ನಾಟಕಕಾರರಾಗಿ ಕುವೆಂಪು (ಭಾಗ-13) : ಹಿಪ್ಪರಗಿ ಸಿದ್ದರಾಮ್, ಧಾರವಾಡ

ರಕ್ತಾಕ್ಷಿ (1932) ನಾಟಕ ಕುರಿತ ಲೇಖನದ ಮುಂದುವರಿದ ಭಾಗ
ಕೃತಿಯ ಆರಂಭದ ದೃಶ್ಯವು ಹ್ಯಾಮ್ಲೆಟ್ ಕೃತಿಯ ಆರಂಭವನ್ನು ನೆನಪಿಸುತ್ತದೆ. ಮೊದಲ ಅಂಕದ ಮೊದಲ ದೃಶ್ಯದಲ್ಲಿ ಹಾಲು ಚೆಲ್ಲಿದ ಬೆಳದಿಂಗಳ ರಾತ್ರಿಯಲ್ಲಿ ಕೆಳದಿ ಅರಮನೆಯ ಹೆಬ್ಬಾಗಿಲ ಬಳಿ ಕೆಂಚಣ್ಣನು ಭಯಗೊಂಡವನಂತೆ ಕಾವಲು ತಿರುಗುತ್ತಿದ್ದಾನೆ. ಹಿಂದಿನ ರಾತ್ರಿ ಆತ ಕಾವಲು ತಿರುಗುತ್ತಿದ್ದಾಗ ತೀರಿಕೊಂಡ ದೊರೆ ಬಸಪ್ಪನಾಯಕರಂತೆ ಕಾಣುವ ಭೂತವನ್ನು ಕಂಡು ತತ್ತರಿಸಿ ಮರುದಿನ ಬಿದನೂರಿನ ರಾಜಕುಮಾರ ಬಸವಯ್ಯನ ಆಪ್ತಮಿತ್ರ ಹೊನ್ನಯ್ಯನಿಗೆ ಹೇಳಿದ್ದಾನೆ. ಅದರ ಸತ್ಯಾಸತ್ಯತೆಯನ್ನು ಪರಿಕ್ಷಿಸಲು ಈ ದಿನ ತಾನೇ ಬರುವುದಾಗಿ ಹೇಳಿದ್ದರೂ ಹೊನ್ನಯ್ಯನ ಸುಳಿವಿಲ್ಲ. ಬರುವುದು ತಡವಾಗಿದ್ದಕ್ಕೆ ವಟಗುಡುತ್ತಿರುವ ಕೆಂಚಣ್ಣನು ಹೊನ್ನಯ್ಯ ಬರುತ್ತಿರುವುದನ್ನು ಕಂಡು ದೊರೆಯ ಭೂತವೇ ಇರಬೇಕೆಂದು ಭ್ರಮಿಸಿ ಹೆದರಿ ನಡುಗಲು ಆರಂಭಿಸುತ್ತಾನೆ. ವಾಸ್ತವ ತಿಳಿದ ನಂತರ ಹಾಸ್ಯಕ್ಕೀಡಾಗುತ್ತಾನೆ. ಆದರೂ ಕೆಂಚಣ್ಣ ನಿನ್ನೆ ಕಂಡ ದೃಶ್ಯವನ್ನು ವಿವರಿಸುತ್ತಾನೆ. ಶಿವೈಕ್ಯರಾದ ದೊರೆಗಳು ಸಾಕ್ಷಾತ್ ಎದುರಿಗೆ ನಿಂತು ಮಾತಾಡಿದಂತೆ, ಅದರಿಂದಾಗಿ ತನಗೆ ಮೈಮೇಲೆ ತಕಪಕ ಕುದಿಯುವ ನೀರು ಚೆಲ್ಲಿದಂತಾಯ್ತು ಎಂದು ಹೇಳುತ್ತಾನೆ.

ಹೀಗೆ ಇಬ್ಬರ ಮಾತುಗಳು ಪ್ರೇಕ್ಷಕರಿಗೆ ಹಾಸ್ಯವನ್ನೋದಗಿಸುತ್ತವೆ. ಜೊತೆಗೆ ವೇದಾಮತದ ಉಪದೇಶವು ನಡೆಯುತ್ತದೆ. ಕೆಂಚಣ್ಣನು ‘ಅದೋ ಅಲ್ಲಿ ನೋಡಿ, ಅದೇ ಬರುತ್ತಿದೆ’ ಎಂದು ಹೇಳಿದೊಡನೆ ಹೊನ್ನಯ್ಯನು ಭೂತವನ್ನು ಕಂಡು ಏನೊಂದು ಮಾತಾಡದೇ ನಿಲ್ಲುತ್ತಾನೆ. ಹೊನ್ನಯ್ಯನು ‘ಏನು ಭಯಂಕರವಾಗಿದೆ ! ಹೌದು, ಶಿವೈಕ್ಯರಾದ ನಮ್ಮ ದೊರೆ ಬಸಪ್ಪನಾಯಕರಂತೆಯೇ ಇದೆ, ನನಗೂ ಕೂಡ-‘ ಎಂಬ ಗಾಬರಿಯ ಮಾತುಗಳನ್ನಾಡುತ್ತಾನೆ. ಇಬ್ಬರೂ ಶಿವಮಂತ್ರವನ್ನು ಜಪಿಸಲು ಆರಂಭಿಸಿದಾಗ ದೂರದಲ್ಲಿ ಭೂತ ಪ್ರವೇಶಿಸುತ್ತದೆ. ಹೊನ್ನಯ್ಯನು ಅದನ್ನು ಉದ್ದೇಶಿಸಿ ‘ನೀನಾರೆ ಆಗಿರು, ನನ್ನೊಡನೆ ಮಾತಾಡು….ಬಯಕೆ ಏನಿದ್ದರೂ ಹೇಳು ನಡೆಯಿಸುವೆ…’ ಎಂದು ಹೇಳುತ್ತಾನೆ. ಅದು ಮಾತಾಡದೆ ಮಾಯವಾಗುತ್ತದೆ. ‘ಸತ್ಪುರುಷನಾದ ದೊರೆ ಸತ್ತಿಂತು ದೆವ್ವವಾಗುವುದೆಂದರೇನು?’ ಎಂಬ ಆತಂಕದ ಯೋಚನೆಗೀಡಾಗುವ ಹೊನ್ನಯ್ಯನು ರಾಜಕುಮಾರ ಬಸವಯ್ಯನನ್ನು ಕರೆದುಕೊಂಡು ಬಂದು ಮಾತನಾಡಿಸಬೇಕೆಂದು ನಿರ್ಧರಿಸಿ ಅಲ್ಲಿಂದ ತೆರಳುವಾಗ ‘ಇದನು ಯಾರೋಡನೆಯು ಹೇಳದಿರು’ ಎಂದು ಎಚ್ಚರಿಸಿ ಹೋಗುವುದರೊಂದಿಗೆ ದೃಶ್ಯ ಮುಗಿಯುತ್ತದೆ.

ಎರಡನೇಯ ದೃಶ್ಯದಾರಂಭದಲ್ಲಿ ಕಥಾನಾಯಕ ಬಸವಯ್ಯನು ಚಿಂತೆಯಲ್ಲಿ ಶತಪಥವೆಂದು ಅರಮನೆಯಲ್ಲಿ ಗಾಂಭೀರ್ಯದಿಂದ ತಿರುಗಾಡುತ್ತಿದ್ದಾನೆ.

ಎಷ್ಟು ತೊಡಕಾದುದೀ ಬುವಿಯ ಬಾಳು!
ಇಮತಹ ತಾರುಣ್ಯದಲ್ಲಿಯೇ ಕಷ್ಟದೆಶೆ.
ಬಾಳೆಂಬುದೇ ಹಾಳು. ಹುಟ್ಟದಿರುವುದೆ ಲೇಸು.
ಹುಟ್ಟಿದರೆ ಹಾಳು ಕರ್ಮದ ಬುತ್ತಿ ನಮ್ಮ
ಹಿಂದುಗಡೆ ಬಂದೆ ಬರುವುದು ನೆಳಲಿನಂತೆ !-
ನಾನೊ
ಸ್ವಪ್ನಮುದ್ರಿತ ಜೀವಿ ! ಅದನರಿತೆ ಎಲ್ಲರೂ
ನನ್ನನುಪೇಕ್ಷಿಸುತೆ ನಡೆದಪರು. ಓ ತಂದೆ,
ನನ್ನೊಬ್ಬನನೆ ಬಿಟ್ಟು ಹೋದಿರೆಲ್ಲಿಗೆ ನೀವು?
ನಿಮ್ಮನುಳಿದೆನಗಿಂದು ಲೋಕವೆ ಬೆಂಡಾಗಿ
ಹೋಗಿಹುದು, ಏನೊಂದೂ ಬೇಡವಾಗಿದೆ ನನಗೆ
ನನ್ನ ಮಲತಾಯಿ, ಆ ರಾಕ್ಷಸಿ, ಆ ಶನಿ
ಸೇನಾಧಿಪತಿಯೊಡನೆ ಸರಸಕಾರಂಭಿಸಿಹಳು !
ಓ ಪಿತನೇ ವಂಶಕೆ ಕಳಂಕವನು ತರುತಿಹಳು !
ಬೇಡವೆಂದರೂ ಕೇಳದೆಯೆ ಆ ರಾಕ್ಷಸಿ
ಚೆಲುವಾಂಬೆಯನ್ನೇಕೆ ಮದುವೆಯಾದಿರಿ ಮರಳಿ?
ನೀವು ತೀರಿಕೊಂಡಿನ್ನೂ ವಾರಾಗಲು ಕೂಡ
ಕಳೆದಿಲ್ಲ. ನಿಮ್ಮ ಮಸಣದ ಮೇಲೆ ಹೊಸಹಸುರು
ಕೂಡ ಹಬ್ಬಲಾರದಿದೆ ; ಅತ್ತವರ ಕೆನ್ನೆಯಲಿ
ಕಣ್ಣೀರು ಬತ್ತಿಲ್ಲ, ಆಗಲೇ ಚಕ್ಕಂದ
ದಿಂದಿಹಳು ಆ ದುರುಳ ನಿಂಬಯ್ಯನೊಡಗೂಡಿ
ಓ ಚಂಚಲತೆ, ನಿನ್ನ ಹೆಸರೆ ಸ್ತ್ರೀಯಲ್ತೆ?
………………………ಯಾರಿಗೊರೆಯಲಿ ಇದನು?
ಯಾರೊಬ್ಬರೂ ನನ್ನ ಮಾತುಗಳ ನಂಬರು !
ಲಿಂಗಣ್ಣ ಮಂತ್ರಿಗಳು ಕೂಡ ಆ ಮಾರಿಯಲಿ
ಮೋಸವನು ಕಾಣಲಾರದೆ ಇರುವರಿನ್ನೂ !

ಎಂದು ಚಿಂತೆಯಿಂದಲೇ ಶುರುವಾಗುವ ಸ್ವಗತದ ಸಂಭಾಷಣೆಯಲ್ಲಿ ಆತನ ಪಾತ್ರದ ಪರಿಚಯವು ಸ್ಥೂಲವಾಗಿ ಪ್ರೇಕ್ಷಕರಿಗೆ/ಓದುಗರಿಗೆ ಆಗುತ್ತದೆ. ಅಧರ್ಮದ ಚೆಲ್ಲಾಟವನ್ನು ಕಂಡು ಬಸವಯ್ಯ ತಲಮಳಗೊಂಡು ವಿದಿಯನ್ನು ದೂರುತ್ತಿರಲು ಲಿಂಗಣ್ಣ ಮಂತ್ರಿಗಳ ಪ್ರವೇಶವಾಗುತ್ತದೆ. ಸಂಪೂರ್ಣ ರಂಗಕೃತಿಯಲ್ಲಿ ಇದೊಂದು ಸಾತ್ವಿಕ, ದಕ್ಷ ಮತ್ತು ಪ್ರಾಮಾಣಿಕತೆಯನ್ನು ಹೊತ್ತಂತಿರುವ ಪಾತ್ರ. ಈತನ ಮಗಳು ಬಸವಯ್ಯನ ಪ್ರಿಯತಮೆ ರುದ್ರಾಂಬೆ. ಇವೆರಡು ಪಾತ್ರಗಳನ್ನು ಮಹಾಕವಿಗಳು ಬಹಳ ಪರಿಣಾಮಕಾರಿಯಾಗಿ ಪಾತ್ರಪೋಷಣೆ ಮಾಡಿದ್ದಾರೆ. ಲಿಂಗಣ್ಣ ಮಂತ್ರಿಯ ಮುಂದೆ ಬಸವಯ್ಯನು ತನ್ನ ಸಂಶಯದ ಸಂಗತಿ, ತನ್ನ ತಂದೆಯ ಸಾವಿಗೆ ಚೆಲುವಾಂಬೆ ಮತ್ತು ನಿಂಬಯ್ಯ ಇಬ್ಬರೂ ಕಾರಣರೆಂಬುದನ್ನು ಹೇಳುತ್ತಾನೆ. ಪ್ರಾಮಾಣಿಕ ಮನಸ್ಸಿನ ಮಂತ್ರಿ ಲಿಂಗಣ್ಣನವರು ಆ ವಿಚಾರವನ್ನು ಋಣಾತ್ಮಕವಾಗಿ ಯೋಚಿಸದೆ ಧನಾತ್ಮಕವಾಗಿ ಯೋಚಿಸುತ್ತಾ, ಅವರಿಬ್ಬರೂ ರಾಜಕಾರ್ಯದ ಗಹನವಾದ ಮಂತ್ರಾಲೋಚನೆಯಲ್ಲಿ ಇರುತ್ತಾರೆಂದು ಹೇಳುವುದರೊಂದಿಗೆ ‘ಆಧಾರವಿಲ್ಲದ ಸಿದ್ಧಾಂತ ಮಾಡಬಾರದು ಮಗು’ ಎಂದು ಬುದ್ಧಿವಾದ ಹೇಳುತ್ತಾರೆ.

ಅವರಿಬ್ಬರ ಸರಸ-ಸಲ್ಲಾಪದ ವಿಷಯವನ್ನು ಕನಸಿನಲ್ಲಿ ಕಂಡ ಸೂಚನೆಯನ್ನು ತಿಳಿಸದರೂ ‘ಸ್ವಪ್ನಗಳು ಸುಪ್ತಚಿತ್ತದ ವಾಣಿ’ ಎಂದು ಆ ವಿಚಾರವನ್ನು ಒಪ್ಪುವುದಿಲ್ಲ. ಅದೇ ವೇಳೆಗೆ  ರಾಣಿ ಚೆಲುವಾಂಬೆ, ಸೇನಾಧಿಪತಿ ನಿಂಬಯ್ಯ ಮತ್ತು ನಿಂಬಯ್ಯನ ತರುಣ ಮಗ ಸೋಮಯ್ಯ ಆಗಮಿಸುತ್ತಾರೆ. ಸತ್ತ ರಾಜನಿಗಾಗಿ ಡೊಂಗಿ ಕಣ್ಣೀರನ್ನು ಸುರಿಸಿ ಮರುಗುತ್ತಿರುವಂತೆ ನಟಿಸುತ್ತ್ತಿದ್ದಾರೆಂಬುದು ಎಲ್ಲರಿಗೂ ಗೊತ್ತಾಗುತ್ತಿದೆ. ರಾಜಕುಮಾರ ಬಸವಯ್ಯನಿಗೆ ಸಮಾಧಾನ ಹೇಳಲು ತರುಣ ಸೋಮಯ್ಯನನ್ನು ಬಿಟ್ಟು ಉಳಿದವರೆಲ್ಲರೂ ತೆರಳುವರು. ಬಸವಯ್ಯ ಮತ್ತು ಸೋಮಯ್ಯನವರ ನಡುವಿನ ಚರ್ಚೆಯಲ್ಲಿ ಬಸಪ್ಪನಾಯಕರು ದೈವಾದೀನರಾದ ಸನ್ನೀವೇಶದ ವಿವರಗಳು ಹೊರಬರುತ್ತವೆ. ಅಂದು ರಾಜಕುಮಾರ ಬಸವಯ್ಯನು ತಂದೆಯ ಬಳಿ ಇರಲಿಲ್ಲ, ನಿಂಬಯ್ಯನ ಮಾತಿನಂತೆ ಬೇಟೆಗೆ ಹೋಗಿದ್ದನೆಂಬ ಅಂಶ ತಿಳಿಯುತ್ತದೆ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದ ಸಂಚು ಎಂದು ಬಸವಯ್ಯ ತರ್ಕಿಸುತ್ತಾನೆ. ಆದರೆ ಅದನ್ನು ಎಲ್ಲಿಯೂ ಹೇಳಿಕೊಳ್ಳದಂತಹ ಸಂದಿಗ್ದತೆ. ‘ನನಗೀಗ ಒಂಟಿಯಾಗಿರಬೇಕೆಂಬಾಸೆ’ ಎಂದು ಸೋಮಯ್ಯನನ್ನು ಕಳುಹಿಸುತ್ತಾನೆ. ‘ಎಲ್ಲರೂ ತನಗೆ ಮೋಸ ಮಾಡುತ್ತಿದ್ದಾರೆ’ ಎಂದು ಆಲೋಚಿಸುತ್ತಿರುವಾಗಲೇ ಆತನ ಸ್ನೇಹಿತ ಹೊನ್ನಯ್ಯ ಬಂದು ಹಿಂದಿನ ರಾತ್ರಿಯಲ್ಲಿ ತಾನು ಕಂಡ ದೊರೆಯ ಭೂತದ ಕುರಿತು ಹೇಳುತ್ತಾನೆ. ಹೊನ್ನಯ್ಯನೊಂದಿಗೆ ತಾನು ಹೋಗಿ ತನ್ನ ತಂದೆಯ ಭೂತವನ್ನು ಕಾಣಲು ನಿರ್ಧರಿಸುತ್ತಾನೆ.

ನನ್ನ ತಂದೆಯ ಪ್ರೇತ ! ಎಲ್ಲ ಶುಭವಾಗಿಲ್ಲ!
ಒಂದಲ್ಲ ಒಂದು ದಿನ ಪಾಪ ಬಯಲಹುದು !

ಎಂದು ಮನಸ್ಸಿನಲ್ಲಿಯ ತಳಮಳದಂತೆ ಎದ್ದು ಹಿಂದೆ ಮುಂದೆ ತಿರುಗಾಡಲಾರಂಭಿಸುತ್ತಾನೆ.

ಮುಂದಿನ ದೃಶ್ಯ 3ರಲ್ಲಿ ಚೆಲುವಾಂಬೆ ಮತ್ತು ನಿಂಬಯ್ಯರು ಕೈಕೈ ಹಿಡಿದುಕೊಂಡು ಅರಮನೆಯ ಇನ್ನೊಂದು ಭಾಗದಲ್ಲಿ ಬರುವುದರೊಂದಿಗೆ ಅವರಾಡುವ ಮಾತುಗಳಿಂದ ಅವರಿಬ್ಬರ ಮನದಾಳದಲ್ಲಿಯ ಕೆಟ್ಟ ವಿಚಾರಗಳು ಅವರಿಬ್ಬರ ಏಕಾಂತದ ಸಮಯದಲ್ಲಿ ಹೊರಬರುತ್ತವೆ. ತಿಮ್ಮಜಟ್ಟಿಯೆಂಬಾತನನ್ನು ವಿಶ್ವಾಸಕ್ಕೆ ತೆಗೆದುಕೊಂಡು, ದೊರೆಯು ತೀರುವುದಕ್ಕಿತ ಮೊದಲು ಅಸ್ವಸ್ಥರಾದ ಅವರಿಗೆ ವೈದ್ಯನೊಬ್ಬನ ವೇಷದಲ್ಲಿ ಬಂದು ಮದ್ದನ್ನು ಕೊಡುವಂತೆ ನಟಿಸುತ್ತಾ ವಿಷವನ್ನು ಹಾಕಿ ಕೊಂದಿರುವ ವಿಷಯ ಅವರಿಬ್ಬರ ಸಂಭಾಷಣೆಯ ಮೂಲಕ ವ್ಯಕ್ತವಾಗುವ ಸಂದರ್ಭದಲ್ಲಿಯೇ ತಿಮ್ಮಜಟ್ಟಿಯು ಅವರಿರುವಲ್ಲಿಗೆ ಬರುತ್ತಾನೆ. ದೊರೆಯ ಆಕಷ್ಮಿಕ ಮರಣದ ವಿಚಾರವಾಗಿ ರಾಜ್ಯದಲ್ಲಿರುವ ಜನರು ಗುಸು-ಗುಸು ಮಾತಾಡುತ್ತಿರುವುದನ್ನು ತಿಳಿಸುವುದರೊಂದಿಗೆ ರಾಜಕುಮಾರ ಬಸವಯ್ಯನ ಪಟ್ಟಾಭಿಷೇಕವನ್ನು ಎಲ್ಲರೂ ಎದುರು ನೋಡುತ್ತಿರುವುದಾಗಿ ಹೇಳುತ್ತಾನೆ. ರಹಸ್ಯವನ್ನು ಕಾಪಾಡುವುದರೊಂದಿಗೆ ಮುಂದಿನ ದಿನಗಳಲ್ಲಿ ಐಶ್ವರ್ಯ-ಅಧಿಕಾರಗಳನ್ನು ನೀಡುವ ಆಮಿಷವನ್ನೊಡ್ಡಿ ತಿಮ್ಮಜಟ್ಟಿಗೆ ಮಂತ್ರಿ ಲಿಂಗಣ್ಣ, ಬಸವಯ್ಯ ಹಾಗೂ ಇನ್ನಿತರರ ಮೇಲೆ ನಿಗಾ ಇಡುವಂತೆ ಸೂಚಿಸಿ ಕಳಿಸುತ್ತಾರೆ.

ರಾಣಿ ಚೆಲುವಾಂಬೆಯ ಪ್ರಿಯಕರನಾಗಿರುವ ನಿಂಬಯ್ಯನಿಗೆ ರಾಜಕುಮಾರ ಬಸವಯ್ಯನ ನಡೆ ಆತಂಕಕಾರಿಯಾಗಿದ್ದು, ಮಂತ್ರಿ ಲಿಂಗಣ್ಣನ ನಡೆಯ ಕುರಿತು ಆತನಿಗೆ ಸಂಶಯವಿಲ್ಲ. ಇದನ್ನು ತನ್ನ ಪ್ರಿಯತಮೆ ರಾಣಿ ಚೆಲುವಾಂಬೆಯಲ್ಲಿ ವಿವರವಾಗಿ ಹೇಳುತ್ತಿರುವಾಗ ದ್ವಾಪಾಲಕನೊಬ್ಬನು ಬಂದು ಮಂತ್ರಿ ಲಿಂಗಣ್ಣನವರು ಆಗಮಿಸಿರುವುದನ್ನು ಅರುಹುತ್ತಾನೆ. ಇದರಿಂದ ಕೊಂಚ ವಿಚಲಿತಳಾದ ರಾಣಿ ಚೆಲುವಾಂಬೆ ನಿಂಬಯ್ಯನನ್ನು ಒಳಗಿನ ಕೊಠಡಿಯಲ್ಲಿ ಅಡಗಿಕೊಳ್ಳುವಂತೆ ತಿಳಿಸುತ್ತಾಳೆ. ನಿಷ್ಪಾಪಿ ಮಂತ್ರಿ ಲಿಂಗಣ್ಣನಿಗೆ ತಾನು ಹೇಳಬೇಕಾಗಿರುವ ವಿಷಯವನ್ನು ನೇರವಾಗಿ ಹೇಳುವುದನ್ನು ಕೊಠಡಿಯಲ್ಲಿ ಮರೆಯಾಗಿ ಅಡಗಿ ಕುಳಿತ ನಿಂಬಯ್ಯ ಕೇಳಿಸಿಕೊಳ್ಳುತ್ತಾನೆನ್ನುವುದು ತಿಳಿಯದು. ನಿಂಬಯ್ಯನೊಡನೆ ರಾಣಿಯ ಅತಿಸಲುಗೆಯನ್ನು ರಾಜಕುಮಾರ ಬಸವಯ್ಯನು ಆಕ್ಷೇಪಿಸಿರುವುದನ್ನು ಕೇಳಿದ ರಾಣಿಯು ಏನೊಂದು ತೋರ್ಪಡಿಸಿಕೊಳ್ಳದೇ ‘ರಾಜಕೀಯ ದೃಷ್ಟಿಯಿಂದಲೇ ಅಲ್ಲವೇ ನಾನು ನಿಂಬಯ್ಯನವರೊಡನೆ ಸಲುಗೆಯಿಂದಿರುವುದು. ನಿಮ್ಮೊಡನೆ ಸಲುಗೆಯಿಂದಿಲ್ಲವೇ?’ ಎಂದು ಲಘುವಾಗಿ ತೇಲಿಸಿ ಹೇಳುತ್ತಾ ‘ನಾನು ಸಹ ನಿಮ್ಮ ಪುತ್ರಿಯಂತಿರುವೆನಷ್ಟೇ?’ ಎಂದು ಭಾವನಾತ್ಮಕವಾಗಿ ಹೇಳಿ ‘ನಿಮ್ಮ ಮಗಳು ರುದ್ರಾಂಬೆಯನ್ನು ಇಲ್ಲಿಗೆ ಕಳುಹಿಸುವಿರಾ? ಆಕೆ ಜೊತೆಯಲ್ಲಿದ್ದರೆ ನನಗೆಷ್ಟೋ ಶಾಂತಿ, ಸಂತೋಷ’ ಎನ್ನುತ್ತಾ ಯಾವುದೇ ಸಂಶಯ ಬರದಂತೆ ಅವನನ್ನು ಕಳುಹಿಸುತ್ತಾಳೆ. ಮರೆಯಲ್ಲಿದ್ದು ಇದೆಲ್ಲವನ್ನು ಕೇಳಸಿಕೊಂಡ ನಿಂಬಯ್ಯನು ಹೊರಗೆ ಬಂದ ನಂತರ ತನ್ನ ನಿರ್ಧಾರವನ್ನು ‘ಬಸವಯ್ಯನನ್ನು ಹಿಡಿದು ಸಂಹರಿಸಿ, ಲಿಂಗಣ್ಣ ಮಂತ್ರಿಯನು ಸೆರೆಯಿಟ್ಟು ದರ್ಪದಿಂದಾಳುವುದು’ ಎಂದು ಹೇಳುತ್ತಾನೆ. ಇದನ್ನು ಕೇಳಿ ವಿಚಲಿತಳಾದ ರಾಣಿ ಚೆಲುವಾಂಬೆಯು ಕೇವಲ ಒಂದು ದೌರ್ಭಲ್ಯಕ್ಕೆ ಒಳಗಾಗಿ ಕೆಸರಿನಲ್ಲಿ ಕಾಲಿಟ್ಟಿದ್ದಕ್ಕಾಗಿ ಸರಣಿ ಕೊಲೆಯನ್ನು ಮಾಡಬೇಕಾಗುವುದಲ್ಲಾ ಎಂದು ನಿಂಬಯ್ಯನಿಗೆ ಹೇಳುವುದು ಹೀಗೆ :

ನಿಂಬಯ್ಯ, ನಾನಿದಕೆ ಸಮ್ಮತಿಸಲೊಲ್ಲೆ
ನಿನ್ನ ಸಂಗವ ಪಡೆಲೆಂದು ಮಾತ್ರವೆ ನಾನು
ದೊರೆಯ ಕೊಲ್ಲಲು ಮನಸುಮಾಡಿದೆನೆ ಹೊರತು
ರಾಜ್ಯಾಭಿಲಾಷೆಯಿಂದಲ್ಲ.

ಇಲ್ಲಿ ರಾಣಿಯ ಕ್ಷಣಿಕ ಸುಖಕ್ಕಾಗಿ ತಾನು ಮೂರ್ಖಳಾಗಿದ್ದು, ಅದಕ್ಕಾಗಿ ಪರಿತಪಿಸುವುದರ ಮೂಲಕ ಅವಳ ಮನೋಧರ್ಮ ಪ್ರಕಟಗೊಂಡಿದೆ. ಆದರೆ ನಿಂಬಯ್ಯ ‘ಈಗ ಕಾರ್ಯವಿಮುಖವಾದರೆ ನಮ್ಮ ಪ್ರೇಮೋದ್ಯಾನವೇ ಮಸಣವಾದಪುದೆಮಗೆ! ನಮ್ಮ ಅಧರಾಮೃತವೇ ಗರಳವಾದಪುದೆಮಗೆ’ ಎಂದು ಮುಂದಿನ ಕಾರ್ಯಕ್ಕೆ ಪ್ರೇರೇಪಿಸುತ್ತಾ ಸನ್ನಿವೇಶದ ಗಂಭಿರತೆಯನ್ನು ವಿವರಿಸುತ್ತಾನೆ.

ಇಟ್ಟ ಹೆಜ್ಜೆಯ ಮರಳಿ ಹಿಂತೆಗೆವುದೇಕೆ?
ಹನಿಯಾದರೇನಂತೆ ? ಹೊಳೆಯಾದರೇನಂತೆ?
ರಕ್ತವೆಂದೂ ರಕ್ತ ! ನಾನಿಹೆನು ; ಹೆದರದಿರು !

ಎಂದು ಹೇಳುತ್ತಾ ಇದೆಲ್ಲಾ ಇಷ್ಟವಿಲ್ಲದ ಚೆಲುವಾಂಬಿಕೆಗೆ ಮುಂದಿನ ಸರಣಿ ಕೊಲೆಗೆ ಪ್ರೇರೇಪಿಸುತ್ತಾನೆ.

ಇಂತಾಗುವದು ಎಂದು ನಾನು ಬಗೆದಿರಲಿಲ್ಲ.
ಬಸವಯ್ಯನನು ಕೊಂದು ಮುಂದೆ ಯಾರಿಗೆ ಪಟ್ಟ?

ಎಂದು ಕೇಳುತ್ತಿರುವಾಗ ಅವಳಲ್ಲಿ ಇನ್ನೂ ಮಾನವೀಯತೆ ಮತ್ತು ಮಲಮಗನೆಂಬ ಬೇಧವನ್ನು ಮರೆತು ತನ್ನ ಮಗನೆಂದು ಪರೋಕ್ಷವಾಗಿ ಒಪ್ಪಿಕೊಳ್ಳುವ ಅಂತಃಕರಣ ಅವಳಲ್ಲಿರುವುದನ್ನು ಗಮನಿಸಬಹುದು. ಇದನ್ನು ತಿಳಿದುಕೊಂಡ ನಿಂಬಯ್ಯನು ತನಗೆ ರಾಣಿ ದಕ್ಕಭೇಕು ಮತ್ತು ತನ್ನ ಮಗನಿಗೆ ರಾಜ್ಯ ಸಿಗಬೇಕು ಎಂಬ ತನ್ನ ದುಷ್ಟ ಹಂಚಿಕೆಯನ್ನು ಸಾಧಿಸಲು ಅವಳ ಮನವನ್ನು ಮತ್ತಷ್ಟು ರಾಡಿಯೆಬ್ಬಿಸುವುದು ಹೀಗೆ :

ಬಸವಯ್ಯನೇನು ನಿನ್ನಯ ಮಗನೇ? ಮಲತಾಯಿ
ಎಂದವನು ನಿನ್ನನೆದೆಮುಟ್ಟು ಹಳಿಯುತ್ತಿಹುದ
ನಾ ಬಲ್ಲೆ. ನಮ್ಮ ಸೋಮಯ್ಯನನು ದತ್ತಾಗಿ
ತೆಗೆದುಕೊಂಡರೆ ಕೆಲಸವಾಗುವುದು.

ಒಮ್ಮೆ ನಿಂಬಯ್ಯನ ಸಂಚಿನ ಬಲೆಗೆ ಬಿದ್ದ ಚೆಲುವಾಂಬೆ ನಿಸ್ಸಹಾಯಕಳಾಗಿ ಒದ್ದಾಡುತ್ತಾಳೆ.

ಮುಂದಿನ ದೃಶ್ಯ 4ರಲ್ಲಿ ಬಿದನೂರಿನ ಅನ್ನಸತ್ರದ ಮೂಲೆಯ ಕೋಣೆಯೊಂದರಲ್ಲಿ ರೈತ ಮತ್ತು ಕೆಂಚಣ್ಣ ಇಬ್ಬರೂ ತೃಣಾನಂದ ಪರಮಹಂಸ ಸನ್ಯಾಸಿಗಾಗಿ ಕಾದಿದ್ದಾರೆ. ಈ ತೃಣಾನಂದ ಪರಮಹಂಸನು ಡೋಂಗಿ ಸ್ವಾಮಿಯಾಗಿದ್ದು ಹೈದರಾಲಿಯ ಗೂಢಚಾರನಾಗಿದ್ದು ಸನ್ಯಾಸಿಯ ವೇಷದಲ್ಲಿ ಬಂದು ಬಿದನೂರಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ತಿಳಿದುಕೊಂಡು ಹೈದರಾಲಿಗೆ ತಿಳಿಸುತ್ತಿರುತ್ತಾನೆ. ದಿನಕ್ಕೆ ಒಂದೇ ಹುಲ್ಲುಕಡ್ಡಿಯೊಂದನ್ನು ತಿಂದು ಬದುಕುತ್ತಿರುವ ಈ ಸನ್ಯಾಸಿಯ ಹತ್ತಿರ ಅರಮನೆಯ ಕಾವಲುಗಾರ ಕೆಂಚಣ್ಣನು ತನಗೆ ರಾತ್ರಿಯಲ್ಲಿ ಕಾಣಿಸಿಕೊಳ್ಳುವ ದೊರೆಯ ಭೂತದಿಂದ ತೊಂದರೆಯಾಗದಿರಲೆಂದು ಮಂತ್ರಿಸಿದ ವಿಭೂತಿಯನ್ನು ತೆಗೆದುಕೊಂಡು ಹೋಗಲು ಬಂದಿದ್ದಾನೆ. ವಿಭೂತಿಯನ್ನು ಸನ್ಯಾಸಿಯಿಂದ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿಯೇ ತಿಮ್ಮಜಟ್ಟಿಯು ತಾನು ಮಾಡಿರುವ ದುಷ್ಟಕಾರ್ಯಗಳಿಂದ ಮನಸ್ಸು ತಳಮಳಗೊಂಡಿದ್ದಕ್ಕೆ ಶಾಂತವಾಗಿಡುವಂತೆ ಈ ತೃಣಾನಂದ ಪರಮಹಂಸನನ್ನು ನಂಬಿ ಅಲ್ಲಿಗೆ ಬರುತ್ತಾನೆ. ಅಲ್ಲಿ ಕೆಂಚಪ್ಪ ಬಂದು ಹೋದ ವಿಷಯವು ಸನ್ಯಾಸಿಯಿಂದ ತಿಳಿದು ತಿಮ್ಮಜಟ್ಟಿಯು ಇನ್ನಷ್ಟು ಗೊಂದಲ, ಉದ್ವೇಗಕ್ಕೊಳಗಾಗುತ್ತಾನೆ. ಇಂದಿನ ರಾತ್ರಿಯಲ್ಲಿ ರಾಜಕುಮಾರ ಬಸವಯ್ಯನು ರಾಜನ ಭೂತವನ್ನು ಪರೀಕ್ಷಿಸಲು ಹೋಗುವ ವಿಷಯವನ್ನು ಸನ್ಯಾಸಿಗೆ ತಿಳಿಸುತ್ತಾನೆ. ಇಲ್ಲಿ ಮಹಾಕವಿಗಳು ರೈತನ ಪಾತ್ರವನ್ನು ಸೃಷ್ಟಿಸಿ ಕೆಂಚಣ್ಣನೊಂದಿಗೆ ನಡೆಯುವ ಸಂಭಾಷಣೆಯಲ್ಲಿ ಜನರ ಮೂಢನಂಬಿಕೆ, ಅಂಧಶ್ರದ್ಧೆಗಳನ್ನು ದುರೂಪಯೋಗಪಡಿಸಿಕೊಳ್ಳುವ ಸನ್ಯಾಸಿಗಳ ಕುರಿತು ತಿಳಿಹಾಸ್ಯದ ಹಿನ್ನಲೆಯಲ್ಲಿ ಪ್ರೇಕ್ಷಕರಿಗೆ/ಓದುಗರಿಗೆ ಕಚಗುಳಿಯಾಗುವಂತೆ ಮಾಡಿದ್ದಾರೆ.

ಮುಂದಿನ ದೃಶ್ಯ 5ರಲ್ಲಿ ಲಿಂಗಣ್ಣ ಮಂತ್ರಿಯ ಮನೆಯ ಮುಂಭಾಗದಲ್ಲಿ ಲಿಂಗಣ್ಣ, ಬಸವಯ್ಯ, ರುದ್ರಾಂಬೆ ಬರುತ್ತಾರೆ. ರುದ್ರಾಂಬೆ ಎಂಬ ಕಥಾನಾಯಕಿ ಪಾತ್ರವು ಮೊದಲ ಬಾರಿಗೆ ಪ್ರವೇಶಿಸುವುದರೊಂದಿಗೆ ರುದ್ರಾಂಬೆ ಮತ್ತು ರಾಜಕುಮಾರ ಬಸವಯ್ಯರ ನಡುವಿನ ಸಂಭಾಷಣೆಯಲ್ಲಿ ಅವರಿಬ್ಬರಲ್ಲಿಯ ಉನ್ನತ ಆದರ್ಶ ಪ್ರೇಮವು ವ್ಯಕ್ತವಾಗುತ್ತದೆ. ದೃಶ್ಯದಾರಂಭದಲ್ಲಿ ಮಹಾಕವಿಗಳು ರುದ್ರಾಂಬೆಯ ಪಾತ್ರದ ಕುರಿತು ಹೇಳಿರುವುದು ರಂಗಪ್ರಯೋಗಕ್ಕೆ ಈ ಪಾತ್ರಧಾರಿಯನ್ನು ರಂಗನಿರ್ದೇಶಕರು ಆಯ್ಕೆಮಾಡುವಿಕೆಯನ್ನು ಸರಾಗಗೊಳಿಸಿದ್ದಾರೆ. ಸುಮಾರು ಹದಿನಾರು ವರ್ಷದ ಸುಂದರ ಯುವತಿಯಾಗಿದ್ದರೂ ಆಕೆಯ ಅಂಗವಿನ್ಯಾಸದಲ್ಲಿ ಯಾವುದೇ ದುರ್ಭಲತೆಯ ಲಕ್ಷಣಗಳಿಲ್ಲ, ಹಂಗಂತ ಗಂಡುಭೀರಿಯಲ್ಲ ; ಕೋಮಲೆಯಾದರೂ ಸಬಲೆಯಂತೆ ಕಾಣುತ್ತಾಳೆ. ಸ್ತ್ರೀಸಹಜವಾದ ಆಕೆಯ ಸೌಂದರ್ಯದ ಅಂತರಾಳದಲ್ಲಿ ಸಮಯ ಬಂದರೆ ಹೊರಹೊಮ್ಮಲು ಅನುವಾಗಿರುವ ಪೌರುಷಯುಕ್ತವಾಗಿರುವ ರೌದ್ರವಿರುವಂತೆ ತೋರುತ್ತದೆ. ಬಹು ದೂರದ ಮಿಂಚಿನಂತೆ ಮನೋಹರವಾಗಿದ್ದಾಳೆ. ಆಕೆಯ ಸುಕೋಮಲ ಮಧುರವಾಣಿಯಲ್ಲಿ ದಿಟ್ಟತನದ ಕುರುಹು ತೋರುವುದು ಎಂದು ಪಾತ್ರದ ಕುರಿತು ಮಹಾಕವಿಗಳು ಸ್ಥೂಲವಾಗಿ ವಿವರಿಸುತ್ತಾರೆ. ರಾಜಕುಮಾರ ಬಸವಯ್ಯನ ಕದಡಿದ ಮನಕ್ಕೆ ಮತ್ತು ಮನದ ಆ ನೋವಿನಲ್ಲಿ ತಾನೂ ಭಾಗಿಯಾಗುತ್ತಾಳೆ.

……ಇನಿಯ, ಸುಖದಲ್ಲಿ
ಅರೆಪಾಲನೆಳಸುತಿಹ ನಾನು ನಿನ್ನಳಲಿನಲಿ
ಅರೆಪಾಲನಾನಂದದಿಂದೇ ಬಯಸುತಿಹೆನು,
ಲೋಕದಲ್ಲಿ ಪ್ರೇಮವಾದರೂ ಇರುವುದೇತಕ್ಕೇ?
ನೊಂದೆದೆಯ ಸಂತೈಸಲಲ್ಲವೇ? ಜೀವನದ
ಕೋಟಲೆಯ ಭಾರವನು ಪರಿಹರಿಸಲಲ್ಲವೇ?

ಎಂದು ಸಮಾಧಾನಿಸುತ್ತಾಳೆ. ತನ್ನ ತಂದೆಯ ಮರಣದ ಕುರಿತಾಗಿರುವ ಸಂಶಯವನ್ನು ಅವಳ ಮುಂದೆ ತಿಳಿಸಿದಾಗ ಅವಳೂ ಸಹ ಅವಳ ತಂದೆ ಮಂತ್ರಿ ಲಿಂಗಣ್ಣನಂತೆ ‘ಆದರಾ, ಸಂಶಯಕೆ ಕಾಲಿಲ್ಲವೆಂದೆನ್ನ ಭಾವನೆ’ ಎಂದು ಹೇಳುತ್ತಾಳೆ. ‘ಚೇಳಿಗೆ ಕಾಲೇಕೆ ರುದ್ರಾ? ಕೊಂಡಿಯೊಂದೆ ಸಾಕು!’ ಎಂದು ಮಾರ್ಮಿಕವಾಗಿ ನುಡಿಯುವ ಬಸವಯ್ಯನ ಮನದ ನೋವು ರುದ್ರಾಂಬೆಗೆ ಅರ್ಥವಾಗುವುದಿಲ್ಲ. ರಾಣಿ ಚೆಲುವಾಂಬೆಯಲ್ಲಿ ಅಂತಹ ಯಾವುದೇ ಕೆಟ್ಟದ್ದನ್ನು ಕಾಣದ ಮುಗ್ದ ಮನದ ಚೆಲುವೆ ರುದ್ರಾಂಬೆಗೆ ಹಿಂದೊಮ್ಮೆ ರಾಣಿಯು ಕಣ್ಣಿರು ಸುರಿಸಿರುವುದನ್ನು ಜ್ಞಾಪಿಸಿಕೊಳ್ಳುತ್ತಾಳೆ. ಆಗ ರಾಜಕುಮಾರ ಬಸವಯ್ಯನು ಹೇಳುವ ಮಾತು ಹೀಗಿದೆ :

ಶಿವ ಶಿವಾ !
ಎಲ್ಲ ಹುಸಿಗಂಬನಿಗಳಲ್ತೆ? ರುದ್ರಾಂಬೆ,
ಕಣ್ಣೀರ್ಗಳಾಳದಲಿ ನಾಕವಿರಬಹುದು,
ನರಕವಿರಬಹುದು ; ಹರುಷವಿರಬಹುದು,
ಶೋಕವಿದಬಹುದು. ಕೈತವಕೆ ಕಂಬನಿಯೆ
ಮುಸುಗಾಗಬಹುದು. ಚೆಲುವಾಂಬೆಯಶ್ರುಗಳ
ಹೃದಯದಲಿ ಮೊಸಳೆಗಳ ಮಡುವಿಹುದ ನಾಂ ಬಲ್ಲೆ.

ಎಂದು ಹೇಳುವುದು ಆತನ ಮಡುಗಟ್ಟಿದ ದುಃಖದಲ್ಲಿ ಯಾರನ್ನೂ ನಂಬುವ ಸ್ಥಿತಿಯನ್ನು ತಲುಪಿದ್ದಾನೆ. ಆದರೂ ‘ಕಾರಣವನರಿಯದೇ ದೋಷಗಳ ಹೇಳುವುದೆ?’ ಎಂಬ ಅವಳ ಸಂಶಯಕೆ ‘ಇಂದಿನಿರುಳೆಲ್ಲವನು ಮನಗಾಣುವೆನು’ ಎಂದು ಬಸವಯ್ಯನು ತಾನು ಅಂದಿನ ರಾತ್ರಿಯ ಸಂದರ್ಭದಲ್ಲಿ ತನ್ನ ತಂದೆಯ ಭೂತಾಕೃತಿಯನ್ನು ಕಾಣಲು ಹೋಗುವ ಸಂಗತಿಯನ್ನು ಹೇಳುತ್ತಾ ತಾನು ಹೋಗಲಿರುವ ಸಂಗತಿಯನ್ನು ಯಾರೊಬ್ಬರಲ್ಲಿಯೂ ಹೇಳಬಾರದೆನ್ನುವ ಮಾತನ್ನು ಕೇಳುತ್ತಾ ತನ್ನ ತಂದೆಯನ್ನು ನೋಡಲು ಹೊರಡುತ್ತಾಳೆ. ಅವಳು ಹೋದ ನಂತರ ಈ ದೃಶ್ಯದಲ್ಲಿ ರುದ್ರಾಂಬೆಯು ರಾಜಕುಮಾರ ಬಸವಯ್ಯನ ಕಣ್ಣಿನಲ್ಲಿ ಹೇಗೆ ಕಾಣುವಳೆಂಬುದನ್ನು ಅವನ ಮಾತಿನಲ್ಲಿ ಮಹಾಕವಿಗಳು ಹೀಗೆ ವರ್ಣಿಸುತ್ತಾರೆ :

ಓ ಚೆಲುವೆ, ನೀನೆನ್ನ ಬಳಿಗೆ ಬರೆ ನನಗೆನಿತು
ಸೊಗವಹುದು !
ಬಿದಿಯ ಬಯಕೆಯ ಮೊದಲ ಕಿಡಿ ನೀನು !
ಬಿರಿಯುವಲರಂತೆ, ಸುಳಿಸುಳಿವ ತೆಂಬೆಲರಂತೆ,
ಮಿರುಪ ಹೊಂಬಿಸಿಲಲ್ಲಿ ನಲಿವ ಕೆಂದಳಿರಂತೆ,
ಬಿರಿಮುಗುಳ ಮುಡಿದಿರುವ ಮಲ್ಲಿಗೆಯ ಹೊರಂತೆ,
ಹೊಸ ಮುಗಿಲಿನಲಿ ನಲಿವ ಕಾಮನ ಬಿಲ್ಲಿನಂತೆ,
ನೊರೆಯ ಸೇಸೆಯ ಚೆಲ್ಲಿ ಬಿಂಕದಿಂ ಪರಿಯುತಿಹ
ತೊರೆಯಮತೆ, ಮುಂಬೆಳಗಿನೈಸಿರಿಯ ಮುಗುಳ್ನಗೆಯಂತೆ
ಮೆರೆಯುತಿಹೆ, ಓ ನಲ್ಲೆ, ಚೈತ್ರದಾಗಮನದಲಿ
ನಳನಳಿಸಿ ನಲಿವ ಬನಮಾಲೆಯಂತೆ !
ನೀನೆನಗೆ ಚೈತನ್ಯದಾತೆ ! ನೀನೆನಗೆ
ಜೀವರಸವಾಹಿನಿ ! ಬಾಳ ಮರುಭೂಮಿಯಲಿ
ನೀನೆನಗೆ ಮರುವನ ! ರುದ್ರಾಂಬೆ ! ರುದ್ರಾಂಬೆ !

ಈ ಮಾತಿನಲ್ಲಿ ಅವರಿಬ್ಬರ ಗಾಢಪ್ರೇಮದ ಕುರಿತು ನಾವು ಅರಿತುಕೊಳ್ಳಬಹುದು ಎಂಬ ವಿಚಾರದೊಂದಿಗೆ ಮೊದಲನೆಯ ಅಂಕ ಮುಕ್ತಾಯವಾಗುತ್ತದೆ. ಈ ಅಂಕದಲ್ಲಿ ನಮಗೆ ಶಿವಯ್ಯನೊಬ್ಬನನ್ನು ಬಿಟ್ಟು ಉಳಿದೆಲ್ಲಾ ಪಾತ್ರಗಳು ಪರಿಚಯಗೊಂಡಿವೆ. ಪರಿಚಯಗೊಂಡಿರುವ ಪಾತ್ರಗಳ ಗುಣ-ಸ್ವಭಾವಗಳನ್ನು ಮತ್ತು ಅವುಗಳ ಸಂಘರ್ಷದ ಕುರಿತಾಗಿ ಅರಿತುಕೊಂಡಿದ್ದೇವೆ. ರಾಜಕುಮಾರ ಬಸವಯ್ಯ ಇನ್ನೂ ತನ್ನ ತಂದೆಯ ಭೂತವನ್ನು ಕಂಡಿಲ್ಲ. ಇಂದಿನ ರಾತ್ರಿಯಲ್ಲಿ ಅಲ್ಲಿಗೆ ಹೋಗಿ ನೊಡಿಕೊಂಡು ಬರುವವನಿದ್ದಾನೆ. ಷೇಕ್ಸ್‍ಪೀಯರ್‍ನ ಮೂಲ ಕೃತಿ ‘ಹ್ಯಾಮ್ಲೆಟ್’ದಲ್ಲಿ ಮೊದಲ ಅಂಕದಲ್ಲಿಯೇ ದೊರೆಯ ಭೂತ ಕಾಣಿಸಿಕೊಂಡು ಮಾತಾಡುತ್ತದೆ. ಆದರೆ ಇಲ್ಲಿ ಮಹಾಕವಿಗಳು ಅದನ್ನು ಎರಡನೆಯ ಅಂಕದಲ್ಲಿ ಅಳವಡಿಸಿದ್ದಾರೆ. ಇನ್ನೂ ಕುತೂಹಲಕರವಾಗಿ ಅಂದರೆ ಹೈದರಾಲಿಯ ಕಡೆಯ ಗೂಢಚಾರನನ್ನು ಸನ್ಯಾಸಿ ವೇಷತೊಡಿಸಿರುವುದು ಮಹಾಕವಿಗಳ ಕಲ್ಪನಾ ಸೃಷ್ಟಿ. ಇದರಿಂದ ಸಂಪೂರ್ಣ ಕೃತಿಗೆ ಅದ್ಭುತ ಹಿನ್ನಲೆ ದೊರಕಿದಂತಾಗಿದೆ.

(…..ಮುಂದುವರೆಯುತ್ತದೆ)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Jayaprakash Abbigeri
Jayaprakash Abbigeri
10 years ago

ಸಿದ್ದರಾಮ್,  ಕನ್ನಡ ನಾಟಕವೊಂದಕ್ಕೆ ಸ್ಪೂರ್ತಿಯಾಗಿರುವ ಆಂಗ್ಲ ನಾಟಕದ ಸಾರಾಂಶವನ್ನು ನೀಡಿದ್ದ ಕಳೆದ ಸಂಚಿಕೆಯ ಬರವಣಿಗೆಯು ಮುಂದಿನ ಸಂಚಿಕೆಯನ್ನು ಕುತೂಹಲದಿಂದ ಓದುವಂತೆ ಮಾಡುತ್ತಿದೆ. ಕುವೆಂಪು ಅವರಂತ ಮಹಾ ಮೇರುಪರ್ವತದ ಕೃತಿಗಳೇ ಹಾಗೆ…ಆದಿಯಿಲ್ಲದ ಮತ್ತು ಅಂತ್ಯವಿಲ್ಲದ ವಿಷಯಗಳನ್ನು ಒಳಗೊಂಡಿರುತ್ತವೆ…ಉತ್ತಮ ಬರವಣಿಗೆ…ಶುಭವಾಗಲಿ !

1
0
Would love your thoughts, please comment.x
()
x