ದೀಪಾವಳಿ: ಸುನೀತಾ ಮಂಜುನಾಥ್

Sunitha-Manjunath

ದೀಪಾವಳಿ ಎಂದರೆ ಮನೆಯನ್ನ ಸಾವರಿಸಿ, ಹಂಡೆಗೆ ಪೂಜೆ ಮಾಡಿ ಇದ್ದ ಬದ್ದ ಹಂಡೆ, ಬಿಂದಿಗೆ, ಬಕೇಟುಗಳಿಗೆಲ್ಲ ನೀರು ತುಂಬಿಟ್ಟು , ನೀರು ತುಂಬುವ "ಹಬ್ಬ' ಮುಗಿವಷ್ಟರಲ್ಲಿ ಬೆಳಗಾಗಿ ಮನೆಯ ಬಾಗಿಲಿಗೆ ಸಗಣಿಯ ಸಾರಿಸಿ, ರಂಗೋಲಿ ಹಾಕಿ, ರಂಗೋಲಿಯ ನಡುವೆ ಸಗಣಿಯ ಉಂಡೆಯನ್ನಿಟ್ಟು ಮೇಲೊಂದು ಹುಚ್ಚೆಳ್ಳಿನ ಹಳದಿ ಹೂವಿನ್ನ ಸಿಕ್ಕಿಸಿದರೆ ಹಬ್ಬದ ಕಳೆ ಬಂತೆಂದೇ.. .ನೆತ್ತಿಗೆ ಎಣ್ಣೆಯಿಟ್ಟು ಹಂಡೆಯಿಂದ ಬಿಸಿ ನೀರು ಹಾಕಿಸಿಕೊಂಡು ಒಂದು ಸರ ಪಟಾಕಿ ಹೊಡೆದರೆ ನಮ್ಮ ಹಬ್ಬ ಶುರು ಎಂದೇ ಅರ್ಥ.. 

ಮತ್ತೆ ಮೂರು ದಿನ ಕಜ್ಜಾಯ, ಒಬ್ಬಟ್ಟು, ಚಿತ್ರಾನ್ನ, ಕೋಸಂಬರಿ ಅದೇನ್ ತಿನ್ತಾ ಇದ್ವೋ ಅದೆಲ್ಲಿ ತಿನ್ತಾ ದೇವರೇ ಬಲ್ಲ. ಒಂದಿಡಿ ಪಟಾಲಂ ಸೇರಿದರೆ ಬೀದಿಗೆ ಬೀದಿಯೇ ನಮ್ಮದು ಎನಿಸುವಂತೆ…ಮನೆಯಲ್ಲಿ ಒಮ್ಮೆ ಪಟಾಕಿ ಕೊಡಿಸಿ ಹಂಚಿ ಮೂರು ದಿನಕ್ಕೂ ಇಟ್ಕೋಬೇಕು ಎಲ್ಲಾ ಒಂದೇ ದಿನ ಮುಗಿಸಿದ್ರೆ ಬೇರೆ ಇಲ್ಲ ಅನ್ನೋ ಬೆದರಿಕೆಗೆ ಅದೆಷ್ಟು ಜಿಪುಣುತನದಿಂದ ಜತನವಾಗಿ ಪಟಾಕಿ ಖರ್ಚು ಮಾಡ್ತಾ ಇದ್ವಿ !! ಚಿನಕುರುಳಿ ಪಟಾಕಿಯನ್ನ ಕಲ್ಲಿನಲ್ಲಿ  ಹೊಡೆದು ಸಂಭ್ರಮಿಸಿದ್ದು ಇದೆ…

ಹಬ್ಬಕ್ಕೆ ದೀಪಗಳನ್ನ ತೆಗೆದು ತೊಳೆದಿಡುತ್ತಾ ಇದ್ದೆ. ಮಕ್ಕಳು, ಮಂಜು, ಮತ್ತು ಅತ್ತೆ ಟಿವಿ ನೋಡ್ತಾ ಇದ್ರು. 'ಕಂಪನಿ ಸೊಸೈಟಿಲಿ ಪಟಾಕಿ ಕೊಡ್ತಾ ಇದ್ದಾರೆ ತರ್ಲಾ ಮಗ' ಅಂತ ಕೇಳಿದ್ರು. ಇಬ್ರೂ 'ಬೇಡ ಅಪ್ಪ, ಈ ಸಾರಿ ಪಟಾಕಿ ಹೊಡೆಯೋದಿಲ್ಲ 'ಅಂದ್ರು. ಅತ್ತೆ ಶುರು ಮಾಡಿದ್ರು 'ನನ್ ಮಕ್ಕಳಿಗೆ ನಿಮ್ ತಾತ ಹಿಂಗೆಲ್ಲಾ ಕೇಳ್ತಾನೆ ಇರ್ಲಿಲ್ಲ ಕಾರ್ತಿ ಮಗ, ಪಾಪ ನನ್ನ ಬೆನ್ನ ಹಿಂದೆ ನಿಂತು ಹೆದ್ರಕೊಂಡು ಕೇಳ್ತಿದ್ವು ನನ್ ಮಕ್ಳು . ನಿಮ್ ತಾತ ಎಷ್ಟ್ ಗೋಳಾಡಿಸ್ತಾ ಇದ್ರೂ ಪಟಾಕಿ ತರೋಕೆ ಗೊತ್ತಾ ' ಅಂದ್ರು. 

ಮಕ್ಳು ಟಿವಿ ಆರಿಸಿ ಕಥೆ ಕೇಳೋಕೆ ಶುರು ಮಾಡಿದ್ರು. ಮಂಜು ಹೇಳಿದ್ರು 'ಒಂದ್ ಸಾರಿ ಮಗ ಪಟಾಕಿ ತರ್ತೀನಿ ಅಂತ ಹೋದ ನಿಮ್ ತಾತ ಎಲ್ಲರ ಮನೆಯಲಿ ದೀಪ ಹಚ್ಚಿದ್ರು ಪಟಾಕಿ ತಗೊಂಡು ಬರ್ಲೇ ಇಲ್ಲ.. ನಾನು, ಗೋಪಿ, ಚಂದ್ರ ಕಾಯ್ತಾನೆ ಇದ್ವಿ. ಕಾಯ್ತಾನೆ ಇದ್ವಿ .. ಕಡೆಗೆ ಸುಮಾರು ೭:೩೦ ಅಷ್ಟ್ ಹೊತ್ತಿಗೆ ಪೂರ್ತಿ ಕುಡಿದುಕೊಂಡು ಮನೆಗೆ ಬಂದ್ರು, ಪಟಾಕಿನೂ ಇಲ್ಲ ಏನೂ ಇಲ್ಲ …. ಮೂವರೂ ಅಳುತ್ತಾ ಮೂಲೆಯಲ್ಲಿ ಮುದುಡಿಕೊಂಡು ಮಲಗಿದ್ವಿ.. ಬೇರೆಯವರು ಪಟಾಕಿ ಹೊಡೆಯುವುದನ್ನ ಬೆರಗಿನಿಂದ ನೋಡ್ತಾ ನಿಲ್ತಾ ಇದ್ವಿ.. ಆಗ ಅವರುಗಳು ನಮ್ಮನ್ನ ನೋಡ್ತಾ ಇದ್ದ ರೀತಿ ನೆನಪಾದ್ರೆ .ನೋವು. ..' ಅಂದ್ರು. 

ಬದುಕಿನ ಪ್ರತಿಯೊಂದು ದಿನವೂ ಒಂದೊಂದು ನೆನಪುಗಳನ್ನ ಹಚ್ಚಿಟ್ಟು ಹೋಗುತ್ತವೆ. ಕೆಲವು ಸಿಹಿಸಿಹಿಯಾದರೆ ಕೆಲವು ಕಹಿ ನೆನಪುಗಳು. ಆದರೆ ಒಂದು ನಿರ್ದಿಷ್ಟ ಹಬ್ಬದ ದಿನದ ಅನುಭವ ನೆನಪಿನ ಜೊತೆ ಸೇರಿದರೆ ಅದು ಮರೆಯದ ನೆನಪಾಗುತ್ತದೆ. ಕೆಲವರು ಆ ನೆನಪನ್ನ ಬದುಕಿಗೆ ದಾರಿ ಮಾಡಿಕೊಂಡರೆ ಕೆಲವರು ಆ ನೆನಪಿನಿಂದ ತಾವೇ ಉರಿದು ಕುಗ್ಗಿ ಹೋಗ್ತಾರೆ…. ಬದುಕಿನ ಬುತ್ತಿಯನ್ನ ಬಿಚ್ಚಿದರೆ ಅದೆಷ್ಟು ನೆನಪಿನ ಕೊಂಡಿ ಹೊಂದಿಕೊಂಡಿವೆಯಲ್ಲಾ ಎನಿಸಿ ಬೆರಗಾಗುತ್ತದೆ …. ಹಿರಿಯರೊಬ್ಬರು ನೆನ್ನೆ ಹೇಳಿದ್ರು 'ಕೆಲವೊಂದು ನೋವಿನ ನೆನಪುಗಳಿಗೆ ಎಷ್ಟು ಕೊಬ್ಬು ಅವೇ  ಮುಂದೆ ಬರುತ್ತವೆ ಸಿಹಿ ನೆನಪನ್ನ ಹಣದಕ್ಕೆ ಹಾಕಿ " ಅಂತ .. ನಿಜವೇನೋ ಸಿಹಿ ನೆನಪುಗಳು ಕಲೆಯುಳಿಸದೆ ಬಂದು ಹೋದರೆ ನೋವಿನ ನೆನಪುಗಳು ಕಲೆಯುಳಿಸುತ್ತವೆ….. ಆದರೂ ದೀಪ ಉರಿಯುತ್ತಲೇ ಇರುತ್ತದೆ, ದೀಪಾವಳಿ ಬಂದು ಹೋಗುತ್ತಲೇ ಇರುತ್ತದೆ. 
ಹಬ್ಬ ಶುಭ ತರಲಿ 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x