ಚಿನ್ಮಯ್ ಮಠಪತಿ ಅಂಕಣ

ನನ್ನೊಳಗಿನ ಗುಜರಾತ (ಭಾಗ 10): ಚಿನ್ಮಯ್ ಮಠಪತಿ

 

ಅವು ತುಂಬು ಸಿಹಿಯಾದ ಅನುಭವಗಳು. ಅವುಗಳ ಕಡೆಗೆಯೇ ಸಾಗಿ ಮತ್ತೆ ಮತ್ತೆ ಅಲ್ಲಿಗೆ ನುಸುಳುತ್ತಿತ್ತು ಮನಸ್ಸು, ತುಂಬು ಚಿತ್ತವನ್ನು ತನ್ನ ಬೆನ್ನೇರಿಸಿಕೊಂಡು. ಎಷ್ಟೇ ಪ್ರಯತ್ನ ಪಟ್ಟರು ಆ ವಲಯದಿಂದ ಹೊರ ಬರಲಾಗಲೇ ಇಲ್ಲ. ಯಾಕೆ ನಾವು  ಒಮ್ಮೊಮ್ಮೆ ಇನ್ನೊಬ್ಬರು ಧಾರೆ ಎರೆವ ಪ್ರೀತಿ ವಿಶ್ವಾಗಳ ಅಭಿಮಾನಿಗಳಾಗಿ ಬಿಡುತ್ತೇವೆ? ಅವರನ್ನು ಅಷ್ಟಾಗಿ ಹಚ್ಚಿಕೊಂಡು ಬಿಡುತ್ತೇವೆ ? ಅವರ ಜೊತೆಗಾರಿಕೆ, ಸಾಂಗತ್ಯಕ್ಕೆ ಹಾತೋರೆಯುತ್ತೇವೆ? ಅವರಿಲ್ಲದ ಕ್ಷಣಗಳಲ್ಲಿ ಅವರಿಗಾಗಿ ಕನವರಿಸುತ್ತೇವೆ? ಎಲ್ಲವುಗಳಿಗೆ ಉತ್ತರವಂತೂ ಇದ್ದೆ ಇದೇ. ಅದೇ ಪ್ರೀತಿ ವಿಶ್ವಾಸವಲ್ಲವೇ? ಈ ಎರಡರಿಂದ ಏನನ್ನಾದರು ಪಡೆಯಬಹುದು, ಎಂಥ ಕಠೋರ ಹೃದಯಗಳಿಗೂ ಗೂಳಿಯಂತೆ ಇವುಗಳ ಜೊತೆ ನುಗ್ಗಬಹುದು, ಮತ್ತು ಅಲ್ಲಿ ನಮ್ಮ ಛಾಪನ್ನು ಮೂಡಿಸಬಹುದು. ನಮ್ಮತನವನ್ನು ಅಚ್ಚಳಿಯದಂತೆ ನೆನಪಿನಗೂಡಲ್ಲಿ ಒತ್ತಿ ಜೀವನ ಗೆಳೆಯರಾಗಿ ಬಿಡಬಹುದು.

ನನ್ನ ನಲವತ್ತೈದು ದಿನಗಳ ಮೊದಲ ಗುಜರಾತ ಪ್ರಯಾಣದಲ್ಲಿ ಅತ್ಯಂತಹ ವಿಶೇಷವಾದ ವ್ಯಕ್ತಿಯೆಂದರೆ, ವಸಂತ ದಾದಾ. ಬಹುಷಹ 65ರ ಹರೆಯ ಇರಬಹುದು. ನನ್ನ ಜೊತೆಗೆ ತುಂಬು ಆಹ್ಲಾದಕರ ಒಡನಾಟವನ್ನು ಹೊಂದಿದಂತಹ ವ್ಯಕ್ತಿ ನನ್ನ ಸ್ನೇಹಿತ ಆ ವಸಂತ ಭಾಯ್. ಅದೇಕೆ ಅಷ್ಟು ಗಾಢವಾದ ಸ್ನೇಹ ನಮ್ಮಿಬ್ಬರ ನಡುವೆ ಬೆಳೆಯಿತೋ ನಾ ಅರಿಯೇ. ಒಟ್ಟಾರೆ ನಾನಿದ್ದ ಗ್ರಾಮದ ರಹವಾಸಿಯಾದಂತಹ ಆ ದಾದ ಮತ್ತು ಅವನು ನೀಡಿದ ಸ್ನೇಹ ಇವತ್ತಿಗೂ ಚಿರಾಯು.

ಒಂದು ದಿನ ಸಂಜೆ ಹೀಗೆಯೇ ಚಹಾ ಕುಡಿಯಲೆಂದು ಹೋಗಿದ್ದ ನಾನು. ಒಂದು ಚಿಕ್ಕ ಚಪ್ಪರದ ಚಹಾ ಅಂಗಡಿಯಲ್ಲಿ ಚಹಾ ಕುಡಿದು ಇನ್ನೇನು ಹೊರ ಬರುತ್ತಿದ್ದಂತೆಯೇ, ದಾದಾ, ಇನ್ನಷ್ಟು ಹೊತ್ತು ಕುಳಿತುಕೊಳ್ಳಿ, ಇನ್ನೇನು ಬಜಿ ಮಾಡುತ್ತೇನೆ ತಿಂದುಕೊಂಡು ಹೋಗಿ ಎಂದ. ನಾನು ತುಸು ಪುರಸೊತ್ತಿನಿಂದ ಕೂಡಿದ್ದರಿಂದ ಕುಳಿತುಕೊಂಡೆ. ಇತ್ತ, ದಾದಾ, ತನ್ನ ಮಗ ನಡೆಸುತ್ತಿದ್ದ ಪುಟ್ಟ ಹೊಟೇಲ್ ನಲ್ಲಿ ಸಂಜೆ ಹೊತ್ತು ಸಹಾಯಕ್ಕೆಂದು ಬರುತ್ತಿದ್ದ. ಐದು- ಹತ್ತು ನಿಮಿಷಗಳಲ್ಲಿ ಬಜಿ ಮಾಡಲು ಬೇಕಾದ  ಕಡಲೆ ಹಿಟ್ಟಿಗೆ ಹಸಿ ಮೆಣಸು, ಈರುಳ್ಳಿ, ಕೊತ್ತಮ್ಬರಿ, ಅಜಿವಾನ, ಸೋಡಾ,  ಮುಷ್ಠಿ ಉಪ್ಪು ಹಾಕಿ ಚೆನ್ನಾಗಿ ಕಲಕಿ ಕೆಂಪಗೆ ಕಾದಿದ್ದ ಒಲೆಯ ಒಳ್ಳೆಣ್ಣೆಯ ಕಡಾಯಿಗೆ ಹಿಡಿ ಹಿಡಿಯಾಗಿ ಬಿಟ್ಟ. ಚೆನ್ನಾಗಿ ಬಿಸಿ ಎಣ್ಣೆಯಲ್ಲಿ ಕರೆದು ತೆಗೆದ ಬಜ್ಜಿಯನ್ನು ಒಂದು ಪ್ಲೇಟ್ನಲ್ಲಿ ಹಾಕಿ ತಿನ್ನಿ ಅಂತ ನನ್ನ ಕೈಗಿತ್ತ ದಾದಾ. ಆವತ್ತು ಒಂದು ಪ್ಲೇಟ್ ದಾದಾನ ಕೈ ಬಜಿ ತಿಂದು ಒಂದು ಗಂಟೆ ಹರಟಿ ಅಲ್ಲಿಂದ ಮರಳಿದೆ. ಹಾಗೆ, ಸಮಯ ಸಿಕ್ಕಾಗಲೆಲ್ಲ ದಾದಾನ ಅಂಗಡಿಗೆ ಬಜ್ಜಿಯ ರುಚಿ ಸವಿಯಲು ಹೋಗುತ್ತಿದ್ದೆ.

ಈ ಮಾರ್ಗವಾಗಿ ಒಂದೆರಡು ವಾರದಲ್ಲಿ ನಮ್ಮಿಬ್ಬರ ನಡುವೆ ಒಂದು ಸ್ನೇಹ ಜೀವ ಹುಟ್ಟಿಕೊಂಡು ಬಿಟ್ಟಿತು. ಅಲ್ಪಸಮಯದಲ್ಲಿಯೇ ನಮ್ಮನ್ನು ಒಬ್ಬರನ್ನೊಬ್ಬರು ಅರಿತುಕೊಳ್ಳಲು ಹಾತೊರೆಯುವ ಜೀವದಂತೆ ಬೆಳೆದು ನಮ್ಮ ಮನಗಳ ನಡುವೆ ಸ್ನೇಹ ಕೊಂಡಿಯನ್ನು ಬೆಳೆಸಲು ಪ್ರಯತ್ನಿಸುತ್ತಿತ್ತು. ಮತ್ತು ಆ ಕೆಲಸವನ್ನು ಅಚ್ಚುಕಟ್ಟಾಗಿಯೇ ಮಾಡಿ ನಮ್ಮಿಬ್ಬರನ್ನು ಅರಿತು ಬೆರೆತು ಒಂದಾದ ಸ್ನೇಹಿತರನ್ನಾಗಿಸಿತ್ತು. ಗುಜರಾತಿ ಮಾಧ್ಯಮದಲ್ಲಿ ಎಂಟನೇ ತರಗತಿಯರೆಗೂ ಓದಿದ್ದ ದಾದಾ, ಗುಜರಾತಿನ ಇತಿಹಾಸವನ್ನು ಚೆನ್ನಾಗಿ ಬಲ್ಲವನಾಗಿದ್ದ. ಅವನ ಶಿಕ್ಷಣ ಪ್ರೇಮ ಆಗಾಧವಾದದ್ದು, ಬಡತನದಿಂತ ನನಗೂ ಓದಲಾಗಲಿಲ್ಲ ಮತ್ತು ನನ್ನಿಬ್ಬರ ಮಕ್ಕಳಿಗೂ ಓದಿಸಲಾಗಲಿಲ್ಲ ಎಂದು ಮಾತಿನ ಮಧ್ಯ-ಮಧ್ಯ ಅಳಲನ್ನು ತೋಡಿಕೊಳ್ಳುತ್ತಿದ್ದ. ಮತ್ತೊಮ್ಮೆ ಮನಸ್ಸನ್ನು ಗಟ್ಟಿಯಾಗಿಸಿಕೊಂಡು, ಈಗಲಾದರು ಕಾಲಮಿಂಚಿಲ್ಲ ಕೊನೆ ಪಕ್ಷ ನನ್ನ ಮೊಮ್ಮಕ್ಕಳ್ಳನ್ನಾದರೂ ಓದಿಸಿ ದೊಡ್ಡ ಆಫೀಸರ್ ಮಾಡುತ್ತೇನೆಂದು ವಿಶ್ವಾಸದ ನುಡಿಗಳನ್ನು ನುಡಿಯುತ್ತಿದ್ದ.

ವಸಂತ ದಾದಾನ ಜೊತೆಗೆ ದಾದಾನ ಒಟ್ಟು ಕುಟುಂಬದ  ಪರಿಚಯವಾಯ್ತು. ನನ್ನ ಒಡನಾಟ ದಾದಾನ ಚಹಾದಂಗಡಿಯಿಂದ ಮನೆವರೆಗೂ ಬೆಳೆದು. ಹಬ್ಬ – ಹರಿದಿನಗಳಲ್ಲಿ ಅವರ ಮನೆಯ ಊಟವನ್ನು ಸವಿಯುವಂತೆ ಮಾಡಿತು.  ಇಬ್ಬರು ಒಂದು ದಿನ ಸಂಜೆ ವೇಳೆ ಒಂದು ದೂರದ ವಿಹಾರಕ್ಕೆಂದು ಊರಿನ ಹೊರ ವಲಯಕ್ಕೆ ಹೋಗಿದ್ದೆವು. ಆವಾಗ ಗುಜರಾತಿನಲ್ಲಿ ಹೇರಳವಾಗಿ ಮಾಡುವಂತಹ ಜಾನುವಾರಗಳ  ವ್ಯಾಪಾರಿಯ ತೋಟದ ಮನೆಗೆ ಹೋಗಿ ತಂಪನೆಯ ಮಜ್ಜಿಗೆ ಕುಡಿದು, ಜಾನುವಾರಗಳ ವ್ಯಾಪಾರ ವಹಿವಾಟು ಬಗ್ಗೆ ಪರಿಚಯವನ್ನು ಪಡೆದುಕೊಂಡು ಬಂದಿದ್ದೆವು. ಈ ಜಾನುವಾರಗಳ ವ್ಯಾಪಾರವೆಂದರೆ ಕಸಾಯಿ ಖಾನೆಗೆ ದನಕರುಗಳನ್ನು ಮಾರುವದಲ್ಲ, ಅದು ರೈತಾಪಿ ಜನರಿಂದ ರೈತರಿಗೆ ಮತ್ತು ಹಸು ಎಮ್ಮೆಗಳನ್ನು ಸಾಕುವವರಿಗೋಸ್ಕರ ಮಾಡುವಂತ ವ್ಯಾಪಾರ.

ಮಹಾತ್ಮಾ ಗಾಂಧಿಜಿಯವರ ಅಹಿಂಸಾ ಕಾಲದಿಂದಲೂ ಪ್ರಚಲಿತ ಗುಜರಾತಿನ ಜನ-ಜೀವನ ಮತ್ತು ಬದಲಾವಣೆಗಳನ್ನು ಎಳೆ-ಎಳೆಯಾಗಿ ಹೇಳುತ್ತಿದ್ದ ದಾದಾ. ಅವರ ಮನೆಗೆ ಹೋದಾಗಲೆಲ್ಲ ಅತ್ಯಂತಹ ಬಿಗುಮಾನದಿಂದ ಪಕ್ಕದ ಮನೆಯವರಿಗೆಲ್ಲ ನನ್ನ ಕರ್ಣಾಟಕದ ಗೆಳೆಯ ಬಂದಿದ್ದಾನೆ ಎಂದು ಹೇಳಿಕೊಂಡು ಬರುತ್ತಿದ್ದ. ಹೀಗೆಯೇ ನನ್ನ ನಲವತ್ತೈದು ದಿನದ ವಾಸ್ತವ್ಯದಲ್ಲಿ ಜೊತೆಗಾರನಾಗಿದ್ದ ದಾದಾ. ಮುಂದೊಂದು ದಿನ ನಾ ಅಲ್ಲಿಂದ ಮರಳುವಾಗ ಮರುಗಿದ ದೃಶ್ಯಮಾತ್ರ ಇವತ್ತಿಗೂ ಹಚ್ಚ ಹಸಿರಾಗಿದೆ. ನಾನು ಮರಳುವ ಎರಡು ದಿನಗಳ ಮೊದಲಷ್ಟೆ ನಾನು ಕರ್ನಾಟಕಕ್ಕೆ ಮರಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದೆ. ಆವತ್ತೆ ದಾದಾ, ಬಲುವಾಗಿ ನೋವಿನಿಂದ ನಮ್ಮ ಒಡನಾಟದ ಸ್ನೇಹಕ್ಕೆ ಉಳಿದಿರುವುದು ಇನ್ನು ಕೇವಲ ಎರಡು ದಿನ ಮಾತ್ರ! ಎಂದು ಸಣ್ಣಗೆ ಕಣ್ಣಲ್ಲಿ ನೀರನ್ನು ತಂದಿದ್ದ.

ಮರುದಿನವೇ ನಾನು ಅಲ್ಲಿಂದ ಹೊರಡುವುದಿತ್ತು. ಹಿಂದಿನ ದಿನ ಸಂಜೆ ಏಳು ಗಂಟೆಯ ಸುಮಾರಿಗೆ ಧನ್ಯವಾದಗಳನ್ನು ತಿಳಿಸಲು ಅವರ ಮನೆಗೆ ಹೋಗಿದ್ದೆ. ದಾದಾನ ಜೊತೆ ಅವರ ಕುಟುಂಬ ಸದಸ್ಯರೆಲ್ಲರೂ ನೀಡಿದ್ದ ಪ್ರೀತಿ ವಿಶ್ವಾಸಕ್ಕೆ ಕೊಡುಗೆಯಾಗಿ ಕೊಡಲು ನನ್ನಲ್ಲಿ ಏನು ಇರಲಿಲ್ಲ ಎನ್ನುವದ್ದಕ್ಕಿಂತ ಎಲ್ಲಿ ಏನಾದರೂ ಕೊಟ್ಟರೆ ನಮ್ಮ ಸ್ನೇಹಕ್ಕೆ ವ್ಯಾಪಾರಿಕ ಕಳೆತುಂಬಿ ಬೆಲೆ ಕಟ್ಟಲಾಗದ ಸ್ನೇಹಕ್ಕೆ ಯಲಶ್ಚಿತ ಬೆಲೆ ಕೊಟ್ಟು ಬಿಟ್ಟಂತಾಗುತ್ತದೆಯೋ ಏನೋ ಎಂಬ ಭಯ ನನ್ನನ್ನು ಕಾಡಿತು.  ಆದರೂ, ಅವರ ಮನೆಗೆ ಹೋಗಬೇಕಾದರೆ, ದಾದಾನ ಮೊಮ್ಮಗಳು ಪ್ರೀತಿ ಎಂಬ ಎಂಟು ವರ್ಷದ ಮಗುವಿಗೆ ಒಂದು ನನಗಿಷ್ಟವಾದಂತ ಅಂಗಿಯನ್ನು ಕೈಯಲ್ಲಿ ಹಿಡಿದುಕೊಂಡು ಹೋಗಿದ್ದೆ. ಇತ್ತ ವಿಷಯ ಪ್ರಾಸ್ತಾಪಿಸಿದೆ. ನಾಳೆ ಬೆಳಿಗ್ಗೆ ಆರು ಗಂಟೆಗೆ ನಾನು ಇಲ್ಲಿಂದ ಹೊರಡುವೆ ಎಂದು. ದಾದಾ ಏನನ್ನು ಮಾತನಾಡದೆ. ಕೈಗೆ ನಾಷ್ಟಾವನ್ನು ತಂದಿಟ್ಟು. ಪಕ್ಕದಲ್ಲಿಯೇ ಕುಳಿತ. ಇತ್ತ ನಾಷ್ಟಾ ತಿಂದ ಮೇಲೆ ಆ ಪುಟ್ಟ ಉಡುಗೊರೆಯನ್ನು ಮೊಮ್ಮಗಳು ಪ್ರೀತಿಯ ಕೈಗಿತ್ತೆ. ತುಂಟ ಪುಟ್ಟಿ ಪ್ರೀತಿ, ಆ ಉಡುಗೊರೆಯ ಅಂಗಿಯನ್ನು ಕ್ಷಣಾರ್ಧದಲ್ಲಿಯೇ ತೊಟ್ಟುಕೊಂಡು ಬಂದು ಮುಂದೆ ನಿಂತು, ಅಂಕಲ್ ಶರ್ಟ್ ತಂಬಾ ಚೆನ್ನಾಗಿದೆ ಎಂದು ಸಂತೋಷದಿಂದ ಹೇಳಿದಳು, ಮನೆಯಿಂದ ನೆಗೆದು ತನ್ನ ಸ್ನೇಹಿತರಿಗೆಲ್ಲ ತೋರಿಸಿಕೊಂಡು ಬಂದಿಳು.

ಇತ್ತ, ಒಂದು ಗಂಟೆ ಕಾಲ ಅವರೆಲ್ಲರ ಜೊತೆ ಮಾತನಾಡಿ. ಹೊರಡಲು ಸಜ್ಜಾಗಿ ನಿಂತೆ. ದಾದಾ, ತುಂಬ ದುಃಖಿಯಾಗಿದ್ದ. ನನಗು ಅವರನ್ನು ಕಳೆದುಕೊಳ್ಳುತ್ತಿದ್ದೇನೆಂಬ ಭಾವ ಹುಟ್ಟಿ ಮನಸ್ಸಲ್ಲಿ ದುಃಖವನ್ನು ಹುಟ್ಟು ಹಾಕಿತ್ತು. ಮನೆಯಿಂದ ಹೊರ ಬಂದೆ, ದಾದಾ ಜೋರಾಗಿ ಬಂದು ಕಣ್ಣೀರುಡುತ್ತಲೇ ತಬ್ಬಿಕೊಂಡು ಜೋರಾಗಿ ಒಂದು ಕ್ಷಣ ಅತ್ತು ಬಿಟ್ಟ. ನನಗೂ ಸಹ ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಒಂದು ಕ್ಷಣ ಮನಸ್ಸಿನ ಮೇಲಿನ ಹಿಡಿತವನ್ನು ಕಳೆದುಕೊಂಡು ದಾದನ ಜೊತೆಗೆ ಬೇರ್ಪಡಿಕೆಯ ಕುರುಹು ಎನ್ನುವಂತೆ ಕಣ್ಣೀರನ್ನು ಜಿನುಗುತ್ತು. ನಮ್ಮಿಬ್ಬರ ಸ್ನೇಹ ಮತ್ತು ಹಚ್ಚಿಕೊಂಡ ರೀತಿಯನ್ನು ನೋಡಿದ ಅವರ ಮನೆ ಸದಸ್ಯರು ಮತ್ತು ಶುಭಾಶಯ ಹೇಳಲು ಬಂದಿದ್ದ ಪಕ್ಕದ ಮನೆಯ ಮಂದಿಯಲ್ಲರೂ ಸಹ ಭಾವತೀರದಲ್ಲಿ ಕಳೆದು ಹೋಗಿದ್ದರು.

ಹೀಗೆಯೇ ಮೊದಲ ಬಾರಿಗೆ ಗುಜರಾತಿನಲ್ಲಿ ಕಳೆದ ಆ ದಿನಗಳು ಸ್ವಲ್ಪ ಮಟ್ಟಿಗೆ ಅಲ್ಲಿಯ ಜನ ಜೀವನದ ಪರಿಚಯವನ್ನು ಮಾಡಿಕೊಟ್ಟಿತು. ಇನ್ನು ಈ ಸಂದರ್ಭದಲ್ಲಿ ನನ್ನನ್ನು ಗುಜರಾತಿಗೆ ಕೆಲಸದ ಮೇಲೆ ನಿಯೋಜನೆ ಗೊಳಿಸಿ ಕಳುಹಿಸಿ ಕೊಟ್ಟಿದ್ದ ಹುಬ್ಬಳ್ಳಿಯ ಶ್ರೀ ವಿಘ್ನೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್ ಆದಂತಹ ಶ್ರೀ. ಎನ್. ಎನ್. ಕಡಬಿಗೇರಿಯವರಿಗೆ ಧನ್ಯವಾದಗಳನ್ನು ತಿಳಿಸುವೆ.

ಪ್ರಥಮ ಆವೃತ್ತಿಯಿಂದಲೇ ಅನುಭವ ಲೇಖನ ಬರೆಯಲು ಚೆಂದದ ಅವಕಾಶ ಮಾಡಿಕೊಟ್ಟ ಸಂಪಾದಕ ಮಿತ್ರರಾದ ನಟರಾಜು ಮತ್ತು ಪಂಜು ಪತ್ರಿಕೆ ಮಂಡಳಿಗೆ ಧನ್ಯವಾದಗಳು.

ಇಂತಿ ನಿಮ್ಮ

ಸಿ ಎಸ್. ಮಠಪತಿ.

 

ಕನ್ನಡದ ಬರಹಗಳನ್ನು ಹಂಚಿ ಹರಡಿ

9 thoughts on “ನನ್ನೊಳಗಿನ ಗುಜರಾತ (ಭಾಗ 10): ಚಿನ್ಮಯ್ ಮಠಪತಿ

  1. ಎಲ್ಲಾ ಲೇಖನಗಳೂ ಓದಿದ್ದೇನೆ. ಸರಣಿ ಬರಹದಲ್ಲಿ ಮೊದಲಿನ ಹರವನ್ನೇ ಕಾಯ್ದುಕೊಳ್ಳುವುದು ಕಷ್ಟ. ನೆನಪುಗಳನ್ನೂ ಉಳಿಸಿಕೊಳ್ಳುವುದು ಇನ್ನೂ ಕಷ್ಟ. ಇನ್ನೂ ಬರೆಯಬಹುದಿತ್ತೇನೋ?
    ಕೆಲವೊಂದರ ದಾಖಲೀಕರಣವೂ ಹೌದು, ಚೆನ್ನಾಗಿತ್ತು.

  2. ಉತ್ತಮ ಅನುಭವಾತ್ಮಕ ಲೇಖನ ಸರಣಿ…..ಧನ್ಯವಾದಗಳು ಮಠಪತಿಯವರೇ….

  3. ಅತೀ ಸುಂದರ ಹಾಗೂ ಸರಳ ಭಾಷೆಯಲ್ಲಿ ಗುಜರಾತ್ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡದ್ದಲ್ಲದೇ ನಮ್ಮನ್ನೂ ಸಹ ಅಲ್ಲಿಗೆ ಕರೆದೊಯ್ದಂತ ಸುಂದರ ಕಲ್ಪನೆ ಸರ್. ಧನ್ಯವಾದಗಳು ತಮಗೆ.

  4. ಇವತ್ತಿನ ಲೇಖನದ ಬಗ್ಗೆ ಹೆಳುವುದಾದರೆ: ಕೂಡುವಿಕೆ ಸಹಜ. ಆಗಲುವಿಕೆ ಅನಿವಾಅರ್ಯ ಇವೆರಡರ ಮಧ್ಯ ನೆನಪುಗಳು ಮಾತ್ರ ಶಾಶ್ವತವಾಗಿ ಉಳಿಯುತ್ತದೆ.

  5. ಸರಣಿ ಲೇಖನವನ್ನು ಓದಿ, ಪ್ರೋತ್ಸಾಹಿಸಿದೆಲ್ಲ ಸಹೃದಯರಿಗೆ ತುಂಬು ಹೃದಯದ ಧನ್ಯವಾದಗಳು………….

  6. ನಿಮ್ಮ ಬರಹ ಮತ್ತು ಅನುಭವಗಳು ವಿಶೇಷವಾದವು, ಚೆಂದದ ಬರಹಗಳಿಗಾಗಿ ಧನ್ಯವಾದಗಳು ಸರ್.  ನಿಮ್ಮ ಮತ್ತೊಂದು ಸರಣಿ ಬರಹದ ನಿರೀಕ್ಷೆಯಲ್ಲಿ ನಾವು,,,,,, 🙂

  7. ''ನನ್ನೋಳಗಿನ ಗುಜರಾತ'' ಲೇಖನ ನನ್ನದೇ ಆಗಿತ್ತೇನೋ….ಅನ್ನುವಂತೆ ನನ್ನ ಮನಸ್ಸನ್ನು ನೀವು ಗುಜರಾತ್‌ಗೆ ಕಸಿದುಕೊಂಡು ಒಯ್ದೋದ್ದಕ್ಕೆ ಧನ್ಯವಾದಗಳು……..ಈ ಪ್ರಪಂಚದಲ್ಲಿ ಎಷ್ಟೇ ತಂತ್ರಜ್ಞಾನ ಬೆಳೆದರೂ ಕೂಡಾ ಅದು ಈ ಮನಸ್ಸಿನಷ್ಟು ವೇಗವಲ್ಲ….

     

    'ಪ್ರತಿ ಕ್ಷಣ ಕೂತುಹಲದ ಚಿತ್ರಣ

    ಅದು ಆಗಿತ್ತು ನನ್ನದೇ ಕ್ಷಣ,

    'ಈ ಎಲ್ಲದಕ್ಕೂ ಕಾರಣ ನಿಮ್ಮ ಆ ಕ್ಷಣ

    ಹೀಗೇ ಸಾಗುತ್ತಿರಲ್ಲಿ ನಿಮ್ಮ ಮಾಗದಶನ,

Leave a Reply

Your email address will not be published. Required fields are marked *