ಸಂಗಾತಿ ಬ್ಲಾಗ್‌ ನ ಸಂಪಾದಕರಾದ ಕು.ಸ.ಮಧುಸೂದನರವರ ಒಂದೆರಡು ನುಡಿ

‘ಸಂಗಾತಿ’ ಸಾಹಿತ್ಯದ ಬ್ಲಾಗ್ ಶುರುವಾಗಿ ಕೇವಲ ಎರಡು ತಿಂಗಳು ಮಾತ್ರ ಆಗಿರುವುದರಿಂದ ಈ ಕ್ಷೇತ್ರದಲ್ಲಿ ಹೆಚ್ಚು ಬರೆಯಲು ನಾನು ಅರ್ಹನೆಂದು ಭಾವಿಸಿಲ್ಲ.ಪತ್ರಿಕೋಧ್ಯಮ ನನ್ನ ಕಾಲೇಜು ದಿನಗಳ ಕನಸಾಗಿತ್ತು.ಆದರೆ ನನ್ನ ವೈಯುಕ್ತಿಕ ಬದುಕಿನ ಸಮಸ್ಯೆಗಳಿಂದ ಅನಿವಾರ್ಯವಾಗಿ ಸರಕಾರಿ ನೌಕರಿಗೆ ಸೇರಬೇಕಾಯಿತು. ಆಗೀಗ ಕತೆ ಕವಿತೆಗಳನ್ನು ಬರೆದು ಪತ್ರಿಕೆಗಳಿಗೆ ಕಳಿಸಿ ಕಾಯುವಷ್ಟಕ್ಕೆ ನನ್ನ ಸಾಹಿತ್ಯದ ಆಸಕ್ತಿ ಸೀಮಿತವಾಯಿತು. ನಾಲ್ಕು ವರ್ಷಗಳ ಹಿಂದೆ ಸ್ವಯಂನಿವೃತ್ತಿ ಪಡೆದ ನಂತರ ಪೂರ್ಣಪ್ರಮಾಣದಲ್ಲಿ ಬರವಣಿಗೆಯಲ್ಲಿ ತೊಡಗಿಕೊಂಡು ಒಂದು ಕವನಸಂಕಲನ ಒಂದು ಕಥಾ ಸಂಕಲನ ಎರಡು ರಾಜಕೀಯ ಬರಹಗಳ ಪುಸ್ತಕಗಳನ್ನು ಪ್ರಕಟಿಸಿದೆನಾದರು ನನಗವು ತೃಪ್ತಿ ತಂದುಕೊಡಲಿಲ್ಲ.

ಆಗ ನನಗೆ ಹೊಳೆದದ್ದು ಒಂದು ನ್ಯೂಸ್ ಪೋರ್ಟಲ್ ಮಾಡುವ ಐಡಿಯ!. ಆದರೆ ನಾನಿರುವುದು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಹಳ್ಳಿಯೊಂದರಲ್ಲಿ. ಇಲ್ಲಿ ಕುಳಿತು ನ್ಯೂಸ್ ಪೋರ್ಟಲ್ ಮಾಡಲು ಒಂದು ಸಕ್ರಿಯ ತಂಡವನ್ನು ರಚಿಸಿಕೊಳ್ಳುವುದು ಕಷ್ಟವೆನಿಸಿದರೂ ಕಳೆದೊಂದು ವರ್ಷದಲ್ಲಿ ಸಾಕಷ್ಟು ಪ್ರಯತ್ನ ಮಾಡಿ ವಿಫಲನಾದೆ. ಆಗ ಸಾಹಿತ್ಯಕ್ಕೆ ಮಾತ್ರ ಮೀಸಲಾದ ಒಂದು ಬ್ಲಾಗ್ ಪತ್ರಿಕೆ ಮಾಡುವುದೆಂದು ನಿರ್ದರಿಸಿದೆ.. ಆದರೆ ಈ ಕೆಲಸ ಅಷ್ಟು ಸುಲಭವಿರಲಿಲ್ಲ. ಯಾಕೆಂದರೆ ಕಂಪ್ಯೂಟರಿನ ಕೀಲಿಮಣೆ ಮುಟ್ಟಿದ್ದೇ ಕೇವಲ ಐದು ವರ್ಷಗಳ ಹಿಂದೆ ನನ್ನ ಐವತ್ತನೇ ವಯಸ್ಸಿನಲ್ಲಿ. ಆದರೂ ಒಂದು ಹುಂಬ ದೈರ್ಯದಿಂದ ಇಲ್ಲಿ ಕೂತೇ ಬೆಂಗಳೂರಲ್ಲಿ ಪತ್ರಿಕೆಯ ವೆಬ್ ಡಿಸೈನ್ ಮಾಡಿಸಿದೆ. 2019ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಬ್ಲಾಗ್ ಸಿದ್ದವಾಗಿತ್ತಾದರೂ ಲೇಖಕರಿಂದ ಬರೆಸುವ ದಾರಿ ಗೊತ್ತಿರಲಿಲ್ಲ. ಆಗ ನನ್ನ ಸಹಾಯಕ್ಕೆ ಬಂದಿದ್ದು ಫೇಸ್ ಬುಕ್.

ಅಲ್ಲಿ ಬ್ಲಾಗಿನ ಪರಿಚಯ ಮಾಡಿಕೊಟ್ಟು ಬರಹಗಳಿಗೆ ಮುಕ್ತ ಆಹ್ವಾನವಿತ್ತೆ. ಜೊತೆಗೆ ಈಗಾಗಲೇ ಒಂದಷ್ಟು ಗುರುತಿಸಿಕೊಂಡಿರುವ ಸುಮಾರು ಜನರಿಗೆ ವೈಯುಕ್ತಿಕವಾಗಿ ಮೆಸೇಜು ಮಾಡಿ ಪತ್ರಿಕೆಗೆ ಬರೆಯುವಂತೆ ಕೋರಿಕೊಂಡೆ. ದುರಂತವೆಂದರೆ ಒಂದಿಬ್ಬರು ಮೂವರ ಹೊರತಾಗಿ ಉಳಿದವರು ನನ್ನ ಕೋರಿಕೆಗೆ ಕನಿಷ್ಠ ಸೌಜನ್ಯಕ್ಕಾದರು ಉತ್ತರ ಕೊಡಲಿಲ್ಲ. ಉತ್ತರ ಕೊಟ್ಟವರ ಮಾತುಗಳು ಸಹ ವಿಚಿತ್ರವಾಗಿದ್ದವು. ಒಂದಷ್ಟು ತಿಂಗಳು ಮಾಡಿ ನಂತರ ಬರೆಯಬಹುದಾ ನೋಡೋಣ, ನಿಮ್ಮ ಬ್ಲಾಗಿನ ಗುಣಮಟ್ಟದ ಬಗ್ಗೆ ನೋಡಿಕೊಂಡು ಬರೆಯುತ್ತೇವೆ ಎನ್ನುವಂತ ಮಾತುಗಳು ಕೇಳಿ ಬಂದವು. ಮತ್ತೆ ಮತ್ತೆ ಕೋರಿಕೊಂಡರೂ ಅವರು ಬರೆಯಲಿಲ್ಲ. ನಾನು ಸುಮ್ಮನಾದೆ. ಒಂದು ಹೊಸ ಪತ್ರಿಕೆಯ ಗುಣಮಟ್ಟ ಹೆಚ್ಚಿಸಲು ತಾವು ಬರೆಯಬೇಕೆಂಬುದನ್ನು ಅವರು ಯೋಚಿಸಲಿಲ್ಲ. ನಮ್ಮಬಹುತೇಕ ಲೇಖಕರ ಮನಸ್ಸು ಹೇಗೆ ಅಂದರೆ-ಅವರ ಪ್ರಚಾರ ಮತ್ತು ಬರಹಗಳಿಗೆ ಪತ್ರಿಕೆ ಬೇಕೆ ಹೊರತು ಒಂದು ಪತ್ರಿಕೆಗೆ ಬರೆದು ಸಹಾಯ ಮಾಡಬೇಕೆಂಬ ಮನೋಭಾವನೆ ಅವರಲ್ಲಿ ಇಲ್ಲ. ಇದು ನನಗೆ ನಿರಾಸೆಯನ್ನುಂಟು ಮಾಡಿತು. ಇಷ್ಟಲ್ಲದರ ನಡುವೆ ನಮ್ಮ ಬ್ಲಾಗಿನ ಬಗ್ಗೆ ಅದರಗುಣಮಟ್ಟದ ಬಗ್ಗೆ ಟೀಕಿಸುವುದರಲ್ಲಿ ಅಂತಹ ಬರಹಗಾರರೆಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಶ್ರೇಷ್ಠತೆಯ ವ್ಯಸನ ಹಿಡಿದವರಿಗೆ ಏನೂ ಮದ್ದಿಲ್ಲ. ಸದ್ಯ ಅನೇಕ ಹೊಸಬರು ಬರೆಯುತ್ತಿದ್ದಾರೆ. ಗುಣಮಟ್ಟದ ಬಗ್ಗೆ ನಾನೇನು ಹೇಳಲಾರೆ.

ಬೆಂಗಳೂರಿನಂತ ನಗರಗಳಲ್ಲಿ ಇದ್ದು ಸಾಹಿತ್ಯದ ರಾಜಕಾರಣ ಮಾಡುವ ಗುಂಪುಗಳಿಗೆ ಸಾದ್ಯವಾಗುವುದು ನಮ್ಮಂತಹ ಗ್ರಾಮೀಣ ಭಾಗದವರಿಗೆ ಸಾದ್ಯವಾಗುವುದಿಲ್ಲ ಎನ್ನುವುದು ನನ್ನ ಅನುಭವಕ್ಕೆ ಬಂದಿದೆ. ಈ ಬ್ಲಾಗ್ ಮಾಡಿರುವುದು ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲಿನ ಪ್ರೀತಿಯಿಂದಾಗಿಯೇ ಹೊರತಾಗಿ ಇದರಿಂದ ನನಗೇನೊ ಸಿಗುತ್ತೆ ಎಂದಲ್ಲಾ. ಹಾಗಾಗಿ ನನಗೆ ನಿರಾಸೆಯಾದರು ವಿಷಾದ ಬೇಸರವೇನಿಲ್ಲ. ಇದನ್ನು ನಡೆಸಿದರು-ನಿಲ್ಲಿಸಿದರೂ ನಾನು ಕಳೆದುಕೊಳ್ಳುವುದೇನಿಲ್ಲ. ನನ್ನ ಮನದಾಳದ ಮಾತುಗಳನ್ನಾಡಲು ಅವಕಾಶ ಮಾಡಿಕೊಟ್ಟ ಪಂಜು ಬಳಗಕ್ಕೆ ದನ್ಯವಾದಗಳು.
-ಕು.ಸ.ಮಧುಸೂದನ


ಸಂಪಾದಕರ ಟಿಪ್ಪಣಿ: ಕನ್ನಡದ ವೆಬ್‌ ಸೈಟ್‌ ಗಳು ಓದುಗರಿಗೆ ಸಿಗಬೇಕು ಎಂಬ ಉದ್ದೇಶದಿಂದ ಇತ್ತೀಚೆಗೆ ಹೊಸದಾಗಿ ಪ್ರಾರಂಭವಾಗಿರುವ ಸಂಗಾತಿ ಜಾಲತಾಣದ ಕುರಿತು ಬರೆಯಬೇಕೆಂದು ಅದರ ಸಂಪಾದಕರಾದ ಕು.ಸ.ಮಧುಸೂದನ ಅವರಿಗೆ ಕೇಳಿಕೊಂಡಾಗ ತಮ್ಮ ಅನುಭವಗಳನ್ನು ಪಂಜುವಿಗಾಗಿ ಹೀಗೆ ಕಟ್ಟಿಕೊಟ್ಟಿದ್ದಾರೆ. ಅವರ ಬ್ಲಾಗ್‌ ಗೆ ಯಶಸ್ಸು ಸಿಗಲಿ ಎಂದು ಪಂಜು ಸಂಪಾದಕ ಮಂಡಳಿ ಸಂಗಾತಿ ಬಳಗಕ್ಕೆ ಹಾರೈಸುತ್ತದೆ. ಹಾಗು ಪಂಜುವಿಗಾಗಿ ಈ ಲೇಖನ ಕಳುಹಿಸಿದ ಮಧುಸೂದನರವರಿಗೆ ಪಂಜು ಬಳಗ ಧನ್ಯವಾದಗಳನ್ನು ಅರ್ಪಿಸುತ್ತದೆ.

ಮಧುಸೂದನ ಅವರು ಪ್ರಾರಂಭಿಸಿರುವ ಸಂಗಾತಿ ಜಾಲತಾಣದ ಲಿಂಕ್‌ ಈ ಕೆಳಗಿನಂತಿದೆ. ಸಮಯವಿದ್ದಾಗ ತಾವುಗಳು ಕಣ್ಣಾಡಿಸಬೇಕಾಗಿ ವಿನಂತಿ..

https://sangaati.com/

ಧನ್ಯವಾದಗಳೊಂದಿಗೆ

ಪಂಜು ಬಳಗ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x