ಕಥಾಲೋಕ

ನನ್ನವಳ ನೆನಪು: ಶ್ರೀರಂಗ. ಕೆ. ಆರ್

ಅದೇನೋ ಅಂದು ಮನಸ್ಸು ತಳಮಳಗೊಂಡಿತ್ತು. ಮಲಗಿ ಮೂರು ಸುತ್ತು ಹೊರಳಾಡಿದರೂ ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಆಗ ನಿನ್ನಪ್ಪನಿಂದ ಕರೆಬಂದದ್ದು. ನಿನಗೆ ಹೆರಿಗೆ ನೋವು, ಆಸ್ಪತ್ರೆಯಲ್ಲಿದ್ದೇವೆ ಎಂದು. ಆಗಲೇ ಓಡಿ ಬರಬೇಕೆಂದುಕೊಂಡೆ. ಪರವಾಗಿಲ್ಲ ನಾವೆಲ್ಲರೂ ಇದ್ದೇವೆ ತೊಂದರೆಯಿಲ್ಲ, ಬೆಳಗ್ಗೆ ಬಂದರಾಯಿತು ಎಂದರು ಮಾವ. ಆದರೂ ನನಗೆ ಸಮಾಧಾನವಿರಲಿಲ್ಲ. ನಿನ್ನ ಕನಸುಗಳಿಲ್ಲದೆ ಮಲಗಿದವನೇ ಅಲ್ಲ ನಾನು, ಅಂದೇಕೋ ಕಣ್ಣುಗಳು ಮುಚ್ಚಲೇ ಇಲ್ಲ. ಮಲಗಿದ್ದ ಕೋಣೆಯ ಮೇಲ್ಛಾವಣಿಯ ಪರದೆಯ ಮೇಲೆ ನಿನ್ನ ಜೊತೆ ಕಳೆದ ಕ್ಷಣಗಳ ನೆನಪುಗಳು ಮೂಡಿಬರುತ್ತಿದ್ದವು. ಅವನ್ನೇ ನೋಡುತ್ತ ಎಷ್ಟೋತ್ತಿಗೆ ಬೆಳಗಾಗುತ್ತದೆಯೋ ಎಂದು ಕಾಯುತ್ತ ಹಾಸಿಗೆಯ ಮೇಲೆ ಹೊರಳಾಡಿದೆ. ಸೂರ್ಯನೇಕೋ ಅಂದು ಬೇಗ ಎಚ್ಚರಗೊಳ್ಳಲಿಲ್ಲವೆಂದೆನಿಸುತ್ತಿತ್ತು. ಎಷ್ಟು ಬೇಗ ಬೆಳಗಾಗುತ್ತದೆಯೋ, ಎಷ್ಟು ಬೇಗ ನಿನ್ನ ನೋಡುತ್ತೇನೋ ಅನ್ನೋ ಕಾತರ. ಅಂತೂ ಬೆಳಗಾಯಿತು, ಎದ್ದು ಅವಸರದಲ್ಲೇ ಹೊರಟು ಆಸ್ಪತ್ರೆಗೆ ಓಡಿದೆ.

ಆಸ್ಪತ್ರೆ ತಲುಪಿ ನೀನಿದ್ದ ಕೊಠಡಿಯ ಎದುರು ಬಂದು ನಿಂತೆ. ನಿನ್ನವರೆಲ್ಲರೂ ಅಲ್ಲೇ ನಿಂತಿದ್ದರು, ಈಗ ಅವರೆಲ್ಲಾ ನನ್ನವರೂ ಕೂಡ. ಎಲ್ಲರಲ್ಲೂ ಆತಂಕ, ಏನೂ ಮಾತಾಡದೆ ನಾನೂ ನಿಂತೇ ಇದ್ದೆ. ನಿನ್ನಪ್ಪನೂ ಮಾತನಾಡಲಿಲ್ಲ, ಖಾಲಿ ಗೋಡೆಯ ಕಡೆಗೆ ಮುಖ ಮಾಡಿ ನಿಂತರು. ನನ್ನಲ್ಲೂ ಆತಂಕ ಶುರುವಾಯಿತು. ನಿನ್ನಮ್ಮ ನನ್ನೆಡೆಗೆ ಬಂದರು, ಕೈ ಹಿಡಿದು ಮಗು ಅವಳಿಗೆ ನೋವು ತೀವ್ರವಾಗಿದೆ, ತಾಯಿ-ಮಗು ಇಬ್ಬರಲ್ಲಿ ಒಬ್ಬರ ಜೀವಕ್ಕೆ ಅಪಾಯವೆಂದಿದ್ದಾರೆ ಎಂದರು. ನಿಂತಿದ್ದವನು ಕುಸಿದ ಹಾಗೆ, ಪಕ್ಕದಲ್ಲೇ ಇದ್ದ ಗೋಡೆ ಹಿಡಿದು ಕುರ್ಚಿಯ ಮೇಲೆ ಕುಳಿತೆ. ವೈದ್ಯರು ಬಂದರು, ನಿನಗೆ ಶಸ್ತ್ರಚಿಕಿತ್ಸೆ ಅವಶ್ಯವೆಂದು ಕಾಗದ ಪತ್ರಗಳಗೆ ಸಹಿ ಬೇಕೆಂದರು. ನಡುಗುತ್ತಿದ್ದ ಕೈಗಳು, ಅದರಲ್ಲೇ ಗ್ರೀಕ್ ಲಿಪಿಯೆಂಬಂತೆ ಒಂದು ಸಹಿ ಗೀಚಿದೆ.

ನೀನೆ ಕರೆಸಿದ್ದು, ಶಸ್ತ್ರಚಿಕಿತ್ಸೆಗೆ ಮುನ್ನ ನನ್ನೊಡನೆ ಮಾತನಾಡಬೇಕೆಂದು. ನನ್ನ ಮನಸ್ಸೂ ನಿನ್ನೊಡನೆ ಮಾತನಾಡಲು ಹಾತೊರೆಯುತ್ತಿತ್ತು. ಒಳಬಂದು ನೀನು ಮಲಗಿದ್ದ ಹಾಸಿಗೆಯ ಬಳಿಯಿದ್ದ ಕುರ್ಚಿಯೆಳೆದು ಕೂರಲು ಹೋದೆ, ನೀನೇ ಕರೆದು ಹಾಸಿಗೆಯ ಮೇಲೆ ಪಕ್ಕದಲ್ಲಿ ಕೂರಿಸಿಕೊಂಡೆ. ಸೂಜಿ ಚುಚ್ಚಿದ ಕೈ ಮುಟ್ಟಲು ತಣ್ಣಗಿತ್ತು. ಕಳೆಗುಂದಿದ ಮುಖ, ಕೆದರಿದ ಕೂದಲು. ಬಾಯಿಂದ ಮಾತುಗಳೇಕೋ ಬರಲೇ ಇಲ್ಲ. ಮನಸ್ಸುಗಳು ಮೌನದಲ್ಲೇ ಮಾತನಾಡಿರುವಾಗ ಶಬ್ಧಗಳ ಹಂಗೇಕೆ.

ಶಸ್ತ್ರಚಿಕಿತ್ಸಾ ಕೊಠಡಿಯ ಒಳಗೆ ಹೋಗೋವರೆಗೂ ನಿನ್ನ ಕೈ ನನ್ನನ್ನೇ ಹಿಡಿದಿತ್ತು. ಬಾಗಿಲ ಬಳಿ ಬಂದಾಗ ತಲೆ ನೇವರಿಸಿ ಹಣೆಗೊಂದು ಮುತ್ತಿಟ್ಟೆ. ನಿನಗೆ ಎಷ್ಟು ನೋವಿತ್ತೋ ತಿಳಿಯದು ನನಗೆ, ಆದರೆ ನೋವಲ್ಲೂ ನಕ್ಕ ನಗುಮೊಗವೊಂದೇ ಕಂಡದ್ದು ನನಗೆ.

ಒಳಗೆ ಏನಾಯಿತೋ ತಿಳಿಯದು. ಎಲ್ಲರೂ ಕಳವಳದಿಂದ ಕಾಯುತ್ತಿದ್ದರು. ನನಗೂ ಭಯ, ಹೊರಗಿನಿಂದ ಶಾಂತಚಿತ್ತ ಬುದ್ಧನಂತೆ ಕಂಡರೂ ಒಳಗೇಕೋ ಎದೆ ಊರಜಾತ್ರೆಯ ನಗಾರಿಗಿಂತ ಜೋರಾಗೆ ಹೊಡೆದುಕೊಳ್ಳುತ್ತಿತ್ತು. ಇನ್ನೂ ಎಷ್ಟು ಹೊತ್ತು ಹೀಗೆ. ಒಬ್ಬಾಕೆ ಒಳಗಿನಿಂದ ಅಂಗೈಲಿ ಮಗುವಿಡಿದು ಬಂದಳು, ನನ್ನ ಕೈಗಿತ್ತಳು. ಹೆಣ್ಣು ಮಗು, ಮುದ್ದಾಗಿತ್ತು. ನಿನ್ನದೇ ಬಣ್ಣ ನಿನ್ನದೇ ಹೋಲಿಕೆ, ನಿನ್ನ ರೀತಿಯೇ ಮೇಲ್ದುಟಿಯ ಬಳಿಯೊಂದು ಕಪ್ಪು ಚುಕ್ಕಿ. ಹಿಂದೆಯೇ ಬಂದ ವೈದ್ಯರೆಂದರು,“ಕ್ಷಮಿಸಿ_”, ಮುಂದಿನ ಮಾತುಗಳೇನೂ ಕಿವಿಗೆ ಕೇಳಿಸಲಿಲ್ಲ. ಅಷ್ಟರಲ್ಲೇ ಎದೆ ಬಿರಿದಿತ್ತು. ಮಗು ಮುದ್ದಾಗಿತ್ತು, ಆದರೆ ನಿನ್ನನ್ನು ನೀಗಿಕೊಂಡು ಹುಟ್ಟಿತ್ತು. ದ್ವೇಷಿಸಲೇ, ಪ್ರೀತಿಸಲೇ, ನನ್ನದೇ ಸೃಷ್ಟಿ ನನ್ನವಳನ್ನು ನುಂಗಿತ್ತು. ಇವಳ ಹುಟ್ಟಿನ ಸಂಭ್ರಮವೋ, ಅವಳ ಸಾವಿನ ಸೂತಕವೋ, ನನ್ನವಳ ಸಾವಿನ ಕುರುಹಾಗಿ ಉಳಿದಳು ಮಗಳು.

ಪ್ರತಿವರ್ಷ ಮಗಳ ಹುಟ್ಟುಹಬ್ಬದಂದು ಮತ್ತದೇ ಭಾವ. ಇವಳ ಹುಟ್ಟುಹಬ್ಬದ ಸಂಭ್ರಮವಿಲ್ಲ, ಅವಳ ಶ್ರಾದ್ಧದ ನೆನಪು. ಸಣ್ಣದೊಂದು ದ್ವೇಷ ಮಗಳ ಮೇಲೆ, ನನ್ನವಳ ಕೊಂದವಳೆಂದು. ಆದರೂ ಮುದ್ದಾಗಿದ್ದಾಳೆ, ನನ್ನ ಸೃಷ್ಟಿ. ಅವಳದೇ ರೂಪು, ಅವಳದೇ ಹೊಳಪು, ಮಗಳು ನನ್ನವಳ ನೆನಪು…

-ಶ್ರೀರಂಗ. ಕೆ. ಆರ್


ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ನನ್ನವಳ ನೆನಪು: ಶ್ರೀರಂಗ. ಕೆ. ಆರ್

Leave a Reply

Your email address will not be published. Required fields are marked *