
ಅವತ್ತು ಸ್ಕೂಲ್ ನಿಂದ ಬರತಿದ್ದಹಾಗೆ ಬ್ಯಾಗ್, ಶೂ, ಎಲ್ಲ ಎಸೆದು ಇನ್ನೇನು ಆಟ ಆಡೋಕೆ ಹೋಗ್ಬೇಕು, ಅಷ್ಟರೊಳಗೆ ಒಣ ಹುಲ್ಲು-ಕಡ್ಡಿ ಮನೆ ಮುಂದಿನ ಅಂಗಳದ ಹತ್ತಿರ ಬಿದ್ದಿದ್ದು ಗಮನಿಸಿದೆ… ಅಮ್ಮನ ಸಾಯಂಕಾಲದ ಕಸ ಗುಡಿಸಿ ನೀರು ಹಾಕಿ, ದೇವರ ಮುಂದೆ ದೀಪ ಹಚ್ಚುವ ಕಾರ್ಯಕ್ರಮ ಶುರುವಾಗಿತ್ತು ಹಾಗೆ ಆ ಹುಲ್ಲು-ಕಡ್ಡಿ ಕೂಡ ಕಸ ಸೇರಿತ್ತು. ನಾನು ಆಟ ಮುಗಿಸಿ ಮನೆಗೆ ಬಂದಾಗ ಮತ್ತಷ್ಟು ಹುಲ್ಲು-ಕಡ್ಡಿ ಜೊತೆಗೆ ಪಕ್ಷಿಯ ಒಂದೆರಡು ಪುಕ್ಕಗಳು ಕೂಡ! ನಾಜೂಕಾದ ಪುಕ್ಕಗಳನ್ನ ಹಾಗೆ ಎತ್ತಿಕೊಂಡು ನೀರಲ್ಲಿ ತೊಳೆದು ನನ್ನ ಕಂಪಾಸ್ ಬಾಕ್ಸ್ ಸೇರಿಸಿದೆ. ಬೆಳಿಗ್ಗೆ ಎದ್ದು ಹಲ್ಲುಜ್ಜುತ್ತಿರುವಾಗ ಒಂದು ಗುಬ್ಬಚ್ಚಿ ತನ್ನ ಪುಟ್ಟ ಕೊಕ್ಕಿನಲಿ ಹುಲ್ಲು-ಕಡ್ಡಿ ಸಿಕ್ಕಿಸಿಕೊಂಡು ನೆಗಿತಿರೋದು ಕಾಣಿಸಿತು.
“ಗುಬ್ಬಿಯ ಗೂಡು ನಮ್ಮ ಮನೆಯಲ್ಲಿ” ಊಹೆಗೂ ಸಿಗಲಾರದ ಕಲ್ಪನೆಯದು! ಖುಷಿಗೂ ಅಳತೆ ಸಿಗಲಿಲ್ಲ! ಅವಸರದಲ್ಲಿ ಹಲ್ಲುಜ್ಜಿ ಓಡಿದೆ. ಗುಬ್ಬಿಯ ಸುಳಿವಿಲ್ಲ, ಮನೆಯೊಳಗೆಲ್ಲ ಹುಡುಕಾಟ ಶುರುವಾಯಿತು! ಪಡಸಾಲೆ, ಮಲಗೋ ಕೋಣೆ, ಬೀರುವಿನ ಸಂದಿಗಳು, ಪೂಜೆ ಮನೆ! ಎಲ್ಲ ಕಡೆ ಹುಡುಕಾಯಿತು. ತುಸು ನಿರಾಸೆ, ಆದರೂ ಇಲ್ಲೋ ಎಲ್ಲೊ ಇರುವ ಭರವಸೆ. ತುಸು ಹೊತ್ತಿನ ನಂತರ, ಮುಂದಿನ ಬಾಗಿಲ ಪಕ್ಕ ಇರುವ ಕೋಣೆಯ ಮೇಲೆ ಚಿಂವ್ ಚಿಂವ್, ಸದ್ದುಕೇಳಿದ ಹಾಗೆ! ಮೆಲ್ಲಗೆ ಹೋಗಿ, ಎದುರಿಗಿನ ಕಂಬ ಏರಿ ನೋಡಿದೆ, ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ! ಹಂಚಿನ ಛಾವಣಿಯ ಮನೆ ಒಳ ಭಾಗದಿಯಿರುವ ಹಲಗೆಯ ಸಂದಿಯಲ್ಲಿ, ನೀಟಾಗಿ ಹೆಣೆದ ಚಿಕ್ಕ ಗೂಡು, ಅದರಲ್ಲಿ ಹಾಯಾಗಿ ಅಡಗಿರುವ ಎರಡು ಗುಬ್ಬಿಗಳು. ತನ್ನ ಇಷ್ಟು ಚಿಕ್ಕ ಕೊಕ್ಕೆಯಿಂದ ಅದು ಹೇಗೆ ಗೂಡು ಕಟ್ಟಿತೆಂಬ ಆಶ್ಚರ್ಯ! ಇದು ಸಾಧ್ಯವಾ ಎನ್ನುವಷ್ಟು.
ಅಂದಿನಿಂದ ನನ್ನ ದಿನಚರಿಯಲ್ಲಿ ಒಂದೇ ಕೆಲಸ, ಅದೇ ಗುಬ್ಬಿ… ಗುಬ್ಬಿಯ ಗೂಡನು ನೋಡ್ತಾ ಇರೋದು. ಅಮ್ಮನಿಗೆ ಪುಸಲಾಯಿಸಿ ಒಂದು ಬಟ್ಟಲಿನಲ್ಲಿ ಸ್ವಲ್ಪ ಕಾಳು ಇನ್ನೊಂದರಲ್ಲಿ ನೀರು ತುಂಬಿಸಿಟ್ಟು ದೂರದಿಂದ ಕಾಯ್ದು ಕುಳಿತು ನೋಡೋದು. ಗುಬ್ಬಿ ಪುಟ್ಟ ಕೊಕ್ಕಿನಿಂದ ಕಾಳು ಹೆಕ್ಕೊದು, ನೀರು ಕುಡಿದು ಗೂಡು ಸೇರೋದು, ಹಾಗೆ ಮನೆ ಎದುರಿಗಿನ ನಲ್ಲಿಯ ನೀರಿನಲ್ಲಿ ತುಸು ಆಟ, ಪುಕ್ಕಗಳ ಶುಚಿಗೊಳಿಸುವ ಕೆಲಸ. ಇದ್ದ ಎರಡು ಮೊಟ್ಟೆಗಳಲ್ಲಿಒಂದು ಮರಿ ಗುಬ್ಬಿ ಹೊರ ಬಂದಾಗಿತ್ತು, ತಾಯಿ ಗುಬ್ಬಿಅದಕೆ ಗುಟುಕು ನೀಡುವ ಪರಿಯೇ ಅದ್ಭುತ! ಪುಟ್ಟ ಹೃದಯದಲ್ಲೂ ಆಗಸದಷ್ಟು ಅಮ್ಮನ ಅಕ್ಕರೆ. ನೋಡುತ್ತಲೇ ಇರುವ ನನಗೆ, ಹೊಸ ಜಗತ್ತಿನ ಅರಿವಾದಂತಿತ್ತು.
ಇಷ್ಟು ಪುಟ್ಟ ಜೀವಿಯಲ್ಲೂ ಅದೆಂಥ ಶಿಸ್ತು, ಗೂಡು ಕಟ್ಟುವ ಕುಶಲತೆ, ತನ್ನ ತಾ ನಿಭಾಯಿಸುವ ಪರಿಯಲ್ಲೇ ಅದೆಷ್ಟೋ ಪಾಠಗಳು! ದಿನ ಕಳೆದಂತೆ ಗುಬ್ಬಿಯು ನನ್ನ ದಿನಚರಿಯ ಅವಿಭಾಜ್ಯ ಅಂಗವಾಯ್ತು! ಒಂದೆರಡು ದಿನದಲ್ಲೇ ಮನೆಯಲ್ಲಿ ಬೇರೆ ಬಾಡಿಗೆ ಮನೆಗೆ ಹೋಗುವ ಮಾತು ನಡೀತಾ ಇತ್ತು, ನನ್ನ ಮನಸ್ಸಿನಲ್ಲಿ ಗುಬ್ಬಿಯ ಗೂಡಿನ ವ್ಯವಸ್ಥೆಯ ಚಿಂತೆ. ಹೇಗೆ ಏನು ಮಾಡಬೇಕೆನ್ನುವ ಆಲೋಚನೆಯಲ್ಲೇ ಇದ್ದೆ. ಬೆಳಿಗ್ಗೆ ಎದ್ದಾಗ ಮನೆ ಕ್ಲೀನ್ ಮಾಡಲು ಬಂದಿದ್ರು! ತಡಬಡಾಯಿಸಿ ಓಡಿದೆ ಗೂಡಿನ ಹತ್ತಿರ, ಗೂಡು ಅಂಗಳದಲ್ಲಿ ಚಲ್ಲಾಪಿಲ್ಲಿಯಾಗಿತ್ತು, ಗುಬ್ಬಿಯ ಒಂದು ಒಡೆದ ಮೊಟ್ಟೆ ಕಾಣಿಸಿತು! ಗುಬ್ಬಿಗಳು ಅಲ್ಲೇ ಚಿಂವ್ ಗುಡುತ್ತ ಅತ್ತಿಂದ ಇತ್ತ ಇತ್ತಿಂದ ಅತ್ತ ರೋದಿಸ್ತಾಇದ್ವು. ಇದೆಲ್ಲ ನೋಡ್ತಾ ಅಸಹಾಯಕನಾಗಿ ನಿಂತಿದ್ದ ನನಗೆ ಗಂಟಲು ಬಿಗಿದಂತಾಗಿ, ಕಣ್ತುಂಬಿ ಬಂದಿತ್ತು! ಗುಬ್ಬಿಯ ಕನಸಿನ ಮನೆ ಕಸ ಸೇರಿತ್ತು!
ಹಂಚಿನ ಮನೆಯ ಸಂದಿಯಲ್ಲಿ
ಪಡಸಾಲೆಯ ಕಂಬದ ಮ್ಯಾಲೆ!
ಹುಲ್ಲು ಕಡ್ಡಿಯ ಸಂಗ್ರಹಣೆ ನಡೆದಿತ್ತು
ಸದ್ದಿಲ್ಲದೇ ತನ್ನ ಬದುಕನೇ ಕಟ್ಟಿತ್ತು
ಚಿಂವ್ ಚಿಂವ್ ಸದ್ದಿನ ಗೂಡು ಕಟ್ಟಿತ್ತು!
ಪರಿಶ್ರಮದ ಪಾಠ ಪುಟ್ಟ ಕೊಕ್ಕಿನಲ್ಲೂ
ಶಿಸ್ತು-ಕಲೆಗಾರಿಕೆಯ ಮೋಡಿ ಗೂಡಿನಲ್ಲೂ
ನಾಗರಿಕತೆಯ ಜಾತ್ರೆಯಲಿ
ಸಿಗದಂತೆ ಕಳೆದುಕೊಂಡಿರುವೆವು ನಿನ್ನ
ಸದ್ದಿಲ್ಲದೇ ಮರೆಯಾಗಿರುವೆ ನೀ!!!
–ದೀಪು
Super….keep going