ನ್ಯಾನೋ ಕಥೆಗಳು: ಪ್ರೇಮ್ (ಪ್ರೇಮ ಉದಯಕುಮಾರ್)

prema-uday-kumar

ಹಣೆಬರಹ

ಬೆಳಗೆದ್ದು ಮಾವನ ಮನೆಗೆ ಹೋಗಬೇಕಿತ್ತು. ಟಿ.ವಿ. ಹಾಕಿದ ರಾಕೇಶ್. ಸ್ವಾಮೀಜಿಯೊಬ್ಬರು ಭವಿಷ್ಯ ಹೇಳುತ್ತಿದ್ದರು. ಅವನ ಕುಂಭ ರಾಶಿ ಬರುವವರೆಗೆ ಕಾದ. ಈ ರಾಶಿಯವರು ಪ್ರಯಾಣವನ್ನು ಮುಂದೂಡಿ ಎಂದರು. ಸೌಖ್ಯವಿಲ್ಲದ ಮಾವನನ್ನು ನೋಡಲು ನಾಳೆ ಹೋಗೋಣ ಎಂದು ಸುಮ್ಮನಾದ. ಮರುದಿನ ಹೊರಟ ಬಸ್ಸು ಬ್ರೇಕ್ ಫೈಲ್ಯೂರ್ ಆಗಿ ನುಜ್ಜುಗುಜ್ಜಾಯಿತು.

ಜಿಪುಣತನ

ರಾಮಣ್ಣ ಹಲ್ಲು ನೋವಿನಿಂದ ಬಳಲುತ್ತಿದ್ದರು. ಯಾವತ್ತೂ ಡಾಕ್ಟರ್ ಬಳಿ ಹೋಗುತ್ತಿರಲಿಲ್ಲ.ಡಾಕ್ಟರ್ ಎಂದರೆ ಭಯ. ಅವರಿವರ ಪುಕ್ಕಟೆ ಸಲಹೆ ಪಡೆಯುತ್ತಿದ್ದರು. ಯಾರೋ ಮಾತ್ರೆ ಇಡಲು ಹೇಳಿದರೆ, ಮತ್ತೊಬ್ಬರು ಲವಂಗದ ಎಣ್ಣೆ ಹಾಕೆಂದರು. ಆಪ್ತ ಗೆಳೆಯ ಹೊಗೆಸೊಪ್ಪು ಇಡೆಂದ. ಹಾಗೆ ಇಡುತ್ತಾ ಹೋದಂತೆ ಒಮ್ಮೆಗೆ ನೋವು ಕಡಿಮೆಯಾದಂತೆ ಅನ್ನಿಸಿತು. ಮುಂದುವರೆಸಿದ. ಗೊತ್ತಿಲ್ಲದೆ ಅದಕ್ಕೆ ದಾಸನಾದ. ಮಗ ಬಂದು ಆ

ಸ್ಪತ್ರೆಗೆ ಸೇರಿಸಿದಾಗಲೇ ಗೊತ್ತಾಗಿದ್ದು. ಒಸಡಿನ ಕ್ಯಾನ್ಸರ್ ಅದಾಗಲೇ ಎರಡನೇ ಹಂತ ತಲುಪಿತ್ತು!

ನೃತ್ಯ (ಸತ್ಯ ಕತೆ)

ಪುಷ್ಪಕ್ಕನಿಗೀಗ ಐವತ್ತಾರು ವರ್ಷಗಳು. ಅವರನ್ನಾರೂ ಆಂಟಿ,ಅಜ್ಜಿ ಎಂದು ಕರೆದವರೇ ಇಲ್ಲ. ತನ್ನ ಜೀವನವನ್ನು ಭರತನಾಟ್ಯಕ್ಕೆ ಮುಡಿಪಾಗಿಟ್ಟಿದ್ದರು ಅವರು. ಎರಡು ತಿಂಗಳ ಹಿಂದೆ ಅವರಿಗೆ 'ನನಗೆ ವಯಸ್ಸಾಯಿತು, ಸಾಕು' ಅನ್ನಿಸಿತು. ಸ್ವಯಂ ನಿವೃತ್ತಿ ಘೋಷಿಸಿ ನಿಲ್ಲಿಸಿಬಿಟ್ಟರು. ಈಗ ನರದ ತೊಂದರೆ ಕಾಣಿಸಿಕೊಂಡಿತು. ಡಾಕ್ಟರ್ ಬಳಿ ಹೋಗಿ ಹಲವಾರು ಪರೀಕ್ಷೆಗಳ ಬಳಿಕ ಡಾಕ್ಟರ್ ಕೊಟ್ಟ ಸಲಹೆ ಹೀಗಿತ್ತು "ನಿಮಗ್ಯಾವ ಮದ್ದಿನ ಅವಶ್ಯಕತೆ ಕಾಣುತ್ತಿಲ್ಲ,ಪ್ರತಿದಿನ ತಪ್ಪದೇ ಕನಿಷ್ಠ ಅರ್ಧ ಗಂಟೆ ನೃತ್ಯಾಭ್ಯಾಸ ಮುಂದುವರೆಸಿ."

ದಾನ

ಶೈನಿ ರಾಬರ್ಟ್ ಹಾಗೂ ವಿನೀತ್ ಗೌರವ್  ಒಬ್ಬರನೊಬ್ಬರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಏನೇ ಕಷ್ಟ ಪಟ್ಟರೂ ಹೆತ್ತವರನ್ನು ಒಪ್ಪಿಸಲಾಗಲಿಲ್ಲ ಇಬ್ಬರಿಗೂ. ಶೈನಿಗೆ ಮನೆಯವರು ಬೇರೆ ಹುಡುಗನನ್ನು ನೋಡಿದರು. ಮನಸ್ಸಿನ ಯಾತನೆ ತಾಳಲಾರದೆ ಆತ್ಮಹತ್ಯೆಗೆ ಪ್ರಯತ್ನಿಸಿ ಕಾರಿಗೆ ಡಿಕ್ಕಿ ಹೊಡೆದು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದವಳನ್ನು ಯಾರೋ ಆಸ್ಪತ್ರೆಗೆ ಸೇರಿಸಿದರು. ವಿಷಯ ವಿನೀತ್ ಗೆ ತಲುಪಿತು. ರಕ್ತದ ಅವಶ್ಯಕತೆ ಇದೆ ಎಂದು ತಿಳಿದಾತ ತನ್ನ ಹೃದಯ ಕೊಟ್ಟಾಕೆಯೊಂದಿಗೆ ಬದುಕಲು ಸಾಧ್ಯವಾಗುತ್ತಿಲ್ಲ. "ನನ್ನ ರಕ್ತವಾದರೂ ಅವಳ ದೇಹದಲ್ಲಿ ಹರಿದಾಡಲಿ" ಎಂದುಕೊಂಡ ವಿನೀತ್ ಸದ್ದಿಲ್ಲದೆ ರಕ್ತ ಕೊಟ್ಟು ಮನೆಗೆ ನಡೆದ.

ಕಷ್ಟ ಪಟ್ಟರೆ ಸುಖವಿದೆ

ರಶಿಕಾ ಪೂಣಚ್ಚ ತನ್ನ ಗಂಡ,ಮನೆ-ಮಠ ತೊರೆದು ತನ್ನೆರಡು ಮಕ್ಕಳ ಓದಿಗಾಗಿ ಮಂಗಳೂರು ಬಸ್ ಹತ್ತಿದರು. ಅಲ್ಲೆ ಬಾಡಿಗೆ ಮನೆ ಮಾಡಿ ಮಕ್ಕಳನ್ನು ಚೆನ್ನಾಗಿ ಓದಿಸಿದರು. ಸಿಕ್ಕಿದ ಸಮಯದಲ್ಲಿ ಟ್ಯೂಷನ್ ಕ್ಲಾಸ್ ಮಾಡಿದರು. ಕಷ್ಟ ಪಟ್ಟು ಓದಿಸಿದ ಅವರ ಮಗ ಇಂದು ಯೂನಿವರ್ಸಿಟಿಗೆ ಮೊದಲ ರ್ಯಾಂಕ್ ಪಡೆದು ಎರಡು ಚಿನ್ನದ ಪದಕ ಬಾಚಿ ಇನ್ಫೋಸಿಸ್ ಕಂಪನಿಯಲ್ಲಿ ಇಂಜಿನಿಯರ್. ಮಗಳು ಪ್ರತಿಷ್ಠಿತ ಕಂಪನಿಯಲ್ಲಿ ದೊರೆತ ಕೆಲಸ ಬಿಟ್ಟು, ಸ್ಕಾಲರ್ಶಿಪ್ ಕೊಟ್ಟ ಅಮೇರಿಕಾದ ವಿಶ್ವ ವಿದ್ಯಾನಿಲಯವೊಂದರಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದ್ದಾಳೆ.ರಶಿಕಾ ಈಗ ಹೆಮ್ಮೆಯ ಅಮ್ಮ!

-ಪ್ರೇಮ್ (ಪ್ರೇಮ ಉದಯಕುಮಾರ್)


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Kiran V
Kiran V
6 years ago

ಕಥೆಗಳು ತುಂಬಾ  ಸೊಗಸಾಗಿ ಮೂಡಿಬಂದಿವೆ…

1
0
Would love your thoughts, please comment.x
()
x