ಘಮ್ಮೆನ್ನುವ ಹಸಿ ಮೈಯ್ಯ ವಾಸನೆಯಿಂದ ಆಗ ತಾನೆ ಮಿಂದು ಎದ್ದಿದ್ದೆ, ಮಣ್ಣಿನ ಗೋಡೆಗೆ ಮೆತ್ತಿಸಿದ್ದ ಕನ್ನಡಿ ಮುಂದೆ ನಿಂತು, ಮುಖವನ್ನು ವೃತ್ತಾಕಾರವಾಗಿ ತಿರುಗಿಸುತ್ತಾ, ಕೀವುಗಟ್ಟಿದ ಮೊಡವೆಗಳೊಂದಿಗೆ ಮಾತಾಡುತ್ತಿದ್ದೆ. ಕಪ್ಪು ಚರ್ಮವನ್ನು ಬಿಳಿಯಾಗಿಸುವ ಕನಸು ಕಾಣುತ್ತಿದ್ದೆ. ಆಗಾಗ ಮಡಕೆತಳ ಎಂದು ಛೇಡಿಸುವ ಗೆಳತಿಯರ ಮಾತು, ಒಮೊಮ್ಮೆ ನಾನೇ ನಿಂಗೆ ಗತಿ ಕಣೇ ಎಂದು ರೇಗಿಸುವ ಮುವತ್ತೆರಡರ ಸೋದರ ಮಾವನ ಮಾತು, ನನ್ನ ಕನಸನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿತ್ತು. ಶಾಲೆಯಲ್ಲಿ ಪಕ್ಕ ಕೂರುತಿದ್ದ ಸ್ನೇಹಾಳ ಮೈಯ್ಯಲಿದ್ದ ಬೋರೋ ಪ್ಲಸ್ ವಾಸನೆಗೆ ರೋಮಾಂಚನಗೊಳ್ಳುತ್ತಿದ್ದೆ. ಪಾಠ ಮಾಡುತಿದ್ದ ಮಾಸ್ತರರನ್ನು ಬಿಟ್ಟು, ಕಣ್ಣಿಗೆ ರಾಚುವಂತೆ ಫಳ ಫಳ ಹೊಳೆಯುತಿದ್ದ ಸುವರ್ಣಳ ಗೆಜ್ಜೆ, ಬಣ್ಣದ ಬಟ್ಟೆ, ತೆಳ್ಳಗೆ ಬೆಳ್ಳಗಿದ್ದ ಭಾಗ್ಯಳ ಕಾಲಿಗೆ ಇನ್ನಷ್ಟು ಬೆರಗು ಕೊಟ್ಟಿದ್ದ ಹೂವಿನ ಚಪ್ಪಲಿ ನೋಡುವಷ್ಟರಲ್ಲಿಯೇ ಘಂಟೆ ಬಾರಿಸುತ್ತಿತ್ತು.
ನನ್ನ ಚರ್ಮವನ್ನು ಬಿಳಿಯಾಗಿಸುವ ಕನಸನ್ನು ನನಸು ಮಾಡಿಕೊಳ್ಳಲು, ಆಗಾಗ ಶಾಲೆಗೆ ರಜೆ ಹಾಕಿ, ನಮ್ಮೂರಿನ ಕೆರೆ ಏರಿ ಹಿಂದೆ ಇದ್ದ, ಇಪ್ಪೆ ಮರದ ಕಾಯಿಗಳನ್ನು ಆಯ್ದು, ಮಾರಿ, ಬಂದ ಹಣದಿಂದ ಫ್ಯಾರಂಡ್ ಲೌಲಿ ಕೊಳ್ಳುತ್ತಿದ್ದೆ. ಯಾಕೇ…? ನೆನ್ನೆ ಕ್ಲಾಸಿಗೆ ಬಂದಿಲ್ಲ, ಎಂದು ಮರುದಿನ ನನ್ನ ಗೆಳತಿ ಪರ್ಜಾನ ಕೇಳುವ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ. ಒಂದು ಸಣ್ಣ ಫ್ಯಾರಂಡ್ ಲೌಲಿಗಾಗಿ ಕ್ಲಾಸಿಗೆ ಬಂದಿಲ್ವ ಎಂದು ಛೇಡಿಸುತ್ತಾರೆಂಬ ಭಯ ನನಗೆ, ಆದರೆ ಫರ್ಜಿ ನಾನಂದುಕೊಂಡಂತೆ ಇರಲಿಲ್ಲ. ನನ್ನೆಲ್ಲಾ ಭಾವನೆಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡು ಕಣ್ಣೀರಿಟ್ಟಿದ್ದಳು.
ಕಪ್ಪು ಬುರ್ಕಾದಿಂದ ಮುಚ್ಚಿದ್ದ, ಬೆಳ್ಳಗಿದ್ದ ಮೆದುವಾದ ಕೈಗಳಿಂದ ನನ್ನ ಬಾಚಿ ತಬ್ಬಿ, ಬೇಸರ ಮಾಡ್ಕೋಬೇಡ ಚಂದ್ರಿ.. ಹಲ್ಲಿಲ್ಲದವರಿಗೆ ಕಡ್ಲೆ ಇಲ್ಲ, ಕಡ್ಲೆ ಇದ್ದವರಿಗೆ ಹಲ್ಲಿಲ್ಲ ಅನ್ನೋ ಗಾದೆನಾ ನನ್ನ ನಿನ್ನ ನೋಡಿನೇ ಕಟ್ಟಿರಬೇಕು ಕಣೇ.. ಎಂದು ಮಾತಿಗಿಳಿದಳು. ನಂಗೂ ನಿಂತರನೇ ಫ್ಯಾರಂಡ್ ಲೌಲಿ, ಉಗ್ರು ಬಣ್ಣ, ಮೇಂದಿ, ಬಟ್ಟು ಇದುನ್ನೆಲ್ಲಾ ಆಕಂಡು ನಾನು ಹೆಂಗ್ ಕಾಣ್ತೀನಿ ಅಂತ ನೋಡ್ಕೊಳೋ ಆಸೆ ಚಂದ್ರಿ. ಆದ್ರೆ.. ಇದು ನನ್ನ ಮನೆಯಲ್ಲಿ ಅಪರಾಧ. ನನ್ನಕ್ಕ ಶಭಾನ, ಅವ್ಳ ಗೆಳತಿ ಮದ್ವೇಲಿ ಕೈಗೆ ಮೇಂದಿ ಆಕಂಡಿದ್ದಕ್ಕೆ, ಅಮ್ಮ ಬರೆ ಇಟ್ಟಿದ್ರು. ಇವತ್ತೂ ನಂಗೆ ಯಾರ್ ಕೈಯ್ಯಲಾದ್ರೂ ಮೇಂದಿ ನೋಡಿದ್ರೆ, ನನ್ನಕ್ಕನ ಕೂಗು ಕೇಳುತ್ತೆ. ಅದುಕ್ಕೆ ನಂಗೂ ಆಸೆ ಇದ್ರೂ.. ಇದ್ಯಾವುದರ ಉಸಾಬರಿಗೆ ಹೋಗದೆ, ನಮ್ಮನೆ ಪಕ್ಕ ಕಾಲೇಜಿಗೋಗೋ ಪವಿನ ನೋಡಿ ಖುಷಿ ಪಡ್ತೀನಿ, ನಾನೇ ಅವಳಾಗ್ತೀನಿ. ಅಷ್ಟರಲ್ಲಿ ಓಡಿ ಬಂದು, ನಿಟ್ಟುಸಿರು ಬಿಡುತ್ತಾ, ಫರ್ಜೀ.. ಪವಿ ಇನ್ನಿಲ್‍ವಂತೆ ಕಣೇ.. ಎಂದು ಅಳಲು ಶುರು ಮಾಡಿದ್ದ ಭಾಗೀಗೆ ಫರ್ಜೀನೂ ಧನಿಗೂಡಿಸಲು ಶುರು ಮಾಡುದ್ಲು.
ಅವಳ ಹೆಸರು ಪವಿತ್ರ. ಪ್ರೀತಿಯಿಂದ ಎಲ್ರೂ ಅವಳನ್ನ ಪವಿ ಅಂತ ಕರೀತಿದ್ರು. ಎರಡ್ ಮೂರ್ ದಿನದಿಂದ ಪವಿ ಕಾಣ್ತಾ ಇರ್‍ಲಿಲ್ಲ, ನಮ್ಮೂರಿನ ಜನರಿಗೆ ಬಿಸಿ ಬಿಸಿ ಕಾಫಿ ಜೊತೆಗೆ ತಿನ್ನೋ ಬಜ್ಜಿ ಸಿಕ್ಕಿದಂಗೆ, ಪವಿ ಇಲ್ಲಾ ಅನ್ನೋ ವಿಷ್ಯಾ ಸಿಕ್ತು. ಹಳ್ಳಿ ಕಟ್ಟೆ ಮೇಲೆ ಕೂತು ಮಾತಾಡೋ ಗಂಡಸ್ರ ಬಾಯಲ್ಲಿ, ಹಟ್ಟೀಲಿ ಕೂತ್ ಮಾತಾಡೋ ಹೆಂಗಸ್ರ ಬಾಯಲ್ಲಿ ಪವಿನೇ ಹರಿದಾಡ್ತಾ ಇದ್ಲು.
ದಿನಾಗ್ಲೂ ಫಿಲಂ ಈರೋಯಿನ್ ತರ ಮೇಕಪ್ ಮಾಡ್ಕಂಡು, ಪ್ಯಾಟೆಗಿರೋ ಕಾಲೇಜಿಗೋತಿದ್ಲು. ಯಾವನ್ ಹಿಂದೆ ಹೋದ್ಲೋ.. ಎಂದು ಮಾತಾಡಿಕೊಳ್ಳುವ ಊರಿನ ಜನರ ಮಾತು ಪವಿ ಮನೆಯವ್ರಿಗೆ, ಅವಳ ಮೇಲಿನ ಕೋಪ ಹೆಚ್ ಮಾಡ್ತು. ಎರಡ್ ಮೂರ್ ದಿನದ್ ನಂತರ ವಾಪಸ್ ಬಂದ ಪವೀನಾ ಮನೇವ್ರು, ಊರಿನ ಹಿರಿಯರು ಸೇರ್ಕಂಡು, ತರಾಟೆ ತಗಂಡ್ರು. ಅವ್ರ ಯಾವ ಪ್ರಶ್ನೆಗೂ ಉತ್ತರ ಕೊಡ್ದೆ ಪವಿ, ಗರಬಡ್ದಿರೋಳ್ ತರ ಸುಮ್ನೆ ಕೂತ್ಕಂಡಿದ್ಲು. ಯಾವ್ದೋ ದೆವ್ವ ಗಿವ್ವ ಮೆಟ್ಕಂಡಿರ್ಬೇಕು ಅಂತ, ಊರಿನ ಐನೋರತ್ರ ಮಂತ್ರ ಹಾಕುಸ್ಕಂಡ್ ಬಂದ್ರು, ಮಸೀದಿಗೋಗಿ ಯಂತ್ರ ಕಟ್ಟುಸ್ಕಂಡ್ ಬಂದ್ರು, ಇದ್ಯಾವದಕ್ಕೂ ಬಗ್ದೆಯಿರೋ ಪವಿನ ಆಸ್ಪತ್ರೆಗ್ ಕರ್‍ಕಂಡ್ ಹೋದ್ರು, ಚಕಪ್ಪು ಗಿಕಪ್ಪೆಲ್ಲಾ ಮಾಡಿದ್ ಡಾಕ್ಟ್ರು she is drug addict ಎಂದು ಹೇಳಿ ಅವಳನ್ನು ಅಡ್ಮಿಟ್ ಮಾಡ್ಕಂಡ್ರು…
-ಮಂಜುಳ.ಎಸ್