ಧನದಾಹಕ್ಕೆ ದಿಕ್ಕೆಟ್ಟ ಬದುಕು ಆರ್ ಕೆ. ನಾರಾಯಣ್ ರ – The Financial Expert ನ ಮಾರ್ಗಯ್ಯ: ನಾಗರೇಖಾ ಗಾಂವಕರ

ಅದೊಂದು ಮುಂಜಾನೆ ಮಾರ್ಗಯ್ಯ ತನ್ನ ಕೆಂಪು ಬಣ್ಣದ ಅಕೌಂಟ್ ಪುಸ್ತಕದಲ್ಲಿ ಪೂರ್ಣ ತಲ್ಲೀನ. ತಂದೆ ತಾನು ಕೇಳಿದ ಆನೆ ಆಟಿಕೆ ಕೊಡಿಸಲಿಲ್ಲವೆಂದು ಕೋಪಗೊಂಡ ಬಾಲು ಕಾಲಿಂದ ಶಾಯಿ ಬಾಟಲಿಯ ಜೋರಾಗಿ ತೂರಿದ ರಭಸಕ್ಕೆ ಪುಸ್ತಕ ಬಣ್ಣಮಯವಾಗುತ್ತದೆ. ಸಿಟ್ಟಿಗೆದ್ದ ಮಾರ್ಗಯ್ಯ ಮಗನನ್ನು ದರದರ ಎಳೆದು ಕೋಣೆಯೊಳಗೆ ಕೂಡಿಹಾಕಲು ಯತ್ನಿಸುತ್ತಲೇ ತಪ್ಪಿಸಿಕೊಂಡ ಬಾಲು ಬಣ್ಣಮೆತ್ತಿದ ಪುಸ್ತಕ ಎತ್ತಿಕೊಂಡು ಹೊರಗೋಡಿ ತಟ್ಟನೆ ಗಟಾರಕ್ಕೆ ಚೆಲ್ಲಿ ಬಿಡುತ್ತಾನೆ. ಮಾರ್ಗಯ್ಯ ಹಣಕಾಸಿನ ಭಂಡಾರವೇ ಕೈತಪ್ಪಿದಂತೆ ಕಂಗಾಲಾಗುತ್ತಾನೆ.

ಅದೇ ಬಾಲು ಪ್ರಾಯಕ್ಕೆ ಬರುತ್ತಲೂ ಇನ್ನಷ್ಟು ಅವಿವೇಕಿ ಉದ್ದಟನಾಗುತ್ತ ಬೆಳೆಯತೊಡಗುತ್ತಾನೆ. ಎಸ್.ಎಸ್.ಎಲ್.ಸಿಯಲ್ಲಿ ಗೋತಾ ಹೊಡೆದ ಬಾಲುವಿಗೆ ಮಾರ್ಗಯ್ಯ ಪುನರ್ ಪ್ರಯತ್ನಕ್ಕೆ ಮನವೊಲಿಸುತ್ತಲೂ ಬಾಲು ತಂದೆಯಿಂದ ಅಂಕಗಳ ಕಾರ್ಡು ಕಸಿದುಕೊಂಡು ನಾಲ್ಕು ತುಂಡಾಗಿಸಿ ಹೊರಗೋಡಿ ಗಟಾರಕ್ಕೆಸೆದು ಮನೆಯಿಂದ ಓಡಿಹೋಗುತ್ತಾನೆ. ಮಗನಿಗಾಗಿ ಪರಿತಪಿಸುವ ಪತ್ನಿಯ ದೈನ್ಯ ನೋಡಲಾಗದೆ ಮಾರ್ಗಯ್ಯ ಅವರಿವರ ಸಹಕಾರದೊಂದಿಗೆ ಮಗನನ್ನು ಹುಡುಕಿ ತರುತ್ತಾನೆ.

ಈ ಎರಡು ಘಟನೆಗಳು ಬಾಲುವಿನ ವ್ಯಕ್ತಿತ್ವ ದರ್ಶನ ಮಾಡಿಸುತ್ತವೆ. ತಾಯಿಯ ಅತಿ ಪ್ರೀತಿ, ತಂದೆಯ ಮಾರ್ಗದರ್ಶನದ ಕೊರತೆ ಹಾಗೂ ದುಷ್ಟರ ಸಾಂಗತ್ಯದ ಬಳುವಳಿ ಎಂಬಂತೆ ಬಾಲು ನೈತಿಕ ಅಧಃಪತನದತ್ತ ಸಾಗುತ್ತಾನೆ. ಸದಾ ಹಣದ ಕುರಿತೇ ಚಿಂತಿಸುವ ಶ್ರೀಮಂತಿಕೆ ಗಳಿಸುವ ಹುನ್ನಾರಗಳಲ್ಲೆ ಮಗ್ನನಾಗುವ ಮಾರ್ಗಯ್ಯ ಮಗನನ್ನು ಬಾಲ್ಯದಲ್ಲಾಗಲಿ, ಯೌವನಾವಸ್ಥೆಯಲ್ಲಾಗಲಿ ಸರಿಯಾಗಿ ಮಾರ್ಗದರ್ಶನ ನೀಡುವುದಿಲ್ಲ. ತನ್ನ ವ್ಯವಹಾರಗಳಲ್ಲೆ ಹಗಲಿರುಳು ಹೈರಾಣಾಗುವ ಮಾರ್ಗಯ್ಯ ಹಣವೇ ಎಲ್ಲ ಎಂಬ ವಿಭ್ರಮೆಯ ಲೋಕದಲ್ಲಿ ತೇಲಾಡುತ್ತಿರುತ್ತಾನೆ. ಆದರೆ ದುಡ್ಡಿನ ಬುಡದಲ್ಲಿನ ದರಿದ್ರ ಬದುಕು ಕ್ರಮೇಣ ಅನುಭವಕ್ಕೆ ಬರುತ್ತದೆ.
ದಿವಂಗತ ಲೋಕೇಶ ಮನೋಜ್ಞ ಅಭಿನಯದ ಕನ್ನಡ ಚಲನಚಿತ್ರ ಬ್ಯಾಂಕರ್ ಮಾರ್ಗಯ್ಯ ಸಿನೇಮಾ ನೋಡಿದವರಿಗೆ ನನ್ನ ಈ ಲೇಖನ ಸಪ್ಪೆ ಎನಿಸಬಹುದು. ನಾನು ಹೇಳ ಹೊರಟಿರುವುದು ಭಾರತೀಯ ಆಂಗ್ಲ ಸಾಹಿತ್ಯದಲ್ಲಿ ಅಪ್ರತಿಮ ಸಾಹಿತಿ ಎಂದೇ ಹೆಸರಾದ ಮಾಲ್ಗುಡಿ ಡೇಸ್‍ನ “ಆರ್ ಕೆ ನಾರಾಯಣ”ರ ಪ್ರಸಿದ್ಧ ಕಾದಂಬರಿ “ದಿ ಪೈನಾನ್ಸಿಯಲ್ ಎಕ್ಷಪರ್ಟ” ಕುರಿತು.

ಹಣದ ಉನ್ಮಾದಕ್ಕೆ ಒಳಗಾದ ಮಾರ್ಗಯ್ಯನ ನಿಜ ಹೆಸರು ಕೃಷ್ಣ. ಆದರೆ ಜನ ಅದನ್ನೆ ಮರೆತಂತೆ ಬ್ಯಾಂಕರ ಮಾರ್ಗಯ್ಯ ಎಂಬುದೇ ಆತನ ವೃತ್ತಿಗೂ ವ್ಯಕ್ತಿತ್ವಕ್ಕೂ ತಾಳೆಯಾಗುತ್ತದೆ. ಪತ್ನಿ ಮೀನಾ ಮಗ ಬಾಲುವಿನೊಂದಿಗೆ ಮುದಳಿಯ ಓಣಿಯೊಂದರಲ್ಲಿ ವಾಸಿಸುವ ಮಾರ್ಗಯ್ಯ ಆದರ್ಶ ತಂದೆಯೂ ಅಲ್ಲ, ಇತ್ತಲಾಗಿ ಆದರ್ಶ ಪತಿಯೂ ಅಲ್ಲ. ಪತ್ನಿ ಮೀನಾ ಕುಟುಂಬದ ಒಳಿತಿಗಾಗಿ ಪ್ರಾರ್ಥಿಸುವ ಬಡಜೀವ. ಮಾಲ್ಗುಡಿಯ ಸಾಮಾನ್ಯ ಜನರಿಗೆ ಬ್ಯಾಂಕು ಹಾಗೂ ಸಂಬಂಧಿಸಿದ ಹಣಕಾಸಿನ ಒಳಹೊರಗಿನ ವ್ಯವಹಾರಗಳನ್ನೆಲ್ಲಾ ಹೇಳಿಕೊಡುವ ಮಾರ್ಗದರ್ಶಕನಾದ ಮಾರ್ಗಯ್ಯ ಹಣ ಮಾಡುವ ಹುನ್ನಾರದಿಂದ ಪೂಜಾರಿ ಹೇಳಿದ ವೃತ ಪಾಲನೆಗೆ ಸರಯೂ ನದಿಯ ದಂಡೆಯ ಮೇಲ್ಬಾಗದಲ್ಲಿರುವ ದೇಗುಲದ ಕೊಳದಲ್ಲಿ ಕೆಂಪು ಕಮಲದ ಶೋಧನೆಗೆ ಹೊರಟಾಗ ಡಾ.ಪಾಲ್ ಪರಿಚಯವಾಗುತ್ತಾನೆ. ಸಾವಿರಾರು ವರ್ಷಗಳ ಹಿಂದೆ ವಾತ್ಸಾಯನ ಬರೆದ ಕಾಮಸೂತ್ರದ ಆದರಿಸಿ ಡಾ.ಪಾಲ್ ಕಾಮ ಶಾಸ್ತ್ರದ ಬಗ್ಗೆ ಬರೆದ “bed life” ಕರಡು ಪ್ರತಿಯನ್ನು ಪಾಲ್‍ನಿಂದ ಖರೀದಿಸುವ ಮಾರ್ಗಯ್ಯನ ತಲೆಯೊಳಗೆ ವಿಚಿತ್ರ ವಿಚಾರ ಹೊಳೆಯುತ್ತದೆ. ಡಾ.ಪಾಲ್ ಕೂಡ ಆ ಪ್ರತಿಯನ್ನು ಪ್ರಕಟಿಸುವಂತೆ ಪ್ರೋತ್ಸಾಹಿಸುತ್ತಾನೆ. ಅದು Domestic Harmony ಹೆಸರಲ್ಲಿ ಪ್ರಕಟವಾದದ್ದೆ ಮಾರ್ಗಯ್ಯ ಅದೃಷ್ಟನ ಸ್ವಲ್ಪ ಮಟ್ಟಿಗೆ ಖುಲಾಯಿಸುತ್ತದೆ. ಆದರೆ ಪ್ರಕಾಶಕ ಫಿಪ್ಟಿ ಫಿಫ್ಟಿ ಪಾರ್ಟನರ್ ಶಿಪ್ಗೆ ಒತ್ತಾಯಿಸಿದಾಗ ಒಂದಿಷ್ಟು ಮೊತ್ತಕ್ಕೆ ಅದನ್ನು ಮಾರುವ ಮಾರ್ಗಯ್ಯ ಆ ಮೊತ್ತವನ್ನು ಬಡ್ಡಿ ವ್ಯವಹಾರಕ್ಕೆ ಬಳಸಿಕೊಂಡು ಏಕವ್ಯಕ್ತಿ ಸಹಕಾರಿ ಬ್ಯಾಂಕಾಗಿ ಜನರಿಗೆ ಸಾಲಸೌಲಭ್ಯ ನೀಡಲಾರಂಭಿಸುತ್ತಾನೆ. ಹಣದ ಹೊಳೆ ಹೆಚ್ಚಾಗುತ್ತ ಶ್ರೀಮಂತ ಮಾರ್ಗಯ್ಯನಾಗುತ್ತಾನೆ.

ಆದರೆ ಹೆತ್ತ ಒಬ್ಬನೇ ಮಗ ಬಾಲು ಮಾತ್ರ ಸರಿಯಾದ ಹಿಡಿತವಿಲ್ಲದೇ ತಂದೆಯೊಂದಿಗೆ ಆತ್ಮೀಯ ಬಂಧವಿಲ್ಲದೇ ಸದಾ ಬೇಕಾರ್ ಬಾಬು. ತಂದೆಯ ಸ್ಥಾನವನ್ನು ಸರಿಯಾಗಿ ನಿಭಾಯಿಸಲಾಗದೆ, ಮಗನನ್ನು ಸರಿದಾರಿಗೆ ತರಲಾಗದೆ ಪರಿಪರಿಯಾಗಿ ಪರದಾಡುತ್ತಾನೆ ಮಾರ್ಗಯ್ಯ.. ದಿನದಿಂದ ದಿನಕ್ಕೆ ಡಾ. ಪಾಲ್ ಜೊತೆಗೂಡಿ ಕೆಟ್ಟ ಚಟಗಳಿಗೆ ದಾಸನಾಗುತ್ತ ಹೋಗುತ್ತಿರುವ ಮಗ ಉದ್ಧಾರವಾಗಲೆಂದು ಮದುವೆ ಮಾಡಿಸುತ್ತಾನೆ ಮಾರ್ಗಯ್ಯ. ಸೊಸೆಯಾಗಿ ಬಂದ ವೃಂದಾಳಿಂದಲೂ ಗಂಡನನ್ನು ಸುಧಾರಿಸಲಾಗುವುದಿಲ್ಲ. ಮಾರ್ಗಯ್ಯನ ಧನಸಂಗ್ರಹ ಹೆಚ್ಚಾಗುತ್ತ ಆತನ ಸಂಬಂಧಗಳು ಹಳ್ಳಹಿಡಿಯಲಾರಂಭಿಸುತ್ತವೆ. ಬಾಲು ತನ್ನ ಪಾಲಿನ ಆಸ್ತಿಗೆ ಹಠಹಿಡಿಯುತ್ತಾನೆ. ಡಾ. ಪಾಲ್ ಮಾರ್ಗಯ್ಯನ ಊದ್ರ್ವಮಾನಕ್ಕೂ ಅಧೋಗತಿಗೂ ಕಾರಣನಾಗುತ್ತಾನೆ. ಅಲ್ಲಿಂದ ಮಾರ್ಗಯ್ಯನ ಸ್ಥಿತಿ ಮತೆ ಕೆಳಮುಖವಾಗುತ್ತದೆ. ಹೀಗೆ ಮಾನವ ಸಂಬಂಧಗಳ ಮೌಲ್ಯವನ್ನು ಹಣದಿಂದ ಅಳೆಯಲಾಗದು ಎಂಬ ನಿರ್ದಿಷ್ಟ ಸಂದೇಶವನ್ನು ಸೊಗಸಾಗಿ ಮನತಟ್ಟುವಂತೆ ನಿರೂಪಿಸಿದ್ದಾರೆ ಆರ್. ಕೆ. ಸ್ವಹಿತ, ಸ್ವಾರ್ಥ, ಬಂಡವಾಳಶಾಹಿ ಹಾಗೂ ಕೊಳ್ಳುಬಾಕ ಸಂಸ್ಕøತಿಗೆ ಮಾರುಹೋದ ಇಂದಿನ ಸ್ಥಿತಿಗೆ ಹಣದ ಗೀಳೆ ಕಾರಣ. ಈ ಸ್ಥಿತಿಯಿಂದ ಬದಲಾಗಬೇಕಾದ ಜರೂರು ಅತಿ ಅಗತ್ಯವಾಗಿದೆ.

ರಾಸಿಪುರಂ ಕೃಷ್ಣಸ್ವಾಮಿ ನಾರಾಯಣಸ್ವಾಮಿ ಹುಟ್ಟಿದ್ದು 1906 ಅಕ್ಟೋಬರ 10ರಂದು. ಮೊದಲ 15 ವರ್ಷಗಳ ಮದ್ರಾಸಿನಲ್ಲಿ ಕಳೆದ ಆರ್.ಕೆ. ಕಿಶೋರಾವಸ್ಥೆಯಲ್ಲಿ ಮೈಸೂರಿಗೆ ಬಂದರು. ಸುಂದರ ಶುಭ್ರ ಮೈಸೂರು ನಾರಾಯಣರ ನೈಸರ್ಗಿಕ ಆಕರ್ಷಣೆಯ ಕೇಂದ್ರ ಬಿಂದು. ಅವರ ಬಹುತೇಕ ಕೃತಿಗಳಲ್ಲಿ ಮಾಲ್ಗುಡಿ ಮೂಲ ನೆಲೆ. ನಾರಾಯಣರ ಕಾಲ್ಪನಿಕ ಲೋಕ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿ ಬರಿಯ 5 ದಿನಗಳಿಗೆ ಶಿಕ್ಷಕರಾಗಿ ಕೆಲಸ ಮಾಡಿ, ಅದು ಒಗ್ಗದಾಗ ಪೂರ್ಣಪ್ರಮಾಣದಲ್ಲಿ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅದ್ವಿತೀಯ ಕೃತಿಗಳನ್ನು ಕಾಣಿಕೆಯಾಗಿ ನೀಡಿದ ಆರ್ ಕೆ. 2001ರಂದು ನಿಧನರಾದರು.

ನಾಗರೇಖಾ ಗಾಂವಕರ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x