೧. ವೇಗ ಹೆಚ್ಚಿದಷ್ಟೂ —
ಮುಲ್ಲಾ ನಜ಼ರುದ್ದೀನ್ ತನ್ನ ತೋಟದಲ್ಲಿ ಯಾವುದೋ ಬೀಜ ಬಿತ್ತನೆ ಮಾಡುತ್ತಿದ್ದ. ಬಿತ್ತನೆ ಮಾಡುತ್ತಾ ಮುಂದೆಮುಂದೆ ಹೋದಂತೆ ಬೀತ್ತನೆ ಮಾಡುವ ವೇಗ ಹೆಚ್ಚುತ್ತಿದ್ದದ್ದನ್ನು ಅವನ ಹೆಂಡತಿ ನೋಡಿ ಹೇಳಿದಳು, “ಮುಲ್ಲಾ, ಅದೇಕೆ ಅಷ್ಟು ವೇಗವಾಗಿ ಬೀಜಗಳನ್ನು ಎರಚುತ್ತಿರುವೆ? ನಿಧಾನವಾಗಿ ಜಾಗರೂಕತೆಯಿಂದ ಬೀಜ ಬಿತ್ತುವುದು ಒಳ್ಳೆಯದಲ್ಲವೇ?”
ನಜ಼ರುದ್ದೀನ್ ಹೇಳಿದ, “ಸಾಧ್ಯವಿಲ್ಲ. ಏಕೆಂದರೆ ಇನ್ನು ಹೆಚ್ಚು ಬೀಜ ಉಳಿದಿಲ್ಲ. ಅದು ಮುಗಿಯುವುದರೊಳಗಾಗಿ ಬಿತ್ತನೆ ಕೆಲಸ ಮುಗಿಸಬೇಕಾಗಿದೆ!”
*****
೨. ಅಂದುಕೊಳ್ಳುವಿಕೆಗಳು
ಖ್ಯಾತ ಮುಲ್ಲಾ ನಜ಼ರುದ್ದೀನನನ್ನು ಒಬ್ಬಾತ ಕೇಳಿದ, “ವಿಧಿ ಅಂದರೇನು?”
“ಅಂದುಕೊಳ್ಳವಿಕೆಗಳು”
“ಅದು ಹೇಗೆ?”
ಮುಲ್ಲಾ ಅವನನ್ನು ನೋಡಿ ಹೇಳಿದ, “ಎಲ್ಲವೂ ಚೆನ್ನಾಗಿ ಜರಗುತ್ತದೆ ಎಂಬುದಾಗಿ ನೀನು ಅಂದುಕೊಂಡಾಗ ಅಂತಾಗದಿದ್ದರೆ ಅದು ದುರದೃಷ್ಟ ಅನ್ನುವೆ. ಯಾವುದೂ ಅನುಕೂಲಕರವಾಗಿರುವುದಿಲ್ಲ ಎಂಬುದಾಗಿ ನೀನು ಅಂದುಕೊಂಡಾಗ ಅನುಕೂಲಕರವಾದರೆ ಅದು ಒಳ್ಳೆಯ ಅದೃಷ್ಟ. ಕೆಲವು ಇಂತೆಯೇ ಆಗುತ್ತವೆ ಅಥವ ಆಗುವುದಿಲ್ಲ ಎಂಬುದಾಗಿ ನೀನು ಅಂದುಕೊಳ್ಳುವೆ, ಆದರೆ ನಿಜವಾಗಿ ಏನಾಗುತ್ತದೆ ಎಂಬುದು ನಿನಗೆ ತಿಳಿದಿರುವುದಿಲ್ಲ. ಭವಿಷ್ಯ ಅಜ್ಞಾತವಾದದ್ದು ಎಂಬುದಾಗಿ ನೀನು ಅಂದುಕೊಳ್ಳುವೆ. ನೀನು ಅಂದುಕೋಡಂತೆ ಆಗದಿದ್ದಾಗ ಅದನ್ನು ವಿಧಿಯ ಆಟ ಅನ್ನುವೆ.”
*****
೩. ನಾವು ಹೇಗೆ ಜೀವಿಸಬೇಕು?
ಒಂದು ದಿನ ತನ್ನ ಹಳ್ಳಿಯಲ್ಲಿ ನಜ಼ರುದ್ದೀನ್ ನಡೆದುಕೊಂಡು ಹೋಗುತ್ತಿದ್ದಾಗ ಅವನ ನೆರೆಹೊರೆಯವರು ಅನೇಕ ಮಂದಿ ಅವನ ಹತ್ತಿರ ಬಂದು ಕೇಳಿದರು, “ನಜ಼ರುದ್ದೀನ್ ಹೋಜ ನೀನೊಬ್ಬ ವಿವೇಕೀ ಪವಿತ್ರ ಮನುಷ್ಯ. ನಮ್ಮನ್ನು ನಿನ್ನ ಶಿಷ್ಯರನ್ನಾಗಿ ದಯಮಾಡಿ ಸ್ವೀಕರಿಸು. ನಮ್ಮ ಜೀವನ ಹೇಗೆ ನಡೆಸಬೇಕು? ನಾವೇನು ಮಾಡಬೇಕು? ಮುಂತಾದವುಗಳ ಕುರಿತಾಗಿ ನಮಗೆ ಬೋಧಿಸು.”
ನಜ಼ರುದ್ದೀನ್ ಕ್ಷಣಕಾಲ ಆಲೋಚಿಸಿ ಹೇಳಿದ, “ಆಯಿತು. ಮೊದಲನೇ ಪಾಠವನ್ನು ನಾನೀಗಲೇ ಹೇಳಿಕೊಡುತ್ತೇನೆ. ಅತ್ಯಂತ ಮುಖ್ಯವಾದ ವಿಷಯ ಅಂದರೆ ನಿಮ್ಮ ಪಾದಗಳ ಹಾಗು ಪಾದರಕ್ಷೆಗಳ ಕುರಿತು ಕಾಳಜಿ ವಹಿಸಿ. ಅವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ.”
ನೆರೆಹೊರೆಯವರು ಗಮನವಿಟ್ಟು ನಜ಼ರುದ್ದೀನ್ ಹೇಳಿದ್ದನ್ನು ಕೇಳುತ್ತಿದ್ದರು, ಅವನ ಪಾದಗಳನ್ನೂ ಪಾದರಕ್ಷೆಗಳನ್ನೂ ನೋಡುವ ವರೆಗೆ. ಅವು ಗಲೀಜಾಗಿದ್ದದ್ದು ಮಾತ್ರವಲ್ಲ ಚಪ್ಪಲಿಗಳ ಪಟ್ಟಿಗಳು ಕಳಚಿ ಬೀಳುವಂತಿದ್ದವು.
ಅವರ ಪೈಕಿ ಒಬ್ಬಾತ ಕೇಳಿದ, “ಆದರೆ ಹೋಜ, ನಿನ್ನ ಕಾಲುಗಳು ಗಲೀಜಾಗಿವೆ, ನಿನ್ನ ಚಪ್ಪಲಿಗಳ ಸ್ಥಿತಿ ಚಿಂತಾಜನಕವಾಗಿವೆ. ನೀನೇ ಪಾಲಿಸದೇ ಇರುವ ಬೋಧನೆಗಳನ್ನು ನಾವು ಪಾಲಿಸಬೇಕೆಂದು ನಿರೀಕ್ಷಿಸುವುದು ಸರಿಯೇ?”
ನಜ಼ರುದ್ದೀನ್ ಉತ್ತರಿಸಿದ, “ನಿಜ, ಆದರೆ ನಾನು ನನ್ನ ಜೀವನವನ್ನು ಹೇಗೆ ನಡೆಸಬೇಕೆಂದು ಜನಗಳನ್ನು ಕೇಳುತ್ತಾ ಸುತ್ತಾಡುವುದಿಲ್ಲ, ಅಲ್ಲವೇ?”
*****
೪. ನಜ಼ರುದ್ದೀನ್ ಸಂಧಿಸಿದ ಪ್ರವಾಸಿ
ನಜ಼ರುದ್ದೀನ್ ಹೋಜ ಮೆದೀನದ ಮೂಲಕ ಮೆಕ್ಕಾಗೆ ತೀರ್ಥಯಾತ್ರೆ ಹೋದ. ಮೆದೀನದಲ್ಲಿ ಪ್ರಧಾನ ಮಸೀದಿಯ ಸಮೀಪದಲ್ಲಿ ಹೋಗುತ್ತಿದ್ದಾಗ ತುಸು ಗೊಂದಲದಲ್ಲಿದ್ದಂತೆ ಗೋಚರಿಸುತ್ತಿದ್ದ ಪ್ರವಾಸಿಯೊಬ್ಬ ಆತನನ್ನು ಸಮೀಪಿಸಿ ಕೇಳಿದ, “ದಯವಿಟ್ಟು ಕ್ಷಮಿಸಿ. ನೀವು ಈ ಪ್ರದೇಶದ ನಿವಾಸಿಯಂತೆ ಕಾಣುತ್ತಿದ್ದೀರಿ. ಈ ಮಸೀದಿಯ ಕುರಿತು ಏನಾದರೂ ಮಾಹಿತಿ ಕೊಡಬಲ್ಲಿರಾ? ಇದು ಬಹಳ ಹಳೆಯದಾದರೂ ಬಲು ಮುಖ್ಯವಾದ ಮಸೀದಿಯಂತೆ ಕಾಣುತ್ತಿದೆ.”
ತನಗೆ ಆ ಕುರಿತು ಏನೂ ತಿಳಿದಿಲ್ಲವೆಂಬುದನ್ನು ಒಪ್ಪಿಕೊಳ್ಳಲು ಸಿದ್ಧನಿಲ್ಲದ ನಜ಼ರುದ್ದೀನ್ ತಕ್ಷಣವೇ ಬಲು ಉತ್ಸಾಹದಿಂದ ವಿವರಣೆ ನೀಡಲಾರಂಭಿಸಿದ, “ಇದು ನಿಜವಾಗಿಯೂ ಪುರಾತನವಾದ ಮುಖ್ಯ ಮಸೀದಿ. ಅರೇಬಿಯಾವನ್ನು ಜಯಿಸಿದ್ದರ ನೆನಪಿನ ಕುರುಹಾಗಿ ಅಸಾಮಾನ್ಯನಾಗಿದ್ದ ಅಲೆಕ್ಸಾಂಡರ್ ಇದನ್ನು ಕಟ್ಟಿಸಿದ.”
ಪ್ರವಾಸಿ ಈ ವಿವರಣೆಯಿಂದ ಮೊದಲು ಪ್ರಭಾವಿತನಾದರೂ ನಂತರ ಒಂದು ಸಂಶಯ ಅವನನ್ನು ಕಾಡಿತು, “ಅದು ಹೇಗೆ ಸಾಧ್ಯ? ನನಗೆ ತಿಳಿದ ಮಟ್ಟಿಗೆ ಅಲೆಕ್ಸಾಂಡರ್ ಒಬ್ಬ ಗ್ರೀಕನಾಗಿದ್ದ, ಮುಸಲ್ಮಾನನಲ್ಲ —- ಸರಿ ತಾನೆ?”
“ಈ ವಿಷಯದ ಕುರಿತು ನಿಮಗೆ ತುಸು ತಿಳಿದಿರುವಂತಿದೆ,” ಅಪಮಾನದಿಂದ ಸಂಕಟಕ್ಕೀಡಾದ ನಜ಼ರುದ್ದೀನ್ ಉತ್ತರಿಸಿದ. “ನಿಜ ಹೇಳಬೇಕೆಂದರೆ ಯದ್ಧದ ಫಲಿತಾಂಶದಿಂದ ಪ್ರಭಾವಿತನಾದ ಅಲೆಕ್ಸಾಂಡರ್ ದೇವರಿಗೆ ತನ್ನ ಕೃತಜ್ಞತೆ ವ್ಯಕ್ತಪಡಿಸುವ ಸಲುವಾಗಿ ಇಸ್ಲಾಂಗೆ ಮಾತಾಂತರಗೊಂಡನು.”
“ಓ ಹಾಗೋ. ಹಂ— ಆದರೆ ಅಲೆಕ್ಸಾಂಡರ್‌ನ ಕಾಲದಲಲ್ಲಿ ಇಸ್ಲಾಂ ಮತವೇ ಅಸ್ತಿತ್ವದಲ್ಲಿ ಇರಲಿಲ್ಲವಲ್ಲ?”
“ಒಂದು ಒಳ್ಳೆಯ ಅಂಶ! ನಮ್ಮ ಇತಿಹಾಸವನ್ನು ಇಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲ ಅಮೇರಿಕದ ಪ್ರಜೆಯನ್ನು ನೋಡಿ ನನಗೆ ನಿಜವಾಗಿಯೂ ಬಲು ಆನಂದವಾಗುತ್ತಿದೆ. ವಾಸ್ತವವಾಗಿ ನಡೆದದ್ದು ಏನೆಂದರೆ ದೇವರು ತೋರಿದ ಔದಾರ್ಯದಿಂದ ಭಾವಪರವಶನಾದ ಅಲೆಕ್ಸಾಂಡರ್ ಯುದ್ಧ ಮುಗಿದ ನಂತರ ಹೊಸ ಮತವೊಂದನ್ನು ಹುಟ್ಟುಹಾಕಿ ಇಸ್ಲಾಂನ ಸಂಸ್ಥಾಪಕ ಅನ್ನಿಸಿಕೊಂಡ.”
ಪ್ರವಾಸಿ ಮಸೀದಿಯನ್ನು ವಿಶೇಷ ಗೌರವದೃಷ್ಟಿಯಿಂದ ನೋಡಲಾರಂಭಿಸಿದ. ಏತನ್ಮಧ್ಯೆ ಸದ್ದಿಲ್ಲದೆ ನಜ಼ರುದ್ದಿಣ್ ಜನಸಂದಣಿಯಲ್ಲಿ ಸೇರಿ ತಪ್ಪಸಿಕೊಳ್ಳಲು ಹವಣಿಸುತ್ತಿದ್ದಾಗ ಪ್ರವಾಸಿ ಅವನನ್ನು ತಡೆದು ಪುನಃ ಕೇಳಿದ, “ಇಸ್ಲಾಂ ಮತದ ಸಂಸ್ಥಾಪಕ ಮೊಹಮ್ಮದ್ ಅಲ್ಲವೇ? ಹಾಗೆಂದು ಓದಿದ ನೆನಪು. ಇಸ್ಲಾಂನ ಸಂಸ್ಥಾಪಕ ಅಲೆಕ್ಸಾಂಡರ್ ಅಲ್ಲ ಎಂಬುದು ಖಚಿತ.”
ನಜ಼ರುದ್ದೀನ್ ಪ್ರತಿಕ್ರಿಯಿಸಿದ, “ನೀವೊಬ್ಬ ವಿದ್ವಾಂಸರು ಎಂಬುದಾಗಿ ನನಗನ್ನಿಸುತ್ತಿದೆ. ನಾನು ಆ ಕುರಿತೇ ಈಗ ಹೇಳುವವನಿದ್ದೆ. ಪ್ರವಾದಿಯ ಜೀವನಶೈಲಿಗ ಹೊಂದಿಕೊಳ್ಳಬೇಕಾದರೆ ಹೊಸತೊಂದು ಅನನ್ಯ ವ್ಯಕ್ತಿತ್ವದ ಆವಶ್ಯಕತೆಯನ್ನು ಮನಗಂಡ ಅಲೆಕ್ಸಾಂಡರ್ ತನ್ನ ಹಳೆಯ ಹೆಸರನ್ನು ಪರಿತ್ಯಜಿಸಿ ಮುಂದೆ ಜೀವನದುದ್ದಕ್ಕೂ ಮೊಹಮ್ಮದ್ ಎಂಬ ಹೆಸರಿನಿಂದಲೇ ಗುರುತಿಸಲ್ಪಟ್ಟನು.”
“ನಿಜವಾಗಿಯೂ! ಇದು ಅತ್ಯಾಶ್ಚರ್ಯದ ವಿಷಯ. ಅಲೆಕ್ಸಾಂಡರ್ ಮೊಹಮ್ಮದ್‌ನಿಗಿಂತ ಎಷ್ಟೋ ಕಾಲ ಹಿಂದೆ ಬದುಕಿದ್ದ ಎಂಬುದಾಗಿ ನಾನು ತಿಳಿದಿದ್ದೆ. ನನ್ನ ತಿಳಿವಳಿಕೆ ನಿಜವಲ್ಲವೇ?”
“ಖಂಡಿತವಾಗಿಯೂ ನಿಜವಲ್ಲ,” ಉತ್ತರಿಸಿದ ಹೋಜ. “ನೀನು ಆಲೋಚಿಸುತ್ತಿರುವುದು ಬೇರೊಬ್ಬ ಅಲೆಕ್ಸಾಂಡರ್‌ನ ಕುರಿತು. ನಾನು ಹೇಳುತ್ತಿರುವುದು ಮೊಹಮ್ಮದ್ ಎಂಬ ಹೆಸರಿದ್ದವನ ಕುರಿತು!”
*****
೫. ನಜ಼ರುದ್ದೀನ್ ಮೃತ್ಯುವನ್ನು ಸಂಧಿಸಿದ್ದು
ಒಂದು ದಿನ ನಜ಼ರುದ್ದೀನ್ ಮಾರುಕಟ್ಟೆಯಲ್ಲಿ ಸುತ್ತಾಡುತ್ತಿದ್ದಾಗ ವಿಚಿತ್ರವಾಗಿದ್ದ ಕಪ್ಪನೆಯ ಆಕೃತಿಯೊಂದು ಅವನನ್ನು ಅಡ್ಡಗಟ್ಟಿ ಹೇಳಿತು, “ನಾನು ಮೃತ್ಯು, ನಿನ್ನನ್ನು ಕರೆದೊಯ್ಯಲು ಬಂದಿದ್ದೇನೆ.”
“ಮೃತ್ಯುವೇ?” ನಜ಼ರುದ್ದೀನ್ ಉದ್ಗರಿಸಿದ. “ನಾನಿನ್ನೂ ಮುದುಕನಾಗಿಯೇ ಇಲ್ಲವಲ್ಲ. ನಾನು ಮಾಡಬೇಕಾದದ್ದು ಬಹಳಷ್ಟು ಬಾಕಿ ಇದೆ. ನನ್ನನ್ನು ಬೇರೆ ಯಾರೋ ಎಂಬುದಾಗಿ ನೀನು ತಪ್ಪಾಗಿ ತಿಳಿದಂತಿದೆ.”
ಮೃತ್ಯು ಹೇಳಿತು, “ಸಾಯಲು ಸಿದ್ಧವಿಲ್ಲದವರನ್ನೇ ನಾನು ಒಯ್ಯುವುದು.”
ಹೋಜ ಉತ್ತರಿಸಿದ, “ನೀನು ತಪ್ಪಾಗಿ ತಿಳಿದಿರುವೆ. ಈ ಕುರಿತು ಒಂದು ಬಾಜಿ ಕಟ್ಟೋಣ.”
“ಬಾಜಿಯೇ? ಆಗಬಹುದು. ಪಣಕ್ಕಿಡುವುದು ಏನನ್ನು?”
“ನನ್ನ ಪ್ರಾಣಕ್ಕೆ ಬದಲಾಗಿ ೧೦೦ ಬೆಳ್ಳಿಯ ನಾಣ್ಯಗಳು.”
“ಆಗಬಹುದು,” ಸಮ್ಮತಿಸಿತು ಮೃತ್ಯು. ಅದರ ಕೈಯಲ್ಲಿ ೧೦೦ ಬೆಳ್ಳಿಯ ನಾಣ್ಯಗಳಿದ್ದ ಥೈಲಿ ಪ್ರತ್ಯಕ್ಷವಾಯಿತು. “ನೀನೆಂಥ ಮೂರ್ಖನಾಗಿರಬೇಕು, ಈ ತೆರನಾದ ಬಾಜಿಕಟ್ಟಲು. ಈ ಕ್ಷಣದಲ್ಲಿ ನಿನ್ನನ್ನು ಕೊಲ್ಲುವುದರ ಮುಖೇನ ಪಂದ್ಯ ಗೆಲ್ಲುವುದರಿಂದ ನನ್ನನ್ನು ಏನು ತಡೆಯುತ್ತದೆ?”
ನಜ಼ರುದ್ದೀನ್ ಪ್ರತಿಕ್ರಿಯಿಸಿದ, “ನೀನು ನನ್ನನ್ನು ಕೊಲ್ಲುವೆ ಎಂಬುದು ನನಗೆ ತಿಳಿದಿದ್ದರಿಂದಲೇ ಬಾಜಿ ಕಟ್ಟಿದೆ.”
“ಹಂ—-,” ಗಾಢವಾಗಿ ಆಲೋಚಿಸಿತು ಮೃತ್ಯು. “ಓ ಹಾಗೋ. ಅಂದ ಮೇಲೆ ಕರಾರಿನ ಷರತ್ತುಗಳ ಪ್ರಕಾರ ನಾನು ನಿನ್ನನ್ನು ಕೊಲ್ಲಲು ಸಾಧ್ಯವಾಗುವುದಿಲ್ಲ ಎಂಬುದೂ ನಿನಗೆ ಆಗಲೇ ತಿಳಿದಿದ್ದಿರಬೇಕು.”
“ಖಂಡಿತಾ ಇಲ್ಲ!” ಅಂದವನೇ ನಾಣ್ಯದ ಥೈಲಿಯನ್ನು ಭದ್ರವಾಗಿ ಹಿಡಿದುಕೊಂಡು ನಜ಼ರುದ್ದೀನ್ ಮುಂದಕ್ಕೆ ನಡೆದ.
*****