ಝೆನ್-ಸೂಫಿ ಕತೆಗಳು

ನಜರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ


೧. ಸಿಹಿ ಜಗಳಗಳು

ಒಂದು ದಿನ ಮುಲ್ಲಾ ನಜರುದ್ದೀನ್‌ ತನ್ನ ಹೆಂಡತಿಯೊಂದಿಗೆ ಜಗಳವಾಡಿದ. ಅವನ ಕಿರುಚಾಟ ಕೇಳಲಾಗದೆ ಅವನ ಹೆಂಡತಿ ನೆರೆಮನೆಗೆ ಓಡಿಹೋದಳು. ಮುಲ್ಲಾ ಅವಳ ಹಿಂದೆಯೇ ಅಲ್ಲಿಗೂ ಹೋದ.

ನೆರೆಮನೆಯವರು ಬಲು ಕಷ್ಟದಿಂದ ಇಬ್ಬರನ್ನೂ ಸಮಾಧಾನಪಡಿಸಿ ಚಹಾ ಹಾಗು ಮಿಠಾಯಿಗಳನ್ನು ಕೊಟ್ಟರು.

ತಮ್ಮ ಮನೆಗೆ ಹಿಂದಿರುಗಿದ ನಂತರ ಪುನಃ ಮುಲ್ಲಾ ಜಗಳವಾಡಲಾರಂಭಿಸಿದ. ಹೊರಗೋಡಲೋಸುಗ ಅವನ ಹೆಂಡತಿ ಬಾಗಿಲು ತೆಗೆದೊಡನೆ ಮುಲ್ಲಾ ಸಲಹೆ ನೀಡಿದ, “ಈ ಸಲ ಬೇಕರಿಯವನ ಮನೆಗೆ ಹೋಗು. ಅವನು ಸ್ವಾದಿಷ್ಟವಾದ ಕೇಕ್‌ಗಳನ್ನು ತಯಾರಿಸುತ್ತಾನೆ!”

*****

೨. ಅಪೂರ್ಣ ಶವಪೆಟ್ಟಿಗೆ

ಶ್ರೀಮಂತನೊಬ್ಬ ತನಗಾಗಿ ಮಾಡಿಸಿದ್ದ ಶವಪೆಟ್ಟಿಗೆಯನ್ನು ನಜರುದ್ದೀನ್ ಹೋಜನಿಗೆ ತೋರಿಸಿದ.

ಮರದ ಗುಣಮಟ್ಟದ ಕುರಿತು ಹೋಜ ಮೆಚ್ಚುಗೆ ವ್ಯಕ್ತಪಡಿಸಬೇಕೆಂಬುದು ಅವನ ಅಪೇಕ್ಷೆಯಾಗಿತ್ತು.

“ನಾಲ್ಕೂ ಬದಿಗಳ ಹಲಗೆಗಳಲ್ಲಿ ಕೆತ್ತನೆಗಳ ಕುರಿತು ನಿನ್ನ ಅನಿಸಿಕೆ ಏನು? ಅವು ಅದ್ಭುತವಾಗಿಲ್ಲವೇ?” ಕೇಳಿದ ಆತ.

ಹೋಜ ತಲೆಯಾಡಿಸಿ ಮೆಚ್ಚುಗೆ ವ್ಯಕ್ತಪಡಿಸಿದ.

“ಹಲಗೆಯ ಒಳಬಾಗದಲ್ಲಿ ಒಳಪದರವಾಗಿ ದಪ್ಪ ಉಣ್ಣೆಯನ್ನೇ, ಅದೂ ಅತ್ಯುತ್ತಮವಾದ ಉಣ್ಣೆಯನ್ನೇ ಉಪಯೋಗಿಸಬೇಕೆಂದು ನಾನು ಪಟ್ಟುಹಿಡಿದಿದ್ದೆ.” ಜಂಭಕೊಚ್ಚಿದ ಶ್ರೀಮಂತ.

“ಒಳ್ಳೆಯದನ್ನೇ ಮಾಡಿದಿರಿ,” ಪ್ರತಿಕ್ರಿಯಿಸಿದ ಹೋಜ.

ಶ್ರೀಮಂತ ಮುದುವರಿಸಿದ, “ಅದರಲ್ಲಿ ಎಳ್ಳಷ್ಟೂ ನ್ಯೂನತೆ ಇರಬಾರದು ಎಂಬುದು ನನ್ನ ಇಚ್ಛೆಯಾಗಿತ್ತು. ನಿನಗೇನಾದರೂ ಕೊರತೆ ಕಾಣಿಸುತ್ತಿದೆಯಾ?”

ಹೋಜಾ ಹೇಳಿದ, “ಕಾಣಿಸುತ್ತಿದೆ. ಒದರ ಒಳಗಿರಬೇಕಾದವ ಇಲ್ಲದಿರುವ ಕೊರತೆ!”

*****

೩. ಮನಸ್ಸನ್ನು ಓದುವವ

ಅಡ್ಡರಸ್ತೆಯಲ್ಲಿ ಒಮ್ಮೆ ಒಬ್ಬ ಸ್ಥೂಲಕಾಯದ ಶ್ರೀಮಂತನೊಬ್ಬ ಕುದುರೆ ಸವಾರಿ ಮಾಡುತ್ತಾ ಅವನತ್ತ ಬರುತ್ತಿದ್ದದ್ದನ್ನು ನೋಡಿದ.

“ಓ ಮುಲ್ಲಾ, ಅರಮನೆಗೆ ಹೋಗುವ ದಾರಿ ಯಾವುದು?” ಕೇಳಿದ ಆ ಶ್ರೀಮಂತ.

ಮುಲ್ಲಾ ಕೇಳಿದ, “ನಾನೊಬ್ಬ ಮುಲ್ಲಾ ಎಂಬುದು ನಿಮಗೆ ಹೇಗೆ ಗೊತ್ತಾಯಿತು?”

ವಾಸ್ತವವಾಗಿ ವಿದ್ವಾಂಸರಂತೆ ಕಾಣುವ ಎಲ್ಲರನ್ನೂ ‘ಮುಲ್ಲಾ’ ಎಂಬುದಾಗಿ ಕರೆಯುವುದು ಆ ಶ್ರೀಮಂತನ ಅಭ್ಯಾಸವಾಗಿತ್ತು. ಆದರೆ ಈ ಸತ್ಯವನ್ನು ಹೋಜನಿಗೆ ಹೇಳಲು ಅವನಿಗೆ ಇಷ್ಟವಿರಲಿಲ್ಲ.

“ನನಗೆ ಹೇಗೆ ತಿಳಿಯಿತು?” ಜಂಬಕೊಚ್ಚಿಕೊಂಡ ಆತ. “ನಾನು ಇತರರ ಮನಸ್ಸನ್ನು ಓದಬಲ್ಲೆ, ಆದ್ದರಿಂದ ತಿಳಿಯಿತು.”

ಹೋಜ ಪ್ರತಿಕ್ರಿಯಿಸಿದ, “ನಿಮ್ಮನ್ನು ಭೇಟಿಯಾಗಿ ಬಲು ಸಂತೋಷವಾಯಿತು. ನಿಮ್ಮ ಪ್ರಶ್ನಗೆ ಉತ್ತರ ನನ್ನ ಮನಸ್ಸಿನಲ್ಲಿದೆ. ಓದಿ, ಮುಂದುವರಿಯಿರಿ.”

*****

೪. ಗೊಂದಲದಲ್ಲಿ ಮುಲ್ಲಾ

ಸುಲ್ತಾನನ ಆನೆಯೊಂದು ಮುಲ್ಲಾ ನಜರುದ್ದೀನ್ ಹೋಜನ ಹಳ್ಳಿಗೆ ದಾರಿತಪ್ಪಿ ಬಂದು ಅಲ್ಲಿನ ಹೊಲಗದ್ದೆಗಳಲ್ಲಿ ವ್ಯಾಪಕ ಹಾನಿ ಮಾಡುತ್ತಿತ್ತು.

ಆನೆಯನ್ನು ಹಿಂದಕ್ಕೆ ಕರೆದುಹೋಗುವಂತೆ ಸುಲ್ತಾನನಿಗೆ ಮನವಿ ಸಲ್ಲಿಸಲೋಸುಗ ನಿಯೋಗವೊಂದನ್ನು ಸುಲ್ತಾನನನ್ನು ಭೇಟಿಮಾಡಲು ಕಳುಹಿಸುವುದೆಂಬುದಾಗಿ ಹಳ್ಳಿಗರು ಕೊನೆಗೆ ತೀರ್ಮಾನಿಸಿದರು. ಮುಲ್ಲಾ ನಜರುದ್ದೀನನಿಗೆ ಸುಲ್ತಾನನ ಪರಿಚಯ ಇದ್ದದ್ದರಿಂದ ನಿಯೋಗದ ಮುಖಂಡನಾಗುವಂತೆ ಅವನನ್ನು ಕೋರಿದರು.

ಅರಮನೆಯನ್ನು ತಲುಪಿದಾಗ ಅದರ ಭವ್ಯತೆಯಿಂದ ಬೆರಗಾದ ಹಳ್ಳಿಗರು ಸುಲ್ತಾನನನ್ನು ಮುಖತಃ ಭೇಟಿಯಾಗುವ ಧೈರ್ಯವನ್ನು ಕಳೆದುಕೊಂಡರು. ಒಬ್ಬೊಬ್ಬರಾಗಿ ನಿಯೋಗದಿಂದ ಕಳಚಿಕೊಂಡು ಮಾಯವಾದರು. ನಿಯೋಗ ಅಂತಿಮವಾಗಿ ಸುಲ್ತಾನನ ಸಮ್ಮುಖಕ್ಕೆ ಬಂದು ನಿಂತಾಗ ಇದ್ದದ್ದು ಹೋಜ ಒಬ್ಬ ಮಾತ್ರ.

ಅಂದೇಕೋ ವಿನಾ ಕಾರಣ ಸಿಡುಕುತ್ತಿದ್ದ ಸುಲ್ತಾನ ಒರಟಾಗಿ ಕೇಳಿದ, “ನಜ಼ರುದ್ದೀನ್‌ ನಿನಗೇನು ಬೇಕು?”

“ನಿಮ್ಮ ಆನೆ ನಮ್ಮ ಹಳ್ಳಿಯಲ್ಲಿದೆ ಮಹಾಪ್ರಭು,” ಉತ್ತರಿಸಿದ ಮುಲ್ಲಾ.

“ಹಾಗಾದರೆ?” ಸುಲ್ತಾನ ಗುರುಗುಟ್ಟಿದ.

ಧೈರ್ಯ ಕಳೆದುಕೊಂಡ ಮುಲ್ಲಾ ತಡವರಿಸುತ್ತಾ ಹೇಳಿದ, “ಆದ್ದರಿಂದ—ಆದ್ದರಿಂದ, ಅಂದರೆ ನಾವು ಬಂದದ್ದು ಏಕೆಂದರೆ, ಆ ಆನೆಯನ್ನು ಒಂಟಿತನ ಬಹುವಾಗಿ ಕಾಡುತ್ತಿದೆಯಾದ್ದರಿಂದ ಅದಕ್ಕೆ ಜೊತೆಗಾರನಾಗಿರಲು ಇನ್ನೊಂದು ಆನೆಯನ್ನು ಕಳುಹಿಸಿ ಎಂಬುದನ್ನು ಹೇಳಲು!”

*****

೫. ಮುಲ್ಲಾನ ಬಡತನ

ಮುಲ್ಲಾನಿಗೆ ಸಾಲ ಕೊಟ್ಟವನೊಬ್ಬ ಸಮಯಕ್ಕೆ ಸರಿಯಾಗಿ ಮುಲ್ಲಾ ಅದನ್ನು ಹಿಂದಿರುಗಿಸದೇ ಇದ್ದದ್ದರಿಂದ ಅವನನ್ನು ಎಳೆದೊಯ್ದು ನ್ಯಾಯಾಧೀಶರ ಎದುರು ನಿಲ್ಲಿಸಿದ.

ಸಾಲ ಕೊಟ್ಟವ ಹೇಳಿದ, “ಈ ಮನುಷ್ಯ ನನಗೆ ೫೦೦ ದಿನಾರ್‌ಗಳನ್ನು ಕೊಡಬೇಕು. ಸಾಲ ತೀರಿಸಲು ಇದ್ದ ವಾಯಿದೆ ಎಂದೋ ಮುಗಿದು ಹೋಗಿದೆ. ಇನ್ನೂ ತಡಮಾಡದೆ ನನ್ನ ಹಣವನ್ನು ಹಿಂದಿರುಗಿಸುವಂತೆ ಅವನಿಗೆ ಆಜ್ಞಾಪಿಸಬೇಕಾಗಿ ಕೋರುತ್ತೇನೆ ಮಹಾಸ್ವಾಮಿ.”

ಮುಲ್ಲಾ ಹೇಳಿದ, “ನಾನು ಅವನಿಗೆ ಹಣ ಕೊಡಬೇಕಾದದ್ದು ನಿಜ. ಅಗತ್ಯವಾದರೆ ನನ್ನ ಹಸು ಹಾಗು ಕುದುರೆಯನ್ನು ಮಾರಿಯಾದರೂ ಅವನ ಹಣ ಪಾವತಿಸುತ್ತೇನೆ. ಆದರೆ ಅದಕ್ಕೆ ತುಸು ಕಾಲಾವಕಾಶ ಬೇಕು.”

ಸಾಲಕೊಟ್ಟವ ಹೇಳಿದ, “ಇವನು ಸುಳ್ಳು ಹೇಳುತ್ತಿದ್ದಾನೆ ಮಹಾಸ್ವಾಮಿ. ಅವನ ಹತ್ತಿರ ಹಸುವೂ ಇಲ್ಲ ಕುದುರೆಯೂ ಇಲ್ಲ. ವಾಸ್ತವವಾಗಿ ಬೆಲೆಬಾಳುವಂಥದ್ದು ಏನೂ ಇಲ್ಲ. ಅವನ ಮನೆಯಲ್ಲಿ ತಿನ್ನಲು ಆಹಾರವೂ ಇಲ್ಲ ಎಂಬುದಾಗಿಯೂ ಎಲ್ಲರೂ ಹೇಳುತ್ತಿದ್ದಾರೆ!”

ಮುಲ್ಲಾ ತಕ್ಷಣವೇ ಪ್ರತಿಕ್ರಿಯಿಸಿದ, “ನಾನು ಅಷ್ಟೊಂದು ಬಡವ ಎಂಬುದು ತಿಳಿದಿದ್ದ ನಂತರವೂ ತಕ್ಷಣವೇ ಹಣ ನೀಡುವಂತೆ ಒತ್ತಾಯಿಸುವುದು ಸರಿಯೇ ಎಂಬುದನ್ನು ಕೇಳಿ ಮಹಾಸ್ವಾಮಿ.”

ನ್ಯಾಯಾಧೀಶರು ಮೊಕದ್ದಮೆಯನ್ನು ವಜಾ ಮಾಡಿದರು!

*****


 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ನಜರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

Leave a Reply

Your email address will not be published. Required fields are marked *