ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಿಜವಾದ ಸುಧಾರಣೆ
ರ್ಯೋಕಾನ್‌ ಝೆನ್‌ ಅಧ್ಯಯನಕ್ಕಾಗಿ ತನ್ನ ಜೀವನವನ್ನು ಮೀಸಲಾಗಿಟ್ಟಿದ್ದವನು. ಬಂಧುಗಳು ಎಷ್ಟೇ ಎಚ್ಚರಿಕೆ ನೀಡಿದರೂ ತನ್ನ ಸಹೋದರನ ಮಗ ತನ್ನ ಹಣವನ್ನು ವೇಶ್ಯೆಯೊಬ್ಬಳಿಗಾಗಿ ವ್ಯಯಿಸುತ್ತಿದ್ದಾನೆ ಎಂಬ ವಿಷಯ ಅವನಿಗೆ ತಿಳಿಯಿತು. ಕುಟುಂಬದ ಆಸ್ತಿಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ರ್ಯೋಕಾನ್‌ನ ಅನುಪಸ್ಥಿತಿಯಲ್ಲಿ ಅವನು ಹೊತ್ತುಕೊಂಡಿದ್ದನಾದ್ದರಿಂದ ಸೊತ್ತು ಸಂಪೂರ್ಣವಾಗಿ ಕರಗುವ ಅಪಾಯ ಎದುರಾಗಿತ್ತು. ಈ ಕುರಿತು ಏನಾದರೂ ಮಾಡುವಂತೆ ರ್ಯೋಕಾನ್‌ಅನ್ನು ಬಂಧುಗಳು ಕೋರಿದರು.
ಅನೇಕ ವರ್ಷಗಳಿಂದ ನೋಡದೇ ಇದ್ದ ಸಹೋದರನ ಮಗನನ್ನು ಭೇಟಿ ಮಾಡಲು ರ್ಯೋಕಾನ್‌ ಬಹು ದೂರ ಪಯಣಿಸಬೇಕಾಯಿತು. ಸಹೋದರನ ಮಗನಿಗೆ ತನ್ನ ದೊಡ್ಢಪ್ಪನನ್ನು ನೋಡಿ ಬಲು ಸಂತೋಷವಾದಂತೆ ತೋರಿತು. ಅವನು ತನ್ನ ಮನೆಯಲ್ಲಿಯೇ ಆ ರಾತ್ರಿ ತಂಗುವಂತೆ ತನ್ನ ದೊಡ್ಡಪ್ಪನನ್ನು ವಿನಂತಿಸಿದನು.
ರ್ಯೋಕಾನ್‌ ಇಡೀ ರಾತ್ರಿಯನ್ನು ಧ್ಯಾನ ಮಾಡುತ್ತಾ ಕಳೆದನು. ಬೆಳಗ್ಗೆ ಅಲ್ಲಿಂದ ಹೊರಡುವಾಗ ಹೇಳಿದ: “ನಾನು ಮುದುಕನಾಗುತ್ತಿರಬೇಕು. ಎಂದೇ ನನ್ನ ಕೈಗಳು ನಡುಗುತ್ತಿವೆ. ನನ್ನ ಹುಲ್ಲಿನ ಚಪ್ಪಲಿಯ ದಾರ ಕಟ್ಟಲು ನೀನು ನನಗೆ ಸಹಾಯ ಮಾಡಬಲ್ಲೆಯ?”
ಸಹೋದರನ ಮಗ ಸಂತೋಷದಿಂದಲೇ ಅವನಿಗೆ ಸಹಾಯ ಮಾಡಿದ. ರ್ಯೋಕಾನ್‌ ಕೊನೆಯದಾಗಿ ಹೇಳಿದ: “ಧನ್ಯವಾದಗಳು. ದಿನದಿಂದ ದಿನಕ್ಕೆ ಮನುಷ್ಯನ ವಯಸ್ಸು ಹೆಚ್ಚುತ್ತಾ ಹೋಗುತ್ತದೆ, ಅವನು ದುರ್ಬಲನಾಗುತ್ತಾ ಹೋಗುತ್ತಾನೆ. ನಿನ್ನ ಕುರಿತು ನೀನೇ ಎಚ್ಚರಿಕೆಯಿಂದಿರು.” ತದನಂತರ  ವೇಶ್ಯೆಯ ಕುರಿತಾಗಲೀ ಅವನ ಬಂಧುಗಳ ದೂರಿನ ಕುರಿತಾಗಲೀ  ಒಂದೇ ಒಂದು ಪದವನ್ನೂ ಹೇಳದೆಯೆ ರ್ಯೋಕಾನ್‌ ಅಲ್ಲಿಂದ ಹೊರಟನು. ಆದರೂ, ಆ ಬೆಳಗ್ಗಿನಿಂದಲೇ ಅವನ ಸಹೋದರನ ಮಗನ ದುಂದುವೆಚ್ಚ ಮಾಡುವಿಕೆ ನಿಂತು ಹೋಯಿತು.

*****

೨. ಝೆನ್ ಸಂಭಾಷಣೆ
ತಮ್ಮ ಮನಸ್ಸಿನಲ್ಲಿರುವುದನ್ನುಅಭಿವ್ಯಕ್ತಪಡಿಸಲು ಝೆನ್‌ ಗುರುಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ.  ಎರಡು ಝೆನ್‌ ದೇವಾಲಯಗಳಲ್ಲಿ ತಲಾ ಒಬ್ಬೊಬ್ಬರಂತೆ ಬಾಲ ಪೋಷಿತರು ಇದ್ದರು. ಅವರ ಪೈಕಿ ಪ್ರತೀ ದಿನ ಬೆಳಗ್ಗೆ ತರಕಾರಿಗಳನ್ನು ತರಲು ಹೋಗುತ್ತಿದ್ದ ಒಬ್ಬ ಬಾಲಕನು ದಾರಿಯಲ್ಲಿ ಇನ್ನೊಬ್ಬನನ್ನು ಭೇಟಿಯಾಗುತ್ತಿದ್ದ. 
“ನೀನು ಎಲ್ಲಿಗೆ ಹೋಗುತ್ತಿರುವೆ?” ಕೇಳಿದ ಒಬ್ಬ.
“ನನ್ನ ಕಾಲುಗಳು ಎಲ್ಲಿಗೆ ಹೋಗುತ್ತವೆಯೋ ಅಲ್ಲಿಗೆ ಹೋಗುತ್ತಿರುವೆ,” ಪ್ರತಿಕ್ರಿಯಿಸಿದ ಇನ್ನೊಬ್ಬ.
ಈ ಉತ್ತರ ಮೊದಲನೆಯವನನ್ನು ತಬ್ಬಿಬ್ಬುಗೊಳಿಸಿದ್ದರಿಂದ ಅವನು ತನ್ನ ಅಧ್ಯಾಪಕನ ನೆರವು ಕೋರಿದ. “ನಾಳೆ ಬೆಳಗ್ಗೆ,” ಅಧ್ಯಾಪಕರು ಹೇಳಿಕೊಟ್ಟರು, “ಆ ಚಿಕ್ಕವನನ್ನು ನಾಳೆ ನೀನು ಭೇಟಿ ಮಾಡಿದಾಗ ಅದೇ ಪ್ರಶ್ನೆಯನ್ನು ಕೇಳು. ಅವನು ಹಿಂದಿನಂತೆಯೇ ಉತ್ತರಿಸುತ್ತಾನೆ. ಆಗ ನೀನು ಅವನನ್ನು ಕೇಳು: ’ನಿನಗೆ ಕಾಲುಗಳೇ ಇಲ್ಲ ಎಂದಾದರೆ, ಆಗ ನೀನು ಎಲ್ಲಿಗೆ ಹೋಗುವೆ?’ ಅವನಿಗೆ ತಕ್ಕ ಶಾಸ್ತಿ ಆಗುತ್ತದೆ.”
ಮರುದಿನ ಬೆಳಗ್ಗೆ ಆ ಬಾಲಕರು ಪುನಃ ಪರಸ್ಪರ ಭೇಟಿಯಾದರು.
“ನೀನು ಎಲ್ಲಿಗೆ ಹೋಗುತ್ತಿರುವೆ?” ಕೇಳಿದ ಮೊದಲನೆಯವನು.
“ಗಾಳಿ ಎಲ್ಲಿಗೆ ಬೀಸುತ್ತಿದೆಯೋ ಅಲ್ಲಿಗೆ ಹೋಗುತ್ತಿರುವೆ,” ಪ್ರತಿಕ್ರಿಯಿಸಿದ ಎರಡನೆಯವನು.
ಈ ಉತ್ತರದಿಂದ ಪುನಃ ತಬ್ಬಿಬ್ಬಾದ ಬಾಲಕ ತನ್ನ ಸೋಲನ್ನು ಗುರುವಿನ ಹತ್ತಿರ ಹೇಳಿಕೊಂಡ.
“ಗಾಳಿಯೇ ಬೀಸದಿದ್ದರೆ ಎಲ್ಲಿಗೆ ಹೋಗುವೆ ಎಂಬುದಾಗಿ ಕೇಳು,” ಸಲಹೆ ನೀಡಿದರು ಅಧ್ಯಾಪಕರು.
ಮರುದಿನ ಬೆಳಗ್ಗೆ ಆ ಬಾಲಕರು ಮೂರನೆಯ ಸಲ ಪರಸ್ಪರ ಭೇಟಿಯಾದರು.
“ನೀನು ಎಲ್ಲಿಗೆ ಹೋಗುತ್ತಿರುವೆ?” ಕೇಳಿದ ಮೊದಲನೆಯವನು.
“ನಾನು ಮಾರುಕಟ್ಟೆಗೆ ತರಕಾರಿ ಖರೀದಿಸಲು ಹೋಗುತ್ತಿದ್ದೇನೆ,” ಉತ್ತರಿಸಿದ ಎರಡನೆಯವನು.

*****

೩. ಬ್ಯಾನ್‌ಝೋನ ಖಡ್ಗದ ರುಚಿ

ಮತಾಜುರೊ ಯಾಗ್ಯು ಒಬ್ಬ ಖ್ಯಾತ ಕತ್ತಿವರಿಸೆಗಾರನ ಮಗ. ತನ್ನ ಮಗನ ಕತ್ತಿವರಿಸೆಯ ಕುಶಲತೆಯು ಸಾಧಾರಣ ಮಟ್ಟದ್ದಾದ್ದರಿಂದ ಅದರಲ್ಲಿ ಅವನಿಂದ ಆಧಿಪತ್ಯ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ಅವನ ತಂದೆಯದ್ದು, ಎಂದೇ ಅವನು ಮಗನನ್ನು ತನ್ನವನೆನ್ನಲು ನಿರಾಕರಿಸಿದನು.
ಆದ್ದರಿಂದ ಮತಾಜುರೊ ಫುತಾರಾ ಪರ್ವತಕ್ಕೆ ಹೋದನು. ಅಲ್ಲಿ ಖ್ಯಾತ ಕತ್ತಿವರಿಸೆಗಾರ ಬ್ಯಾನ್‌ಝೊ ಕಾಣಸಿಕ್ಕಿದ. ಅವನೂ ತಂದೆಯ ತೀರ್ಮಾನವನ್ನೇ ದೃಢೀಕರಿಸಿದ. “ನನ್ನ ಮಾರ್ಗದರ್ಶನದಲ್ಲಿ ಕತ್ತಿವರಿಸೆ ಕಲಿಯಲು ಇಚ್ಛಿಸುವೆಯಾ?” ಕೇಳಿದ ಬ್ಯಾನ್‌ಝೊ. “ಇರಲೇಬೇಕಾದ ಅರ್ಹತೆಗಳು ನಿನ್ನಲ್ಲಿ ಇಲ್ಲ.”
“ನಾನು ಬಲು ಶ್ರಮಪಟ್ಟು ಕಲಿತರೆ ಪ್ರಾವೀಣ್ಯ ಗಳಿಸಲು ಎಷ್ಟು ವರ್ಷ ಬೇಕಾಗಬಹುದು?” ಪಟ್ಟುಹಿಡಿದು ಮುಂದುವರಿಸಿದ ಆ ಯುವಕ.
“ಬಾಕಿ ಉಳಿದಿರುವ ನಿನ್ನ ಇಡೀ ಜೀವಮಾನ,” ಉತ್ತರಿಸಿದ ಬ್ಯಾನ್‌ಝೊ.
“ಅಷ್ಟು ಕಾಲ ನಾನು ಕಾಯಲಾರೆ,” ವಿವರಿಸಿದ ಮತಾಜುರೊ. “ನೀವು ಕಲಿಸುವಿರಿ ಎಂದಾದರೆ ನಾನು ಯಾವುದೇ ತೊಂದರೆ ಅನುಭವಿಸಲು ಸಿದ್ಧನಿದ್ದೇನೆ. ನಿಮ್ಮ ಶ್ರದ್ಧಾವಂತ ಸೇವಕ ನಾನಾದರೆ ಎಷ್ಟು ಕಾಲ ಬೇಕಾದೀತು?”
“ಒಃ, ಬಹುಶಃ ಹತ್ತು ವರ್ಷಗಳು,” ಉತ್ತರಿಸಿದ ಬ್ಯಾನ್‌ಝೊ.
“ನನ್ನ ತಂದೆ ಮುದುಕರಾಗುತ್ತಿದ್ದಾರೆ, ಸಧ್ಯದಲ್ಲೇ ನಾನು ಅವರ ಪಾಲನೆಪೋಷಣೆ ಮಾಡಬೇಕಾಗುತ್ತದೆ,” ಮುಂದುವರಿಸಿದ ಮತಾಜುರೊ. “ಹೆಚ್ಚು ತೀವ್ರವಾದ ಅಭ್ಯಾಸ ಮಾಡಿದರೆ ಎಷ್ಟು ಸಮಯ ತೆಗೆದುಕೊಂಡೇನು?”
“ಒಃ, ಬಹುಶಃ ಮೂವತ್ತು ವರ್ಷಗಳು,” ತಿಳಿಸಿದ ಬ್ಯಾನ್‌ಝೊ.
“ಏಕೆ ಹಾಗೆ?” ಕೇಳಿದ ಮತಾಜುರೊ. “ಮೊದಲು ಹತ್ತುವರ್ಷ ಅಂದಿರಿ. ಈಗ ಮೂವತ್ತು ವರ್ಷ ಅನ್ನುತ್ತಿದ್ದೀರಿ. ಅತ್ಯಲ್ಪ ಅವಧಿಯಲ್ಲಿ ಈ ಕಲೆಯಲ್ಲಿ ಪ್ರಾವೀಣ್ಯ ಗಳಿಸಲು ನಾನು ಎಂಥ ತೊಂದರೆಗಳನ್ನು ಬೇಕಾದರೂ ಸಹಿಸಿಕೊಳ್ಳುತ್ತೇನೆ.”
“ಸರಿ ಹಾಗಾದರೆ,” ಹೇಳಿದ ಬ್ಯಾನ್‌ಝೊ. “ನೀನು ನನ್ನ ಹತ್ತಿರ ಎಪ್ಪತ್ತು ವರ್ಷ ಕಾಲ ಇರಬೇಕಾಗುತ್ತದೆ. ನಿನ್ನಂತೆ ವಿಪರೀತ ಅವಸರದಲ್ಲಿ ಫಲಿತಾಂಶ ಬಯಸುವವರು ಬೇಗನೆ ಕಲಿಯುವುದು ಬಲು ವಿರಳ.”
“ಸರಿ ಹಾಗಾದರೆ,” ತನ್ನ ಅಸಹನೆಗಾಗಿ ಛೀಮಾರಿ ಹಾಕುತ್ತಿದ್ದಾರೆ ಎಂಬುದನ್ನು ಕನೆಗೂ ಅರ್ಥ ಮಾಡಿಕೊಂಡ ಯುವಕ ಘೋಷಿಸಿದ, “ನಾನು ಒಪ್ಪಿಕೊಳ್ಳುತ್ತೇನೆ.”
ಕತ್ತಿವರಿಸೆಯ ಕುರಿತು ಯಾವತ್ತೂ ಮಾತನಾಡಲೇ ಕೂಡದೆಂದೂ ಖಡ್ಗವನ್ನು ಯಾವತ್ತೂ ಮುಟ್ಟಲೇ ಕೂಡದೆಂದೂ ಮತಾಜುರೊಗೆ ಹೇಳಲಾಯಿತು. ಅವನು ಕತ್ತಿವರಿಸೆಯ ಕುರಿತು ಚಕಾರವೆತ್ತದೇ ತನ್ನ ಗುರುಗಳಿಗೆ ಅಡುಗೆ ಮಾಡುತ್ತಿದ್ದ, ಪಾತ್ರೆಗಳನ್ನು ತೊಳೆಯುತ್ತಿದ್ದ, ಹಾಸಿಗೆ ಸಿದ್ಧಪಡಿಸುತ್ತಿದ್ದ, ಅಂಗಳ ಗುಡಿಸುತ್ತಿದ್ದ, ಕೈ ತೋಟ ನೋಡಿಕೊಳ್ಳುತ್ತಿದ್ದ.
ಮೂರು ವರ್ಷಗಳು ಉರುಳಿದವು. ಮತಾಜುರೊ ದುಡಿಯುತ್ತಲೇ ಇದ್ದ. ತನ್ನ ಭವಿಷ್ಯದ ಕುರಿತು ಆಲೋಚಿಸಿದಾಗ ಅವನು ದುಃಖಿತನಾಗುತ್ತಿದ್ದ. ಯಾವ ಕಲೆಗಾಗಿ ತನ್ನ ಜೀವನವನ್ನೇ ಮೀಸಲಾಗಿಡಬಯಸಿದ್ದನೋ ಅದನ್ನು ಕಲಿಯಲು ಇನ್ನೂ ಆರಂಭಿಸಿಯೇ ಇರಲಿಲ್ಲ.
ಇಂತಿರುವಾಗ ಒಂದು ದಿನ ಬ್ಯಾನ್‌ಝೊ ಅವನ ಹಿಂದಿನಿಂದ ಒಂದಿನಿತೂ ಸದ್ದು ಮಾಡದೆಯೇ ಬಂದು ಮರದ ಖಡ್ಗದಿಂದ ಭಾರಿ ಹೊಡೆತ ಹೊಡೆದ.
ಮರುದಿನ ಮತಾಜುರೊ ಅನ್ನ ಮಾಡುತ್ತಿರುವಾಗ ಅನಿರೀಕ್ಷಿತವಾಗಿ ಬ್ಯಾನ್‌ಝೊ ಪುನಃ ಅದೇ ರೀತಿಯ ಹೊಡೆತ ನೀಡಿದ.
ತದನಂತರ ಅಹರ್ನಿಶಿ ಅನಿರೀಕ್ಷಿತ ತಿವಿತಗಳಿಂದ ಮತಾಜುರೊ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಿತ್ತು. ಬ್ಯಾನ್‌ಝೊನ ಖಡ್ಗದ ರುಚಿಯ ಕುರಿತು ಆಲೋಚಿಸದ ಕ್ಷಣವೇ ಯಾವುದೇ ದಿನದಲ್ಲಿ ಇರುತ್ತಿರಲಿಲ್ಲ.
ಗುರುವಿನ ಮುಖದಲ್ಲಿ ಮುಗುಳ್ನಗು ಕಾಣಿಸಿಕೊಳ್ಳುವಷ್ಟು ತೀವ್ರಗತಿಯಲ್ಲಿ ಅವನು ಕಲಿಯುತ್ತಿದ್ದ. ಆ ನಾಡಿನ ಅತ್ಯಂತ ಅಸಾಧಾರಣ ಕತ್ತಿವರಿಸೆಗಾರನಾದ ಮತಾಜುರೊ.


*****

೪. ತಪ್ಪನ್ನು ತಿನ್ನುವುದು
ಒಂದು ದಿನ ಸೋಟೋ ಝೆನ್‌ ಗುರು ಫುಕೈ ಮತ್ತು ಅವನ ಅನುಯಾಯಿಗಳ ರಾತ್ರಿಯ ಭೋಜನ ತಡವಾಗಿ ತಯಾರಿಸಬೇಕಾದ ಪರಿಸ್ಥಿತಿ ಉದ್ಭವಿಸಿತು.
ಅಡುಗೆಯವ ತನ್ನ ಬಾಗಿದ ಚಾಕುವಿನೊಂದಿಗೆ ತೋಟಕ್ಕೆ ಹೋಗಿ ಆತುರಾತುರವಾಗಿ ಹಸಿರು ತರಕಾರಿಗಳ ತುದಿಗಳನ್ನು ಕತ್ತರಿಸಿ ತಂದು ಅವನ್ನು ಒಟ್ಟಾಗಿಯೇ ಕೊಚ್ಚಿ ಸಾರು ಮಾಡಿದ, ತರಾತುರಿಯಲ್ಲಿ ತರಕಾರಿಗಳ ಜೊತೆಯಲ್ಲಿ ಒಂದು ಹಾವಿನ ಭಾಗವೂ ಸೇರಿರುವುದನ್ನು ಅವನು ಗಮನಿಸಲೇ ಇಲ್ಲ.
ಫುಕೈನ ಅನುಯಾಯಿಗಳು ಇಷ್ಟು ರುಚಿಯಾದ ಸಾರನ್ನು ತಿಂದೇ ಇರಲಿಲ್ಲ ಅಂದುಕೊಂಡರು. ತನ್ನ ಬಟ್ಟಲಿನಲ್ಲಿ ಹಾವಿ ತಲೆ ಇದ್ದದ್ದನ್ನು ಗಮನಿಸಿದ ಗುರು ಅಡುಗೆಯವನನ್ನು ಕರೆಸಿ ಹಾವಿನ ತಲೆಯನ್ನು ಎತ್ತಿ ತೋರಿಸುತ್ತಾ ಕೇಳಿದ: “ಏನಿದು?”
“ಓ, ಧನ್ಯವಾದಗಳು ಗುರುವೇ” ಎಂಬುದಾಗಿ ಉತ್ತರಿಸಿದ ಅಡುಗೆಯವ ತುಂಡನ್ನು ತಗೆದುಕೊಂಡು ಬೇಗನೆ ತಿಂದ.

*****

೫. ಕತೆ ಹೇಳುವವನ ಝೆನ್‌
ಎಂಚೊ ಒಬ್ಬ ಖ್ಯಾತ ಕತೆ ಹೇಳುವವ. ಅವನ ಪ್ರೇಮದ ಕತೆಗಳು ಕೇಳುಗರ ಹೃದಯವನ್ನು ಕಲಕುತ್ತಿದ್ದವು. ಅವನೊಂದು ಯುದ್ಧದ ಕತೆ ಹೇಳಿದರೆ ಕೇಳುಗರಿಗೆ ತಾವೇ ರಣರಂಗಲದಲ್ಲಿ ಇದ್ದಂತೆ ಭಾಸವಾಗುತ್ತಿತ್ತು.
ಝೆನ್‌ನ ಯಾಜಮಾನ್ಯವನ್ನು ಬಹುತೇಕ ಅಂಗೀಕರಿಸುವುದರಲ್ಲಿದ್ದ ಶ್ರೀಸಾಮಾನ್ಯ ಯಾಮಓಕಾ ಟೆಶ್ಶು ಎಂಬಾತನನ್ನು ಎಂಚೊ ಸಂಧಿಸಿದ. ಯಾಮಓಕಾ ಹೇಳಿದ: “ನಮ್ಮ ನಾಡಿನಲ್ಲಿ ನೀನು ಅತ್ಯುತ್ತಮ ಕತೆ ಹೇಳುವವ ಮತ್ತು ಜನ ನಿನ್ನ ಇಷ್ಟದಂತೆ ಅಳುವಂತೆಯೋ ನಗುವಂತೆಯೋ ಮಾಡುವೆ ಎಂಬುದಾಗಿ ನಾನು ತಿಳಿದಿದ್ದೇನೆ. ನನಗೆ ಅತ್ಯಂತ ಪ್ರಿಯವಾದ ’ಪೀಚ್‌ ಹುಡುಗ’ (Peach boy) ಕತೆಯನ್ನು ಹೇಳು. ತುಂಬಾ ಚಿಕ್ಕವನಿದ್ದಾಗ ನಾನು ಅಮ್ಮನ ಪಕ್ಕದಲ್ಲಿ ಮಲಗುತ್ತಿದ್ದೆ, ಅವಳು ಆಗಾಗ್ಗೆ ಈ ದಂತಕತೆ ಹೇಳುತ್ತಿದ್ದಳು. ಕತೆ ಮುಗಿಯುವ ಮುನ್ನವೇ ನಾನು ನಿದ್ದೆ ಮಾಡುತ್ತಿದ್ದೆ. ನನ್ನ ಅಮ್ಮ ನನಗೆ ಹೇಳುತ್ತಿದ್ದ ರೀತಿಯಲ್ಲಿಯೇ ಅದನ್ನು ನೀನು ಹೇಳು.”
ಪ್ರಯತ್ನಿಸುವ ಧೈರ್ಯ ಮಾಡಲಿಲ್ಲ ಎಂಚೊ. ಅಧ್ಯಯಿಸಲು ಕಾಲಾವಕಾಶ ಕೋರಿದ ಎಂಚೊ. ಅನೇಕ ತಿಂಗಳುಗಳು ಕಳೆದ ನಂತರ ಅವನು ಯಾಮಓಕಾನ ಬಳಿಗೆ ಹೋಗಿ ಇಂತೆಂದ: “ಕತೆಯನ್ನು ಹೇಳಲು ನನಗೆ ದಯವಿಟ್ಟು ಅವಕಾಶ ಕೊಡು.”
“ಇನ್ನೊಂದು ದಿವಸ,” ಉತ್ತರಿಸಿದ ಯಾಮಓಕ.
ಎಂಚೊನಿಗೆ ತುಂಬಾ ನಿರಾಸೆ ಆಯಿತು. ಇನ್ನೂ ಹೆಚ್ಚು ಅಧ್ಯಯಿಸಿ ಪ್ರಯತ್ನಿಸಿದ. ಅನೇಕ ಸಲ ಯಾಮಓಕ ಅವನ ಕೋರಿಕೆಯನ್ನು ತಿರಸ್ಕರಿಸಿದ. ಎಂಚೊ ಕತೆ ಹೇಳಲು ಆರಂಭಿಸಿದಾಗ ಯಾಮಓಕ ಅವನನ್ನು ತಡೆಯುತ್ತಿದ್ದ: “ಇನ್ನೂ ನೀನು ನನ್ನ ಅಮ್ಮನಂತೆ ಇಲ್ಲ.”
ಐದು ವರ್ಷಗಳ ನಂತರ ಯಾಮಓಕನಿಗೆ ಅವನ ಅಮ್ಮ ಹೇಳುತ್ತಿದ್ದಂತೆಯೇ ದಂತಕತೆ ಹೇಳಲು ಎಂಚೊನಿಗೆ ಸಾಧ್ಯವಾಯಿತು.
ಎಂಚೊನಿಗೆ ಇಂತು ಝೆನ್‌ ಕಲಿಸಲ್ಪಟ್ಟಿತು.  

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x