ದಿಲ್ ನೆ ಫಿರ್ ಯಾದ್ ಕಿಯಾ….: ಪಿ.ಎಸ್. ಅಮರದೀಪ್.


ಚಿತ್ರ ಕೃಪೆ: ರವಿಬೆಳಗೆರೆ ವೆಬ್‌ ತಾಣ

ಫೆಬ್ರವರಿ-21, 1998. ಆ ದಿನ ಎಂತದೋ ಬೇಸರ. ಅನಾಹುತ ಮಾಡಿಕೊಳ್ಳುವಂಥ ಯಾವ ಸೀರಿಯಸ್ಸೂ ಇಲ್ಲ. ಆದರೂ ಜಗತ್ತು ತಲೆ ಮೇಲೆ ಬಿದ್ದೋರ ಥರಾ ಶನಿವಾರ ಆಫೀಸ್ ಮುಗಿಸಿಕೊಂಡವನೇ ಬಳ್ಳಾರಿಯ ರಾಯಲ್ ಸರ್ಕಲ್ ದಾಟಿದರೆ ಈಗಿನ ಹಳೇ ಬಸ್ ನಿಲ್ದಾಣದ ತನಕ ಕಾಲೆಳೆದುಕೊಂಡು ಹೊರಟೆ. ನಿಲ್ದಾಣದಿಂದ ಹೊರಬಂದ ಬಸ್ಸಿನ ಬೋರ್ಡ್ ನೋಡಿದೆ. ಮಂತ್ರಾಲಯ ಅಂತಿತ್ತು. ಯಾಕೆ ಹೋಗಬೇಕೆನ್ನಿಸಿತೋ ಏನೋ. ಸೀದಾ ಬಸ್ ಹತ್ತಿ ಕುಳಿತೆ. Actually, ನಾನು ಆ ದಿನ ಹಗರಿಬೊಮ್ಮನಹಳ್ಳಿಗೆ ಹೊರಡಬೇಕಿತ್ತು. ಹತ್ತಿ ಕುಳಿತದ್ದು ಮಾತ್ರ ಮಂತ್ರಾಲಯದ ಬಸ್ಸು. ಆಗಿನ್ನು ಮನೆಗೆ ಲ್ಯಾಂಡ್ ಲೈನ್ ಫೋನ್ ಇತ್ತು. ಹೇಳಲಿಲ್ಲ. ನಡುವೆ ಆದೋನಿಯಲ್ಲಿ ಊಟಕ್ಕೆ ನಿಲ್ಲಿಸಿದರು. ಹಾಗೆ ನೋಡಿದರೆ ಅದು ಆಂಧ್ರ ಸೀಮೆ. ಇಳಿದು ಕುಳಿತ ಹೋಟಲಲ್ಲಿ “ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು…” ಕಸ್ತೂರಿ ನಿವಾಸದ ಹಾಡು. ನೀಡುವವರು, ಮಾಲಿಕ ಎಲ್ಲರೂ ಅಚ್ಚಕನ್ನಡದಲ್ಲೇ ಮಾತಾಡೋರು. ಅವರು ಮಾತಾಡಿದ್ದಕ್ಕಿಂತ ಆ ಹಾಡು ಕೇಳಿ ಚೂರು ಕಳೆ ಬಂದಂತಾದೆ.

ಮಂತ್ರಾಲಯ ತಲುಪಿದಾಗ ಹತ್ತತ್ತಿರ ರಾತ್ರ ಹನ್ನೊಂದುವರೆ. ಎಸ್. ಟಿ.ಡಿ. ಯಿಂದ “ನಾನೀಗ ಮಂತ್ರಾಲಯದಲ್ಲಿದೀನಿ” ಅಂದಾಗ ಮನೆಯಲ್ಲಿ ಗಾಬರಿ ಬಿದ್ದದ್ದೇ ಹೆಚ್ಚು. ಸರಿ, ಬೆಳಿಗ್ಗೆ ಎದ್ದವನೇ ಸೀದಾ ತುಂಗಾ ಭದ್ರ ನದಿ ದಡದಲ್ಲಿ ತಲೆ ಬೋಳಿಸಿಕೊಂಡು ಸೀದಾ ರಾಯರ ದರ್ಶನದ ಸಾಲಿನಲ್ಲಿ ಬರೀ ಮೈಯಲ್ಲಿ ನಿಂತಿದ್ದೆ. ಭೋಜನದ ನಂತರ ಮಟಮಟ ಮಧ್ಯಾಹ್ನ ಸೀದಾ ಬಸ್ ನಿಲ್ದಾಣಕ್ಕೆ ಬಂದವನು ಬೀಡಾ ಅಂಗಡಿಯಲ್ಲಿ ಸಿಗರೇಟ್ ಸೇದುತ್ತಿದ್ದವನ ಕಣ್ಣಿಗೆ ಕಂಡವಳು “ಹಾಯ್ ಬೆಂಗಳೂರ್” ಎನ್ನುವ ಕಪ್ಪು ಸುಂದರಿ. ಮುಖಪುಟದಲ್ಲೇ ಆ ವಾರ “ನಟಿ ರೂಪಿಣಿಗೆ ಏಡ್ಸ್” ಎನ್ನುವ ಹೆಡ್ಡಿಂಗೂ ಮತ್ತು ರೂಪಿಣಿಯ ಚಿತ್ರ. ಅರೆರೇ, ವಿಷ್ಣು ಜೊತೆ ಅದೆಷ್ಟು ಸಿನಿಮಾ ನೋಡಿಲ್ಲ ಆ ನಟಿಯದು. ಆ ನಟಿಗೆ ಏಡ್ಸಾ? ಕುತೂಹಲ ತಡೆಯದೇ ಪತ್ರಿಕೆ ತೆಗೆದುಕೊಂಡೆ. ಆಗ ಪತ್ರಿಕೆ ಬೆಲೆ ಐದು ರೂಪಾಯಿ.

ಅದೇ ಮೊದಲು ರವಿ ಬೆಳಗೆರೆಯ ಹೆಸರು ನಾನು ನೋಡಿದ್ದು. ಅದಕ್ಕೂ ಮುಂಚೆ ನಾನು ಓದಿದ್ದು ಕೇವಲ ಲಂಕೇಶ್ ಪತ್ರಿಕೆ. ಅವತ್ತಿನಿಂದ ಮುಂದೆ ಒಂದಿಷ್ಟು ದಿನ ಲಂಕೇಶ್ ಪತ್ರಿಕೆಯಲ್ಲಿ ಹಿಗ್ಗಾಮುಗ್ಗಾ ತಗುಲಿಕೊಳ್ಳುವುದು, ಸಮಜಾಯಿಷಿ ಲೆಕ್ಕದಲ್ಲಿ ಹಾಯ್ ನಲ್ಲಿ ಇನ್ನೊಂದಿಷ್ಟು ಬಂದಿದ್ದೇ ಬಂದಿದ್ದು. “ಎಡವಿದ ಕಲ್ಲು ಎದುರುಗಿಟ್ಟುಕೊಂಡು” ಅಂತ ಒಂದು ಬಾಟಂ ಐಟಂ ಬರೆದಿದ್ದರು ರವಿ ಬೆಳೆಗೆರೆ. ಅವರ ಖಾಸ್ ಬಾತ್, ಲವ್ ಲವಿಕೆ, ಬಾಟಂ ಐಟಂ ಕಾಲಂ. ಅದರೊಟ್ಟಿಗೆ ಬರುತ್ತಿದ್ದ ಧಾರವಾಹಿ ರೂಪದ ಕಾದಂಬರಿ ಬರಹಗಳು, ಬರಹ ಶೈಲಿ ತುಂಬಾ ಆಸಕ್ತಿಯಿಂದ ಓದಿಸಿಕೊಂಡು ಹೋಗುವ ಪರಿ, ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವ ಆಕರ್ಷಣೆ ಎಲ್ಲವೂ ನನಗೆ ಹೊಸದು. ಆಗಿನಿಂದ ಬೆಳೆಗೆರೆಯವರ ರಾಜಕೀಯ ಹೊರತಾದ, ಬರಹಗಳನ್ನು ಓದಲು ಶುರು ಮಾಡಿದೆ. ನಂತರ ಹಾಯ್ ನಿಂದ ಆಲೂರು ಚಂದ್ರಶೇಖರ್, ನಾಗತಿಹಳ್ಳಿ, ಜಯಂತ್ ಕಾಯ್ಕಿಣಿ, ಎಚ್.ಡಿ.ಸುನೀತಾ, ಜಾನಕಿ ಕಾಲಂನ ಜೋಗಿ, ಆರ್. ಟಿ. ವಿಠ್ಠಲಮೂರ್ತಿ ಎಲ್ಲರ ಬರಹಗಳನ್ನು ಓದುವ ಅವಕಾಶವನ್ನು ಕಲ್ಪಿಸಿಕೊಟ್ಟ ಕ್ರೆಡಿಟ್ಟು ಹಾಯ್ ಗೆ. ಲಂಕೇಶರ ತುಂಟಾಟ, ನೀಲು ಪದ್ಯದಂತೆ ಮುಂದೆ ಅವರ ಮರಣ ನಂತರ ಹಾಯ್ ನ “ಕೇಳಿ” ಕಾಲಂ ಕೂಡ ಇಷ್ಟವಾಗತೊಡಗಿತು.

ಆ ಕಾಲಕ್ಕೆ ಅದಾಗಲೇ ಕರ್ಮವೀರದಲ್ಲಿ ನಿಜ ರೌಡಿಗಳ ಬದುಕಿನ ಬರಹಗಳನ್ನು ಬರೆದು ಸಂಚಲನ ಮೂಡಿಸಿದ್ದ ಬೆಳಗೆರೆಯವರ ಪಾಪಿಗಳ ಲೋಕದಲ್ಲಿ, ಸೀರಿಯಲ್ ಕಿಲ್ಲರ್ ರವೀಂದ್ರನಾಥ್, ಹೀಗೆ ಪುಸ್ತಕಗಳಾಗಿದ್ದವು. ರೌಡಿಗಳ ಬದುಕಿನ ಬರಹಗಳನ್ನು ಹಸಿಹಸಿಯಾಗಿ ಮತ್ತು ರಸವತ್ತಾಗಿ ಬರೆದು ಒಂದು ಓದುಗ ವರ್ಗವನ್ನು ಸೃಷ್ಠಿಸಿದ್ದ ಬೆಳಗೆರೆಯವರ ಕ್ರೈಮ್ ಬರಹಗಳು ನನ್ನನ್ನು ಅಷ್ಟಾಗಿ ಆಕರ್ಷಿಸದೇ ಅವರ ಮಾಂಡೋವಿ, ಮಾಟಗಾತಿ, ಹೇಳಿ ಹೋಗು ಕಾರಣ, ಮುಂದೆ ಹಲವಾರು ಪುಸ್ತಕಗಳನ್ನು ನಾನು ಓದಿದೆ. ಜೊತೆಜೊತೆಗೆ ಜಯಂತ್ ಕಾಯ್ಕಿಣಿ, ಆಲೂರು, ನಾಗತಿಹಳ್ಳಿಯಂಥ ಲೇಖಕರ ಬರಹಗಳನ್ನು ಅವರ ಪುಸ್ತಕಗಳನ್ನು ಓದುತ್ತಲೇ ಇತರೆ ಬರಹಗಾರರ ಓದಿಗೂ ನನ್ನನ್ನು ಒಗ್ಗಿಸಿಕೊಂಡದ್ದಕ್ಕೆ ಕಾರಣ ಮತ್ತು ಉದ್ದೇಶವಿಷ್ಟೇ ನನ್ನನ್ನು ನಾನು ತೆರೆದುಕೊಳ್ಳುವುದು ಮತ್ತು ನನ್ನನ್ನು ನಾನು ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು. ಅದನ್ನು ಸಾಧ್ಯವಾಗಿಸಿದ್ದು, ಲಂಕೇಶ್ ಮತ್ತು ನಂತರದಲ್ಲಿ ರವಿ ಬೆಳಗೆರೆ ಎಂದರೆ ತಪ್ಪಿಲ್ಲ.

ರವಿ ಬೆಳಗೆರೆ ಬಳ್ಳಾರಿ ಹತ್ತಿರದ ಹಗರಿ ಹಂತಕರು ಎಂಬ ಲೇಖನ ಸರಣಿ ಬರೆದ ದಿನಗಳಲ್ಲಿ ಬಳ್ಳಾರಿಯಲ್ಲಿ ಅದೆಂಥ ಸಂಚಲನ ಉಂಟಾಗಿತ್ತು ಎನ್ನುವುದು ಸಹಜವೇನಲ್ಲ. ಹಾಗೆ ಬೇರೆ ಬೇರೆ ವಿಷಯಗಳಿಗೆ ಸಂಭಂಧಿಸಿದಂತೆ ವರದಿ ಮಾಡಿ ಸಂಧಿಗ್ಧಗಳನ್ನು ತಂದುಕೊಳ್ಳುವುದು, ಕೋರ್ಟ್ ಗೆ ಅಲೆಯುವುದೆಲ್ಲಾ ಓದುತ್ತಿದ್ದೆ. ಆದರೆ, ಇಷ್ಟೆಲ್ಲದರ ಮಧ್ಯೆ “ಪ್ರಾರ್ಥನಾ” ಎಂಬ ಶಾಲೆ ತೆರೆದರಲ್ಲ? ಅದೊಂದು ಒಳ್ಳೆಯ ಕೆಲಸ. ನಂತರ ಎಂದೂ ಮರೆಯದ ಹಾಡು ಕಾರ್ಯಕ್ರಮ, ಸಿನಿಮಾ, ಸೀರಿಯಲ್ಲು, ರೇಡಿಯೋ ಕಾರ್ಯಕ್ರಮ, ಓ ಮನಸೇ ಪತ್ರಿಕೆ, ಮನಸೇ ನಂಥ ವಾಚನದ ಸಿ.ಡಿ. ಕ್ರೈಂ ಡೈರಿ ಎಷ್ಟೆಲ್ಲಾ ದುಡಿಮೆ ಅವೆಲ್ಲವನ್ನೂ ಅವರು ಒಂದರಿಂದೊಂದು ಅನುಭವಕ್ಕಾಗಿ ಮಾಡಿದರು, ದುಡ್ಡಿಗಾಗಿ ಮಾಡಿದರು, ಅನುಭವ ಇದ್ದ ಕಾರಣಕ್ಕೆ ತನ್ನಂತೆ ಸಣ್ಣ ವಯಸ್ಸಿನ ಹುಡುಗರು ತಪ್ಪು ಮಾಡಬಾರದೆಂದು ಮಾಡಿದರು. ಅದೆಲ್ಲಾ ಸರಿ. ಎಲ್ಲವನ್ನೂ ಅವರು ಬರೆದುಕೊಂಡಿದ್ದಾರೆ ನಾವೂ ಓದಿದ್ದೇವೆ.

ಓದುಗರು ಬರೆಯುವಂತೆ ಪ್ರೇರೇಪಿಸಲೆಂದೇ ಅಂಕಣ ಶುರು ಮಾಡಿದ್ದರು. ಆ ಅಂಕಣದಲ್ಲಿ ನಾನು ಬರೆದ ಆರೆಂಟು ಲೇಖನಗಳೂ ಪ್ರಕಟಗೊಂಡವು. ಒಂದೆರಡು ಬಾರಿ ಕಾರ್ಯಕ್ರಮದಲ್ಲೇ ಭೇಟಿ ಮಾಡಿದ್ದೆನಷ್ಟೇ. ಮತ್ಯಾವತ್ತೂ ಭೇಟಿಯಾಗಲು ಅವಕಾಶ ಸಿಗಲಿಲ್ಲ. ಅವರ ಸಂದರ್ಶನಗಳನ್ನು ನೋಡಿದ್ದೇನೆ. ಅವರ ಸಿಟ್ಟಿನ ಮಾತುಗಳನ್ನೂ ಕೇಳಿದ್ದೇನೆ. ಒಂದು ಕಾಲದ ಆಪ್ತರೊಂದಿಗೇ ಶರಂಪರ ಜಗಳಕ್ಕೆ ಬಿದ್ದು, ಹಠಕ್ಕೆ ಬರೆಯುತ್ತಿದ್ದ ಬರಹಗಳನ್ನೂ ನೋಡಿದ್ದೇವೆ. ಮನುಷ್ಯ ಸಹಜ ಸಂಭಂಧಗಳ ಬಗ್ಗೆ ಅಷ್ಟು ಚೆಂದಗೆ ಬರೆಯುತ್ತಿದ್ದ ಬೆಳಗೆರೆಯವರು ಕೆಲವರೊಂದಿಗೆ ಯಾಕಷ್ಟು ಕಿತ್ತಾಡಿಕೊಂಡರು ಎನ್ನುವುದೇ ಸೋಜಿಗ. ಹಾಯ್ ಶುರುವಾದ ಹೊಸತರಲ್ಲಿ ಜೊತೆಗೆ ಕೆಲಸ ಮಾಡಿದ್ದ ಕೆಲ ವ್ಯಕ್ತಿಗಳೂ ನನ್ನ ಆಪ್ತರಿದ್ದಾರೆ. ಅವರ ಎಲ್ಲಾ ಗುಣಗಳನ್ನೂ ಒಪ್ಪದೇ ಜೊತೆಗಿರಲಾರದೇ ಬಿಟ್ಟು ಬಂದವರೂ ಇದ್ದಾರೆ.

ಬರೆದಂತೆ ಬದುಕುವುದು ಕಷ್ಟ. ಬದುಕಿದಂತೆ ಬರೆಯುವುದೂ ಸಹ. ಆದರೆ ಬದುಕಿದ ಅರವತ್ತೆರಡು ವರ್ಷಗಳಲ್ಲಿ ಕೆಲವಾರು ತಮ್ಮ ಖಾಸಗಿ ಬದುಕಿನ ಘಟನೆಗಳನ್ನು ಸಂಭಂಧಗಳನ್ನು, ಸ್ನೇಹವನ್ನು ಸಿಟ್ಟು ಜಗಳವನ್ನು ಬರೆದುಕೊಂಡಿದ್ದಾರೆ. ಆದರೆ, ಅವರನ್ನು ಎಷ್ಟು ಜನ ಇಷ್ಟಪಡುತ್ತಾರೋ ಅಷ್ಟೇ ಪ್ರಮಾಣದಲ್ಲಿ ದ್ವೇಷಿಸುವವರೂ ಇದ್ದರೆನ್ನುವುದು ಸತ್ಯ. ರಾಜಕೀಯ, ಸಿನಿಮಾ, ಭೂಗತ ಲೋಕ, ರಿಯಲ್ ಎಸ್ಟೇಟ್ ಮಾಫಿಯಾದವರಲ್ಲಿ ಆಪ್ತರೆಷ್ಟು ಶತ್ರುಗಳೆಷ್ಟು ಅವರೇ ಬಲ್ಲರು. ಆದರೆ, ಆ ಎಲ್ಲಾ ವರದಿಗಳನ್ನು ಪಕ್ಕಕ್ಕಿಟ್ಟು ಒಬ್ಬ ಬರಹಗಾರನಾಗಿ, ಕತೆಗಾರನಾಗಿ, ಕಾದಂಬರಿಕಾರನಾಗಿ ಮಾತ್ರ ನಾನು ಬೆಳಗೆರೆ ಅವರನ್ನು ಇಷ್ಟು ಪಟ್ಟಿದ್ದು. ಬಹುಶ: ಓದುಗನಾಗಿ ಮಾತ್ರವೇ ಅವರನ್ನು ಅರಿತ ಯಾರಿಗೇ ಆದರೂ ಅವರು ಇಷ್ಟೇ ಅರ್ಥವಾಗುತ್ತಾರೆಂದು ಭಾವಿಸುತ್ತೇನೆ.

ತೀರಿಹೋಗುವ ಮುನ್ನ ಸಂದರ್ಶನವೊಂದರಲ್ಲಿ ತನ್ನ ಬಯಾಲಜಿಕಲ್ ಫಾದರ್ ಬೀಚಿ ಅಂತ ಮುಕ್ತವಾಗಿ ಹೇಳಿದರಲ್ಲ? ಬಹುಶ: ಅಷ್ಟು ಹೊತ್ತಿಗೆ ಅವರಿಗೆ ಸಿಟ್ಟು, ದ್ವೇಷ, ಹಗೆ ಅನ್ನುವುದು ಸಾಕಾಗಿತ್ತು ಅನ್ನಿಸುತ್ತೆ. ಅವರ ಹಸಿರು ಲಂಗದ ಹುಡುಗಿಯಂತೆ ನಾನು ಓದಿದ ವಯಸ್ಸಿಂದ ಇತ್ತೀಚಿನವರೆಗೂ ಓದಿದವರಲ್ಲಿ ಅವರವರ ಮನಸಲ್ಲಿ ಮಡುಗಟ್ಟಿದ ಹುಡುಗಿಯ ನೆನಪುಗಳನ್ನು ಕಲಕುವಲ್ಲಿ ಅವರ ಬರಹಗಳು ಯಶಸ್ವಿ ಆಗಿದ್ದವು ಅಂದುಕೊಳ್ಳುತ್ತೇನೆ.

ತಂದೆಯಿಲ್ಲದೇ ಬೆಳೆದ ಒಬ್ಬ ಹುಡುಗ ಪ್ರೀತಿಗೆ, ಸಿಗರೇಟಿಗೆ, ಕುಡಿತಕ್ಕೆ ಹಠಕ್ಕೆ, ಯಶಸ್ಸಿಗೆ ಹಂಬಲಿಸಿ ಜಗತ್ತಿಗೆ ತನ್ನ ತಾಕತ್ತನ್ನು ತೋರಿಸಿ “ಎಸ್. ಐ ಆ್ಯಮ್ ಲೈಕ್ ದಿಸ್” ಅನ್ನುವಂತೆ ಬದುಕಿದ ಬೆಳಗೆರೆಯವರು ಸಿಗರೇಟ್, ಕುಡಿತದಿಂದ ದೂರವುಳಿದು ಆರೋಗ್ಯದ ಲಕ್ಷ್ಯ ವಹಿಸಿ ಭಾವುಕತನವೊಂದನ್ನು ಮಾತ್ರ ತಹಬಂದಿಗೆ ಇಟ್ಟುಕೊಂಡಿದ್ದರೆ, ಅವರು ಇನ್ನಷ್ಟು ವರ್ಷಗಳು ಬದುಕಿರುತ್ತಿದ್ದರೋ ಏನೋ. ರವಿ ಬೆಳಗೆರೆ ಅನುವಾದಿಸಿ ಚಲಂ ಪುಸ್ತಕ ಓದಿದವರಿಗೆ ಚೆನ್ನಾಗಿ ನೆನಪಿರುತ್ತದೆ. ಚಲಂ ನನ್ನು ಓದಿದಷ್ಟು ಅನುಕರಿಸುವುದು ಕಷ್ಟ ಎನ್ನವ ಅರ್ಥದ ಸಾಲುಗಳಿವೆ. ಅದರಂತೆ ರವಿ ಬೆಳಗೆರೆಯನ್ನು ಒಬ್ಬ ಓದುಗನಾಗಿ ಇಷ್ಟಪಡಬಹುದು. ಆದರೆ, ವೈಯುಕ್ತಿಕವಾಗಿ ಅವರನ್ನು ಅನುಕರಿಸುವುದು, ಅವರಂತೆ ಸಾರ್ವಜನಿಕವಾಗಿ ಧೈರ್ಯವಾಗಿ ಬದುಕಿದಂತೆ ಬದುಕುವುದೂ ಕಷ್ಟ.

ಪ್ರತಿ ವರ್ಷ ಅವರ ಫೇಸ್ಬುಕ್ ಇನ್ ಬಾಕ್ಸ್ ಗೆ ಜನ್ಮ ದಿನದ ಶುಭಾಶಯ ತಿಳಿಸುತ್ತಿದ್ದೆ, “ ಥ್ಯಾಂಕ್ಸ್ ಸರ್” ಅಂದಷ್ಟೇ ರಿಪ್ಲೈ ಬರುತ್ತಿತ್ತು. ಆದರೆ, ಈ ವರ್ಷದ ಮಾರ್ಚ್ ಹದಿನೈದು ರವಿ ಬೆಳಗೆರೆ ಇಲ್ಲದೇ ಅವರ ಬರ್ತಡೆಗೆ ಶುಭಾಶಯಗಳು. ಆ ಕಡೆಯಿಂದ ನೋ ರಿಪ್ಲೈ……… ಓನ್ಲಿ ಸೈಲೆನ್ಸ್…….

ಪಿ.ಎಸ್. ಅಮರದೀಪ್.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x