ನಿರಂತರ ಪರಿಶ್ರಮದಿಂದ “ಯಶಸ್ಸು”ಗಳಿಸಲು ಸಾಧ್ಯ: ವೇದಾವತಿ ಹೆಚ್. ಎಸ್.

vedavati-h-s

ಪ್ರಪಂಚದಲ್ಲಿ “ಯಶಸ್ಸು”ಎಂಬುದು ಯಾರಿಂದಲೂ ಎರವಲಾಗಿ ಪಡೆಯಲು ಸಾಧ್ಯವಿಲ್ಲ. ನಾವೇ ಕಷ್ಟಪಟ್ಟು ಗುರಿಯನ್ನು ಮುಟ್ಟಿದರೆ ಮಾತ್ರ “ಯಶಸ್ಸು”ನಮ್ಮ ಪಾಲಿಗೆ ಒಲಿಯುತ್ತದೆ. ಮನುಷ್ಯನ ಜೀವನದಲ್ಲಿ ಹಣ, ಕಾರು, ಬಂಗಲೆ, ಅಥವಾ ಬೇರೆಯವರಿಗೆ ಆಫೀಸ್ನಲ್ಲಿ ಕೆಲಸವನ್ನೂ ಕೊಡಿಸಬಹುದು! ಅದರ ಮುಂದಿನ ಗುರಿ, ಜೀವನದಲ್ಲಿ ಸಾಧನೆ ರೂಪದಲ್ಲಿ ಮೆಟ್ಟಿಲು ಏರುವುದೇ “ಯಶಸ್ಸು”. ಯಶಸ್ಸು ಎಂಬುದು ಎಲ್ಲಾ ವಸ್ತುಗಳು ಸಿಗುವಷ್ಟು ಸುಲಭವಾಗಿ ಯಾರಿಗೂ ದೊರಕುವುದಿಲ್ಲ. ಅದನ್ನು ಜಾಣತನದಿಂದ ಸಂಪಾದಿಸಲು ಕಲಿಯಬೇಕು.

ಹೊಂಡಾ’ಕಂಪನಿಯ ಹೆಸರನ್ನು ಯಾರು ತಾನೇ ಕೇಳಿಲ್ಲ? ಹೊಂಡಾ ಒಬ್ಬ ಸರಳ ಸ್ವಭಾವದ ವ್ಯಕ್ತಿಯಾಗಿದ್ದ. ಜೀವನದಲ್ಲಿ ತುಂಬಾ ಕಷ್ಟಪಟ್ಟು ಸಾಧನೆ ಮಾಡಿದ ಸರಳ ಜಫಾನ್ ದೇಶದ ಪ್ರಜೆ. ತನ್ನ ಸಂಶೋಧನೆಯಲ್ಲಿ ಕ್ರಾಂತಿಕಾರಿ ಬದಲಾವಣೆ ನೋಡಿದ ಮನುಷ್ಯ. ಮೊದಲು ಜಫಾನ್ ದೇಶದ ಇಂಜಿನಿಯರ್ಗಳು ಅವನ ಬಗ್ಗೆ ಕಾಳಜಿಯನ್ನು ತೋರಿಸುತ್ತಿರಲಿಲ್ಲ. ಅವರುಗಳ ಬಳಿ ಹೋದರೂ ತಿರಸ್ಕಾರ ಭಾವದಿಂದ ನೋಡುತ್ತಿದ್ದರು. ಅದರೂ ತನ್ನ ಧೃಡ ಮನಸ್ಸಿನಿಂದ, ಛಲದಿಂದ ಹಿಂದೆ ಸರಿಯಲಿಲ್ಲ. ಪ್ರಯತ್ನ ಮುಂದುವರಿಸಿಕೊಂಡು ಹೋಗುತ್ತಿದ್ದ. ಮತ್ತೆ ಮತ್ತೆ ಪ್ರಯತ್ನ ಮಾಡುತ್ತಾ ಟಯೊಟಾ ಇಂಜಿನಿಯರ್ಗಳ ಬಳಿಗೆ ಅವನು ಹೋದ. ಛಲಗಾರನಂತೆ ಅವರ ಬಳಿ ಹೋಗುತ್ತಲೇ ಇದ್ದ. ಕೊನೆಗೂ ಅವನ ಬಗ್ಗೆ ಗಮನ ಹರಿಸಿದರು. ಮೊದಲು ಒಪ್ಪಿಗೆ ಕೊಡದಿದ್ದರೂ ನಂತರ ದಿನಗಳಲ್ಲಿ ಟಯೊಟಾ ಕಂಪನಿಯ ಮನವೊಲಿಸಿ ಪಿಸ್ಟನ್ನನ್ನು ಟಯೊಟಾ ಕಂಪನಿಗೆ ಆರ್ಡರ್ ಸರಬರಾಜು ಮಾಡಲು ಒಪ್ಪಿಗೆ ಪಡೆದು ಕೊಂಡ.

ಹೊಂಡಾ ತುಂಬಾ ಸಂತೋಷದಿಂದ ಬಂಡವಾಳ ಹೂಡಿ ಪಿಸ್ಟನ್ ಕಾರ್ಖಾನೆ ಪ್ರಾರಂಭಿಸಿದ. ಅದರೆ ಭೂಕಂಪದಿಂದ ಕಾರ್ಖಾನೆ ನಾಶವಾಗುತ್ತದೆ. ಮುಂದೆ ಇನ್ನೊಂದು ಕಾರ್ಖಾನೆ ನಿರ್ಮಾಣ ಮಾಡಿ ಆರಂಭಿಸಬೇಕು ಎನ್ನುವಾಗ ಎರಡನೆಯ ಮಹಾಯುದ್ಧ ಪ್ರಾರಂಭವಾಯಿತು. ಅವನು ಕಟ್ಟಿದ ಕಾರ್ಖಾನೆ ಯುದ್ದದಲ್ಲಿ ಪುಡಿ ಪುಡಿಯಾಗಿ ಹೋಯಿತು. ಅವನು ತನ್ನ ಆಸ್ತಿ, ಸ್ನೇಹಿತರು, ಸಂಪತ್ತು, ಕಾರ್ಖಾನೆ ಎಲ್ಲವನ್ನೂ ಕಳೆದು ಕೊಂಡು ಬಿಟ್ಟಿದ್ದ. ಆದರೆ ಸಾಧಿಸ ಬೇಕೆಂಬ ಛಲ ಅವನಲ್ಲಿ ಇನ್ನೂ ಜೀವಂತವಾಗಿತ್ತು. ಮೂರನೇ ಬಾರಿ ಪುನಃ ಪಿಸ್ಟನ್ ಕಾರ್ಖಾನೆ ಪ್ರಾರಂಭ ಮಾಡಿ ಯಶಸ್ವಿಯಾದ. ಇಂದು ಪ್ರಪಂಚದ ಅತಿ ದೊಡ್ಡ ಕಂಪನಿಯಲ್ಲಿ ಹೊಂಡಾ ಕಂಪನಿಯು ಒಂದು. ಸೋಲು ಬಂದಾಗ ಹತಾಶೆ ಪಡದೆ ಮುನ್ನುಗ್ಗಿ ಜೀವನದಲ್ಲಿ ಬರುವ ಕಷ್ಟವನ್ನು ಎದುರಿಸಲು ತಯಾರಾಗಬೇಕು. ಒಂದಲ್ಲಾ ಒಂದು ದಿನ ಗೆದ್ದೇ ಗೆಲ್ಲುತ್ತೇವೆ.

ಅಮೇರಿಕಾದ ಅಧ್ಯಕ್ಷ ಅಬ್ರಹಾಂ ಲಿಂಕನ್ ತಮ್ಮ ಬದುಕಿನ ದಿನಗಳಲ್ಲಿ ಬಹಳಷ್ಟು ಸೋಲನ್ನು ಕಂಡವರು. ಅದರೂ ಆ ಸೋಲುಗಳಿಂದ  ವಿಚಲಿತರಾಗಲಿಲ್ಲ. ಅವನನ್ನು ಏಳನೇ ವಯಸ್ಸಿನಲ್ಲಿ ಮನೆಯಿಂದ ಹೊರ ಹಾಕಲಾಯಿತು. ಒಂಬತ್ತನೇ ವಯಸ್ಸಿನಲ್ಲಿ ತಾಯಿ ತೀರಿಕೊಂಡರು. ಇಪ್ಪತ್ತೆರಡನೇ ವಯಸ್ಸಿನಲ್ಲಿ ತನಗಿದ್ದ ಕೆಲಸವನ್ನು ಕಳೆದು ಕೊಂಡ. ಇಪ್ಪತ್ತೈದನೇ ವಯಸ್ಸಿನಲ್ಲಿ ಚುನಾವಣೆಯಲ್ಲಿ ಸೋಲನ್ನು ಅನುಭವಸುವಂತಾಯಿತು. ಇಪ್ಪತ್ತೇಳನೇ ವಯಸ್ಸಿನಲ್ಲಿ ನರದೌರ್ಬಲ್ಯ ಉಂಟಾಗುತ್ತದೆ. ಇಪ್ಪತ್ತೆಂಟನೇ ವಯಸ್ಸಿನಲ್ಲಿ ತನ್ನ ಪ್ರೇಯಸಿಯನ್ನು ಕಳೆದು ಕೊಂಡ. ಮೂವತ್ತನೇ ವಯಸ್ಸಿನಲ್ಲಿ ಸ್ಫೀಕರ್ ಹುದ್ದೆಯ ಚುನಾವಣೆಯಲ್ಲಿ ಸೋತ. ಮೂವತ್ತೈದನೇ ವಯಸ್ಸಿನಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಸೋತ. ನಲವತ್ತಾರನೇ ವಯಸ್ಸಿನಲ್ಲಿ ಮಗನನ್ನು ಕಳೆದುಕೊಂಡ ಹಾಗೂ ಸೆನೆಟ್ ಚುನಾವಣೆಯಲ್ಲಿ ಸೋಲು ಉಂಟಾಗುತ್ತದೆ. ನಲವತ್ತೊಂಬತ್ತನೇ ವಯಸ್ಸಿನಲ್ಲಿ ಉಪಧ್ಯಾಕ್ಷರ ಚುನಾವಣೆಯಲ್ಲಿ ಸೋಲುಂಟಾಗುತ್ತದೆ. ಹೀಗೆ ಜೀವನದಲ್ಲಿ ಸತತ ಏಳು ಬೀಳುಗಳನ್ನು ಕಂಡ ಅಬ್ರಹಾಂ ಲಿಂಕನ್ ತಮ್ಮ ಐವತ್ತೆರಡನೇ ವಯಸ್ಸಿನಲ್ಲಿ ಅಮೇರಿಕಾದ ಅಧ್ಯಕ್ಷರ ಹುದ್ದೆಗೆ ಆಯ್ಕೆಯಾದರು. ಅವರಿಗಿದ್ದ ಆತ್ಮವಿಶ್ವಾಸ ಅವರನ್ನು ಅಧ್ಯಕ್ಷ ಹುದ್ದೆಗೆ ತಲುಪಿಸಿತು.

ಒಮ್ಮೆ ನಾನು ಬೆಳಗಿನ ವಾಯುವಿಹಾರಕ್ಕೆ ಒಂದು ಉದ್ಯಾನವನಕ್ಕೆ ಹೋಗಿ ವಾಕಿಂಗ್ ಮುಗಿದ ನಂತರ ಅಲ್ಲೆ ಇದ್ದ ಬೆಂಚಿನಲ್ಲಿ ಕುಳಿತು, ಒಂದು ಇರುವೆಯನ್ನು ನೋಡುತ್ತಾ ಕುಳಿತೆ. ಆ ಇರುವೆ ನಾನು ಕುಳಿತ ಸ್ಥಳದಿಂದ ಇನ್ನೊಂದು ಮೂರರಿಂದ ನಾಲ್ಕು ಅಡಿ ಅಚೆ ತಲುಪ ಬೇಕಾಗಿತ್ತು. ಅದರೆ ತುಂಬಾ ಜನರು ವಾಕಿಂಗ್ ಮಾಡುತ್ತಿದ್ದರು. ವಾಕಿಂಗ್ ಮಾಡುವ ಜಾಗದಲ್ಲಿ ಟೈಲ್ಸ್ ಹಾಕಿದ್ದರಿಂದ ಮಧ್ಯದಲ್ಲಿ ಒಂದು ಟೈಲ್ಸ್ನಿಂದ ಇನ್ನೊಂದಕ್ಕೆ ಗ್ಯಾಪ್ ಇತ್ತು. ಪ್ರತಿಯೊಬ್ಬರೂ ಬಂದಾಗ ಆ ಇರುವೆ ಆ ಗ್ಯಾಪ್ನಲ್ಲಿ ಕುಳಿತು ಕೊಳ್ಳುತ್ತಿತ್ತು. ಹಾಗೂ ಹೀಗೂ ಕೊನೆಯಲ್ಲಿ ಅದು ತಲುಪ ಬೇಕಾದ ಸ್ಥಳಕ್ಕೆ ಯಾವ ತೊಂದರೆಯನ್ನು ಮಾಡಿ ಕೊಳ್ಳದೆ  ಹೋಗಿ ತಲುಪಿತು. ಯಾರ ಕಾಲಿನ ಶೂಗೆ ಸಿಕ್ಕದೆ  ತನ್ನ ಯಶಸ್ಸಿನ ಮೆಟ್ಟಿಲು ಮುಟ್ಟಿತು. ಹತ್ತು ನಿಮಿಷಗಳ ಕಾಲ ಅದನ್ನೇ ನೋಡುತ್ತಿದ್ದೆ. ಅದರ ಜೀವ ಉಳಿಸಿ ಕೊಳ್ಳುವುದರ ಜೊತೆಗೆ ಸಾಧನೆಯನ್ನು ಮಾಡಿತ್ತು. ಒಂದು ಇರುವೆಗೆ ಇಷ್ಟೊಂದು ಛಲವಿರಬೇಕಾದರೆ, ಮನುಷ್ಯನಿಗೆ ಎಷ್ಟೊಂದು ಛಲ, ಬುದ್ದಿವಂತಿಕೆ ಇರಬೇಕೆಂದು ಮನಸ್ಸಿನಲ್ಲೇ ಭಾವಿಸಿದೆ.

ಬಡತನದಿಂದ ಉನ್ನತ ಸ್ಥಾನಕ್ಕೆ ಬಂದ ಮಹನೀಯರು ಆನೇಕ ಮಂದಿ ನಮ್ಮ ದೇಶದಲ್ಲಿ ಸಹ ಇದ್ದಾರೆ. ಅವರ ಬೆಂಬಿಡದ ಛಲದಿಂದ ಯಶಸ್ಸು ಅವರದಾಗಿಸಿ ಕೊಂಡಿದ್ದಾರೆ. ಸರ್ ಎಂ ವಿಶ್ವೇಶ್ವರಯ್ಯನವರು ಕಡು ಬಡತನದಿಂದ ಇಂಜಿನಿಯರಿಂಗ್  ಮುಗಿಸಿದವರು. ನಮ್ಮ ದೇಶದ ಪ್ರತಿಭಾನ್ವಿತ ಸಾಧಕರ ಸಾಲಿನಲ್ಲಿ ಅವರು ಒಬ್ಬರು. ಅವರ ಕೆಲಸಕಾರ್ಯಗಳನ್ನು ವಿಶ್ವವೇ ಬೆರಗಾಗಿ ನೋಡುವಂತೆ ಮಾಡಿದವರು. ಅವುಗಳಲ್ಲಿ ಕೆಲವು, ಮುಂಬೈ ಮಹಾನಗರಿಯಲ್ಲಿ ಮಹಾಮಳೆ ಸುರಿದರೂ ನೀರು ಇಂಗುವ ವ್ಯವಸ್ಥೆಯನ್ನು 1884ರಲ್ಲೇ ಸರ್ ಎಂ. ವಿಶ್ವೇಶ್ವರಯ್ಯ ಅವರು ರೂಪಿಸಿದ್ದರು.
ಕೃಷ್ಣರಾಜಸಾಗರ ನಿರ್ಮಾಣ, ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಅಭಿವೃದ್ಧಿ, ಮೈಸೂರು ಸಾಬೂನು ಕಾರ್ಖಾನೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್, ಮೈಸೂರು ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸ್ಥಾಪನೆ, ಮೈಸೂರು ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ, ಶ್ರೀ ಜಯಚಾಮರಾಜೇಂದ್ರ ವೃತ್ತಿಶಿಕ್ಷಣ ತರಬೇತಿ ಸಂಸ್ಥೆಯ ಸ್ಥಾಪನೆ ಹೀಗೆ ವಿಶ್ವೇಶ್ವರಯ್ಯನವರ ಪ್ರಾಮಾಣಿಕತೆ, ವೃತ್ತಿಪರತೆಗಳು ಕೂಡ ದಂತೆಕತೆಗಳಾಗಿ ಹೋಗಿವೆ.

ಮನುಷ್ಯನಿಗೆ ಛಲವಿದ್ದರೆ ದೂರದ ಬೆಟ್ಟವೂ ಹತ್ತಿರವಾಗುವುದರಲ್ಲಿ ಸಂಶಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಉನ್ನತ ಮಟ್ಟಕ್ಕೆ ಬರಬೇಕಾದರೆ ಸಾಧನೆ ಮೂಲಕವೇ ಬಂದಿರುತ್ತಾನೆ. ಆ ಸಾಧನೆಗಳು ಅವನಿಗೆ “ಯಶಸ್ಸು”ತಂದು ಕೊಟ್ಟಿರುತ್ತದೆ. ಯಶಸ್ಸಿನ ಹಿಂದೆ ಬೇಕಾದಷ್ಟು ನೋವು ಕಂಡಿರುತ್ತಾರೆ. ಪ್ರತಿಯೊಂದು ನಮಗೆ ಸಿಗುವುದು ಕಷ್ಟ. ಕಷ್ಟಪಟ್ಟು ಪಡೆಯಲು ಇಚ್ಚಿಸಿದರೆ ಸಾಧನೆಯ ಮೆಟ್ಟಿಲು ಏರುತ್ತಾ ಹೋಗಬಹುದು. ಬೇರೆಯವರ ಸಾಧನೆಯ ಬಗ್ಗೆ ಕೊರಗುವುದಕ್ಕಿಂತ ನಮ್ಮಲ್ಲಿರುವ ವಿಶ್ವಾಸದೊಂದಿಗೆ ಮುನ್ನುಗ್ಗಿ ಜೀವನ ನೆಡಸಲು ಹೋದರೆ “ಯಶಸ್ಸು”ಎಂಬುದು ನಮಗೆ ತಾನಾಗಿಯೇ ಲಭಿಸುತ್ತದೆ. ನಾವು ಪಡೆಯಲು ಪ್ರಯತ್ನಿಸಬೇಕಷ್ಟೆ. ಹೀಗೆಯೇ ನಮ್ಮಲ್ಲಿ ಆನೇಕ ಮಹನೀಯರು ಇದ್ದಾರೆ. ಐನ್ಸ್ಟೀನ್ ಶಾಲಾ ವಿಧ್ಯಾಭ್ಯಾಸದ ಕಾಲದಲ್ಲಿ ಅಧ್ಯಾಪಕರಿಂದ ದಡ್ಡ ಎಂದು ಕರೆಸಿಕೊಂಡವ. ಈತ ವಿಶ್ವವಿಖ್ಯಾತ ವಿಜ್ಞಾನಿ ಎನಿಸಿದ್ದಾರೆ. ಹಾಗೇಯೇ ನಮ್ಮ ದೇಶದ ರಾಷ್ಟ್ರಪತಿಯಾಗಿದ್ದ ಡಾಕ್ಟರ್ ಎ ಪಿ ಜೆ ಅಬ್ದುಲ್ ಕಲಾಂ ನಮ್ಮ ದೇಶದ ಹೆಮ್ಮೆಯ ಮಹನೀಯರ ಸಾಲಿನಲ್ಲಿ ಒಬ್ಬರು. ಹೀಗೆ ಹೇಳುತ್ತಾ ಹೋದರೆ ಸಾಧಕರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅವರಲ್ಲಿ ಸಾಮಾನ್ಯವಾಗಿ ನೋಡಬಹುದಾದ ಅಂಶಗಳೆಂದರೆ ನಿರಂತರವಾಗಿ ನಿಲ್ಲದ ಪರಿಶ್ರಮ, ಆತ್ಮ ವಿಶ್ವಾಸ, ನಂಬಿಕೆ ಮತ್ತು ಗುರಿ ಮುಟ್ಟುವ  ಛಲ. ಇವುಗಳು ಅವರ ಯಶಸ್ವಿ ಜೀವನದ ಅಮೂಲ್ಯ ಅಸ್ತಿಗಳು ಎಂದರೂ ತಪ್ಪಾಗಲಾರದು. ಛಲ ಬಿಡದೆ ಸಾಧನೆ ಮಾಡಬೇಕು ಎಂಬುದು ಇದ್ದರೆ ಸಾಮಾನ್ಯ ಮನುಷ್ಯನು ಉನ್ನತ ಗುರಿ ತಲುಪಲು ಸಾಧ್ಯ. ಪ್ರತಿಯೊಬ್ಬರ ಗುರಿಯಂತೆ ಯಶಸ್ಸು ದೊರಕುವುದರಲ್ಲಿ ಸಂಶಯವಿಲ್ಲ.

ವೇದಾವತಿ ಹೆಚ್. ಎಸ್.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x