‘ಮೌನ’, ಮಾತಾಡಲೇಬೇಕಾದ ನಾಟಕ: ಹೃದಯಶಿವ

 

ನಾಗರಾಜ ಸೋಮಯಾಜಿಯವರು ಸಣ್ಣ ಪ್ರಾಯದಲ್ಲಿಯೇ ರಂಗಭೂಮಿಯ ಒಡನಾಟ ಇಟ್ಟುಕೊಂಡವರು. 'ವ್ಯಾನಿಟಿ ಬ್ಯಾಗ್', 'ನರಿಗಳಿಗೇಕೆ ಕೋಡಿಲ್ಲ', 'ಹೀಗೆರಡು ಕಥೆಗಳು' ಸೇರಿದಂತೆ ಒಂದಿಷ್ಟು ನಾಟಕಗಳಲ್ಲಿ ನಟಿಸಿದವರು. ಕಳೆದ ನಾಲ್ಕು ವರ್ಷಗಳಿಂದ ರಂಗಚಟುವಟಿಕೆಗಳನ್ನು ಬೆರಗಿನಿಂದ ನೋಡುತ್ತಾ ಬಂದವರು. ಬಿ.ವಿ.ಕಾರಂತರ ಶಿಷ್ಯೆ ಎನ್.ಮಂಗಳ ಅವರ ಜೊತೆಗಿದ್ದು ಸಾಕಷ್ಟು ರಂಗಾಸಕ್ತಿ ಬೆಳೆಸಿಕೊಂಡವರು. ಇವರು ಈಗ 'ಮೌನ' ನಾಟಕವನ್ನು ನಿರ್ದೇಶಿಸುವಾಗ ಒಂದಿಷ್ಟು ಕುತೂಹಲ ಮೂಡುವುದು ಸಹಜ.

'ಮೌನ' ನಾಟಕ ಇವತ್ತಿನ ದಿನಮಾನಕ್ಕೆ ಅಲ್ಲಲ್ಲಿ ಹತ್ತಿರವೆನಿಸಿದರೂ, ಸ್ವಲ್ಪಮಟ್ಟಿಗೆ ನವ್ಯಕಾಲಘಟ್ಟದ ಕಥನಮಿಡಿತಗಳನ್ನು ಮತ್ತೆ ಮತ್ತೆ ನೆನಪಿಸುವ ವಸ್ತುವನ್ನು ಹೊಂದಿರುತ್ತದೆ. ಈ ನಾಟಕ ಒಟ್ಟು ಐದು ಸಣ್ಣಕತೆಗಳನ್ನು ತನ್ನೊಳಗೆ ಅಡಗಿಸಿಕೊಂಡಿದ್ದು ಬೇರೆ ಬೇರೆ ಬಗೆಯ ವಸ್ತುವೈವಿಧ್ಯತೆಯನ್ನು ತೋರುತ್ತದೆ. ಪರಿಚಯ ದೃಶ್ಯ ಒಬ್ಬ ಕಥೆಗಾರನ ಮೂಲಕ ಶುರುವಾಗಿ , ಆತ ಬರೆಯುವ ಐದು ಬಿಡಿ ಬಿಡಿ ಕಥೆಗಳೇ ಈ ನಾಟಕದ ವಸ್ತು. ಕಥೆಗಾರನ ಪಾತ್ರ ನಿರ್ವಹಿಸಿರುವ ಪ್ರದೀಪ್ ಅಂಚೆ ಕಥೆಗೊಂದು ಪೀಠಿಕೆ ನೀಡುವ ಮೂಲಕ ಚಾಲ್ತಿ ನೀಡುತ್ತಾರೆ. ಐದು ಕಥೆಗಳ ಪೈಕಿ ಮೊದಲನೆಯ ಕಥೆ ಇಬ್ಬರು ಯುವಕರ ನಡುವಿನ ಸ್ನೇಹ ಸಂಘರ್ಷಕ್ಕೆ ಸಂಬಂಧಿಸಿದ್ದು. ತಮ್ಮ ಹಳೆಯ ವೈರತ್ವವನ್ನು ಮರೆತು ವರ್ಷಗಳ ನಂತರ ಭೇಟಿಯಾದ ಸ್ನೇಹಿತರಿಬ್ಬರು ಹೇಗೆ ಹಳೆಯ ನೆನಪುಗಳಿಗೆ ಜಾರಿ, ಮತ್ತೆ ವ್ಬಾಸ್ತವಕ್ಕೆ ಹಿಂತಿರುಗುತ್ತ ಮತ್ತೆ ಜಗಳದೊಂದಿಗೆ ದೂರ ದೂರವಾಗುತ್ತಾರೆ? ಆ ಜಗಳ ಕುರಿತಂತೆ ಹೇಗೆ ತಮ್ಮ ಸ್ವಗತಗಳ ಮೂಲಕ ಆತ್ಮವಿಮರ್ಶೆಗೆ ತೊಡಗುತ್ತಾರೆ? ಪಶ್ಚಾತಾಪದ ಕರಿನೆರಳು ಹೇಗೆ ಅವರಿಬ್ಬರನ್ನು ಆವರಿಸುತ್ತದೆ? ಎಂಬುದು ಈ ಮೊದಲ ಕಥೆಯ ವಸ್ತು. ಈ ಇಬ್ಬರು ಸ್ನೇಹಿತರ ಪಾತ್ರದಲ್ಲಿ ಹರೀಶ್ ಮಠದ್ ಮತ್ತು ಚಿತ್ರು ಮಾಳಗಿ ಅಭಿನಯಿಸಿದ್ದಾರೆ. 

ಇನ್ನು ಎರಡನೆಯ ಕಥೆ ಬಗ್ಗೆ ಹೇಳುವುದಾದರೆ ಅದೊಂದು ವಯೋಸಹಜ ಪ್ರೀತಿ, ಪ್ರೇಮ, ಮನಸ್ತಾಪಗಳ ಕುರಿತದ್ದು. ಶ್ರೀ ರಾಮ್-ಸುಶ್ಮಿತಾ ಜೋಡಿ ಪರಸ್ಪರ ಪ್ರೇಮಿಗಳಾಗಿ ನಟಿಸಿದ್ದು ಪ್ರೀತಿಯಲ್ಲಿ ಎದುರಾಗುವ ಜಿಜ್ಞಾಸೆ, ಉತ್ತರ ಸಿಗದ ಪ್ರಶ್ನೆಗಳು, ದಿಗ್ಗನೆ ಎದುರಾಗುವ ದ್ವಂದ್ವಗಳು, ಮಾತಿಗೆ ಸಿಕ್ಕದ ತೊಳಲಾಟಗಳು- ಇವೇ ಮೊದಲಾದ ತಿಕ್ಕಾಟ, ಘರ್ಷಣೆಗಳಲ್ಲಿ ಮುಳುಗಿ ಮೌನದಲ್ಲಿಯೇ ಪರಸ್ಪರ ಬೇರೆಬೇರೆಯಾಗುತ್ತಾರೆ. ತನ್ನ ಪ್ರಿಯಕರ ನೀಡಿದ್ದ ಉಡುಗೊರೆಗಳನ್ನೆಲ್ಲ ಒಂದು ಪತನದ ಘಳಿಗೆ  ಆಕೆ ಅವನದೇ ಮುಖದ ಮೇಲೆ ಎಸೆದು ಹೊರಟು ಹೋಗುತ್ತಾಳೆ. ಹಾಗೆ ನೋಡಿದರೆ ಇಬ್ಬರೂ ಒಳ್ಳೆಯವರೇ. ಇಬ್ಬರಲ್ಲೂ ಭಾವನೆಗಳಿರುತ್ತವೆ. ಇಬ್ಬರಲ್ಲೂ ಒಟ್ಟಿಗೆ ಇರಬೇಕೆಂಬ ತಹತಹಿಕೆ ಇರುತ್ತದೆ. ಆದರೆ ಸೋಲುವ ಮನಸ್ಥಿತಿ ಒಬ್ಬರಲ್ಲೂ ಇರುವುದಿಲ್ಲ. ತಮ್ಮ ನಡುವಿನ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು, ಆ ಒಡಕಿಗೆ ಕಾರಣ ಏನೆಂದು ತಿಳಿದುಕೊಳ್ಳಲು ಆತ ಎಷ್ಟೇ ಪ್ರಯತ್ನಿಸಿದರೂ, ಆಕೆ ತುಟಿ ಬಿಚ್ಚುವುದಿಲ್ಲ. ಏನೇ ಕೇಳಿದರೂ 'ಪರಿಸ್ಥಿತಿ' ಎಂಬುದನ್ನು ಬಿಟ್ಟು ಬೇರೇನೂ ಹೇಳದ ಅಪ್ರಬುದ್ದ ವಯಸ್ಸಿನ, ಆತುರದ ಮನಸ್ಥಿತಿಯುಳ್ಳ, ಅರೆಬೆಂದ ಮನಸ್ಸಿನ ಹುಡುಗಿಯ ಪಾತ್ರವದು. ಪ್ರೀತಿಯಲ್ಲಿ ಎದುರಾಗುವ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿಯುವುದರ ಹಿಂದೆ ಮೌನ ಹೇಗೆ ತನ್ನ ಕ್ರೌರ್ಯ ಮೆರೆಯುತ್ತೆ ಅನ್ನೋದನ್ನು ಈ ಎರಡನೇ ಕತೆ ತೆರೆದಿಡುತ್ತದೆ. 

ಇಬ್ಬರು ಉದ್ಯೋಗಸ್ಥ ಯುವತಿಯರ ಸುತ್ತ ಹೆಣೆಯಲ್ಪಟ್ಟಿರುವ ಮೂರನೆಯ ಕಥೆ ನಿಜಕ್ಕೂ ಇವತ್ತಿನ ನಗರ ಬದುಕಿನ ಒತ್ತಡಗಳ ನಡುವೆ ಬದುಕುತ್ತಿರುವ ವಿದ್ಯಾವಂತ ಯುವತಿಯರ ಆಂತರಿಕ ತೊಳಲಾಟವನ್ನು ಬಿಚ್ಚಿಡುತ್ತದೆ. ಕೈ ತುಂಬ ಸಂಬಳ ಪಡೆಯುವ ಶ್ರೀಮಂತ ಗಂಡ, ಅರಮನೆಯಂಥ ಮನೆ, ಒಂದಿಷ್ಟು ಬ್ಯಾಂಕ್ ಬ್ಯಾಲೆನ್ಸ್- ಹೀಗೆ ಏನೇನೇನೋ ಆಸೆಗಳನ್ನು ಇಟ್ಟುಕೊಂಡಿರುವ ಯುವತಿ ಒಂದುಕಡೆಯಾದರೆ ಆಯಾಯ ಕಾಲಕ್ಕೆ ಏನೇನಾಗಬೇಕೋ ಅದಾದರೆ ಚಂದ; ಕನಸುಗಳನ್ನು ಕಣ್ತುಂಬ ತುಂಬಿಕೊಂಡು ನಾಳೆಗಾಗಿ ಕಾಯುತ್ತಾ ಕೂರುವುದಕಿಂತ ಬದುಕು ಬಂದ ಹಾಗೆ ಸ್ವೀಕರಿಸಿ ದಕ್ಕಿದುದರಲ್ಲೇ ಸುಖವನ್ನು ಕಾಣಬೇಕೆಂಬುದು ಮತ್ತೊಬ್ಬಳ ನಿಲುವು. ಈ ವೈರುಧ್ಯ ಮನಸ್ಥಿತಿಗಳ ನಡುವಿನ ಸಂಘರ್ಷವೇ ಈ ಕಥೆಯ ಕೇಂದ್ರ. ಈ ಇಬ್ಬರು ಯುವತಿಯರ ಪಾತ್ರಗಳಲ್ಲಿ ದೀಪ್ತಿ ನಾಗೇಂದ್ರ ಮತ್ತು ವೈಷ್ಣವಿ ಅಭಿನಯಿಸಿದ್ದಾರೆ. ಅಮ್ಮನ ಪಾತ್ರದಲ್ಲಿ ಕುಮುದವಲ್ಲಿ ಅರುಣ್ ಮೂರ್ತಿ ಇದ್ದಾರೆ. ಕಾಲದ ಜೊತೆ ತಾನೂ ಮಾಗುತ್ತಾ ಹೋಗುವ ಮಗಳು ಕಡೆಗೆ ತನ್ನ ಭ್ರಮೆಗಳನ್ನೆಲ್ಲ ಕಳಚಿಟ್ಟು ವಾಸ್ತವದಲ್ಲಿ ಬದುಕಲು ತೀರ್ಮಾನಿಸುವಳು. ತನ್ನನ್ನು ಪ್ರೀತಿಯಿಂದ ನೋಡಿಕೊಳ್ಳಬಲ್ಲವನ ಕೈ ಹಿಡಿಯುವ ಮಟ್ಟಕ್ಕೆ ಪ್ರಬುದ್ದಳಾಗುತ್ತಾಳೆ ಎಂಬುದು ಈ ಕತೆಯ ಸಾರಾಂಶ.

ಚಿತ್ರಗಳು: ಪ್ರಕಾಶ್ ಹೆಗಡೆ

ನಾಲ್ಕನೆಯ ಕತೆಯು ಮನುಷ್ಯ ಕಾಲಕಾಲಕ್ಕೆ ಎದುರಿಸುವ ಕಷ್ಟಗಳ ಕುರಿತು ಸಾಂಕೇತಿಕವಾಗಿ ದಾಖಲಿಸುತ್ತದೆ. ಆರ್ಥಿಕ ಸಂಕಷ್ಟ ಎದುರಿಸುವ ಅಪ್ಪ, ಸೈಕಲ್ ಕೊಡಿಸೆಂದು ಹಠ ಮಾಡುವ ಪುಟ್ಟ ಮಗ, ಬದುಕು ತೆರೆದಿಟ್ಟ ಕಷ್ಟ, ಕಣ್ಣೀರು, ಅನುಭವ, ಸಾವು, ನೋವುಗಳ ಸಂಕೇತದಂತಿರುವ ಅಜ್ಜಿ- ಇವೆಲ್ಲವುಗಳನ್ನು ತನ್ನೊಳಗೆ ಅಡಗಿಸಿಕೊಂಡಿರುವ ಈ ನಾಲ್ಕನೇ ಕಥೆ ನಿಜಕ್ಕೂ ಪ್ರೇಕ್ಷಕರನ್ನು ಗಂಭೀರವಾಗಿ ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತದೆ. ಅಜ್ಜಿಯ ಪಾತ್ರದಲ್ಲಿ ಜಯಲಕ್ಷ್ಮಿ ಪಾಟೀಲ್ ನಟಿಸಿದ್ದಾರೆ. ಮನುಷ್ಯನ ಆಸೆಗಳು ಮತ್ತು ಕಷ್ಟಗಳು ಮುಖಾಮುಖಿಯಾಗುವಿನ ಸೂಕ್ಷ್ಮ ಬಿಂದು ಎಂಥಾದ್ದು ಎಂಬುದನ್ನು ಇಲ್ಲಿ ಕಾಣಬಹುದು. ಸೈಕಲ್ ಬೇಕೇ ಬೇಕು ಅಂತ ಹಠ ಮಾಡುವ ಮಗನ ಆಸೆ ಪೂರೈಸುವಲ್ಲಿ ಅಪ್ಪನ ಆರ್ಥಿಕ ಸಂಕಷ್ಟ ಅಸಹಾಯಕವಾಗುತ್ತದೆ. ಅಜ್ಜಿಯ ಜೀವನ ವೃತ್ತಾಂತ, ಬದುಕಿನುದ್ದಕ್ಕೂ ಆಕೆ ಪಟ್ಟ ಪಾಡುಗಳನ್ನು ಕೇಳಿಸಿಕೊಂಡ ಮೊಮ್ಮಗ ಕಡೆಗೆ ಸೈಕಲ್ ಆಸೆ ಬಿಟ್ಟುಬಿಡುತ್ತಾನೆ. ಒಟ್ಟಾರೆ ಹೇಳುವುದಾದರೆ ಜೀವನಾನುಭವದ ಪಾಠ ಹೇಗೆ ಸಾತ್ವಿಕ್ ನಂಥ ಮುಗ್ಧ ಮನಸಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಮೂರು ತಲೆಮಾರುಗಳನ್ನು ಇಟ್ಟುಕೊಂಡು ಹೆಣೆದಿರುವ ಈ ನಾಲ್ಕನೆಯ ಕಥೆ ಬಿಚ್ಚಿಡುತ್ತದೆ. ಮೊಮ್ಮಗನಾಗಿ ಕಾಣಿಸಿಕೊಂಡ ಸಾತ್ವಿಕ್ 'ಅಪ್ಪು' ಸಿನಿಮಾದ ವಿನಾಯಕ್ ಜೋಷಿಯನ್ನು ನೆನಪಿಸುತ್ತಾನೆ. ಸಾತ್ವಿಕ್ ನ ಅಪ್ಪ ಹಾಗೂ ಜಯಲಕ್ಷ್ಮಿ ಪಾಟೀಲರ ಮಗನಾಗಿ ಸುನಿಲ್ ರಾವ್ ಅಭಿನಯಿಸಿದ್ದಾರೆ.

ಈ ಐದನೇ ಕಥೆ ಇದೆಯಲ್ಲಾ ಇದು ಎಂದೋ ತೀರಿಕೊಂಡ ಗಂಡನ ನೆನಪಿನಲ್ಲಿ, ಸೋಮಾರಿ ಮಗನನ್ನು ಕಟ್ಟಿಕೊಂಡು ಏಗುವ ಮಧ್ಯಮವಯಸ್ಸಿನ ಹೆಂಗಸಿನ ಸುತ್ತ ಹೆಣೆಯಲ್ಪಟ್ಟಿದೆ. ಎಂದೋ ತೀರಿಕೊಂಡ ಗಂಡನ ನೆನಪು ಆಕೆಯನ್ನು ಭಾವುಕಳನ್ನಾಗಿಸಿದರೆ, ಮಗನ ಸೋಮಾರಿತನ ಆತಂಕ ಮೂಡಿಸುತ್ತದೆ. ಸಿಡುಕುತ್ತಲೇ ಮಗನನ್ನು ಪ್ರೀತಿಸುವ ಇಂತಹ ತಾಯಂದಿರು ಇವತ್ತಿನ ದಿನಮಾದಲ್ಲಿ ಅಲ್ಲಲ್ಲಿ ಸಿಗದೇ ಇರಲಾರರು. ಈ ಐದು ಕಥೆಗಳ ಪೈಕಿ ಮೂರನ್ನು ಸ್ವತಃ ನಾಗರಾಜ ಸೋಮಯಾಜಿಯವರೇ ರಚಿಸಿದ್ದರೆ ಉಳಿದ ಎರಡನ್ನು ಪ್ರಕಾಶ್ ಹೆಗ್ಡೆ ಮತ್ತು ಶ್ರೀಧರ ಬನವಾಸಿ ತಲಾ ಒಂದೊಂದು ರಚಿಸಿದ್ದಾರೆ. 

ಹೀಗೆ ಐದು ಕಥೆಗಳನ್ನು ಅಳವಡಿಸಿಕೊಂಡು ತಯಾರಾಗಿಸುವ ಈ ನಾಟಕದ ಉದ್ದೇಶ ಒಪ್ಪುವಂಥದ್ದೇ ಆದರೂ ಮೊದಲಬಾರಿಗೆ ನಿರ್ದೇಶನಕ್ಕೆ ಕೈ ಹಾಕಿರುವ ನಾಗರಾಜ ಸೋಮಯಾಜಿ ಪ್ರಾಥಮಿಕವಾಗಿ ಒಂದಿಷ್ಟು ಸಂಗತಿಗಳನ್ನು ಅರಿಯಬೇಕಿದೆ. ಒಂದು ಕಡೆ ಇಬ್ಬರು ನಿಂತೋ, ಕೂತೋ ಮಾತಾಡಿದರೆ ನಾಟಕವಾಗದು; ಅವರು ಸ್ಪಷ್ಟವಾಗಿ ಸಂಭಾಷಣೆ ಹೇಳಿದ ಮಾತ್ರಕ್ಕೂ ನಾಟಕವಾಗದು; ಪಾತ್ರಗಳು ಎಷ್ಟೇ ಭಾವಪರವಶತೆಗೊಳಗಾದರೂ, ಪ್ರಬುದ್ದತೆಯಿಂದ ಕೂಡಿದ್ದರೂ ನಾಟಕವಾಗದು. ಕನ್ನಡದಲ್ಲಿ ಅದೆಷ್ಟೋ ನಾಟಕಗಳು ನೆನಪಿಗೆ ದಕ್ಕದಷ್ಟು ಕಾಣೆಯಾಗುವಾಗ ಕೈಲಾಸಂ ನಾಟಕಗಳು ಜೀವಂತ ಎನಿಸುತ್ತವೆ. ಇದನ್ನೆಲ್ಲಾ ಇಲ್ಲಿ ಯಾಕೆ ಹೇಳಬೇಕಾಯಿತು ಎಂದರೆ, ನಾಗರಾಜ ಸೋಮಯಾಜಿ ತರಹದ ನಿರ್ದೇಶಕರು ಸಂಭಾಷಣೆ ನೆಚ್ಚಿಕೊಂಡು ನಾಟಕ ಮಾಡುತ್ತಾರೆ. ಬೆಳಕು, ಹಿನ್ನೆಲೆ ಸಂಗೀತದ ಮೇಲೆ ಅವಲಂಬಿತರಾಗಿ ನಾಟಕ ನಿರ್ದೇಶಿಸುತ್ತಾರೆ. ನಾಟಕ ಮಾಡುವ ಬದಲು ಆ ಐದು ಕಥೆಗಳ ರೀಡಿಂಗ್ ಕೊಟ್ಟಿದ್ದರೆ ಸಾಕಾಗುತ್ತಿತ್ತು ಎನ್ನಿಸುವಂತೆ ಮಾಡುತ್ತಾರೆ. 

ಈ 'ಮೌನ' ಇದಕ್ಕೊಂದು ನಿದರ್ಶನ, ಮೊದಲ ಕಥೆಯ ಆಶಯ ಏನೇ ಇದ್ದರೂ ಪಾತ್ರಧಾರಿಗಳು ಮಾತುಗಾರರಂತೆ ಕಾಣುತ್ತಾರೆ. ಜಗಳವಾಡುವಾಗಿನ ಏರುದನಿಯನ್ನೇ ಅಭಿನಯ ಎಂದುಕೊಂಡಿದ್ದಾರೆ. ಇಬ್ಬರೂ ಪರಸ್ಪರ ಪಾತ್ರಗಳನ್ನು ಎಕ್ಸ್ ಚೇಂಜ್ ಮಾಡಿಕೊಳ್ಳಬಲ್ಲಷ್ಟು ಮಂದ ಎನಿಸುತ್ತಾರೆ. ಎರಡನೇ ಕತೆಯ ಪ್ರೇಮಿಗಳೂ ಅಷ್ಟೇ; ತಾವು ಆಡುತ್ತಿರುವುದು ನಾಟಕ ಎಂಬುದು ಅವರಿಗೆ ಗೊತ್ತಿರುವಂತೆ ಕಾಣುತ್ತದೆ. ಇದ್ದುದರಲ್ಲಿ ಆ ಹುಡುಗ ಪರವಾಗಿಲ್ಲ. ಮೂರನೇ ಕತೆಯಲ್ಲಿ ದೀಪ್ತಿ ನಾಗೇಂದ್ರ, ಕುಮುದವಲ್ಲಿ ಅರುಣ್ ಮೂರ್ತಿಯವರ ಚುರುಕುತನ ಇಲ್ಲದೆ ಹೋಗಿದ್ದರೆ ತೀರಾ ಜಡತ್ವದ ಹಿಂಸೆಯನ್ನು ಪ್ರೇಕ್ಷಕ ಎದುರಿಸಬೇಕಾಗಿತ್ತು. ಇನ್ನು ನಾಲ್ಕನೇ ಕಥೆ ದಾರಿ ತಪ್ಪುವುದನ್ನು ಜಯಲಕ್ಷ್ಮಿ ಪಾಟೀಲ್ ತಮ್ಮ ಹೃದಯಸ್ಪರ್ಶಿ ಅಭಿನಯ, ಕಣ್ಣುಗಳಲ್ಲಿನ ತೀಕ್ಷ್ಣತೆ, ಸಂಭಾಷಣೆ ಹೇಳುವಾಗಿನ ದ್ವನಿಯ ಏರಿಳಿತದ ಮೂಲಕ ತಪ್ಪಿಸಿದರೂ ಅವರು ಒಂದೇ ಕಡೆ ಕುಳಿತದ್ದು ಬೋರು ಹೊಡೆಸುತ್ತದೆ. ನಿದ್ದೆ ಬರಿಸುತ್ತದೆ. ಕತ್ತಲಿರುವಲ್ಲಿ ನಿದ್ದೆ ಬರುವುದು ತುಸು ಹೆಚ್ಚೇ ಅಲ್ಲವೇ? ಮೊಮ್ಮಗನ ಪಾತ್ರ ಮಾಡಿದ ಸಾತ್ವಿಕ್ ಅಲ್ಲಲ್ಲಿ ಚುರುಕಾಗಿ ಕಂಡರೂ ಒಂದೇ ಕಡೆ ಕೂತು ಅಜ್ಜಿಯ ವೃತ್ತಾಂತ ಕೇಳುತ್ತಾ ತನಗೂ ನಿದ್ದೆ ಬಂದಿದ್ದರೆ ಅಚ್ಚರಿ ಪಡುವಂತಿಲ್ಲ. ಐದನೇ ಕಥೆಯನ್ನು ಪಾರು ಮಾಡಿದವರೆಂದರೆ ಸತ್ಯ ಶ್ರೀ. ತಮ್ಮ ಚುರುಕು ಅಭಿನಯ, ಸಿಡುಕುತ್ತಲೇ ಮಗನನ್ನು ಪ್ರೀತಿಸುವ ತಾಯ್ಗರುಳು, ಗಂಡನ ನೆನಪು- ಒಪ್ಪಬಹುದು. ಪಾತ್ರಗಳ ಸಹಜತೆ ತಮ್ಮ ವಿಶಿಷ್ಟವಾದ ತನ್ಮಯತೆಯಿಂದ, ವಿನೋದ-ವಿಷಾದಗಳಿಂದ ಬರುತ್ತದೆ: ಒಂದು ಪಾತ್ರ ಸಹಜವಾಗಿ ಅರಳುವಾಗ ಆತನ ಮಾತು, ಆಂಗಿಕ ಚಲನೆ ನಾಟಕದ ಓಘಕ್ಕೆ ಪೂರಕವಾಗುವ ಬಗೆಯಲ್ಲಿ ಯೋಜಿತವಲ್ಲದ ರೀತಿಯಲ್ಲಿ ಬೆಸೆದುಕೊಂಡಿರುತ್ತದೆ. ಈ ಕುರಿತು ಸೋಮಯಾಜಿ ಆಲೋಚಿಸಬೇಕು. 'ಮೌನ' ಅಪಕ್ವ ಎಂಬ ಕಾರಣಕ್ಕೆ ನೀರಸ ಎನಿಸುತ್ತದೆ; ನಿರ್ದೇಶಕನ ನೆರವಿಲ್ಲದೆ ಸ್ಕ್ರಿಪ್ಟ್ ರಂಗದ ಮೇಲೆ ಮೂಡಿದರೆ ಹೇಗಾಗುತ್ತೋ ಹಾಗೆ.

ನಾಗರಾಜ ಸೋಮಯಾಜಿಯವರ 'ಮೌನ' ಮಾತುಗಳಿಂದ ತುಂಬಿದೆ. ಈ ನಾಟಕದ ಆಶಯ ಸ್ವಾಗತಾರ್ಹವೆನಿಸಿದರೂ ಇಲ್ಲಿಯ ಕಸುಬುದಾರಿಕೆ ಕಲಾತ್ಮಕತೆಯನ್ನು ಗುರುತಿಸುವ ವ್ಯಾಪ್ತಿಯನ್ನು ಕಿರಿದಾಗಿಸಿಕೊಂಡಿದೆ: ಸ್ವಗತಗಳನ್ನು ಪತ್ತೆ ಮಾಡಿ ಧ್ವನಿಪೂರ್ಣವಾಗಿ ಅಭಿವ್ಯಕ್ತಿಸುವಲ್ಲಿ ಮೌನವಾಗಿದೆ. ನಿರ್ದೇಶಕ ನಾಗರಾಜ ಸೋಮಯಾಜಿಯಂತಹ ಮಂದಿ ಮೇಲಿನ ಮಾತುಗಳನ್ನು ಟೀಕೆ ಎಂದು ಭಾವಿಸದೆ ಅವರ 'ಮೌನ'ಕ್ಕೆ ಪ್ರತಿಕ್ರಿಯಿಸಿದ ಮಾತುಗಳಿವು ಎಂದು ಭಾವಿಸಿ ಒಂದು ನಾಟಕದ ಜೀವಂತಿಕೆಯ ಬಗ್ಗೆ ಚಿಂತಿಸುವಂತಾಗಬೇಕು.  ಜಯಲಕ್ಷ್ಮಿ ಪಾಟೀಲ್, ಕುಮುದವಲ್ಲಿ ಅರುಣ್ ಮೂರ್ತಿ, ದೀಪ್ತಿ ನಾಗೇಂದ್ರ, ಸತ್ಯ ಶ್ರೀಯವರ ಅಭಿನಯ, ಒಟ್ಟು ಸಂಭಾಷಣೆ, ಮಂಜು ನಾರಾಯಣ್ ಅವರ ಬೆಳಕು, ಕುಮುದುವಲ್ಲಿ ಅರುಣ್ ಮೂರ್ತಿಯವರ ಹಾಡುಗಾರಿಕೆ ಹಾಗೂ ಸ್ವತಃ ಸೋಮಯಾಜಿಯವರೇ ಬರೆದ 'ದಿನ ನೂರು ಕಳೆದೋಯ್ತು…' ಹಾಗೂ 'ಮೌನಿ ಬರೆದ ಸಂತೋಷ ತೊರೆದ…' ಹಾಡುಗಳ ಹೊರತಾಗಿ ಈ ನಾಟಕದ ದೌರ್ಬಲ್ಯಗಳೇನು ಎಂಬುದು ನಿರ್ದೇಶಕರಲ್ಲಿ ಶೋಧಕ್ಕೆ ದಾರಿಮಾಡಿಕೊಡಬೇಕು.  

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
umesh desai
umesh desai
9 years ago

ಲೇಖಕರು ಹೇಳಿದ ಗುಣದೋಶಗಳು ಇದ್ದವು ನಿಜ

ಆದರೆ ಮೊದಲ ಯತ್ನ ನಾಗರಾಜ್ ಸೋಮಯಜಿದು ಅದಕ್ಕೆ ಸ್ವಲ್ಪ ಸ್ಪೇಸ್ ಕೊಡೋಣ..

m.k.mata
m.k.mata
9 years ago

Olleya vimarshe.nera baraha ishtavaaithu. Sambhandha pattavaru idanna sportive aagi thagondu thiddi kollodu olleyadu…

ಸುಷ್ಮಾ ಮೂಡುಬಿದಿರೆ

ವಿಮರ್ಶೆಯಲ್ಲಿ ಪರಾದರ್ಶಕತೆ ಇದೆ..

ಹೃದಯ ಶಿವರ ಮಾತುಗಳು ನಿಜ… ಇದು ಪ್ರೇಕ್ಷಕರ ಮಾತುಗಳು ಕೂಡಾ..

 

ಹೃದಯಶಿವ
ಹೃದಯಶಿವ
9 years ago

ಧನ್ಯವಾದಗಳು 

Pallavi Idoor
Pallavi Idoor
9 years ago

Chennagi bardidira hridaya shiva avare… Nanna abhipraya kelidre innu swalpa allalli sudharane madkobeku innondu pradarshanakke modalu… Belaku andre katthalalla… Belakina aata chennagidhu hagalanna hagalante torisuva reeti.. Shadow effect ge swalpa bere reeti belakina vyavasthe idre innu chenna.. Haage abhinaya should be with expression nanagadu senior artist galanna bitre mathellarallu kadime kaanistithu.. Mathu hinnele sangeeta hinneleyallili… Swalpa allalli munduvaredithu… This is my Fran. Opinion… Pls don’t mind, tidhi innu yashaswiyagli naataka… All the best Nagaraj Somayaji n team

kusumabaale
kusumabaale
9 years ago

ಒಂದು ಪಕ್ಕಾ ವಿಮರ್ಶೆ ..ನೂರಕ್ಕೆ ನೂರು ಸರಿ ಇದೆ.ಮೊನ್ನೆ ಕತ್ತಲೆ ದಾರಿ ದೂರ ನೋಡಿದ್ದೆ.ನಾಟಕ ಅಂದರೆ ಇದು ಎಂಬಂತಿತ್ತು.ನಾಗರಾಜ್ ಮುಂದಿನ ಪ್ರಯತ್ನಕ್ಕೆ ಯಶವಾಗಲಿ.

amardeep.p.s.
amardeep.p.s.
9 years ago

ಶಿವು ಜಿ…. ನಿಮ್ಮ ವಿಮರ್ಶೆ ಮತ್ತು  ಒಳನೋಟ ಇಷ್ಟವಾಯಿತು….

T G Nandish
T G Nandish
9 years ago

Vimarshe ishtavaaythu …………….

8
0
Would love your thoughts, please comment.x
()
x