"ನಮಸ್ಕಾರ ಗುರುಗಳಿಗೆ" ಎದುರಿಗಿದ್ದ ಮಲ್ಲಪ್ಪನ ಕಂಡ ವೆಂಕಪ್ಪ ಮಾಸ್ತರು "ಅರೆ ಮಲ್ಲಪ್ಪ. ಏನಿದು ಕಳೆದ ಎಳೆಂಟು ತಿಂಗಳಿಂದ ಬೆಟ್ಟಿ ಆಗಿಲ್ಲ ಎಲ್ಲಿ ಹೋಗಿದ್ದಿ. ಏನು ಕಥೆ? ", ಮತ್ತೆ ಮಾತು ಮುಂದುವರೆಸಿ "ಅಂದಾಂಗ ನಿನ್ನ ಮಗ ಚನ್ನಪ್ಪ ಅರಾಮ ಅದಾನೇನು? " ಹಾಗೆಯೇ ಒಂದೇ ಉಸಿರಿನಿಂದ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದರು.
ಬಹಳ ದಿನಗಳಿಂದ ಶಾಲೆಯ ಕಡೆಗೆ ಬರದಿದ್ದ ಮಲ್ಲಪ್ಪನ ಬಗ್ಗೆ ವೆಂಕಪ್ಪ ಮಾಸ್ತರರಿಗೆ ವಿಶೇಷ ಕಾಳಜಿ. ಅವನ ಮಗ ಚನ್ನಪ್ಪ ಓದಿನಲ್ಲಿ ಸದಾ ಮುಂದು. ಮಲ್ಲಪ್ಪ ಬಡವನಾದರೂ ಕೂಡ ಚನ್ನಪ್ಪನನ್ನು ಓದಿಸಲು ಸಾಲಸೋಲ ಮಾಡಿ ಅವನ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುತ್ತಿದ್ದ ಮಗ ಪಿ. ಯು. ಸಿ ಮುಗಿಸಿ ಗುರುಗಳನ್ನು ಭೇಟಿಯಾಗಿ ಹೋದ ನಂತರ ಮಲ್ಲಪ್ಪ ಶಾಲೆಯತ್ತ ಸುಳಿದಿರಲಿಲ್ಲ. ಹೀಗಾಗಿ ಗುರುಗಳಿಗೆ ಅವನ ಕಂಡ ಕ್ಷಣ ಒಮ್ಮಲೇ ಎಲ್ಲವನ್ನೂ ಕೇಳಿ ತಿಳಿದುಕೊಳ್ಳಬೇಕೆಂಬ ಹಂಬಲ. .
ಮಲ್ಲಪ್ಪ ಕೂಡ ಅಷ್ಟೇ ಶಾಂತ ಚಿತ್ತದಿಂದ "ಮೊನ್ನೆ ಚೆನ್ನಪ್ಪ ಊರಿಗೆ ಬಂದಿದ್ದ ನಿಮ್ಮ ಹತ್ರ ಭೇಟಿ ಆಗಾಕ ಬಂದಿಲ್ಲೇನು? " ಅಂತಾ ಕೇಳಿದ. ವೆಂಕಪ್ಪ ಮಾಸ್ತರಿಗೆ ಆಶ್ಚರ್ಯ "ಏನಂದಿ! ಚೆನ್ನಪ್ಪ ಊರಿಗೆ ಬಂದಿದ್ನಾ, ಅಲಾ ಇವನ, ಯಾವತ್ತೂ ಊರಿಗೆ ಬಂದ್ರ ಸಾಲಿ ಕಡೆ ಬಂದ ಭೇಟಿ ಆಗಿ ಧಾರವಾಡದಾಗ ಅವನ ಶಿಕ್ಷಣ ಈಗ ಹೆಂಗ ನಡೆದೀತಿ ಅಂತ ಎಲ್ಲಾ ಹೇಳಿ ಹೋಗಾಂವ, ಬಂದೇ ಇಲ್ಲ ನೋಡು. ಮತ್ತ ಆಂವಾ ಯಾವಾಗ ತಿರುಗಿ ಹೋದ? ". ಎಂದರು
"ನಾನೂ ಊರಾಗ ಇರಲಿಲ್ಲರಿ. ಇವತ್ತ ನಿಮ್ಮ ಮುಂದ ಬಂದ ನಿಂತೇನಿ. ಎಂಟು ತಿಂಗಳಾತು ಮನೆ ಬಿಟ್ಟು ನನ್ನ ಹೆಂಡತಿ ಹೊರಗ ಹಾಕಿ, ಇದ್ದ ಒಬ್ಬ ಮಗನ ಸಾಲಿ ಕಲಿಸಾಕ ಸಾಲಸೋಲ ಮಾಡಿ ಅಪವಾದ ಹೊತ್ತು ಮನಿ ಬಿಟ್ಟ ಬ್ಯಾರೆ ಕಡಿ ದುಡ್ಯಾಕ ಹೋದಾಂವ, ಇವತ್ತ ನಿಮ್ಮ ಮುಂದ ಬಂದ ನಿಂತೇನ್ರಿ". ಕಣ್ಣೀರು ಸುರಿಸುತ್ತ ಹೇಳಿದಾಗ. ವೆಂಕಪ್ಪ ಮಾಸ್ತರ್ ಕರುಳು ಕಿವುಚಿದಂತಾಯ್ತು. "ಯಾಕೋ,ಇಷ್ಟು ದಿನಾ ಛಲೋ ಇದ್ದ ನಿಮ್ಮ ಕುಟುಂಬದಾಗ ಇಂಥಾ ಬಿರುಗಾಳಿ ಬೀಸಿದ್ದಾದ್ರು ಹೆಂಗ. ಅದ್ಯಾಂಗ ನಿನ್ನ ಹೆಂಡತಿ ನಿನ್ನ ಹೊರಗ ಹಾಕ್ಯಾಳು? . "ಎಂದರು
"ಹೌದ್ರಿ, ಅದು ದೊಡ್ಡ ಕಥಿ ಐತಿ. ಅವನ ಶಿಕ್ಷಣ ಕೊಡಸಾಕ ಧಾರವಾಡಕ್ಕ ಹಚ್ಚಬೇಕಾದ್ರ ಎರಡು ವರ್ಷದ ಹಿಂದ ಒಂದ ಎಕರೆ ಹೊಲ ಮಾರಿದೆ. ಅದರ ದುಡ್ಡು ಮನ್ಯಾಗ ಇಟ್ಟಿದ್ದೆ. ವರ್ಷ ವರ್ಷ ಫೀ ತುಂಬಿದೆ. ಮನೆಯಲ್ಲಿ ನನ್ನ ಹೆಂಡತಿ ಅಷ್ಟ ಅಲ್ಲದ ಅಕಿ ಅಣ್ಣ-ತಮ್ಮಂದಿರು ಇದ್ದಾರ. ನಮ್ಮದು ಕೂಡು ಕುಟುಂಬ. ರೊಕ್ಕ ಖಾಲಿ ಆಯಿತು. ದಿನದಿನಕ್ಕೆ ನಾನು ಜೂಜು ಆಡಾಕ ಹೊಂಟೇನಿ,ಕುಡಿಯಾಕ ಹೊಂಟೇನಿ ಅಂತಾ ನನ್ನ ಹೆಂಡತಿ ತಲಿ ಅಕಿ ಅಣ್ಣ ತಮ್ಮಂದಿರು ತುಂಬಿದರು. ಕೆಲವು ತಿಂಗಳಿನಿಂದ ನಮ್ಮಿಬ್ಬರ ಮಧ್ಯೆ ಮನಸ್ತಾಪ ಹೆಚ್ಚು ಬೆಳಿಯಾಕ ಹತ್ತಿತು. ಅದರ ಲಾಭ ಪಡೆದು ನನ್ನ ಮಗನಿಗೂ ಸುದ್ದಿ ಮುಟ್ಟಿಸಿದರು. ಒಂದು ದಿನ ಹಿರಿಯರು ಕೂಡಿದರು. ಮಗನ ಶಿಕ್ಷಣಕ್ಕಂತ ಹೊಲಾ ಮಾರಿ ಕುಡಿದು ಜೂಜು ಆಡಿ ಹಾಳ ಮಾಡಿದರ ಮನೆತನ ಹೆಂಗ ನಡೆದೀತು ಅಂಥಾ ಅಪರಾಧಿ ಸ್ಥಾನದಾಗ ನಿಲ್ಲಿಸಿದರು. ನನ್ನ ಪರವಾಗಿ ಯಾರೂ ನಿಲ್ಲಲಿಲ್ಲ. ಆವತ್ತು ಮನೆ ಬಿಟ್ಟು ಹೊರಗ ಹಾಕಿದರು. ಬ್ಯಾರೆ ಊರಾಗ ದುಡದ ತಿನ್ನುತ್ತ ಬದುಕುತ್ತಿದ್ದ ನನ್ನನ್ನು ನಿನ್ನೆ ಇದ ಊರಾಗ ಇರುವ ನನ್ನ ಮಗಳು ಕರೆದುಕೊಂಡು ಬಂದಾಳ್ರಿ" ಎಂದ ದುಃಖದಿಂದ.
" ಅಲ್ಲೋ ಮಾರಾಯ ನನಗಾರ ಸ್ವಲ್ಪ ಭೇಟಿ ಆಗಬಾರದಿತ್ತೇನು? ಚನ್ನಪ್ಪನಿಗೆ ನಾನು ತಿಳಿಸಿ ಹೇಳತಿದ್ದೆ. "ಎಂದಾಗ ಮಲ್ಲಪ್ಪ
"ಅಂವಾ ಈಗ ನಿಮ್ಮ ಮಾತು ಕೇಳುವ ಸ್ಥಿತಿಯಲ್ಲಿ ಇಲ್ಲಾರೀ. ತಾಯಿ ಮತ್ತು ಮಾವಂದಿರು ಹೇಳಿದ್ದೇ ವೇದವಾಕ್ಯ ಅನ್ನುವಂಗ ಆಗೇತಿ. ಅವನಸ್ಥಿತಿ. ಇಲ್ಲದಿದ್ರ ಮೊನ್ನೆ ಊರಿಗೆ ಬಂದಾಂವ ನಿಮ್ಮನ್ನು ಭೇಟಿ ಆಗದೇ ಹೋಗುತ್ತಿರಲಿಲ್ಲ. ಅದಕ್ಕ ನಿಮಗಾದರೂ ಭೇಟಿ ಆಗ್ಯಾನೋ ಇಲ್ಲೋ ಅಂತಾ ವಿಚಾರಸಾಕ ಇವತ್ತ ನಾನು ಬಂದೇನ್ರಿ"ಎಂದ.
"ಏನೋ ಮಾರಾಯ ನನಗ ಒಂದೂ ತಿಳಿಯದಂಗ ಆಯ್ತಲ್ಲ. ಕೈ ಹಿಡದ ಹೆಂಡತಿ ನಿನ್ನ ನಂಬದ ಹಾಂಗ ಏನ ಮಾಡಿದರಪ ನಿನ್ನ ಅಳಿಯಂದಿರು. ಆಗಿದ್ದು ಆಗವಲ್ಲದು ಯಾವದಕ್ಕೂ ಚಿಂತೀನ ಪರಿಹಾರ ಅಲ್ಲ ಎಷ್ಟು ದಿನಾ ಬಿಟ್ಟ ಇರ್ತಾರ. ಒಂದಲ್ಲ ಒಂದು ದಿನ ಸತ್ಯ ತಿಳಿದ ತಿಳೀತದ. ಅಲ್ಲೀ ತನಕ ಮನಸ್ಸು ಗಟ್ಟಿ ಮಾಡಿಕೊಂಡು ಮಗಳ ಮನ್ಯಾಗ ಇರು. ನಿನಗ ಏನಾದರೂ ತೊಂದರೆ ಅನಿಸಿದರ ನನಗ ಬಂದ ಬೇಟಿ ಆಗು. " ಎಂದು ಕೈಯಲ್ಲಿ ನೂರು ರೂಪಾಯಿ ಕೊಡಲು ಹೋದ ಗುರುಗಳ ಕಾಲಿಗೆ ಬಿದ್ದು "ನನಗ ರೊಕ್ಕ ಬ್ಯಾಡ್ರಿ ದುಡಿಯುವ ಶಕ್ತಿ ದೇವರು ಇನ್ನೂ ನನಗ ಕೊಟ್ಟಾನ. ನನ್ನ ಮಗ ನಿಮ್ಮನ್ನು ಭೇಟಿ ಆಗಾಕ ಬಂದ್ರ ತಿಳುವಳಿಕೆ ಹೇಳ್ರಿ ಮಗಾನಾದರೂ ಅಪ್ಪ ಅಂಥ ಮಾತಾಡುವಂಗ ಮಾಡ್ರಿ ಅಷ್ಟು ಸಾಕು. " ಎಂದು ಕಣ್ಣೀರಿಟ್ಟ.
"ನೋಡಪಾ ಅಂವಾ ಇವತ್ತ ಬರ್ಲಿ. ನಾಳೆ ಬರ್ಲಿ ಒಟ್ಟಿನ್ಯಾಗ ಅವ ಬಂದ ಬರ್ತಾನ ನಾ ಅವಂಗ ಹ್ಯಾಂಗ ತಿಳುವಳಿಕೆ ಹೇಳಬೇಕೋ ಹೇಳತೇನಿ. ನೀ ಹಿಂಗ ಅಳಕೋತ ಕುಂತ್ರ ಹ್ಯಾಂಗ, ಮಗಳ ಮುಖಾ ನೋಡು ಮನ್ಯಾಗ ಮೊಮ್ಮಕ್ಕಳು ಅದಾವ ಅವರನ್ನು ಆಡಿಸುತ್ತ ಕೆಲವು ದಿನ ಹೊತ್ತ ಕಳಿ ದೇವರು ಅದಾನ ಅಂವ ಎಲ್ಲಾ ವಿಚಾರ ಮಾಡ್ತಾನ. ನಿನ್ನ ಮಗ ನನ್ನ ಬೇಟಿ ಆದ್ರ ಸಾಕು ಅವನಿಗೆ ಹ್ಯಾಂಗ ತಿಳುವಳಿಕೆ ಹೇಳಬೇಕೋ ಹಂಗ ಹೇಳಿ ನಿಮ್ಮ ಕುಟುಂಬ ಒಂದು ಮಾಡಿಸ್ತೇನಿ. ನೀನು ಮಾತ್ರ ಮನಸ್ಸಿಗೆ ಹಚ್ಚಕೊಂಡ ಸೊರಗಬೇಡ"ಎಂದು ತಿಳುವಳಿಕೆ ಹೇಳಿ ಕಳಿಸಿದರು.
ಎಲ್ಲ ಅಶ್ರಿತರೂ ಇದ್ದೂ ನಿರಾಶ್ರಿತನಾದ ಮಲ್ಲಪ್ಪನ ಬದುಕು ಕಂಡ ಗುರುಗಳು ಒಂದು ಕ್ಷಣ ಮನದಲ್ಲಿ ಯೋಚಿಸಿದರು. "ಬದುಕು ಎಷ್ಟು ವಿಚಿತ್ರ ಕೆಟ್ಟದ್ದನ್ನು ಹೇಳುವವರ ಕಾಲ ಹೆಚ್ಚಾಗಾಕತ್ತೈತಿ ಛಲೋ ಹೇಳಾವರಿಗೆ ಬೆಲೆ ಇಲ್ಲದಂಗ ಆಗೇತಿ. ನ್ಯಾಯಾ ಹೇಳಬೇಕಾದವರೂ ಸರಿಯಾಗಿ ವಿಚಾರ ಮಾಡುತ್ತಿಲ್ಲ. ಛೆ! ದೇವರು ಮಲ್ಲಪ್ಪನಿಗೆ ಇಂಥ ಕಷ್ಟ ಕೊಡಬಾರದಿತ್ತು" ಎಂದು ಗೊಣಗುತ್ತ ಇರಲಿ ಚನ್ನಪ್ಪ ನನ್ನನ್ನು ಭೇಟಿ ಆಗಾಕ ಬಂದ್ರ ಅವನಿಗೆ ಸರಿಯಾಗಿ ತಿಳಿಸಬೇಕು ಎಂದು ಗೊಣಗುತ್ತ ವೆಂಕಪ್ಪ ಮಾಸ್ತರು ತಮ್ಮ ಮನೆಯತ್ತ ಹೊರಟರು.
-ವೈ. ಬಿ. ಕಡಕೋಳ