ಕಾವ್ಯಧಾರೆ ಪಂಜು-ವಿಶೇಷ

ಪಂಜು ಕಾವ್ಯಧಾರೆ

ಸಂಕೋಲೆಯೊಳಗಿನ ನೀನು!

ನೀನು ಬಂದಾಗ ನಿಜವಾಗಿ ಬೆಳದಿಂಗಳು
ಹಾಲಿನಂತೆ ಸುರಿದಿತ್ತು
ನೋಡಿದ್ದಷ್ಟೇ ಭಾಗ್ಯ!
ಅದನ್ನು ತುಂಬಿಡಲು ಯಾವ 
ಬಟ್ಟಲಿಗೂ ಸಾದ್ಯವಾಗಿರಲಿಲ್ಲ
ನಿನ್ನ ಕಣ್ಣುಗಳೊಳಗೆ ಅಂತಹುದೇ 
ಬೆಳಕಿರಬಹುದೆಂದು ಕಾದಿದ್ದೇ ಬಂತು:

ಒಂದು ತಣ್ಣನೆಯ ಸಂಜೆ
ನಿನ್ನ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿ
ಬೆವೆತು ಹೋದೆ
ನಿನ್ನ ಕಣ್ಣುಗಳ ತುಂಬ ಬೆಂಕಿ ಕೆನ್ನಾಲಿಗೆಗಳು
ನಿನ್ನ ತುಟಿಗಳಿಗೆ ಬಂದೆ
ಹೊರಬಂದದ್ದೆಲ್ಲ ನಿಗಿನಿಗಿ ಕೆಂಡದಂತ ಶಬ್ದಗಳು
ನಿನ್ನ  ಎದೆಗೆ ಬಂದೆ
ಕೊತಕೊತ ಕುದಿಯುವ ಲಾವಾರಸದ  ಕಡಲು
ನಿನ್ನ ಸೊಂಟಕ್ಕೆ ಬಂದೆ
ಮಿರಮಿರ ಮಿಂಚುವ ಬಿಳಿ ತೊಡೆಗಳ ಮೇಲೆ ಹಸಿರಕ್ತದ ಕಲೆಗಳು
ನಿನ್ನ ಪಾದಗಳಿಗೆ ಬಂದೆ
ಕರೆದ ನೊರೆಹಾಲಿನಂತವುಗಳ ಸುತ್ತ ಕಭ್ಭಿಣದ ಸಂಕೋಲೆಗಳು
ನಿನ್ನೊಳಗಿನ ಬೆಂಕಿಯ ಆರಿಸದೆ ರಕ್ತದ ಕಲೆಗಳ ಅಳಿಸದೆ
ಕಟ್ಟಿದ ಸಂಕೋಲೆಗಳ ಬಿಚ್ಚದೆ 
ನಿನಗೆ ಮಾತ್ರವಲ್ಲ 
ನನಗೂ
ಮುಕ್ತಿಯಿಲ್ಲವೆನಿಸಿ ನಡುಗಿದೆ!
-ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
Madhusudan Nair

 

 

 

 (೧) ಪ್ರೀತಿಯೆಂಬ ಸಮುದ್ರದಲಿ 
ಮುಳುಗಿರುವ
ನಾ ಕಂಡ
ದ್ವೀಪವೇ-ಅಮ್ಮ !!

(೨) ಕತ್ತಲಿಗೆ ಬೆಳಕಾಗುವ
ದೀಪದಂತೆ-ಅಮ್ಮ !!

(೩) ಭಾವನೆಯ ಭೋರ್ಗರೆತದ
ಕಡಲ ಕಿನಾರೆಯಲ್ಲಿ
ದೋಣಿ ಜೀವನವಾದ್ರೆ
ಹುಟ್ಟುಗೋಲು-ನಮ್ಮಮ್ಮ!!

(೪) ಸಂಬಂಧಗಳು ಹಳತಾಗುತ್ತವೆ
ಹಳತಾಗಿ ಹಳಿಸಿಹೋಗುತ್ತವೆ 
ಆದರೆ
ಮಾತೃ ಪ್ರೀತಿಯೊಂದನ್ನು ಬಿಟ್ಟು !!

(೫) ಸರಿಸಾಟಿ ಯಾರಿಲ್ಲ
ಅಮ್ಮನ ಪ್ರೀತಿಗೆ
ಹೋಲಿಕೆಯು ಸಲ್ಲದು
ಆ ಪ್ರೀತಿಯ ರೀತಿಗೆ !!

(೬) ಎದೆಯಾಲುಣಿಸಿ, ಕಂಬನಿಯೊರಸಿ
ಕಡೆವರೆಗೂ ಜೊತೆ ನಿಂತು
ಬರೀ ಒಳ್ಳೆಯದೆ ಬಯಸುವುದೆ
ಮಾತೃ ಪ್ರೀತಿ !!

(೭) ತಾನು ಸತ್ತು
ನಮ್ಮೊಡನೆ ಮರುಜನ್ಮ
ಪಡೆವ ಪ್ರೀತಿಯೇ 
ಅಮ್ಮ !!

(೮) ನನ್ನವ್ವನ ಸಂತಸದ ಸಲುವಾಗಿ
ನಾ ನನ್ನ ಕರುಳಬಳ್ಳಿಯ ಕಿತ್ತು
ವೀಣೆಯ ಮಾಡಿ ನುಡಿಸುವಾಗ
ಆ ಸಂತಸದಲಿ ಆಕೆ 
ಮೈಮರೆತಾಗ ನನ್ನೊಳಗೆ 
ಆನಂದಬಾಷ್ಪ !!

(೯) ರಾವಣನೆಂದರೆ ಕೇವಲ 
ರಕ್ಕಸನಲ್ಲ 
ನನಗೆ ಸ್ಫೂರ್ತಿಯಾದಾತ 
ರಕ್ಕಸತನವಿರಬಹುದಾದರೂ
ಆತನ ಮಾತೃ-ಪ್ರೀತಿಯು
ಆತ್ಮಲಿಂಗವ ತಂದು
ಮೆರೆದಾತನಿಗೆ
ನಿಜಕ್ಕೂ ಅರ್ಪಿಸುತ್ತಿರುವೆ 
ಮನಪೂರ್ವಕ ನಮನ !!

-ರಶ್ಮಿ ಹೆಜ್ಜಾಜಿ

Rashmi Hejjaji

 

 

 

 


 

ಯಾತ್ರೆ

ಕೈ ಹಿಡಿದು ನಡೆದ
ನಡೆಸಿದ ದಾರಿಯಲಿ
ನಡೆಯುತಿದೆ
ನೆನಪುಗಳ ಮೆರವಣಿಗೆ
ನಡೆದಂತೆನಿಸುತಿದೆ
ನನ್ನದೆ ಶವಯಾತ್ರೆ

ನಾಲ್ಕು ಮಂದಿಯೇ
ಬೇಕೆಂದಿಲ್ಲಾ 
ಮುರಿದ ಕನಸುಗಳ 
ಮೂಳೆ ಮಾಂಸವ
ಹೊರಲು 

ಬಣ್ಣ ನೋಡದ ಕಂಗಳು
ಬೆಳಕ ಕಾಣದ ನೋಟ
ಗೆದ್ದಲು ಹಿಡಿದ ಕನಸು
ಜಡ ಹ್ರದಯ
ಮರುಭೂಮಿ ಮನಸು
ಸಮಾಧಿಯೊಳಗಣ ಆಶಯ
ಭೂಗೋಳ ಸೇರಿದ 
ಗತದ ನೆನಪುಗಳ
ಹಾವಳಿಯೊಂದು ಸಾಕು
ತಂಗಾಳಿಯಲೂ ತಣ್ಣಗೆ 
ನಡೆದಂತೆನಿಸುವ
ನನ್ನ ಶವಯಾತ್ರೆಗೆ

– ಪರಿಮಳಾ ಗು. ಕಮತರ

Parimala G Kamatar

 

 

 

 


 

ತಾಯಿ ಬೇರು "ಕನ್ನಡ"
ಹುಟ್ಟಿನಿಂದ 
ಕಲಿತ ಪದವೇ 
"ಅಮ್ಮ"

ಮೊದಲು ತೊದಲು 
ಮೊದಲ ನುಡಿಯು 
"ಕನ್ನಡಮ್ಮ"

ಹತ್ತು ಭಾಷೆ ಕಲಿತರೂ 
ಬದುಕದಾರಿಗೆ
ಒಂದೇ ಭಾಷೆ 
ಒಂದೇ ಭಾವ
ಹರುಷ ದಾರಿಗೆ

ಹತ್ತು ರೆಂಬೆ 
ನೂರು ಎಲೆಗಳು 
ಬಾಳ ವೃಕ್ಷಕೆ 

"ಬಲ"ವ ಕೊಡುವ 
ತಾಯಿ "ಬೇರು"
ಒಲವ "ಕನ್ನಡ"

-ಹೆಚ್ ಎಸ್ ಅರುಣ್ ಕುಮಾರ್

hs arun kumar

 

 

 

 


 

ಕಾವೇರಿ ತೌರಿನಲಿ

ಅಪ್ಪಿಕೊಂಡಿರುವ ಬೆಟ್ಟ ಗುಡ್ಡಗಳ ನಡುವೆ
ಮಡಿ ಮಡಿಯಾದ ಕೇರಿಯಲ್ಲಿ 
ಸಿಂಗಾರಗೊಂಡಿತ್ತು ಕಾವೇರಿ ತೌರು
ಇತಿಹಾಸವಾಯಿತು ನಾಡಗುಡಿ ತೇರೂ

ಕನ್ನಡದ ಚಿಲಿಪಿಲಿ ತೋರಣದ ಸನ್ನಾಹಕೆ
ಮುದುರಿದ ಸೆರಗೂ ಮೆರಗು ಕಂಡಿತ್ತು
ಮಡುಗಟ್ಟಿದ್ದ ಸಂಕಟದ ಮನಗಳನ್ನು
ಉಲ್ಲಾಸ ತರಿಸಿ ಮಂತ್ರ ಮುಗ್ಧರನ್ನಾಗಿಸಿತ್ತು

ವಚನ ದಾಸ ದಲಿತ ಸಾಹಿತ್ಯದರಾಧನೆ
ಎಳೆ ನೀರಿನಂತ ವಿಚಾರಗೋಷ್ಠಿಗಳೂ
ಮುಸುಕು ಮೋರೆಗಳ ಎತ್ತಿ ಹಿಡಿವ ಕವನಗಳೂ
ಕಣ್ಮನ ಸೆಳೆದು ಬರಮಾಡುತ್ತಿತ್ತು ಅಲ್ಲಿ ಹೊತ್ತಗೆಗಳೂ

ಈ ಜನ್ಮದ ಝೇಂಕಾರವಿದು ಹುಟ್ಟೂರಲಿ
ಹಪ ಹಪಿಸುತಾ ಬೆರಗುಗಣ್ಣಲಿ ತನ್ಮೀಯಗೊಂಡು 
ಮುಬ್ಬುಗಣ್ಣ ಮಂದಿಯಲ್ಲೂ ಗುಣಿಗುಣಿಸುತ್ತಿತ್ತು
ನಾಡಗುಡಿ ದೇವಿಯ ಓಂಕಾರಾ

ಕಾವೇರಿ ತೌರಿನಲಿ ಕನ್ನಡದ ತೇರು
ಮಿರಿ ಮಿರಿ ಮಿಂಚಿ ಏರುವಾಗ
ಕೊಡಗಿನ ಗೌರಮ್ಮನ ನೆನಪು
ಬಾರದಿಹುದೇ ಕಾವೇರಿ ಬಸಿರಿನಿಂದ

-ಸುನೀತಾ ಕುಶಾಲನಗರ, 

Sunitha K

 

 

 

 


 

ಭಾರತ ಭೂಮಿಯ
ಕರುನಾಡೋದಯ
ಬೆಳಗಿದೆ ಕನ್ನಡ ಸೂರ್ಯ 
ಅದುವೇ ಕನ್ನಡಿಗರ  ಔದಾರ್ಯ 

ಜ್ಞಾನಪೀಠಕೆ ಎಂಟು
ಮುಕುಟವ ತೊಟ್ಟು 
ಸಂಭ್ರಮಿಸಿದೆ ಕನ್ನಡ 
ಸಂಸ್ಕೃತಿಯ ಬೊಟ್ಟನಿಟ್ಟು

ಕವಿಋಷಿ ಸಂತರ ಈ ಬೀಡು
ಕರುಣೆಯೇ ಮೈವೆತ್ತ ಕರುನಾಡು
ಪ್ರೀತಿಯೇ ಕರುನಾಡ ತೋರಣ
ಸಹಬಾಳ್ವೆಯೇ ಕರುನಾಡ ಭೂಷಣ

ನದಿ ಕಾನನ ಗುಡಿ ಗೋಪುರ
ಗಡಿದಾಟಿದ ಅಂತಃಕರಣ 
ಈ ನಾಡ ಬಾವುಟದ ಶೃಂಗಾರ 
ರಾರಾಜಿಸಿದೆ ಕೆಂಪು  ಅರಿಶಿಣ

ಪ್ರತಿ ಕನ್ನಡಿಗನ ನಲ್ನಾಡು
ಪ್ರತಿ ಎದೆಯಲ್ಲಿ ಹೊಮ್ಮಿದೆ ಕನ್ನಡ ಹಾಡು
ಜಾನಪದದ ಈ ಸೊಗಡು
ಕಲೆ ಸಾಹಿತ್ಯದ ನೆಲೆವೀಡು 

ಶಿಲ್ಪಕಲೆಯ ತವರೂರು  
ಕೃಷ್ಣೆಕಾವೇರಿಯೇ ಕಲ್ಪತರು
ಸಾಗರ ಮೊರೆತ ಈ ನಾಡ ಸಂಗೀತ 
ಕಚ್ಚಾಡದ ಕನ್ನಡಿಗ ಬಲು ಧೀಮಂತ 

ಕನ್ನಡಿಗ ಕೈ ಎತ್ತಲು ಕಲ್ಪವೃಕ್ಷ 
ಶಾಂತಿಯ ನಾಡಿಗೆ ಕರುನಾಡು ಸಾಕ್ಷ್ಯ 
ಹೆಮ್ಮೆಯಿದೆ ಇಲ್ಲಿಯ ಜನನಕೆ 
ಸಾರ್ಥಕ್ಯವಿದೆ ಇಲ್ಲಿ ಮಡಿಯುವುದಕೆ

ಅಮುಭಾವಜೀವಿ  

amu

 

 

 

 


 

ದೀಪ ಹಚ್ಚಬೇಕಿದೆ..

ನೋಡಿ ಎಷ್ಟೊಂದು
ಕತ್ತಲೆ ತುಂಬಿದೆ ಸುತ್ತೆಲ್ಲಾ…
ಈ ಅಂಧಕಾರದಲ್ಲಿ
ಕುರುಡಾಗಿಬಿಟ್ಟಿವೆಯಲ್ಲಾ
ನಮ್ಮ ಕಣ್ಣುಗಳು…,
ಮತ್ತೆ ಮನಸ್ಸುಗಳು…!!
ಅಲ್ಲೆಲ್ಲೋ ಬೀದಿಯಲ್ಲಿ
ಮೋರಿಯ ಅಕ್ಕಪಕ್ಕದಲ್ಲಿ
ಹಸಿವಿನ ಚಾದರದೊಳಗೆ
ಬಿಸಿ ಉಸಿರಲಿ
ಕಣ್ಣೀರು ಕುದಿಯುತಿದೆ….
ಇಲ್ಲದೆ ದಿನಗೂಲಿ
ಬದುಕು ಮುಂದೆ ಸಾಗದ
ಗೂಡೊಳಗೆ
ಹತಾಷೆ ಹೆಪ್ಪುಗಟ್ಟಿದೆ…
ಯುದ್ಧ ಭೂಮಿಯಲಿ
ಬಂದೂಕಿನೊಡನೆ
ನೆನಪುಗಳ ಹಂಚಿಕೊಳ್ಳುತಿಹ
ಯೋಧನ ಮನೆಯ
ಕನಸುಗಳೆಲ್ಲಾ ಚಟಪಠಿಸುತ್ತಿವೆ…
ದೀಪ ಹಚ್ಚಬೇಕಿದೆ
ಅಂತರಂಗದಲ್ಲಿ…
ಆ ಬೆಳಕು 
ಹಬ್ಬುತ್ತಾ ಹಬ್ಬುತ್ತಾ
ಊರು ಕೇರಿ ದಾಟಿ
ಗಡಿ ರೇಖೆಗಳ ಮೀರಿ
ಎಲ್ಲೆಲ್ಲೂ ಆವರಿಸಿಕೊಳ್ಳಲಿ…
ಈ ಲೋಕದ ಕತ್ತಲೆ
ಕಳೆದಾಗ
ನಗಬೇಕಿದೆ ಎಲ್ಲರೂ
ಕೈ ಕೈ ಹಿಡಿದು ಮನಬಿಚ್ಚಿ…
ಹಚ್ಚಬೇಕಿದೆ ಹೃದಯದಲ್ಲಿ
ಮಾನವೀಯತೆಯ ದೀಪ…..

-ಸಚಿನ್ ಅಂಕೋಲಾ…..

sachin naik

 

 

 

 


 

ಮೊಳಗಿದೆ ಕನ್ನಡ ದುಂದುಭಿ
===============

ಶ್ರೀಗಂಧದ ಸಿರಿಯಾಗಿ
ಜೀವನದಿ ಕಾವೇರಿಯಾಗಿ
ಸಹ್ಯಾದ್ರಿ ಗಿರಿ ಶಿಖರವಾಗಿ
ಹಚ್ಚಹಸುರನೇ ಹೊದ್ದು 
ನಿತ್ಯ ಕಂಗೊಳಿಸುತಿಹಳು
ಕನ್ನಡ ತಾಯಿ ಭುವನೇಶ್ವರಿ

ಬೇಲೂರು, ಹಳೆಬೀಡು
ಬಾದಾಮಿ, ಹಂಪೆ, ಐಹೊಳೆ
ಪಟ್ಟದಕಲ್ಲು,ಶ್ರವಣ ಬೆಳಗೊಳ
ಶಿಲ್ಪಕಲಾ ವೈಭವ ಶೋಭಿತ
ಮುಂಚೂಣಿಯಲಿ ಮೆರೆದಿಹಳು
ಕನ್ನಡ ಸಿರಿದೇವಿ ಭುವನೇಶ್ವರಿ

ಪಂಪ,ರನ್ನ,ಪೊನ್ನ,ಜನ್ನ,ಹರಿಹರ
ಸರ್ವಜ್ಞ,ಪುರಂದರದಾಸ,ಕನಕದಾಸ
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮ
ಕವಿಪುಂಗವರ ಸಾಹಿತ್ಯ ಮಾಲೆ ತೊಟ್ಟು  
ಹಳೆಗನ್ನಡ,ಆಧ್ಯಾತ್ಮಿಕ ಕಂಪು ಇಂಪು ಸೂಸಿ 
ರಾರಾಜಿಸುತಿಹಳು ತಾಯಿ ಭುವನೇಶ್ವರಿ

ಕುವೆಂಪು,ಬೇಂದ್ರೆ,ಮಾಸ್ತಿ,ತರಾಸು
ಡಿ.ವಿ.ಗುಂಡಪ್ಪ,ಶಿವರಾಮ ಕಾರಂತ
ಆಧುನಿಕ ಸಾಹಿತ್ಯ ಸೃಷ್ಟಿಯ ಹರಿಕಾರರ
ಹೊಸಗನ್ನಡ ಸಾಹಿತ್ಯವ ಮುಡಿಗಿಟ್ಟು
ಕನ್ನಡ ಭಾಷೆಯ ಸಿರಿಯ ತಿಲಕವನಿಟ್ಟು
ಸಿಂಗರಿಸಿ ಬೆಳಗುತಿಹಳು ತಾಯಿ ಭುವನೇಶ್ವರಿ 

ಕಲೆ ಸಾಹಿತ್ಯ ಸಂಸ್ಕೃತಿ ನೀಡಿ
ಕನ್ನಡ ಸಂಗೀತದಾ ಇಂಪಿನ ಮೋಡಿ
ಪ್ರೀತಿ ಸ್ನೇಹ ಒಲುಮೆಯ ಒಡನಾಡಿ
ನಡೆಯಾಗಿ ನುಡಿಯಾಗಿ ಕನ್ನಡವಾಗಿ
ಜ್ಞಾನ ದೀವಿಗೆ ಹಚ್ಚಿ ಬೆಳಗಿಹಳು 
ಕರ್ನಾಟಕದ ಮಾತೆ ಭುವನೇಶ್ವರಿ

ನಡೆ ಕನ್ನಡ ನುಡಿ ಕನ್ನಡ
ಉಸಿರಾಡುವ ಗಾಳಿಯು ಕನ್ನಡ
ಹರಿದಾಡುವ ನೆತ್ತರು ಸಹ ಕನ್ನಡ
ಮುಲಿಲೆತ್ತರ ಹಾರುತಿದೆ ಬಾವುಟ ಕನ್ನಡ
ರಾಜ್ಯೋತ್ಸವ ಮೊಳಗಿದೆ ಜಯ ಕನ್ನಡ
ಜಯವಾಗಲಿ ಕರುನಾಡ ತಾಯಿ ಭುವನೇಶ್ವರಿ

**** ಪ್ರಕಾಶ ತದಡಿಕರ ****

Prakash Tadadikar

 

 

 

 


       
ಸುದ್ಧಿ ಮುಟ್ಟಿಸ ಬಾರದೆ..                .    

ಗುಬ್ಬಿ ಗೂಡಿನ 
ಮುದ್ದು ಹಕ್ಕಿಗೆ 
ಸುದ್ಧಿ ಮುಟ್ಟಿಸ ಬಾರದೆ?
ಹೊಲದಿ ಬೆಳೆದಿಹ 
ಪೈರ ತೆನೆಯಲಿ 
ಹಾಲು ತುಂಬಿಹುದಲ್ಲವೆ!

ಹೊಲದ ಅಂಚಿನ
ಮಾವ ತೋಪಲಿ
ತಳಿರು ಚಿಗುರಿದೆಯಲ್ಲವೆ?
ಕಾಗೆ ಗೂಡಲಿ 
ರೆಕ್ಕೆ ಹುಟ್ಟಿಹ ಮರಿ 
ಕೋಗಿಲೆಗಿದು ತಿಳಿದಿಲ್ಲವೆ!

ಕೆರೆಯ ದಂಡೆಯ 
ಹೊಂಗೆ ಮರದಲಿ 
ಹೂವು ಅರಳಿಹುದಲ್ಲವೆ?
ಜೇನು ಗೂಡಿನ 
ದುಡಿವ ದುಂಬಿಗೆ 
ಇನ್ನೂ ನಿದ್ದೆ ಬಿಟ್ಟಿಲ್ಲವೆ!

ನೀಲ ಗಗನದಿ 
ಮೋಡ ಮುಸುಕುತ 
ತಂಗಾಳಿ ಬೀಸುತಿಹುದಲ್ಲವೆ?
ಮರದ ಟೊಂಗೆಯ 
ಮೇಲೆ ಕುಳಿತಿಹ 
ನವಿಲಿಗಿದು ಸೊಂಕಿಲ್ಲವೆ!
-ಶ್ರೀನಿವಾಸ್  ಪ್ರಭು

shrinivas-prabhu

 

 

 

 


 

ಯೋಧ ಮತ್ತು ಆತಂಕ

ಬೆನ್ನಿಗೆ ಬಂದೂಕು
ಗೋಲಿ ನಿರೊಧಕ ಕಂಚುಕ, ತಲೆಕಾಪು
ಗೇಣುದ್ದ ಜಂಗಲ್ ಬೂಟು ತೊಟ್ಟು
ಕಾಶ್ಮಿರದೊಡಲ ಹಸಿರನುಟ್ಟ ಹಿಮದ ಕಣಿವೆಗೆ 
ಎದೆ ಒಡ್ಡಿ ಅಡಿ ಇಡುವ ಹದಿ ಹರೆಯ (ಸಿಪಾಯಿ)!!

ಅದೋ ಶೃಂಗ ಶ್ರೇಣಿ 
ಕಲ್ಲು ಮುಳ್ಳು ಕಂಟಿ ಕಾವಲುಗಳ 
ಕಡಿದಾದ ತಿರುವು ಮುರುವುಗಳ 
ಕವಲು ದಾರಿ ಮಧ್ಯೆ
ದಂಗುಡಿಸಿ ಝೇಂಕರಿಸುವ ತೊರೆ ದಾಟಿ
ಕರಿನೆರಳ ಹುಡುಕಿ ಪುಡಿಯಾಗಿಸಲು 
ಏರಿ ಇಳಿಯುತಿರೆ!!

ಆದರೀ ಕಣಿವೆಗಳಿಗಿಲ್ಲ ಮುಪ್ಪು
ಕೈ ತೋರಿ ಮರೆಮಾಚಿ  ಮನೆಮಾಡಿ
ನೆಮ್ಮದಿಯ ಬದುಕಿನಲಿ ದಿವಾಳಿಯಾಗಿಸಿ
ಕಂಡವರ ಹೆಣ್ಣುಗಳಿಗೆ ಕಣ್ಣ ಹಾಕಿ 
ಒಪ್ಪಿಯಾದರು, ತಪ್ಪಾದರು ಸರಿ 
ತಿಂದು ತೇಗಿ ಗುಂಡಿಗಳಿಗೆ ಗುಂಡು ಹಾರಿಸುವ 
ಕಪ್ಪು ರಕ್ತದವರಿಲ್ಲಿ?

ಆತಂಕದ ಸದ್ದಿಗಿಲ್ಲಿ 
ಬಿಕ್ಕ ಹಿಡಿದಿರೋ ಮುದುಕ ಮುದುಕಿಯರ ಒಡಲಳಿವು
ಮುಚ್ಚು ಮರೆಯಾಗಿರೆ ಕಂದಮ್ಮಗಳ 
ನಗುವಿನಲೆಯ ಹುಚ್ಚು ಹರಸಾಹಸ
ಆರ್ತ ಸಂಘರ್ಷಕಿಳಿಯದೆ 
ತಮ್ಮಷ್ಟಕ್ಕೆ ತಾವೇ ಬೆದರಿ 
ಅಡಿಗಲ್ಲಾಗುವ ಬಂಡೆಗಳು
ಕತ್ತಲೆ ಕಡೆಗೆ ಹುದುಗಿ ಅಡಗಿವೆ!!

ಕೈ ಬೀಸಿ  
ಮತ್ತೆ ಮತ್ತೆ ಕರೆಯುತಿರೆ
ಪರ್ವತೊಪಾದಿ 
ಬಿಸಿ ಉಸಿರ ನಡುವೆ 
ಬೀಸಿ ಬಸಿಯುವ ಹಿಮಗಾಳಿ
ಮೈಗರಿವಿಲ್ಲದ ಚಾಮರ (ಫೈನ್ ಟ್ರೀ)
ಹಸಿದ ಆಡು ಹಸುಗಳು ಹುಲ್ಲು ಕುರುಚಲುಗಳಿಗಾಗಿ 
ಓರೆ ಕೊರೆಗಳ ಅಲೆದಾಟದ
ಮಧ್ಯೆ
ಕಪ್ಪು ಹೊಗೆಯಾಡುವ ಮುನ್ನ
ಮತ್ತೆ ಮತ್ತೆ…….
-ಸೋಮಲಿಂಗ ಮೆಳವಂಕಿ


ಮಳೆ ನಿಂತಾಗ ಅವಳು ಹೊರಟಳು

ಮಳೆ ಅದಾಗಲೇ ಧೋ ಎಂದು
ಸುರಿಯಲಾರಂಭಿಸಿತ್ತು. ಶುರುವಾಯಿತು 
ಜೊತೆಗೆ ಪತಿ-ಪತ್ನಿಯರ ಜಗಳ 
ಹುಯ್ಎಂದು ಎಡಬಿಡದೇ ಬೀಳುವ
ಮಳೆಯಿಂದ ಇವರ ಕಲಹ 
ಯಾರಿಗೂ ಕೇಳುವಂತಿರಲಿಲ್ಲ. 
ಹೆಚ್ಚಾದಂತೆ ನೀರನ್ನು ಅಣೆಕಟ್ಟಿನಿಂದ
ಬಿಡುಗಡೆ ಮಾಡುವಂತೆ,
ತುಂಬಿದ್ದ ತನ್ನೆಲ್ಲಾ ನೋವನ್ನು 
ಒಮ್ಮೆಲೇ ಹೊರಹಾಕಿದ್ದಳು ಅವನ ಮೇಲೆ
ಇತ್ತು ಅದರಲ್ಲಿ ಅವನ ಹಠಕ್ಕೆ, ಕೋಪಕ್ಕೆ
ನೀಡಿದ ಕಿರುಕುಳಕ್ಕೆ, ನೋವಿಗೆ, ಹತಾಶೆಗೆ
ಸಾಲು ಸಾಲು ಪ್ರಶ್ನೆಗಳ ತಿರುಗೇಟು.

ಮಿತಿಮೀರಿದ ಮಾತಿನ ಚಕಮಕಿಗೆ ಸಮವೆಂಬಂತೆ
ಮಳೆಯ ಹುಯ್ಯುತ್ತಿತ್ತು ತನ್ನಷ್ಟಕ್ಕೇ ಯಾರ ಹಂಗಿಲ್ಲದೇ.

ಇದ್ದವು ಅವನ ಬಳಿಯೂ
ಅವಳ ಮಾತಿಗೆ ಸಮಂಜಸವಾದ ಕಾರಣಗಳು
ಪ್ರತಿ ಕಲಹಕ್ಕೂ ಕೊಂಕು ನೆಪಗಳು
ಹೇಳಿ ತೀರಿ ತೋರಿತ್ತಿದ್ದನು ಉತ್ತರನ ಪೌರುಷ.
ದಿನವೂ ಜರುಗುತ್ತಿದ್ದ ಕಾದಾಟದಲ್ಲಿ 
ಅವಳ ದಾಂಪತ್ಯದ ಕನಸುಗಳು ಸುಟ್ಟು
ಬೂದಿಯಾಗಿ ಭಗ್ನ ಅವಶೇಷಗಳಾಗಿದ್ದವು
ಅಲ್ಲಲ್ಲೇ ಕ್ಷಣಕ್ಷಣಕ್ಕೂ.

ಬಾಕಿ ಉಳಿದಿತ್ತು ಅವಳಲ್ಲಿ
ತೀರ್ಥಯಾತ್ರೆಗೆ ಹೋದ ಅತ್ತೆ-ಮಾವ 
ಮರಳಿ ಬಂದಾಗಲಾದರೂ ಕೊಂಚ
ಬದಲಾವಣೆಯ ದಿನಗಳ ಕುರಿತ
ಒಂದು ನಿರ್ಲಿಪ್ತ ಆಕಾಂಕ್ಷೆ.

ಇನ್ನೂ ಅವನ ತಾಪ ತಣಿಯಲಿಲ್ಲ
ನೆನಪಾಯಿತು ಮತ್ತೊಂದು ಕೊಂಡಿ
ಪುನಃ ಮುಂದುವರೆಸಿದನು. 
ಎಷ್ಟೇ ಮಳೆಯಾದರೂ ಇಂಗಿಸಿಕೊಳ್ಳುವ 
ಇಳೆಯಂತೆ ಇವಳೂ ಸಹಿಸಿದಳು.
ಮಳೆ ನಿಲ್ಲಲಿಲ್ಲ, ಜಗಳ ಮುಗಿಯಲಿಲ್ಲ.

ಮಳೆಯಲ್ಲಿ ತೊಯ್ದ ಹೂ ಗಿಡಗಳಂತೆ
ಕಣ್ಣಾಲಿಯಿಂದ ಮಾಂಗಲ್ಯವೂ ಒದ್ದೆಯಾಗಿ
ಹಚ್ಚಿದ ಅರಶಿಣ-ಕುಂಕುಮವೂ ಅಳಿಸಿಹೋದವು.
ಆ ಹೊತ್ತಿಗೆ ತಾಯಿ ಕೊಟ್ಟ ಸೀರೆ,
ಉಡುಗೊರೆಯ ಗಡಿಯಾರ, ಸ್ಟೀಲ್ ಪಾತ್ರೆಗಳು
ನಿರ್ಜೀವ ಪ್ರೇಕ್ಷಕರಾಗಿ ನಿಂತು ನೋಡುತ್ತಿದ್ದವು.

ಒಂದಿನಿತೂ ಅಹಂ ಇಳಿಯದ ಅವನು
ನಶೆಯಲ್ಲಿ ಸೀದಾ ಹೋಗಿ
ಹಸಿ ಕಟ್ಟಿಗೆ ತಂದು ಮಮಕಾರ ಹೀನವಾಗಿ
ಹೊಡೆದನು. ಆಕೆಯ ನೋವಿಗೆ
ಸಮನಾಗಿ ಕೂಗಿದ ಗುಡುಗಿನ ಸಾಕ್ಷಿಯಿತ್ತು.
ಸೋತೆನೆಂಬುದು ಖಚಿತವಾದ ಮೇಲೆ
ಈ ನರ ಪಿಶಾಚಿಯಿಂದ ದೂರಾಗುವುದು ಒಳಿತೆನಿಸಿ
ಕೂಡಲೇ ಉಟ್ಟ ಬಟ್ಟೆಯಲ್ಲಿ ಹೊರನಡೆದಳು
ಆ ವೇಳೆಗೆ ಮಳೆಯು ನಿಂತಿತು.

-ಅಭಿಷೇಕ್ ಪೈ ಕಾಜ್ರಳ್ಳಿ

Abhishek Pai

 

 

 

 


 

ಜೈ ಎನ್ನಿರೆಲ್ಲಾ
ಜೈ ಜೈ ಎನ್ನಿರೆಲ್ಲಾ
ಭುವನೇಶ್ವರಿ ಮಾತೆಗೆ ಜೈ ಎನ್ನಿರೆಲ್ಲ

ಸಿಂಹ ಘರ್ಜನೆ ನುಡಿಯು ನಮ್ಮ ಕನ್ನಡ 
ಕರುನಾಡ ಮಕ್ಕಳು ಕೆಚ್ಚೆದೆಯಾ ಕಲಿಗಳು 
ಹಸಿರು ಸಿರಿಯ ಕನ್ನಡತಿ ನಮ್ಮತಾಯಿಯೋ 
ಭಾವೈಕ್ಯತೆ ಭದ್ರ ಕೋಟೆ ಕರುನಾಡಿದು

ಮಣ್ಣಲ್ಲಿ ಚಿನ್ನವ ಬೆಳೆವ ನಾಡು ನಮ್ಮದು
ಸೌಗಂಧ ಸೂಸುವಂಥ ಸೌಖ್ಯ ಬೀಡಿದು 
ಮಹಾನ್ ಪುರುಷರ್ ಉದಿಸಿದ ಶ್ರೇಷ್ಠ ಮಣ್ಣಿದು 
ವೀರ ಧೀರ ಸಾಹಸಿಗರ ತಾಯ್ನಾಡಿದು

ಕಾವೇರಿಯು ಮೈ ದುಂಬಿಹಳು
ಕವಿ ಪುಂಗವರು ಹೆಸರಾಗಿಹರು
ವೀರ ಶೂರರು ಆಳಿಹೋದರು
ಸಂತ ಶರಣರು ಸ್ಪೂರ್ತಿ ಯಾದರು
ಹಾಡಿ ನುಡಿಸಿ ಹರಿಸಿ ಸುಧೆಯ ಶಿಲ್ಪ ಕಲೆಯ ತವರಿದೋ
-ಕೃಷ್ಣ ಶ್ರೀಕಾಂತ ದೇವಾಂಗಮಠ

krishna-devangamatha

 

 

 

 


 

ತೊರೆದು ಹೋಗು ಜಗವ

ನಿನ್ನಂತು ಪ್ರೀತಿಸಲಾರೆ
ಆದರೂ ಬೆನ್ನೇರಿ ಬರುವೆ
ದೂರ ಸರಿಸಿದಷ್ಟು ಹತ್ತಿರವಾಗಿ

ಸಿಕ್ಕ ಪ್ರೀತಿಯೂ ಮುರಿದು
ಜೊತೆಯ ತೊರೆದು ಹೊರಟರೂ
ಏಕಾಂಗಿ ಮಾಡದ ಕಲ್ಲುಹೃದಯಿ

ಬೇಡ ಬೇಡವೆಂದರೂ 
ದಣಪೆ ದಾಟಿ ಬರುವವೆಯಲ್ಲ
ನಿಷ್ಕರುಣೆಯ ಹೃದಯ ಹೀನನೆ

ಯಾರನೂ ಬಿಡದವ
ಯಾವ ಬೇದವೆಣಿಸದವನು
ಆದರೂ ಬೇಡದ ಸಂಗಾತಿಯಲ್ಲವೇ

ಅರುಹದೆ ಅಪ್ಪುವೆಯಲ್ಲ
ನಾಚಿಕೆಯಿಲ್ಲ ಛೀ! ಇದೇನು
ದುರಂತಗಳಿಗೆ ಸಾಕ್ಷಿಯಾಗುವೆ

ಕಣ್ಣೀರ ಕೋಡಯಲಿ
ಮುಳುಗುವ ಮುನ್ನವಾದರೂ
ತೊರೆವ ನಿರ್ಧಾರ ಬಾರದವನೋ?

-ಮಂಜು ಹೆಗಡೆ

manju-hegde

 

 

 

 


 

ನೋವಿನ ಅಲೆ ತೀಡಿ…

ನೇರ ಮಾತಿಗೆ ನೋವಿನ ಅಲೆ ತೀಡಿ
ಸೂರ್ಯನ ಕೈಗಿಟ್ಟರು
ಬೆಂದ ಮನಸ್ಸು
ಸಾಗುವ ಬದುಕಿನ ಪಯಣದಲ್ಲಿ
ಹೆಜ್ಜೆ ಗುರುತಾಯಿತು

ಮರೆಯಲೋದರು ಮರೆಯಲಾಗದೆ
ಮೂಕ ಹಕ್ಕಿಯ ಜೊತೆ
ನೋವ ಸ್ಪುರಿಸಿದೆ
ಹಕ್ಕಿ ಕೊಕ್ಕ ತೀಡಿ ಕಣ್ಣೀರಾಕಿತು

ಹೋಗುತ್ತಲೇ ಇದ್ದೇನೆ
ಸೂರ್ಯ ಜೊತೆಯಲ್ಲೇ ಬರುತ್ತಿದ್ದಾನೆ
ಚಂದ್ರನ ಆಗಮನದ ದಾರಿಯ ಮೇಲೆ
ಮುಳ್ಳ ಸುರುವಿದ್ದಾರೆ ಪಾಪಿಸ್ಟರು

ಸಮಾಧಾನ ಮನಸ್ಸಿನ ಹಿಡಿಗನ್ನಡಿಯಾಗಲಿಲ್ಲ
ಹೆಪ್ಪುಗಟ್ಟಿದ ದುಃಖ ಕಣ್ಣೀರಾಗಿ
ಅಂಗೈ ಗುಣಿಯಲಿ ಬಿದ್ದಿದ್ದನ್ನ ಕೆದಕಿ ನೋಡಿದೆ
ಬದುಕಿನ ಹೂವೊಂದು ನಕ್ಕಂತಾಯಿತು

ಛಲ ಚೆಲ್ಲುವ ಕನಸು
ಮನಸ ಮುನ್ನೆಡೆಸುತ್ತಲೇ ಇದೆ
ಬೆಳ್ಳಿ ಚುಕ್ಕಿಯ ನೋಡುತ
ಮನಸು ಹಗುರಾಗಿದೆ

ಅಕ್ಕರೆಯ ನುಡಿಮುತ್ತುಗಳ
ಸಂತೈಸುವಿಕೆಗೆ
ಕೆಂಡ ಹುದುಗಿಸಿಕೊಂಡೂ
ನಗುವ ಚೆಲ್ಲುತ್ತಿದೆ
ಮನದೊಳಗಿನ ನವಿಲು
-ಬಿದಲೋಟಿ ರಂಗನಾಥ್

Ranganath B

 

 

 

 


 

ಭಾರವಾದ ಜೀವನದಲ್ಲಿ 
ನಿನ್ನ ನೆನಪುಗಳ ಹೊರೆ

ಎರವಲು ಕೊಡುವೆಯ 
ಸಖಿ ಆ  ನಿನ್ನ ಕಲ್ಲು ಮನಸ್ಸಾ 
ತಾಳಲಾರೆನು ನೀ 
ಇರದ ಈ ಸಮಯ

ನೋವಿನ ಕಣ್ಣಹನಿ 
ಜಾರುತ್ತಿದೆ ನಿನ್ನ ಕಾಣದೆ 
ಕಣ್ಣಹನಿಗಳಿಗೆ ಲೆಕ್ಕವಿಲ್ಲ 
ಇನ್ನೂ ನಿನ್ನ ನೆನಪುಗಳೆ ನನಗೆಲ್ಲಾ 

ವರುಷಗಳು ಉರುಳುತಿವೆ
ಹರುಷಗಳು ಕರಗುತ್ತಿವೆ 
ನಿನ್ನ ಪ್ರೀತಿ ಇನ್ನೂ 
ಮರೀಚಿಕೆಯಾಗುತ್ತಿದೆ

ನಿನ್ನ ಜೊತೆ ನನಸಿನ
ಜೀವನದಲ್ಲಿ ಸಾಗಬೇಕೆಂದು ಕೊಂಡೆ 
ಆದರೆ ನೀ ಇನ್ನೂ ಕನಸು
-ಸತೀಶಬಾರಿ

satish-bari

 

 

 

 


 

ತುಸು ಹೆಚ್ಚೇ ಎನಿಸುವಷ್ಟು ಪ್ರೀತಿಸಬಲ್ಲೆ,
ಆದರೆ ನಿನ್ನಷ್ಟು ಚಂದ ಬರೆಯಲಾಗದು ಗೆಳತಿ….

ನಿನ್ನ ಮೇಲಿನ ಅತಿಯಾದ ಪ್ರೀತಿ
ಅಕ್ಷರಗಳ ಮೇಲಿನ ಹಿಡಿತ ತಪ್ಪಿಸುತ್ತಿದೆ.
ನೀನೇ ಒಂದು ಸುಂದರ ಕಾವ್ಯ
ಪ್ರೇಮಗೀತೆಯ ನಿವೇದಿಸಲಿ ಹೇಗೆ…?

ಸುಮ್ಮನೇ ಪ್ರೀತಿಸಿಬಿಡುತ್ತೇನೆ. ಅಷ್ಟೇ..
ಅಕ್ಷರಗಳ ಅಲಂಕಾರದಲಿ ನಿನ್ನ ಬಂಧಿಸಲು
ಚರಣ ಪಲ್ಲವಿಯ ನಡುವೆ ಸಂಧಿಸಲು
ಹಾತೊರೆಯದೀ ಹೃದಯ, ಪ್ರೇಮಿ ನಾ.ಕವಿಯಲ್ಲ..!

ಆದರೂ….

ನಿನ್ನಂತರಂಗದ ಕದವ ತೆರೆದು ನೋಡೊಮ್ಮೆ
ಬಾಗಿಲಿಗೆ ಬಂದು ನಿಂತ ಪ್ರೇಮಭಿಕ್ಷು ನಾ…
ಹಾಕಿಬಿಡು ಎನ್ನೆದೆಯ ಜೋಳಿಗೆಗೆ
ನಿನ್ನೊಡಲ ಭಾವಗಳನು,
ಬರೆದೇನು ನಿನ್ನಂತೆ ಕವಿತೆಯೊಂದನು….!!!

– ಚಂದ್ರಶೇಖರ ಮಾಡಲಗೇರಿ

chandrashekar

 

 

 

 


 

ಮೌನದ ಕೋಟೆಯಲ್ಲಿ…

ನಿನ್ನದೇ ಪ್ರೀತಿಯನು ಇಷ್ಟೊಂದು ಕಾಯಿಸುವ ಅಗತ್ಯವೇನಿದೆ?
ನಿನ್ನ ಒಂದೇ ಒಂದು ಮಾತಿಗಾಗಿ ಕಾದು ರಕ್ತ ಹೆಪ್ಪುಗಟ್ಟಿ ಹೋಗಿದೆ

ತಣ್ಣನೆಯ ಕೊರೆಯುವ ಈ ಚಳಿಯ ರಾತ್ರಿಯಲಿ
ನಿನ್ನ ಕಾಡುವ ನೆನಪಿನ ಹಿಮದ ಅರಮನೆ ನಿರ್ಮಿಸಿದೆ

ಎರಡು ರಾತ್ರಿ, ಎರಡು ಹಗಲಿನ ಸುದೀರ್ಘ ಸಮಯದಲಿ
ಬದುಕು ಹುಲ್ಲುಕಡ್ಡಿಯಷ್ಟೂ ಮಿಸುಕದೇ ತಟಸ್ಥವಾಗಿದೆ

ದೀರ್ಘ ಮೌನದ ಕಡಲ ದಾಟಿ ಬರುವ ಹಡಗು
ಅಲೆಯ ಹಿಡಿತಕೆ ಸಿಲುಕಿ ದಡವ ಸೇರದಾಗಿದೆ

ಬೇಡ ಸಾಕಿ, ಈ ಮೌನದ ಕೋಟೆಯ ಮುರಿದು ಬಿಡು
‘ಸಿರಿ’ಯ ಮಾತಿನ ಮಂಟಪ ನಿನಗಾಗಿ ಕಾದು ಕುಳಿತಿದೆ
– ಸಿರಿ

Shreedevi Keremane

                 

 

 

 


                       
 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಪಂಜು ಕಾವ್ಯಧಾರೆ

  1. ಈ ವಾರದ ಪಂಜುವಿನಲ್ಲಿನ ಕವಿತೆಗಳುಒಂದಕ್ಕಿಂತ ಒಂದು ಚಂದ ಹಾಗೆಯೇ ವಾಸ್ತವದ ಬೆಳಕನ್ನು

    ಕನ್ನಡದ ಗುಣವನ್ನು ಬಿಂಬಿಸುವಲ್ಲಿ ಕವಿತೆಗಳು ಕಂಗೊಳಿಸುತ್ತವೆ.

Leave a Reply

Your email address will not be published.