ವಯಸ್ಸು ಆರು ಸಾಧನೆ ನೂರಾರು ಮಾಡಿದ ಬೇಲೂರಿನ ನಾಟ್ಯ ಶಾಂತಲೆ, ನಾಟ್ಯ ಮಯೂರಿ ಕುಮಾರಿ ಮೈತ್ರಿ ಎಸ್ ಮಾದಗುಂಡಿ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತು ಎಷ್ಟು ಸತ್ಯ. ಈ ಪದವನ್ನು ಕೇಳಲು ಹಿತ ಅನ್ನಿಸುತ್ತದೆ. ಸಾಧಕರಿಗೆ ಸಾಧನೆಯ ಹಾದಿಯಲ್ಲಿ ಇರುವವರಿಗೆ ಈ ಮಾತು ನಿಜಕ್ಕೂ ಅಕ್ಷರಶಃ ಹೇಳಿ ಮಾಡಿಸಿದಂತಿದೆ. ಇಂದಿನ ಬಾಲ ಪ್ರತಿಭೆಗಳಿಗೂ ಈ ಮಾತು ಹೊಂದಿಕೆಯಾಗುತ್ತದೆ. ಅದೆಷ್ಟೋ ಬಾಲ ಪ್ರತಿಭೆಗಳು ನಮ್ಮ ನಿಮ್ಮ ನಡುವೆ ಇದ್ದಾರೆ. ಅಂತಹ ಪ್ರತಿಭೆ ಬೇಲೂರಿನ ಆರು ವರ್ಷದ ಬಾಲ ಪ್ರತಿಭೆ ಕುಮಾರಿ ಮೈತ್ರಿ. ಮೂಲತಃ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನವರಾದ ಡಾ. ಶಿವಕುಮಾರ ಮಾದಗುಂಡಿ, ಶ್ರೀಮತಿ ಶೃತಿ ಮಾದಗುಂಡಿ ದಂಪತಿಗಳ ಮೊದಲನೆ ಪುತ್ರಿ. ಈಗ ಇವರು ಹಾಸನ ಜಿಲ್ಲೆಯ ಶಿಲ್ಪಕಲೆಯ ತವರೂರಾದ ಬೇಲೂರು ತಾಲ್ಲೂಕಿನಲ್ಲಿ ವಾಸಿಸುತ್ತಿದ್ದಾರೆ.
ಎಲ್ಲ ಮಕ್ಕಳು ಪ್ರತಿಭಾವಂತರೇ ಆದರೆ ಆ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗೆ ಸೂಕ್ತ ತರಬೇತಿ ನೀಡಿ ಪ್ರಕಾಶಕ್ಕೆ ತಂದರೆ ಅವರು ಸಾಧಕರಾಗುವುದರಲ್ಲಿ ಸಂದೇಹವೇ ಇಲ್ಲ. ಈಕೆಯ ನರ್ತನ ನವಿಲು ಕೂಡ ನಾಚಿಸುವಂತಹ ಮೋಹಕ ನೃತ್ಯ ಅದ್ಭುತ ಮುಖಭಾವ ಅನನ್ಯ ದೇಹ ಭಂಗಿ ಅಬ್ಬಾ……! ಈಕೆಯ ನೃತ್ಯವನ್ನು ನೋಡುತ್ತಿದ್ದರೆ ನಟರಾಜನೇ ಧರೆಗಿಳಿದು ಬಂದು ನರ್ತಿಸಿದಂತೆ ಭಾಸವಾಗುತ್ತಿದೆ. ಇವಳ ನೃತ್ಯಕ್ಕೆ ಮನಸೋತು ತಲೆದೂಗದವರೇ ಇಲ್ಲ. ಪ್ರೇಕ್ಷಕರಿಗೆ ಇಂತಹ ಭವ್ಯ ರಸದೌತಣವನ್ನು ಉಣಬಡಿಸುವ ಅದ್ಭುತ ನಾಟ್ಯ ಶಾಂತಲೆ ಕು. ಮೈತ್ರಿ. ಈಕೆ ಬಾಲ ಪ್ರತಿಭೆ ಆದರೆ ಸಾಧನೆ ಮಾತ್ರ ವಯಸ್ಸನ್ನು ಮೀರಿದ್ದು. ಮಗಳ ಸಾಧನೆಯಲ್ಲಿ ಹೆಚ್ಚೆಚ್ಚು ಖುಷಿ ಪಡುವ ಮೈತ್ರಿಗೆ ತನ್ನ ತಂದೆ ತಾಯಿಯೇ ಮೊದಲ ಗುರು. ಮೈತ್ರಿ ಪ್ರತಿಭಾವಂತೆ ಆಗಿದ್ದು ಈಕೆ ಮುಂದೆ ಒಂದು ದೊಡ್ಡ ಕಲಾವಿದೆ ಆಗಬಹುದು ಎಂದು ಆಕೆಯ ಹೆತ್ತವರಿಗೆ ಅರಿವಾಗಿ ಈಕೆಯನ್ನು ಕಲಾಕ್ಷೇತ್ರದಲ್ಲಿ ಸದಾ ಪ್ರೋತ್ಸಾಹಿಸುತ್ತಾ ಹೋದರು ಹಾಗಾಗಿ ಚಿಕ್ಕ ವಯಸ್ಸಿನಲ್ಲೇ ಕಾಲಿಗೆ ಗೆಜ್ಜೆ ಕಟ್ಟಿ ಆಟವಾಡುತ್ತಾ ಬೆಳೆದ ಈಕೆ. ೬ ವರ್ಷದ ಪುಟ್ಟ ಪುಟಾಣಿ ಮೈತ್ರಿ ಎಸ್. ಮಾದಗುಂಡಿ.
ಈ ಪುಟಾಣಿ ಹಾಸನ ಜಿಲ್ಲೆಯ ಬೇಲೂರಿನಲ್ಲಿರುವ ವಿದ್ಯಾ ವಿಕಾಸ ಪಬ್ಲಿಕ್ ಸ್ಕೂಲ್ ನಲ್ಲಿ UKG ವ್ಯಾಸಂಗ ಮಾಡುತ್ತಿದ್ದಾಳೆ. ಈ ಪುಟಾಣಿಯ ವಯಸ್ಸು ಕೇವಲ 6 ವಷ೯. ಈ ಪೋರಿಯ ನೂರಾರು ಸಾಧನೆಗಳು ಎಂದೂ ಹೇಳಿದರೂ ತಪ್ಪೇನಿಲ್ಲ. ಅವುಗಳಲ್ಲಿ ಭರತನಾಟ್ಯ, ಪಾಶ್ಚಾತ್ಯ ನೃತ್ಯ, ಜಾನಪದ ನೃತ್ಯ, ಹಾಡುಗಾರಿಕೆ, ಇನ್ನು ಚಿತ್ರಕಲೆ ಇವಳ ನೆಚ್ಚಿನ ಹವ್ಯಾಸಗಳು. ಪ್ರತಿಭೆ ಯಾರೊಬ್ಬರ ಸ್ವತ್ತೂ ಅಲ್ಲ ಪ್ರತಿಭೆ ಎನ್ನುವಂತದ್ದು ನಾನಾ ರೀತಿಯಲ್ಲಿ ಅನಾವರಣಗೊಳ್ಳುತ್ತದೆ. ಕಲೆಗೆ ಎಷ್ಟು ಆಸಕ್ತಿಯನ್ನು ಕೊಡುತ್ತಾರೋ ಅಷ್ಟೇ ಆಸಕ್ತಿಯನ್ನು ತನ್ನ ಓದಿನಲ್ಲಿಯೂ ಕೊಡುತ್ತಾಳೆ. ಹೀಗೆ ಹಲವು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಾಧನೆ ಗೈಯುತ್ತಿದ್ದಾಳೆ. ಜೀವನದಲ್ಲಿ ಸಾಧನೆಗೆ ಅಸಂಖ್ಯಾತ ಹಾದಿಗಳು ಇವೆ ಮನಸ್ಸಿದ್ದರೆ ಮಾರ್ಗ ಎನ್ನುವಂತೆ. ನಾವು ಕಂಡ ಕನಸಿನೆಡೆಗೆ ಸತತ ಪ್ರಯತ್ನ ಪರಿಶ್ರಮದಿಂದ ಮುನ್ನಡೆದಲ್ಲಿ ಯಾವ ಕ್ಷೇತ್ರದಲ್ಲಾದರೂ ಯಶಸ್ಸು ಖಂಡಿತ……ಅಂತಹ ಸಾಧನೆ ಹಾದಿಯಲ್ಲಿರುವ ಒಂದು ಅಪರೂಪದ ಬಾಲ ಪ್ರತಿಭೆ ಮೈತ್ರಿ ಈ ಪುಟ್ಟ ಪುಟಾಣಿ ಎಲ್ಲ ಮಕ್ಕಳಂತೆ ಆಟವಾಡುತ್ತಾ, ಚಿಂಟು ಟಿ.ವಿ. ನೋಡುತ್ತಲೇ ಹೋಮ್ವರ್ಕ್ ಮಾಡುವ ಈ ಬಾಲ ಪ್ರತಿಭೆ ಉಳಿದವರಿಗಿಂತ ಹೆಚ್ಚಾಗಿ ತನ್ನಲ್ಲಿ ಅಗಾಧ ಪ್ರತಿಭೆಯನ್ನು ಅಡಗಿಸಿ ಕೊಂಡಿದ್ದಾಳೆ.
ಈ ಬಾಲ ಪ್ರತಿಭೆ ಮುದ್ದು ಮೊಗದ ಈ ಬಾಲಕಿಯ ಬಹುಮುಖ ಪ್ರತಿಭೆಯ ಸಾಧನೆಗೆ ಒಂದು ಅಕ್ಷರ ರೂಪ ಕೊಟ್ಟು ನಿಮ್ಮ ಮುಂದೆ ಇಡುತ್ತಿದ್ದೇನೆ. ೩ ವರ್ಷದವಳಿದ್ದಾಗ ಪುಟ್ಟ ಪುಟ್ಟ ಹೆಜ್ಜೆ ಇಡುವಾಗಲೇ ಹಾಡು ಕೇಳಿದಾಕ್ಷಣದಲ್ಲಿಯೇ ತನಗಿಷ್ಟ ಬಂದಂತೆ ಹೆಜ್ಜೆ ಹಾಕುತ್ತಿದ್ದಳಂತೆ ಇದನ್ನು ನೋಡಿದ ತಂದೆ ಶಿವಕುಮಾರ್ ತಮ್ಮ ಮಗಳಿಗೆ ನೃತ್ಯ ತರಬೇತಿ ಕೊಡಿಸಬೇಕೆಂದು ಕೊಂಡರೂ. ಅದರಂತೆ ಐತಿಹಾಸಿಕ ಪ್ರಸಿದ್ಧ ಪ್ರದೇಶವಾದ ಶಿಲೆಗಳ ತವರೂರಾದ ಬೇಲೂರಿನ ಶಾಂತಲಾ ಕಲಾ ಕುಟೀರ ನೃತ್ಯ ತರಬೇತಿಗೆ ಸೇರಿಸಿದರು. ಮೈತ್ರಿ ತನ್ನ ಮೂನಾ೯ಲ್ಕು ವಯಸ್ಸಿನಲ್ಲೇ ನೃತ್ಯದ ತರಭೇತಿಗೆ ಸೇರಿದಳು. ಬಾಲ್ಯದಲ್ಲಿಯೇ ಕೆಲವು ಕಾರ್ಯಕ್ರಮಗಳಲ್ಲಿ ರಾಧಾನ ಪಾತ್ರದಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುವಂತೆ ನೃತ್ಯ ಪ್ರದರ್ಶನ ತೋರಿದಳು. ಪ್ರಸ್ತುತವಾಗಿ ನೃತ್ಯಾಂಜಲಿ ಕಲಾನಿಕೇತನ ನೃತ್ಯ ಶಾಲೆಯ ಶ್ರೀಮತಿ ಶೈಲಜಾ ಕುಮಾರ ಅವರಲ್ಲಿ ಭರತನಾಟ್ಯ ಮತ್ತು ಶ್ರೀವಿದ್ಯಾ ಅವರಲ್ಲಿ ಸಂಗೀತ ಅಭ್ಯಾಸವನ್ನು ಮಾಡುತ್ತಿರುವ ಈಕೆ ನಿರಂತರ ನೃತ್ಯ ಅಭ್ಯಾಸದಲ್ಲಿ ತೊಡಗಿಸಿಕೊಂಡು ಪರಿಪಕ್ವ ಹೆಜ್ಜೆಗಳನ್ನಿಟ್ಟು ಇದೀಗ ಭರತನಾಟ್ಯದಲ್ಲಿಯೂ ಪರಿಪೂರ್ಣತೆಯನ್ನು ಪಡೆದಿದ್ದಾಳೆ.
ನೃತ್ಯ ಮಾಡುವುದರ ಜೊತೆಗೆ ಸಂಗೀತದಲ್ಲಿಯೂ ಹೆಚ್ಚು ಆಸಕ್ತಿ ಹೊಂದಿದ್ದಾಳೆ. ಈ ಬಾಲ ಪ್ರತಿಭೆ ಮೈತ್ರಿ ಚನ್ನರಾಯಪಟ್ಟಣ, ಹಾವೇರಿ, ಬೆಂಗಳೂರು, ತುಮಕೂರು, ಬಾಗಲಕೋಟ ಮತ್ತು ಮೈಸೂರಿನಲ್ಲಿ ನಡೆದ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಹಮ್ಮಿಕೊಂಡಿರುವ ರಾಷ್ಟ್ರಕವಿ ಕುವೆಂಪು ನೆನಪಿನ ಸಾಹಿತ್ಯೋತ್ಸವದಲ್ಲಿ ಹಾಡಿರುತ್ತಾಳೆ. ಹಾಡುವುದರ ಜತೆಗೆ ರಾಜ್ಯಾದ್ಯಂತ ಸುಮಾರು ೧೨೫ ಕ್ಕೂ ಅಧಿಕ ವೇದಿಕೆಗಳಲ್ಲಿ ನೃತ್ಯ ಮಾಡಿ ಎಲ್ಲರ ಹೆಗ್ಗಳಿಕೆಗೆ ಪಾತ್ರಾಳಾಗಿದ್ದಾಳೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ನಡೆದ ಅಖಿಲ ಕರ್ನಾಟಕ ತೃತೀಯ ಯುವಕವಿ ಸಮ್ಮೇಳನದಲ್ಲಿ ರಾಧಾ ವೇಷದಲ್ಲಿ ನೃತ್ಯ ಮಾಡಿದ್ದಕ್ಕಾಗಿ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಬೇಲೂರಿನ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಹಮ್ಮಿಕೊಂಡಿರುವ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಧಾಳ ವೇಷಧರಿಸಿದ್ದಕ್ಕಾಗಿ ದ್ವಿತೀಯ ಬಹುಮಾನ ಪಡೆದಿರುತ್ತಾಳೆ. ಬೆಂಗಳೂರಲ್ಲಿ ಕರ್ನಾಟಕ ರಾಜ್ಯ ಸಕಾ೯ರಿ ನೌಕರರು ಕಲಾ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನಾ ಕಾಯ೯ಕ್ರಮದಲ್ಲಿ ಭಾವಗೀತೆ ಮತ್ತು ಜಾನಪದಗೀತೆಗಳನ್ನು ಹಾಡಿದ್ದಕ್ಕಾಗಿ ಸನ್ಮಾನಿಸಲಾಯಿತು. ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ಶ್ರೀ ಹೊಳೆಹುಚ್ಚೇಶ್ವರ ಮಠ ಕೋಟೆಕಲ್ಲದಲ್ಲಿ ಜರುಗಿದ ಗುಳೇದಗುಡ್ಡ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭರತನಾಟ್ಯ ನೃತ್ಯ ಮಾಡಿ ಅಲ್ಲಿನ ಸಾಹಿತ್ಯಾಭಿಮಾನಿಗಳಿಂದ ಮೆಚ್ಚುಗೆಯನ್ನು ಪಡೆದಿರುತ್ತಾಳೆ.
ತುಮಕೂರು ಜಿಲ್ಲೆಯ ಕನ್ನಡ ಭವನದಲ್ಲಿ ನಡೆದ ಹನಿ ಹನಿ ಇಬ್ಬನಿ ಸಾಹಿತ್ಯ ಬಳಗ ಹಮ್ಮಿಕೊಂಡಿರುವ ರಾಜ್ಯಮಟ್ಟದ ಕವಿಗೋಷ್ಠಿ ಯಲ್ಲಿ ಭಾವಗೀತೆ ಗಾಯನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಭಾವಗೀತೆಗಳನ್ನ ಹಾಡುವುದರ ಜೊತೆಗೆ ಭರತನಾಟ್ಯವನ್ನು ಮಾಡಿದ್ದಕ್ಕಾಗಿ ಸನ್ಮಾನಿಸಲಾಯಿತು. ಬೇಲೂರಿನಲ್ಲಿ ನಡೆದ ಕೋಟೋರೋತ್ಸವದಲ್ಲಿ ಚನ್ನಕೇಶವ ದೇವಾಲಯದ ಪ್ರಾಂಗಣದಲ್ಲಿ ಭರತನಾಟ್ಯ ಮಾಡಿದ ಅನುಭವ ಪಡೆದಿದ್ದಾಳೆ. ಇತ್ತೀಚೆಗೆ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಚನ್ನರಾಯಪಟ್ಟಣ ಹಾಸನ ಜಿಲ್ಲೆಯಲ್ಲಿ ನಡೆದ ಪ್ರಥಮ ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭರತನಾಟ್ಯ ಪ್ರದರ್ಶನ ನೀಡಿರುತ್ತಾರೆ. ಬೆಣ್ಣೆ ನಗರಿ ದಾವಣಗೆರೆಯ ದೈವಜ್ಞ ಸಂಭ್ರಮದಲ್ಲಿ ಅದ್ಭುತವಾದಂತಹ ಭರತನಾಟ್ಯ ಪ್ರದರ್ಶನ ನೀಡಿದ್ದಾಳೆ. ಹಳೆಬೀಡು ಪುಷ್ಪಗಿರಿ ಮಹಾ ಸಂಸ್ಥಾನದಲ್ಲಿ ನಡೆದ ಲಕ್ಷದೀಪೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ವಾಗತ ನೃತ್ಯ ಪ್ರದರ್ಶನ. ಹಾವೇರಿ ಜಿಲ್ಲೆಯ ಅಕ್ಕಿ ಆಲೂರಿನಲ್ಲಿ ನಡೆದ ೨೯ನೇ ಕನ್ನಡ ನುಡಿ ಸಂಭ್ರಮದಲ್ಲಿ ಅದ್ಭುತವಾದಂತಹ ಭರತನಾಟ್ಯ ಪ್ರದರ್ಶನ. ಸಕ್ಕರೆ ನಾಡಿನಲ್ಲಿ ಪಂಚ ಜಿಲ್ಲಾ ಬೆಳಕು ಸಾಹಿತ್ಯ ಸಮ್ಮೇಳನದಲ್ಲಿ ಭರತನಾಟ್ಯ. ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಅದ್ಭುತವಾದಂತಹ ಭರತನಾಟ್ಯ. ಹೀಗೆ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಭರತನಾಟ್ಯ ಪ್ರದರ್ಶನ ನೀಡುವುದರ ಜೊತೆಗೆ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದ ಗಡಿ ಭಾಗ ತಮಿಳುನಾಡು ರಾಜ್ಯಗಳಲ್ಲೂ ತನ್ನ ವಿಶೇಷ ಪ್ರತಿಭೆಯ ಮೂಲಕ ಕನ್ನಡ ಕಂಪನ್ನು ಪಸರಿಸಿದ್ದಾಳೆ.
ನಾಟ್ಯದಲ್ಲಿ ಕೈಚಳಕ:
ಮೈತ್ರಿ ಭರತನಾಟ್ಯ ಮಾಡುವಾಗ ಅನೇಕ ಪ್ರಾಪರ್ಟೀಸ್ ಗಳನ್ನು ಬಳಸಿಕೊಂಡು ನೃತ್ಯ ಮಾಡುವಾಗ ಸದಾ ಚಲನಶೀಲವಾಗುವ ಮೈತ್ರಿ ಅವರ ಕಣ್ಣುಗಳು ನೋಡುಗರನ್ನು ಆಕರ್ಷಿಸುತ್ತಿತ್ತು. ಆ ಮುಗ್ಧ ಕಣ್ಣುಗಳ ನೋಟ ಸೊಂಟದಲ್ಲಿ ಬೆತ್ತದ ರಿಂಗ್ , ಕೈಯಲ್ಲಿ ಎರಡು ದೀಪಗಳು, ಗ್ಲಾಸುಗಳ ಮೇಲೆ ನಿಂತು ನೃತ್ಯ , ತಲೆಯ ಮೇಲೆ ದೀಪವನ್ನು ಇಟ್ಟುಕೊಂಡು ಮಣ್ಣಿನ ಮಡಕೆಯ ಮೇಲೆ ನಿಂತು ವಿವಿಧ ಭಂಗಿಗಳಲ್ಲಿ ನೃತ್ಯ, ಮತ್ತು ಮೊಳೆಯ ಸ್ಟ್ಯಾಂಡ್ ನ ಮೇಲೆ ನಿಂತು ಕೈಯಲ್ಲಿ ತ್ರಿಶೂಲವನ್ನು ಹಿಡಿದುಕೊಂಡು ನೃತ್ಯವನ್ನು ಮಾಡಿ ಎಲ್ಲರ ಗಮನ ಸೇಳಿಯುತ್ತಿದ್ದಾಳೆ ಇವಳು ನೃತ್ಯ ರೂಪಕದಲ್ಲಿ ಪಾತ್ರಗಳಿಗೆ ಜೀವತುಂಬಿ ಅಭಿನಯಿಸುತ್ತಾಳೆ.
ಮೈತ್ರಿಯ ವಿಶೇಷ ಪ್ರತಿಭೆಗಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಬೆಂಗಳೂರು ನಗರದ ರವೀಂದ್ರ ಕಲಾಭವನ ನಯನ ಸಭಾಂಗಣದಲ್ಲಿ ನಡೆದ ಕರ್ನಾಟಕ ಸಾಹಿತ್ಯ ಸಂಸ್ಕೃತಿ ಕಲಾ ಸಂಭ್ರಮದ ಸಮ್ಮೇಳನದಲ್ಲಿ “ಸಿರಿಗನ್ನಡ ಬಾಲ ನಾಟ್ಯ ಶಿರೋಮಣಿ” ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾಳೆ. ವಿಜಯಪುರ ಜಿಲ್ಲೆಯ ಚಡಚಣದಲ್ಲಿ ನಡೆದ ರಾಜ್ಯ ಯುವ ಬರಹಗಾರರ ಒಕ್ಕೂಟದ ವತಿಯಿಂದ ೩ನೇ ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯ ಯುವ ಬರಹಗಾರರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಎಂ.ಕೆ. ಶೇಖ್ ಅವರು ಇವಳ ಪ್ರತಿಭೆಯನ್ನು ಗುರುತಿಸಿ “ಬಾಲ ಪ್ರತಿಭಾ ಪುರಸ್ಕಾರ” ನೀಡಿರುತ್ತಾರೆ.ರಾಷ್ಟ್ರೀಯ ನಾಟ್ಯ ಸಂಗೀತ ಪ್ರತಿಭಾ ರತ್ನ ರಾಜ್ಯ ಪ್ರಶಸ್ತಿ, ಸಿರಿಗನ್ನಡ ರಾಷ್ಟ್ರೀಯ ಕಲಾ ರತ್ನ ರಾಷ್ಟ್ರ ಪ್ರಶಸ್ತಿ, ರಾಜ್ಯಮಟ್ಟದ ಸಾಂಸ್ಕೃತಿಕ ರಾಜ್ಯ ಪ್ರಶಸ್ತಿ, ಪ್ರತಿಭಾ ಚೇತನ ರಾಜ್ಯ ಪ್ರಶಸ್ತಿ, ರಾಜ್ಯಮಟ್ಟದ ಕರುನಾಡ ಬಾಲ ರತ್ನ ರಾಜ್ಯ ಪ್ರಶಸ್ತಿ, ಬೆಳಕು ರಾಜ್ಯಮಟ್ಟದ ಬೆಳಕಿನ ಬೆಳ್ಳಿ ಚುಕ್ಕಿ ರಾಜ್ಯ ಪ್ರಶಸ್ತಿ, ಸಿರಿಗನ್ನಡ ರಾಷ್ಟ್ರೀಯ ನಾಟ್ಯ ಶಾಂತಲೆ ರಾಜ್ಯ ಪ್ರಶಸ್ತಿ, ಮಹಿಳಾ ಸಾಧಕ ರತ್ನ ರಾಜ್ಯ ಪ್ರಶಸ್ತಿ, ಕರುನಾಡ ರಾಜ್ಯೋತ್ಸವ ಪ್ರಶಸ್ತಿ, ಮೇಘ ಮೈತ್ರಿ ಬಾಲ ಪುರಸ್ಕಾರ ಪ್ರಶಸ್ತಿ, ರಾಜ್ಯ ಕಲಾರತ್ನ ಪ್ರಶಸ್ತಿ, ಕರ್ನಾಟಕ ಜೀವಮಾನ ಶ್ರೇಷ್ಠ ಬಾಲಕಲಾ ವಿದ್ಯಾಭೂಷಣ ಪ್ರಶಸ್ತಿ, ಕರುನಾಡ ಕಣ್ಮಣಿ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ, ಮಕ್ಕಳ ಪ್ರತಿಭಾ ಪುರಸ್ಕಾರ ಪ್ರಶಸ್ತಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ರಾಷ್ಟ್ರಮಟ್ಟದ ಪ್ರಶಸ್ತಿಯಾದ ಕಲಾ ರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಳೆ. ಈ ಪೈಕಿ ಇತ್ಯಾದಿಗಳು ಪ್ರಮುಖವಾದವು.
ಡಾ.ಅಂಬಿಕಾ ಹಂಚಾಟೆ ಅವರು ಈ ಬಾಲ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಪಟ್ಟಿಗೆ ಸೇರಿಸಿದ್ದಾರೆ. ಡಾ. ಮಂಜುನಾಥ್ ಬಾರ್ಗೇರ್ ಅವರು ಸಹ ಈ ಬಾಲ ಪ್ರತಿಭೆಯನ್ನು ಗುರುತಿಸಿ ತಮಿಳುನಾಡಿನ ಚೆನ್ನೈನಲ್ಲಿ ಯೂನಿವರ್ಸಲ್ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಮತ್ತು ಫ್ಯೂಚರ್ ಕಲಾಂ ಬುಕ್ ಆಫ್ ರೆಕಾರ್ಡ್ ಪಟ್ಟಿಗೆ ಸಹ ಸೇರಿದ್ದಾಳೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಎರಡು ವಿಶ್ವದಾಖಲೆ ಪಟ್ಟಿಗೆ ಸೇರಿದ ಕರ್ನಾಟಕ ರಾಜ್ಯದ ಪ್ರಪ್ರಥಮ ಭರತನಾಟ್ಯ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಇತ್ತೀಚೆಗೆ ನಡೆದ ಬೇಲೂರು ತಾಲ್ಲೂಕು ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕುಮಾರಿ ಮೈತ್ರಿಯ ಭರತನಾಟ್ಯ ಕ್ಷೇತ್ರವನ್ನು ಪರಿಗಣಿಸಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಬೇಲೂರಿನ ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ರಾಜ್ಯ ಯುವ ಬರಹಗಾರರ ಒಕ್ಕೂಟ, ಬೆಂಗಳೂರಿನ ಬೆಳಕು ಟ್ರಸ್ಟ್, ಮಂಗಳೂರಿನ ಸಾಹಿತ್ಯ ಚಿಗುರು, ಮೈಸೂರಿನ ಗ್ರಾಮಾಂತರ ಬುದ್ದಿಜೀವಿ ಬಳಗ ಮತ್ತು ಹಾಸನದ ಕವಿವೃಕ್ಷ ಬಳಗ. ಹಾಸನದ ಮಾಣಿಕ್ಯ ಪ್ರಕಾಶನ, ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹೀಗೆ ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದ್ದಾರೆ. ಹಾಸನ ಜಿಲ್ಲೆಯ ಸೂಪರ್ ಕಿಡ್ಸ್ ಸೆಲೆಬ್ರಿಟಿಯಾಗಿ ಆಯ್ಕೆಯಾಗಿರುತ್ತಾಳೆ.
ಒಟ್ಟಾರೆಯಾಗಿ ತಮ್ಮದೇ ಕೆಲಸ ಕಾರ್ಯ ಒತ್ತಡಗಳಲ್ಲಿ ತಮ್ಮ ಮಕ್ಕಳ ಕಾರ್ಯ ಚಟುವಟಿಕೆಗಳನ್ನು ಗಮನಿಸದ ಹೆತ್ತವರಿರುವ ಈ ಕಾಲದಲ್ಲಿ ಮಗಳಿಗಾಗಿ ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಅವಳ ನೃತ್ಯಕ್ಕೆ ಬೆನ್ನೆಲುಬಾಗಿ ನಿಂತ ಮೈತ್ರಿ ತಂದೆ ಡಾ. ಶಿವಕುಮಾರ್ ಮತ್ತು ತಾಯಿ ಶ್ರುತಿ ಅವರ ಅವಿರತ ಶ್ರಮ ಮೈತ್ರಿ ಪಾಲಿಗೆ ವರದಾನ. ಇಂತಹ ತಂದೆ ತಾಯಿಯನ್ನು ಪಡೆಯಬೇಕಾದರೆ ಪೂರ್ವ ಜನುಮದ ಭಾಗ್ಯವೇ ಸರಿ ಎನ್ನುತ್ತಾಳೆ ಮೈತ್ರಿ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಇಷ್ಟೊಂದು ಸಾಧನೆಯನ್ನು ಮಾಡಿದ್ದಾಳೆ ಇಂತಹ ಅಸಾಮಾನ್ಯ ಪ್ರತಿಭೆ ಹೊಂದಿರುವ ಬೇಲೂರಿನ ಹೆಮ್ಮೆಯ ಪುಟಾಣಿಗೆ ನಿಮ್ಮೆಲ್ಲರ ಪ್ರೋತ್ಸಾಹ ಆಶೀರ್ವಾದ ಸದಾ ಇರಲಿ. ಅವಳ ಈ ನೃತ್ಯ ಸೇವೆಯ ನೋಡುವ ಭಾಗ್ಯ ನಮಗೆ ಯಾವಾಗಲೂ ಸಿಗಲಿ ಎಂದು ಹಾರೈಸೋಣ ಶುಭ ಹಾರೈಕೆಗಳೊಂದಿಗೆ……..!!!!
–ನಿಯಾಜ್ ಪಡೀಲ್