ಪ್ರೇಮಿಗಳು
ಇಬ್ಬರೂ ಮೌನವಾಗಿ ಕುಳಿತಿದ್ದರು. ಮುಂದೇನು ಮಾಡುವುದೆಂದು ಇಬ್ಬರಿಗೂ ತೋಚುತ್ತಿಲ್ಲ. ಜಾತಿಯ ನೆಪವೊಡ್ಡಿ ಎರಡೂ ಮನೆಯವರು ಪ್ರೇಮಿಗಳನ್ನು ದೂರ ಮಾಡಲು ಯತ್ನಿಸುತ್ತಿದ್ದರು.
"ಮುಂದೇನು ಮಾಡುವುದು?" ಹುಡುಗಿ ಪ್ರಶ್ನಿಸಿದಳು.
"ಗೊತ್ತಿಲ್ಲ, ಏನೊಂದು ತೋಚುತ್ತಿಲ್ಲ" ಹುಡುಗ ಉತ್ತರಿಸಿದ.
"ಎಲ್ಲಾದರೂ ದೂರ ಹೋಗಿ ಜೊತೆಯಾಗಿ ಬದುಕೋಣ"
"ಬದುಕು ಎರಡೂವರೆ ಗಂಟೆಯ ಸಿನಿಮಾವಲ್ಲ"
"ಹಾಗಾದರೆ ನಾವು ಪ್ರೀತಿಸಿದ್ದಾದರೂ ಯಾಕೆ?" ಹುಡುಗಿಯ ಕಣ್ಣಲ್ಲಿ ನೀರು ತುಂಬಿತ್ತು.
ಅವಳ ಕಣ್ಣಲ್ಲಿನ ನೋವು ಗುರುತಿಸಿದ. ಎದೆಗೆ ಕೊಳ್ಳಿಯಿಂದ ತಿವಿದಂತಾಯ್ತು, ನೋವಿನಿಂದಲೇ ನುಡಿದ "ಜೊತೆಯಾಗಿ ಬದುಕೋಣವೆಂದು, ಆದರೆ.."
"ಆದರೆ ಇವರೇಕೆ ನಮ್ಮನ್ನು ಜೊತೆಯಾಗಿ ಬದುಕಲು ಬಿಡುತ್ತಿಲ್ಲ" ಬಿಕ್ಕಿದಳು.
ಹುಡುಗ ತನ್ನ ಕೈಗಳಲ್ಲಿ ಅವಳ ಕೈಹಿಡಿದು ಮೆಲ್ಲನೆ ಒಮ್ಮೆ ಅದುಮಿ ಕ್ಷಣ ಹೊತ್ತಿನ ಮೌನದ ನಂತರ ಮಾತಾಡಿದ " ಜೊತೆಯಾಗಿ ಬದುಕುವುದನ್ನು ಅವರು ತಡೆಯಬಹುದು, ಆದರೆ ಜೊತೆಯಾಗಿ ಸಾಯುವುದನ್ನ ತಡೆಯಲು ಯಾರಿಗೆ ಸಾಧ್ಯ?"
ತಲೆ ತಗ್ಗಿಸಿ ಬಿಕ್ಕುತ್ತಾ ಕುಳಿತಿದ್ದವಳು ತಲೆಯೆತ್ತಿ ಅವನ ಮುಖ ನೋಡಿದಳು. ಆ ಕ್ಷಣವೇ ಇಬ್ಬರ ಮನಸ್ಸೂ ಒಂದು ದೃಢ ನಿರ್ಧಾರಕ್ಕೆ ಬಂತು.
– ಮರುದಿನ ಸಂಜೆ ಜನರು ಗುಂಪಾಗಿ ನಿಂತು ರೈಲು ಹಳಿಗಳ ಮೇಲೆ ಬಿದ್ದಿದ್ದ ಪ್ರೇಮಿಗಳ ಹೆಣವನ್ನು ನೋಡುತ್ತ ತಮ್ಮ ತಲೆಗೆ, ಬಾಯಿಗೆ ಬಂದಂತೆ ಕಥೆಕಟ್ಟಿ ಮಾತನಾಡುತ್ತ ಪ್ರೇಮಿಗಳ ಸಾವಿಗೆ ಸಂತಾಪ ಸೂಚಿಸಿದರು.
~•~
ಕರೆ
ಬೆಳಗಾಗಿದ್ದೆ ತಡ ರಾಯರ ಮನೆಯಲ್ಲಿ ಜೋರು ಅಳು. ಅಕ್ಕಪಕ್ಕದ ಮನೆಯವರ ಕಿವಿಗೂ ಆ ಕೂಗು ಮುಟ್ಟಿ, ಅವರೂ ಅಲ್ಲಿಗೆ ಧಾವಿಸಿ ಬಂದರು. ಕೆಲವರು ಕಣ್ಣೀರಿಟ್ಟರು. ಕೆಲವರು ಆಳುವವರನ್ನು ಸಮಾಧಾನಿಸುವ ಕಾರ್ಯದಲ್ಲಿ ನಿರತರಾದರು. ರಾಯರಿಗೆ ತುಂಬಾ ತಲೆಕೆಟ್ಟು ಹೋಯಿತು. ಇವರೆಲ್ಲಾ ಏಕೆ ಹೀಗೆ ಅಳುತ್ತಿದ್ದಾರೆಂದು ತಿಳಿಯಲಿಲ್ಲ. ಯಾರ ಬಳಿಯಾದರೂ ಕೇಳೋಣವೆಂದು ಹೋದರೆ, ಯಾರ ಗಮನವೂ ರಾಯರ ಕಡೆ ಸುಳಿಯಲಿಲ್ಲ. ಕೊನೆಗೆ ರಾಯರು ತಮ್ಮ ಮನೆಯವರ ಅಳುವ ಕಾರ್ಯಕ್ರಮವನ್ನು ದೂರದಿಂದಲೇ ಸುಮ್ಮನೆ ನೋಡುತ್ತಾ ನಿಂತು ಬಿಟ್ಟರು. ಹೀಗೆ ನಿಂತಿದ್ದ ರಾಯರ ಕಣ್ಣಿಗೆ ಬಿದ್ದದ್ದು ತಮ್ಮದೇ ಹೆಣ!
ರಾಯರಿಗೆ ಒಂದು ಕ್ಷಣ ಕರೆಂಟು ಹೊಡೆದಂತಾಯಿತು!
ಅರೆ ನಾನು ಸತ್ತಿದ್ದೇನೆಯೇ? ಹಾಗಾದರೆ ಇಲ್ಲಿರುವ ನಾನು…!? ತಮಗೆ ತಾವೇ ಪ್ರಶ್ನಿಸಿಕೊಂಡರು. ಆಗಲೇ ರಾಯರ ಹೆಗಲಮೇಲೊಂದು ಕೈ ಬಿತ್ತು. ರಾಯರು ತಿರುಗಿ ನೋಡಿದರೆ ಸಾಕ್ಷಾತ್ ಯಮಧರ್ಮ ಕಣ್ಣೆದುರಿಗೆ ನಿಂತಿದ್ದಾನೆ.
ರಾಯರು- "ಇದೇನು ಯಮರಾಜಾ ನನ್ನ ಆಯಸ್ಸು ಇಷ್ಟು ಬೇಗ ಮುಗಿದು ಹೋಯಿತೇ?" ಸಂಕಟದಿಂದಲೇ ಯಮನನ್ನು ಪ್ರಶ್ನಿಸಿದರು.
ಯಮ- ಇಲ್ಲಾ ರಾಯರೇ, ಇನ್ನೂ ತುಂಬಾ ವರ್ಷಗಳಿದ್ದವು. ಆದರೆ ನೀವೇ ನಮಗೆ ಕರೆ ಮಾಡಿದಿರಿ.
ರಾಯರು-(ಅಚ್ಚರಿಯಿಂದ) ನಾನು ಕರೆ ಮಾಡಿದೆನೇ..?!
ಯಮ- ಹೌದು, ನೆನಪಿಸಿಕೊಳ್ಳಿ, ನಿನ್ನೆ ರಾತ್ರಿ ಒಂಬತ್ತು ಗಂಟೆಗೆ, ನೀವು ಮೈಸೂರ್ ರಸ್ತೆಯ ಮೂಲಕ ಕೆಂಗೇರಿಗೆ ಹೋಗುತ್ತಿದ್ದಾಗ.
ರಾಯರು- ಅಯ್ಯೋ ನಾನಾಗ ಕರೆ ಮಾಡಿದ್ದು ನಿಮಗಲ್ಲ , ನನ್ನ ಗೆಳೆಯ ಗೋಪಾಲಯ್ಯನಿಗೆ.
ಯಮ- ಹೌದು, ನಿಜಾ ರಾಯರೇ, ನೀವು ಕರೆ ಮಾಡಿದ್ದು ನಿಮ್ಮ ಗೆಳೆಯರಿಗೆ. ಆದರೆ ನಿಮ್ಮ ಕರೆ ನಮಗೂ ಮುಟ್ಟಿತು. ಕಾರಣ, ನೀವಾಗ ದ್ವಿಚಕ್ರ ವಾಹನವನ್ನ ಚಲಾಯಿಸುತ್ತಿದ್ದಿರಿ. ಮತ್ತು ತಲೆಗೆ ಶಿರಸ್ತ್ರಾಣವನ್ನೂ ಸಹ ತೊಟ್ಟಿರಲಿಲ್ಲ..
ಇಷ್ಟು ಹೊತ್ತು ಇದನ್ನು ಬಾಯಿಬಿಟ್ಕೊಂಡು ಓದುತ್ತಿರುವವರ ಕಡೆಗೆ ಯಮ ತಿರುಗುತ್ತಾನೆ. ಮತ್ತು ಹೇಳುತ್ತಾನೆ-
ಗೆಳೆಯರೇ(!), ದ್ವಿಚಕ್ರವಾಹನವನ್ನು ಚಲಾಯಿಸುವಾಗ ದಯವಿಟ್ಟು ಇನ್ಮುಂದೆ ಯಾರೂ ಮೊಬೈಲ್ ನಲ್ಲಿ ಮಾತನಾಡಬೇಡಿ. ಮತ್ತು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ. ಹಾಗೂ ಆದಷ್ಟೂ ನನ್ನಿಂದ ದೂರವೇ ಇರಿ…!!
~•~
ಪೂಜೆ
ದೇವರಿಗೆ ನೈವೇದ್ಯವಿಟ್ಟು, ಗಂಧದಕಡ್ಡಿ ಬೆಳಗಿ, ಪೂಜೆಯನ್ನು ಮುಗಿಸಿ ಹೊರಬಂದ ಶೆಟ್ಟರು-
ಬಾಗಿಲ ಬಳಿ ಹಸಿದು ಮಲಗಿದ್ದ ಬೀದಿನಾಯಿಯನ್ನ ಕೋಲಿನಿಂದ ಬಡಿದು ಓಡಿಸಿದರು.
~•~
ಅನ್ಯಾಯ
ಅವನೊಬ್ಬನಿದ್ದ ಅವನು ಅನ್ಯಾಯ, ವಂಚನೆ ಗಳನ್ನು ಕಂಡರೆ ಸಿಡಿದೇಳುತ್ತಿದ್ದ. ಅವನಿಗೆ ಮದುವೆಯಾಯಿತು. ಕಾಲಕ್ರಮೇಣ ಮಕ್ಕಳು ಆದವು. ಅವನ ಹೆಂಡತಿಗೆ ಮತ್ತೊಬ್ಬನ ಜೊತೆ ಸಂಬಂಧವಿತ್ತು. ಹೀಗೊಂದಿನ ಮತ್ತೊಬ್ಬನ ಜೊತೆಯಲ್ಲಿ ಮಲಗಿದ್ದ ಹೆಂಡತಿಯನ್ನು ಕಣ್ಣಾರೆ ಕಂಡವನು ತನಗೆ ವಂಚಿಸಿದ ಹೆಂಡತಿಯನ್ನು ಅಲ್ಲಿಯೇ ಇರಿದು ಕೊಂದ. ಅವನ ಪುಟ್ಟ ಮಕ್ಕಳು ತಮ್ಮ ತಾಯಿಯ ಹೆಣದ ಮುಂದೆ ಅಳಲಾರಂಭಿಸಿದರು. ಅದನ್ನು ನೋಡಿದ ಅವನು 'ಛೇ, ಇವರ ತಾಯಿಯನ್ನು ಕೊಂದು ಈ ಮಕ್ಕಳನ್ನು ತಾಯಿ ಪ್ರೀತಿಯಿಂದ ವಂಚಿಸಿದೆ. ಈ ಮಕ್ಕಳಿಗೆ ನನ್ನಿಂದ ಅನ್ಯಾಯವಾಯಿತು.' ಹೀಗೆಂದುಕೊಂಡವನು ತನ್ನನ್ನೇ ತಾನು ಕೊಂದುಕೊಂಡ.
~•~
ಬದಲಾವಣೆ
ಆ ಮನೆಯಲ್ಲೊಂದು ಮುದುಕಿ. ಸಂಜೆಯಾದರೆ ತನ್ನ ಮನೆಯ ಮತ್ತು ಅಕ್ಕಪಕ್ಕದ ಮನೆಯ ಪುಟ್ಟ ಮಕ್ಕಳನ್ನೆಲ್ಲ ಕೂರಿಸಿಕೊಂಡು ಕಥೆಗಳನ್ನ ಹೇಳುತ್ತಿದ್ದಳು. ಆ ಪುಟ್ಟ ಮಕ್ಕಳೆಲ್ಲರೂ ಸಂಜೆಯಾಗುವುದನ್ನೇ ಕಾಯುತ್ತಿದ್ದರು. ಅಜ್ಜಿಯ ಕಥೆ ಕೇಳಲು. ಈಗ ಆ ಮನೆಗೆ ಟಿವಿ ಬಂದಿದೆ. ಕಥೆ ಹೇಳುತ್ತಿದ್ದ ಮುದುಕಿ ಸಂಜೆಗಾಗಿ ಕಾಯುತ್ತಾಳೆ. ಟಿವಿಯಲ್ಲಿ ಬರುವ ಧಾರಾವಾಹಿಗಳನ್ನ ನೋಡಲು.
~•~
ಕ್ಷಮೆ
ಭೂಮಿಯ ಮೇಲಿನ ಕೊನೆಯ ತುತ್ತು ಖಾಲಿಯಾಗಿದೆ. ಕೊನೆಯಲ್ಲಿ ಉಳಿದಿರುವುದು ನಾವಿಬ್ಬರಷ್ಟೇ. ಕೊನೆಯ ಬಾರಿ ನನ್ನನ್ನು ಕ್ಷಮಿಸಿಬಿಡು. ನನಗೆ ಹಸಿವಾಗಿದೆ.
~•~
~ ನವೀನ್ ಮಧುಗಿರಿ
super madhu.