ಆತ್ಮೀಯ ಓದುಗಪ್ರಭುಗಳೇ,
ಇಲ್ಲಿಯವರೆಗೆ ನಾವು ಕವಿ ಹೃದಯದ ಮಹಾಕವಿ ಕುವೆಂಪುರವರ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಕಥಾವಸ್ತುಗಳೊಂದಿಗೆ ಅವರ ವಾಙ್ಮಯದ ವಿಸ್ತಾರತೆಯಲ್ಲಿ ಅರಳಿದ ರಂಗ(ಕೃತಿ)ಕುಸುಮಗಳು ಕರುನಾಡಿನ ಸಾಹಿತ್ಯದ ಸಂದರ್ಭದಲ್ಲಿ ಮಹತ್ವಪೂರ್ಣವಾಗಿರುವುದನ್ನು ನಾವೀಗಾಗಲೇ ಗಮನಿಸಿದ್ದೇವೆ. ಅವರ ರಂಗಕೃತಿಗಳು ರಚನೆಯಾದಂದಿನಿಂದ (ಶತಮಾನದುದ್ದಕ್ಕೂ) ವಿಶ್ವದ ಹಲವೆಡೆ ಅನೇಕ ಸಾಂಸ್ಕೃತಿಕ ವಾಗ್ವಾದಗಳಿಗೆ ಎಡೆಮಾಡಿಕೊಡುವುದರೊಂದಿಗೆ ತಮ್ಮ ತಾಜಾತನವನ್ನು ಕಾಪಿಟ್ಟುಕೊಂಡಿವೆ. ಹಾಗೆಯೇ ರಂಗಕೃತಿಗಳ ವಸ್ತು, ಭಾಷೆ, ಪಾತ್ರ, ಸನ್ನಿವೇಶಗಳನ್ನು ಮಾತ್ರ ಗಮನಿಸದೆ ಅವುಗಳ ರೂಪಕ, ಅರ್ಥ, ಅನುಸಂಧಾನ ಮತ್ತು ಮುನ್ನೋಟಗಳನ್ನು ನಾವು ಹೆಚ್ಚು ಹೆಚ್ಚು ಅರ್ಥಮಾಡಿಕೊಂಡಂತೆಲ್ಲ ಅವುಗಳ ಮಹತ್ವ ಮನವರಿಕೆಯಾಗುತ್ತದೆ. ಮತ, ಧರ್ಮ, ಯುದ್ಧ, ಹಿಂಸೆ, ಭೋಗ, ಸುಖಗಳಂತಹ ಸಂಗತಿಗಳು ವೈಯಕ್ತಿಕ ಮತ್ತು ಸಾಮಾಜಿಕ ಜೀವನದ ನಿಜದ ನೆಲೆಗಳು ಎಂದು ಭ್ರಮಿಸಿಕೊಂಡ ಆಧುನಿಕ ಸಮಾಜದ ಹೃದಯ ಮತ್ತು ಯೋಚನಾಶಕ್ತಿಗಳನ್ನು ಬದಲಾಯಿಸಲು ಈ ರಂಗಕೃತಿಗಳು ಸಮರ್ಥವಾಗಿವೆಯೆಂಬುದು ಎಲ್ಲರೂ ಒಪ್ಪುವಂತಹ ಸಂಗತಿಯಾಗಿದೆ.
ಇಂತಹ ಸರ್ವರೂ ಸರ್ವಕಾಲಕ್ಕೂ ಒಪ್ಪುವಂತಹ ಕಥಾವಸ್ತುಗಳನ್ನಿಟ್ಟುಕೊಂಡು ಕೇವಲ ತಜ್ಞರು, ಪ್ರಾಜ್ಞರು, ಪ್ರೌಢರು, ಚಿಂತಕರು ಮುಂತಾದ ವರ್ಗಗಳಿಗೆ ಸೀಮಿತಿಗೊಳ್ಳದ ಶ್ರಮ ಸಂಸ್ಕೃತಿಯ ಸುಧಾರಕರಾಗಿ, ಸೃಜನಶೀಲ ಶಕ್ತಿಯ ಪ್ರತಿಭಾಮೂಸೆಯಿಂದ ಹೊರಹೊಮ್ಮಿದ ಚಾಟು ರಂಗವಿಹಾರಿ-ರಂಗಚೇತನವಾಗಿರುವ ಅವರು ಚಿಣ್ಣರಿಗಾಗಿಯೂ ಸಹ ಕೆಲವು ರಂಗಕೃತಿಗಳನ್ನು ರಚಿಸಿದ್ದಾರೆ. ಹಾಗೆ ಅವರ ಪ್ರತಿಭಾಲೇಖನಿಯಿಂದ ಹೊರಬಂದ ರಂಗಕೃತಿಗಳಲ್ಲಿ ಮೊದಲಿಗೆ ನಾವು ‘ಮೋಡಣ್ಣನ ತಮ್ಮ’ ಎಂಬ ಏಕಾಂಕ ಮಾದರಿಯ ಕೃತಿಯ ಕುರಿತು ತಿಳಿದುಕೊಳ್ಳೋಣ.
ಮೋಡಣ್ಣನ ತಮ್ಮ (1926) :
ಮೋಡದ ಜೊತೆಗೆ ಆಟವಾಡ ಬಯಸುವ ಪುಟ್ಟ ಹುಡುಗ, ಮನುಷ್ಯರ ದುರಾಶೆಗೆ ಬಲಿಯಾಗುವ ಕಾಡು, ಮುಕ್ತವಾಗಿ ಆಕಾಶದಲ್ಲಿ ತೇಲಿ ಓಡಾಡುವ ಮೋಡ ಇವು ನಿಸರ್ಗದ ಸಹಜವಾದ ಮೂರು ರೂಪಗಳು. ಮಹಾಕವಿಗಳ ವಿಶ್ವಮಾನವ ಸಂದೇಶ, ಪೂರ್ಣದೃಷ್ಟಿ ಮತ್ತು ಅನಿಕೇತನವಾಗುವ ಪ್ರಕ್ರಿಯೆಯ ಬೀಜಗಳು ಅವರ ಈ ರಂಗಕೃತಿಯಲ್ಲಿ ಮೊಳಕೆಯೊಡೆಯುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಎಲ್ಲಾ ಬಂಧನಗಳನ್ನು ದಾಟಿ ವಿಶ್ವಮಾನವರಾಗುವ ಸಂದೇಶದ ಸುಳಿವು/ಹೊಳವು ಮುಂತಾದ ಸಂಗತಿಗಳನ್ನು ನಾವಿಲ್ಲಿ ಕಾಣಬಹುದು. ಮಕ್ಕಳಲ್ಲಿ ಸಹಜವಾಗಿರುವ ಕಲ್ಪನಾಶಕ್ತಿಯನ್ನು ಪ್ರಚೊದಿಸುವ ಕಥಾವಸ್ತುವೊಂದನ್ನು ಮಹಾಕವಿಗಳು ಆರಿಸಿಕೊಂಡಿರುವುದನ್ನು ನಾವು ಗಮನಿಸಬಹುದು. ಆಗಸದಲ್ಲಿ ತೇಲುತ್ತಿರುವ ಮೋಡ, ಮಿನುಗುತ್ತಿರುವ ನಕ್ಷತ್ರ, ಬೀಸುವ ಗಾಳಿ, ಕಲವರದ ಹಕ್ಕಿಗಳು ಮುಂತಾದವುಗಳನ್ನು ಕಂಡು ಕ್ಷಣಕಾಲವಾದರೂ ಕಲ್ಪನಾಲೋಕದಲ್ಲಿ ವಿಹರಿಸದ ಚಿಣ್ಣರೇ ಇಲ್ಲವೆನ್ನಲ್ಲಡ್ಡಿಯಿಲ್ಲ. ಅಂತಹ ಚಿಣ್ಣರ ಕಾಯದ ಹುಡುಗನೋರ್ವನನ್ನು ಪ್ರಕೃತಿ ಲೋಕದ ವಿಹಾರಕ್ಕೆ ಇಲ್ಲಿ ಕರೆದೊಯ್ದಿರುವುದು ಕವಿಗಳ ಪ್ರಕೃತಿ ಪ್ರೇಮದ ಕುರಿತಾಗಿರುವ ಹೆಮ್ಮೆಯ ಸಂಗತಿ. ಕುತೂಹಲ ಮತ್ತು ಮಹತ್ವದ ಸಂಗತಿಯೆಂದರೆ ಮಹಾಕವಿಗಳಿಂದ ಚಿಣ್ಣರಿಗಾಗಿ ರಚಿತಗೊಂಡ (1926) ಮೊದಲ ಗೀತ(ಹಾಡಿನ ರೂಪದ)ಪ್ರಧಾನ ಚಿಕ್ಕ-ಚೊಕ್ಕದಾದ ರಂಗಕೃತಿಯಾಗಿ ‘ಮೋಡಣ್ಣನ ತಮ್ಮ’ ಹೊರಹೊಮ್ಮಿದೆ. ಈ ಕೃತಿಯ ಮೊದಲ ಮುದ್ರಣವು 1926ರಲ್ಲಿ, ಎರಡನೇಯ ಮುದ್ರಣವು 1967, ಮೂರನೇಯ ಮುದ್ರಣವು 1985, ನಾಲ್ಕನೇಯ ಮುದ್ರಣವು 1992, ಐದನೇಯ ಮುದ್ರಣವು 1997ರಲ್ಲಿ ಕಂಡಿದೆ. ಉದಯರವಿ ಪ್ರಕಾಶನದಿಂದ 2005ರಲ್ಲಿ ಪ್ರಕಟಗೊಂಡಿರುವುದು ಇತ್ತೀಚೆಗಿನ ಪ್ರಕಟಣೆಯಾಗಿದೆ.
ದೃಶ್ಯದಾರಂಭದಲ್ಲಿ ಹುಡುಗನೋರ್ವನು ಸುತ್ತಲೂ ನೋಡುತ್ತ ಬಂದು, ನೀಲಿಯಾಗಸದ ಕಡೆಗೆ ನೋಡಿ ಸಂತೋಷದಿಂದ ಮುಗುಳ್ನಗೆಯಿಂದ ಅಲ್ಲಿ ತೇಲುತ್ತಿರುವ ಮೋಡವನ್ನು ನೋಡುತ್ತಾ, ಅದು ತೇಲುತ್ತಾ ಮುಂದೆ ಎಲ್ಲಿಗೆ ಹೋಗುತ್ತದೆ, ಹೋಗುತ್ತಾ ಅದು ಮುಂದೆನು ಮಾಡುತ್ತದೆ ಎಂದು ಅದರ ಕುರಿತಾಗಿ ಕಲ್ಪನೆ ಮಾಡಿಕೊಳ್ಳುತ್ತಾ ಅದನ್ನು ತನ್ನಣ್ಣನಂತೆ ಭಾವಿಸಿಕೊಂಡು ಹೀಗೆ ಕೂಗುತ್ತಾನೆ :
ಓ ಮೋಡಣ್ಣಾ, ಓ ಮೋಡಣ್ಣಾ,
ನಾನು ಬರುವೆ ಕೈ ನೀಡಣ್ಣಾ !
ಎಂದು ನೀಲಿ ಮುಗಿಲಿನಲ್ಲಿ ತೇಲುತ್ತಿರುವ ಬೆಳ್ಳನೆಯ ಬಿಳಿ ಮೋಡದತ್ತ ಕೈಯೆತ್ತಿ ತನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವಂತೆ ಮುಗ್ದವಾಗಿ ಕೇಳಿದಾಗ, ಮುಗ್ದ ಮನದ ಮಾತುಗಳಿಗೆ ಉತ್ತರಿಸುವ ಮೋಡವು ಮೇಲಿನಿಂದ ಹೇಳುತ್ತದೆ.
ಬರಬೇಡಣ್ಣಾ ! ಬರಬೇಡಣ್ಣಾ !
ಅವ್ವನು ಬೈವಳು ನೀ ನೋಡಣ್ಣಾ !
ಮುಗ್ದ ಮನದ ಮಗುವು ತನ್ನ ಕಲ್ಪನೆಯಲ್ಲಿ ಮೋಡದೊಂದಿಗೆ ಮಾತಾಡುವುದರೊಂದಿಗೆ, ಮೋಡದ ಕಡೆಯಿಂದ ಹೇಳಿಸುವ ಮಾತುಗಳು, ಸುಮ್ಮನೆ ಹೊರಗೆ ತಿರುಗಾಡಬೇಡವೆಂದು ಬಾಲ್ಯದಲ್ಲಿ ಗುಮ್ಮನ ಕರೆಯುವೆನೆಂದು ಹೇಳುತ್ತಾ ಹೊರಗೆ ಹೋಗದಂತೆ ಮಾಡುವ ಅವ್ವನನ್ನು ನೆನಪಿಸಿಕೊಳ್ಳುವಂತೆ ಪರೋಕ್ಷವಾಗಿ ಹೇಳಿರುವುದು ಮಹಾಕವಿಗಳ ಕಲ್ಪನಾಲಹರಿಗೆ ಒಂದು ಉತ್ಕೃಷ್ಟ ಉದಾಹರಣೆಯೆನ್ನಬಹುದು.
ನಿನ್ನಂತೆ ನಾನು ಸ್ವತಂತ್ರನಲ್ಲ, ನೀನೋ ಸಂತೋಷದಿಂದ ಎತ್ತರದಲ್ಲಿ ತೇಲುತ್ತಾ, ಮನಸ್ಸಿಗೆ ಬಂದಂತೆ ಹಾರಾಡುವುದರೊಂದಿಗೆ ಬಳಲದೆ ಆಟವನ್ನಾಡುವಿ. ಮಿಂಚಿನ ಹತ್ತಿರ ನಿಂತು, ಅದನ್ನೇ ಬಳೆಯನ್ನಾಗಿ ಧರಿಸಿಕೊಂಡಿರುವಿ, ನೀನಾದರೋ ಗುಡುಗಿನ ಜೊತೆಗೆ ಆಟವಾಡುತ್ತಾ ಗುಡುಗಾಟವ ಮಾಡುವಿ. ದೂರದಲ್ಲಿರುವ ಗಿರಿ-ಬೆಟ್ಟಗಳನ್ನು ಏರುತ್ತಾ, ದೂರದಲ್ಲಿರುವ ಊರುಗಳನ್ನೇಲ್ಲಾ ನೋಡುವಿ. ಹೀಗಿರುವಂತಹ ನಿನ್ನನ್ನು ಕಂಡು ನನಗೆ ನನ್ನ ಜನ್ಮದ ಕುರಿತಾಗಿ ಬೇಜಾರಾಗಿದೆ ಎಂದು ನಿಂದಿಸಿಕೊಳ್ಳುತ್ತಾನೆ. ನಿನಗಿರುವಂತಹ ಸೌಭಾಗ್ಯವನ್ನು ಸವಿಯುವಾಶೆಯಲ್ಲಿ ನಿನ್ನಲ್ಲಿಗೆ ಬರುವೆನೆಂದಾಗ ಮೋಡಣ್ಣನು ಮತ್ತದೇ ‘ಅವ್ವನು ಬಯ್ವಳು ಬರಬೇಡಣ್ಣ’ ಎಂದು ಹಿತನುಡಿಯನ್ನಾಡುತ್ತಾನೆ.
ಆಗ ಹುಡುಗನು ನಿರಾಶೆನಾಗಿ ಸುತ್ತಲೂ ನೋಡುತ್ತಿರಲು ಗಿರಿಯನ್ನು ಕಂಡು ಅದರ ಸಹಾಯವನ್ನು ಕೇಳುತ್ತಾನೆ.
ಏ ಗಿರಿಯಣ್ಣಾ, ನೀ ಹೇಳಣ್ಣಾ :
ನೀನಾಡುವುದನು ಮನ್ನಿಪನಣ್ಣಾ !
ಗೆಳೆಯನು ನಾ ನಿನಗಲ್ಲವೆ, ಅಣ್ಣಾ ?
ಅಲೆಯೆನೆ ನಿನ್ನೊಡನನುದಿನವಣ್ಣಾ ?
ಹೀಗೆ ಹೇಳುತ್ತಾ ಗಿರಿಯೊಂದಿಗೆ ತನ್ನ ಸುಮಧುರ ಸಂಬಂಧವನ್ನು ಜ್ಞಾಪಿಸಿಕೊಳ್ಳುತ್ತಾನೆ. ಉದಯರವಿಯ ಬೆಳಗಿನಿಂದ ನಿನ್ನನ್ನು ನೋಡುತ್ತಾ ದಿನಗಳನ್ನು ಕಳೆದಿರುವೆನು. ಹೃದಯದ ಆನಂದವನ್ನು ನಿನ್ನಿಂದಲೇ ನಾನು ಪಡೆದಿರುವೆನು. ನಿನಗಾಗಿ ಅಂದು ನಾನು ಕೊಳಲನ್ನು ಊದಿದಾಗ ನೀನು ‘ತಮ್ಮಾ’ ಎಂದು ಕರೆದಾಗ ನಾನು ‘ಅಣ್ಣಾ’ ಎಂದು ಪ್ರೀತಿಯಿಂದ ಕರೆದಿರುವುದನ್ನು ನಾನು ಮರೆತಿಲ್ಲ. ಕೆಲವೊಮ್ಮೆ ನನ್ನನ್ನು ಅಣಕಿಸಿ ಕೂಗಿದಾಗ ನಾನು ನಿನ್ನನ್ನು ಬೈಯದೆ ಕ್ಷಮಿಸಿದ್ದು ಹೇಗೆ ಮರೆಯುವಿ. ಅಂದಿನ ಗೆಳೆತನದ ನಂಟು ಎಂದಿಗೂ ಹೋಗುವುದಿಲ್ಲ. ಹೀಗಿರುವಾಗ ನೀನು ಮೋಡಣ್ಣನಿಗೆ ಹೇಳಿ ನನ್ನನ್ನು ಕರೆದುಕೊಂಡು ಹೋಗಲು ಹೇಳು ಎಂದು ಸಹಾಯವನ್ನು ಕೇಳಿಕೊಳ್ಳುತ್ತಾ ಕುತೂಹಲದಿಂದ ತೇಲುತ್ತಿರುವ ಮೋಡಣ್ಣನನ್ನು ನೋಡುತ್ತಾ ನಿಲ್ಲುತ್ತಾನೆ. ಬಾಲಕನ ವಿನಂತಿಯ ಮೊರೆಯನ್ನು ಕೇಳಿ ಅಲ್ಲಿಯವರೆಗೂ ಮೌನವಾಗಿದ್ದ ಗಿರಿಯು ಮೌನ ಮುರಿದು ಹುಡುಗನ ಪರವಾಗಿ ಮೋಡಣ್ಣನಿಗೆ ಹೇಳುತ್ತದೆ.
ಎಲೆ ಮೋಡಣ್ಣಾ, ಬಾಲಕ ಸಣ್ಣ ;
ಪಾಪಾ, ಹೋಗಲಿ ; ಕರೆದೊಯ್ಯಣ್ಣ !
ಎಂದು ವಿನಂತಿಸಿಕೊಳ್ಳುತ್ತಾ, ಗಿರಿಯು ಮೋಡದ ಶಕ್ತಿ-ಸಾಮಥ್ರ್ಯಗಳ ಕುರಿತು ಹೆಮ್ಮೆಯಿಂದ ಹೇಳುತ್ತದೆ. ‘ಆವಿಯಾಗುವ ಸಮುದ್ರದ ಸಂಪೂರ್ಣ ನೀರನ್ನು ಹೊತ್ತುಕೊಳ್ಳುವ ನೀನು ಇಂತಹ ಕಿರಿಯ ಹುಡುಗನ ಭಾರವನ್ನು ಹೊತ್ತುಕೊಳ್ಳಲಾರೆಯಾ, ಸಿಡಿಲು-ಮಿಂಚುಗಳನ್ನು ನಿರಂತರವಾಗಿ ನಿಯಂತ್ರಣದಲ್ಲಿಟ್ಟುಕೊಂಡು ಅವುಗಳನ್ನು ಆಳುವಂತಹ ನಿನಗೆ ಈ ಬಾಲಕನನ್ನು ಅಳುವಂತೆ ಮಾಡುವುದು ತರವೇ ? ಮಳೆಯನ್ನು ನೀನು ಸುರಿಸುವುದಕ್ಕೆ ರೈತರಿಂದ ಬರುವ ಬೈಗುಳಗಳನ್ನು ಸಹಿಸಿಕೊಳ್ಳುವ ನೀನು ಬಾಲಕನ ತಾಯಿಯ ಬೈಗುಳಗಳನ್ನು ಸಹಿಸಲಾರೆಯಾ? ಮೋಡಣ್ಣ, ಪಾಪಾ ಹೋಗಲಿ ; ಕರೆದೊಯ್ಯಣ್ಣಾ !’ ಎಂದು ಗಿರಿಯು ವಿವರಿಸಿದಾಗ, ಆ ನುಡಿಗಳನ್ನು ಆಲಿಸಿದ ಮೋಡಣ್ಣನು ತುಸು ಕೋಪದಿಂದ ಗರ್ಜಿಸಿ ಗಿರಿಗೆ ಮರಳಿ ಹೇಳುವುದು ಹೀಗೆ :
ಎಲೆ ಗಿರಿಯಣ್ಣಾ, ನಿನಗೇನಣ್ಣಾ ?
ಕುಳಿತುಪದೇಶವ ಮಾಡುವೆಯಣ್ಣ !
ಎನ್ನುತ್ತಾ, ‘ನೀನು ಹೇಳಿದಂತೆ ನಾನೆಲ್ಲವನ್ನೂ ಆಳಿದರೂ ತಾಯಿಯಿಂದ ಈ ಮುಗ್ದ ಕಂದಮ್ಮನನ್ನು ಅಗಲಿಸುವುದು ಎಷ್ಟು ಸರಿ ನೀನೆ ಯೋಚಿಸು ಮತ್ತು ಹತ್ತು ಕಡಲುಗಳನ್ನು ಹೊತ್ತುಕೊಂಡು, ಗುಡುಗು-ಮಿಂಚುಗಳನ್ನಾಳಿದರೂ ‘ತಾಯಿಯ ಶಾಪವ ಸೈರಿಸೆ ನಾನು!’ ಆದುದರಿಂದ ನೀನು ಸುಮ್ಮನಿರು’ ಎಂದು ಮೋಡವು ಹೇಳುತ್ತದೆ.
ನೀನಾದರೂ ತುಸು ಮಾತಾಡಣ್ಣಾ !
…………… ………….. ………………
ಮಾತಾಡಯ್ಯಾ, ಋಷಿಗಳ ಬಂಧು !
ಎಂದು ಕಾಡಣ್ಣನ ಹತ್ತಿರ ಕೇಳಿಕೊಂಡಾಗ, ಅದು ಅಸಮಾಧಾನದಿಂದ ಹುಡುಗನನ್ನು ಅಲ್ಲಗಳೆದು ಮೋಡಕ್ಕೆ ಕರೆದುಕೊಂಡು ಹೋಗುವುದು ಖಂಡಿತ ಬೇಡವೆಂದು ಹೇಳುತ್ತದೆ. ಮುಂದುವರೆದು ಹುಡುಗನಿಗೆ ಬುದ್ಧಿ ಮಾತುಗಳನ್ನು ಹೇಳುವ ಕಾಡಣ್ಣನ ನುಡಿಗಳು ಹೀಗಿವೆ :
ಬಿಡೊ ಬಿಡೊ ನಿನ್ನೀ ನುಣ್ಣನೆ ನುಡಿಗಳ ;
ಕಡಿ ಕಡಿ ಎನ್ನುವೆ ತಂದೆಗೆ ಬುಡಗಳ !
ಬೆಂಕಿಯ ಬುಡಗಳಿಡಿಸುವನು,
ಧಗ ಧಗ ಉರಿಸುವನು !
ಅಂಕೆಯೆ ಇಲ್ಲದ ಕಡಿಸುವನು,
ಸೊಬಗನೆ ಕಡಿಸುವನು !
ಎಂದು ಹೇಳುತ್ತಾ ತನ್ನ ಒಡಲಲ್ಲಿರುವ ಮರಗಳನ್ನು ಉರುವಲಿಗಾಗಿ ಕಟ್ಟಿಗೆಯನ್ನು ಕಡಿದು ಮರಗಳನ್ನು ಹಾಳುಮಾಡುತ್ತಾ, ಮರಳಿ ನೆಡುವುದರ ಕಡೆಗೆ ನಿರ್ಲಕ್ಷ್ಯ ಮಾಡುತ್ತಾ, ಇದ್ದಿಲಿಗಾಗಿ ಕಡಿಯುವವರು ಕೆಲವರಾದರೆ, ಗೆದ್ದಲು ಹತ್ತುವಂತೆ ಮಾಡುವವರು ಮತ್ತೆ ಕೆಲವರಾದರೆ, ಕದ್ದು ಸಾಗಿಸುತ್ತಾ ಸುದ್ಧಿಯೇ ಇಲ್ಲದಂತೆ ಮಾಡುವರು ನಿಮ್ಮ ಮನುಜ ಕುಲದವರು ಎಂದು ಹುಡುಗನಿಗೆ ಕಾಡು ಹಂಗಿಸುತ್ತದೆ. ಇಂತಹ ಕುಲದವನಾದ ಈ ಹುಡುಗನನ್ನು ಕರೆದುಕೊಂಡು ಹೋಗಬೇಡವೆಂದು ಮೋಡಕ್ಕೆ ಹೇಳುತ್ತಾ ಈ ಮನುಜರು ನಮ್ಮ ಗೆಳೆತನವನ್ನು ಕೆಡಿಸಲು ಬಿಡಿಸುವರು, ಮನುಜರು ಹೋದಡೆಯಲ್ಲೆಲ್ಲ ಹಾಳು ಮಾಡುವರು ಎಂದು ಮೋಡದ ಕಿವಿಯೂದುವುದು ಹೀಗೆ :
ಮನುಜರು ಹೋದಡೆಯಲ್ಲಾ ಹಾಳು !
ನೀನಿವನನೊಯ್ದರೆ ತಪ್ಪದೊ ಗೋಳು !
ಎಲೆ ಮೇಘಣ್ಣ, ನಡೆ ಬೇಗಣ್ಣಾ !
ಮಾತೇನಿವನೊಡನಿವ ಹುಡುಗಣ್ಣಾ !
ಎಂದು ಹೇಳಿದಾಗ ದಿಕ್ಕು ತೋರದವನಾಗಿ, ಕಣ್ಣೀರು ಒರೆಸಿಕೊಳ್ಳುತ್ತಾ, ಸುತ್ತಲೂ ನೋಡಿ, ಕಡೆಗೆ ಮೇಲೆ ತೇಲುವ ಮೋಡವನ್ನು ಪುನಃ ಅಂಗಲಾಚಿ ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ.
ಅಮ್ಮನ ಗುದ್ದುವುದಿಲ್ಲವೊ ಬಾರೊ ;
ಗದ್ದಲ ಮಾಡುವುದಿಲ್ಲೋ ಬಾರೋ !
ಹರಿಯುವ ಹೊಳೆಗಳ ನೋಡಲು ಬೇಕೊ ;
ಗಿರಿಯಾಚೆಯ ನಾ ನೋಡಲು ಬೇಕೊ ;
ಹರಿಣಾಂಕನ ನಾ ಕೊಯ್ಯಲು ಬೇಕೊ ;
ಇಷ್ಟೇ ಕೆಲಸವೊ, ಮೋಡಣ್ಣಾ ;
ಇಷ್ಟೇ ; ಇನ್ನೇನಿಲ್ಲಣ್ಣಾ !
ಓ ಮೋಡಣ್ಣಾ, ಓ ಮೋಡಣ್ಣಾ
ನಾನೂ ಬರುವೆನೊ, ಕೈ ನೀಡಣ್ಣಾ !
ಹೀಗೆ ಹಂಬಲಿಸುವ ಬಾಲಕನ ಗೋಳನ್ನು ನೋಡಿ ಸಹಿಸಲಾರದೆ, ಬುದ್ಧಿವಾದ ಹೇಳಿ, ಬರುತ್ತೇನೆಂದು ಹೇಳಿ ಹೋಗುವ ಮುಂಚೆ ತಾನು ಪೂರೈಸಬೇಕಾಗಿರುವ ಸಂಗತಿಗಳನ್ನು ಹೇಳುತ್ತದೆ. ಸಾಗರ ರಾಜನ ಆಜ್ಞೆಯಂತೆ ತಾನು ಮಾಡಬೇಕಾಗಿರುವ ಕೆಲಸವನ್ನು ಪೂರ್ಣಗೊಳಿಸಬೇಕಾಗಿದೆ. ಕಾರ್ಯವಿಮುಖನಾಗಿ ನಿಂತುಕೊಳ್ಳುವಂತಿಲ್ಲ. ಕರ್ತವ್ಯ ನಿರ್ವಹಣೆಯಲ್ಲಿರುವ ತನ್ನ ಹೊಣೆಗಾರಿಕೆಯ ಕಷ್ಟವನ್ನು ವಿವರಿಸುತ್ತದೆ. ಈಗ ಹುಡುಗನಿಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪಗೊಂಡು ‘ಹಟ ಮಾಡಿದುದನು ಮನ್ನಿಸು, ಅಣ್ಣಾ’ ಎನ್ನುತ್ತಾ ನಾನಾ ನೀತಿಗಳಿಂದೊಡಗೂಡಿದ ಬುದ್ಧಿಯ ಮಾತುಗಳನ್ನು ಹೇಳಲಾರೆಯಾ’ ಎಂದು ಕೇಳಿಕೊಳ್ಳುತ್ತಾನೆ. ಆಗ ಬುದ್ಧಿಯ ಮಾತುಗಳನ್ನು ಮೋಡವು ಹೇಳುವುದು ಹೀಗೆ :
ಬುದ್ಧಿಯ ಹೇಳುವೆನಾಲಿಸು : ನೀನು
ಬುದ್ಧಿಯರಿಯೆ ಕರೆದೊಯ್ವೆನೊ ನಾನು !
ಧರ್ಮಮೇಘ ನೀನಾಗಲು ಬೇಕು :
ಧರ್ಮದ ಮಳೆಯನು ಸುರಿಸಲು ಬೇಕು !
ಎಂಬಲ್ಲಿಂದ ಪ್ರಾರಂಭಿಸಿ, ಸತ್ಪುರುಷನ ಜೀವನದ ರೀತಿ-ನೀತಿಗಳನ್ನು ಮಕ್ಕಳಿಗೆ ಮನಮುಟ್ಟುವಂತೆ ರೀತಿಯಲ್ಲಿ ಮಹಾಕವಿಗಳು ಇಲ್ಲಿ ಮೋಡದಿಂದ ಹೇಳಿಸಿರುವರು.
ದೇವರ ದಿನವೂ ಭಜಿಸಲು ಬೇಕೊ;
ಪಾವನನಾತನ ನೆನೆಯಲು ಬೇಕೊ ;
ಮಾನವರೆಲ್ಲಾ ದೇವರ ಪುತ್ರರು ;
ಆದುದರಿಂದವರೆಲ್ಲಾ ಮಿತ್ರರು !
ಜಾತಿ ವೈರಗಳ ಮರೆಯಲು ಬೇಕೊ
ನೀತಿ ನಡತೆಗಳ ಕಲಿಯಲು ಬೇಕೊ !
ನಿರ್ಮಲ ಮನುಜನ ದೇವಾಲಯೊ;
ನಿರ್ಮಲ ಹೃದಯವೆ ದೇವರ ಪೀಠ !
ಶುದ್ಧವಾದ ಮನಸೇ ಪುಜಾರಿ :
ಶುದ್ಧಾಲೋಚನೆಗಳೆ ಸುಮಹಾರ !
ಈಶನ ಕರುಣೆಯ ಕಿರಣವು ಬೀಳೆ
ವಾರಿಧಿಯಂದದ ಹೃದಯದ ಮೇಲೆ
ಪರಿಶುದ್ಧಾತ್ಮನು ಆವಿಯ ರೂಪದಿ
ಪಾಪಕ್ಷಾರವನಲ್ಲಿಯೆ ಬಿಟ್ಟು
ಗಗನಕ್ಕೇರುವಂತೆಯೆ, ಕಿಟ್ಟೂ,
ಧರ್ಮಮೇಘ ನೀನಾಗಲು ಬೇಕು :
ಧರ್ಮದ ಮಳೆಯನು ಸುರಿಸಲು ಬೇಕು !
ಎಂದು ಹೇಳುತ್ತಾ, ಭಾರತಮಾತೆಯ ಭವ್ಯಪರಂಪರೆಯ ಕುರಿತು ಹೇಳುತ್ತದೆ. ಭಾರತಮಾತೆಯ ಕುರಿತು ಭಕ್ತಿಭಾವ ಉಕ್ಕುವಂತೆ ಮಾಡುತ್ತದೆ. ಕಪಿಲ, ಯೋಗಿ ಪತಂಜಲಿ, ಗೌತಮ ಮುಂತಾದವರ ಸಾಧನೆಗಳನ್ನು ನೆನಪಿಸಿಕೊಳ್ಳುತ್ತಾ, ‘ಪರಶಿವ ನೀನು, ಪರಶಿವ ನೀನು!’ ಎಂದು ಹೇಳುತ್ತಾ 'ವೇದಾಂತ ಕೇಸರಿ ನೀನು' ಎಂದು ಹೇಳುತ್ತದೆ.
ಶ್ರೀರಾಮಾಯಣವನು ವಾಲ್ಮೀಕಿ
ವಿರಚಿಸಿದನೊ ಬಾಲಕ ನಿನಗಾಗಿ !
ವ್ಯಾಸಕವೀಶ್ವರ ತಾ ನಿನಗಾಗಿ
ಭಾರತವನು ರಚಿಸಿದ ಚೆಲುವಾಗಿ !
ಹೀಗೆ ಹೇಳುತ್ತಾ, ರಾಮಕೃಷ್ಣ, ವಿವೇಕಾನಂದ, ಗಾಂಧೀಜಿ ಮುಂತಾದವರ ಆದರ್ಶಗಳನ್ನು ಹುಡುಗನಿಗೆ ಹೇಳುತ್ತಾ, ‘ಅಂತಹ ಆದರ್ಶಗಳು ಆಲಿಸಿ ಮರೆಯುವ ನುಡಿಗಳವಲ್ಲ ; ಉಹನೆ ಮಾತ್ರದ ಕವಿತೆಗಳಲ್ಲ.’ ಎಂದು ಹೇಳುವಾಗ ಮೋಡಣ್ಣನ ಮಾತುಗಳಲ್ಲಿ ಮಹಾಕವಿಗಳ ಉನ್ನತ ವೈಚಾರಿಕತೆಯು ಹೊರಹೊಮ್ಮಿರುವುದನ್ನು ನಾವು ಕಾಣಬಹುದು. ನಂತರದಲ್ಲಿ ಮೋಡಣ್ಣನು,
ಹೊತ್ತಾಯಿತು ಹೋಗುವೆ ನಾನೀಗ ;
ಕತ್ತಲಿಳಿಯುತಿದೆ ನಡೆ ನೀ ಬೇಗ.
ಪುರುಸತ್ತಾಗಲು ಬರುವೆನು ಅಣ್ಣಾ ;
ಕರೆದೊಯ್ಯುವೆ ನಿನ್ನನು ಕಿಟ್ಟಣ್ಣಾ !
ಎಂದು ಭರವಸೆ ನೀಡುತ್ತಿರುವಾಗ ಕಿಟ್ಟಣ್ಣನ ತಾಯಿಯು ಕೂಗುವುದು ಕೇಳಿಸುತ್ತದೆ. ಇಬ್ಬರೂ ಕಿವಿಗೊಟ್ಟು ಆಲಿಸಿದಾಗ ಅಲ್ಲಿ ತಾಯಿಯು ಹಾಡುವುದು ಕೇಳಿಸುತ್ತದೆ. ಬಾಲಕ ಕಿಟ್ಟು ಹೊತ್ತು ಮುಳುಗುತ್ತಿರುವ ಸಮಯವಾದರೂ ಮರಳದಿರುವುದಕ್ಕೆ ತಾಯಿಯು ಕಳವಳದಿಂದ ಮರಳಿ ಬಾ ಎಂದು ಕರೆಯುವ ಹಾಡನ್ನು ಕಳವಳದಿಂದ ಹಾಡುತ್ತಿರುವುದನ್ನು ಕೇಳಿದ ಮೋಡವು ಕಿಟ್ಟೂಗೆ ಬೇಗ ಹೋಗಿ ತಾಯಿಯನ್ನು ಸಮಾಧಾನಿಸಲು ಹೇಳುತ್ತಾ ಅಂತರಿಕ್ಷದಲ್ಲಿ ಅಡಗಿಕೊಳ್ಳುತ್ತದೆ. ಬಾಲಕನು ಮೋಡವು ಹೋದ ದಾರಿಯನ್ನು ನೋಡುತ್ತಾ ನಿಂತಾಗ ಆತನಿಗೆ ತಾಯಿಯು ಕರೆಯುವ ಧನಿಯು ಪುನಃ ಕೇಳಿಬರುತ್ತದೆ. ಅದಕ್ಕೆ ಓಗೋಡುವ ಬಾಲಕನು ಹೀಗೆ ಹೇಳುತ್ತಾನೆ :
ಬಂದೇ ಬಂದೇ ತಾಳೌ ತಾಯೆ !
ವಂದಿಸಿ ಮೋಡಣ್ಣನ ಬಹೆ ತಾಯೆ !
ಎಂದು ಪುನಃ ಮೋಡ ಹೋದ ದಾರಿಯನ್ನೇ ಅಭೀಷ್ಟಕ ನಯನಗಳಿಂದ ನೋಡುತ್ತಾ ಮೋಡಕ್ಕೆ ವಿನಂತಿಸಿಕೊಳ್ಳುತ್ತಾನೆ.
ಸುಖವಾಗಲ್ಲಿಗೆ ನೀ ಹೋಗಣ್ಣಾ ;
ಮಂಗಳ ನಿನಗಾಗಲಿ ಮೇಘಣ್ಣಾ !
ಆದರೆ ತಮ್ಮನ ಮರೆಯದಿರಣ್ಣಾ ;
ಆಡಿದ ಭಾಷೆಯ ತಪ್ಪದಿರಣ್ಣಾ.
ಕಾಯುವೆ ನಿನ್ನಾಗಮನವನಣ್ಣಾ,
ಆಯುವವರೆಗೂ, ಓ ಮೋಡಣ್ಣಾ !
ಹೋಗುವೆ ನಾ ! ನೀ ಹೋಗಿ ಬಾರಣ್ಣಾ !
ಹೋಗಿ ಬಾರಣ್ಣಾ !
ಎಂದು ಮೋಡವನ್ನು ಬೀಳ್ಕೊಡುವ ಬಾಲಕನಿಗೆ ಆಕಾಶದಲ್ಲಿ ಗುಡುಗಿನ ಶಬ್ದ ಕೇಳುವುದರೊಂದಿಗೆ ರಂಗಸ್ಥಳದಲ್ಲಿ ಕತ್ತಲಾವರಿಸುತ್ತದೆ.
ಸದರಿ ರಂಗಕೃತಿಯು ಮಹಾಕವಿಗಳ ಲೇಖನಿಯಲ್ಲಿ ಸದಭಿರುಚಿಯೊಂದಿಗೆ ಮಕ್ಕಳಲ್ಲಿ ಕಲ್ಪನಾ ಶಕ್ತಿಯನ್ನು ಜಾಗೃತಗೊಳಿಸುವ ಶಕ್ತಿಯನ್ನುಳ್ಳ ಹಾಗೂ ಮಕ್ಕಳು ಸರಳ+ಸುಂದರವಾಗಿ (ಪ್ರಯೋಗದ ದೃಷ್ಟಿಯಿಂದ) ಅಭಿನಯಿಸುವ ಅನುಕೂಲತೆಯ ಏಕಾಂಕವಾಗಿದೆ. ಮಕ್ಕಳ ರಂಗಸಾಹಿತ್ಯಕ್ಕೆ ಉತ್ತಮ ಕಾಣಿಕೆಯಾಗಿದೆಯೆಂಬುದು ಸರ್ವಕಾಲಿಕ ಸತ್ಯವಾದ ಮಾತು. ಹಾಗೆ ನೋಡಿದರೆ ಈ ಕೃತಿಯು ಕೇವಲ ಮಕ್ಕಳ ಲೋಕಕ್ಕೆ ಮಾತ್ರ ಸೀಮಿತಗೊಳ್ಳದೆ ದೊಡ್ಡವರ ಭಾವುಕ ಶಕ್ತಿ ಅಥವಾ ಕಲ್ಪನಾ ಶಕ್ತಿಯನ್ನು ಎಚ್ಚರಗೊಳಿಸುವ ಚಿಕಿತ್ಸಕ ಶಕ್ತಿವರ್ಧಕದಂತಿದೆ. ‘ಕಾಯುವೆ ನಿನ್ನಾಗಮನವನಣ್ಣಾ, ಆಯುವವರೆಗೂ, ಓ ಮೋಡಣ್ಣಾ !’ ಎಂಬ ಕೊನೆಯ ಸಂಭಾಷಣೆಯ ಮಾತು ಜೀವನದ ಮುಂದೆ ನಿಲ್ಲಿಸಿದ ಮಹಾದರ್ಶನದಂತೆ ಭಾಸವಾಗುತ್ತದೆ. ಅನಂತ ವಿಶ್ವದಲ್ಲಿಯ ಮೋಡದ ಕಡೆಗೆ ಕೈಯೆತ್ತಿ, ವಿದಾಯ ಹೇಳುವ ಪರಿಯು ಮಾನವನಲ್ಲಿರುವ ಅನಂತತೆಯ ಅಭೀಪ್ಸೆಗೆ ಸಂಕೇತವಾಗಿ ಉಳಿಯುತ್ತದೆ. ಬಾಲಕನೊಂದಿಗೆ ಬಾಲಕರಾಗುವಂತೆ ಮಾಡಿಸುತ್ತಾ ತನ್ಮಯಗೊಳಿಸುವ ಪರಿ ಕೃತಿಯನ್ನು ಮತ್ತೆ ಮತ್ತೆ ಓದಿಸಿಕೊಳ್ಳುತ್ತದೆ.
ಬಾಲಕನ ಪ್ರಕೃತಿ ಉಪಾಸನೆಯ ಸಂದರ್ಭದಲ್ಲಿ ಕಾಡು ಮತ್ತು ಮೋಡಗಳು ನುಡಿಯುವ ಮಾತುಗಳು ಮಹಾಕವಿಗಳ ಹೃದಯದಿಂದ ಹೊಮ್ಮಿರುವ ನುಡಿಗಳೆಂಬುದನ್ನು ನಾವೆಂದಿಗೂ ಮರೆಯುವಂತಿಲ್ಲ. ಇಂತಹ ಮಹೋನ್ನತ ಆಶಯಗಳನ್ನು ಹೊಂದಿರುವ ಈ ರಂಗಕೃತಿಯನ್ನು ನಾನು ಚಿಕ್ಕವನಿದ್ದಾಗಿನಿಂದಲೂ (ಗುಲ್ಬರ್ಗಾ ಮತ್ತು ಧಾರವಾಡ)ಆಕಾಶವಾಣಿಗಳಲ್ಲಿ ಹಲವಾರು ಬಾರಿ ಮರುಪ್ರಸಾರಗೊಂಡಾಗ ಕೇಳುತ್ತಾ, ಪ್ರತಿಸಲವೂ ಹೊಸ ಕಲ್ಪನೆಗಳು ಗರಿಗೆದರುವಂತೆ ಮಾಡುತ್ತಾ, ಬೆಳ್ಮುಗಿಲಿನ ಬಯಲುಸೀಮೆಯ ನಾನು ಕುತೂಹಲಗೊಂಡಿದ್ದು ಸುಳ್ಳೇನಲ್ಲ. ಈ ಕೃತಿಯು ಕೇವಲ ಆಕಾಶವಾಣಿಗೆ ಮಾತ್ರ ಅನುಕೂಲವಾಗುವಂತೆ ಹಿರಿಯರು ಬರೆದಿರಬಹುದು ಹಾಗಾಗಿ ಆಕಾಶವಾಣಿಯಲ್ಲಿ ಮಾತ್ರ ಪ್ರಸಾರವಾಗುತ್ತಿದೆ ಎಂದು ಎಷ್ಟೋ ದಿನಗಳ ಕಾಲ ಭ್ರಮೆಯಲ್ಲಿದ್ದ ನನಗೆ ರಂಗಸ್ಥಳದಲ್ಲಿ ನೋಡುವಂತಹ ಅವಕಾಶವನ್ನು ರಂಗಕಹಳೆಯ ಮಿತ್ರರು ಮೈಸೂರಿನಲ್ಲಿ ಸಂಘಟಿಸಿದ್ದ ‘ಕುವೆಂಪು ನಾಟಕೋತ್ಸವ’ದಲ್ಲಿ (22.12.2012ರಂದು ಓಹಿಲೇಶ ಎಲ್ ಅವರ ನಿರ್ದೇಶನದಲ್ಲಿ, ಗೌರಿಶಂಕರ ಸಾಂಸ್ಕೃತಿಕ ಕ್ರೀಡಾದತ್ತಿ, ಬೆಂಗಳೂರು ರಂಗತಂಡದ ಕಲಾವಿದರ ಪ್ರಸ್ತುತಿ) ಒದಗಿಸಿದ್ದರು. ಉತ್ತಮ ರಂಗಕೃತಿಯೊಂದು ತನ್ನ ತಾಜಾತನದಿಂದ ಹಲವಾರು ದಶಕಗಳ ಕಾಲವೂ ಕಂಗೊಳಿಸಬಲ್ಲುದು ಎಂಬುದಕ್ಕೆ ಮಹಾಕವಿಗಳ ಹಲವಾರು ಕೃತಿಗಳಲ್ಲಿ ಇದೊಂದು ಎಂಬುದು ಸೂರ್ಯನ ಪ್ರಕಾಶದಷ್ಟೇ ಸತ್ಯ !
*****
ಚೆನ್ನಾಗಿದೆ….
Super Sir…
ಚೆನ್ನಾಗಿದೆ….
[…] ] https://www.panjumagazine.com/?p=4413 ಇಲ್ಲಿಯವರೆಗೆ ಆತ್ಮೀಯ ಓದುಗಪ್ರಭುಗಳೇ, ಮೋಡದ […]