‘ಕೊನೆಗೂ ತನ್ನ ಕನಸು ನನಸಾಗಲಿದೆಯೆ?’
ದೀಪಾಳಿಗೆ ನಂಬಲು ಸಾಧ್ಯವಾಗಲಿಲ್ಲ…
ತನ್ನ ಮೊಬೈಲಿಗೆ ಬಂದ ಸಂದೇಶವನ್ನು ಮತ್ತೊಮ್ಮೆ ಮಗದೊಮ್ಮೆ ನೋಡಿದಳು. “pack ur bag. chalo mumbai… aaaaa… :)”
ಕೆಲಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಬಾಸ್ ಹತ್ತಿರ ಒಪ್ಪಿಗೆ ಕೇಳಿ ಮನೆಗೆ ಹೊರಟಳು. ಮನಸ್ಸು ಕೆಲವು ದಿನಗಳ ಹಿಂದಿನ ಚಿತ್ರಣವನ್ನು ಬಿಚ್ಚಿತು.
ಇದ್ದಕ್ಕಿದ್ದಂತೆ ಸುಮಿ ಪ್ರತ್ಯಕ್ಷಳಾಗಿದ್ದಳು. ಸುಮ ದೀಪಳ ಬಾಲ್ಯ ಸ್ನೇಹಿತೆ. ಹೆಚ್ಚು ಕಡಿಮೆ ನಿತ್ಯವೂ ಅಂತರ್ಜಾಲ ಅಥವಾ ಮೊಬೈಲ್ ಮೂಲಕ ಸಂಪರ್ಕವಿರುವುದಾದರೂ ಊರ ಕಡೆ ಅವಳು ಬರದೇ ಸುಮಾರು 5-6 ವರ್ಷಗಳಾಗಿದ್ದವು. ದೀಪಾ ಮತ್ತು ಸುಮಳ ಮಧ್ಯದಲ್ಲಿ ಸರಿ ಸುಮಾರು 3-4 ವರ್ಷಗಳ ಅಂತರವಿದ್ದರೂ ಅವರ ನಿರ್ಮಲ ಸ್ನೇಹಕ್ಕೆ ವಯಸ್ಸಿನ ಅಂತರವಾಗಲಿ, ಜಾತಿಯಾಗಲಿ ಅಡ್ಡ ಬಂದಿರಲಿಲ್ಲ. ತಮ್ಮ ತಂದೆಯಂದಿರ ಸ್ನೇಹವನ್ನು ಈ ಹುಡುಗಿಯರೂ ಮುಂದುವರೆಸಿದ್ದರು. ತಂದೆಯಂದಿರು ತಮ್ಮ ತಮ್ಮ ಕೆಲಸಗಳ ದೆಸೆಯಿಂದಾಗಿ ಊರೂರು ಸುತ್ತಬೇಕಾಗಿದ್ದರೂ ತಮ್ಮ ಸಂಸಾರವನ್ನು ಇಲ್ಲೇ ಊರಲ್ಲಿ ಬಿಟ್ಟಿದ್ದರು. ಹಾಗಾಗಿ ದೀಪಾ ಮತ್ತು ಸುಮ ನೆರೆಕೆರೆಯವರಾಗಿದ್ದರು. ಅವರ ಸ್ನೇಹವೂ ಹಾಗೆ ಉಳಿದು ಮದುವೆಯಾದ ನಂತರವೂ ಮುಂದುವರೆದಿತ್ತು. ದೀಪಾ ಮಂಗಳೂರಿನಲ್ಲೇ ಉಳಿದಳು, ಸುಮ ಅವಳ ಪತಿಯ ಬ್ಯಾಂಕಿನ ಕೆಲಸದ ನೆಪದಿಂದ ಅನೇಕ ಊರುಗಳ ನೀರು ಕುಡಿದು, ಕೊನೆಗೆ ಮುಂಬೈಯಿಯಲ್ಲೇ ಸೆಟಲ್ ಆಗಿಬಿಟ್ಟರು. ಸುಮಳ ಮಗ ಅಲ್ಲೇ ಒಳ್ಳೆ ಕಂಪನಿಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಐದು ವರ್ಷದ ಹಿಂದೆ ಸುಮಿಗೆ ಬರೆಯುವ ಗೀಳು ಹಿಡಿಯಿತು. ಅವಳು ತಾನು ಬರೆದುದನ್ನು ದೀಪಾಳಿಗೆ ಇ ಮೈಲ್ ಮೂಲಕ ಕಳುಹಿಸುತ್ತಿದ್ದಳು..ಅದನ್ನು ತಿದ್ದಿ ತೀಡಿ ಅದಕ್ಕೆ ಹೊಸ ರೂಪ ಕೊಟ್ಟು ದೀಪಾ ಹಿಂದಕ್ಕೆ ಕಳುಹಿಸುತ್ತಿದ್ದಳು. ಹೀಗೆ ಹೊಸ ರೂಪ ಪಡೆದ ಕವಿತೆ, ಕಥೆ ಎಲ್ಲವೂ ಮುಂಬೈಯಿಯ ತುಳುಕೂಟ ಪ್ರಸಾರ ಮಾಡುತ್ತಿದ್ದ ಪತ್ರಿಕೆಗಳಲ್ಲಿ ಪ್ರಕಟವಾಗಿ ಸುಮಳ ಹೆಸರು ಅಲ್ಲಿನ ತುಳು ಜನರ ಬಾಯಿಯಲ್ಲಿ ತಿರುಗುತ್ತಿತ್ತು. ಕೆಲವೊಂದು ಮಹಿಳಾಮಣಿಯರ ಕಾರ್ಯಕ್ರಮದಲ್ಲಿ ಅತಿಥಿಯಾಗಿಯೋ, ಅಧ್ಯಕ್ಷೆಯಾಗಿಯೋ ಆಹ್ವಾನವೂ ಬರುತ್ತಿತ್ತು.
ಸುಮಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಲು ಕಾರಣ ವಿಶ್ವ ತುಳು ಸಮ್ಮೇಳನ!
“ದೀಪ್ಸ್, ನಿನ್ನಿಂದ ನಾನು ಒಬ್ಬ ಸಾಹಿತಿ ಅಂತ ಗುರುತಿಸಲ್ಪಟ್ಟೆ ಕಣೇ! ಹುರ್ರೇ… ” ದೀಪಾಳ ಕೈ ಹಿಡಿದು ಒಂದು ಸುತ್ತು ಗರ್ ಅಂತ ತಿರುಗಿಸಿದಳು. ಗಟ್ಟಿಯಾಗಿ ಬಿಗಿದಪ್ಪಿದಳು!
“ಅದೇನು ಅಂತ ಸರಿಯಾಗಿ ಹೇಳೆ. ಸಾಹಿತಿ, ಗುರುತು… ಇದೆಲ್ಲಾ ಏನು?”
“ಅದೆಲ್ಲಾ ಮತ್ತೆ, ಮೊದಲು ನನಗೆ ಹೊಟ್ಟೆಗೆ ಹಾಕು. ಕುಡಿಯಲು ಅದೇನೋ ನೀನು ರಾಗಿಯ ಸಿಹಿ ಪಾಯಸನೋ, ಜ್ಯೂಸೋ ಮಾಡ್ತಿದ್ದಿಯಲ್ಲಾ .. ತೆಂಗಿನಕಾಯಿ ಹಾಕಿ, ಅದನ್ನು ಮಾಡಿಕೊಡು. ಮತ್ತೆ ಇವತ್ತು ಕೆಲಸಕ್ಕೆ ಹೋಗಲಿಕ್ಕಿಲ್ಲ. ಆಫೀಸಿಗೆ ಫೋನ್ ಮೊದಲು ಮಾಡು! ಹುಂ… ” ಮಹಾರಾಣಿ ಬಡಬಡ ಮಾತಾಡ್ತಾ ಅಪ್ಪಣೆ ಕೊಟ್ಟಳು.
ದೀಪಾಗೆ ಬೇರೆ ದಾರಿಯಿರಲಿಲ್ಲ. ಮೊದಲಿಂದಲೂ ಅವಳು ಹಾಗೆ! ದೀಪಾ ತಣ್ಣಗಿನ ಸ್ವಭಾವದವಳು. ಸುಮಿಗೆಂದೂ ಇಲ್ಲ ಹೇಳುತ್ತಿರಲಿಲ್ಲ.. ಸುಮಿಯೂ ಅಷ್ಟೇ.. ಮಾತಿನಲ್ಲೇಷ್ಟೇ ಜೋರು!
ಅಪರಾಹ್ನ ಸ್ನೇಹಿತೆಯರಿಬ್ಬರೂ ಹೊಟ್ಟೆ ತುಂಬಾ ಮಾತಾಡಿ, ಒಂದಿಷ್ಟು ಹೆಚ್ಚಿಗೆಯೇ ಊಟ ಮಾಡಿ ಪಲ್ಲಂಗದ ಮೇಲೆ ಬಿದ್ದುಕೊಂಡರು.
“ಹುಂ, ಈಗ ಹೇಳು ನಿನ್ನ ಸಾಹಿತ್ಯ ಪುರಾಣ!”
“ಅದೇ ಕಣೆ, ನಿಂಗೊತ್ತಲ್ವ. ನೀನು ಸರಿಪಡಿಸಿದ ನನ್ನ ಬರಹಗಳನೆಲ್ಲಾ ಆ ತುಳು ಸಂಘದವರಿಗೆ ಕಳುಹಿಸುತ್ತಿದ್ದೆನಲ್ಲ. ಅವರು ಅದನ್ನು ಬೇರೆ ಪತ್ರಿಕೆಗಳಿಗೂ ಕಳುಹಿಸುತ್ತಿದ್ದರು. ಹಾಗೆ ನನ್ನನ್ನು ಅಲ್ಲಿನ ಕನ್ನಡ, ತುಳು ಕೂಟದವರೆಲ್ಲ ಬರಹಗಾರ್ತಿ ಎಂದು ಆಗಾಗ್ಗೆ ಕರೆದು ಸನ್ಮಾನಿಸುತ್ತಿದ್ದರು… ಇದೆಲ್ಲಾ ಕತೆ ನಿನಗೆ ಗೊತ್ತೇ ಇದೆ ತಾನೆ. ಇದೀಗ ಮುಂಬೈಯಿಯಲ್ಲಿ ತುಳು ವಿಶ್ವ ಸಮ್ಮೇಳನ ಮುಂದಿನ ತಿಂಗಳಲ್ಲಿ ನಡೆಯಲಿದೆ. ಅದರಲ್ಲಿ ಭಾಗವಹಿಸಲು ನನಗೂ ಕರೆ ಬರಬಹುದಂತ ನಮ್ಮ ಅಧ್ಯಕ್ಷರು ಹೇಳಿದ್ದಾರೆ. ಒಂದು ವೇಳೆ ಹಾಗೇನಾದರೂ ನನ್ನನ್ನು ಆಫೀಶಿಯಲ್ ಆಗಿ ಆಹ್ವಾನಿಸಿದರೆ ನೀನೂ ಬರಲೇಬೇಕು. ನೀನಿಲ್ಲದಿದ್ದರೆ ನಂಗೆ ಕೈ ಕಾಲು ಅಲ್ಲಾಡಲಿಕ್ಕಿಲ್ಲ.”
“ಅಲ್ವೇ, ನಾನು ಅಲ್ಲಿಗೆ ನಿನ್ನ ಕೈ ಕಾಲು ಅಲ್ಲಾಡಿಸಲು ಬರ್ಬೇಕಾ! ಈಗಾಗಲೇ ನೀನು ಸ್ವತಂತ್ರವಾಗಿ ಅಲ್ಲಾಡಿಸುತ್ತಿದ್ದಿಯಲ್ಲಾ. ಬೆಳಿಗ್ಗೆ ತಾನೇ ನೀನೇ ನನ್ನನ್ನೂ ಗರ್ ಅಂತ ತಿರುಗಿಸಿ ಜೋರಾಗಿ ಅಲ್ಲಾಡಿಸಿಬಿಟ್ಟಿದ್ದೆಯಲ್ಲವೆ!”, ದೀಪಾ ಮುಸುಮುಸು ನಗುತ್ತಾ ಅಂದಳು.
“ಹೋಗೆ, ಈ ಸಲ ಈ ನೆಪದಿಂದಾದಲಾದರೂ ನಾಲ್ಕು ದಿನ ನನ್ನ ಮನೆಗೆ ಬಂದು ಆರಾಮವಾಗಿ ಇದ್ದು ಹೋಗಬೇಕು. ನನ್ಗಿಂತ ಚಿಕ್ಕವಳು ನೀನು ಹೇಗೆ ಆಗಿದ್ದಿ ನೋಡು! ಸಾಕು ಹೀಗೆ ಅಜ್ಜಮ್ಮನ ಹಾಗೆ ಮಾತಾಡಬೇಡ. ಎಲ್ಲಾ ಕನ್ಫರ್ಮ್ ಆದ ಕೂಡಲೇ ಮೆಸೇಜ್ ಮಾಡ್ತೇನೆ. ಜೊತೆಗೆ ಟಿಕೆಟ್ ಕೂಡ ಬುಕ್ ಮಾಡ್ತೇನೆ. ಸುಮ್ಮನೆ ಹೊರಡು.”
ದೀಪಾ ಗಂಭೀರಳಾಗಿಬಿಟ್ಟಳು. ಜತೆಗೆ ಅವಿನಾಶನ ನೆನಪೂ ಒತ್ತರಿಸಿ ಬಂದಿತು. ತಡೆಯಲಾಗಲಿಲ್ಲ… ಕಣ್ಣಾಲಿಗಳು ತುಂಬಿಕೊಂಡವು. ಇದೊಂದು ಚಾನ್ಸ್… ಮುಂಬೈಗೆ ಹೋದರೆ ಅವಿಯನ್ನು ನೋಡಬಹುದು… ಛೇ, ಏನೆಲ್ಲಾ ಯೋಚನೆ. ಇಲ್ಲಿ ಹುಡುಗಿಯರಿಗೆ ಯಾರಿದ್ದಾರೆ!
“ಸುಮೀ, ಪ್ಲೀಸ್ ಕಣೆ. ಒತ್ತಾಯ ಮಾಡ್ಬೇಡವೇ. ನಿಂಗೆ ಪರಿಸ್ಥಿತಿಯೆಲ್ಲಾ ಗೊತ್ತು ತಾನೆ. ನನ್ನ ಹುಡುಗಿಯರನ್ನು ನಾಲ್ಕು ದಿನ ಯಾರು ನೋಡಿಕೊಳ್ಳುತ್ತಾರೆ ಕಣೇ? ಅವರನ್ನು ಇಲ್ಲಿ ಹೇಗೋ ಬಿಟ್ಟು ನಾನಲ್ಲಿ ಹೇಗೆ ಆರಾಮವಾಗಿ ಇರಲಿ ಕಣೇ?”
“ನಾನೆಲ್ಲ ಯೋಚನೆ ಮಾಡಿದ್ದೇನೆ ದೀಪೂ… ನಿನ್ನ ಅಮ್ಮನ ಮನೆಯಲ್ಲಿ ಬಿಡು ಇಬ್ಬರನ್ನೂ. ನಾಲ್ಕು ದಿನ ತಾನೆ. ಇಬ್ಬರೂ ಬೇಡ ಅನ್ನಲಿಕ್ಕಿಲ್ಲ. ನಿನ್ನ ಅಮ್ಮನಿಗೆ ಅಂತಹ ತೊಂದರೆ ಸಹ ಆಗೊಲ್ಲ.”
“ಯೋಚನೆ ಮಾಡ್ತೇನೆ. ಆದರೆ ನನ್ನ ಮಕ್ಕಳು ಬೇಡ ಅಂದ್ರೆ ನಾನು ಬರುವುದಿಲ್ಲ. ಮತ್ತೆ ಸುಮ್ಮನೆ ನನ್ನ ಬೈಬೇಡ.”
“ಆಯ್ತು ಪುಣ್ಯಾತ್ಮಿ… ನೀನು ಬಂದ್ರೆ ನನ್ನಷ್ಟು ಖುಷಿ ಪಡುವವರು ಯಾರೂ ಇಲ್ಲ..ಬರದಿದ್ದರೆ ನನ್ನಷ್ಟು ದುಃಖಿನೂ ಯಾರೂ ಇಲ್ಲ.” ಸಣ್ಣ ಮುಖಮಾಡಿ ಸುಮ ಅಂದಾಗ ದೀಪಳಿಗೆ ತಡೆಯಲಾಗಲಿಲ್ಲ. ಅವಳನ್ನು ಗಟ್ಟಿಯಾಗಿ ಅಪ್ಪಿದಳು… ಕಣ್ಣಿನಿಂದ ಗಂಗಾ ಧಾರಾಕಾರವಾಗಿ ಹರಿದಳು. ಸುಮ ಅವಳನ್ನು ತಡೆಯಲಿಲ್ಲ.
ಅದಾಗಿ ತಿಂಗಳಾಗಿತ್ತು. ಇವತ್ತು ಆಫೀಸಿನಲ್ಲಿ ಕೆಲಸ ಮಾಡುತ್ತಿರುವಾಗ ಸುಮಳ ಮೆಸೇಜ್ ಬಂದು ದೀಪಾಳ ತಲೆಕೆಟ್ಟಿತ್ತು. ಮಕ್ಕಳ ಬಗ್ಗೆ ಯೋಚನೆ ಮಾಡದೇ ಅವಳು ಅವಿನಾಶನ ಬಗ್ಗೆ ಯೋಚಿಸುತ್ತಿದ್ದಳು. ಮನೆಗೆ ಬಂದು ಮಕ್ಕಳಿಗೋಸ್ಕರ ಪಾವ್ ಭಾಜಿ ಮಾಡಿಟ್ಟಳು. ಎಂದಿನಂತೆ ಬೀಗ ಹಾಕಿರದ ಬಾಗಿಲು ಕಂಡು ಮೃದುಲಳಿಗೆ ಅಮ್ಮ ಮನೆಯಲ್ಲೇ ಇದ್ದಾಳಂತ ಗೊತ್ತಾಗಿ, ಮೊದಲು ಅಮ್ಮ ಸೌಖ್ಯವಾಗಿದ್ದಾಳೆಯೇ ಎಂದು ವಿಚಾರಿಸಿದಳು. ತಲೆಯ ಮೇಲೆ ಕೈಯಿಟ್ಟು ಪರೀಕ್ಷಿಸಿದಳು.
ಮನ್ವಿತ, “ಅಮ್ಮ! ತಾಯೆ! ನೀನು ಡಾಕ್ಟರ್ ಇನ್ನೂ ಆಗಿಲ್ಲ ಕಣೇ.. ಅಮ್ಮ ಆರಾಮವಾಗಿದ್ದಾರೆ. ಅವರ ಮುಖ ನೋಡು ಮೊದಲು. ಹೇಗೆ ಹೊಳಿತಿದೆ ಅಂತ.. ಇವಳಿಗೆ ಎಲ್ಲಾ ಪೇಷೆಂಟ್ ತರಾನೇ ಕಾಣ್ತಾರಪ್ಪಾ!” ಪರಪರಗುಟ್ಟುತ್ತಾ ಅಮ್ಮನ ಹತ್ತಿರ ಬಂದು ಭುಜ ಹಿಡಿದು ಬಳಸಿ, “ಏನು ವಿಶೇಷ ಅಮ್ಮ?” ಕಣ್ಣು ಮಿಟುಕಿಸಿ ಕೇಳಿದಳು.
“ಇವಳ ಕಣ್ಣಿನಿಂದ ಏನನ್ನೂ ಮುಚ್ಚಿಡಲಿಕ್ಕಾಗೊಲ್ಲ!” ದೀಪ ನಿಟ್ಟುಸಿರು ಬಿಟ್ಟಳು.
“ಅಮ್ಮ ಏನಾದರೂ ಪ್ರೊಬ್ಲೆಮ್?” ಅಮೃತ ಕಣ್ಣು ಚೂಪು ಮಾಡಿ ಕೇಳಿದಳು.
“ಮೊದಲು ಇಬ್ಬರೂ ತಿಂಡಿ ತಿನ್ನಿ. ಮತ್ತೆ ಹೇಳ್ತೇನೆ.”
ಇಬ್ಬರು ಮಾತುಕತೆಯಿಲ್ಲದೆ ತಿಂದರು.
ಹೊರಗಿನ ಪಡಸಾಲೆಗೆ ಮೂವರೂ ಬಂದರು. ಟಿವಿ ಹಚ್ಚಿದಳು ಮನ್ವಿತ. ಅಮೃತಳಿಗೆ ಕೋಪ ಬಂತು. “ಆಫ್ ಮಾಡೇ.. ಯಾವಾಗ ನೋಡಿದರು ಆ ಇಡಿಯೆಟ್ ಬಾಕ್ಸ್ ನೋಡ್ತಾನೆ ಇರ್ಬೇಕು.”
“ಹೋಗೆ ಅಮ್ಮಿ! ನಿಂಗೆ ಬೇಡ ಅಂತಾದ್ರೆ ನಾನೂ ನೋಡಲಿಕ್ಕಿಲ್ವಾ… ಹೋಗು ಮಣಿಸರ ಹಿಡಿದು ಜಪ ಮಾಡಿ ಕುತ್ಕೋ. ಅದ್ಯಾಕೆ ನಾನು ಹಾಕಿದಾಗ ನೀನೂ ಇಲ್ಲೇ ಕೂತ್ಕೊಂಡು ನೋಡ್ತಿಯಾ!”
“ಅಮ್ಮಿ, ಮನ್ವಿ… ಇಲ್ಲಿ ಕೇಳಿ ಇಬ್ಬರೂ… ”
ದೀಪಳ ಮೃದು ಸ್ವರ ಕೇಳಿ ಇಬ್ಬರೂ ಗಂಭೀರರಾದರು.
“ಇವತ್ತು ಸುಮಿ ಪಚ್ಚಿಯ (ಚಿಕ್ಕಮ್ಮ) ಮೆಸೇಜ್ ಬಂದಿತ್ತು. ನಿಮಗೆ ಹೇಳಿದ್ದೆನಲ್ವಾ… ಆ ತುಳು ವಿಶ್ವ ಸಮ್ಮೇಳನ… ಆಹ್ವಾನ… ” ಅವರಿಬ್ಬರಿಗೂ ದೀಪ ವಿಶ್ವ ತುಳು ಸಮ್ಮೇಳನಕ್ಕೆ ಸುಮ ಆಹ್ವಾನಿತಳಾಗಬಹುದೆಂದು ತಿಳಿಸಿದ್ದಳೇ ಹೊರತು ಅವಳು ತನ್ನನ್ನೂ ಅದರಲ್ಲಿ ಭಾಗವಹಿಸಲು ಆಮಂತ್ರಿಸಿದ್ದಾಳೆಂದು ತಿಳಿಸಿರಲಿಲ್ಲ.
“ಹೌದು, ಅದಕ್ಕೆ ನೀನ್ಯಾಕೆ ತಲೆಕೆಡಿಸಿ ಕೂತುಕೊಂಡಿದ್ದಿಯಾ?” ಇಬ್ಬರಿಗೂ ಆಶ್ಚರ್ಯ!
“ನನ್ನನ್ನು ಮುಂಬೈಯಿಗೆ ಕರೆದಿದ್ದಾಳೆ. ಟಿಕೆಟ್ ಬುಕ್ ಮಾಡಿದ್ದಾಳೆ.”
“ಹುರ್ರೇ… ಅಮ್ಮ, ನಿನ್ನ ಚಾನ್ಸ್… ನನಗೆ ಈ ಇಂಟರ್ನಲ್ ಎಕ್ಸಾಮ್ ಇಲ್ಲದಿದ್ದರೆ ನಾನೂ ನಿನ್ನ ಜತೆ ಬರ್ತಿದ್ದೆ.” ಮನ್ವಿತ ಎದ್ದು ಅಮ್ಮನನ್ನು ಗಟ್ಟಿಯಾಗಿ ಅಪ್ಪಿಕೊಂಡಳು.
“ಅಷ್ಟೇ ತಾನೆ. ಅದಕ್ಕೆ ತಲೆ ಬಿಸಿ ಯಾಕೆ? ನೀನು ಪ್ಯಾಕಿಂಗ್ ಮಾಡು.” ಮೃದುಲ ತಾಯಿಯ ಹತ್ತಿರ ಬಂದು ಭುಜ ತಡವಿದಳು.
“ನಿಮ್ಮಿಬ್ಬರ ಊಟ, ತಿಂಡಿ… ಅಷ್ಟು ಸುಲಭವಲ್ಲ ಅದು. ಒಂದು ದಿನದ ಮಾತಲ್ಲ. ನಾಲ್ಕೈದು ದಿನ ನಿಮ್ಮಿಬ್ಬರಿಗೆ ತೊಂದರೆ… ಅಲ್ಲದೆ ನಿಮ್ಮ ಅಪ್ಪ… ಒಪ್ಪಿಗೆ ಕೊಡ್ತಾರ?”
“ನಾನು ಮಾತಾಡುತ್ತೇನೆ ಅಪ್ಪನ ಹತ್ತಿರ. ಅವರು ಹೊಟೇಲ್‍ನಲ್ಲಿ ಊಟ ತಿಂಡಿ ಮಾಡ್ಲಿ. ನಾವು ಅಮ್ಮಮ್ಮನ ಮನೆಗೆ ಹೋಗ್ತೇವೆ. ಎಲ್ಲಾ ಸರಿಯಾಗುತ್ತೆ. ನೀನು ಆರಾಮವಾಗಿ ಹೋಗಿ ಎಂಜಾಯ್ ಮಾಡು.” ಮೃದುಲ ಕೋಣೆಗೆ ಹೊರಟಳು ಕಪಾಟಿನಿಂದ ಬ್ಯಾಗ್ ತೆಗೆಯಲು. ಇಬ್ಬರೂ ಅಮ್ಮನಿಗೆ ಸಹಾಯ ಮಾಡಿದರು.
******************
ಬಸ್ಸಿನಲ್ಲಿ ಕೂತುಕೊಂಡ ದೀಪಾ ದ್ವಂದ್ವದಲ್ಲಿದ್ದಳು… ಅವಿಗೆ ತಾನು ಮುಂಬೈಗೆ ಬರುವುದನ್ನು ಹೇಳಬೇಕೆ, ಬೇಡವೆ…
ಕೊನೆಗೂ ಈಗ ಹೇಳುವುದು ಬೇಡ. ಮುಂಬೈ ತಲುಪಿದ ಮೇಲೆ ಸುಮಿಯ ಜತೆ ಆ ಸಮ್ಮೇಳನ ನಡೆಯುವ ಸ್ಥಳ, ಸಮಯ ಎಲ್ಲಾ ತಿಳಿದ ಮೇಲೆ ಅವಿಗೆ ತಿಳಿಸಿದರಾಯಿತು. ಬಹುಶಃ ಅವನೂ ಇದರಲ್ಲಿ ಭಾಗವಹಿಸಬಹುದು. ತಟ್ಟನೆ ಅವಳಿಗೆ ನೆನಪಾಯಿತು. ಮೊನ್ನೆ ಚಾಟ್ ಮಾಡುವಾಗ ಅವಿ… ಯಾವುದೋ ಸಮ್ಮೇಳನ ನಡೆಯಲಿದೆ. ಅದರಲ್ಲಿ ಕವಿಗೋಷ್ಠಿ ಮತ್ತು ಚಿತ್ರ ಬಿಡಿಸುವಿಕೆ ಏಕಕಾಲದಲ್ಲಿ ನಡೆಯಲಿದೆ. ತನ್ನನ್ನೂ ಅದರಲ್ಲಿ ಆಹ್ವಾನಿಸಿದ್ದಾರೆ ಎಂದು ಹೇಳಿದ್ದನು. ಆಗ ಅದು ಇದೇ ಸಮ್ಮೇಳನವೆಂದು ತನಗೆ ಹೊಳೆಯಲೇ ಇಲ್ಲ. ಅವಿಯ ಜೊತೆಗೆ ಮಾತಾಡುವಾಗಲೆಲ್ಲ ತನ್ನ ತಲೆ ನಿಧಾನವಾಗಿ ಓಡುತ್ತದೆ!
ಬಹುಶಃ ಇದೇ ಸಮ್ಮೇಳನವಿರಬಹುದು. ದೈವೇಚ್ಛೆಯಿದ್ದರೆ ತಮ್ಮಿಬ್ಬರ ಮೊದಲ ಭೇಟಿ ಆ ಸಮ್ಮೇಳನದಲ್ಲೇ ನಡೆಯಬಹುದು. ಹೀಗೆ ಚಿಂತಿಸುತ್ತಾ ದೀಪ ನಿದ್ದೆಗೆ ಜಾರಿದಳು. ರವಿಯ ಹೊಂಗಿರಣ ಅವಳ ಮುಖದ ಮೇಲೆ ಬಿದ್ದಾಗಲೇ ಅವಳಿಗೆ ಎಚ್ಚರವಾಯಿತು. ಅವಿನಾಶನ ಚಿತ್ರಣ ಮನದ ಪಟದಲ್ಲಿ ಮೊದಲು ಮೂಡಿ ಬಂತು… ಇನ್ನು ಸ್ವಲ್ಪ ಹೊತ್ತಲ್ಲೇ ತನ್ನ ಮನದನ್ನನ ಊರು ತಲುಪಲಿದ್ದೇನೆ. ವಿದ್ಯುತ್ ಸಂಚಾರವಾದಂತಾಯಿತು ಮೈಯಲೆಲ್ಲ… ಹೃದಯವೀಣೆ ಮೀಟಲಾರಂಭಿಸಿತು ಮೋಹನ ರಾಗ!
ಹೌದು, ಹದಿಹರಯದ ಮಕ್ಕಳ ಅಮ್ಮ ದೀಪ ಪ್ರೀತಿಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾಳೆ. ತಾವಿಬ್ಬರು ಒಂದಾಗುವ ಕನಸು ನನಸಾಗುವ ಸಂದೇಹ ಇಬ್ಬರಿಗೂ ಇದ್ದರೂ ಪ್ರೀತಿಯ ಪರದೆಯಿಂದ ಇಬ್ಬರಿಗೂ ಕಳಚಿಕೊಳ್ಳಲು ಆಗಿರಲಿಲ್ಲ. ಎಂದಾರೂ ತಮ್ಮ ಬಾಳಪಥ ಒಂದಾಗುವುದೆಂಬ ಭ್ರಮೆಯ ಕನಸು ದೀಪಾ ಅವಿನಾಶ್ ಇಬ್ಬರಿಗೂ.. ಯಾರಿಗೆ ಗೊತ್ತು ದೈವೇಚ್ಛೆಯೇನೆಂದು. ಪವಾಡಗಳು ಎಲ್ಲಿ, ಹೇಗೆ, ಯಾಕೆ ಜರುಗುವುವೋ ಬಲ್ಲವರಾರು?
ಬರಹಗಾರ್ತಿ ದೀಪಾ, ಕಲಾಕಾರ ಅವಿನಾಶ್ ಇಬ್ಬರ ಬಾಳು ಯಾವ ದಿಕ್ಕಿನಲ್ಲಿ ಸಾಗುವುದೊ ಏನೋ!
*****
ನಿಲ್ದಾಣದಲ್ಲಿ ಅರಳಿದ ಮುಖದಿಂದ ಸುಮ ದೀಪಾಳನ್ನು ಬರಮಾಡಿಕೊಂಡಳು. ಕೆಲಘಳಿಗೆ ಅವಳ ಸನ್ನಿಧಿಯಲ್ಲಿ ದೀಪಾ ತನ್ನ ಮಕ್ಕಳು, ಅವಿನಾಶ್ ಎಲ್ಲವನ್ನೂ ಮರೆತಳು.
“ಇನ್ನು ನಾಲ್ಕು ದಿನ ಮನೆಯಲ್ಲಿ ಕೋಳಿ, ಮೊಟ್ಟೆ ಇಲ್ಲ… ನಿಮ್ಮ ಗೆಳತಿ ನಮಗೆಲ್ಲ ವಾರ್ನಿಂಗ್ ಕೊಟ್ಟಿದ್ದಾಳೆ.” ಸುಮಿಯ ಪತಿ ನಗುತ್ತಾ ಬಾಗಿಲಲ್ಲೇ ಬರಮಾಡಿಕೊಂಡರು.
“ನಿಮ್ಮಿಂದ ನಾನು ಬಚಾವ್ ಆದೆ… ಸಮಯಕ್ಕೆ ಸರಿಯಾಗಿ ಊಟ ತಿಂಡಿ ಬೇಕಾದರೆ ಅವಳು ಬರೆದದನ್ನೆಲ್ಲಾ ಕಡ್ಡಾಯವಾಗಿ ಓದಲೇಬೇಕೆಂದು ನನಗೆ ಶಿಕ್ಷೆ ಕೊಡುತ್ತಿದ್ದಳು.. ಆ ಕಾಗೆ ಗುಬ್ಬಚ್ಚಿಯ ಕತೆ, ಕವನ ಕೇಳಿ ಕೇಳಿ ತಲೆ ಚಿಟ್ಟು ಹಿಡಿದು ಹೋಗುತ್ತಿತ್ತು… ಅದೆಲ್ಲಾ ಈಗ ನಿಮ್ಮ ತಲೆಗೆ ಕಟ್ಟಿದ್ದಾಳೆ.. ನಿಮ್ಮ ತಲೆ ಎಲ್ಲಾ ಆರಾಮವಾಗಿದೆ ತಾನೆ… ”
“ಭಾವ, ನಿಮ್ಮದು ಯಾವಾಗಲೂ ತಮಾಷೆ… ನೀವು ಕೇಳಿಲ್ವಾ, ಹಾಡಿ ಹಾಡಿ ರಾಗ, ಉಗುಳಿ ಉಗುಳಿ ರೋಗ! ಹಾಗೆ ಬರೆದು ಬರೆದು ನಮ್ಮ ಸುಮ್ಮಿ ಇದೀಗ ಮೇಲಿನ ಲೆವೆಲ್‍ಗೆ ತಲುಪಿದ್ದಾಳೆ… ನೀವು ಅವಳ ಇತ್ತೀಚಿನ ಬರಹಗಳನ್ನು ಓದಿದ್ದೀರಾ?”
“ಅಯ್ಯೋ, ಸುಮ್ಮನೆ ಅಟ್ಟಕ್ಕೆ ಹತ್ತಿಸಬೇಡಿ ಅವಳನ್ನ. ಈಗಾಗಲೇ ಮನೆಯಲ್ಲೇ ಇರುವ ನಾನು ಸಸಾರವಾಗಿದ್ದೇನೆ… ನಂಗೆ ಬರಿಯಲ್ಲಿಕ್ಕೆ ಉಂಟು ಅಂತ ಈರುಳ್ಳಿ, ತರಕಾರಿ ಕತ್ತರಿಸುವ ಕೆಲಸ ಎಲ್ಲಾ ನನ್ನ ತಲೆಗೆ ಕಟ್ಟಿದ್ದಾಳೆ. ನಾಳೆಯಿಂದ ಅಡುಗೆನೂ ನಾನೇ ಮಾಡ್ಬೇಕಾದಿತು.”
“ಅದೇನೇ ಶುಮ್ಮಿ, ನಾನಿಷ್ಟೆಲ್ಲಾ ಹೇಳಿದರೂ ಸುಮ್ಮನಿರುವೆ… !”
“ಹುಂ, ಈಗೆಲ್ಲ ನಿಮ್ಮದೇ ಆಟ.. ನಡೆಯಲಿ… ನಡೆಯಲಿ… ನಾನೀಗ ಸಮ್ಮೇಳನದ ಗಡಿಬಿಡಿಯಲ್ಲಿರುವೆ.. ಮತ್ತೆ ತೋರಿಸ್ತೇನೆ. ’ನಾರಿ ಮುನಿದರೆ ಮಾರಿ’ ಈ ಮಾತು ನಿಜ ಹೇಗೆ ಅಂತ.”
ಪತಿ ಪತ್ನಿಯರ ಪ್ರೀತಿ ಕಂಡು ದೀಪಳಿಗೆ ಮನತುಂಬಿ ಬಂದಿತ್ತು.
“ನಾಳೆ 8 ಗಂಟೆಗೆ ಉದ್ಘಾಟನೆ. ಮತ್ತು ಕವಿಗೋಷ್ಠಿ.. ಜತೆಗೆ ಸ್ಥಳದಲ್ಲೇ ಚಿತ್ರಕಲಾಕಾರ ಅವಿನಾಶ್ ಅವರಿಂದ ಪ್ರಾತ್ಯಕ್ಷಿಕೆ!”
ಕೇಳಿ ದೀಪಾ ಮತ್ತೊಂದು ಲೋಕಕ್ಕೆ ಹೋದಳು.
“ದೀಪ್ಸ್, ನಾಳೆ ಈ ಸೀರೆ ನೀನು ಉಡಬೇಕು. ನಿನಗೋಸ್ಕರ ತುಂಬಾ ಹುಡುಕಿ ಆರಿಸಿದ್ದೇನೆ. ಬ್ಲೌಸನ್ನೂ ಹೊಲಿಸಿ ಇಟ್ಟಿದ್ದೇನೆ. ಹೇಗುಂಟು? ನಿನಗೆ ಹೆಚ್ಚು ಝಗ ಝಗ ಇದ್ದರೆ ಆಗುವುದಿಲ್ಲವಲ್ಲಾ ಅಂತ ಈ ಲೈಟ್ ಬಣ್ಣ ಆರಿಸಿದ್ದೆ… ನನ್ನ ಜತೆ ನೀನು ಸ್ಟೇಜನಲ್ಲಿ ಕುಳಿತುಕೊಳ್ಳಬೇಕು. ನಾನು ನಿರ್ವಾಹಕರಲ್ಲಿ ಈಗಾಗಲೇ ನಿನ್ನ ಬಗ್ಗೆ ಮಾತನಾಡಿದ್ದೇನೆ…. ”
ಸುಮಳ ವಾಗ್ಝರಿ ಹರಿಯುತ್ತಲೇ ಇತ್ತು… ದೀಪಾಳಿಗೆ ಏನೂ ಕೇಳುತ್ತಿರಲಿಲ್ಲ… ಅಲ್ಲಿಂದ ಎದ್ದು ಬಾಲ್ಕನಿಯ ಹತ್ತಿರ ಸಮುದ್ರದಿಂದ ಬರುವ ಗಾಳಿಗೆ ಮುಖಕೊಟ್ಟು ನಿಂತಳು. ದೀಪಾಳ ಪುಣ್ಯ… ಬಾಗಿಲಲ್ಲಿ ಯಾರೋ ಕರೆದರು ಅಂತ ಸುಮ ಅಲ್ಲಿಂದ ಎದ್ದು ಹೋದಳು… ಸಧ್ಯ ಅವಳ ಮುಖದ ರಂಗು ನೋಡಿ ಸುಮನಿಗೆ ಖಂಡಿತ ಶಂಕೆ ಬರುತಿತ್ತು. ದೀಪ ಕೈಯಲ್ಲಿ ಹಿಡಿದ ಮೊಬೈಲ್ ನೋಡಿದಳು.. ಎರಡು ದಿನದಿಂದ ಅವಿಯ ಜತೆ ಸಂಪರ್ಕವಿಲ್ಲ.
“ಕಳುಹಿಸಲೇ?.. ತಿಳಿಸಲೇ ಮುಂಬೈಯಿಗೆ ಬಂದಿರುವ ವಿಷಯ?… ”
ಮೊಬೈಲ್ ನಡುಗಿತು… ಬೆಳಗಿತು… ಮೆಸೇಜ್! ಅವಿಯದು!
“ಹಾಯ್, ಹೇಗಿದ್ದಿಯಾ?”
“ಮುಂಬೈಯಲ್ಲಿದ್ದೇನೆ. ನಾಳೆ ಕವಿಗೋಷ್ಠಿಗೆ ಬರಲಿದ್ದೇನೆ.”
“:-)”
“ಸಿಗೋಣ ನಾಳೆ ನನ್ನ ರಾಣಿ.”
ದೀಪ ಕಳುಹಿಸಿದಳು, “ಸರಿ, ಗೆಳತಿಯ ಜತೆ ಅಲ್ಲಿ ಬರುತ್ತೇನೆ.”
ರಾತ್ರಿಯೆಲ್ಲ ಜಾಗರಣೆ… ಎದೆಯ ಬಡಿತ ಪಕ್ಕದಲ್ಲೇ ಮಲಗಿದ ಸುಮಿಗೆ ಕೇಳುತ್ತದೆಯೋ ಎಂಬ ಹೆದರಿಕೆ ದೀಪಳಿಗೆ. ಮರುದಿನ ಎಚ್ಚರಿಕೆಯಿಂದ ಸಿಂಗರಿಸಿಕೊಂಡಳು… ಅವಳು ಕೋಣೆಯ ಹೊರಗೆ ಬಂದಾಗ ಸುಮ ಸಿಳ್ಳು ಹಾಕಿದಳು!
“ಯಾರನ್ನು ಕೊಲ್ಲಲೇ ಈ ಸಿಂಗಾರ!”
“ಸುಮ್ಮ್ ಸುಮ್ಮನೆ ಬುರುಡೆ ಬಿಡಬೇಡವೇ… ”
“ನಿಜವಾಗಿ ಕಣೇ.. ನಿನ್ನನ್ನು ಮೊದಲೇ ನೋಡಿರುತ್ತಿದ್ದರೆ ಯಶ್ ಚೋಪ್ರಾ ಜಬ್ ತಕ್ ಹೈ ಜಾನ್ ಸಿನೇಮಾದಲ್ಲಿ ಅನುಷ್ಕಾ ಶರ್ಮಳಿಗೆ ಕೊಕ್ಕೆ ಕೊಟ್ಟು ನಿನ್ನನ್ನೇ ತಮ್ಮ ಹಿರೋಯಿನ್ ಆಗಿ ತಗೊಳ್ತಿದ್ದರು.”
ಕೆಂಪೇರಿದಳು ದೀಪಾ. ಹೌದು, ಸೀರೆಯ ತಿಳಿನೀಲಿ ಬಣ್ಣ ಅವಳಿಗೆ ಚೆನ್ನಾಗಿ ಹೊಂದುತ್ತಿತ್ತು.. ಅಂತೆಯೇ ಅವಳು ಅಚ್ಚುಕಟ್ಟಾಗಿ ನೆರಿಗೆ ತೆಗೆದು ಪಿನ್ ಮಾಡಿ ಉಟ್ಟಿದ್ದರೂ ಮೈಮಾಟವನ್ನು ನೋಡುಗರ ಕಣ್ಣಿಂದ ಮುಚ್ಚಿಡಲಾಗುತ್ತಿರಲಿಲ್ಲ. ನೋಡಿದರೆ ಯಾರಿಗೂ ನಲ್ವತ್ತರ ಮಹಿಳೆಯೆಂದು ಭಾಸವಾಗುತ್ತಿರಲಿಲ್ಲ. ಜತೆಗೆ ಅವಳ ಮನದ ಭಾವವೂ ಅವಳ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ಕೊಡುತ್ತಿತ್ತು.
ಸ್ಥಳ ಹತ್ತಿರವಾಗುತ್ತಿದ್ದಂತೆಯೇ ಹೃದಯದ ಕೋಗಿಲೆಯ ಹಾಡು ಹೊರಲೋಕಕ್ಕೂ ಕೇಳಿಸುವಷ್ಟು ತೀವ್ರವಾಯಿತು. ಇವಳ ಕೈ ನವಿರಾಗಿ ನಡುಗುವುದನ್ನು ಗಮನಿಸಿದ ಸುಮ, “ನೀನ್ಯಾಕೆ ನರ್ವಸ್ ಆಗಬೇಕು? ಇಂತಹ ಗೋಷ್ಠಿಯಲ್ಲಿ ಈಗಾಗಲೇ ಭಾಗವಹಿಸಿದ ನೀನು ಈಗೇಕೆ ಹೀಗಾಡ್ತಿಯಾ?”
“ಅವಳಿಗೆ ಏನಂತ ಹೇಳಲಿ! ನನ್ನವನು ಇಲ್ಲಿದ್ದಾನೆ, ನಾನವನನ್ನು ಮೊದಲ ಬಾರಿಗೆ ನೋಡ್ತಿದ್ದೀನಿ, ಅದಕ್ಕೆ ಹೀಗೆ ನರ್ವಸ್ ಆಗಿದ್ದೇನೆ ಅಂತ ಹೇಳ್ಲಾ!”
ದೀಪಾಳಿಗೆ ತನ್ನ ಮನಸ್ಥಿತಿಯನ್ನು ಹಂಚಲು ಆಪ್ತರು ಬೇಕಿತ್ತು. ಆದರೆ… ಆದರೆ ಅವಳನ್ನು ಯಾರಾದರೂ ಅರ್ಥ ಮಾಡಿಕೊಳ್ತಾರ!
ಸುತ್ತಲೂ ಕಣ್ಣು ಹಾಯಿಸಿದಳು ದೀಪಾ. ಕಣ್ಣು ಕಣ್ಣು ಮೇಳೈಸಿತು! ಕಣ್ಣು ಕೋರೈಸುವ ಬೆಳಕು… ಕೇವಲ ಅವಿ ಮಾತ್ರ ಕಾಣಿಸುತ್ತಿದ್ದಾನೆ…ಮತ್ತೆಲ್ಲಾ ಮಸುಕಾಗಿದೆ.. “ಮುಖದಲ್ಲಿ ಮಂದಹಾಸ ತೋರುತ್ತಿದ್ದಾನೆ ನನ್ನ ಕನಯ್ಯ… ನನ್ನ ಮೋಹನ..ನನ್ನ ರಾಜ… ” ತಡೆಯಲಾಗಲಿಲ್ಲ. ದೀಪಾಳಿಗೆ. ಅವನ ಬಾಹುವಿನಲ್ಲಿ ಒಮ್ಮೆ ಅಡಗಿ ಬಿಡೋಣವೇ.. ಅಂತ ಅನಿಸಿತು. ಕಷ್ಟಪಟ್ಟು ತನ್ನೆಲ್ಲಾ ಆವೇಗವನ್ನು ತಡಕೊಂಡಳು. ಯಾರೋ ಕರೆದರು.. ನಡೆದಳತ್ತ… ಯಾರ್ಯಾರೋ ಯಾರ್ಯಾರನ್ನೋ ಪರಿಚಯಿಸಿದರು.. ಯಾವುದೂ ಅರ್ಥವಾಗುತ್ತಿರಲಿಲ್ಲ.. ಸುಮ್ಮನೆ ಮುಗುಳ್ನಗೆ ಬೀರುತ್ತ ನಡೆದಳು. ಈಗ ಅವಿನಾಶನೇ ಎದುರು ಬಂದನು. ಸುಮಿಯೇ ಪರಿಚಯಿಸಿದಳು. ತಲೆ ತಗ್ಗಿಸಿದಳು ದೀಪಾ! ನೋಟಕ್ಕೆ ನೋಟ ಸೇರಿಸಲು ಸಾಧ್ಯವಾಗಲಿಲ್ಲ ಅವಳಿಗೆ…
ಮುಂದೆ ಕಾರ್ಯಕ್ರಮವೆಲ್ಲ ಸಾಂಗವಾಗಿ ನೆರವೇರಿತು. ಅವಳಿಗೆ ಒಂದೇ ಖುಷಿ! ಅವಿಯ ಜತೆ ವೇದಿಕೆ ಹಂಚಿಕೊಳ್ಳಲು ಸಿಕ್ಕಿತಲ್ಲ. ಅಷ್ಟಾದರೂ ದೊರೆತದ್ದು ನನ್ನ ಪುಣ್ಯವೆಂದು ದೀಪ ಅಂದುಕೊಂಡಳು! ಅವಿಯ ಕುಂಚ ಕೌಶಲ್ಯವನ್ನು ನೋಡಿ ಬೆರಗಾದಳು… ಅವನ ಬಿಂಬವನ್ನು ಹೃದಯದಲ್ಲಿ ಭದ್ರವಾಗಿ ಬಂಧಿಸಿಟ್ಟಳು.
ಕೊನೆಗೂ ಅಗಲುವ ಸಮಯ ಬಂದಿತು.. ಕಾರು ಏರುತ್ತಿರುವ ಅವಿಯ ಹಿಂದೆಯೇ ಹೋಗಲೇ.. ಮನಸ್ಸು ಪ್ರೇರೇಪಿಸಿತು.. ಹ್ಞೂಂ, ಕಾಲುಗಳು ಮನದ ಮಾತು ಕೇಳಲೇ ಇಲ್ಲ.. ನಿಂತ ನೆಲವೇ ಅವಳನ್ನು ಭದ್ರವಾಗಿ ಹಿಡಿದುಕೊಂಡಿತ್ತು.
ಊರಿಗೆ ಅವಿಯ ಸವಿ ನೆನಪಿನೊಂದಿಗೆ ಹೊರಟಳು ದೀಪಾ!
'ಶೈಲಜ'
good
ತುಂಬಾ ಸುಂದರವಾಗಿದೆ ಅಕ್ಕ. ನಿಮ್ಮ ಮಾತುಗಳ ಧಾಟಿ ತುಂಬ ಹಿಡಿಸ್ತು. 🙂
ಚೆನ್ನಾಗಿದೆ. ಓದಿಸಿಕೊಂಡಿತು.
ಶಾರದಾ ಮೊಳೆಯಾರ್, ರುಕ್ಮಿಣಿ ನಾಗಣ್ಣವರ್, ಕಿರಣ – ಕಥೆಯನ್ನು ಮೆಚ್ಚಿದ ತಮಗೆಲ್ಲ ತುಂಬು ಮನದ ಧನ್ಯವಾದ! ರುಕ್ಮಿಣಿ ತಮಗೆ ಸಂಭಾಷಣೆಗಳ ದಾಟಿ ಹಿಡಿಸಿತು ಎಂದು ತಿಳಿದು ಸಂತಸವಾಯಿತು. ನನ್ನ ಮೊದಲ ಕಥೆಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಿದ ನಟರಾಜುವಿಗೂ ನನ್ನ ಧನ್ಯವಾದ!!
Good!! waiting to see the next part of this….. 🙂
ಶೀಲಾ…ವಾವ್..ನಿಮ್ಮಲ್ಲೊಬ್ಬ ಕಥೆಗಾರ್ತಿ ಇರುವುದು ಅದೂ ಅಚ್ಚುಕಟ್ಟಾಗಿ ಸ್ವಾರಸ್ಯವಾಗಿ ಓದಿಸಿಕೊಂಡು ಹೋಗುವ ….ಹಾಂ…ಮನೋಲಾಸಕರ ತುಸುರಸಿಕತೆಯಿದ್ದರೂ ಎಲ್ಲ ಮನದಾಳಗಳಲ್ಲಿ ಅಡಗಿರಬಲ್ಲ ವಾಸ್ತವವನ್ನು ಪ್ರಸ್ತುತಪಡಿಸುವ ಕಥೆ ಬರೆಯಬಲ್ಲ ಗುಣ…ಚಿತ್ರ ಕಲೆ, ಕವಿತೆ, ಕಥೆ ಬಹುಮುಖ ಪ್ರತಿಭೆ ನೀವು…ಶುಭವಾಗಲಿ…ಪಂಜು ಮೂಲಕ ನಿಮ್ಮ ಈ ಮುಖದ ಪರಿಚಯವಾಗಿದ್ದು ನನಗೆ ಖುಷಿ ಕೊಟ್ಟಿದೆ…