ನಾಟಕಕಾರರಾಗಿ ಕುವೆಂಪು (ಭಾಗ-7): ಹಿಪ್ಪರಗಿ ಸಿದ್ದರಾಮ್


ಓರ್ವ ವಿದ್ಯಾವಂತ ಘನ ಬ್ರಾಹ್ಮಣೋತ್ತಮನು ಧರ್ಮಭೀರುವಾಗಿದ್ದರೂ ಪರಂಪರೆಯಿಂದ ಬಂದ ಶಾಸ್ತ್ರದ ಕುರಿತ ಶ್ರದ್ಧೆ ಆತನ ವಿಕಾಸವನ್ನು ಮೊಟಕುಗೊಳಿಸುತ್ತಾ ತನ್ನಂತೆ ಇತರರು ಆಗಬಾರದೆನ್ನುವ ಅಸೂಯಾಗುಣ ಅವನನ್ನು ಹೇಗೆ ಕೆಳಮಟ್ಟಕ್ಕೆ ತಳ್ಳುವದರೊಂದಿಗೆ ಆತನನ್ನು ಹಿಂದೆ-ಮುಂದೆ ಗೊತ್ತಿಲ್ಲದೇ ಬೆಂಬಲಿಸಿದವರೂ ಸಹ ಚಿಕ್ಕವರಾಗುತ್ತಾರೆ ಎಂಬುದರಿಂದ ಹಿಡಿದು ಕೊನೆಯಲ್ಲಿ ತನ್ನ ತಪ್ಪಿನ ಅರಿವಾಗಿ ವಕ್ರಬುದ್ಧಿಯನ್ನು ತಿದ್ದಿಕೊಂಡು ಪಶ್ಚಾತ್ತಾಪ ಪಡುವುದು, ನಂತರದಲ್ಲಿ ಶ್ರೀರಾಮಚಂದ್ರನು ಆದರ್ಶಪ್ರಾಯನಾಗಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸುವುದು ಹೀಗೆ ಪೌರಾಣಿಕ ಕಾಲದ ಅಂಧಶ್ರದ್ಧೆಯ ಕಥೆಯೊಂದು, ಮಹಾಕವಿಗಳ ಪ್ರತಿಭಾಲೋಕವನ್ನು ಪ್ರವೇಶಿಸಿ ಹೇಗೆ ಪುನರ್ಜನ್ಮವನ್ನು ಪಡೆದು ಪ್ರಜ್ವಲಿಸುವ ಬೆಳಕನ್ನು ಬೀರಬಲ್ಲುದು ಎಂಬುದಕ್ಕೆ ಉದಾಹರಣೆಯೆಂಬಂತೆ ಕರುನಾಡಿನ ವೈಚಾರಿಕ ವಲಯವನ್ನು ಇಂದಿಗೂ ಕಂಪನವನ್ನುಂಟು ಮಾಡುತ್ತಿರುವ ಮತ್ತು ಪರ್ಯಾಯ ಸಂಸ್ಕೃತಿಯನ್ನು ಸ್ಥಾಪಿಸುವಂತಹ ವೈಚಾರಿಕ ಹಿನ್ನಲೆಯ ಮಹಾಕವಿಗಳ ‘ಶೂದ್ರ ತಪಸ್ವಿ’ ರಂಗಕೃತಿಯ ಕುರಿತು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ.
 
ಈಗ ಮಹಾಕವಿಗಳ ಪೌರಾಣಿಕ ರಂಗಕೃತಿಗಳಲ್ಲಿ ಒಂದಾದ ಮಹಾಭಾರತದ ಕಥಾವಸ್ತುವನ್ನು ಒಳಗೊಂಡಿರುವ ತನ್ನಂತೆ ಇತರರು ಬೆಳೆಯಬಾರದೆನ್ನುವ ಅಸೂಯಾಗುಣದ ಅರ್ಜುನನ ಅಸಹನೆಯ ಕುತಂತ್ರವನ್ನರಿಯದ ಮುಗ್ದಪ್ರತಿಭೆ ಏಕಲವ್ಯನೆಂಬ ಕಾಡುಕುಸುಮವೊಂದರಿಂದ ಗುರುದಕ್ಷಿಣೆಯಾಗಿ ಶಸ್ತ್ರವಿದ್ಯೆಗೆ ಅವಶ್ಯಕವಾಗಿ ಬೇಕಾದ ಬಲಗೈ ಹೆಬ್ಬರಳನ್ನು ಪಡೆದ ಕಲ್ಪಿತ ಗುರುಗಳಾದ ದ್ರೋಣಾಚಾರ್ಯರು ಅದಕ್ಕೆ ಪ್ರತಿಯಾಗಿ ಮಹಾಭಾರತ ಯುದ್ಧದಲ್ಲಿ ಕೊರಳನ್ನು ಬಲಿಕೊಡಬೇಕಾದ ಪ್ರಸಂಗದ ಹಿನ್ನಲೆಯ ಕಥಾನಕವನ್ನುಳ್ಳ ಬೆರಳ್-ಗೆ-ಕೊರಳ್ (1947) ರಂಗಕೃತಿಯ ಕುರಿತು ಈಗ ನೋಡೋಣ.
 
ಬೆರಳ್-ಗೆ-ಕೊರಳ್ (1947) :
 
ಈ ರಂಗಕೃತಿ ಕನ್ನಡ ರಂಗಸಾಹಿತ್ಯದ ಹಿರಿಯ ಸಿದ್ದಿಗಳಲ್ಲೊಂದು. ಪೂರ್ಣದೃಷ್ಟಿಯಿಂದ ಕೂಡಿ, ದರ್ಶನ ದೀಪ್ತವಾಗಿರುವುದು. ಮಹಾಭಾರತವೆಂಬ ಮಹಾಸಾಗರದಲ್ಲಿಯ ಒಂದು ಹನಿಯಂತೆ ಇರುವ ಕಥೆಯೊಂದು ಮೂಲಪರಂಪರೆಯ ಎಲ್ಲೆಯನ್ನು ಮೀರಿ ವಿಕಾಸಗೊಂಡ ರಂಗಕೃತಿ ಎಂಬುದನ್ನು ಈ ರಂಗಕೃತಿಯ ಪ್ರಸಂಗಗಳಿಂದ ನಾವು ಅರಿತುಕೊಳ್ಳಬಹುದು. ಅತಿ ವಿಶಿಷ್ಟವಾದ ಈ ರಂಗಕೃತಿಯಲ್ಲಿ ಮಹಾಕವಿ ಕುವೆಂಪುರವರು ಏಕಲವ್ಯನನ್ನು ನಾಯಕನನ್ನಾಗಿ ಮಾಡುವುದರೊಂದಿಗೆ ಗುರು, ಕರ್ಮ, ಯಜ್ಞವೆಂಬ ಮೂರು ದೃಶ್ಯಗಳನ್ನು ಸೃಷ್ಟಿಸಿದ್ದಾರೆ. ರಂಗಕೃತಿಗೆ ಕೊಟ್ಟಿರುವ ಶೀರ್ಷಿಕೆಯೇ ಆಕರ್ಷಕವಾಗಿದೆ. ಈ ಕೃತಿಯ ರಚನಾತಂತ್ರವು ಅಧ್ಯಯನ ಯೋಗ್ಯವಾದುದಾಗಿದೆ. ಅಚ್ಚುಕಟ್ಟುತನದ ಭಾವರಚನಾವಿನ್ಯಾಸ, ವ್ಯವಸ್ಥಿತವಾದ ಬೆಳವಣಿಗೆ, ಕಲಾತ್ಮಕ ನಾಟಕೀಯ ಅಂಶಗಳು ಮೊದಲಾದ ಸಂಗತಿಗಳೊಂದಿಗೆ ಹಲವಾರು ದೃಶ್ಯಗಳಿರದೇ ಕೇವಲ ಮೂರು ದೃಶ್ಯಗಳಿಂದ ಕೂಡಿದ ಬಂಧವಿದೆ. ಕಥೆಯ ಭಾವವಿನ್ಯಾಸದ ಹಿನ್ನಲೆಯಲ್ಲಿ ಮೂರು ದೃಶ್ಯಗಳಿಗೆ ಒಂದೊಂದು ಸೂಕ್ತವಾದ ಹೆಸರುಗಳನ್ನಿಟ್ಟಿದ್ದಾರೆ. ಅವು ಕ್ರಮವಾಗಿ ಗುರುಶಿಷ್ಯರ ಸಂಬಂಧದಲ್ಲಿಯ ವಿವಿಧ ಆಧ್ಯಾತ್ಮಿಕ ಹಂತಗಳನ್ನು, ಮರ್ಕಫಲಸ್ವರೂಪಿಯಾದ ಶಿವನಿಚ್ಛೆಯ ದಿವ್ಯಲೀಲಾ ಪ್ರಯೋಜನವನ್ನೂ, ನಿಷ್ಕಾಮವಾದ ಭಗವದರ್ಪಿತವೇ ಸಾವು-ಬದುಕುಗಳಲ್ಲಿ ಶ್ರೇಯಸ್ಕರವೆಂಬುದನ್ನು ಮೂರು ದೃಶ್ಯಗಳಲ್ಲಿ ಕಲಾತ್ಮಕವಾಗಿ ಪೋಣಿಸಿದ್ದಾರೆ.
 
ಸುದೀರ್ಘವಾದ ಮೊದಲನೆಯ ‘ಗುರು’ ದೃಶ್ಯದಲ್ಲಿ ಏಕಲವ್ಯ ಮತ್ತು ಆತನ ತಾಯಿ(ಅಬ್ಬೆ)ಯ ನಡುವೆ ನಡೆಯುವ ದೀರ್ಘ ಸಂಭಾಷಣೆಯಿಂದ ದೃಶ್ಯವು ದೀರ್ಘಾವಧಿಗೆ ಹೋಗುವುದರಿಂದ ಈ ದೃಶ್ಯಾವಳಿಯನ್ನು ರಂಗದಲ್ಲಿ ಅಭಿನಯಿಸುವುದಕ್ಕೆ ಹೆಚ್ಚು ರಂಗಾನುಭವವಿರುವ ನಟರು ಅವಶ್ಯಕವೆನಿಸುತ್ತದೆ. ಕವಿ ಹೃದಯದ ಮಹಾಕವಿಗಳು ನಾಟಕಕಾರರಾಗಿ ದೃಶ್ಯದ ಪ್ರಾರಂಭದಲ್ಲಿ ಕಾಡಿನ ಶ್ರೀಮಂತ ಸೌಂದರ್ಯವನ್ನು ನಿಧಾನವಾದಿ ಕತ್ತಲು ಹರಿದು ಬೆಳಕು ಮೂಡುವ ಸಂಧಿ ಕಾಲದ ವರ್ಣನೆಯನ್ನು ಅನುಭವಗೋಚರವಾಗುವಷ್ಟು ಚಿತ್ರವತ್ತಾಗಿ ಕೊಟ್ಟಿರುವುದು ಅವರ ಪ್ರಕೃತಿ ಪ್ರೇಮವನ್ನು ತೋರಿಸುತ್ತದೆ. ಬೆಳಕು ಹೆಚ್ಚಿದಂತೆ ಏಕಲವ್ಯನ ಗುರುಸ್ತುತಿಯು ಕಾಣಿಸುತ್ತದೆ. ತನ್ನ ಗುರುಗಳಾದ ದ್ರೋಣಾಚಾರ್ಯರು ತನ್ನಲ್ಲಿಗೆ ಬರುವ ಸುದ್ಧಿಯಿಂದ ಆತನಿಗೆ ಹೆಚ್ಚಿನ ಸಂಭ್ರಮವಾಗಿದೆ. ಪ್ರಕೃತಿಯ ಎಲ್ಲಾ ಶಕ್ತಿಗಳನ್ನು ಗುರುಗಳ ಸ್ವಾಗತಕ್ಕೆ ಆಹ್ವಾನಿಸುತ್ತಾನೆ. ಹೀಗೆಯೇ ಸಂಭ್ರಮಿಸುತ್ತಿರುವಾಗ ಬೆಳಗಿನ ಉಣಿಸನ್ನೀಯಲು ಆತನ ತಾಯಿ ಕೂಗುತ್ತಾ ಮಗನನ್ನು ಹುಡುಕುತ್ತಾ ಬರುತ್ತಾಳೆ. ಮುದ್ದುಕಂದನಂತೆ ಆತ ತಾಯಿಯ ಎದುರಿನಲ್ಲಿ ನಲಿದಾಡುವುದು, ಅಡಗಿ ಕುಳಿತು ಕರೆದು ಹೆದರಿಸುವುದು ಮುಂತಾದ ಚಿತ್ರಗಳು ಕಾಡಿನ ತಾಯಿ-ಮಕ್ಕಳ ಆಟವು ರಂಗದಲ್ಲಿ ಖುಷಿ ಕೊಡುತ್ತದೆ. ‘ಒಂದಿನಿತು ವಿನೋದವನ್ನು ಅರಿಯಲಾರೆ’ ಎಂದು ತಾಯಿಯನ್ನು ಹಾಸ್ಯ ಮಾಡಿ ನಗುವುದು. ಹಾಸ್ಯವು ವಿಷಾದವಾಗಿ ಬದಲಾಗುವುದು, ನಂತರ ಆಕೆ ಅಗಲಿದೆ ತನ್ನ ಪತಿಯ ನೆನಪಿಸಿಕೊಳ್ಳುವುದು ; ದುಃಖಪಡುವುದು ನಂತರ ಏಕಲವ್ಯ ಮರೆಯುವಂತೆ ಮಾತಾಡುವುದು ನಡೆಯುತ್ತದೆ. ತಾಯಿ ತಂದ ಬೆಳಗಿನುಣಿಸನ್ನು ಅಕ್ಕರತೆಯಿಂದ ತೆಗೆದುಕೊಂಡ ಏಕಲವ್ಯನು ‘ಅಬ್ಬೆ ! ನಿನ್ನಕ್ಕರೆಯೆ, ಮೈವೆತ್ತವೋಲ್ ಇರ್ಪುದೀ ಜೇನ್’ ಎಂದು ನುಡಿಯುತ್ತಾನೆ. ವಯಸ್ಸಿಗೆ ಬಂದ ಮಗನಿಗಾಗಿ ಹೆಣ್ಣು ಹುಡುಕುವ ವಿಚಾರ ಬಂದಾಗ ಅದರ ಜವಾಬ್ದಾರಿಯನ್ನು ತಾಯಿಯ ಮೇಲೆ ಹಾಕುವ ಏಕಲವ್ಯನು ತಾನು ಧನುರ್ವಿಧ್ಯಾ ಪಾರಂಗತನಾಗಲು ಗುರುವಿನ ಮೂರ್ತಿಯನ್ನಿಟ್ಟುಕೊಂಡು ಅಭ್ಯಸಿಸುತಿರುವುದು, ಗುರುವನ್ನು ನೆನೆದು ಬಾಣ ಬಿಟ್ಟರೆ ‘ತಪ್ಪದೆಂದರಿ ನಾನಿಟ್ಟಗುರಿ’ ಎಂದು ಹೆಮ್ಮೆಯಿಂದ ಹೇಳುತ್ತಾನೆ. ಆಗ ಘಟನೆಯೊಂದು ನೆನಪಾಗಲು ‘ಬಲು ಸೊಗಸು ಆ ಕತೆ ಅಬ್ಬೆ’ ಎಂದು ನಡೆದ ಕತೆಯನ್ನು ಹೇಳುವುದನ್ನು ಬಲು ದೀರ್ಘವಾಗಿ ಮಹಾಕವಿಗಳು ಕಟ್ಟಿಕೊಡುವುದು, ಎಲ್ಲಿಯೂ ಬೇಸರವಾಗದಂತೆ, ರಂಗಪ್ರಯೋಗವು ಚ್ಯೂಯಿಂಗ್ ಗಮ್ ಥರ ಎಳೆದಂತಾಗದೇ ನಾಟಕೀಯ ಚೈತನ್ಯ ಮಿಡಿಯುವಂತೆ ಎಚ್ಚರವಹಿಸಿದ್ದಾರೆ. ಹಿಂದೊಮ್ಮೆ ಅಯ್ಯ(ಅಪ್ಪ)ನ ಅಪ್ಪಣೆ ಪಡೆದು ರಾಜಧಾನಿಗೆ ಹೋಗಿ ಗುರು ದ್ರೋಣರನ್ನು ಬೇಟಿಯಾಗಿದ್ದು, ತಾನು ಶೂದ್ರನೆಂಬುದನ್ನು ತಿಳಿದಿದ್ದರೂ ತಿರಸ್ಕರಿಸದೆ ಇರುವುದು, ಆಗ ಅಲ್ಲಿಗೆ ಬಂದ ಅರ್ಜುನನು ಅಸೂಯೆಯಿಂದ ಅಡ್ಡಬಂದುದು, ಅಸಹಾಯಕರಾದ ದ್ರೋಣರು ಕೇವಲ ಆಶೀರ್ವದಿಸಿ ಕಳಿಸಿದ್ದು, ಗುರುವಿನ ವಿಗ್ರವನ್ನಿಟ್ಟುಕೊಂಡು ಬಿಲ್ವಿದ್ಯೆಯನ್ನು ಕಲಿತು ಪಾರಂಗತನಾದುದು, ವಿಶೇಷವಾಗಿ ಶಬ್ದವೇಧಿ ವಿದ್ಯೆಯನ್ನು ಸಂಪಾದಿಸಿರುವುದನ್ನು ವಿವರವಾಗಿ ಏಕಲವ್ಯನ ದೀರ್ಘಸಂಭಾಷಣೆಯಲ್ಲಿ ಹೇಳಿಸುತ್ತಾರೆ. ಮುಂದೆ ಶಬ್ದವೇಧಿ ಬಾಣದಿಂದ ಕಾಡುಹಂದಿಯೊಂದನ್ನು ಹೊಡೆದು ಹಾಕಿದಾಗ ಅಲ್ಲಿಗೆ ಒಬ್ಬ ರಾಜಪುರುಷ ಹಂದಿಯ ಹತ್ತಿರ ನಿಂತುಕೊಂಡಿದ್ದು, ನಂತರ ಆತನೇ ಅರ್ಜುನನೆಂದು ಗೊತ್ತಾಗಿದ್ದು, ಆ ಪ್ರಸಂಗದಲ್ಲಿ ಇಬ್ಬರಿಗೂ ನಡೆದ ಸಂಭಾಷಣೆಯಲ್ಲಿ ವ್ಯಕ್ತವಾಗುವ ಅರ್ಜುನನ ಅಹಂಕಾರ, ಪ್ರಖ್ಯಾತನಾಗಬೇಕೆಂಬ ದುರಾಶೆ, ಅಸೂಯೆ ಮುಂತಾದ ಗುಣಗಳು ಏಕಲವ್ಯನ ಸರಳತೆ, ಗುರುಭಕ್ತಿ, ವಿನಯದಂತಹ ಗುಣಗಳ ಮುಂದೆ ಗೌಣವೆನಿಸಿದಂತಾಗಿರುವುದನ್ನು ಏಕಲವ್ಯ ಪಾತ್ರದ ಮೂಲಕ ಮುಟ್ಟಿಸುವ ಶೈಲಿ ಅನನ್ಯ ಮತ್ತು ರಂಗತಂತ್ರದಲ್ಲಿ ಅಪರೂಪವೇ ಸರಿ. ಅಂದು ಏಕಲವ್ಯ-ಅರ್ಜುನರ ನಡುವೆ ನಡೆದ ಮಾತುಕತೆಯ ಫಲವಾಗಿಯೇ ಇಂದಿನ ವೇಳೆಯಲ್ಲಿ ದ್ರೋಣರು ಏಕಲವ್ಯನಲ್ಲಿಗೆ ಆಗಮಿಸುತ್ತಿರುವುದು ದ್ರೋಣರ ಪುತ್ರ ಅಶ್ವತ್ಥಾಮನ ಓಲೆಯಿಂದ ಅರಿತುಕೊಂಡಿದ್ದಾನೆ. ಇದರ ಹಿಂದಿನ ಮರ್ಮವನ್ನು ಅರಿಯದಂತಹ ಮುಗ್ದ ಏಕಲವ್ಯನು ಅಂದು ನಡೆದ ಘಟನಾವಳಿಯನ್ನು ತನ್ನ ಅಬ್ಬೆಯ ಮುಂದೆ ವಿವರಿಸುವ ಪರಿ ಸುಮಾರು ನಾಲ್ಕಾರು ಪುಟಗಳಲ್ಲಿ ಮಹಾಕವಿಗಳು ಹೇಳಿಸುವುದನ್ನು ಗಮನಿಸಿದರೆ ರಂಗಸಾಧ್ಯತೆಗಳ ದೃಷ್ಟಿಯಿಂದ ಯೋಚಿಸಿದಾಗ ಈ ದೃಶ್ಯವೊಂದನ್ನೆ ತೆಗೆದುಕೊಂಡು ಸ್ವತಂತ್ರ ರಂಗಪ್ರಯೋಗವಾಗಿ ಪ್ರದರ್ಶಿಸಬಹುದು. ನನಗನಿಸಿದಂತೆ ಇಂತಹ ಪ್ರಯೋಗಗಳನ್ನು ಚಲನಶೀಲಕ್ಷೇತ್ರದ ಬ್ರಹ್ಮರೆಂದು ಹೆಸರಾದ ಆಧುನಿಕ ರಂಗಕರ್ಮಿ/ರಂಗನಿರ್ದೇಶಕರು ಈಗಾಗಲೇ ಪ್ರಯೋಗ ಮಾಡಿರುವುದನ್ನು ಹಿರಿಯರೊಬ್ಬರು ತಮ್ಮ ನೆನಪಿನಾಳದಿಂದ ಹೇಳಿರುವುದನ್ನು ನಾನು ಬಲ್ಲೆ. ಈ ದೃಶ್ಯದಲ್ಲಿ ಗುರು ಅಗೋಚರನಾಗಿದ್ದರೂ ಏಕಲವ್ಯನಲ್ಲಿ ಗುರುಪ್ರಭಾವ ಗೋಚರವಾಗಿದೆ. ಮನಸಿನ ವಲಯದ ಪ್ರಭಾಜಗದಲ್ಲಿ ಗುರು-ಶಿಷ್ಯರ ಸಂಬಂಧ ಸೂಚಿತವಾಗಿ ಈ ದೃಶ್ಯಕ್ಕೆ ಗುರು ಎಂದು ಕರೆದಿರುವುದು ಅರ್ಥಪೂರ್ಣವಾಗಿದೆ.
 
ಮುಂದಿನ ಎರಡನೇಯ ದೃಶ್ಯದಲ್ಲಿ ತಂದೆ-ಮಗ ಅಂದರೆ ದ್ರೋಣ-ಅಶ್ವತ್ಥಾಮರು ಕಾಡಿಗೆ ಆಗಮಿಸಿದ್ದಾರೆ. ನಾಡಿನಲ್ಲಿಯ ನಾಗರಿಕ ಜನರಿಗೆ ಕಾಡಿನಲ್ಲಿಯ ಏಕಲವ್ಯ ಎಂಬ ಶಿಷ್ಯೋತ್ತಮನನ್ನು ಕಾಣಲು ಬರುವಾಗ ದಾರಿ ತಪ್ಪಿದ್ದಾರೆ. ಒಂದು ಬಂಡೆಗಲ್ಲಿನ ಮೇಲೆ ತಂದೆಯನ್ನು ಕುಳ್ಳಿರಿಸಿ ಅಶ್ವತ್ಥಾಮನು ದಾರಿಯನ್ನು ಹುಡುಕಲು ಹೋಗುತ್ತಾನೆ. ಆಗ ದ್ರೋಣರು ಚಿಂತಾಕ್ರಾಂತರಾದಾಗ ಮನಸ್ಸಿನ ತಳಮಳ ಬುಗಿಲೇಳುತ್ತದೆ.
 
ಎನಿತು ತಣ್ಪಿರ್ಪುದೀ ಅಡವಿಯೆರ್ದೆಯೊಳ್ !
ಕಾಡಾದೊಡಂ ನೂರುಮಡಿ ಲೇಸು
ಕರಬು ಕಿಚ್ಚುರಿವ ಆ ನಮ್ಮ ನಾಡಿಗಿಂ.
ಧರ್ಮಸಂಕಟದೊಂದು ಚಿಂತಾಗ್ನಿಯಿಂದಳುರ್ವ
ನನ್ನೀ ಮನಕ್ಕೀ ವಿವಿಕ್ತದೇಶಂ
ವರ್ಷಿಸುತ್ತಿದೆ ಶಾಂತಿಪೀಯೂಷಮಂ
 
ಎಂದು ತುಸುಹೊತ್ತು ಅರೆಗಣ್ಣಾಗಿ ಶಾಂತಿಯನ್ನು ಅನುಭವಿಸುತ್ತಾನೆ. ನಾನು ಯಾತಕ್ಕಾದರೂ ಅರಸು ಮಕ್ಕಳಿಗೆ ಅದರಲ್ಲೂ ಅರ್ಜುನನಿಗೆ ಗುರುವಾಗಿ ಅರಮನೆಯ ಅನ್ನದ ಋಣದ ಹಂಗಿಗೊಳಗಾದೆ ಎಂದು ಚಿಂತಿಸುತ್ತಾನೆ. ಅಹಂಕಾರದ ಅರ್ಜುನನಿಗೆ ಗುರುವಾಗಬೇಕಾಯಿತಲ್ಲಾ, ಕೀರ್ತಿ/ಹೆಸರು ಮಾಡಬೇಕೆನ್ನುವ ದುರಾಶೆಯ ಕೆಸರಿನಲ್ಲಿ ತಾನು ಮುಳುಗಬೇಕಾಯಿತಲ್ಲಾ ಎಂದು ವ್ಯಥೆಪಡುತ್ತಾನೆ. ವಿನಾಕಾರಣ ಕಾಡಿನ ಪ್ರತಿಭೆಯೊಂದನ್ನು ಮುಕ್ಕಾಗಿಸುವ ಮುಂದಿನ ತಮ್ಮ ಘೋರ ಕಾರ್ಯದ ಕುರಿತು ನೆನದು ಹಲಬುತ್ತಾನೆ. ತಂದೆಯಿಲ್ಲದ ತಬ್ಬಲಿ, ತಾಯಿಸೇವೆಯಲ್ಲಿ ತನ್ನದೇ ಲೋಕದಲ್ಲಿರುವ ‘ಆ ಕಾಡ ಬೇಡರ ಹುಡುಗನನ್ ಬೆರಳ್ಕೊಯ್ದು, ಆ ರಕ್ತಪಂಕದೊಳಿವನ ಕೀರ್ತಿಪಂಕೇಜಮಂ ಮರೆಯವೇಳ್ಕಂತೆ !’ ಎಂಬ ಮಾತಿನಲ್ಲಿ ಮುಂದೆ ನಡೆಯಲಿರುವ ಘಟನೆಯ ಕುರಿತು ಪಶ್ಚಾತ್ತಾಪದ ಭಾವವಿದೆ. ಹೀಗೆ ಆಲೋಚಿಸುತ್ತಿರುವಾಗಲೇ ಕೊಂಬಿನ ಕೂಗು, ಪರೆಯ ದನಿ, ಆಳ್ಗಳ ಗೆಲ್ಲುಲಿ ಮುಂತಾದವುಗಳು ಮಲೆಯ ನೆತ್ತಿಯ ಕಡೆಯಿಂದ ಕೇಳಿ ಬರುತ್ತದೆ. ಅಶ್ವತ್ಥಾಮನು ಆಗಮಿಸಿ ದ್ರೋಣರ ಸ್ವಾಗತಕ್ಕೆ ಏಕಲವ್ಯನು ಮಾಡಿಕೊಂಡಿರುವ ಏರ್ಪಾಡನ್ನು ಅರುಹುತ್ತಾನೆ. ಇದನ್ನು ತಿಳಿದ ದ್ರೋಣರು ಏಕಲವ್ಯನ ಕಡೆಯವರು ಬರುವುದಕ್ಕಿಂತ ಮುಂಚೆ ಪರಿಜನರ ಹತ್ತಿರ ಹಿಂದಿರುರುಗುವಂತೆ ಅಶ್ವತ್ಥಾಮನಿಗೆ ಹೇಳುತ್ತಾನೆ. ಆಶ್ಚರ್ಯಗೊಂಡ ಅಶ್ವತ್ಥಾಮನು ತಂದೆಯ ಮನದಲ್ಲಿ ಏನೋ ಆತಂಕ ಇರುವುದನ್ನು ಗಮನಿಸಿ ಕೇಳುತ್ತಾನೆ.
 
ಕ್ಷಮಿಸಿಮಾರ್ಯ. ನಾನ್ ಪೆರನಲ್ಲನ್ ನಿಮಗೆ.
ಮೊನ್ನೆಯಿಂದಾವುದೋ ಗೂಢಶೋಕಂ
ಕೊರೆಯುತಿರ್ಪುದು ನಿಮ್ಮ ಜೀವಮಂ.
ಕಂಡೆನಾದೊಡೆಂ ಅರಿತೆನಿಲ್ಲ.
ದಿಟಂ ಪೇಳಿಂ ; ಕಲ್ವಿಡಿದು ಬೇಡುವೆನ್:
ಆವುದೊ ಅಮಂಗಳಕೆ ಕೈಕೊಂಡಿರೀ ಪಯಣಮಂ!
 
ಅರ್ಜುನನ ದುರಹಂಕಾರದ ಕಾರಣದಿಂದ ಇಂತಹ ಹೇಯಕಾರ್ಯವನ್ನು ಕೈಕೊಳ್ಳಬೇಕಾಯಿತೆಂದು ದ್ರೋಣ ಒಪ್ಪಿಕೊಳ್ಳುತ್ತಾನೆ. ‘ಅರಸು ಮಕ್ಕಳಿಗೆ ವಿದ್ಯೆ ಕಲಿಸುವುದಕ್ಕೆ ಪ್ರತಿಯಾಗಿ ಅವರು ನೀಡುವ ಕೂಳಿಗೆ ಆಳಾಗಿ ಇಂತಹ ಕೆಲಸಕ್ಕೆ ಕೈಹಾಕುವುದು ಎಷ್ಟು ಸರಿ’ ಎಂದು ಅಶ್ವತ್ಥಾಮನು ಕೇಳುತ್ತಾನೆ. ಅವರ ಹಂಗಿಗಾಗಿ ನಾನು ಮಾಡುತ್ತಿಲ್ಲ, ಹಂಗಿನ ಹಗ್ಗವನ್ನು ವಿಧಿಯು ಕೈಹಿಡಿದು ಎಳೆಯುತ್ತಿದೆ. ವಿಧಿಯಾಟದಲ್ಲಿ ನಮ್ಮನ್ನು ಎಲ್ಲೆಲ್ಲಿಂದಲೋ ಎಳೆದು ತಂದು ಏನನ್ನೋ ಮಾಡಿಸುತ್ತಿರುವ ಈ ಕರ್ಮವಿನ್ಯಾಸದಲ್ಲಿ ವಿಧಿಯ ಪ್ರಭಾವವನ್ನು ಕಾಣುವುದು ಅನಿವಾರ್ಯ, ಅದಕ್ಕೆ (ದ್ರೋಣರು ಹೇಳುತ್ತಾರೆ) :
 
ವತ್ಸ, ಉಬ್ಬೆಗಂಗೊಳ್ಳದಿರ್ ನೀನ್;
ದೈವಮಂ ನೆಮ್ಮಿ ಕೆಲಸಮಾಳ್ಪೆನ್,
ತನಿಯುವಂತರ್ಜುನಂ,
ಸಲ್ವಂತೆ ನಾನಿತ್ತ ವಚನಂ, ಮೇಣ್
ಏಕಲವ್ಯಂಗೊದಗದೊಲ್ ಆವುದಂ ಪೆರ್‍ಕೇಡು.
 
ಎಂದು ಹೇಳಿದಾಗ ಅಶ್ವತ್ಥಾಮನು ‘ಕರ್ಣಂಗೆ ಪರಶುರಾಮನಂ ಗೆಯ್ದವೋಲ್…’ ಎಂದು ಸಂದೇಹ ವ್ಯಕ್ತಪಡಿಸುತ್ತಾನೆ. ‘ಹಾಗಲ್ಲ ನನ್ನ ಬಗೆ’ ಎನ್ನುತ್ತಾ ಸಂದೇಹ ನಿವಾರಣೆ ಮಾಡುತ್ತಾನೆ. ‘ಏಕಲವ್ಯಂಗಾವುದು ಕೇಡಾಗದೊಲ್’ ಎಂದು ಭಾಷೆ ಕೊಡಿರೆಂದು ಅಶ್ವತ್ಥಾಮನು ಕೇಳುತ್ತಾನೆ. ಕಿರಿದಾಗಿಯಾದರೂ ಕೇಡಾಗುವುದು ಅನಿವಾರ್ಯವೆಂದು ದ್ರೋಣನು ಸೂಚಿಸುತ್ತಾನೆ. ಅಷ್ಟರಲ್ಲಿ ಕಾಡುಜನರ ಗೆಲ್ಲುಲಿ ಕೊಂಬಿನ ಕೂಗುಗಳು ಕೇಳಿಬರುತ್ತವೆ. ಇಲ್ಲಿ ದ್ರೋಣನಂತಹ ಜ್ಷಾನಿಗಳು ಸಹ ಆಗುವುದೆಲ್ಲಾ ಆಗಲಿ ಎಂಬಂತೆ ಕರ್ಮಫಲಕ್ಕೆ ಆಶ್ರಯಿಸುತ್ತಾರೆ. ಹೀಗೆ ಕರ್ಮಫಲದ ತತ್ವವನ್ನು ಪ್ರಧಾನವಾಗಿ ಪ್ರತಿಪಾಧಿಸುವ ಈ ದೃಶ್ಯಕ್ಕೆ ‘ಕರ್ಮ’ ಎಂಬ ಶೀರ್ಷಿಕೆಯನ್ನಿತ್ತಿರುವುದು ಸಮಂಜಸವಾಗಿದೆ.
 
ಮೂರನೇಯ ಮತ್ತು ಕೊನೆಯ ದೃಶ್ಯ(ಯಜ್ಞ)ದಲ್ಲಿ ಏಕಲವ್ಯನ ಗುರುಭಕ್ತಿಯ ಪರಾಕಾಷ್ಟೆಯನ್ನು ನಾವು ನೋಡಬಹುದು. ದ್ರೋಣನು ತಾನು ಬಂದ ಉದ್ದೇಶದ ಅಂತಿಮ ಪ್ರಸಂಗದ ಅವಕಾಶಕ್ಕಾಗಿ ಕಾಯುತ್ತಿದ್ದಾನೆ. ಇಳಿ ಹೊತ್ತಿನ ಸಮಯದಲ್ಲಿ ಸೂರ್ಯನು ಪಶ್ಚಿಮ ದಿಗಂತಕ್ಕೆ ಅನತಿ ದೂರದಲ್ಲಿದ್ದಾನೆ. ದ್ರೋಣನಿಗೆ ಧರ್ಮಸಂಕಟದ ಜ್ವರವೇರುತ್ತಿದೆ. ಈಗ ದ್ರೋಣನು ಏಕಲವ್ಯನ ಬಿಲ್ಜಾಣ್ಮೆಯನ್ನು ಪರೀಕ್ಷಿಸುವ ನೆಪದಲ್ಲಿ ಆತನನ್ನು ಸಂಕಟದಲ್ಲಿ ಸಿಲುಕಿಸಿ, ಪ್ರತಿಫಲವೆಂಬಂತೆ ಗುರುದಕ್ಷಿಣೆಯಾಗಿ ಹೆಬ್ಬೆರಳನ್ನು ಪಡೆಯುವ ಹುನ್ನಾರವನ್ನು ಹಣೆಯುತ್ತಿದ್ದಾನೆ. ಅದರಂತೆ ದೂರದಲ್ಲಿ ಆಕಾಶದಲ್ಲಿ ಹಾರುತ್ತಿರುವ ಪಕ್ಷಿಯನ್ನು ತೋರಿಸಿ. ಹೊಡೆದುರುಳಿಸು ಎಂದು ಹೇಳುತ್ತಾನೆ. ಹಾರುತ್ತಿರುವ ಪಕ್ಷಿಯು ಏಕಲವ್ಯನ ಪ್ರೀತಿಯ ಪೊಂಗುಳಿ ಪಕ್ಷಿ. ಅದು ಏನು ಅಪರಾಧ ಮಾಡದಿದ್ದರೂ ಅಂತಹ ಸಾಧುಪಕ್ಷಿಯನ್ನು ಕೊಲ್ಲು ಎಂಬ ತನ್ನ ಗುರುವಿನ ಮಾತಿಗೆ ಆಶ್ಚರ್ಯವಾಗಿ, ‘ಇದೇನಾರ್ಯ ? ಅರಿಯದನೊಲ್ ಆಡುತಿರ್ಪಯ್ !’ ಎಂದು ಕೇಳುತ್ತಾನೆ. ‘ಇದರಿಂದ ಮಂತ್ರಾಧಿದೇವತೆ ಮುನಿದು, ಧರ್ಮಚ್ಯುತವಾಗಿ ಆತ್ಮ ಹಾನಿಯಾಗುವುದಿಲ್ಲವೇ ?’ ಎಂದು ಹೇಳಿದಾಗ, ದ್ರೋಣನಿಗೆ ಶಿಷ್ಯನ ಕುರಿತು ಅಭಿಮಾನವುಂಟಾಗಿ ತಬ್ಬಿಕೊಂಡು ಹೇಳುತ್ತಾನೆ :
 
 
ಪುಣ್ಯವಂತನ್ ನೀನ್, ಏಕಲವ್ಯ !
ಬರ್ದುಕಿದಯ್,
ನೀನ್ ಬರ್ದುಕಿ ನನ್ನನ್ನುಂ ಬರ್ದುಕಿಸಿದಯ್ !-
ನಿನಗಲ್ತಿದು ಪರೀಕ್ಷೆ, ನನಗುಂ ಕಣಾ!
ವತ್ಸ, ನೀನೆಂತರಿವಯ್
ನನಗಾಗುತಿರ್ಪಾ ಪರೀಕ್ಷೆಯಂ?
ನಿನಗೆಂತುಸಿರ್ವೆನ್ ಅದನ್ ?
(ನಿಡುಸುಯ್ಯುತ್ತಾನೆ)
 
ಮಾಡಬೇಕಾದುದನ್ನು ನೇರವಾಗಿ ಮಾಡದೇ ಪರೀಕ್ಷೆಯ ನೆಪದಲ್ಲಿ ಅವನನ್ನು ಸಿಕ್ಕಿಸಲು ಪ್ರಯತ್ನಿಸುವ ದ್ರೋಣರ ಅಳಿಮನಸ್ಸು ಸಹ ಮೃತ್ಯುವೇ ಸರಿ. ಆದರೆ ಏಕಲವ್ಯ ಅದನ್ನು ತಪ್ಪಿಸಿ ಗುರುವನ್ನು ಉದ್ಧರಿಸಿದನೆಂಬುದು ಸತ್ಯ. ಅರ್ಜುನನು ತನ್ನ ಮೇಲೆ ಅಸೂಯೆಗೊಂಡಿರುವುದು ಮತ್ತು ಅದಕ್ಕಾಗಿ ತಾವು ಧರ್ಮಸಂಕಟದಲ್ಲಿರುವುದನ್ನು ದ್ರೋಣರು ಹೇಳುವ (ಫಿಟಿಂಗ್ ಕೆಲಸ!) ಮಾತಿನಿಂದ ತಿಳಿದುಕೊಳ್ಳುವ ಏಕಲವ್ಯನು ಯೋಚಿಸದೇ ದೃಢವಾಣಿಯಿಂದ
 
ಸಮರ್ಪಿಸುವೆನೆನ್ನ ಸರ್ವಸ್ವಮಂ ನಿನ್ನಡಿಗೆ,
ಆವುದಾದೊಡಮದನ್ ಬೆಸಸು ನೀನ್, ಆಚಾರ್ಯ.
 
ಎಂದು ಹೇಳುತ್ತಾನೆ. ದ್ರೋಣ ಹೇಳಲಿಕ್ಕಾಗದೇ ಮತ್ತು ಬಿಡಲಿಕ್ಕಾಗದೇ ‘ಆ ಅಲ್ಪವನ್ನು ಕೇಳಲು ನಾಚಿಕೆ, ಆದರೆ ಅದು ನಿನ್ನ ಹರಣಕ್ಕಿಂತ ಮಿಗಿಲು’ ಎಂದು ಕಾತರತೆಯನ್ನು ಹೆಚ್ಚಿಸುತ್ತಾ ಹೋಗುವ ದ್ರೋಣನು ಕೊನೆಗೆ ಧೈರ್ಯದಿಂದ ಜೀವ ಒತ್ತಿಹಿಡಿದು ಹೇಳುತ್ತಾನೆ.
 
ದಕ್ಷಿಣೆಗೆ ದಕ್ಷಿಣದ ಪೆರ್ ಬೆರಳ್ !
ನಿನ್ನ ಬಿಲ್ ಬಿಜ್ಜಿಗುಸಿರಪ್ಪ ಆ ಪೆರ್ ಬೆರಳ್ !
ಬಾಣಮಂ ಪಿಡಿದು ಸಿಂಜಿನಿಗುಯ್ವ ಪೆರ್ ಬೆರಳ್ !-
 
ಈ ಮಾತು ಕೇಳಿ ಚಕಿತಗೊಳ್ಳುವ ಏಕಲವ್ಯ ಕಳೆದ ರಾತ್ರಿ ಕಂಡ ಕನಸು ನೆನಪಾಗುತ್ತದೆ. ಈ ಕನಸಿನ ನೆನಪನ್ನು ಮೊದಲಿನ ದೃಶ್ಯದಲ್ಲಿ ‘ಇಂತಪ್ಪ ಶುಭದಿನಕಿದೆಂತಪ್ಪ ನಾಂದಿಯೋ’ ಎಂದು ಹೇಳಿಸಿರುವುದು ಕವಿಗಳ ರಂಗತಂತ್ರಕ್ಕೆ ತಾಜಾ ಉದಾಹರಣೆಯಾಗಿದೆ. ಆ ಕನಸಿನಲ್ಲಿ ಕಾಡಿನಲ್ಲಿಯ ಜಿಂಕೆಯನ್ನು ಹುಲಿಯಿಂದ ರಕ್ಷಿಸಲು ಪ್ರಯತ್ನಿಸುವ ಏಕಲವ್ಯನು ತನ್ನ ಬಾಣದಿಂದ ಹುಲಿಯ ಹೊಟ್ಟೆಗೆ ಗುರಿಯಿಟ್ಟು ಹೊಡೆದಾಗ, ನೆತ್ತರ ಬುಗ್ಗೆ ಚಿಮ್ಮುವುದರೊಂದಿಗೆ ಹುಲಿಯ ದೇಹ ಮರೆಯಾಗಿ ನೀಲದೇಹಿ ಪರಮಾತ್ಮ ಹೊರಬರುತ್ತಾನೆ. ಆತನು ‘ನಾನಿನ್ನ ಪರಮಾತ್ಮ’ ಎಂದು ಹೇಳುವುದರೊಂದಿಗೆ ಹೆಡೆಯೆತ್ತಿದ ಹಾವುಗಳಂತಿರುವ ಆತನ ತೋಳುಗಳು ಏಕಲವ್ಯನ ಕೊರಳನ್ನು ಬಿಗಿದಪ್ಪಿ ಹಿಡಿಯುತ್ತವೆ. ವಿವಿಧಾರ್ಥವನ್ನು ಹೊರಹೊಮ್ಮಿಸುವಂತಹ ಈ ಕನಸನ್ನು ಪ್ರತಿಮಾರೂಪದಲ್ಲಿ ಮಹಾಕವಿಗಳು ಸೃಷ್ಟಿಸಿರುವುದು ಈಗಿನ ಪ್ರಸಂಗಕ್ಕೆ ಸಾಂಕೇತಿಕವಾಗಿ ತೋರುತ್ತವೆ.  ಕನಸನ್ನು ಕೇಳಿ ದ್ರೋಣನು ನಿಡುಸುಯ್ದು, ‘ದೇವ ಕಾರ್ಯಕ್ಕೆ ನೀನ್ ಅರ್ಪಿತಾತ್ಮನ್, ವತ್ಸ’ ಎಂದು ಕನಸಿನ ಅರ್ಥವನ್ನು ಒಂದೇ ವಾಕ್ಯದಲ್ಲಿ ಹೇಳುತ್ತಾನೆ. ಅದಕ್ಕೆ ದ್ಯಾನದಿಂದೆಚ್ಚವನಂತೆ ಏಕಲವ್ಯನು
 
ಕೊಳ್ ದಕ್ಷಿಣೆಯನ್ ಇದನ್ ! ಗೆಲ್ಗೆ ಧರ್ಮಂ !
ಗೆಲ್ಗೆ ದೈವೆಚ್ಛೆ! ನಿಮ್ಮ ವಚನಂ ನಿಲ್ಗೆ!
ಮೇಣ್ ಅರ್ಜುನನ ಪೆರ್ ಬಯಕೆಯಂ ಸಲ್ಗೆ!
 
ಎಂದು ಹೇಳುತ್ತಾ ಬತ್ತಳಿಕೆಯಲ್ಲಿದ್ದ ಒಂದು ಅಗಲಬಾಯಿಯ ಬಾಣವನ್ನು ಸಾವಾಧಾನವಾಗಿ ಕಿತ್ತು ತೆಗೆದು ಶಾಂತಗಮನದಿಂದ ದ್ರೋಣನ ಪ್ರತೀಕದ ಬಳಿಗೆ ಸಾರ್ದು ಮೊಳಕಾಲೂರಿ ಬಲಗೈ ಹೆಬ್ಬರಳನ್ನು ಹಾಸು ಬಂಡೆಯ ಮೇಲಿಟ್ಟು ಎಡಗೈ ಬಾಣದಿಂದ ಕತ್ತರಿಸುತ್ತಾನೆ. ನೆತ್ರು ಚಿಮ್ಮಿ ಮಡು ನಿಲ್ಲುತ್ತದೆ. ಆ ಮಡುವಿನ ನಡುವೆ ತುಂಡಾದ ಹೆಬ್ಬರಳು ಬಿಟ್ಟು ಮೇಲೆಳುತ್ತಾನೆ.
 
 
ಮರ್ದ್ದಿಕ್ಕಿ ಬೇಗದಿಂ ಬಂದಪೆನ್, ಆಚಾರ್ಯ.
 
ಎಂದು ಹೇಳಿ ಹೋಗುತ್ತಾನೆ. ಏಕಲವ್ಯ ಅತ್ತ ಹೋದ ನಂತರ ‘ಕ್ಷತ್ರಿಯ ಕುಮಾರ, ನಿನ್ನಸೂಯಾಗ್ನಿತಣಿಯಲಿದೊ ಬಿಯದ ಬಾಲಕನೀ ಬೆರಳ ಬೇಳ್ವೆ !’ ಎಂದು ಅರ್ಜುನನ್ನುದ್ದೇಶಿಸಿ ಮನದಲ್ಲಿ ಹಳಿದುಕೊಳ್ಳುತ್ತಾನೆ. ಹಾಗೆ ಹಳಿದುಕೊಳ್ಳುತಾ ಬಾಗಿ ರಕ್ತದ ಮಡುವಿನಲ್ಲಿ ತುಂಡಾಗಿ ಬಿದ್ದಿರುವ ಹೆಬ್ಬರಳನ್ನು ಎತ್ತಿಕೊಳ್ಳಲು ಹೋದಾಗ, ರಕ್ತದ ಮಡುವಿನಲ್ಲಿ ಏನೋ ಪ್ರತಿಬಿಂಬ ಕಂಡಂತಾಗಿ ‘ಅಯ್ಯೋ ಏಕಲವ್ಯ!’ ಎಂದು ಬೆಚ್ಚಿಬಿದ್ದು ಕೂಗುತ್ತಾನೆ. ಕೂಗೆ ಮದ್ದು ಕಟ್ಟಿಕೊಂಡು ಏಕಲವ್ಯನು ಓಡಿ ಬರುತ್ತಾನೆ. ಅಂದರೆ ಇಲ್ಲಿ ತನ್ನ ವಿದ್ಯೆಗೆ ಅಗತ್ಯವಾಗಿರುವ ಅಂಗವೊಂದು ದೇಹದಿಂದ ಬೇರ್ಪಡೆಯಾಗುವಂತೆ ಮಾಡಿದ ಮಹನೀಯನನ್ನು ಸಹ ಅಂತಹ ನೋವಿನ ಸಮಯದಲ್ಲಿಯೂ ಕಾಳಜಿ ತೆಗೆದುಕೊಳ್ಳಲು ದಾವಿಸುವ ಏಕಲವ್ಯನ ನಿಷ್ಟೆಯನ್ನು ಮೆಚ್ಚುಕೆಯಾಗುವಂತೆ ಮಹಾಕವಿಗಳು ನಿರೂಪಿಸಿದ್ದಾರೆ. ಆಗ ದ್ರೋಣನು ಅಲ್ಲಿ ಕಂಡ ಪ್ರತಿಬಿಂಬದ ಕುರಿತು ಹೇಳುತ್ತಾನೆ.
 
ಬೆರಳ್ ಗೆ ಕೊರಳ್ !
ವತ್ಸಾ, ನಿನ್ನ ಬೆರಳ್ಗೆ ನನ್ನ ಕೊರಳ್ !
 
ಈಗ ಏಕಲವ್ಯನಿಗೊಂದು ಅರ್ಥವಾಗುವುದಿಲ್ಲ. ರಕ್ತದ ಮಡುವಿನ ಪ್ರತಿಬಿಂಬದಲ್ಲಿ ಕಾಣಿಸಿದ್ದನ್ನು ವಿವರಿಸುವ ದ್ರೋಣನು,
 
ಕಂಡುದಾ ಕೆನ್ನೀರ ಕನ್ನಡಿಯೊಳೆನ್ನ ಪಡಿನೆಳಲ್.
ಆ ನಿನ್ನ ಮುಖವಿಕೃತಿಯಂ
ಪ್ರತಿಬಿಂಬದೊಳ್ ಕಂಡು ಬೆರಗಾಗಿರಲ್,
ಖಡ್ಗಮುಷ್ಟಿಯ ಭೀಮ ಹಸ್ತಮೊಂದೊಯ್ಕನೆರಗಿ
ಕಳ್ತರಿಸಿತಾ ನನ್ನ ಪಡಿನೆಳಲ ಕೊರಳಂ!
ಕೆಡೆದುರಳ್ದುದು ಮಂಡೆ!
ಕಂಡೆನ್
ರುಂಡವಿಲ್ಲದಾ ಮುಂಡಮಂ!
ಕಂಡು ನಿನ್ನನ್ ಕೂಗಿಕೊಂಡೆನ್!
ಬಿದಿಯರಿಗುಂ, ನಿನ್ನೀ ಬೆರಳ್‍ಗೆ
ಕೊಳ್ವುದೆಂದೇ ತೋರ್ಪುದಾ ಬಿದಿ
ನನ್ನ ಕೊರಳಂ!
 
ಇಲ್ಲಿ ಮಹಾಕವಿಗಳ ಪ್ರತಿಮಾಕಲ್ಪನೆ ಅದ್ಭುತ, ಅಮೋಘವಾಗಿದೆ. ತರ್ಕಕ್ಕೆ ಅರ್ಥಪೂರ್ಣವಾದ ಕಲ್ಪನೆ ! ಹಿರಿಯ ವಿಮರ್ಶಕರೊಬ್ಬರು ಈ ದೃಶ್ಯಾವಳಿಗೆ ಸಂಬಂಧಿಸಿದಂತೆ ಹೇಳಿರುವುದು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು. ‘ಈ ದೃಶ್ಯಾವಳಿಯು ಕುವೆಂಪುರವರ ಪ್ರತಿಭಾ ಸೃಷ್ಟಿಯ ಮತ್ತು ಪರಿಣತ ದರ್ಶನದ ಫಲ’ ಎಂದು ಅಭಿಪ್ರಾಯಪಡುತ್ತಾರೆ.
 
ನಂತರ ಏಕಲವ್ಯ ಅವರನ್ನು sಸಮಾಧಾನಿಸುತ್ತಾ, ಸೂರ್ಯ ಮುಳುಗಿ ಕತ್ತಲಾಗುವ ಮುನ್ನ ತೆರಳಲು ಕೇಳಿಕೊಳ್ಳುತ್ತಾನೆ. ತೆರಳುವ ಮುನ್ನ ದ್ರೋಣನು ‘ನಿನ್ನಬ್ಬೆ ನೋಡದಿರ್ಕಾ ಬೆರಳ ತುಂಡಂ, ವತ್ಸ ; ನನಗೊದಗದಿರ್ಕೆ ಸೋಕಸಂತೃಪ್ತ ಮಾತೃಶಾಪಂ!’ ಎಂದು ಮಹಾಕವಿಗಳು ಹೇಳಿಸುವುದರಲ್ಲಿಯೇ ಮುಂದೆ ಒದಗಲಿರುವ ಸಂಕಟದ ಸೂಚನೆಯನ್ನು ನೀಡುತ್ತಾರೆ. ತನ್ನ ತಾಯಿಯು ಬರುವುದಕ್ಕಿಂತ ಮೊದಲು ರಕ್ತವನ್ನೆಲ್ಲಾ ತೊಳೆದುಕೊಂಡು ಬಂದು ನಿಂತು ಸೂರ್ಯಾಸ್ತವನ್ನು ದೃಷ್ಟಿಸುತ್ತಾನೆ. ತಾಯಿಯ ಆಗಮನವಾಗುತ್ತದೆ. ತಾಯಿಗೆ ಗೊತ್ತಾಗಬಾರದೆಂದು ತನ್ನ ಬಲಗೈಯನ್ನು ಪಕ್ಕನೆ ಮುಚ್ಚಿಕೊಳ್ಳವುದು ಮತ್ತು ರಕ್ತದ ಮಡು ಕಾಣಿಸದಂತೆ ಅಡ್ಡ ಬಂದು ನಿಲ್ಲುತ್ತಾ ಗುರುದಕ್ಷಿಣೆ ಪ್ರಸಂಗವನ್ನು ಮರೆಮಾಚಲು ಪ್ರಯತ್ನಿಸುತ್ತಾನೆ. ಎಲ್ಲಾ ಪ್ರಯತ್ನಗಳು ವಿಫಲವಾಗಿ ತಾಯಿಯ ಕಣ್ಣಿಗೆ ರಕ್ತದ ಮಡುವಿನಲ್ಲಿ ಬಿದ್ದಿರುವ ತನ್ನ ಮಗನ ತುಂಡಾದ ಬೆರಳನ್ನು ನೋಡಿ ಶೋಕದಲ್ಲಿ
ಉಕ್ಕಿದ ಕಡುಕೋಪದಲ್ಲಿ
ಆರ್ಗೊ ಬಲಿ ನನ್ನ ಕಂದನ ಬೆರಳ್
ಬಲಿಯಕ್ಕೆ ಆ ಪಾಪಿಯ ಕೊರಳ್!
 
ಎಂದು ಶಾಪಹಾಕುತ್ತಾಳೆ. ಯಾವುದು ಆಗಬಾರದೆಂದು ತೆರಳುವಾಗ ದ್ರೋಣನು ಎಚ್ಚರಿಸಿದ್ದನೋ ಅದುವೇ ನಡೆಯಿತಲ್ಲ, ಕರ್ಮದ ಪಾಂಗಿನ ಜತೆಯಲ್ಲಿ ಮಾತೃಶಾಪವೂ ಕೂಡಿತು. ಏಕಲವ್ಯನು ‘ದುಡುಕಿದವ್, ಅಬ್ಬೆ, ನನ್ನನ್ನುಂ ಕೊಳ್ಳದೆಯೆ ಬಿಡದು ನಿನ್ನೀ ಶಾಪಂ!’ ಎಂದು ಸಂಕಟಪಡುತ್ತಾನೆ.  ಗುರುಕ್ಷಮೆಯನ್ನು ಬೇಡಿ, ಆದ ಪ್ರಮಾದಕ್ಕೆ ಪಾದಕ್ಕೆ ನಮಸ್ಕರಿಸಿ ಬರಲು ತಾಯಿಯ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಾ ವಿನಂತಿಸಿಕೊಳ್ಳುತ್ತಾನೆ. ಹಿನ್ನಲೆಯೊಂದನ್ನು ಅರಿಯದ ಮುಗ್ದ ತಾಯಿಯು ‘ನುಡಿಸಿತೆನ್ನಂ, ಬಚ್ಚ, ವಾತ್ಸಲ್ಯಮುರಿಸಿದಾ ಮಾತೃಕೋಪಂ’ ಎಂದು ಕೋಪಗೊಂಡವಳನ್ನು ಸಮಾಧಾನಪಡಿಸುತ್ತಾನೆ. ದ್ರೋಣರ ಮೂರ್ತಿಯ ಮುಂದೆ ಪದ್ಮಾಸನ ಹಾಕಿಕೊಂಡು ಕುಳಿತುಕೊಳ್ಳುತ್ತಾನೆ. ಕತ್ತಲೆ ದಟ್ಟಯಿಸಿ ಕವಿದು ಭೂಮಿಯನ್ನೆಲ್ಲ ವ್ಯಾಪಿಸುವುದರೊಂದಿಗೆ ಕತ್ತಲೆಯಲ್ಲಿ ಲೀನವಾಗುತ್ತಾನೆ. ಗಿರಿ ವಿಪಿನ ಭೂಮ್ಯಾಕಾಶಗಳನ್ನು ತುಂಬುವಂತೆ ಪ್ರಾರ್ಥನಾ (ಮಹಾಕವಿಗಳ ಗುರುಸ್ತುತಿ) ಗಾನವೊಂದು ‘ಅಂತರತಮ ನೀ ಗುರು, ಹೇ ಆತ್ಮತಮೋಹಾರಿ!…’ ಹಿನ್ನಲೆಯಲ್ಲಿ ಕೇಳಿಬರುತ್ತದೆ.
 
ಪ್ರತಿಮೆ ಮತ್ತು ಪ್ರತಿಕಗಳನ್ನು ಬಳಸಿಕೊಳ್ಳುತ್ತಾ ಬೆಳೆಯುವ ನಾಟಕವು ಏಕಲವ್ಯನ ಪಾತ್ರದ ಮೂಲಕ ಸಾಧಕರ ಜೀವನದಲ್ಲಿ ಕಂಡು ಬರುವ ಆತ್ಮಸಮರ್ಪಣೆಯ ಪೂರ್ಣಾಹುತಿಗೆ ಪೂರ್ಣಪ್ರತಿಮೆಯಾಗಿದೆ. ಅದಕ್ಕಾಗಿಯೇ ಈ ದೃಶ್ಯಕ್ಕೆ ‘ಯಜ್ಞ’ವೆಂದು ಹೆಸರಿಟ್ಟಿರುವುದು ಅರ್ಥಪೂರ್ಣವಾಗಿದೆ. ಮಾತೃವಾತ್ಸಲ್ಯದ ಸಾಕಾರ ಮೂರ್ತಿಯಾಗಿ ಮುಗ್ದ ತಾಯಿಯ ಪಾತ್ರವಂತೂ ಜೀವಂತಿಕೆಯಿಂದ ಕೂಡಿದೆ. ಮುಗ್ದಹೃದಯದ ನೋವಿನಲ್ಲಿ ಹಾಕುವ ಶಾಪವು ದ್ರೋಣನಂತಹ ಸಾಧಕತಪಸ್ವಿಗೂ ಶಾಪವಾಗಿ ಪರಿಣಮಿಸುತ್ತದೆ. ದ್ರೋಣರ ಪಾತ್ರವಂತೂ ಹಂಗಿನ ಅರಮನೆಯ ಅಗುಳಿಗಾಗಿ ಕ್ರೂರತನದ ಅಪರಾಧವನ್ನು ಅನಿವಾರ್ಯವಾಗಿ ಮಾಡಬೇಕಾಗಿ ಬರುವ ಪ್ರಸಂಗದಲ್ಲಿ ಮನದಲ್ಲಿ ನಡೆಯುವ ತುಮುಲವನ್ನು ಮಹಾಕವಿಗಳ ಲೇಖನಿಯಲ್ಲಿ ಅದ್ಭೂತವಾಗಿ ಮೂಡಿ ಬಂದಿದೆ. ಅಶ್ವತ್ಥಾಮನ ಪಾತ್ರವಂತೂ ಕೆಲವೇ ಸಮಯ ರಂಗದಲ್ಲಿ ಬಂದು ಹೋದರೂ ನಿಷ್ಟುರತೆಯಿಂದ ಮೆಚ್ಚುಗೆ ಪಡೆಯುತ್ತದೆ. ಇಲ್ಲಿ ಪ್ರಕೃತಿಯೂ ಸಹ ಒಂದು ಪಾತ್ರವಾಗಿಯೆಂಬಂತೆ ಮಹಾಕವಿಗಳು ಬಳಸಿಕೊಂಡಿದ್ದಾರೆ. ರಂಗಕೃತಿಯ ಕೊನೆಯಲ್ಲಿ ಟಿಪ್ಪಣಿಕೆ ವಿಭಾಗದಲ್ಲಿ ‘ಮಹಾಭಾರತದಲ್ಲಿ ಏಕಲವ್ಯನ ಕಥೆ’ಯನ್ನು ಸವಿವರವಾಗಿ ಹೇಳುತ್ತಾರೆ. ಇದರಿಂದ ಕೃತಿಯನ್ನು ಅರ್ಥೈಸಿಕೊಳ್ಳಲು ಸಹಾಯಕಾರಿಯಾಗುವಂತೆ ಮಾಡಿದ್ದಾರೆ. ನಾಟಕ ರಚನಾ ವಿಧಾನದಲ್ಲಿಯೂ ಹೊಸತನವಿದೆ. ಕನ್ನಡ ರಂಗಸಾಹಿತ್ಯದಲ್ಲಿ ಇದೊಂದು ಅದ್ವಿತೀಯವಾದ ರಂಗಕೃತಿಯೆಂದು ಅಂದಿನಿಂದ ಇಂದಿನವರೆಗೂ ಹೆಸರಾಗಿದೆ. ಇಂತಹ ಅಪೂರ್ವ ರಂಗಕೃತಿಯನ್ನು ರಂಗದಲ್ಲಿ ಅಳವಡಿಸಲು ಇಂದಿಗೂ ಹಲವಾರು ರಂಗಕರ್ಮಿಗಳು ಹಿಂದೇಟು ಹಾಕುವುದುಂಟು.
 
ಇದೆಲ್ಲಾ ಉಸಾಬರಿಯ ನಡುವೆ ಹಿರಿಯರಂಗಕರ್ಮಿಗಳಾದ ಸಿ.ಬಸವಲಿಂಗಯ್ಯನವರು ಕ್ರಿ.ಶ.2000ನೇ ವರ್ಷದಲ್ಲಿ ಸಾಣೇಹಳ್ಳಿಯ ಶಿವಸಂಚಾರ ತಂಡಕ್ಕಾಗಿ ಈ ರಂಗಕೃತಿಯನ್ನು ನಿರ್ದೇಶನದೊಂದಿಗೆ ಆಧುನಿಕ ಕಾಲಕ್ಕೆ ತಕ್ಕಂತಹ ರಂಗಸಜ್ಜಿಕೆ ವಿನ್ಯಾಸಗೊಳಿಸಿ ಪ್ರಯೋಗ ಮಾಡಿದ್ದನ್ನು ಧಾರವಾಡದ ಕಲಾಭವನದಲ್ಲಿ ನಾನು ನೋಡಿದ್ದನ್ನು ಮರೆಯಲಾಗಿಲ್ಲ. ಎಲ್ಲೆಡೆಗೂ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದ್ದರಿಂದ ಪ್ರೇರೆಪಿತಗೊಂಡು ಮುಂದೆ ಅವರು ಶಿವಮೊಗ್ಗ ಸೀಮೆಯ ಶಿರಾಳಕೊಪ್ಪದ ಸಿರಿಯಾಳ ಕಲಾತಂಡದ ಗುರುಪ್ರಸಾದ ಅವರಿಗಾಗಿ ಮತ್ತೊಮ್ಮೆ ನಿರ್ದೇಶನ ಮಾಡಿದ ಪ್ರಯೋಗವನ್ನು 29.12.2012ರಂದು ನಾನು ಮೈಸೂರು ರಂಗಾಯಣದ ವನರಂಗದಲ್ಲಿ ನೋಡಿ ಬೆರಗುಗೊಂಡಿದ್ದೇನೆ. ಬಸವಲಿಂಗಯ್ಯನವರ ಪ್ರಯೋಗದಲ್ಲಿ ಮನಸ್ಸು, ಅರ್ಜುನ, ವನದೇವತೆಯರು, ತದಿಲಸಾಥಿ ಪಾತ್ರಗಳು ಜೀವತಳೆದು ರಂಗದಲ್ಲಿ ಉದ್ಭವಿಸಿದ್ದನ್ನು ನೋಡಿ ವಿಸ್ಮಯಗೊಂಡಿದ್ದೇನೆ. ಎಲ್ಲಾ ಕಾಲಮಾನಕ್ಕೂ ಹೊಂದುವಂತೆ ರಂಗಕೃತಿ ರಚನೆ ಮಾಡಿದ ಮಹಾಕವಿಗಳ ಅನಿಕೇತನದ ಚೇತನಕ್ಕೆ ಸಾವಿರದ ಪ್ರಣಾಮಗಳು !
 
(…ಮುಂದುವರೆಯುತ್ತದೆ)
 
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

12 Comments
Oldest
Newest Most Voted
Inline Feedbacks
View all comments
samsa ranga patrike
samsa ranga patrike
11 years ago

ಉತ್ತಮ ಬರಹ…ವಸ್ತುನಿಷ್ಟವಾಗಿದೆ !

Hipparagi Siddaram
Hipparagi Siddaram
11 years ago

ಧನ್ಯವಾದಗಳು ಗುರುಗಳೇ….

Jayaprakash Abbigeri
Jayaprakash Abbigeri
11 years ago

ಸಿದ್ಧರಾಮ್, ಬಹಳ ತಾಳ್ಮೆಯಿಂದ ಬರೆಯುತ್ತಿದ್ದೀರಿ…involvement ಬೇಕೆನಿಸುತ್ತದೆ…..ಸರಣಿ ಚೆನ್ನಾಗಿದೆ ಬರುತ್ತಿದೆ. ಶುಭಾಶಯಗಳು !

Hipparagi Siddaram
Hipparagi Siddaram
11 years ago

ಧನ್ಯವಾದಗಳು ಸರ್…

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
11 years ago

ಉತ್ತಮ ವಿಮರ್ಶೆಯೊಂದಿಗೆ ದೃಷ್ಯ ವಿಶ್ಲೇಷಣೆ ಸೊಗಸಾಗಿ ಮೂಡಿ ಬಂದಿದೆ. ಅಧ್ಯಯನಕ್ಕೆ ಸೂಕ್ತವಾದ ಲೇಖನ ಇದಾಗಿದೆ. ದೃಷ್ಯಗಳ ಹೆಸರಾದ ಗುರು, ಕರ್ಮ, ಯಜ್ಞ- ಇವುಗಳ ಸಮಂಜಸತೆಯನ್ನು ಸೂಚಿಸುತ್ತ, ನಾಟಕಕಾರರ ಒಳದೃಷ್ಟಿ ಪಾತ್ರಗಳ ಆಂತರಿಕ ತುಮುಲಗಳನ್ನು ಚಿತ್ರಿಸುತ್ತ ನಾಟಕವನ್ನೇ ನೋಡಿದ ಅನುಭವವನ್ನು ಈ ಲೇಖನದ ಮೂಲಕ ನಮಗೆ ನೀಡಿದ್ದೀರ. ಧನ್ಯವಾದಗಳು ಸರ್. 

Hipparagi Siddaram
Hipparagi Siddaram
11 years ago

ನಿಮ್ಮ ಪ್ರತಿಕ್ರಿಯೆಗೆ ನಾನು ಚಿರಋಣಿ ಮೇಡಮ್.ಜಿ ! ನಿಮ್ಮಂಥಹ ಜಾಗೃತ ಓದುಗರಿದ್ದಾಗ ಬಹಳ ಎಚ್ಚರಿಕೆಯಿಂದ ಬರೆಯಬೇಕೆನ್ನುವ ಸಂದೇಶವನ್ನು ಪರೋಕ್ಷವಾಗಿ ಹೇಳಿದ್ದೀರಿ. ನೆನಪಿನಲ್ಲಿಟ್ಟುಕೊಂಡು ಸಾಗುತ್ತೇನೆ. ಶುಭದಿನ !

Venkatesh
Venkatesh
11 years ago

Wonderful

Hipparagi Siddaram
Hipparagi Siddaram
11 years ago
Reply to  Venkatesh

ThannQ

Gaviswamy
11 years ago

ಕೊಳ್ ದಕ್ಷಿಣೆಯನ್ ಇದನ್! ಗೆಲ್ಗೆ 
       ಧರ್ಮಂ
ಗೆಲ್ಗೆ ದೈವೇಚ್ಛೆ! ನಿಮ್ಮ ವಚನಂ
         ನಿಲ್ಗೆ
ಮೇಣ್ ಅರ್ಜುನನ ಪಿರ್ಬಯಕೆಯಂ ಸಲ್ಗೆ

ಸವ್ಯಸಾಚಿ, ಗಾಂಡೀವಿ ಎಂದೆಲ್ಲಾ ಕರೆಯಲ್ಪಡುವ ಅರ್ಜುನನ ಪೊಳ್ಳು ಹೀರೋಗಿರಿಯ ಮುಂದೆ ಏಕಲವ್ಯ ಪರ್ವತದಂತೆ ಕಾಣುತ್ತಾನೆ.
ಅರ್ಜುನನ ಸಣ್ಣತನ, ದ್ರೋಣಾಚಾರ್ಯರ ಧರ್ಮಸಂಕಟ, ಏಕಲವ್ಯನ ಗುರುಭಕ್ತಿ ಮತ್ತು ನಿಷ್ಕಲ್ಷ ಸಮರ್ಪಣೆ ಹಾಗೂ ಅವನ ತಾಯಿಯ ಮುಗ್ಧ ಮಮತೆಯನ್ನು ಮಹಾಕವಿಗಳು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಮಹಾಭಾರತದಲ್ಲಿ ಬರುತ್ತದೆ ಅತಿರಥ ಮಹಾರಥರುಗಳಿಗಿಂತ ಏಕಲವ್ಯನಂಥ ಚಿಕ್ಕ ಪಾತ್ರಗಳೇ ಹೆಚ್ಚು ನೆನಪಿನಲ್ಲುಳಿಯುತ್ತವೆ. ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ ಸರ್. ಧನ್ಯವಾದಗಳು.

 

Hipparagi Siddaram
Hipparagi Siddaram
11 years ago
Reply to  Gaviswamy

ಡಾ.ಗವಿಸ್ವಾಮಿಯವರೇ, ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಕೃತಜ್ಞತೆಗಳು. ಶುಭದಿನ

parthasarathy
11 years ago

ಉತ್ತಮ ವಿಮರ್ಷಾಬರಹ

Hipparagi Siddaram
Hipparagi Siddaram
11 years ago
Reply to  parthasarathy

ಧನ್ಯವಾದಗಳು !

12
0
Would love your thoughts, please comment.x
()
x