ಝೆನ್-ಸೂಫಿ ಕತೆಗಳು

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

 

೧. ಧೂಳಿನಲ್ಲಿ ಹೋಜ

ನಜ಼ರುದ್ದೀನ್‌ ಹೋಜನ ಹತ್ತಿರ ಒಂದು ಎಮ್ಮೆ ಇತ್ತು. ಅದರ ಕೊಂಬುಗಳ ನಡುವಿನ ಅಂತರ ಗಮನಾರ್ಹವಾಗಿ ದೊಡ್ಡದಾಗಿತ್ತು. ಆ ಕೊಂಬುಗಳ ನಡುವೆ ಕುಳಿತುಕೊಳ್ಳಬೇಕೆಂಬ ಪ್ರಬಲ ಅಪೇಕ್ಷೆ ಹೋಜನಿಗೆ ಆಗಾಗ್ಗೆ ಉಂಟಾಗುತ್ತಿದ್ದರೂ ಅಂತು ಮಾಡಲು ಧೈರ್ಯವಾಗುತ್ತಿರಲಿಲ್ಲ. ಒಂದು ದಿನ ಹೋಜ ಮನೆಯ ಅಂಗಳದಲ್ಲಿ ಏನೋ ಮಾಡುತ್ತಿದ್ದಾಗ ಆ ಎಮ್ಮೆ ಬಂದು ಅವನ ಹತ್ತಿರವೇ ಮಲಗಿತು. ಆದದ್ದಾಗಲಿ ಎಂಬ ಮೊಂಡ ಧೈರ್ಯದಿಂದ ಹೋಜ ಅದರ ಕೊಂಬುಗಳ ನಡುವೆ ಕುಳಿತು ಸಂಭ್ರಮದಿಂದ ಹೆಂಡತಿಗೆ ಹೇಳಿದ, “ನನಗೀಗ ಸಿಂಹಾಸನದ ಮೇಲೆ ಕುಳಿತ ರಾಜನಂತೆ ಭಾಸವಾಗುತ್ತಿದೆ.”

ಇದ್ದಕ್ಕಿದ್ದಂತೆ ನಡೆದ ಈ ಘಟನೆಯಿಂದ ಬೆದರಿದ ಎಮ್ಮೆ ಒಮ್ಮೆಲೇ ಎದ್ದು ನಿಂತು ತಲೆಯನ್ನು ಜೋರಾಗಿ ಕೊಡವಿತು. ತತ್ಪರಿಣಾಮವಾಗಿ ಹೋಜ ಅಲ್ಲಿಯೇ ಮುಂದಿದ್ದ ಒಂದು ಚರಂಡಿಯೊಳಕ್ಕೆ ಬಿದ್ದನು. ಅವನಿಗೆ ಸಹಾಯ ಮಾಡಲೋಸುಗ ಓಡಿ ಬಂದ ಹೆಂಡತಿಗೆ ಹೇಳಿದ, “ಪರವಾಗಿಲ್ಲ. ರಾಜನೊಬ್ಬ ತನ್ನ ಸಿಂಹಾಸನವನ್ನು ಕಳೆದುಕೊಂಡದ್ದು ಇದೇ ಮೊದಲೇನಲ್ಲ.”

*****

೨. ಹೋಜ ಬಚಾವಾದ

ಒಂದು ದಿನ ಒಬ್ಬಾತ ಹೋಜನ ಮನೆಗೆ ಓಡಿ ಬಂದ.

“ಏನು ವಿಷಯ,” ಕೇಳಿದ ಹೋಜ.

“ಮಾರುಕಟ್ಟೆಯಲ್ಲಿ ನಿನ್ನನ್ನೇ ಹೋಲುತ್ತಿದ್ದ ಮನುಷ್ಯನೊಬ್ಬನಿಗೆ ಗಾಡಿಯೊಂದು ಢಿಕ್ಕಿ ಹೊಡೆದು ಆತ ಕೆಳಗೆ ಬಿದ್ದದ್ದನ್ನು ನೋಡಿದೆ. ಅದು ನೀನೆಂದು ಭಾವಿಸಿ ನಿನ್ನ ಹೆಂಡತಿಗೆ ಸುದ್ದಿ ತಿಳಿಸಲೋಸುಗ ಓಡೋಡಿ ಬಂದೆ,” ಅಂದನಾತ.

“ಅವನು ನನ್ನಷ್ಟೇ ಎತ್ತರದವನಾಗಿದ್ದನೋ?”

“ಹೌದು.”

“ಅವನು ನನ್ನಂತೆಯೇ ದಾಡಿ ಬಿಟ್ಟಿದ್ದನೋ?”

“ಹೌದು.”

“ಅವನು ಯಾವ ಬಣ್ಣದ ಅಂಗಿ ಧರಿಸಿದ್ದ?”

“ನಸುಗೆಂಪು.”

“ನಸುಗೆಂಪಿನದಾ?” ಬೊಬ್ಬೆಹಾಕಿದ ಹೋಜ, “ಸಧ್ಯ ಬಚಾವಾದೆ, ನನ್ನ ಹತ್ತಿರ ನಸುಗೆಂಪು ಬಣ್ಣದ ಅಂಗಿಯೇ ಇಲ್ಲ!”

*****

೩. ಸಾಲ ಹಿಂದಿರುಗಿಸುವಿಕೆಯನ್ನು ಹೋಜ ಮುಂದೂಡಿದ್ದು

ಒಂದು ಸಂಜೆ ಹೋಜ ತನ್ನ ಮನೆಯ ಮುಂದಿನ ಮೊಗಸಾಲೆಯಲ್ಲಿ ಉದ್ವಿಗ್ನತೆಯಿಂದ ಹಿಂದಕ್ಕೂ ಮುಂದಕ್ಕೂ ಓಡಾಡುತ್ತಿದ್ದದ್ದನ್ನು ಅವನ ಹೆಂಡತಿ ನೋಡಿದಳು. “ಏನು ವಿಷಯ?” ಕೇಳಿದಳು ಅವಳು. “ನಾನು ನಮ್ಮ ನೆರೆಮನೆಯಾತನಿಂದ ಕಳೆದ ತಿಂಗಳು ನೂರು ದಿನಾರ್‌ಗಳನ್ನು ಸಾಲವಾಗಿ ತೆಗೆದುಕೊಂಡಿದ್ದೆ. ಈ ತಿಂಗಳ ಕೊನೆಯ ದಿನದಂದು ಅದನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದೆ. ನಾಳೆ ತಿಂಗಳ ಕೊನೆಯ ದಿನ. ನನ್ನ ಹತ್ತಿರ ಹಣವಿಲ್ಲ, ಏನು ಮಾಡುವುದೆಂಬುದು ತೋಚುತ್ತಿಲ್ಲ,” ವಿವರಿಸಿದ ಹೋಜ. ಅವನ ಹೆಂಡತಿ ಹೇಳಿದಳು, “ಮಾಡಲೇನಿದೆ? ಅವನ ಹತ್ತಿರ ಹೋಗಿ ಹಣ ಹಿಂದಿರುಗಿಸಲು ಸಾಧ್ಯವಿಲ್ಲವೆಂದು ಹೇಳಿ.” ಹೋಜ ಹೆಂಡತಿಯ ಸಲಹೆಯನ್ನು ಸ್ವೀಕರಿಸಿದ. ಅವನು ನೆರೆಮನೆಗೆ ಹೋಗಿ ಪ್ರಸನ್ನವದನನಾಗಿ ಶಾಂತಚಿತ್ತನಾಗಿ ಹಿಂದಿರುಗಿದಾಗ ಹೆಂಡತಿ ಕೇಳಿದಳು, “ಹೋದ ಕೆಲಸ ಹೇಗಾಯಿತು?”

ಹೋಜ ಉತ್ತರಿಸಿದ, “ಚೆನ್ನಾಗಿಯೇ ನಡೆಯಿತು. ಈಗ ಅವನು ತನ್ನ ಮನೆಯ ಮುಂದಿನ ಮೊಗಸಾಲೆಯಲ್ಲಿ ಉದ್ವಿಗ್ನತೆಯಿಂದ ಹಿಂದಕ್ಕೂ ಮುಂದಕ್ಕೂ ಓಡಾಡುತ್ತಿದ್ದಾನೆ.”

*****

೪. ಹೋಜ ಪತ್ರ ಬರೆಯಲು ನಿರಾಕರಿಸಿದ್ದು

ಒಂದು ದಿನ ಹೋಜನ ನೆರೆಮನೆಯಾತ ತನ್ನ ಪರವಾಗಿ ಪತ್ರವೊಂದನ್ನು ಬರೆಯುವಂತೆ ವಿನಂತಿಸಿದ.

“ಪತ್ರ ಬರೆಯಬೇಕಾದದ್ದು ಯಾರಿಗೆ?” ವಿಚಾರಿಸಿದ ಹೋಜ.

“ಬಾಗ್ದಾದ್‌ನಲ್ಲಿರುವ ನನ್ನ ಮಿತ್ರನಿಗೆ.”

“ಕ್ಷಮಿಸು, ನನಗೆ ಬಾಗ್ದಾದ್‌ಗೆ ಹೋಗಲು ಪುರಸತ್ತಿಲ್ಲ.”

“ಬಾಗ್ದಾದ್‌ಗೆ ಹೋಗು ಎಂಬುದಾಗಿ ನಿನಗೆ ಯಾರು ಹೇಳಿದರು? ಅಲ್ಲಿರುವ ನನ್ನ ಮಿತ್ರನಿಗೊಂದು ಪತ್ರ ಬರೆದು ಕೊಡು ಎಂದಷ್ಟೇ ಹೇಳಿದೆ.”

“ಅದೇನೋ ನಿಜ. ಆದರೆ ನನ್ನ ಕೈಬರೆಹ ಎಷ್ಟು ಕೆಟ್ಟದಾಗಿದೆಯೆಂದರೆ, ಅಲ್ಲಿ ಯಾರಿಗೂ ಅದನ್ನು ಓದಲು ಸಾಧ್ಯವಾಗುವುದಿಲ್ಲ. ಆಗ ಅದನ್ನು ಓದಲೋಸುಗ ನನ್ನನ್ನೇ ಅಲ್ಲಿಗೆ ಬರಲು ಹೇಳುತ್ತಾರೆ. ಆದರೆ ನಾನು ಆಗಲೇ ಹೇಳಿದಂತೆ ಬಾಗ್ದಾದ್‌ಗೆ ಹೋಗಲು ನನಗೆ ಪುರಸತ್ತಿಲ್ಲ.”

*****

೫. ಹೋಜನ ಶ್ರೀಮಂತ ಕನಸು

ಹೋಜ ಒಂದು ಕನಸು ಕಂಡ:

ಒಬ್ಬಾತ ಹೋಜನ ಮನೆಯ ಮುಂಬಾಗಿಲು ತಟ್ಟಿ ತಾನು ಆ ರಾತ್ರಿಯನ್ನು ಅಲ್ಲಿ ತಂಗಬಹುದೇ ಎಂಬುದಾಗಿ ಕೇಳಿದ. ಆ ಸೌಲಭ್ಯಕ್ಕಾಗಿ ೧೦ ಚಿನ್ನದ ನಾಣ್ಯಗಳನ್ನು ಕೊಡುವುದಾಗಿಯೂ ತಿಳಿಸಿದ.

ಹೋಜ ಸಮ್ಮತಿಸಿ ಆಗಂತುಕನಿಗೆ ಅವನು ತಂಗಬಹುದಾದ ಕೋಣೆ ತೋರಿಸಿದ.

ಮಾರನೆಯ ದಿನ ಬೆಳಗ್ಗೆ ಆತ ಹೋಜನಿಗೆ ಧನ್ಯವಾದಗಳನ್ನರ್ಪಿಸಿ ತನ್ನ ಹಣದ ಥೈಲಿಯಿಂದ ಚಿನ್ನದ ನಾಣ್ಯಗಳನ್ನು ಎಣಿಸಿ ತೆಗೆಯಲಾರಂಭಿಸಿದ.

ಆತ ೯ ನಾಣ್ಯಗಳನ್ನು ತೆಗೆದು ನಿಲ್ಲಿಸಿದ.

“ನೀನು ೧೦ ನಾಣ್ಯಗಳನ್ನು ಕೊಡುವುದಾಗಿ ಹೇಳಿದ್ದೆ,” ಎಂಬುದಾಗಿ ಕಿರುಚಿದ ಹೋಜ ನಿದ್ದೆಯಿಂದೆದ್ದ.

ಸುತ್ತಮುತ್ತ ನೋಡಿದಾಗ ಯಾರೂ ಕಾಣಿಸಲಿಲ್ಲ.

ಹೋಜ ಪುನಃ ಕಣ್ಣುಗಳನ್ನು ಮುಚ್ಚಿ ಹೇಳಿದ, “ಆಯಿತಪ್ಪಾ, ೯ ನಾಣ್ಯಗಳನ್ನೇ ನನಗೆ ಕೊಡು!”

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published.