ಕರುಣೆ ಇರುವುದು ಕೊಡುವುದರಲ್ಲಿ ಇಲ್ಲ:-
ನಾವು ಬೇರೆಯವರಿಗೆ ತೋರಿಸುವ ಕರುಣೆ ಅವರನ್ನು ಆಶಕ್ತರನ್ನಾಗಿ, ಬಲಹೀನರನ್ನಾಗಿ ಮಾಡಬಾರದು ಅಷ್ಟೇ ಅಲ್ಲ, ನಮ್ಮ ದಯೆ ಅವರಲ್ಲಿ ದುಷ್ಟ ಆಲೋಚನೆಗಳನ್ನು ಹುಟ್ಟುಹಾಕಬಾರದು, ಹಾಗಾದಲ್ಲಿ ಅದಕ್ಕೆ ಸೂಕ್ತ ದಂಡನೆಯನ್ನು ನಾವೇ ಅನುಭವಿಸುತ್ತೇವೆ. ಅದಕ್ಕೊಂದು ಉತ್ತಮ ಉದಾಹರಣೆ ಇಲ್ಲಿದೆ.
ಅರ್ಹತೆಯಿಲ್ಲದೆ ಏನನ್ನು ಪಡೆಯಬಾರದು ಹಾಗೇ ಅರ್ಹತೆಯಿಲ್ಲದವನಿಗೆ ಏನನ್ನು ಕೊಡಲೂಬಾರದು. ಸಾಧುವೊಬ್ಬ ಒಂದು ಗುಹೆಯಲ್ಲಿ ಕುಳಿತುಕೊಂಡು ಬಹಳ ಕಠಿಣವಾದ ತಪಸ್ಸನ್ನಾಚರಿಸುತ್ತಿದ್ದ ಆತ ಸಾಧನೆಯಲ್ಲಿ ಏಕಾಗ್ರತೆಯಿಂದ ತೊಡಗಿಸಿಕೊಂಡಿದ್ದನು. ಒಂದು ದಿನ ಅರಣ್ಯದಲ್ಲಿ ಬೇಟೆಯಾಡುತ್ತಾ ಬಂದ ರಾಜನೊಬ್ಬ ಗುಹೆಯನ್ನು ಕಂಡು ಒಳಹೊಕ್ಕು ತಪಸ್ಸಿನಲ್ಲಿಯೇ ಮುಳುಗಿಹೋಗಿದ್ದ ಸಾಧುವನ್ನು ನೋಡಿ ನಮಸ್ಕರಿಸಿದನು. ಬಹಳ ಬಾಯಾರಿಕೆಯಾದ್ದರಿಂದ ನೀರನ್ನು ಕುಡಿಯಲು ಸುತ್ತಮುತ್ತ ಕಣ್ಣುಹಾಯಿಸಿದಾಗ, ಕಳಪೆಯಾಗಿ ತೋರುವ ಒಂದು ಪಾತ್ರೆಯನ್ನು ಕಂಡು, ಇಂತಹ ಅದ್ಬುತವಾದ ಮಾನವ ಜೀವಿ, ಇಷ್ಟು ಆಳವಾದ ಧ್ಯಾನದಲ್ಲಿ ಮುಳುಗಿರುವವನು, ಇಂತಹ ಕಳಪೆ ಪಾತ್ರೆಯನ್ನೇಕೆ ಬಳಸಬೇಕು? ಎಂದು ರಾಜನು ಯೋಚಿಸಿದನು. ನಂತರ ರಾಜನು ಸೇವಕರನ್ನು ಕರೆದು, ‘ಚಿನ್ನದ ಎರಡು ಅದ್ಭುತ ಪಾತ್ರೆಗಳನ್ನು ಸಾಧುವಿನ ಉಪಯೋಗಕ್ಕಾಗಿ ಇರಿಸಿ’ ಎಂದನು. ಸೇವಕರು ಆ ಕಳಪೆ ಪಾತ್ರೆಯನ್ನು ಬಿಸಾಡಿ ಎರಡು ಚಿನ್ನದ ಪಾತ್ರೆಗಳನ್ನು ಅಲ್ಲಿರಿಸಿದನು. ಕೆಲ ದಿನಗಳ ಬಳಿಕ ಕಣ್ತೆರೆದ ಸಾಧುವು ಕೆಲಸ- ಕಾರ್ಯಗಳಿಗಾಗಿ ತನ್ನ ಪಾತ್ರೆಯನ್ನು ಹುಡುಕಿದನು. ಅವು ಎಲ್ಲೂ ಕಾಣಿಸದೇ ಈ ಎರಡು ಚಿನ್ನದ ಪಾತ್ರೆಗಳು ಕಂಡವು. ಅವು ಅಷ್ಟು ಅನುಕೂಲವಾಗಿರಲಿಲ್ಲ: ತುಂಬಾ ದೊಡ್ಡದಾಗಿ ಅಲಂಕಾರದಿಂದ ಕೂಡಿದ್ದು ಭಾರವಾಗಿದ್ದವು. ಅನ್ಯಮಾರ್ಗವಿಲ್ಲದೆ ಅವುಗಳನ್ನು ಬಳಸಲು ಸಾಧುವು ನಿಶ್ಚಯಿಸಿದನು.
ಒಂದು ದಿನ ಆ ಮಾರ್ಗವಾಗಿ ಕಳ್ಳನೊಬ್ಬನು ಬಂದನು. ಗುಹೆಯೊಳಗೆ ಬಂದಾಕ್ಷಣ ಅವನ ಮೊದಲ ನೋಟ ಆ ಚಿನ್ನದ ಪಾತ್ರೆಗಳ ಮೇಲೆ ಬಿದ್ದಿತು. ಸಾಧುವು ಅವನನ್ನು ಸ್ವಾಗತಿಸಿ , ತನ್ನ ಬಳಿಯಿದ್ದ ಅಲ್ಪ ಭೋಜನವನ್ನು ನೀಡಿದನು. ಆ ಕಳ್ಳ ಊಟ ಮಾಡುತ್ತಿದ್ದರೂ ಅವನ ನೋಟವೆಲ್ಲಾ ಆ ಚಿನ್ನದ ಪಾತ್ರೆಗಳ ಮೇಲೆಯೇ ನೆಟ್ಟಿತ್ತು. ಸಾಧುವು ಧ್ಯಾನಕ್ಕಾಗಿ ಕಣ್ಣುಮುಚ್ಚಿದ ಕೂಡಲೇ , ಆ ಕಳ್ಳ ಒಂದು ಚಿನ್ನದ ಪಾತ್ರೆಯನ್ನು ತೆಗೆದುಕೊಂಡು ಅಲ್ಲಿಂದ ಓಡಿದನು. ಇದನ್ನು ಕಂಡ ಸಾಧುವು ಅವನನ್ನು ಹಿಂಬಾಲಿಸಿಕೊಂಡು ಓಡಿದನು. ಸಾಧುವು ಬೆನ್ನಟ್ಟಿ ಬರುತ್ತಿರುವುದನ್ನು ಕಂಡ ಕಳ್ಳ ಮತ್ತಷ್ಟು ವೇಗವಾಗಿ ಓಡಿದನು. ಆದರೆ ಸಾಧುವಿಗೆ ತನ್ನ ಯೋಗಬಲದ ಮೂಲಕ ಇನ್ನೂ ಹೆಚ್ಚು ವೇಗವಾಗಿ ಓಡಲು ಸಾಧ್ಯವಾಯಿತು. ಕಳ್ಳನು ಪಟ್ಟಣವನ್ನು ಸೇರುವ ಹೊತ್ತಿಗೆ ಸಾಧುವು ಅವನನ್ನು ಹಿಡಿದನು. ಏನೂ ಮಾಡಲು ತೋಚದೆ ಆ ಕಳ್ಳ ಸಾಧುವಿನ ಕಾಲಿನ ಮೇಲೆ ಬಿದ್ದು, ನನ್ನನ್ನು ಕ್ಷಮಿಸಿ ಎಂದನು. ಅವನ ಸುತ್ತಲೂ ಜನರು ನೆರೆದರು, ಅದಕ್ಕೆ ಸಾಧುವು ಇಲ್ಲ, ಇಲ್ಲ ನನ್ನ ಬಳಿ ಮತ್ತೊಂದಿದೆ ಅದನ್ನು ತೆಗೆದುಕೊಂಡು ಹೋಗಲು ನೀನು ಮರೆತಿರುವೆ, ಅದನ್ನು ನಿನಗೆ ನೀಡಲೆಂದೆ ನಾನು ಇಲ್ಲಿಗೆ ಬಂದಿರುವೆ. ಎಂದು ಹೇಳಿ ಗುಹೆಗೆ ಹಿಂದಿರುಗಿದನು. ನಂತರ ತನ್ನ ಹಳೆಯ ಪಾತ್ರೆಗಾಗಿ ಗುಹೆಯೊಳಗೆಲ್ಲಾ ಹುಡುಕಾಡಿದನು. ಈ ರೀತಿ ತನ್ನ ಸುತ್ತಲೂ ಇರುವ ಎಲ್ಲವನ್ನೂ ಬುಡಮೇಲು ಮಾಡುವ ಕ್ರೀಯೆಯಲ್ಲಿ ಕೆಲವು ಪುಟ್ಟ ಇಲಿಮರಿಗಳು ಹೊರಬಿದ್ದವು. ತಾಯಿ ಇಲಿಯು ಹೆದರಿ ಮರಿಗಳನ್ನು ತೊರೆದು ಪರಾರಿಯಾಯಿತು. ಹೀಗೆ ಸಾಧುವು ಐದು ಇಲಿಮರಿಗಳನ್ನು ಪಡೆಯುವಂತಾಯಿತು. ತಾಯಿ ಇಲಿಯು ಭಯಗೊಂಡು ಅಲ್ಲಿಗೆ ಹಿಂದಿರುಗಲೇ ಇಲ್ಲ. ಹೀಗಾಗಿ ಅವನು ತನ್ನ ಬಳಿಯಿದ್ದ ಸ್ವಲ್ಪ ಧಾನ್ಯಗಳನ್ನು ಅವುಗಳಿಗೆ ಆಹಾರವಾಗಿ ನೀಡುತ್ತಿದ್ದನು. ಅವು ನಿಧಾನವಾಗಿ ಬೆಳೆಯತೊಡಗಿದವು.
ಒಂದು ದಿನ ಬೆಕ್ಕೊಂದು ಅಲ್ಲಿಗೆ ಬಂದು ನಾಲ್ಕು ಮರಿಗಳನ್ನು ನುಂಗಿಹಾಕಿತು. ಐದನೆಯದು, ಬುದ್ದಿಯುಳ್ಳದ್ದು: ಮೂಲೆಯಲ್ಲಿ ಅಡಗಿ ತಪ್ಪಿಸಿಕೊಂಡಿತು. ಆ ಒಂದು ಇಲಿಮರಿಯನ್ನು ಸಾಧುವು ಬೆಳೆಸಿ ದೊಡ್ಡದಾಗುವಂತೆ ಮಾಡಿದನು. ಒಂದು ದಿನ ಅದೇ ಬೆಕ್ಕು ಪುನಃ ಆಗಮಿಸಿತು. ಸಾಧುವು ಅದನ್ನು ಓಡಿಸಿದನು. ಆದರೆ ಇಲಿಯು ಬಹಳ ಭಯಗೊಂಡಿತ್ತು. ತನ್ನ ಕರುಣಾಭಾವದ ಕಾರಣ ಸಾಧುವು ನಾನು ಎಲ್ಲಿಯವರೆಗೆ ಈ ಇಲಿಯನ್ನು ರಕ್ಷಿಸಬಲ್ಲೇ? ಬೆಕ್ಕು ಆಗಮಿಸಿದ ಪ್ರತಿಯೊಂದು ಬಾರಿಯೂ ನಾನು ಕಣ್ಣುಗಳನ್ನು ತೆರೆಯಬೇಕಾಗುವುದು. ಧ್ಯಾನದಿಂದ ಹೊರಬರಬೇಕಾಗುವುದು. ಇದು ನಡೆಯದ ಕೆಲಸ’ ಎಂದು ಯೋಚಿಸಿ, ತನ್ನ ಸಾಮಥ್ರ್ಯ, ಸಿದ್ದಿ, ಸಾಧನಾಶಕ್ತಿಯಿಂದ ಆ ಇಲಿಯನ್ನು ಉಗ್ರವಾದ ಬೆಕ್ಕನ್ನಾಗಿ ಮಾರ್ಪಡಿಸಲು ನಿರ್ಧರಿಸಿದನು. ಹೀಗಾಗಿ ಇಲಿಯು ಬೆಕ್ಕಾಯಿತು. ಈಗೊಂದು ಭಯಂಕರವಾದ ಬೆಕ್ಕು ಇರುವ ಕಾರಣ, ಆ ಮತ್ತೊಂದು ಬೆಕ್ಕು ಅಲ್ಲಿಗೆ ಬರುವುದನ್ನು ನಿಲ್ಲಿಸಿತು. ಕೆಲವು ದಿನಗಳ ನಂತರ ಆ ಬೆಕ್ಕನ್ನು ಹುಡುಕಿಕೊಂಡು ಒಂದು ಕಾಡುನಾಯಿ ಅಲ್ಲಿಗೆ ಬಂದಿತು. ಸಾಧುವು ಆ ನಾಯಿಯನ್ನು ಓಡಿಸಿದನು. ಆದರೆ ಅದು ಅಲ್ಲೇ ಸುತ್ತಮುತ್ತ ಬೆಕ್ಕಿನ ಬೇಟೆಯ ಅವಕಾಶಕ್ಕಾಗಿ ಹೊಂಚುಹಾಕುತ್ತಿತ್ತು. ಆಗ ಸಾಧುವು, ಇದು ನಡೆಯದ ಕೆಲಸ ಎಂದು ಯೋಚಿಸಿ, ತನ್ನ ಶಕ್ತಿಗಳನ್ನು ಪ್ರಯೋಗಿಸಿ ಬೆಕ್ಕನ್ನು ನಾಯಿಯನ್ನಾಗಿ ಪರಿವರ್ತಿಸಿದನು. ಆ ನಾಯಿಯು ಕೆಲವು ಸಮಯದವರೆಗೆ ಸುಖದಿಂದ ಇತ್ತು, ಸುತ್ತಮುತ್ತಲೂ ತಿರುಗಾಡುತ್ತಿತ್ತು. ಒಂದು ದಿನ ಅದು ತನ್ನ ಕಾಲುಗಳ ಸಂದಿನಲ್ಲಿ ಬಾಲವನ್ನು ಮುದುರಿಕೊಂಡು ಗುಹೆಯೊಳಗೆ ಓಡುತ್ತಾ ಬಂದಿತು. ಒಂದು ಚಿರತೆಯು ಅದನ್ನು ಅಟ್ಟಿಸಿಕೊಂಡು ಬರುವುದನ್ನು ನೋಡಿದ ಸಾಧುವು , ಚಿರತೆಯನ್ನು ತಡೆದು ನಿಲ್ಲಿಸಿ ಅದನ್ನು ಓಡಿಸಿದನು. ನಂತರ ಆತ ಇದು ಅತಿ ಪ್ರಯಾಸಕರವಾಗಿದೆ. ನಾನು ಧ್ಯಾನಮಾಡಲು ಕುಳಿತಾಗಲೆಲ್ಲಾ ಒಂದು ಇಲಿಯನ್ನೋ ಬೆಕ್ಕನ್ನೋ ಅಥವಾ ನಾಯಿಯನ್ನೋ ಮತ್ತೇನನ್ನೋ ರಕ್ಷಿಸಬೇಕಾಗಿ ಬಂದಿದೆ ಎಂದು ಆಲೋಚಿಸಿದನು. ಆದ್ದರಿಂದ ನಾಯಿಯನ್ನು ಸಿಂಹವಾಗಿ ಪರಿವರ್ತಿಸುವುದೇ ಅತ್ಯುತ್ತಮವಾದದ್ದೆಂದು ಭಾವಿಸಿದನು. ಅವನು ಕಾಡಿನ ರಾಜನಾಗುವನು. ಅಗ ಅರಣ್ಯದಲ್ಲಿ ಸ್ವತಂತ್ರವಾಗಿರಲು ಅವನನ್ನು ನಾನು ಬಿಡಬಹುದು. ಅವನು ಕ್ಷೇಮವಾಗಿರುತ್ತಾನೆ. ನನಗ್ಯಾವ ಸಮಸ್ಯೆಗಳೂ ಇರುವುದಿಲ್ಲ. ಎಂದು ಯೋಚಿಸಿ ಅವನು ನಾಯಿಯನ್ನು ಒಂದು ದೊಡ್ಡ ಸಿಂಹವ್ನನಾಗಿ ಮಾರ್ಪಡಿಸಿದನು.
ಈಗ ಸಿಂಹವು ಕಾಡಿನಲ್ಲಿ ಅಲೆಯಲಾರಂಭಿಸಿತು. ಅದನ್ನು ನೋಡಿ ಎಲ್ಲ ಪ್ರಾಣಿಗಳೂ ಓಡಿಹೋಗುತ್ತಿದ್ದವು. ಅದು ಸಿಂಹದ ಶರೀರವನ್ನು ಪಡೆದಿದ್ದರೂ ಹೃದಯವೆಲ್ಲಾ ಇಲಿಯದೇ ಆಗಿತ್ತು. ಅದಕ್ಕೆ ಆತ್ಮವಿಶ್ವಾಸ ಇಲ್ಲದಂತಾಗಿತ್ತು. ಅವುಗಳಿಗೆ ನಾನು ಕೇವಲ ಇಲಿಯೆಂದು ತಿಳಿದುಬಂದರೆ ಅವು ನನಗೇನು ಮಾಡುವವೋ? ಎಂಬ ಚಿಂತೆಯು ಅದನ್ನು ಸದಾ ಕಾಡುತ್ತಿತ್ತು. ಅನೇಕ ಜನರು ಇದನ್ನು ಅನುಭವಿಸುತ್ತಿರುವುದು ನಿಮಗೆ ಗೊತ್ತಿದೆ. ಈ ಸಮಾಜದಲ್ಲಿ ಈ ಪ್ರಪಂಚದಲ್ಲಿ ಅವರೆಲ್ಲರೂ ಸಿಂಹದಂತೆ ಮೆರೆದರೂ ಆಂತರ್ಯದಲ್ಲಿ ಇಲಿಗಳಾಗಿದ್ದಾರೆ. ಅವರು ತಮ್ಮೊಳಗೆ ತಾವೇ ನಿರಂತರವಾಗಿ ಕಾದಾಡುತ್ತಿದ್ದಾರೆ. ಯಾವುದೇ ವ್ಯಕ್ತಿಯು ತನ್ನ ಕೈ ಮೀರಿದ ಪರಿಸ್ಥಿತಿಯಲ್ಲಿದ್ದಾಗ ಅಭದ್ರತೆ ಮತ್ತು ಭಯದಿಂದ ನರಳುವನು. ಮನಸ್ಸಿನಲ್ಲಿರುವ ಈ ಭಯದ ಕಾರಣ ಅನೇಕ ದುಷ್ಟಯೋಚನೆಗಳು ಉದ್ಭವಿಸುವವು. ಈ ಸಂಗತಿಯು ಜಗತ್ತಿನಲ್ಲಿ ಪ್ರತಿನಿತ್ಯವೂ ನಡೆಯುತ್ತಿದೆ. ಯಾರಿಗಾದರೂ ಅವರ ಬಯಕೆಗೆ, ಸಾಮಥ್ರ್ಯಗಳಿಗೆ ಮತ್ತು ಯೋಗ್ಯತೆಗಳಿಗೆ ಮೀರಿದುದನ್ನೇನಾದರೂ ನೀಡಿದರೆ ಅವರು ತಕ್ಷಣವೇ ಬಹಳ ಹೀನಮನಸ್ಸಿನವರಾಗುತ್ತಾರೆ. ಏಕೆಂದರೆ ಅವರ ಮನಸ್ಸಿನಲ್ಲಿ ಎಲ್ಲೋ ಒಂದೆಡೆ ಸಣ್ಣವರಾಗಿರುತ್ತಾರೆ. ಅವರು ದೊಡ್ಡತನದ ನಾಟಕವಾಡಬೇಕು. ಆಗ ಅವರು ಎಲ್ಲ ರೀತಿಯ ಅಸಂಬದ್ಧ ಆಲೋಚನೆಗಳನ್ನು ಮಾಡುತ್ತಾರೆ.
ಈ ಕತೆಯನ್ನು ಮುಂದುವರಿಸೋಣ.. ಹೀಗೆ ಈ ಸಿಂಹಕ್ಕೆ ಅಭದ್ರತೆಯ ಭಾವನೆ ಕಾಡುತ್ತಿತ್ತು. ಜಗತ್ತಿನ ಕಣ್ಣಿಗೆ ಅದು ಸಿಂಹವಾಗಿತ್ತು. ಎಲ್ಲರೂ ಅದನ್ನು ಕಂಡರೆ ಹೆದರುತ್ತಿದ್ದರು. ಆದರೆ ಆಂತರ್ಯದಲ್ಲಿ ಅದು ಕೇವಲ ಒಂದು ಇಲಿಯಾಗಿತ್ತು. ಆಗ ಅದು, ನಾನು ಇಲಿ ಎಂಬ ವಿಷಯವನ್ನು ಅರಿತಿರುವ ಏಕಮಾತ್ರ ವ್ಯಕ್ತಿಯೆಂದರೆ ಈ ಸಾಧು . ಅವನನ್ನೇ ಮುಗಿಸಿಬಿಟ್ಟರೆ, ನಾನು ಇಲಿ ಎನ್ನುವುದು ಯಾರಿಗೂ ತಿಳಿಯುವುದಿಲ್ಲ. ಆಗ ನಾನು ನಿಜವಾದ ಸಿಂಹವಾಗಿಯೇ ಇರುವೆನು. ಎಂದು ಯೋಚಿಸಿತು. ಈ ಅಭಿಲಾಷೆಯಿಂದ ಅದು ಗುಹೆಯನ್ನು ಪ್ರವೇಶಿಸಿತು. ಸಾಧುವು ಆಗ ಧ್ಯಾನ ಮಗ್ನನಾಗಿ ಕುಳಿತಿದ್ದನು. ಸಿಂಹವು ನಿಧಾನವಾಗಿ ಅವನನ್ನು ಸಮೀಪಿಸಿತು. ಏಕೆಂದರೆ, ಸಾಧುವನ್ನು ಮುಗಿಸಿದರೆ, ಜಗತ್ತಿನಲ್ಲಿ ಯಾರಿಗೂ ಅದು ಇಲಿಯೆಂದು ಗೊತ್ತಾಗುವುದಿಲ್ಲ. ಅದು ಸಾಧುವನ್ನು ಸಮೀಪಿಸುತ್ತಿದ್ದಂತೆಯೇ ಅವನಿಗೆ ಅದರ ಕಪಟತನದ ಅರಿವಾಯಿತು. ಸಾಧುವು ಸಿಂಹವನ್ನು ನೋಡುತ್ತಾ, ಇಲಿಯನ್ನು ಸಿಂಹವಾಗಿ ನಾನು ಪರಿವರ್ತಿಸಿದ್ದು ತಪ್ಪಾಯಿತು, ಎಂದು ಹೇಳುತ್ತಾ ಸಿಂಹವನ್ನು ಪುನಃ ಇಲಿಯನ್ನಾಗಿ ಪರಿವರ್ತಿಸಿ ಇಲ್ಲಿಂದ ನಡೆಯಾಚೆಗೆ ನಿನ್ನ ಜೀವವನ್ನು ನೀನೇ ಕಾಪಾಡಿಕೋ ಎಂದನು.
ಒಂದು ಇಲಿಯನ್ನು ಬೆಕ್ಕು ತಿನ್ನುವುದು, ಬೆಕ್ಕನ್ನು ನಾಯಿ ತಿನ್ನುವುದು, ದೊಡ್ಡ ಪ್ರಾಣಿ ಸಣ್ಣ ಪ್ರಾಣಿಯನ್ನು ತಿನ್ನುವುದು ಸ್ವಾಭಾವಿಕ , ಕ್ರಮಬದ್ಧವಾಗಿ ಒಂದು ಹಂತದವರೆಗೆ ಬೆಳೆಯದೆ ಇರುವವರಿಗೆ ಆ ಹಂತದ ಸ್ಥಾನಮಾನ ನೀಡಿದಾಗ, ಅವರು ತಾವು ನರಳುವುದಷ್ಟೇ ಅಲ್ಲದೇ ಇತರರಿಗೂ ಸಂಕಟವನ್ನುಂಟು ಮಾಡುವರು. ಆದ್ದರಿಂದಲೇ , ನಿಜವಾದ ಕರುಣೆ ಇರುವುದು ಕೊಡುವುದರಲ್ಲಿ ಅಲ್ಲ: ಅಗತ್ಯವಾದುದನ್ನು ಮಾಡುವುದೇ ಆಗಿದೆ.
“ಅಂತರಂಗದ ಭಯವನ್ನು ಕಿತ್ತೊಗೆದರೆ ದುಷ್ಟ ಯೋಚನೆಗಳು ಇನ್ನಿಲ್ಲವಾಗಿ ಸಾಧನಾಪಥದೆಡೆಗೆ ಹೆಜ್ಜೆಹಾಕುವ ಹುಮ್ಮಸ್ಸು ಬರುತ್ತದೆ.”
ದಯೆ, ಪ್ರೀತಿ, ಕರುಣೆ, ಸಹೋದರತೆ, ಮಾನವೀಯತೆಯನ್ನು ಬಿಟ್ಟು ಧರ್ಮ ಎಂಬುದಿಲ್ಲ ಎನ್ನುವ ಮಾತು ಸೂರ್ಯನಷ್ಟೇ ಸತ್ಯವಾಗಿದ್ದರೂ ಮತ ಧರ್ಮಗಳ ಹೆಸರಿನಲ್ಲಿ ನಡೆದಷ್ಟು ಹಿಂಸಾಚಾರ ಬೇರೆ ಯಾವುದಕ್ಕೂ ನಡೆದಿಲ್ಲ ಎಂದರೆ ತಪ್ಪಾಗದು. ಧರ್ಮ-ಧರ್ಮಗಳ ನಡುವೆ ನಡೆದ ಸಂಘರ್ಷದಲ್ಲಿ ಹರಿದು ಹೋದ ಮಾನವ ರಕ್ತದಿಂದ ಇತಿಹಾಸದ ಅದೆಷ್ಟೋ ಪುಟಗಳು ಕೆಂಪಾಗಿವೆ. ಧರ್ಮಕ್ಕಾಗಿ ಖಡ್ಗವನ್ನು ಎತ್ತುವುದರಲ್ಲಿ ರಾಜಕಾರಣವಿದೆ.ಸ್ವಧರ್ಮಕ್ಕೆ ಅನ್ಯ ಧರ್ಮದವರಿಂದ ಅಪಾಯ ಬಂದಿದೆ ಎಂದು ಗುಲ್ಲೆಬ್ಬಿಸಿ ,ಪ್ರಚೋದಿಸಿ ಇನ್ನೊಂದು ಧರ್ಮದ ಅಮಾಯಕ ಅನುಯಾಯಿಗಳ ಮೇಲೆ ದಾಳಿ ಮಾಡುವ ಪ್ರವೃತ್ತಿಯ ಹಿಂದೆ ಸ್ಪಷ್ಟವಾದ ಪ್ರಭುತ್ವಾಧಿಕಾರವನ್ನು ಗ್ರಹಣ ಮಾಡುವ ಉದ್ದೇಶ ಅಡಗಿರುತ್ತದೆ. ಸಧ್ಯದ ದೈನಂದಿನ ವಿದ್ಯಮಾನಗಳಲ್ಲಿ ರಕ್ಕಸ ಪ್ರವೃತ್ತಿಯ ಅತಿಕ್ರಮಣಕಾರಿ ಪ್ರಯತ್ನಗಳು ಕಂಡುಬರುತ್ತಿವೆ.
ನಿಜವಾದ ಕರುಣೆ:-
ನಿಜವಾದ ಒಳಿತು ಯಾವುದು ಎಂಬುದು ನಮಗೆ ತಿಳಿದಿಲ್ಲ. ಉದಾಹರಣೆಗೆ ಒಬ್ಬ ರೋಗಿಗೆ ವೈದ್ಯರು ಉಪವಾಸವಿರಬೇಕೆಂದು ಹೇಳಿರುತ್ತಾರೆ. ನಾವು ರೋಗಿಯ ಮೇಲಿನ ಕನಿಕರದಿಂದ “ ಅಯ್ಯೋ ನೀನು ಮೂರು ದಿನದಿಂದ ಉಪವಾಸವಿರುವೇ ಈ ಆಹಾರವನ್ನು ತೆಗೆದುಕೋ” ಎಂದು ಹೇಳಿ ಅವನಿಗೆ ವೈದ್ಯರ ಅನುಮತಿಯಿಲ್ಲದೇ ಆಹಾರವನ್ನು ಕೊಟ್ಟರೆ ಅದು ಅವನಿಗೆ ಕರುಣೆ ತೋರಿದಂತೆ ಆಗುವುದಿಲ್ಲ. ಬದಲಿಗೆ ಅವನ ಕಾಯಿಲೆ ಇನ್ನೂ ಹೆಚ್ಚಾಗುತ್ತದೆ ಮತ್ತು ಅದಕ್ಕೆ ಆಹಾರ ನೀಡಿದವರೇ ಕಾರಣರಾಗುತ್ತಾರೆ. ಇದೇ ರೀತಿಯಲ್ಲಿ ತನ್ನ ಹಿಂದಿನ ಕರ್ಮಗಳ ಅನುಸಾರವಾಗಿ ಉಪವಾಸವಿರುವ ವ್ಯಕ್ತಿಗೆ ಆಹಾರ ನೀಡುವುದು ಪ್ರಕೃತಿಯ ನಿಯಮದಂತೆ ಅಪರಾಧವಾಗುತ್ತದೆ. ಆದ್ದರಿಂದ ನಿಜವಾದ ಕರುಣೆ ಯಾವುದೆಂದು ತಿಳಿದುಕೊಳ್ಳಬೇಕು. ತಸ್ಯೇವ ಹೇತೋಃ ಪ್ರಯತೇತ ಕೋವಿದೊ-ಆತ್ಮ ಸಾಕ್ಷಾತ್ಕಾರವನ್ನು ನೀಡುವುದೊಂದೆ ನಿಜವಾದ ಕ್ಷೇಮಾಭೀವೃದ್ಧಿಯ ಕೆಲಸವಾಗಿದೆ. ಉಳಿದೆಲ್ಲವೂ ಮನುಷ್ಯನನ್ನು ಒಂದಲ್ಲ ಒಂದು ಕಷ್ಟಕ್ಕೆ ಸಿಲುಕಿಸುತ್ತಿರುತ್ತವೆ. ನಮ್ಮ ಯೋಚನೆಗಳು ಸಹ ಅಸಮಂಜಸವಾಗಿವೆ. ಮನುಷ್ಯನು ಉಪವಾಸವಿದ್ದರೆ ಅವನಿಗೆ ಆಹಾರ ನೀಡುತ್ತೇವೆ ಆದರೆ ಪ್ರಾಣಿಗಳನ್ನು ವಧಾಗಾರದಲ್ಲಿ ಯಾವುದೇ ಕರುಣೆಯಿಲ್ಲದೆ ಕೊಲ್ಲುತ್ತೇವೆ. ನಮಗೆ ಪ್ರಾಣಿ ದೇಹದಲ್ಲಿರುವ ಆತ್ಮದ ಬಗ್ಗೆ ಯಾವುದೇ ಕರುಣೆಯಿಲ್ಲ ಮತ್ತು ಅದನ್ನು ಸಮರ್ಥನೆ ಮಾಡಿಕೊಳ್ಳುವ ಸಲುವಾಗಿ ಪ್ರಾಣಿಗಳಿಗೆ ಆತ್ಮವಿಲ್ಲವೆಂಬ ಸಿದ್ಧಾಂತವನ್ನು ಸೃಷ್ಟಿಸಿದ್ದೇವೆ. ಆದರೆ ಪ್ರಾಣಿಗಳಿಗೂ ಆತ್ಮವಿದೆ ಎಂಬುದು ಸತ್ಯ ಸಂಗತಿ. ಎಲ್ಲಾ ಜೀವಿಗಳಲ್ಲಿಯೂ ಆತ್ಮವಿದೆ ಎಂದ ಮೇಲೆ ನಾವು ಕೇವಲ ಮನುಷ್ಯನ ಕ್ಷೇಮಾಭೀವೃದ್ಧಿಗಾಗಿ ಮಾತ್ರ ಏಕೆ ಶ್ರಮಿಸಬೇಕು? ಎಲ್ಲಾ ಜೀವಿಗಳನ್ನು ಸಮಾನವಾಗಿ ನೋಡುವುದೇ ನಿಜವಾದ ಕರುಣೆ.
ಅಗತ್ಯವಿಲ್ಲದ ಕರುಣೆಗೆ ಮುಖ್ಯ ಕಾರಣ ಏನೆಂದರೆ ನಮ್ಮ ಅಹಂ. ನಾವು ಈ ಪ್ರಪಂಚದಲ್ಲಿಯೇ ಅತ್ಯಂತ ಕರುಣಾಮಯಿಗಳಾಗಲು ಇಷ್ಟ ಪಡುತ್ತೇವೆ. ಯಾರಿಗೆ ಎಲ್ಲೇ ಆಗಲಿ, ಏನಾದರೂ ಬೇಕಿದ್ದಲ್ಲಿ ನಾವು ಸಹಾಯ ಮಾಡಲು ತೊಡಗುವೆವು. ಅದು ಯಾವುದೇ ತಿಳುವಳಿಕೆ , ವಿವೇಕ ಅಥವಾ ಅರಿವಿನಿಂದ ಉಂಟಾದುದಲ್ಲ. ಅದು ತಾನೇ ಶ್ರೇಷ್ಠ, ತಾನೇ ಹೆಚ್ಚು ಎಂದು ಕರೆಸಿಕೊಳ್ಳುವ ಬಯಕೆಯಿಂದ ಬರುತ್ತದೆ.
ನಿಜವಾದ ಕರುಣೆ ನಮಗೆ ಯಾವುದೇ ವೈಯಕ್ತಿಕವಾದ ಆದ್ಯತೆಗಳಿಲ್ಲದೆ ಕೇವಲ ಅಗತ್ಯವಾದುದನ್ನು ಮಾತ್ರ ಮಾಡುವುದಾಗಿದೆ. ಅಧಿಕ ಪ್ರಮಾಣದ ಭಾವೋದ್ವೇಗಕ್ಕೆ ಒಳಪಡಿಸಿಕೊಂಡು ಯಾರಿಗೋ ನೆರವಾಗಲು ಮುಂದಾಗುವುದು ಕರುಣೆ ಅಥವಾ ದಯೆ ಎನಿಸಿಕೊಳ್ಳುವುದಿಲ್ಲ. ಅದು ಕೇವಲ ನಮ್ಮ ಅಹಂನ್ನು ತೃಪ್ತಿ ಪಡಿಸುವ ಕುಟಿಲ ಮಾರ್ಗ . ನಮ್ಮ ಸ್ವಂತದ್ದೂ ಏನೂ ಇಲ್ಲದಿದ್ದಲ್ಲಿ ಮಾತ್ರ ನಿಜವಾದ ಕರುಣೆಯು ಸಾಧ್ಯ.
ಜೀವನದಲ್ಲಿ ನಮ್ಮ ಬೆಳವಣಿಗೆ ಒಂದು ನಿರ್ದಿಷ್ಟ ಹಂತ ತಲುಪಿದಾಗ ಬಯಸಿದುದೆಲ್ಲಾ ನಮಗೆ ತಾನಾಗಿಯೇ ದೊರಕುತ್ತದೆ. ಆದರೆ ಅದಕ್ಕೂ ಮುಂಚೆ ಅರ್ಹತೆಯಿಲ್ಲದೆ ಪಡೆದುಕೊಂಡರೆ ಮಹತ್ತಾದ ವರವೂ ಕೂಡಾ ಮಹಾ ಶಾಪವಾಗಬಲ್ಲುದು. ಜೀವನದ ಸಮೃದ್ಧತೆಯನ್ನು ಸ್ವಾಭಾವಿಕವಾಗಿ ಸ್ವೀಕರಿಸುವಂತಹ ಪಕ್ವತೆಯನ್ನು ಇತರರಿಗೆ ನೀಡುವ ಬದಲು ಅಪಕ್ವವಾದ ವ್ಯಕ್ತಿಗೆ ಏನನ್ನಾದರೂ ನೀಡಿದರೆ ಅದು ಅವನಿಗೆ ಹೊರಲಾಗದ ಹೊರೆಯಾಗುತ್ತದೆ. ಇದರಿಂದ ಅವನ ಜೀವನವೂ ಹಾಳಾಗಬಹುದು.
ನಾವು ವ್ಯಕ್ತಿಯ ಪರಮೋತ್ಕೃಷ್ಟ ಒಳಿತನ್ನು ಬಯಸುವದಾದರೆ ಅವನು ಉನ್ನತ ಸಾಧನೆಯತ್ತ ಕ್ರಮಬದ್ಧವಾಗಿ ಬೆಳೆಯುವ ಕಠಿಣ ಪರಿಶ್ರಮದ ಪ್ರಕ್ರಿಯೆಯಲ್ಲಿ ತೊಡಗಲು ಅನುವು ಮಾಡಿ ಕೊಡಬೇಕು. ಆಗ ಜೀವನದ ಉನ್ನತ ಆಯಾಮಗಳು ತಂತಾನೆ ಸಂಭವಿಸುತ್ತದೆ. ಏಕೆಂದರೆ ಆಗ ಅವನು ಅದಕ್ಕೆ ಅರ್ಹನಾಗಿರುತ್ತಾನೆ. ನಾವು ಇರುವೆಗೆ ಒಂದು ಟನ್ ಚಿನ್ನ ನೀಡಿದರೆ ಅದು ಒಳಿತು ಮಾಡಿದಂತಾಗುವುದೇನು. ನಾವು ಕೊಟ್ಟ ಚಿನ್ನ ಆ ಇರುವೆಯನ್ನು ಹೊಸಕಿ ಹಾಕುವುದೇ ಹೊರತು ಅದನ್ನು ಶ್ರೀಮಂತಗೊಳಿಸುವುದಿಲ್ಲ..
ನಾವು ಏನನ್ನು ನೀಡುವೆವೊ , ಯಾವ ರೀತಿಯಲ್ಲಿ ನೀಡುವೆವೋ ಎಂಬುದು ಬಹು ಮುಖ್ಯ ,
ಕರುಣೆ, ಕಾಳಜಿಯ ಪ್ರತೀಕ:-
ಕರುಣೆಯು ಪವಾಡಗಳನ್ನು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಕರುಣೆ ಎಂಬುದು ಕಣ್ಮರೆಯಾಗಿ ಬಿಟ್ಟಿದೆ. ಅದಕ್ಕೆ ಆಧುನಿಕ ಜೀವನದ ಒತ್ತಡವಿರಬಹುದು ಅಥವಾ ವೈಯಕ್ತಿಕ ಕಾರಣಗಳು ಇರಬಹುದು. ಕರುಣೆ ತೋರಿಸಲು ಕಾಸು ಚೆಲ್ಲಬೇಕಾಗಿಲ್ಲ. ಇದು ಉಚಿತ, ಈ ಉಚಿತವಾಗಿ ದೊರೆಯುವ ಕರುಣೆಯನ್ನು ಮತ್ತೊಬ್ಬರ ಮೇಲೆ ತೋರಿಸಿ. ಕರುಣೆಯು ಒಬ್ಬರ ಮೇಲಿನ ಕಾಳಜಿಯ ಪ್ರತೀಕ . ಪ್ರಸ್ತುತ ದಿನಗಳಲ್ಲಿ ಮಾನವನು ಸೌಹಾರ್ದಯುತ ಜೀವನ ನಡೆಸಲು ಪ್ರೀತಿ,ಕರುಣೆ ದಯೆ ಮತ್ತು ಸದ್ಭಾವನೆಗಳು ಅವಶ್ಯವಾಗಿವೆ.
ಇಂದು ಪಶು ಪಕ್ಷಿಗಳಿಗಿರುವ ಕರುಣೆ , ಮಾನವೀಯತೆ ಬುದ್ಧಿವಂತ ಪ್ರಾಣಿ ಎನಿಸಿಕೊಂಡಿರುವ ಮನುಷ್ಯನಿಗೆ ಇಲ್ಲವಾಗಿದೆ. ಇಂದು ಕೆಲ ಸ್ಥಾಪಿತ ಹಿತಾಸಕ್ತಿಗಳು ಧರ್ಮದ ಹೆಸರಿನಲ್ಲಿ ಕುಕೃಥ್ಯವೆಸಗಿ ಹಿಂಸೆಯನ್ನು ಪರಿಚಯಿಸುತ್ತಿದ್ದು ಅಂತವರಿಗೆ ದಯಾಪರ ನಿಲುವುಗಳನ್ನು ಪ್ರಚುರ ಪಡಿಸಬೇಕಾದ ಅನಿವಾರ್ಯತೆ ಇದೆ. ಪ್ರಸ್ತುತ ಪರಿಸ್ಥಿತಿಯನ್ನು ನಿಭಾಯಿಸಲು ಅಸಮರ್ಥರಾಗಿ ಕಾರಣಗಳ ಹಿಂದೆ ಗಿರಕಿ ಹೊಡೆಯುವ ಪ್ರವೃತ್ತಿ ಬಿಟ್ಟು ಪರಿಹಾರಗಳ ಸುತ್ತ ಸುತ್ತೋಣ. ನೊಂದ ಜೀವಗಳ ದುಃಖ ಕೇಳಿ ಸಮಾಧಾನಿಸೋಣ.
ಜಗತ್ತಿನ ಎಲ್ಲ ಜೀವಿಗಳೂ ಹಿಂಸೆಗೆ ಕಂಪಿಸುತ್ತವೆ, ಮರಣಕ್ಕೆ ಹೆದರುತ್ತವೆ, ಎಲ್ಲರಿಗೂ ಜೀವ ಪ್ರೀಯವಾಗಿರುತ್ತದೆ, ಕಾರಣ ನನ್ನಂತೆ ಪರರು ಎಂದು ಭಾವಿಸಿ ವ್ಯಕ್ತಿ ಯಾವ ಜೀವಿಯನ್ನು ಕೊಲ್ಲದಿರಲಿ ಹಾಗೂ ಕೊಲ್ಲಿಸದಿರಲಿ. ಯಾರು ಯಾರನ್ನು ವಂಚಿಸದೇ, ಕೀಳಾಗಿ ಕಾಣದಿರಲಿ, ಕೋಪದಿಂದಾಗಲಿ, ದ್ವೇಷದಿಂದಾಗಲಿ, ಪರರಿಗೆ ಅಹಿತವನ್ನು ಬಯಸದಿರಲಿ, ಒಬ್ಬ ತಾಯಿ ಹೇಗೆ ತನ್ನ ಸಂತಾನವನ್ನು ತನ್ನ ಜೀವವನ್ನೇ ಲೆಕ್ಕಿಸದೇ ರಕ್ಷಿಸುವಳೋ ಅದೇ ರೀತಿಯಾದ ಅಸೀಮಾ ಹೃದಯದ ರಕ್ಷಣೆಯನ್ನು ಎಲ್ಲಾ ಜೀವಿಗಳ ಬಗೆಗೂ ಹೊಂದುವಂತಾಗಲಿ, ಕ್ಷಮೆಯಿಂದ, ಸಹನೆಯಿಂದ, ಅಹಿಂಸೆಯಿಂದ, ಮೈತ್ರಿಯಿಂದ ಮತ್ತು ಕರುಣೆಯಿಂದ ವ್ಯಕ್ತಿ ತನ್ನನ್ನು ತಾನು ರಕ್ಷಿಸುತ್ತಾ ಪರರನ್ನು ರಕ್ಷಿಸುವಂತಾಗಲಿ.
ರಸಧಾರೆ:-
ಪ್ರತಿಯೊಬ್ಬರೂ ಪ್ರತಿ ಜೀವಿಗಳ ಮೇಲೂ ದಯೆ ಹೊಂದಿರಬೇಕು, ಕರುಣೆ ತೋರಬೇಕು ನಿಜ. ಆದರೆ ಬೇರೆಯವರಿಂದ ನಾವು ಕರುಣೆ ಪಡೆದುಕೊಳ್ಳುವಾಗಲೂ ಯೋಚಿಸಬೇಕಾಗುತ್ತದೆ. ಬೇರೆಯವರ ಕನಿಕರದ ಬೆನ್ನು ಬಿದ್ದು ನಮ್ಮತನವನ್ನು ಮರೆಯಬಾರದು ಎಂಬ ಮಾತನ್ನು ಡಿ.ವಿ.ಜಿ ಯವರು ಎಷ್ಟು ಸುಂದರವಾಗಿ ಈ ರಸಧಾರೆಯಲ್ಲಿ ವ್ಯಕ್ತಪಡಿಸಿದ್ದಾರೆ.
ಅಷ್ಟದಿಗ್ಗಜವೇ ನೀನ್? ಆದಿಶೇಷನೆ ನೀನು?
ಕಷ್ಟ ಭಾರವಿದೆಂದು ನಿಟ್ಟುಸಿರ ಬಿಡುವೆ
ನಿಷ್ಟುರದ ನಿನ್ನ ಕನಿಕರ ಜಗಕೆ ಬೇಕಿಲ್ಲ
ಎಷ್ಟಾದರಷ್ಟೇ ಸರಿ- ಮಂಕುತಿಮ್ಮ|
ಬದುಕಿನ ಬವಣೆಯನ್ನು ಪಡುವಾಗ “ ಅಯ್ಯೋ ಇದು ಕಷ್ಟ ಮತ್ತು ಭಾರ “ ಎಂದು ನಿಟ್ಟುಸಿರು ಬಿಡುವೆಯಲ್ಲಾ, ನೀನೇನು ಎಂಟು ದಿಕ್ಕುಗಳನ್ನು ಹೊತ್ತ ಆನೆಗಳಷ್ಟು ಭಾರವನ್ನೂ ಹೊತ್ತಿಲ್ಲ ಅಥವಾ ಆ ಆನೆಗಳನ್ನು ಹೊತ್ತ ಆದಿಶೇಷನಷ್ಟು ಭಾರವನ್ನೂ ಹೊತ್ತಿಲ್ಲªಲ್ಲ. ಸುಮ್ಮನೆ “ ನಾನು ಬಹಳ ಕಷ್ಟ ಪಡುತ್ತಿದ್ದೇನೆ” ಎನ್ನುತ್ತಾ ಅನ್ಯರ ಅನುಕಂಪವನ್ನು ಆಕರ್ಷಿಸುವ ನಿನ್ನನ್ನು ಯಾರೂ ಈ ಜಗತ್ತಿನಲ್ಲಿ ಗಮನಿಸುವುದಿಲ್ಲ. ನಿನಗೆ ಎಷ್ಟು ಹೊರಲಾಗುವುದೋ ಅಷ್ಟು ಹೊತ್ತುಕೋ ಸುಮ್ಮನೆ ಅಲವತ್ತುಕೊಳ್ಳಬೇಡ ಎಂದು ಕಿವಿಮಾತನ್ನು ಹೇಳುತ್ತಾರೆ. ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
ನಮ್ಮ ಜೀವನದಲ್ಲಿ ಸಾಮಾನ್ಯವಾಗಿ ನಾವು ನಮ್ಮ ಶಕ್ತಿ ಸಾಮಥ್ರ್ಯವನ್ನು ಮೀರಿ ಸಾಧಿಸುವುದಕ್ಕೆ ಪ್ರಯತ್ನಿಸುತ್ತೇವೆ. ಆಕಾಶಕ್ಕೆ ಏಣಿ ಹಾಕುವ ಪ್ರಯತ್ನ ನಮ್ಮದು. ಸಾಧ್ಯಾಸಾಧ್ಯತೆಗಳ ವಿವೇಚನೆಯಿಲ್ಲದೆ ದಾಪುಗಾಲು ಹಾಕುವ ಹುಂಬತನ ನಮ್ಮದು. ಆದರೆ ನಮ್ಮ ಸಾಮಥ್ರ್ಯದ ಸ್ವರೂಪ ಗೊತ್ತಿರುವುದಿಲ್ಲ.ನಮ್ಮ ಸಾಮಥ್ರ್ಯಕ್ಕೆ ಮೀರಿದ ಪ್ರಯತ್ನವನ್ನು ನಾವು ಮಾಡಿದಾಗ ಸಾಮಾನ್ಯವಾಗಿ ನಾವು ಎಡುವುತ್ತೇವೆ ಮತ್ತು ಸೋಲುತ್ತೇವೆ. ಆ ದಾರಿಯಲ್ಲಿ ಬರುವ ಬವಣೆಗಳನ್ನು ಭರಿಸಲು ನಮಗೆ ಶಕ್ತಿಯಿರುವುದಿಲ್ಲ. ಎಡವಿದ್ದು ಮತ್ತು ಸೋತಿದ್ದು ಅರಿವಾಗುತ್ತದೆ. ಆದರೆ ಅದರ ಕಾರಣವನ್ನು ನಾವು ಅರಿಯಲಾಗುವುದಿಲ್ಲ ನಾವು ನಮ್ಮ ವಿಧಿಯನ್ನೋ ಅಥವಾ ಅನ್ಯರನ್ನೋ ದೂಷಿಸುತ್ತಾ ಸಮಾಧಾನಪಟ್ಟುಕೊಳ್ಳುವ ಪ್ರಯತ್ನವನ್ನು ಮಾಡುತ್ತೇವೆ. ನಮ್ಮ ಸಮಸ್ಯೆಗಳಿಗೆ ನಾವೇ ಕಾರಣವೆಂದು ನಮಗೆ ಅನ್ನಿಸುವುದೇ ಇಲ್ಲ.
“ಯಾರಾದರೂ ನಮ್ಮ ಸಹಾಯಕ್ಕೆ ಬರಬಾರದೇ? ನೋಡಿ ನಮ್ಮವರು ಎಲ್ಲರೂ ಎಷ್ಟು ಆನಂದವಾಗಿದ್ದಾರೆ. ಬಿದ್ದ ನಮ್ಮನ್ನು ಮೇಲೆತ್ತಲು ಯಾರಾದರೂ ಬರಬಾರದೇ? ಎಂದು ಎಲ್ಲರಿಂದ ನಾವು ಕನಿಕರ ಅನುಕಂಪವನ್ನು ಅಪೇಕ್ಷಿಸುತ್ತೇವೆ. ಆದರೆ ಜಗತ್ತಿನಲ್ಲಿರುವ ಎಲ್ಲರಿಗೂ ಅವರವರದೇ ಕಷ್ಟಗಳು ಸಮಸ್ಯೆಗಳು ಇರುವಾಗ ನಮ್ಮನ್ನು ನೋಡಲು ಯಾರಿಗೆ ತಾನೇ ಸಮಯವಿರುತ್ತದೆ. ನಮ್ಮ ದೀನ ಸ್ಥಿತಿಯನ್ನು ತೋರಿ ಅನ್ಯರಿಂದ ಅನುಕಂಪದ ಅಪೇಕ್ಷೆಯನ್ನು ಬಿಟ್ಟು ಮಾನ್ಯ ಗುಂಡಪ್ಪನವರು “ಎಷ್ಟಾದರಷ್ಟೆ ಸರಿ” ಎನ್ನುವಂತೆ , ನಾವು ಯಾವುದೇ ಕಾರ್ಯವನ್ನು ಕೈಗೆತ್ತಿಕೊಳ್ಳುವಾಗ, ಆ ಕಾರ್ಯದ ಸಂಪೂರ್ಣ ಪರಿಚಯ ಮಾಡಿಕೊಳ್ಳಬೇಕು ಮತ್ತು ನಮ್ಮ ಸಾಮಥ್ರ್ಯವನ್ನು ಆ ಕಾರ್ಯದ ವ್ಯಾಪ್ತಿಯೊಂದಿಗೆ ತುಲನೆ ಮಾಡಿಕೊಳ್ಳಬೇಕು. ನಮ್ಮ ಸಾಮಥ್ರ್ಯಕ್ಕನುಗುಣವಾಗಿ ಮುಂದಕ್ಕೆ ಸರಿದರೆ” ಕಾರ್ಯವೂ ಸಂಪೂರ್ಣವಾಗುತ್ತದೆ. ಸಫಲತೆಯೂ ಸಿಗುತ್ತದೆ.ಹಾಗಲ್ಲದೆ ಹುಂಬತನದಿಂದ ಕೈಗೆತ್ತಿಕೊಂಡ ಕಾರ್ಯದಲ್ಲಿ ಸೋತರೆ , ಖಿನ್ನನಾಗದೇ, ಅನ್ಯರಿಂದ ಕನಿಕರವನ್ನು ಅಪೇಕ್ಷಿಸದೆ ಬಂದ ಕಷ್ಟವನ್ನು ಅನುಭವಿಸಬೇಕು ಮತ್ತು ಆ ಸ್ಥಿತಿಯಿಂದ ಹೊರಬರಲು ಪ್ರಾಮಾಣಿಕ ಪ್ರಯತ್ನ ಪಟ್ಟರೆ ಒಂದಲ್ಲ ಒಂದು ದಿನ ನಮ್ಮ ದೀನ ಸ್ಥಿತಿಯ ಸಂಕೋಲೆಯಿಂದ ಹೊರಬರಬಹುದು. ಆಗ ನಾವು ಅನುಭವಿಗಳಾಗಿರುತ್ತೇವೆ. ಜ್ಞಾನಿಗಳಾಗಿರುತ್ತೇವೆ. ಮುಂದಿನ ನಮ್ಮ ಪ್ರಯತ್ನಗಳಲ್ಲಿ ಜಾಗರೂಕರಾಗಿರುತ್ತೇವೆ. ನಮ್ಮ ಜೀವನದ ಬಗ್ಗೆ ಸಂತೋಷ, ಕೆಲಸದ ಬಗ್ಗೆ ಗಾಢಾನುರಾಗ ಹಾಗೂ ಪರರ ಬಗ್ಗೆ ಕರುಣೆ ಇರಬೇಕು. ಕಷ್ಟ ಅಂತ ಬಂದರೆ ಕರುಣೆ ತೋರಬೇಕು, ಇಷ್ಟ ಅಂತ ಬಂದರೆ ಪ್ರೀತಿ ನೀಡಬೇಕು, ನಮ್ಮ ನಂಬಿ ಬಂದವರಿಗೆ ಉಸಿರು ಇರುವ ತನಕ ಕೈ ಹಿಡಿದಿರಬೇಕು.
“ಕಷ್ಟ ಪಡುವವರನ್ನು ಕಂಡರೆ ಕನಿಕರ ಹುಟ್ಟಬಹುದು, ಆದರೆ ಕಷ್ಟ, ಪರಿಶ್ರಮ ಪಡುವದರಲ್ಲಿನ ಸುಖ ಅದು ಯಾವ ಸುಖದಲ್ಲೂ ಇಲ್ಲ.”
ಶ್ರೀಮತಿ ಸುನಂದಾ ಎಸ್ ಭರಮನಾಯ್ಕರ