ಸ್ಥಾನಮಾನ ಮತ್ತು ಸ್ತ್ರೀ ಸಾಮರ್ಥ್ಯ: ನಾಗರೇಖಾ ಗಾಂವಕರ

nagarekha

ಶ್ರೇಷ್ಟ ತತ್ವಜ್ಞಾನಿ ಕಾರ್ಲಮಾರ್ಕ್ಸ್ ಹೇಳುತ್ತಾನೆ “ಸ್ತ್ರೀಯರ ವಿಮೋಚನೆ ಹಾಗೂ ಎಲ್ಲಿಯರವರೆಗೆ ಸಮಾಜದಲ್ಲಿ ಮಹಿಳೆ ಕ್ರ್ರಿಯಾತ್ಮಕ ಮತ್ತು ಆರ್ಥಿಕ ಮೌಲ್ಯಗಳ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವಕಾಶ ಪಡೆಯದೇ, ಅವರ ಚಟುವಟಿಕೆಗಳು ಬರೀಯ ಮನೆಗೆಲಸಗಳಿಗೆ ಸೀಮಿತವಾಗಿ ಉಳಿಯುತ್ತವೆಯೋ, ಅಲ್ಲಿಯವರೆಗೆ ಮಹಿಳೆಯರ ಉದ್ದಾರ ಸಾಧ್ಯವಿಲ್ಲ. ಆಕೆ ಪುರುಷನಿಗೆ ಸಮಾನ ಅವಕಾಶ ಸ್ಥಾನಮಾನಗಳನ್ನು ಪಡೆಯುವುದು ದುಸ್ಸಾಧ್ಯ. ”  ಎನ್ನುತ್ತಾರೆ.  ದ್ವಿತೀಯ ಲಿಂಗಿಯಾಗಿಯೇ ಪರಿಗಣಿಸಲ್ಪಡುವ ಸ್ತ್ರೀಗೆ ಪುರುಷನಿಗೆ ಇರುವ ಸ್ಥಾನಮಾನ ಇಲ್ಲದಿರುವುದಕ್ಕೆ ಕಾರಣ ತಾರತಮ್ಯ ನೀತಿ. ಆಕೆಯ ಸಾಮರ್ಥ್ಯದ ಬಗ್ಗೆ  ಸೃಷ್ಟಿಸಿದ ತಪ್ಪು ಗೃಹಿಕೆ. ಆಕೆಗೆ ಅಡುಗೆ ಮನೆಯ ಸರ್ವಾಧಿಕಾರಣಿ ಪಟ್ಟ ಕಟ್ಟಿದ ಪುರುಷ ಸಮಾಜ. ವಿಚಾರ ಮಾಡುವ ಸಾಮರ್ಥ್ಯವನ್ನೆ ಮೊಟಕುಗೊಳಿಸಿದ ವ್ಯವಸ್ಥೆ.

ಮಹಿಳೆ ತನ್ನ ಸಾಮರ್ಥ್ಯ ಪ್ರತಿಪಾದನೆಯಲ್ಲಿ ಇಂದಿನ ಜಗತ್ತಿನೊಂದಿಗೆ ಏಗುತ್ತಿರುವ ಪಡಿಪಾಟಲು ನಿಜಕ್ಕೂ ದುರಂತ. ಸಾಮರ್ಥ್ಯ ಸಾಬೀತು ಪಡಿಸುವಲ್ಲಿ ಆಕೆ ಜೀವಮಾನ ಕಳೆದರೂ ಆಕೆಯ ಗುರುತಿಸುವಲ್ಲಿ ವಿಳಂಬ ನೀತಿ ಜಾಣ ಕುರುಡು ಎದ್ದು ಕಾಣುವುದು ಎಲ್ಲ ಕ್ಷೇತ್ರಗಳಲ್ಲಿ ಅನುಭವವೇದ್ಯ. ಪುರುಷನಿಗೆ ಸಮಾನವಾಗಿ ದುಡಿಯುವ ಸ್ಥಳಗಳಲ್ಲೂ ಪುರುಷ ಉದ್ಯೋಗಿ ಸಹೋದ್ಯೋಗಿಯೊಂದಿಗೆ ಸಿಟ್ಟು ಮಾಡಿಕೊಂಡ ಸಮಯದಲ್ಲೆಲ್ಲಾ “ನಾನೇನೋ ಕೈಗೆ ಬಳೆ ತೊಟ್ಟಿಲ್ಲ” ಎಂಬ ಅಹಮ್ಮಿನ ಉದ್ಗಾರ ತೆಗೆಯುವುದು ಇಂದಿನ ಕಾಲಕ್ಕೆ ಅನಾಗರಿಕ ವರ್ತನೆಯೆಂದೆನ್ನಿಸಿದರೂ ರಕ್ತದಲ್ಲೇ ಬೆರೆತ ತಾನು ಪುರುಷನೆಂಬ ಮೇಳಿರಿಮೆ ಹಾಗೂ ಹೆಣ್ಣು ಕನಿಷ್ಟಳೆಂಬ ನಿಕೃಷ್ಟ ಭಾವ ಸುಸ್ಪಷ್ಟ. ಇಂತಹ ದರ್ಪದ ದನಿಗಳ ಕೇಳಿದಾಗಲೆಲ್ಲಾ ಸ್ವಾಭಿಮಾನಿ ಹೆಣ್ಣು ಎಚ್ಚೆತ್ತುಕೊಳ್ಳಬೇಕು. ಬದುಕಿನ ಹೊಂದಾಣಿಕೆಗಳೇ ಬೇರೆ. ಆತ್ಮಭಿಮಾನವೇ ಬೇರೆ. ಆತ್ಮಾಭಿಮಾನಕ್ಕೆ ಧಕ್ಕೆ ಆಗುವಂತಿದ್ದರೆ ಅದನ್ನು ವಿರೋಧಿಸುವ ತಾಕತ್ತು ಅನಿವಾರ್ಯ.

ಬಳೆ ಹೆಣ್ಣಿನ ಕೈ ಆಭರಣ. ಇಂದಿಗೂ ವಿಭಿನ್ನ ಮಾದರಿಯ ಸುಂದರ ಬಳೆಗಳು ಹೆಂಗಳೆಯರ ಮನ ಸೆಳೆಯುತ್ತವೆ. ಅದನ್ನು ತೊಟ್ಟು ಸಂಬ್ರಮಿಸುವ ಮನಸ್ಸು ಆಕೆಗಿದ್ದರೆ, ಅದಾಕೆಯ ಆಸಕ್ತಿಯಾಗಿದ್ದು, ಒತ್ತಾಯದ ತೊಡುಗೆ ಆಗದಿದ್ದಾಗ ಮಾತ್ರ ಅದಕ್ಕೊಂದು ಶೋಭೆ.
ಆದರೆ ಒಂದು ಕಾಲಕ್ಕೆ ಹೆಣ್ಣಿನ ಮನಸ್ಸನ್ನು ಸ್ಥಿಮಿತದಲ್ಲಿಡುವ, ಆಕೆಯಲ್ಲಿ ವಿಷಯಲೋಲುಪತೆಯನ್ನು ನಿಯಂತ್ರಿಸುವ ಉದ್ದೇಶದಿಂದಲೇ ಕೈಗಂಟಿಗೆ ಬಳೆ ತೊಡಿಸುತ್ತಿದ್ದರಂತೆ. ಆದರೆ ಇಂತಹ ನಿಯಂತ್ರಣ ಪುರುಷನಿಗೆ ಇರಲಿಲ್ಲ. ಆತನಿಗೆ ಯಾವ ಕಟ್ಟಳೆಗಳು ಲಾಗೂ ಆಗುತ್ತಿರಲಿಲ್ಲ. ಹಾಗಾಗಿ ಬಳೆ ಎಂದೊಡನೆ ಹೆಣ್ಣು ಎಂಬ ರೂಪಕ ಸಾಮಾನ್ಯ ಗೃಹಿಕೆಯಲ್ಲಿ ಸಿದ್ದಗೊಂಡಿತು. ಮನೆಯಲ್ಲಿ ಬಳೆಗಳ ನಿನಾದ ಗಂಡಿನ ಮನಸ್ಸನ್ನು ಆಕರ್ಷೀಸುವ ಸಾಧನವೆಂಬಂತೆ ಸಾಹಿತ್ಯ ರಚನೆಗಳಲ್ಲೂ ಪ್ರಮುಖ ಸ್ಥಾನ ಪಡೆಯಿತು. ಹೆಣ್ಣಿನ ಕೈಯ ಸೌಂದರ್ಯವನ್ನು ವಿಸ್ತರಿಸುವ ಸಾಧನವೂ ಆಯಿತು. ಆದರೆ ಎಲ್ಲಿಯೂ ಬಳೆ ಆಕೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿ ನಿಲ್ಲಲಿಲ್ಲ. ವಿಪರ್ಯಾಸವೆಂದರೆ ರಾಜಮಹಾರಾಜರೂ ಕೈಗಳಿಗೆ ಖಡ್ಗವನ್ನು ತೊಡುತ್ತಿದ್ದು ಅದು ಅವರ ಶೌರ್ಯದ, ಭುಜಬಲದ ಪ್ರದರ್ಶನಕ್ಕೆ ಆಭರಣದಂತೆ ಬಳಸುತ್ತಿದ್ದು ಧೀಮಂತಿಕೆಯ ಸಂಕೇತವಾಗಿ ಪರಿಗಣಿಸಲ್ಪಡುತ್ತಿತ್ತು. ಹಾಗಾಗಿ ಹೆಣ್ಣು ತೊಡುವ ಕೈ ಬಳೆ ಮಾತ್ರ ಹೀಗೆ ಅಪಭ್ರಂಶ ಅರ್ಥ ಪಡೆದುಕೊಂಡಿದ್ದು ಹೇಗೆಂಬ ವಿಚಾರ ಮಾಡಿದರೆ ಉತ್ತರ ಸ್ಪಷ್ಟ.  ಇಂದು ಪುರುಷ ಕೂಡಾ ಖಡ್ಗ ಬಳೆ ತೊಡುವುದು ದಾದಾ ಎನ್ನಿಸಿಕೊಳ್ಳುವ ಆಕಾಂಕ್ಷೆ ಇರುವವರೆಲ್ಲ ಕೈಗಳಿಗೆ ಇಂತಹ ಬಳೆ ತೊಡುವುದು ಸಾಮಾನ್ಯ. ಆದರೆ ಅದು ಅವರ  ಧೈರ್ಯ ಶೌರ್ಯಕ್ಕೆ ಗುರುತೆಂಬಂತೆ ಕೈಕುಣಿಸಿ ಮಾತನಾಡುವ ಪುರುಷರ ಕಂಡಾಗಲೆಲ್ಲಾ ವಿಚಿತ್ರವೆನಿಸುತ್ತದೆ.

ಪ್ರತಿಯೊಬ್ಬ ಮಾನವನಿಗೂ ತಾನು ಇತತರಿಗೆ ಸಮಾನ ಎಂಬ ಭಾವನೆ ಇರುತ್ತದೆ. ತನ್ನನ್ನು ಇತರರಿಗೆ ಸಮಾನವಾದ ರೀತಿಯಲ್ಲಿ ಗೌರವಿಸಬೇಕೆಂದು ಬಯಸುವುದು ಆತನ ಗುಣ. ಇದಕ್ಕೆ ಹೆಣ್ಣು ಹೊರತಲ್ಲ. ಆದರೆ ಗಂಡು ಹೆಂಡತಿಯನ್ನು ತನಗೆ ಸಮನಲ್ಲ. ಆಕೆ  ಹೆಂಗಸು. ಹಾಗಾಗಿ ಆಕೆಗೆ ಹೆಚ್ಚಿನ ಅಧಿಕಾರ ಬೇಡ. ಎಂಬಿತ್ಯಾದಿ ಪೊಗರಿನ ಗುಣಗಳ ಬೆಳೆಸಿಕೊಂಡಿರುತ್ತಾರೆ. ಭಾರತ ಮೂಲಭೂತವಾದಿ ಮನಸ್ಸುಗಳ ಆಶ್ರಯಧಾಮ. ಹಾಗಾಗಿ  ದುಡಿಯುವ ಹೆಣ್ಣುಗಳು ಕೂಡಾ ಇಂದು ಪತಿಯ ಶ್ರೇಷ್ಟತೆಯನ್ನು ಒಪ್ಪಿಕೊಂಡೇ ಬದುಕುವುದು ಸರ್ವೆಸಾಮಾನ್ಯ. ಬಹುಸಂಖ್ಯಾತ ಗಂಡಂದಿರು ಆಕೆ ಹೆಣ್ಣು ಎಂಬ ಪದವನ್ನು ಪದೇ ಪದೇ ಉಚ್ಚರಿಸಿ ಆಕೆಯಲ್ಲಿ ಕೀಳಿರಿಮೆ ಮೂಡಿಸುವ ಪ್ರಯತ್ನವಾದಿಗಳು ಎಂಬುದನ್ನು ಅಲ್ಲಗಳೆಯಲಾಗದು. ಅದೂ ವಿದ್ಯಾವಂತ ಸಮಾಜದ ಪುರುಷ ಮಣಿಗಳೇ. ಅದನ್ನೆ ಒಪ್ಪಿಕೊಳ್ಳುವ ಮತ್ತು ಸತಿಧರ್ಮ ಎಂಬ ಬಿರುದು ಧರಿಸಬಯಸುವ ಹೆಂಗಳೆಯರು ಕಡಿಮೆಯಿಲ್ಲ.  ಮನೆಯ ಎಲ್ಲ ಜವಾಬ್ದಾರಿಗಳ ನಿಭಾಯಿಸುವ ಆಕೆಯ ಕೈ ಹೊರಗೆಲಸವನ್ನು ಜೊತೆಜೊತೆಗೆ ಸುಸೂತ್ರವಾಗಿ ಸಾಂಘವಾಗಿ ಸಾಗಿಸಿಕೊಂಡು ಹೋಗುವ ತಾಕತ್ತು ತಾಳ್ಮೆ ಬಹುಶಃ ಪುರುಷರಿಗೆ ಅಸಾಧ್ಯವೇ? ಆದಾಗ್ಯೂ ಆಕೆಯ ಸಾಮರ್ಥ್ಯವನ್ನು ಹಳದಿ ಕಣ್ಣುಗಳಿಂದಲೇ ನೋಡಲಾಗುತ್ತದೆ.

ಸುಮಾರು ಕ್ರಿ. ಶ. ನಾಲ್ಕನೇ ಶತಮಾನದಲ್ಲಿ ಅಲೆಗ್ಸಾಂಡ್ರಿಯಾ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿದ್ದ  ಗ್ರೀಕ್ ದೇಶದ ಹಿಪೇಶಿಯಾಳಿಂದ ಹಿಡಿದು ಇಪ್ಪತ್ತನೇ ಶತಮಾನದ  ವರ್ಜಿನಿಯಾ ವೂಲ್ಫ್, ಸಿಮೋನ್ ಡಿ. ಬೊವಾ, ಕೇಟ್ ಮಿಲ್ಲೆಟ್ ಮುಂತಾದ ಪಾಶ್ಚಿಮಾತ್ಯ ಸ್ತ್ರೀವಾದಿಗಳು ಕಹಳೆಯೂದಿದ್ದು ಸ್ತ್ರೀ ಸ್ವತಂತ್ರ ಸಾಮರ್ಥ್ಯವನ್ನು.

ಭಾರತದ ಮಟ್ಟಿಗೆ ಹೇಳುವುದಾದರೆ  ಸ್ವಾತಂತ್ರ್ಯ ನಂತರದ ಭಾರತದ ಸಂವಿಧಾನ ಪುರುಷರಂತೆ ಮಹಿಳೆಗೂ ಸಮಾನ ಹಕ್ಕುಗಳ ದಯಪಾಲಿಸಿದೆ. ಆದರೆ ಅದನ್ನೆಲ್ಲಾ ನೈಜರೂಪದಲ್ಲಿ ಅಕ್ಷರಶಃ ಪಡಿಮೂಡಿಸುವಲ್ಲಿ ಇಂದಿಗೂ ಸಾಧ್ಯವಾಗಿಲ್ಲ. ಉದ್ಯೋಗಸ್ಥ ಮಹಿಳೆಯರು ಹೆಣ್ಣಿನ ಸಹಜ ಅಸ್ತಿತ್ವವನ್ನು ಆಕೆಯ ದೇಹ ಎಂದೆ ಪರಿಗಣಿಸಿ ನೋಡುತ್ತ ಆಕೆಯ ಮಾನಸಿಕ ಸಾಮರ್ಥ್ಯವನ್ನು ಉಪೇಕ್ಷಿಸುತ್ತಾರೆ. ಹೀಗಾದಾಗ ಬೇಲಿಯೇ ಎದ್ದು ಹೊಲ ಮೇಯ್ದಂತೆ ಹೆಣ್ಣು ತನ್ನ ಸಾಮರ್ಥ್ಯವನ್ನು ಅರಿಯಲಾಗದೆ ಕುರುಡಾಗಿ ವರ್ತಿಸುತ್ತಾಳೆ. ಅನೇಕ ಮಹಿಳೆಯರು ಗಂಡ ಮನೆ ಮಕ್ಕಳ ಜವಾಬ್ದಾರಿ ಹೊತ್ತು ಗೃಹಿಣಿಯಾಗಿ ಅದರಲ್ಲಿಯೇ ಸುಖಿಗಳಾಗಿ ಬದುಕುತ್ತಾರೆ. ದಿನಬೆಳಗು ದುಡಿದರೂ ಆಕೆಯ ಕೆಲಸಕ್ಕೆ ಸಿಕ್ಕುವ ಪ್ರಶಂಸೆ ಅಷ್ಟಕಷ್ಟೇ. ಇನ್ನು ಕೆಲವರು ಕಲಿತ ವಿದ್ಯೆಯ ಉಪಯೋಗವಾಗದ ಕೊರಗಿನಲ್ಲಿ ಖಿನ್ನತೆಯಿಂದ ಕೊರಗುವವರೂ ಇದ್ದಾರೆ. ಇಂತಹ ಮಹಿಳೆಯರು ಬದುಕನ್ನು ಸಕಾರಾತ್ಮಕವಾಗಿ ನೋಡುವ ವ್ಯವಧಾನಿಗಳಾಗಬೇಕು. ಮತ್ತೆ ಕೆಲವು ಸ್ತ್ರೀಯರು ತಮ್ಮ ವಿದ್ಯೆ ಉದ್ಯೋಗ ಮನೆಯ ಹೊಣೆಗಳ ಹೊತ್ತು ಸಕಾರಾತ್ಮಕವಾಗಿ ದುಡಿಯುತ್ತ ಸಂಸಾರದ ಬಂಡಿಯನ್ನು ಸುಸೂತ್ರವಾಗಿ ಎಳೆಯುವವರು ಇದ್ದಾರೆ.  ಅಂತವರ ಜವಾಬ್ದಾರಿಗಳು ಹೆಚ್ಚಿದ್ದರೂ ಸ್ತ್ರೀಯರಲ್ಲಿ ಈ ಸಾಮರ್ಥ್ಯ ಸಹಜ ಜನ್ಯವಾಗಿರುವುದು. ಹಾಗಾಗಿ ಆಕೆಯ ಸಾಮರ್ಥ್ಯದ ಬಗೆಗಿನ ಈ ಕಲ್ಪಿತ ವಿಚಾರಗಳ ಇಂದಿನ ಮಹಿಳೆ ಸವಾಲಾಗಿ ಸ್ವೀಕರಿಸುವ ಅಗತ್ಯವಿದೆ.

ಬಹುಸಂಖ್ಯಾತ ದೃಷ್ಟಿಯಿಂದ ಸ್ತ್ರೀ ಸಮಾಜದಲ್ಲಿ ಇನ್ನೂ ಮುಂದೆಲೆಗೆ ಬಂದಿಲ್ಲ. ಹಾಗೆಂದು ತಮ್ಮ ಸ್ವಯಂ ಶಕ್ತಿ ದೃಢವಿಶ್ವಾಸದಿಂದ ಬದುಕನ್ನು ಗೆದ್ದವರು ಸಮಾಜದ ಮುಂಚೂಣಿಯಲ್ಲಿರುವ ಮಹಿಳೆಯರು ಕಡಿಮೆಯಿಲ್ಲ. ಆದರೆ ಇದು ಪುರುಷನಿಗೆ ಸಮಾನ ಸಂಖ್ಯೆಯಲ್ಲಿ ಇಲ್ಲ.  ವಿಚಾರ ಮಾಡದೇ ಇರುವುದಕ್ಕಿಂತ ತಪ್ಪು ಚಿಂತನೆಗಳ ಮಾಡುವುದು ಒಳ್ಳೆಯದೆಂಬುದು ಸತ್ಯ. ಮುಂದೆ ಅದೇ ಸತ್ಯ ವಿಚಾರಗಳತ್ತ ಚಿಂತಿಸುವ ಸಾಮರ್ಥ್ಯ ಬೆಳೆಸುವುದು. ಭೌದ್ಧಿಕ ಸಾಮರ್ಥ್ಯ ಬೆಳೆದಂತೆ ಉಳಿದೆಲ್ಲ ಸಾಮರ್ಥ್ಯಗಳು ಸಹಜ ಜನ್ಯಗಳಾವುದು. ಆ ದಿಶೆಯಲ್ಲಿ ಹೆಣ್ಣು ದಿಟ್ಟ ಹೆಜ್ಜೆಗಳನ್ನಿಡಬೇಕಾಗಿದೆ.

ನಾಗರೇಖಾ ಗಾಂವಕರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x