ದಯೆಯೇ ಧರ್ಮದ ಮೂಲ (ಭಾಗ 1): ಸುನಂದಾ ಎಸ್ ಭರಮನಾಯ್ಕರ

ಇಂದು ಮಾನವ ಕಟುಕನಾಗಿದ್ದಾನೆ, ಕರುಣೆ, ಕನಿಕರ ಎಲ್ಲವೂ ಅವನಿಂದ ಮಾಯವಾಗಿದೆ ಎನ್ನುವುದು ಸತ್ಯ. ಅತೀ ಶ್ರೇಷ್ಠ ಎನಿಸಿಕೊಂಡ ಮಾನವ ಜೀವಿ ಕರುಣಾ ಮೂರ್ತಿ, ಸಹನಾಮಯಿ, ಸಂಘಜೀವಿ ಎಂದೆಲ್ಲಾ ಬಿರುದು ಪಡೆದಿರುವ ಮನುಷ್ಯ ಇಂದು ತನ್ನೆಲ್ಲ ಮೌಲ್ಯಯುತ ಗುಣಗಳನ್ನು ತೊರೆದು ರಾಕ್ಷಸ ಪ್ರವೃತ್ತಿಗೆ ಇಳಿದಿರುವುದು, ಹೇಯಕರ ಸಂಗತಿ. ನಮ್ಮ ಧರ್ಮಗಳು, ಪರಸ್ಪರ ಮಾನವರು ಮಾತ್ರವಲ್ಲ ಇಡೀ ಪ್ರಕೃತಿಯನ್ನೇ ಪ್ರೀತಿಸುವದಕ್ಕೆ ಹೆಚ್ಚು ಒತ್ತು ಕೊಟ್ಟಿವೆ. ಪ್ರಳಯ ಎದುರುಗೊಂಡರೂ ಕೈಯಲ್ಲಿರುವ ಸಸಿಯನ್ನು ನಾಟಿ ಮಾಡಿರೆಂದು ಹೇಳುತ್ತವೆ. ನಾವು ಬೆಳೆದ ಕೃಷಿಯನ್ನು ಮಾನವರು ಮಾತ್ರವಲ್ಲ ಪಶು-ಪಕ್ಷಿಗಳು ತಿಂದರೂ ಅದಕ್ಕೆ ದೇವರು ಪ್ರತಿಫಲ ನೀಡುತ್ತಾನೆಂದು ಘೋಷಿಸುವ ಮೂಲಕ ಇಡೀ ಪ್ರಕೃತಿಯನ್ನೇ ಪ್ರೀತಿಸಬೇಕೆಂದು ಸಾರುತ್ತವೆ.

ವ್ಯಕ್ತಿಯೊಬ್ಬನಿಗೆ ಮೂರು ಸಂಬಂಧಗಳು ಅತ್ಯಂತ ಪವಿತ್ರವಾಗಿದ್ದು ಅವುಗಳು ಅವನ ಜಯಾಪಜಯಗಳನ್ನು ನಿರ್ಣಯಿಸುತ್ತದೆ. ತನ್ನ ಒಡನಾಡಿಗಳಾದ ಮಾನವರು ಹಾಗೇ ತನ್ನನ್ನು ಸೃಷ್ಟಿಸಿದ ದೇವರು ಮತ್ತು ತನ್ನ ಸುತ್ತಮುತ್ತಲಿನ ಪ್ರಕೃತಿ ಈ ಮೂರರೊಂದಿಗಿನ ಸಂಬಂಧಗಳು ಬಹು ಮುಖ್ಯವಾಗಿದ್ದು ಇವುಗಳೊಂದಿಗಿನ ಸಂಬಂಧಕ್ಕೆ ಚ್ಯುತಿ ಬಾರದಂತೆ ಅವನು ಜಾಗೃತೆ ವಹಿಸಬೇಕಾಗುತ್ತದೆ. ಅದರಲ್ಲಿ ಅನಾಸ್ಥೆ ತೋರಿದರೆ ಇಹ ಪರದಲ್ಲಿ ಅನಾಹುತಕ್ಕೆ ಈಡಾಗಲು ಸಾಧ್ಯತೆ ಇದೆ. ಎಲ್ಲರಿಗೂ ಸುಖವನ್ನು ಬಯಸುವುದೇ ದಯೆ. ಹಾಗೆಂದ ಮೇಲೆ ಪರರ ದುಃಖವನ್ನು ಕಂಡು ಕರಗಿ ನೆರವಿಗೆ ಧಾವಿಸುವುದೇ ಕರುಣೆಯೆಂದು ಬೇರೆ ಹೇಳಬೇಕಾಗಿಲ್ಲ. ಮಹಾಭಾರತವು ಹೇಳುವಂತೆ ಎಲ್ಲ ತೀರ್ಥಗಳಲ್ಲಿ ಸ್ನಾನ ಮಾಡುವುದಕ್ಕಿಂತ ಸಕಲ ಪ್ರಾಣಿಗಳಲ್ಲಿ ದಯೆಯನ್ನಿಡುವುದೇ ಶ್ರೇಷ್ಠ. ಪ್ರಾಣಿ ಪಕ್ಷಿಗಳಿಗೂ, ಜೀವ ಜಂತುಗಳಿಗೂ, ನೆಲ ಜಲ ಗಾಳಿ ಹಾಗೂ ಇಡೀ ಪ್ರಕೃತಿಯೊಂದಿಗೂ ದಯೆ ತೋರಬೇಕು ಅದೇ ರೀತಿ ಪ್ರಾಣಿಗಳನ್ನು ಬೆಂಕಿಯಲ್ಲಿ ಸುಡುವುದು, ಉಸಿರುಗಟ್ಟಿಸುವುದು, ವಿನಾ ಕಾರಣ ಪೀಡಿಸುವುದು, ಅವುಗಳಿಗೆ ಮಿತಿಮೀರಿದ ಭಾರ ಹೊರಿಸುವುದು, ಅನಗತ್ಯ ಹೊಡೆಯುವುದು, ಶಾಪ ಹಾಕುವುದು, ಹಿಂಸಿಸಿ ಕೊಂದು ತಿನ್ನವುದು, ಮೊಲೆ ಕುಡಿಯುವ ಕರುವನ್ನು ಹಸುವಿನಿಂದ ಬೇರ್ಪಡಿಸುವುದು, ಹಾಲು ನೀಡುವ ಹಸುವನ್ನು ಮಾಂಸಕ್ಕಾಗಿ ಕುಯ್ಯುವುದು ಇದನ್ನೆಲ್ಲಾ ವಿರೋಧಿಸಿದೆ. ಮೂಕ ಪ್ರಾಣಿಗಳಿಗೆ ಹಿಂಸೆ ನೀಡುವದನ್ನು ಧರ್ಮಗಳು ಎಂದಿಗೂ ಸಹಿಸುವುದಿಲ್ಲ. ದಯೆಯೇ ಧರ್ಮದ ಮೂಲವಯ್ಯಾ ಎಂಬ ಬಸವಣ್ಣನವರ ವಚನ ಕೂಡಾ ಇದೇ ತತ್ವದಡಿಯಲ್ಲಿ ಹೊರಹೊಮ್ಮಿದೆ. ಇಷ್ಟೇಲ್ಲಾ ಸುವಿಚಾರಗಳನ್ನು ನಮ್ಮ ಧರ್ಮ ಗ್ರಂಥಗಳು ಭೋಧಿಸಿದ್ದರೂ ಕೂಡ ನಾವು ಅವನ್ನೆಲ್ಲಾ ಮರೆತು ನಡೆಯುತ್ತಿದ್ದೇವೆ, ಪಶು ಪಕ್ಷಿಗಳಿಗೆ ಕರುಣೆ ತೋರುವದಿರಲಿ, ಒಡಹುಟ್ಟಿದವರಿಗೂ, ಬಂಧು ಬಾಂಧವರಿಗೂ, ನೆರೆಹೊರೆಯವರಿಗೂ, ಅಷ್ಟೇ ಯಾಕೆ ಹೆತ್ತ ತಂದೆ-ತಾಯಿ ಹಾಗೂ ಕರುಳ ಬಳ್ಳಿಗೆ ಕರುಣೆ ತೋರಿಸುವ ಸೌಜನ್ಯವನ್ನು ಮರೆತಿದ್ದೇವೆ.

ಕ್ಷುಲ್ಲಕ ಕಾರಣಗಳಿಗಾಗಿ ಗುಂಪು ಗುಂಪಾಗಿ ಸೇರಿ ದೊಣ್ಣೆ ಹಿಡಿದು ವ್ಯಕ್ತಿಯೋರ್ವನನ್ನು ಅಟ್ಟಾಡಿಸಿ ಹೊಡೆಯುªದು, ಆಸ್ತಿ ವಿಷಯಕ್ಕಾಗಿ ಹೆತ್ತ ಮಕ್ಕಳೆಲ್ಲ ಸೇರಿ ತಂದೆಯನ್ನು ದೊಣ್ಣೆಯಿಂದ ಹೊಡೆದು ಕೊಂದು ಹಾಕಿದ, ಮುಗ್ಧ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿ ಕೊಂದು ಹಾಕಿದ ಹೀಗೆ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲ್ಲಿ ವೈರಲ್ ಆಗಿ ಹರಿದಾಡುತ್ತಿರುವದನ್ನು ಕಂಡರೆ ಎಲ್ಲಿ ಹೋಗಿದೆ ಇಂದು ಕರುಣೆ, ದಯೆ, ಮಾನವೀಯತೆ , ನಿಜವಾಗಲೂ ಇವರು ಮನುಷ್ಯರೇನಾ? ಮಾನವ ಕುಲದಲ್ಲಿಯೇ ಜನಿಸಿದ್ದಾರೆಯೇ ಎಂಬ ಸಂಶಯ ಬಾರದೇ ಇರಲಾರದು,

ಪ್ರಾಣಿಗಳಲ್ಲಿರುವ ದಯೆ ಮನುಜರಲ್ಲೇಕೆ ಮಾಯ:-

ಇತ್ತಿಚಿಗೆ ನಡೆದ ಒಂದು ಪ್ರಸಂಗ, ರಸ್ತೆ ಮಧ್ಯದಲ್ಲಿ ಒಂದು ಕುದುರೆ ಮರಿ ಸತ್ತು ಬಿದ್ದಿತ್ತು. ಅದರ ಪಕ್ಕ ಕಣ್ಣೀರು ಸುರಿಸುತ್ತ ನಿಂತಿದ್ದ ತಾಯಿ ಕುದುರೆ ಕಣ್ಣೀರಿಡುತ್ತ ನಿಂತಿತ್ತು! ಮತ್ತೊಂದೆಡೆ, ಕೋತಿಯೊಂದು ತನ್ನ ಸತ್ತ ಮರಿಯನ್ನು ಎತ್ತಿಕೊಂಡು ಅದು ಏಳುವುದೇನೋ ಅಂತ ಕಾಯುತ್ತಿತ್ತು. ಉತ್ಕಟ ಇಚ್ಛೆಯ ಮಂಗನ ಮಮತೆ ಹಾಗೂ ಆ ತಾಯಿ ಕುದುರೆಯ ಮಾತೃ ವಾತ್ಸಲ್ಯ !. ಮಾತೃದೇವೋಭವ ಎಂಬ ಮನುಜರ ಮಾತನ್ನು ಇಂದು ಪ್ರಾಣಿಗಳೂ ಪಾಲಿಸುತ್ತಿವೆಯಲ್ಲ. ಅದೆಂಥ ಮಮಕಾರ ಎಂದೆನಿಸಿತು, ಆದರೆ ಹೆತ್ತ ಮಕ್ಕಳನ್ನು ಬೇಡವೆಂದು ಕಸದ ತೊಟ್ಟಿಯಲ್ಲೋ, ಕೊಚ್ಚೆ ಗುಂಡಿಯಲ್ಲೋ, ಬಿಸಾಕಿ ಹೋಗುವ ಮಾನವರಿಗೆಲ್ಲಿ ಹೋಗಿದೆ ಈ ಮಮಕಾರ, ಕರುಣೆ? ಈ ಪ್ರಶ್ನೆ ನನ್ನನ್ನು ಕಾಡದೇ ಇರಲಿಲ್ಲ.

ಪ್ರಾಣಿಗಳಿಗೂ ಮನುಷ್ಯರಿಗೂ ಏನು ವ್ಯತ್ಯಾಸ ? ಮನುಜರಲ್ಲಿ ಕಾಣುವ ಸ್ವಾರ್ಥ ಪ್ರಾಣಿಗಳಲ್ಲಿಲ್ಲ. ಚಿರತೆಯನ್ನು ಕ್ರೂರಪ್ರಾಣಿ, ಬೇಟೆಯಾಡುವದರಲ್ಲಿ ನಿಸ್ಸೀಮ ಎನ್ನುತ್ತೇವೆ. ಒಮ್ಮೆ ಗರ್ಭಿಣಿ ಮಂಗವೊಂದು ಒಂದು ಮರಿಗೆ ಜನ್ಮ ನೀಡಿ ಅಸುನೀಗಿದ್ದನ್ನು ಕಂಡ ಚಿರತೆ ಬೇಟೆಯಾಡುವದನ್ನು ಮರೆತು ಮಂಗನ ಮರಿಯನ್ನು ಉಳಿಸಿ ಅಪಾಯದಿಂದ ಕಾಪಾಡಿದ ಸುದ್ದಿ ಹೃದಯವಂತರ ಮನ ಮುಟ್ಟದೇ ಇರಲಾರದು.. ಪ್ರಾಣಿಗಳನ್ನು ಹೊಟ್ಟೆ ಪಾಡಿಗಾಗಿ ಸಾಯಿಸುವ ಚಿರತೆಗೆ ಕೂಡಾ ಮುಗ್ಧ ಮಂಗನ ಮರಿಯ ಮೇಲೆ ಮಮತೆ ಉಕ್ಕಿದ್ದು ನೋಡಿದರೆ, ಮನುಷ್ಯರೇ ಕ್ರೂರಿಗಳು ಎನ್ನಿಸದಿರುವುದಿಲ್ಲ. ತುಂಬಾ ದಿನಗಳ ಹಿಂದೆ ಪತ್ರಿಕೆಯೊಂದರಲ್ಲಿ ಓದಿದ ಸುದ್ದಿ ಇದು, ಹೆದ್ದಾರಿ ಬದಿಯ ಹಳೆಯ ಹಾಳುಬಾವಿಯಲ್ಲಿ ನವಜಾತ ಶಿಶುವೊಂದು ಬಿದ್ದಿತ್ತು. ನಿಶ್ಯಕ್ತವಾಗಿದ್ದ ಅದು ಕುಂಯ್ ಕುಂಯ್ ಅನ್ನುವುದನ್ನು ಕಂಡ ಮಂಗಗಳ ಹಿಂಡು ಅಲ್ಲಿಗೆ ಬಂದು ಹೆದ್ದಾರಿಯ್ನನೇ ಬಂದ್ ಮಾಡಿ, ಅಂಬುಲೆನ್ಸ್ ಬಂದು ಆ ಮಗುವನ್ನು ತೆಗೆದು ಆಸ್ಪತ್ರೆಗೆ ಸಾಗಿಸುವವರೆಗೂ ಗಲಾಟೆ ಮಾಡಿ ಗಾಡಿಗಳು ಹೋಗದಂತೆ ಮಾಡಿದ್ದವು! ಹೆತ್ತವ್ವಳಿಗೆ ಬೇಡವಾದ ಹೆಣ್ಣು ಮಗುವಿನ ಜೀವ ಉಳಿಸುವದರಲ್ಲಿ ಮಂಗಗಳು ಯಶಸ್ವಿಯಾಗಿದ್ದವು!

ಮಂಗನಿಂದ ಮಾನವ ಎನ್ನುತ್ತಾರೆ ಆದರೆ ಮಂಗಗಳಿಗೆ ಇರುವ ಮಮತೆ–ಮಮಕಾರ ಮಾನವರಿಗೆ ಯಾಕಿಲ್ಲ? ರಸ್ತೆಯ ಮಧ್ಯದಲ್ಲಿ ಭೀಕರ ರಸ್ತೆ ಅಪಘಾತವಾಗಿ ಕಾಲು ಕತ್ತರಿಸಿಕೊಂಡು ರಕ್ತದ ಮಡುವಲ್ಲಿ ನರಳಾಡುತ್ತಿದ್ದ ವ್ಯಕ್ತಿ ಕೈ ಮಾಡಿ ಕೂಗಿ ಆಸ್ಪತ್ರೆಗೆ ಸಾಗಿಸುವಂತೆ ಬೇಡಿಕೊಂಡರೂ, ಅವರ ಮೇಲೆ ಕರುಣೆ ತೋರಿ ಅವರಿಗೆ ಸಹಾಯ ಮಾಡುವ ಬದಲಾಗಿ ಕೆಲವರು ತಮ್ಮ ಪಾಡಿಗೆ ತಾವು ವಾಹನದಲ್ಲಿ ಹೊಗುತ್ತಿದ್ದರೆ, ಇನ್ನು ಕೆಲವರು ಮೊಬೈಲ್ ನಲ್ಲಿ ಚಿತ್ರಿಕರಿಸುವದರಲ್ಲಿ ವ್ಯಸ್ತರಾಗಿರುತ್ತಾರೆ! ಇಂಥ ಅಮಾನವೀಯತೆ ಖಂಡನೀಯ, ಸರ್ವೋಚ್ಛ ನ್ಯಾಯಾಲಯದ ತೀರ್ಪು ಬಂದ ಮೇಲೂ ಜನರು ಅಪಘಾತವಾದವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸದಿರುವುದು ಶೋಚನೀಯ.

ಪ್ರಾಣಿಗಳಿಗೂ ಮರಿಗಳ ಮೇಲೆ ಮಮತೆ, ಮನುಷ್ಯರಿಗೂ ಕಂದಮ್ಮಗಳ ಬಗ್ಗೆ ಕನಿಕರ ಇದ್ದೇ ಇರುತ್ತದೆ. ಹಾಗಾದರೆ ಇಬ್ಬರಿಗೂ ಏನು ವ್ಯತ್ಯಾಸ? ಪ್ರಾಣಿಗಳಿಗೆ ಬುದ್ಧಿ ಇರುತ್ತದೆ, ಆದರೆ ಮನುಷ್ಯರಂತೆ ಸರಿ ತಪ್ಪಿನ ಪ್ರಜ್ಞೆ ಇರುವುದಿಲ್ಲ. ಆದ್ದರಿಂದ ಪ್ರಾಣಿಗಳಿಗಿಂತ ಮನುಷ್ಯ ಪ್ರಜ್ಞಾವಂತ ಎಂದು ನಾವು ಅಂದುಕೊಳ್ಳುತ್ತೇವೆ! ಆದರೆ ಪರಿಸರ ಮತ್ತು ಕಾಡು ಸಂರಕ್ಷಣ ಪರಿಣತ ಲಾರೆನ್ಸ್ ತೀರಿಕೊಂಡಾಗ , ದಯೆ ಮತ್ತು ಉಪಕಾರ ಸ್ಮರಣೆಯಲ್ಲಿ ಮಾನವರಿಗಿಂತ ಆನೆಗಳೇ ಮೇಲೆಂದು ತೋರಿಸಿದ ಸೋಜಿಗ ನಡೆದಿದೆ! ಅವರು ತೀರಿಕೊಂಡ 12 ಗಂಟೆಯಲ್ಲಿಯೇ 39 ಆನೆಗಳು ಎರಡು ತಂಡಗಳಲ್ಲಿ ದಂಡು ದಂಡಾಗಿ ಬಂದವಲ್ಲದೇ, ಊಟ-ನಿದ್ರೆ ಬಿಟ್ಟು ಕಣ್ಣೀರು ಸುರಿಸುತ್ತ 2 ದಿನ ನಿಂತೆ ಇದ್ದವಂತೆ. ಹತ್ತಿರದವರೇ ಸತ್ತರೂ ಸಾಂತ್ವನ ಹೇಳದ ಮಾನವರು ಆನೆಗಳಿಂದ ಅದೆಷ್ಟು ಕಲಿಯಬೇಕಾಗಿದೆ!

60 ಮೈಲಿ ದೂರದಲ್ಲಿದ್ದ ಅವಕ್ಕೆ ತಮ್ಮ ಜೀವ ಉಳಿಸಿದ ಮಹಾಶಕ್ತಿ ನಂದಿದೆ ಎಂದು ಗೊತ್ತಾಗಿದ್ದಾದರೂ ಹೇಗೆ ? ಇಂಥ ಆಶ್ಚರ್ಯಕರ ಘಟನೆಗೆ ಕಾರಣವೆಂದರೆ ಒಮ್ಮೆ ಆನೆಗಳ ಪುಂಡಾಟಿಕೆ ತಡೆಯಲಾಗದೆ ಜನರು ಒಂದು ತಾಯಿ ಆನೆ ಹಾಗೂ ಮರಿ ಹೆಣ್ಣಾನೆಗೆ ಹದಿಹರೆಯದ ಗಂಡಾನೆಯೊಂದರ ಮುಂದೆ ಗುಂಡಿಕ್ಕಿದ್ದರು. ತಾಯಿ-ತಂಗಿಯ ಸಾವನ್ನು ಕಣ್ಣಾರೆ ಕಂಡ ಆ ಗಂಡಾನೆ ತನ್ನ ಬಳಗದ ರಕ್ಷಣೆಗೆ ಮುಂದಾಗಿತ್ತು. ಗುಂಪಿನಲ್ಲಿದ್ದ ಇನ್ನೊಂದು ಹೆಣ್ನಾನೆ 8000 ವೋಲ್ಟ್ ವಿದ್ಯುತ್ ಬೇಲಿಯನ್ನು ಸೋಂಡಲಿನಿಂದ ಕಿತ್ತು ಕಂಬಿ ಬೀಳಿಸಿ ತನ್ನವರನ್ನು ಪಾರುಮಾಡಲು ಬಳಗದ ರಕ್ಷಣೆಗೆ ಮುಂದಾಗಿತ್ತು.ಹೀಗೆ ಮುಂದಾದ ಎರಡು ಮದದಾನೆಗಳನ್ನು ಗುಂಡಿಟ್ಟು ಕೊಲ್ಲಲು ಸ್ಥಳೀಯರು ಮುಂದಾಗಿದ್ದಾಗ ಲಾರೆನ್ಸ್ ಅವಕ್ಕೆ ರಕ್ಷಣೆ ಕೊಟ್ಟು ಜೀವ ಉಳಿಸಿದ್ದರಲ್ಲದೆ, ಎರಡೂ ಆನೆಗಳನ್ನು ಹತೋಟಿಗೆ ತೆಗೆದುಕೊಂಡು ಸಮಾಧಾನಿಸಿ, ಅವುಗಳ ಗುಂಪನ್ನು ಗಂಡಾಂತರದಿಂದ ಪಾರುಮಾಡಿ , ಅವುಗಳ ಆರೈಕೆ ಮಾಡಿ ಜನರ ರೋಷದಿಂದ ಸಂರಕ್ಷಿಸಿ, ಸುರಕ್ಷಿತವಾಗಿ ಅವುಗಳ ತಾಣಕ್ಕೆ ಬಿಟ್ಟು ಬಂದಿದ್ದರು. ಇಂಥ ದಯಾಮಯಿ ಸತ್ತಾಗ, ಜನರಿಗಿಂತ ಹೆಚ್ಚಾಗಿ ಕಣ್ಣೀರಿಟ್ಟು ಆಹಾರ-ನಿದ್ರೆ ಇಲ್ಲದೆ, ಅವರ ಶವ ಸಂಸ್ಕಾರ ಆಗುವವರೆಗೂ 39 ಆನೆಗಳು ನಿಂತೇ ಇದ್ದವು.

ಕರುಣೆ ಮಾನವತ್ವದ ಆಧಾರ ಸ್ತಂಭ:-
ಜಗತ್ತಿನಲ್ಲಿ ಕರುಣೆ ಹಾಗೂ ಕ್ಷಮೆ ಮಾನವತ್ವದ ಬಹುದೊಡ್ಡ ಆಧಾರ ಸ್ತಂಭಗಳು. ಕರುಣೆ ಹಾಗೂ ಕ್ಷಮೆಯನ್ನು ಮರೆತವರು ಮಾನವನೆಂಬ ಮುಖವಾಡದ ನೆರಳಿನಲ್ಲಿ ಜೀವಿಸಬೇಕಾಗುತ್ತದೆ. ಕರುಣೆ ಹಾಗೂ ಕ್ಷಮೆಯನ್ನು ಮರೆತ ಸಮಾಜಕ್ಕೆ ಶಾಂತಿಯನ್ನು ಹುಡುಕಿದರೂ ಸಿಗಲಾರದು. ನಾವೆಲ್ಲರೂ ಕರುಣೆ, ದಯೆ ಹಾಗೂ ಕ್ಷಮಿಸುವ ಔದಾರ್ಯವನ್ನು ಮೈಗೂಡಿಸಿಕೊಂಡು ಶಾಂತಿಯುತ ಸಮಾಜಕ್ಕೆ ಕೊಡುಗೆ ನೀಡಬೇಕು.

ಅಬ್ರಹಾಂ ಲಿಂಕನ್ ಪ್ರಾರಂಭದ ದಿನಗಳಲ್ಲಿ ಲಿಂಕನ್ ಓರ್ವ ಸಾಮಾನ್ಯ ವಕೀಲರಾಗಿದ್ದರು. ಒಂದು ದಿನ ಅವರು ಕೋರ್ಟ ಕೆಲಸ ನಿಮಿತ್ತ ಕುದುರೆಯ್ನನೇರಿ ಪಕ್ಕದ ಊರಿಗೆ ಹೊರಟಿದ್ದರು. ಅಷ್ಟರಲ್ಲಿ ಒಂದು ಹಂದಿಯ ಕಿರುಚಾಟ ಕೇಳಿಸಿತು. ಲಿಂಕನ್ ಅತ್ತಕಡೆ ನೋಡಿದರು. ಹಂದಿಯು ಕೆಸರು ತುಂಬಿದ ಹೊಂಡದಲ್ಲಿ ತೇಳುತ್ತಾ ಮುಳುಗುತ್ತಾ ಜೀವ ಉಳಿಸಿಕೊಳ್ಳಲು ಅರಚುತ್ತಿತ್ತು. ಅದರ ಹೃದಯವಿದ್ರಾವಕ ನೋಟವು ಲಿಂಕನ್ನರ ಮನಸ್ಸನ್ನು ಕಲಕಿತು. ಅದನ್ನು ಹೇಗಾದರೂ ಮಾಡಿ ರಕ್ಷಿಸಬೇಕೆಂದು ಅವರು ನಿರ್ಧರಿಸಿದರು. ಕೋರ್ಟಿಗೆ ತಡವಾದರೂ ಅಡ್ಡಿಯಿಲ್ಲ. ಅಂದುಕೊಂಡರು. ತಮ್ಮ ಜತೆಗಿದ್ದ ಸ್ನೇಹಿತನನ್ನು ಮುಂದೆ ಕಳುಹಿಸಿ ಅವರು ಕೆಸರಿನ ಹೊಂಡದ ಬಳಿಗೆ ಧಾವಿಸಿದರು. ಎರಡು ಬಿದಿರಿನ ಬೊಂಬುಗಳನ್ನು ತಂದರು. ಇಬ್ಬರು ರೈತರನ್ನು ಸಹಾಯಕ್ಕೆ ಕರೆದರು. ಹೇಗೋ ಮಾಡಿ ಮುಳುಗುತ್ತಿದ್ದ ಹಂದಿಯನ್ನು ಮೇಲೆತ್ತಿ ಹಾಕಿದರು. ದಡ ಸೇರಿದ ಹಂದಿ ತುಂಬ ಸಂತೋಷದಿಂದೋಡಿ ಹೋಯಿತು. ಅಬ್ರಹಾಂ ಲಿಂಕನ್ನರ ಪೋಷಾಕಿಗೆ ಕೊಳೆಯಾಗಿತ್ತು. ಅದನ್ನು ಸ್ವಲ್ಪ ಸ್ವಲ್ಪ ತೊಳೆದು ಅವರು ನ್ಯಾಯಾಲಯಕ್ಕೆ ಹೋದಾಗ ಉಳಿದವರು ಅವರನ್ನು ನೋಡಿ ನಕ್ಕರು. ಒಂದು ಸಾಮಾನ್ಯ ಹಂದಿಯನ್ನು ರಕ್ಷಿಸುವದಕ್ಕಾಗಿ ಇಷ್ಟೆಲ್ಲಾ ಪ್ರಯಾಸ ಪಡುವ ಅಗತ್ಯ ಇತ್ತೇ? ಎಂದು ಕೇಳಿದವರೂ ಇದ್ದರು. ಆದರೆ ಲಿಂಕನ್ ಯಾರ ಟೀಕೆ ಟಿಪ್ಪಣಿಗಳಿಗೂ ಕಿವಿಗೊಡಲಿಲ್ಲ. ಏಕೆಂದರೆ ತಾವು ಮಾಡಿದ್ದು ಸರಿಯೆಂಬ ನೆಮ್ಮದಿ ಅವರಿಗಿತ್ತು. ಒಂದು ಪ್ರಾಣಿಯ ಮೇಲೆಯೇ ಇಷ್ಟು ದಯೆ ತೋರಿಸಿದ ಲಿಂಕನ್ ಮನುಷ್ಯರ ಬಗೆಗೆ ಕಾಳಜಿ ತೋರಿಸದಿರಲು ಹೇಗೆ ಸಾಧ್ಯ? ಸ್ವಾಭಾವಿಕವಾಗಿಯೇ ವರ್ಣ ಭೇಧ ತೊಲಗಿಸಲು , ಗುಲಾಮಗಿರಿ ತೊಡೆದು ಹಾಕಲು ಅವರು ಮುಂದೆ ಹೋರಾಟ ನಡೆಸಿದರು. ಪ್ರಾಣವನ್ನೇ ತೆತ್ತರು.

ಕನಿಕರ ಇದ್ದರಷ್ಟೇ ಸಾಲದು ,ಸಹಾಯ ಮಾಡುವ ಗುಣವೂ ಇರಬೇಕು:-

ಒಮ್ಮೆ ಶ್ರಾವಸ್ತಿಯಲ್ಲಿ ಭೀಕರ ಬರಗಾಲ ತಲೆದೋರಿತು. ಎಷ್ಟೋ ಜನ ಹಸಿವಿನಿಂದ ಸತ್ತರು. ಹಸುಗೂಸು, ಹಸಿಬಾಣಂತಿಯರು, ದುಡಿವ ಗಂಡಸರು ಸತ್ತ ಮನೆಗಳವರ ದುಃಖವಂತೂ ಹೇಳತೀರದು. ಭಗವಾನ್ ಬುದ್ದ ಇದನ್ನು ಕಂಡು ಕರಗಿ ಹೋದ . ಏನಾದರೂ ಮಾಡಬೇಕೆಂದು ಯೋಚಿಸಿದ . ಅಲ್ಲಿನ ಎಲ್ಲರನ್ನೂ ಕರೆದು ಸಭೆ ಸೇರಿಸಿದ. ಬರಗಾಲದಿಂದಾಗಿ ಅನಾಥರಾದ, ವಿಧವೆಯರ, ತಬ್ಬಲಿ ಮಕ್ಕಳ ಜೀವ ಉಳಿಸಲು ಏನಾದರೂ ಮಾಡಬೇಕೆಂದು ಎಲ್ಲರಲ್ಲೂ ವಿನಂತಿಸಿದ.
ಆ ಸಭೆಯಲ್ಲಿ ಸಿರಿವಂತರೂ ಇದ್ದರು. ಅವರು ಬುದ್ದದೇವ, ನಮಗೂ ಎಲ್ಲರ ಬಗ್ಗೆ ಕನಿಕರ ಇದೆ ಆದರೆ ನಮ್ಮ ಬಳಿ ಈಗಿರುವ ಕಾಳುಕಡ್ಡಿ ನಮ್ಮ ಕುಟುಂಬವನ್ನು ಒಂದು ವರ್ಷ ಕಾಲ ಸಾಕಲು ಸಾಕು. ಬೇರೆಯವರಿಗೆ ಹೇಗೆ ಕೊಡಲು ಸಾಧ್ಯ? ನೀವೇ ಹೇಳಿ ಎಂದು ಕೇಳಿದರು. ಸಭೆಯಲ್ಲಿ ಮೌನ ಆವರಿಸಿತು. ಅಷ್ಟರಲ್ಲಿ ಹನ್ನೆರಡು ವರ್ಷದ ಹುಡುಗಿ ಸುಚೇತಾ ಎದ್ದು ನಿಂತಳು. ನೀವು ಅನುಮತಿ ನೀಡಿದರೆ ಈ ಕೆಲಸ ನಾನು ಮಾಡುತ್ತೇನೆ ಎಂದಳು. ಹೇಗೆ ಅದನ್ನು ಮಾಡುವಿ ಎಂಬ ಭಗವಾನರ್ ಪ್ರಶ್ನೆಗೆ ಆಕೆ ನಿಷ್ಠುರ ಮನುಷ್ಯನ ಹೃದಯದಲ್ಲೂ ಕರುಣೆ ಭಾವ ಹುದುಗಿರುತ್ತದೆ. ನಾನು ಅದನ್ನು ತಟ್ಟಿ ಎಬ್ಬಿಸುವೆ, ಹಸಿದ ಕಂದಮ್ಮಗಳಿಗಾಗಿ ಬೇಡಿದಾಗ ಅರ್ಧ ರೊಟ್ಟಿಯನ್ನಾದರೂ ಅವರು ಕೊಟ್ಟೇ ಕೊಡುತ್ತಾರೆ ಅಂದು ಆತ್ಮವಿಶ್ವಾಸದಿಂದ ಉತ್ತರಿಸಿದಳು. ಬುದ್ಧ ಭಗವಾನ ಪ್ರೀತಿಯಿಂದ ಆಕೆಯ ತಲೆ ನೇವರಿಸಿ, ಮಗು, ಕನಿಕರ ತೋರುವ ಮನಸ್ಸಿಗಿಂತ ನಿನ್ನ ಮನಸ್ಸು ದೊಡ್ಡದು. ಯಶಸ್ವಿಯಾಗು ಎಂದು ಹರಸಿದ. ಅಂದು ಸುಚೇತಾ ಈ ಕಾರ್ಯವನ್ನು ಕೈಗೊಂಡಳು. ಸಾವಿರಾರು ನಿರಾಶ್ರಿತರ ಜೀವ ಉಳಿಯಲು ಕಾರಣಳಾದಳು.

ದಯೆ ತೋರಿಸುವ ಕುರಿತು ಪಾಠ:-

ಮಹಾ ಭೋಧಕನಾದ ಯೇಸು ಕ್ರಿಸ್ತನ ಮಾತನ್ನು ಕೇಳಿ ಅದರಂತೆ ನಡೆದುಕೊಂಡರೆ ಖಂಡಿತವಾಗಿ ನಾವು ಎಲ್ಲಾ ರೀತಿಯ ಜನರಿಗೆ ದಯೆ ತೋರಿಸಬಹುದು. ಜನರು ಯಾವುದೇ ದೇಶದವರಾಗಿರಲಿ, ಯಾವುದೇ ಭಾಷೆ ಮಾತಾಡುತ್ತಿರಲಿ ನಾವು ಭೇಧ ಭಾವ ತೋರಿಸದೆ ದಯೆ ತೋರಿಸಬೇಕು. ಯಾರು ದಯೆ ತೋರಿಸಲಿ, ತೋರಿಸದಿರಲಿ ನಾವು ತೋರಿಸಬೇಕೆಂಬುದು ಯೇಸು ನಮಗೆ ಒಂದು ಪಾಠ ಹೇಳಿದ್ದಾರೆ. ಅದೇನೆಂದು ನೋಡೋಣ

ಒಬ್ಬ ಯೆಹೂದಿ ವ್ಯಕ್ತಿ ಇದ್ದನು. ಅವನಿಗೆ ಬೇರೆ ದೇಶದ ಜನರ ಬಗ್ಗೆ ಪೂರ್ವಾಗ್ರಹ ಇತ್ತು. ಅವನು ಒಮ್ಮೆ ಯೇಸುವಿನ ಬಳಿಗೆ ಬಂದು, ನಾನು ಸದಾಕಾಲ ಬದುಕಬೇಕಾದರೆ ಏನು ಮಾಡಬೇಕು? ಅಂತ ಕೇಳಿದನು. ಆ ವ್ಯಕ್ತಿಯ ಮನಸ್ಸಿನಲ್ಲಿ ಏನಿದೆ ಅಂತ ಯೇಸುವಿಗೆ ಅರ್ಥವಾಯಿತು. ತನ್ನ ಸ್ವಂತ ದೇಶದ ಜನರಿಗೆ ಮಾತ್ರ ಪ್ರೀತಿ ದಯೆ ತೋರಿಸಿದರೆ ಸಾಕು ಎಂದು ಯೇಸು ಉತ್ತರಿಸಬೇಕೆಂದು ಅವನು ಬಯಸಿದನು. ಆದರೆ ಯೇಸು ಅವನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ಬದಲಿಗೆ ದೇವರ ನಿಯಮ ನಾವೇನು ಮಾಡುವಂತೆ ಹೇಳುತ್ತದೆ?.ಎಂದು ತಿರುಗಿ ಪ್ರಶ್ನೆ ಕೇಳಿದನು.

ಆಗ ಆ ಮನುಷ್ಯನು, ನಿನ್ನ ದೇವರಾಗಿರುವ ಯೇಹೂವನ್ನು ನಿನ್ನ ಪೂರ್ಣ ಹೃದಯದಿಂದ ಪ್ರೀತಿಸಬೇಕು ಮತ್ತು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂದು ಉತ್ತರಿಸಿದನು. ಅದಕ್ಕೆ ಯೇಸು, ನೀನು ಸರಿಯಾಗಿಯೇ ಉತ್ತರಕೊಟ್ಟೆ , ಇದನ್ನೇ ಮಾಡುತ್ತಾ ಇರು, ಆಗ ನೀನು ಸದಾಕಾಲ ಬದುಕುವಿ ಎಂದು ಹೇಳಿದನು. ಯೇಸುವಿನ ಆ ಉತ್ತರದಿಂದ ಅವನಿಗೆ ಸಮಾಧಾನ ಆಗಲಿಲ್ಲ. ಯಾಕೆಂದರೆ ತನಗಿಂತ ಭಿನ್ನರಾಗಿದ್ದ ಜನರಿಗೆ ಪ್ರೀತಿ ದಯೆ ತೋರಿಸಲು ಅವನು ಇಷ್ಟ ಪಡುತ್ತಿರಲಿಲ್ಲ. ಹಾಗಾಗಿ ನುಣುಚಿಕೊಳ್ಳಲು ಪ್ರಯತ್ನಿಸುತ್ತಾ, ನಿಜವಾಗಿಯೂ ನನ್ನ ನೆರೆಯವನು ಯಾರು? ಎಂದು ಯೇಸುವನ್ನು ಮತ್ತೆ ಕೇಳಿದನು. ನಿನ್ನ ಸ್ನೇಹಿತರೇ ನಿನ್ನ ನೆರೆಯವರು ಅಥವಾ ನಿನ್ನ ಜಾತಿಯ, ನಿನ್ನ ಭಾಷೆಯ ಜನರೇ ನಿನ್ನ ಸ್ನೇಹಿತರು” ಅಂತ ಯೇಸು ಹೇಳಬೇಕೆಂದು ಅವನು ಬಯಸಿರಬೇಕು. ಆದರೆ ಯೇಸು ಈ ಪ್ರಶ್ನೆಗೆ ಉತ್ತರವಾಗಿ ಒಂದು ಕಥೆ ಹೇಳಿದನು .ಅದು ಒಬ್ಬ ಯೆಹೂದ್ಯ ಹಾಗೂ ಸಮಾರ್ಯದವನ ಕಥೆಯಾಗಿತ್ತು.

ಒಬ್ಬ ಮನುಷ್ಯ ಯೆರೂಸಲೇಮ್ ಪಟ್ಟಣದಿಂದ ಯೆರಿಕೋವಿಗೆ ಹೋಗುತ್ತಿದ್ದನು. ಅವನೊಬ್ಬ ಯೆಹೂದ್ಯನಾಗಿದ್ದನು. ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅವನನ್ನು ಕಳ್ಳರು ಅಡ್ಡಗಟ್ಟಿ ಕೆಳಗೆ ನೂಕಿ, ಅವನ ಹಣ ಮತ್ತು ಬಟ್ಟೆಯನ್ನು ದೋಚಿಕೊಂಡರು. ಅಲ್ಲದೆ ಅವನನ್ನು ಚೆನ್ನಾಗಿ ಹೊಡೆದು ಅರೆಜೀವ ಮಾಡಿ ದಾರಿಯ ಪಕ್ಕದಲ್ಲಿ ಬಿಟ್ಟುಹೋದರು. ಸ್ವಲ್ಪ ಸಮಯದ ಬಳಿಕ ಅದೇ ದಾರಿಯಲ್ಲಿ ಒಬ್ಬ ಯಾಜಕ ಬಂದನು. ಅವನು ಯೆರೂಸಲೇಮ್ ದೇವಾಲಯದಲ್ಲಿ ದೇವರ ಸೇವೆ ಮಾಡುತ್ತಿದ್ದ ವ್ಯಕ್ತಿಯಾಗಿದ್ದನು. ತುಂಬಾ ಗಾಯಗೊಂಡು ದಾರಿಯಲ್ಲಿ ಬಿದ್ದಿದ್ದ ಆ ಮನುಷ್ಯನನ್ನು ಅವನು ನೋಡಿದನು. ಒಂದು ವೇಳೆ ಗಾಯಗೊಂಡಿದ್ದ ಆ ಮನುಷ್ಯನನ್ನು ನೀನು ನೋಡಿದ್ದರೆ ಏನು ಮಾಡುತ್ತಿದ್ದೆ? ಯಾಜಕನು ಏನು ಮಾಡಿದನು ಗೊತ್ತಾ? ಗಾಯಗೊಂಡ ವ್ಯಕ್ತಿಯನ್ನೂ ನೋಡಿದರೂ ನೋಡದ ಹಾಗೆ ಹೊರಟು ಹೋದ. ಆ ಮನುಷ್ಯನಿಗೆ ಏನಾಗಿದೆ ಅಂತ ನೋಡುವ ಗೋಜಿಗೂ ಹೋಗಲಿಲ್ಲ. ಆತನಿಗೆ ಸಹಾಯ ಮಾಡಬೇಕೆಂದು ಆ ಯಾಜಕನಿಗೆ ಅನಿಸಲೇ ಇಲ್ಲ. ಅದೇ ದಾರಿಯಲ್ಲಿ ಇನ್ನೊಬ್ಬ ಧಾರ್ಮಿಕ ವ್ಯಕ್ತಿ ಬಂದನು. ಅವನು ಯೇರೂಸಲೇಮಿನ ದೇವಾಲಯದಲ್ಲಿ ಸೇವೆ ಮಾಡುತ್ತಿದ್ದ ಒಬ್ಬ ಲೇವಿಯನಾಗಿದ್ದನು. ಅವನು ನಿಂತು ಆ ಮನುಷ್ಯನಿಗೆ ಸಹಾಯ ಮಾಡಿದನಾ? ಇಲ್ಲ, ಅವನು ಸಹ ಆ ಯಾಜಕನಂತೆ ಜಾಗ ಖಾಲಿಮಾಡಿದ.

ಕೊನೆಗೆ ಒಬ್ಬ ಸಮಾರ್ಯದವನು ಆ ದಾರಿಯಲ್ಲಿ ಬಂದನು. ತುಂಬಾ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ಆ ಯೆಹೂದ್ಯನನ್ನು ಅವನೂ ನೋಡಿದನು. ಈಗ ಒಂದು ವಿಷಯ ಹೇಳ್ತಿನಿ ಕೇಳು ಸಮಾರ್ಯದವರಿಗೂ ಯೇಹೂದ್ಯರಿಗೂ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ, ಹೀಗಿರುವಾಗ , ಈ ಸಮಾರ್ಯದವನು ಆ ಯೆಹೂದ್ಯನಿಗೆ ಸಹಾಯ ಮಾಡಿರಬಹುದಾ? ಅಥವಾ ನಾನೇಕೆ ಈ ಯೆಹೂದ್ಯನಿಗೆ ಸಹಾಯ ಮಾಡಬೇಕು? ನಾನು ಇದೇ ಪರಿಸ್ಥಿತಿಯಲ್ಲಿ ಇರುತ್ತಿದ್ದರೆ ಇವನೇನೂ ನನಗೆ ಸಹಾಯ ಮಾಡುತ್ತಿದ್ದನಾ? ಅಂತ ಅವನು ನೆನಸಿದನಾ? ಅವನು ಹಾಗೇ ಯೋಚಿಸಲಿಲ್ಲ. ದಾರಿಯ ಪ್ಕಕದಲ್ಲಿ ಬಿದ್ದಿದ್ದ ಆ ಮನುಷ್ಯನನ್ನು ನೋಡಿದಾಗ ಸಮಾರ್ಯದವನಿಗೆ ಮರುಕ ಉಂಟಾಯಿತು. ಅಯ್ಯೋ ಪಾಪ ಅಂತ ಅನಿಸಿತು. ಅವನನ್ನು ಅಲ್ಲೇ ಬಿಟ್ಟರೆ ಸತ್ತು ಹೋಗುತ್ತಾನೆಂದು ನೆನಸಿ ತನ್ನ ಕತ್ತೆಯಿಂದ ಇಳಿದು ಅವನಿಗೆ ಆರೈಕೆ ಮಾಡಿದನು. ಗಾಯಗಳಿಗೆ ಎಣ್ಣೆ ದ್ರಾಕ್ಷಾರಸವನ್ನು ಹಚ್ಚಿದನು. ಅದು ಗಾಯವನ್ನು ಬೇಗನೆ ವಾಸಿ ಮಾಡುತ್ತದೆ. ಅವನ್ನು ಹಚ್ಚಿದ ಮೇಲೆ ಗಾಯಗಳಿಗೆ ಬಟ್ಟೆ ಸುತ್ತಿದನು. ಆ ನಂತರ ಅವನನ್ನು ನಿಧಾನವಾಗಿ ಎತ್ತಿ ತನ್ನ ಕತ್ತೆಯ ಮೇಲೆ ಮಲಗಿಸಿದನು. ಅವನಿಗೆ ನೋವಾಗದಂತೆ ಕತ್ತೆಯನ್ನು ನಿಧಾನವಾಗಿ ಹೊಡಿಸಿಕೊಂಡು ಹೋಗಿ ಒಂದು ವಸತಿ ಗೃಹವನ್ನು ಅಂದರೆ ಚಿಕ್ಕ ಹೋಟೆಲನ್ನು ತಲುಪಿದನು. ಅಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ತಗೊಂಡು ಚೆನ್ನಾಗಿ ಅವನ ಆರೈಕೆಯನ್ನು ಮಾಡಿದನು.

ಈ ಕಥೆಯನ್ನು ಹೇಳಿ ಮುಗಿಸಿದ ಮೇಲೆ ಯೇಸು, ಈ ಮೂವರಲ್ಲಿ ಯಾರು ಒಳ್ಳೆಯ ನೆರೆಯವನು ಎಂದು ನಿನಗೆ ಅನಿಸುತ್ತದೆ? ಅಂತ ತನಗೆ ಪ್ರಶ್ನೆ ಹಾಕಿದ ಆ ಮನುಷ್ಯನನ್ನು ಕೇಳಿದನು, ಯಾಜಕನಾ, ಲೇವಿಯನಾ ಅಥವಾ ಸಮಾರ್ಯದವನಾ? ಮಗು, ನೀನು ಏನು ಹೇಳುತ್ತೀ? ಅದಕ್ಕೆ ಆ ಮನುಷ್ಯನು , ಕತ್ತೆಯಿಂದ ಇಳಿದು, ಗಾಯಗೊಂಡಿದ್ದ ಮನುಷ್ಯನಿಗೆ ಆರೈಕೆ ಮಾಡಿದವನೇ ಒಳ್ಳೆಯ ನೆರೆಯವನು ಎಂದು ಉತ್ತರಿಸಿದನು. ಆಗ ಯೇಸು ಅವನಿಗೆ ನೀನು ಸರಿಯಾಗಿ ಹೇಳಿದೆ. ಹೋಗಿ ಅದರೆಂತೆಯೇ ಮಾಡು ಎಂದು ಹೇಳಿದನು.

ಯಾರು ನಮ್ಮ ನೆರೆಯವರು ಅಂತಾ ಕಥೆ ಸ್ಪಷ್ಟವಾಗಿ ತೋರಿಸುತ್ತದೆ. , ನೆರೆಯವರು ಅಂದರೆ ಕೇವಲ ನಮ್ಮ ಆಪ್ತ ಸ್ನೇಹಿತರು ಅಲ್ಲ, ನಮ್ಮ ದೇಶ, ರಾಜ್ಯದವರು ಅಥವಾ ನಮ್ಮ ಭಾಷೆ ಮತಾಡುವವರು ಮಾತ್ರವೇ ಅಲ್ಲ. ಜನರು ಯಾವುದೇ ದೇಶದವರಾಗಿರಲಿ, ನೋಡಲು ಹೇಗೆ ಇರಲಿ, ಯಾವುದೇ ಭಾಷೆ ಮಾತಾಡುತ್ತಿರಲಿ ಅವರೆಲ್ಲರೊಂದಿಗೆ ನಾವು ಪ್ರೀತಿ ದಯೆಯಿಂದ ನಡೆದುಕೊಳ್ಳಬೇಕು ಎಂದು ಯೇಸು ಕಲಿಸಿದನು.

ಯೆಹೋವ ದೇವರು ಸಹ ಎಲ್ಲ ಜನರಿಗೆ ಪ್ರೀತಿ ದಯೆ ತೋರಿಸುತ್ತಾನೆ. ಆತನು ಯಾರಿಗೂ ಭೇಧಭಾವ ಮಾಡುವುದಿಲ್ಲ. ಪೂರ್ವಾಗ್ರಹವನ್ನು ಇಟ್ಟುಕೊಳ್ಳುವುದಿಲ್ಲ. ದೇವರು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ಸೂರ್ಯನು ಉದಯಿಸುವಂತೆ ಮಾಡುತ್ತಾನೆ ಮತ್ತು ಒಳ್ಳೆಯವರ ಮೇಲೆಯೂ ಕೆಟ್ಟವರ ಮೇಲೆಯೂ ಮಳೆ ಸುರಿಸುತ್ತಾನೆ ಎಂದು ಯೇಸು ಹೇಳಿದನು. ನಾವು ಕೂಡ ದೇವರಂತೆ ಎಲ್ಲಾ ಜನರಿಗೂ ದಯೆ ತೋರಿಸಬೇಕು ಅಂತ ಮಹಾ ಭೋಧಕನು ಬಯಸುತ್ತಾನೆ. ಕಷ್ಟದಲ್ಲಿರುವವರು ಯಾರೇ ಆಗಿರಲಿ ನಾವು ಅವರಿಗೆ ಸಹಾಯ ಮಾಡಬೇಕು ಎಂದು ಅವನು ಅಪೇಕ್ಷಿಸುತ್ತಾನೆ. ಅದಕ್ಕೆ ದಯಾಳುವಾಗಿದ್ದ ಸಮಾರ್ಯದವನ ಕಥೆಯನ್ನು ಯೇಸು ನಮಗೆ ಹೇಳಿದನು. ಜನರ ಜಾತಿ ದೇಶ ಯಾವುದೇ ಆಗಿರಲಿ ನಾವು ಅವರಿಗೆ ದಯೆ ತೋರಿಸಬೇಕು .

ಹಾಗೆಯೇ ದಯೆಯ ಕುರಿತಾದ ಇನ್ನೊಂದು ಕತೆ ನೆನಪಿಗೆ ಬರುತ್ತಿದೆ, ಅದೇನೆಂದರೆ ಒಂದು ಸಲ ಗೌತಮ ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದ . ಒಂದು ದಿನ ಬಿಸಿಲಿನಿಂದ ಅವನಿಗೆ ತುಂಬಾ ಆಯಾಸವಾಗಿ ಹಾಗೆಯೇ ಜ್ಞಾನ ತಪ್ಪಿ ನೆಲದಲ್ಲಿ ಬಿದ್ದ. ಆ ದಾರಿಯಾಗಿ ಒಬ್ಬ ಕುರುಬರ ಹುಡುಗ ಬಂದ. ನೆಲದಲ್ಲಿ ಬಿದ್ದಿದ್ದ ಸನ್ಯಾಸಿಯನ್ನು ನೋಡಿ ಅವನಿಗೆ ಕನಿಕರ ಆಯಿತು. ಆದರೆ ಶೂದ್ರನಾದ ತಾನು ಆ ಸನ್ಯಾಸಿಯನ್ನು ಮುಟ್ಟಿ ಉಪಚರಿಸುವ ಹಾಗಿರಲಿಲ್ಲ. ಆದುದರಿಂದ ಅವನು ಆಡಿನ ಮೊಲೆಯಿಂದ ನೇರವಾಗಿ ಗೌತಮನ ಬಾಯಿಗೆ ಹಾಲನ್ನು ಹಿಂಡಿದ . ಆಗ ಗೌತಮ ಎಚ್ಚರಗೊಂಡು “ಅಯ್ಯಾ ನಿನ್ನ ಬಟ್ಟಲಿನಲ್ಲಿ ಸ್ವಲ್ಪ ಹಾಲು ಕೊಡಪ್ಪ” ಎನ್ನುತ್ತಾ ಎದ್ದು ಕುಳಿತ.

ಹುಡುಗನು “ ಸ್ವಾಮಿ ಸನ್ಯಾಸಿಗಳೇ, ನಾನು ಶೂದ್ರ. ನಾನು ನಿಮ್ಮನ್ನು ಮುಟ್ಟಿದರೆ ಮೈಲಿಗೆಯಾಗುವುದಿಲ್ಲವೇ? ಎಂದು ಕೇಳಿದ.
ಗೌತಮನಿಗೆ ತುಂಬಾ ದುಃಖವಾಯಿತು. ಅವನು ಹುಡುಗನಿಗೆ “ ಸೋದರ , ನಾವೆಲ್ಲರೂ ಅಣ್ಣ ತಮ್ಮಂದಿರೇ ಅಲ್ಲವೇ? ನಮ್ಮಿಬ್ಬರ ಮೈಯಲ್ಲಿ ಹರಿಯುವ ರಕ್ತದ ಬಣ್ಣ ಒಂದೇ . ನಮ್ಮ Pಣ್ಣಲ್ಲಿ ಹರಿಯುವ ನೀರು ಇಬ್ಬರದೂ ಉಪ್ಪಾಗಿದೆ. ದಯೆ ಇರುವವನೇ ಬ್ರಾಹ್ಮಣ , ಅದಿಲ್ಲದವನು ಶೂದ್ರ. ಒಳ್ಳೆಯ ಕೆಲಸಗಳನ್ನು ಮಾಡುವವನು ಬ್ರಾಹ್ಮಣ, ಕೆಟ್ಟದಾರಿಯಲ್ಲಿ ನಡೆಯುವವನು ಶೂದ್ರ. ತಿಳಿಯಿತೇನಪ್ಪಾ? ಇನ್ನು ಮೈಲಿಗೆಯ ಮಾತನಾಡಬೇಡ. ನಿನ್ನ ಬಟ್ಟಲಿನಿಂದ ನನಗೆ ಹಾಲನ್ನು ಕುಡಿಸು” ಎಂದು ಕೇಳಿದ. ಹುಡುಗ ಸಂತೋಷದಿಂದ ಗೌತಮನಿಗೆ ಹಾಲನ್ನು ಕುಡಿಯಲು ಕೊಟ್ಟರು.

ಇಂದು ಎಲ್ಲಕ್ಕಿಂತಲೂ ತುರ್ತಾಗಿ ಬೇಕಾಗಿರುವುದು ನಶಿಸಿ ಹೋಗುತ್ತಿರುವ ಮಾನವೀಯ ಮೌಲ್ಯಗಳ ಪುನಃ ಸ್ಥಾಪನೆಯಾಗಿದೆ. ಹೆತ್ತವರ-ಮಕ್ಕಳ ಪರಸ್ಪರ ಸಂಬಂಧ ಮಕ್ಕಳಿಗಾಗಿ ತಾಯಂದಿರು ಪಡುವ ತ್ಯಾಗ ಕೌಟುಂಬಿಕ ಬದುಕಲ್ಲಿ ಬಂದೆರಗುವ ಅನೀರಿಕ್ಷಿತ ಆಪತ್ತು ಅಘಾತಗಳಿಗೆ ಸ್ಪಂದಿಸಬೇಕಾದ ರೀತಿ ಇವೇ ಮುಂತಾದವುಗಳ ಸಂದೇಶಗಳನ್ನು ಹಾಗೂ ಪ್ರೀತಿ, ಕರುಣೆ ದಯೆ ಎಲ್ಲವೂ ಮಾಯವಾಗುತ್ತಿರುವ ಇಂದಿನ ಆಧುನಿಕ ಕಾಲದಲ್ಲಿ ಪ್ರಚಾರ ಪಡಿಸಿ ಜಾಗೃತಿ ಮೂಡಿಸಬೇಕಾದುದು ಅನಿವಾರ್ಯವೇ ಆಗಿದೆ.


(ಮುಂದುವರೆಯುವುದು)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x