಾವು ಸೆಲೆಬ್ರಿಟಿಗಳು ಮಾತ್ರ ಒಂದು ಎಂದಾಗಲಿ, ಅಥವಾ ನಾವು ಹಣವಂತರು ಎಂದಾಗಲಿ ಆಗುತ್ತದೆಯೇ ಹೊರತು. ಒಂದು ಎಂದರೆ ಕುವೆಂಪುರವರ ವಿಶ್ವಮಾನವತನವನ್ನು ಸಾರಿದಂತಾಗುವುದಿಲ್ಲ. ಫಿಲೋಮಿನ ಫೆರಿರಾ ಘಟನೆಯೂ ಅಷ್ಟೇ. ಸರ್ಕಾರಕ್ಕೆ ಸೇರಿದ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಅನುಭವಿಸುತ್ತಿರುವುದಲ್ಲದೇ, ಅರಣ್ಯ ಪ್ರದೇಶವೆಂದು ಗುರುತಿಗಾಗಿ ನೆಟ್ಟ ಫಲಕಗಳನ್ನು ಕದ್ದ ಪ್ರಭಾವಿಗಳ ಮೇಲೆ ತುರ್ತಾಗಿ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಇಲ್ಲವಾದಲ್ಲಿ, ಈ ಘಟನೆಯೂ ಮುಂದೊಂದು ದಿನ ಸರಿಯಾದ ಸಾಕ್ಷ್ಯವಿಲ್ಲದೇ ಸೊರಗಿ ಹೋಗುವ ಅಪಾಯವಿದೆ.

ಮೇಲಿನ ಮೂರು ಘಟನೆಗಳು ಮನುಷ್ಯರಿಗೆ ನೇರವಾಗಿ ಸಂಬಂಧಿಸಿದ್ದಾರಿಂದಲೇ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಿತು. ಕೃಷ್ಣಮೃಗದಂತಹ ಅಪರೂಪದ ಪ್ರಾಣಿಯ ಪರವಾಗಿ ವಾದಿಸಲು ಬಿಷ್ಣೋಯ್ ಜನಾಂಗವಿತ್ತು. ಆದರೂ ಈ ಅನ್ಯಾಯದಾನದ ದೀರ್ಘ ಅವಧಿಯನ್ನು ಎದುರಿಸಲು ಆ ಜನಾಂಗಕ್ಕೆ ಸಾಧ್ಯವಾಗಲಿಲ್ಲ. ಸೆಲೆಬ್ರಿಟಿಗಳನ್ನು ಕಾಪಾಡಲು ರಾಜಕೀಯ ವ್ಯವಸ್ಥೆ ಇದ್ದೇ ಇರುತ್ತದೆ. ಈ ಅಂಶ ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ. ವನ್ಯಜೀವಿಗಳ ಹಕ್ಕಿನ ಪರವಾಗಿ ಮಾನವ ಕೇಂದ್ರಿತ ವ್ಯವಸ್ಥೆಯಲ್ಲಿ ಯಾರಾದರೂ ವನ್ಯಪ್ರೇಮಿಗಳೇ ದಾವೆ ಹೂಡಬೇಕು. ಕೊಲೆಗೀಡಾದ ಕೃಷ್ಣಮೃಗದ ತಾಯಿಯೋ ಅಣ್ಣನೋ ಅರ್ಜಿ ಸಲ್ಲಿಸಲು ಬರುವುದಿಲ್ಲವಲ್ಲ.

ನಮ್ಮ ಎಲ್ಲಾ ರೀತಿಯ ವರ್ತನೆಗಳು ಮಾನವ ಕೇಂದ್ರಿತ ಆಗಿದ್ದೇ ಈ ಮೂರು ಘಟನೆಗಳು ಬೆಸೆದುಕೊಂಡಿರುವುದರ ಸಮಾನ ಅಂಶ. ಮೊದಲಿನ ಎರಡು ಘಟನೆಗಳಲ್ಲಿ ಪೋಲೀಸ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿದು ಹೋಗುವಂತಹ ಪರಿಸ್ಥಿತಿ ಇದೆ. ಮೂರನೆಯ ಘಟನೆಯಲ್ಲಿ ಅಜಾಗರೂಕತೆಗೊಂದು ಎಚ್ಚರಿಕೆಯ ಪಾಠವಿದೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Sreenath M V
Sreenath M V
7 years ago

ಮೂರು ವಿಭಿನ್ನ ಘಟನೆಗಳನ್ನು ಸಮೀಕರಿಸಿರುವ ರೀತಿ ಅದ್ಭುತ. ಆದರೆ, ನ್ಯಾಯ ಸೋತು ಅನ್ಯಾಯ ವಿಜೃಂಭಿಸಿದೆ. ಭಾರತ, ಇಂಥ ಅನ್ಯಾಯಗಳಿಲ್ಲದ ದೇಶ ಆಗುವುದು ಯಾವಾಗ?

Akhilesh Chipli
Akhilesh Chipli
7 years ago

ಆಶಾದಾಯಕ ಭಾವನೆಯಿಂದಲೇ ಕಾದು ನೋಡೋಣ ಶ್ರೀನಾಥ್ ಜೀ. ಪ್ರತಿಕ್ರಿಯೆಗಾಗಿ ಧನ್ಯವಾದಗಳು. ನಿಮ್ಮ ಸಹಕಾರ ಹೀಗೆ ಇರಲಿ.

2
0
Would love your thoughts, please comment.x
()
x