ಪಂಜು ಕಾವ್ಯಧಾರೆ

ಕನಸ್ಫುರಣೆ:
 
ಹಾಡು ಹರಿಯದೆಯೇ ರಾಗ ಸೃಜಿಸಿದೆ 
ಮಧುರ ಗಾನಕೆ ಸೆರೆಯಾಗಿ 
ಭಾವ ತೊರೆಯದೆಯೇ ಮೌನ ಮಿಡಿದಿದೆ 
ಕನಸ ಸಾಲಿಗೆ ಕರೆಯಾಗಿ 
ಮಾತು ಹಾಡಾದಾಗ, ಮೌನಭಾವವರಿತಾಗ 
ಕಾವ್ಯ ಹೊಮ್ಮಿದ ಪರಿಯಂತೆ 
ಕೌತುಕ ಕಾಡಿದ ಹಾಡು ನನ್ನ ಪಾಡು..!
 
ತುಟಿ ವೊಡೆಯದಲೇ ನಗು ಸುರಿದದಂಗೆ 
ಪುಳಕನಿನ್ನಾಟ ನೆನೆದು ಬೆರಗಾಗಿ 
ಕಣ್ಣು ಮಿಟುಕದೆಯೇ ನೀರು ಹರಿದಂಗೆ 
ವಿರಹ ತಾಳದೆಯೆ ನೋವಾಗಿ
ನಗುವತಿಯಾಗಿ ಹನಿಯುರುಳಿದಾಗ 
ಸಂವೇದನೆ ಚಿಮ್ಮಿದ ಝರಿಯಂತೆ  
ವೇದನೆಯ ಹಾಡು ನನ್ನ ಜಾಡು..!
 
ಕಾವ್ಯ ಸಾಲಿನ ಭಾವ ಮೀರಿದಾ ಭಾವ ಮನಕೆ.. 
ಶ್ರಾವ್ಯ ಹಾಡಿನಾ ರಾಗ ತೀರದಾ ರಾಗ ಸ್ವರಕೆ 
ಮಿಡಿದ ಹೃದಯ ಶ್ರುತಿಯ ಹಿಡಿದು
ಮೌನ ಸೆಳೆವ ಪ್ರೀತಿ ತುಡಿವ ಮನ್ವಂತರವೇ..
ಬಾಳಿಗೆ ತಾ ಬೆಳಕ ಸಾಲನ್ನು
ಬೆಳಗಿಸು ಎನ್ನ ಮನದ ಉಸಿರ ಬಸಿರನ್ನು 
ಪ್ರೀತಿಯ ನವಗೂಸ ನಗುವನ್ನು..!

ವಿನಯ್ ಭಾರದ್ವಾಜ್ 

 

 

 

 

 

ಗುರು ಹಿರಿಮೆ

ಬ್ರಹ್ಮ ವಿಷ್ಣು ಮಹೇಶ್ವರ, ಗುರುವೆ ಇವರ ಅವತಾರ
ಸೃಷ್ಟಿಸ್ಥಿತಿಲಯ ಕಾರ್ಯಗಳ, ಮಾಡುವ ಒಬ್ಬನೆ ಸರದಾರ ||ಪ||

ಕಲಿಸಲುಬೇಕು, ನಡೆಸಲುಬೇಕು, ತಿದ್ದಿ ತೀಡುವ ಹರಿಕಾರ 
ಸಾಧನೆ ಮಾಡುವ ಸಾಧಕನೇ, ತಿಳಿಯೊ ಗುರುವೇ ಗೆಣೆಕಾರ! 
ಗುರುವಿರಬೇಕು, ಗುರಿಯಿರಬೇಕು, ಬೆಳೆಯುವ ಮಕ್ಕಳಿಗೆ
ಭಾವಿ ಭಾರತಕೆ ಧಾತ್ರನಾಗಲು ಯೋಚಿಸೊ ಅರೆಗಳಿಗೆ |೧|                          

ವಿನಾಶಕಾಲಕೆ ವಿಪರೀತ ಬುದ್ಧಿಯ ತೋರುವ ನಡತೆಯ ವಿದ್ಯಾರ್ಥಿ
ಕಲಿಯುವ ಮನಕೆ ಕಲ್ಮಷ ಬೆರೆಸಿ ಘಾತುಕನಾಗಿಹ ಇವ ಬಲು ಸ್ವಾರ್ಥಿ
ವಿದ್ಯೆಯ ಕಲಿಯಲು ಗುಲಾಮನಾದನು ಶಿಷ್ಯನು ಆ ದಿನದಿ
ವಿದ್ಯೆಯ ಕಲಿಸಲು ಗುಲಾಮನಾಗಿಹ ಗುರುವೇ ಈ ದಿನದಿ   ||೨||  

ಗುರುವಿನ ಗುಲಾಮನಾದಾಗ ಅರಿವಿನ ಜ್ಯೋತಿಯು ಬೆಳಗುವುದು
ಅರ್ಥೀ ಎನ್ನುತಾ ನೀ ಬರಲು ಜ್ಞಾನದ ಹೊನಲು ಹರಿಯುವುದು 
ಪುಣ್ಯಕೋಟಿಯು ಶಿಷ್ಯಕೋಟಿಗೆ  ಗುರುವು ಬಿಡು ಭಯವು
ಬತ್ತಿದ ಹಣತೆಯ ಬತ್ತಿಗೆ ತೈಲವ ಎರೆಯುವನು ಗುರುವು ||೩||                    

ಧರಣಿಯ ಗುಣದ ದೊರೆಯಾಗಿಹರು ಗುರುಗಳು ತಾಯಂತೆ
ಧರೆಯ ಆಳುವ ವಿದ್ಯೆಯ ಕಲಿಕೆಗೆ ದಾರಿಯು ನಮಗಂತೆ
ಕಷ್ಟ ನಷ್ಟದ ಅರಿವಿನ ಬುತ್ತಿಯು ದೊರೆಯುವುದವರಿಂದ 
ಶಿಸ್ತಿನ ಕಲಿಕೆಗೆ ಜೀವನಪಥಕೆ  ಕೈಮರ  ಗುರುವಂತೆ ||೪||
– ಪಿ.ಎಂ.ಸುಬ್ರಮಣ್ಯ, ಬ.ಹಳ್ಳಿ.

 

 

 

 

 

 

ಪದ್ಯ

ಕಬೋರ್ಡಿನ ತಳದಲ್ಲಿ  ಮಲಗಿರುವ ಹಾಜರಾತಿ ಪುಸ್ತಕದಲ್ಲಿ ನಿನ್ನ ಮಸುಕಿದೆ!
ಸುಮ್ಮನೆ ನಿಂತ ಕಪ್ಪು ಹಲಗೆಯಲ್ಲಿ ನಿನ್ನ ಧೂಳಿದೆ!
ಬೆಚ್ಚಗೆ  ಕುಳಿತ ಆ ಕೊನೆ  ಕೋಣೆಯಲ್ಲಿ ನಾಯಿ ಮರಿ ತಿಂಡಿಗಾಗಿ ಕಾಯುತ್ತಿದೆ!
ರಾತ್ರಿಯ ಮನೆಪಾಠದಲ್ಲಿ ಚಂದಮಾಮ ಓಡಿ ಹೋಗಿದ್ದಾನೆ!

ಉತ್ತರ ಪತ್ರಿಕೆಯ ಅಂಕಗಳ ಮಾಸಿದ ಕೆಂಪು ಬಣ್ಣದಲ್ಲಿ ನಿನ್ನ ಸಹಿ ಇದೆ
ಮೂಲೆಗೆ ಬಿದ್ದಿರುವ ಖಾಲಿ ಊಟದ ಡಬ್ಬಿಯಲ್ಲಿ  ನಿನ್ನ ಅಕ್ಷಯದ ನೆನಪಿದೆ
ಮೋಟು ಪೆನ್ಸಿಲ್ನ ತುದಿ ಕಡೆ ಅಕ್ಷರದ ಸಾರ್ಥಕಕ್ಕಾಗಿ ಬಾಣದ ಮೇಲಿನ  ಭೀಷ್ಮನಂತೆ ಮಲಗಿದೆ!
ಒಂದೂರಿನ ಆಲದ ಮರ, ಊಟದ ಸ್ಪರ್ಧೆ, ನರಿಯ ಉಪಾಯ ಪಾಠಗಳು ಅರ್ಧಕ್ಕೆ ನಿಂತಿದೆ!

ಢಣ ಢಣ ಘಂಟೆ ನಾಲ್ಕಾದರೂ ಎದ್ದು ಜಿಗಿಯುವುದ ಮರೆತಿದೆ
ತಿದ್ದಿ ತಿದ್ದಿ ತನ್ನನ್ನೇ ತೇದುಕೊಂಡ ಬೆತ್ತದ ಕೋಲು ಸಾವಿನ ಅಂಚಿನ ಮುದುಕಿಯಂತೆ ಮೂಲೆಗೆ ಒರಗಿದೆ
ಯಾವುದೋ ಉರು, ಯಾರದೋ ಕವಿತೆ, ಯಾವುದೋ ವ್ಯಕ್ತಿಯ ;
ಕತೆಯ ತುಂಬಿಸಿಕೊಂಡಿದ್ದ ಪಟ್ಯ ಪುಸ್ತಕ, ಪುಸ್ತಕ ಭಂಡಾರದಲ್ಲಿ ಕೃಷ್ಣನ ಕಳೆದುಕೊಂಡ
ದೇವಕಿಯಂತೆ ಕುಂತಿವೆ…!
ಬೆಳಕು ನೀಡಿದ್ದ ಬಾಲ್ಯದ ಮನೆಯ ತುಂಬಾ  ಈಗ ಕತ್ತಲು! ಆದರೂ  ಅಲ್ಲಿ ಜೀವವಿದೆ !
ಕತ್ತಲ ಗರ್ಭದಲಿ ಕುಳಿತ ಮಗುವಿನಂತೆ !
– ಮುಚ್ಚಿದ ನನ್ನ ಶಾಲೆ
-ಚೈತ್ರ ಎನ್.

 

 

 

 

 

 

 

ಕಳೆದು ಹೋಗುವ ತನಕ
ಕವಿತೆಗೆ ಮರು ಜೀವ ತುಂಬಿದ
ನಿನಗೆ ಹೇಗೆ ಮರೆಯಲಿ
ಮರೆತೇನೆಂದರೂ ಮರೆಯಲಾಗದ
ನಿನ್ನಾ ನೆನಪುಗಳೆಂಬ
ಸೌಂದರ್ಯಕ್ಕೆ ಹಚ್ಚಲಾಗುತ್ತಿಲ್ಲ ಕಿಚ್ಚು

ನಿನ್ನ ಪ್ರೀತಿಯೆಂಬ ಮಾಯೆ
ಹುಚ್ಚು ಹಿಡಿಸಿ ಬಿಟ್ಟಿದೆಯೇ
ಎಂಬ ಅನುಮಾನ.!
ನಿನ್ನಾ ಕಿರುನಗು…ವಿಗೂ ನನ್ನ
ಕಂಡರೆ ಅದೇನೋ ಬಿಗುಮಾನ

ಆದರೆ ನಿನಗೆ ನಾ ಪ್ರೀತಿಸಲು
ಆ ದೇವರ ಕರುಣೆ ಇರಲಿಲ್ಲ
ಬಂಧನಗಳೆಂಬ ಸಂಬಂಧಗಳಲ್ಲಿ
ಸಿಲುಕಿರುವ ಜೀವದ ಭಾವನೆಗಳಿಗೆ
ನೀರೆರೆಯಲು ನೀ ಬಿಟ್ಟರೆ
ನನಗೆ ಬೇರಾರು ಬೇಕಿರಲಿಲ್ಲ
ನೀ ಬೇಕು ಎಂಬ ಹಕ್ಕುಗಳಿಗೆ
ಬಿಕ್ಕಳಿಗೆ ಹತ್ತಿರುವುದು ನಿಂತಿಲ್ಲ

ಒಂದು ಮಾತ್ರ ನಿಜ.?
ನೀನೊಂದು ಚೆಲುವಿನ ಖನಿಜ
ತಪ್ಪಿಸಿಕೊಳ್ಳದೇ
ನಿನ್ನನ್ನು ದಕ್ಕಿಸಿಕೊಳ್ಳುವ
ಅವಕಾಶವಾದಿಯಾಗಿ
ನಿನಗಾಗಿ ನನ್ನುಸಿರನ್ನು
ಹಾಗೇ ಹಿಡಿದಿಟ್ಟುಕೊಳ್ಳುವೆ

ನೀ ಬರುವತನಕ
ಈ ಕವಿತೆ ಕಳೆದು
ಹೋಗುವತನಕ
ನಿನ್ನ ಧ್ಯಾನದಲ್ಲಿ ಲೀನವಾಗುವೆ!

-ವೀರಣ್ಣ ಮಂಠಾಳಕರ್

 

 

 

 

 

 

 

ಮರೆಯದ ನೆನಪು

ಕಲ್ಲ ಮೇಲಿನ ಕವಿಯ ಪದವಾದೆ
ಒಳಮನಸಿನ ಭಾವುಕ ಕಲ್ಪನೆಯಾದೆ
ಮನದಲ್ಲಿ ಮರೆಯದ ನೆನಪಾದೆ 

ಮಳೆಯ ಹನಿಗಳಿಗೆ ಕೊಡೆಯಾದೆ
ಹುರಿಯುವ ಬಿಸಿಲಿಗೆ ನೆರಳಾದೆ

ಪ್ರೀತಿಯ ಹೃದಯಗಳಿಗೆ ನೆರವಾದೆ
ಸ್ನೇಹದ ಕೈಗಳಿಗೆ ಜೊತೆಯಾದೆ

ನೂರಾರು ಸಂಬಂಧಗಳಿಗೆ ಆಶ್ರಯವಾದೆ
ಸಾವಿರಾರು ಭಾವನೆಗಳಿಗೆ ಮೂಲವಾದೆ

ಕ್ಷಣದಲ್ಲಿ ನಮಿಂದ ನೀ ಮರೆಯಾದೆ
ಕಣ್ಣಲ್ಲಿ ಸುರಿಯದ ಕಣ್ಣಿರಾದೆ
ಮನದಲ್ಲಿ ಮರೆಯದ ನೆನಪಾದೆ 
-ಲೋಕೇಶಗೌಡ ಜೋಳದರಾಶಿ

 

 

 

 

 

ಎಂದಾದರೊಮ್ಮೆ..

ಎಂದಾದರೊಮ್ಮೆ ಈ ಕಗ್ಗಲ್ಲು
ಮಾತನಾಡುತ್ತದೆ, ನನ್ನೆದೆಯ
ಪ್ರತಿ ಅಕ್ಷರವ ಕೆತ್ತಿ ನೆತ್ತರ ತರ್ಪಣ
ನೀಡುವೆ ಕಟ್ಟಕಡೆಯ ಉಸಿರಿರುವವರೆಗೂ
ಗುಡಿಯ ಗೋಪುರ ಕಟ್ಟುತಲಿರುವೆ

ಎಂದಾದರೊಮ್ಮೆ ಈ ನಿನ್ನ ಕಗ್ಗಲ್ಲಿನಂಥಹ
ಹೃದಯ ಮಿಡಿಯಬಹುದು
ನನ್ನೊಳಗಿನ ಆತ್ಮಶಕ್ತಿಯ ಒಂದುಗೂಡಿಸಿ
ಆ ಹೃದಯಕ್ಕೇ ಸೇತುವೆ ಕಟ್ಟುವೆ
ಕಟ್ಟಕಡೆಯ ಉಸಿರಿನ ಬಿಂದುವನ್ನು
ತಪ್ಪದೇ ನಿನ್ನೆದೆಗೆ ಮುಟ್ಟಿಸುವೆ

ಸಿಡಿದ ಈ ನನ್ನ ಮನಸು ನಿನ್ನ
ಮೌನದ ಕೋಟೆಯನ್ನು ಪುಡಿಗುಟ್ಟಬಲ್ಲದು
ನಿನ್ನ ಅಹಮ್ಮಿನ ಹೆಡತಲೆಯ
ಧರೆಗುರುಳಿಸಬಲ್ಲದು ನನ್ನ ನರಗಳ
ಹೆದೆಯೇರಿಸಿ ಗುರಿಯಿಟ್ಟು ಕಾಯುವೆ

ರೊಂಯ್ಯನೆ ಸಾಗುವ ಕನಸುಗಳಿಗೆ
ರೆಕ್ಕೆ ಕಟ್ಟಿಬಿಡಬಲ್ಲೆ ನಿನ್ನ
ಮರೆವಿನ ಗುಡಾರಕ್ಕೆ ಬೆಂಕಿ ಸೋಕಿಸಬಲ್ಲೆ
ಚೀತ್ಕಾರದ ಹಾರಾಟಕ್ಕೆ ಕಣ್ಣೀರ್ಗರೆಯಲು
ನನ್ನ ಮನಸ್ಸನ್ನು ಬೆನ್ನ ಹಿಂದೆಯೇ ಕಳುಹಿಸಿರುವೆ

ಎಂದಾದರೊಮ್ಮೆ ಈ ನಿನ್ನ ಗುಂಡಿಗೆಯ
ಮೇಲೆ ನನ್ನ ಪ್ರೇಮಪತಾಕೆ  ಮತ್ತೆ
ಹಾರಬಲ್ಲುದೆ ಅಂದಾದರೆ ನಿನ್ನ
ಸೊಕ್ಕು ಅಡಗುವ ಸಮಯದಲಿ
ನನ್ನ ಎದೆಯು ಆಸರೆ ನೀಡಲು ಕಾಯುತ್ತಿದೆ
ಎಂದಾದರೊಮ್ಮೆ..

-ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ

 

 

 

 

 

ಈ ವಾರದ ಎರಡು ಕವಿತೆಗಳು ಆಡಿಯೋದಲ್ಲಿ ಲಭ್ಯವಿದೆ. ಆ ಎರಡು ಕವಿತೆಗಳನ್ನು ಕೇಳಲು ಕೆಳಗಿನ ಕೊಂಡಿಗಳ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಆಯಾ ಲಿಂಕ್ ಗಳ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ save as ಆಪ್ಷನ್ ನಿಂದ ನಿಮ್ಮ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ…

Chinnu Prakash

Lokesh Gouda_Mareyadha_Nenapu

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x