ಹಾಲು ಕುಡಿಯಲೊಲ್ಲದ ಮಗಳಿಗೆ ಪ್ರೇರೇಪಿಸಲು ಚಂದ್ರನ ತೋರಿಸಿ ಗಣಪತಿಯ ದಂತ ಮುರಿದದ್ದು ಹೇಗೆ ಗೊತ್ತಾ ಎಂಬ ಕತೆಯನ್ನು ಪ್ರಾರಂಭಿಸಿದೆ. ಆನೆ ತಲೆ ಜೋಡಿಸಿದ್ದನ್ನು ನೋಡಿ ನಕ್ಕ ಚಂದ್ರನಿಗೆ ಗಣಪತಿ ಸಿಟ್ಟಿನಿಂದ ತನ್ನ ಮುಖದ ದಂತವನ್ನು ತುಂಡರಿಸಿ ಎಸೆದ ಎಂದು ನನಗೆ ತಿಳಿದ ಗಣಪತಿಯ ‘ ದಂತ’ ಕತೆಯನ್ನು ಹೇಳಿ ಲೋಟ ಖಾಲಿ ಮಾಡಿಸಿದೆ. ಆದರೆ ಈಗ ನಾನು ಮನುಷ್ಯರ ದಂತದ ಕುರಿತ ಸ್ವಾರಸ್ಯಕರ ಕತೆಗಳನ್ನು ಹೇಳಹೊರಟಿರುವೆ. ದೇಹದ ಯಾವ ಅಂಗಕ್ಕು ಚಿಕ್ಕ ಗಾಯವಾದರು ಆ ದಿನ ಏನೋ ಸರಿಯೆ ಅನಿಸದ ಚಡಪಡಿಕೆ. ಅದರಲ್ಲು ಹಲ್ಲು ನೋವು ಬಂದರಂತು ಮುಗಿದೆ ಹೋಯಿತು ಬದುಕು ಅನ್ನುವಷ್ಟು ನೊವು! ತಮ್ಮ ತಮ್ಮ ದಂತದ ನೋವು ಎಳ್ಳಷ್ಟಾದರು ಅನುಭವಿಸದ ಮನುಷ್ಯ ಇರಲಾರ ಎಂದರು ತಪ್ಪಲ್ಲ. ಮೂರರ ಹರೆಯದ ಮಗುವಿನಿಂದ ಪ್ರಾರಂಭವವಾಗಿ ನೂರರ ಸನಿಹದ ಪ್ರಾಯಸ್ಥರವರೆಗೆ ಈ ನೋವು ಯಾರಿಗು ತಪ್ಪಿದ್ದಲ್ಲ .ಹಾಗೆಂದು ನಾವು ಹೊಟ್ಟೆಗಿಲ್ಲದೆ ಒಂದು ಹೊತ್ತು ಇರಲು ಸಾಧ್ಯವಿಲ್ಲದ ಶ್ವಾಸ ಇರುವ ಜೀವಿಗಳಿಗೆಲ್ಲ ಈ ಹಲ್ಲುಗಳು ಬೇಕೆ ಬೇಕು. ಸೌಂದರ್ಯದಲ್ಲು ಈ ಹಲ್ಲುಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಿರುವಾಗ ಹಲ್ಲುಗಳನ್ನು ಕೀಳಿಸುವುದೆಂದರೆ ಯಾರು ತಾನೆ ಮುಂದೆ ಬರುತ್ತಾರೆ ಹೇಳಿ?ಹಾಗಾಗಿ ಹಾಳಾದ ಹಲ್ಲುಗಳನ್ನೆ ಸರಿಪಡಿಸಲು ಆಸಕ್ತಿ ತೋರಿಸುವವರೆ ನಮ್ಮ ನಡುವಿನಲ್ಲಿ ಹೆಚ್ಚಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ಕೀಳಿಸುವುದು ಅನಿವಾರ್ಯ ಎಂದಾದರೆ ಹಲ್ಲಿನ ಸೆಟ್ ಜೋಡಿಸಿಕೊಂಡು ಇನ್ನು ಅಂದವಾಗಿ ಕಾಣುತ್ತಾರೆಯೆ ಹೊರತು ಖಾಲಿ ಬಾಯಲ್ಲಿ ಕೂರುವ ಜಾಯಮಾನ ಈಗಿನ ಜಮಾನದಲ್ಲಂತು ಯಾರಲ್ಲು ಇಲ್ಲ.
ಇಂತಹ ಕೈಚಳಕ ತೋರಿಸುವ ಎಲ್ಲ ದಂತವೈದ್ಯರಿಗಂತು ಹ್ಯಾಟ್ಸಾಫ್ ಹೇಳಲೇಬೇಕು. ಉಬ್ಬು ಹಲ್ಲುಗಳು ಬಂದು ಏನು ಚೆನ್ನಾಗಿ ಕಾಣಿಸುತ್ತಲ್ಲ ಎಂಬರಿವು ಬಂದರಂತು ಏನು ತಲೆಬಿಸಿ ಮಾಡಬೇಕಿಲ್ಲ . ನೇರ ದಂತವೈದ್ಯರಲ್ಲಿಗೆ ಹೋದರೆ , ಹಲ್ಲು ತೆಗೆಯುವ ಸಂಧರ್ಭವಿದ್ದರೆ ತೆಗೆದು ಆ ಜಾಗಕ್ಕೆ ಎಲ್ಲಾ ಹಲ್ಲುಗಳು ಸೆಟ್ ಆಗುವಂತೆ ಕುಳ್ಳಿರಿಸಿ , ಚಂದವೇಕೆ ನಮ್ಮನ್ನು ವರ್ಷದೊಳಗೆ ಗುರುತೆ ಸಿಗದಂತೆ ಮಾಡಿಬಿಡುತ್ತಾರೆ. ಕಲಿಕೆಯ ಚಮತ್ಕಾರ ಎಂದರೆ ಇದುವೆ ಇರಬೇಕು! ಹಲ್ಲು ಹುಳುಕು ಆಗದಂತೆ, ಉಬ್ಬು ಹಲ್ಲು ಬರದಂತೆಲ್ಲ ಚಿಕ್ಕಂದಿನಿಂದಲೆ ನಮಗೆ ತಿಳಿದಿರುವ ವಿದ್ಯೆಗಳನ್ನೆಲ್ಲಾ ಮಾಡುತ್ತ ಬರುತ್ತೇವೆ . ಆದರು ಈ ದಂತಕ್ಕೆ ಸಂಬಧಿಸಿದ ಸಮಸ್ಯೆಗಳು ನಮ್ಮ ಪ್ರಯತ್ನ ಮೀರಿ ನಮ್ಮನ್ನು ಆವರಿಸಿಕೊಳ್ಳುತ್ತವೆ ಎಂಬುದು ಸುಳ್ಳಲ್ಲ . ಇದಕ್ಕೆ ನಾನೆ ಜ್ವಲಂತ ಉದಾಹರಣೆ. ನನ್ನಪ್ಪ ಚಿಕ್ಕಂದಿನಿಂದಲೆ ಹಲ್ಲು ನೋವು ಬರಬಾರದೆಂದು ಎರಡು ಹೊತ್ತು ಬ್ರಷ್ ಮಾಡಲೇಬೇಕೆಂದು ತಾಕೀತು ಮಾಡಿದರು. ಅದರಲ್ಲು ರಾತ್ರಿ ಮಲಗುವಾಗ ಉಪ್ಪಿನಲ್ಲಿ ಬ್ರಷ್ ಮಾಡುವುದು ಕಡ್ಡಾಯ . ಈಗಲು ಇದನ್ನು ಪಾಲಿಸುತ್ತ ಬಂದರು ಎರಡ್ಮೂರು ರೂಟ್ ಕೆನಲ್, ಇನ್ನೊಂದು ಕಾಂಪೋಸಿಟ್ ಫಿಲ್ , ಇದರೊಂದಿಗೆ ಒಂದಾದ ಮೇಲೊಂದರಂತೆ ಹಲ್ಲು ಹಾಳಾಗುತ್ತ ಬರುವುದು ನನ್ನ ಬಾಯೊಳಗೆ ಶಾಶ್ವತವಾಗಿಬಿಟ್ಟಿದೆ. ಈ ಹಲ್ಲು ನೋವು ಬಳುವಳಿಯಾಗಿ ಬರುವಂತದ್ದು, ಅತಿಯಾಗಿ ಸಿಹಿ ತಿಂಡಿ ತಿನ್ನುವುದರಿಂದ, ಹಲ್ಲು ಬಂದ ಮೇಲು ಎದೆ ಹಾಲು ಕುಡಿಯುವ ಮಕ್ಕಳಿಗೆ , ಉಪ್ಪು ಹಾಕಿ ಹಲ್ಲುಜ್ಜದಿದ್ದರೆ ಬರುವುದು ಎಂಬುದೆಲ್ಲ ಸ್ವಲ್ಲ ನಿಜವಿದ್ದರು ಉಳಿದಂತೆ ಅಂತೆ ಕಂತೆಗಳ ಸಂತೆ. ಇದಲ್ಲದಿದ್ದರು ಬರುವಂತಹ ಹಲ್ಲು ನೋವು ಬಂದೇ ಬರುತ್ತದೆ. ಸಿಹಿ ತಿಂದ ನಂತರ ಬಾಯಿ ಸ್ವಚ್ಛ ಮಾಡದಿದ್ದರೆ ಮಾತ್ರ ಹೆಚ್ಚಾಗಿ ಬಂದೇ ಬರುತ್ತದೆ.
ಒಂದೇ ಆಸ್ಪತ್ರೆಯಲ್ಲಿ ಎಲ್ಲ ರೋಗದ ಚಿಕಿತ್ಸೆ ಲಭ್ಯವಿದ್ದರು ಕೂಡ , ಹಲ್ಲಿನ ವೈದ್ಯರು ಇರುವುದು ತೀರಾ ವಿರಳ . ಅವರು ಅವರದೆ ಆದ ದವಖಾನೆ ಪ್ರಾರಂಭಿಸಿ ಬೇರೆಯೆ ಇದ್ದುಬಿಡುತ್ತಾರೆ. ಇದಕ್ಕೆ ಲೋಕದೆಲ್ಲೆಡೆ ಹಲ್ಲು ನೋವಿನ ರೋಗಿಗಳು ಜಾಸ್ತಿ ಇರುವುದೆ ಕಾರಣ. ಒಂದೇ ಪಟ್ಟಣದಲ್ಲಿ ಹಲವಾರು ಕ್ಲಿನಿಕ್ ಇದ್ದರು ಅದು ಯಾವಾಗಲು ಜನರಿಂದ ತುಂಬಿಕೊಂಡೆ ಇರುತ್ತದೆ. ಜನ ಹೊತ್ತು ,ಗೊತ್ತು ಮಾಡಿಕೊಂಡೆ ತೆರಳಿದರು ಸಹ ಅಲ್ಲಿ ಕಾಯಲೇಬೇಕಾದ ಪರಿಸ್ಥಿತಿ. ಅದೊರೊಳಗೆ ನುಗ್ಗಿದ ಮೇಲೆ ಅಲ್ಲಿನ ಕತೆ ದೇವರಿಗೆ ಪ್ರೀತಿ. ಸೂಜಿ ಯಾಕೆ , ಹಾರೆ, ಪಿಕ್ಕಾಸು, ಕತ್ತಿ, ಕೊಡಲಿ, ಗರಗಸದಂತಹ ಸಾಮಾಗ್ರಿಗಳ ಚಿಕ್ಕ ಆಕಾರದ ವಸ್ತುಗಳು ನಮ್ಮನ್ನು ಸ್ವಾಗತಿಸುತ್ತವೆ. ಇವುಗಳಿಗೆ ವೈದ್ಯ ಭಾಷೆಯ ಅವುಗಳದ್ದೆ ಆದ ಹೆಸರುಗಳಿವೆನ್ನಿ. ಒಂದೆ ಮಾತಲ್ಲಿ ಹೇಳುವುದಾದರೆ ಈ ಎಲ್ಲಾ ವಸ್ತುಗಳನ್ನು ಕಂಡಾಗಲೆ ಎದೆ ಝಲ್ ಎನಿಸುತ್ತದೆ. ಚಿಕ್ಕ ಮಕ್ಕಳನ್ನು ಪುಸಲಾಯಿಸಿ ಕರೆದೊಯ್ಯುವುದಂತು ಒಂದು ಪವಾಡವೆ ಸರಿ. ಇದಕ್ಕೆ ತಕ್ಕಂತೆ ದಂತ ವೈದ್ಯರು ಮಕ್ಕಳೊಂದಿಗೆ ಮೆತ್ತನೆ ಮಾತನಾಡಿ ಇನ್ನು ಮೆದುವಾದ ಆಸೀನದಲ್ಲಿ ಎತ್ತಿ ಕುಳ್ಳಿರಿಸಿಬಿಡುತ್ತಾರೆ. ಈ ಹಲ್ಲಿನ ಚಿಕಿತ್ಸೆಯಲ್ಲಿ ನಮ್ಮನ್ನು ಆರಾಮದ, ಸುಲಭ ತಿರುಗುವ ಮೃದು ಕುರ್ಚಿಯಲ್ಲಿ ಅರೆ ಮಲಗಿಸಿದಂತೆಯೆ ಕೂರಿಸಿ ಚಿಕಿತ್ಸೆ ನೀಡುತ್ತಾರೆ.ಆದರು ಅಷ್ಟೊಂದು ಮೃದುವಾದ ಹಂಸತೂಲಿಕಾತಲ್ಪದಂತಹ ಆಸೀನದಲ್ಲಿದ್ದರು ಯಾಕೋ ಏನೋ ಮುಳ್ಳಿನ ಮೇಲೆ ಪವಡಿಸಿದಂತೆ ಚಡಪಡಿಸುತ್ತೇವೆ. ಇಡೀ ಬ್ರಹ್ಮಾಂಡವನ್ನೆ ನುಂಗುವಂತೆ ಬಾಯಿ ತೆರೆದು ಕಣ್ಣು ಪಿಳಿ ಪಿಳಿ ಬಿಡುತ್ತ ವೈದ್ಯರ ಮುಖವನ್ನೆ ದೈನ್ಯದಿಂದ ನೋಡುವುದೊಂದೆ ಅಲ್ಲಿ ಉಳಿದಿರುವ ಕೊನೆಯ ದಾರಿ ನಮಗೆ.
ಯಾಕಾದರು ಈ ನೋವು ಹಲ್ಲಿಗೆ ವಕ್ಕರಿಸಿತ್ತೋ ಎಂದು ಮನಸ್ಸಿನಲ್ಲಿ ಶಪಿಸಿಕೊಳ್ಳುತ್ತ ಸುಮಾರು ಅರ್ಧ ಗಂಟೆಯಂತು ಗ್ಯಾರಂಟಿ, ತಪ್ಪಿದ್ದಲ್ಲಿ ಅದಕ್ಕಿಂತ ಹೆಚ್ಚು ಗಂಟೆ ಅನಿವಾರ್ಯವಾಗಿ ಕುಳಿತುಕೊಳ್ಳಲೇಬೇಕು. ಈ ಚಿಕ್ಕ ಬಾಯೊಳಗೆ ಇನ್ನಷ್ಟು ಚಿಕ್ಕ ಹುಳುಕು ಹಲ್ಲನ್ನು ಅದೇನು ಮಾಡುತ್ತಿರುತ್ತಾರೋ ನಮಗಂತು ಊಹಿಸಿಕೊಳ್ಳಲು ಅಸಾಧ್ಯ. ರಭಸವಾಗಿ ಲವಂಗ ನೀರು ಬಿಟ್ಟು ಆಗಾಗ ಸ್ವಚ್ಛ ಗೊಳಿಸುವುದೊಂದು ಅನುಭವಕ್ಕೆ ಬರುತ್ತದೆ. ಹೆಚ್ಚಿನ ಸಲ ನಿಜಿಗೆ ಅನಸ್ತೇಷಿಯ ಚುಚ್ಚುಮದ್ದು ಕೊಟ್ಟು ಚಿಕಿತ್ಸೆ ನೀಡುತ್ತಾರೆ. ಆದರು ನಮ್ಮೊಳಗಿನ ಭಯದ ನೋವು ನೀಗುವುದೆ ಇಲ್ಲ! ಸಣ್ಣ ಹುಳುಕನ್ನು ಕೊರೆದು ದೊಡ್ಡದಾಗಿ ಮಾಡಿ ಅದಕ್ಕೆ ಹಲ್ಲಿಗೆ ಹಾಕುವ ಸಿಮೆಂಟ್ ತುಂಬಿಬಿಡುತ್ತಾರೆ. ರೂಟ್ ಕೆನಲ್ ಸಂಧರ್ಭದಲ್ಲಿ ಬೆಂಕಿಯನ್ನು ಉಪಯೋಗಿಸಿ ಚಿಕಿತ್ಸೆ ನೀಡುತ್ತಾರೆ . ಮೊದಲ ಬಾರಿ ನಾನಿದನ್ನು ಗಮನಿಸಿದಾಗ ಅವಕ್ಕಾಗಿದ್ದೆ. ಕನ್ನಡಿ ಉಪಯೋಗಿಸಿ ನೋಡುವಾಗ ಬಾಯಿಯನ್ನು ಸಾದ್ಯಆದಷ್ಟು ದೊಡ್ಡದಾಗಿಸಬೇಕು . ನಗುವಂತೆಯು ಇಲ್ಲ, ಅಳುವಂತೆಯು ಇಲ್ಲ . ಈಗಂತು ಆವಿಷ್ಕಾರಗಳು ಜಾಸ್ತಿಯಾಗಿ ಬಾಯೊಳಗೆ ಸ್ಕ್ಯಾನಿಂಗ್ ಕೂಡ ಮಾಡುತ್ತಾರೆ. ಒಂದೆರಡು ನಿಮಿಷದಲ್ಲಿ ಹುಳುಕು ಹಲ್ಲಿನ ಬೇರಿನವರೆಗೆ ತಲುಪಿದೆಯೆ ಎಂಬುದು ತಿಳಿದುಬಿಡುತ್ತದೆ. ಇನ್ನು ಏನೇನೋ ಸಲಕರಣೆಗಳನ್ನೆಲ್ಲ ಬಾಯೊಳಗೆ ಹಾಕಿ ಅದೇಗೆಲ್ಲಾ ಬಳಸಿಕೊಳ್ಳುತ್ತಾರೋ ಅದು ಅವರಿಗಷ್ಟೆ ತಿಳಿದಿರುವ ವಿದ್ಯೆ. ಹುಳುಕು ತಳದವರೆಗೆ ಹೋದ ಹಲ್ಲುಗಳಿಗೆ ಸ್ಕ್ರೂ ಅಳವಡಿಕೆಯ ಆವಿಷ್ಕಾರವನ್ನು ಮೊನ್ನೆ ತಾನೆ ಚಲನವಾಣಿಯಲ್ಲಿ ವೀಕ್ಷಿಸಿದೆ. ನಮ್ಮ ದೇಹದ ಪ್ರಮುಖ ಅಂಗವಾದ ಬಾಯೊಳಗಿನ ಸುಂದರ ದಂತಪಂಕ್ತಿಗೆ ಈ ಪರಿಯ ನೋವಿರುತ್ತದೆ ಅದರ ಚಿಕಿತ್ಸೆಗೆ ಭಯದ ಪರಮಾವಧಿಗೆ ತೆರಳಬೇಕು ಎಂಬುದು ಮೊದಲು ತಿಳಿದಿರುವುದಿಲ್ಲ.
ಹಿಂದಿನ ಕಾಲದಲ್ಲಿ ವೈದ್ಯರಲ್ಲಿಗೆ ಹೋಗುವ ಪರಿಪಾಠ ಕಡಿಮೆ ಇದ್ದ ಕಾಲದಲ್ಲಿ ಹಳ್ಳಿಗಳಲ್ಲಿ ಮನೆಮದ್ದು ಮಾಡಿ ಹಲ್ಲು ನೋವು ಶಮನಗೊಳಿಸುತ್ತಿದ್ದರು . ಎಣ್ಣೆಗೆ ಕೆಲವು ಪದಾರ್ಥಗಳನ್ನು ಹಾಕಿ ಕಾಯಿಸಿ ಅದನ್ನು ಕಿವಿಗೆ ಬಿಡುತ್ತಿದ್ದರು. ಕಿವಿಗೆ ಎಣ್ಣೆ ಬಿಟ್ಟರೆ ಹಲ್ಲು ನೋವು ವಾಸಿಯಾಗಿಬಿಡುತ್ತಿತ್ತು! ಹಲ್ಲುನೋವು ಕಿವಿಗೆ ಮಾತ್ರವಲ್ಲ ಕಣ್ಣಿಗು ಸಂಬಂಧವಿರಿಸಿಕೊಂಡಿದೆ. ಹಲ್ಲುನೋವಿನಿಂದಾಗಿ ಕಣ್ಣಿಗು ನೋವು ಬಂದಿರುವುದನ್ನು ನಾನು ಕೇಳಿದ್ದೇನೆ. ಗರ್ಭಿಣಿಯರು ಹಲ್ಲಿನ ಚಿಕಿತ್ಸೆಗೆ ಹೋಗಲೇಬಾರದೆಂದು ಹೇಳುತ್ತಾರೆ . ಇದರಿಂದಲೇ ಹಲ್ಲು ನೋವಿನ ಪರಿಣಾಮ ಹೇಗಿರುತ್ತದೆ ಎಂಬುದು ನಮಗೆ ತಿಳಿಯುತ್ತದೆ. ಹಲ್ಲುನೋವಿಗೆ ಲವಂಗ, ಪೇರಳೆ ಗಿಡದ ಚಿಗುರು ಇವುಗಳನ್ನು ಜಗಿದರೆ ನೋವು ತಕ್ಕ ಮಟ್ಟಿಗೆ ಶಮನಗೊಳ್ಳುತ್ತದೆ ಎಂಬುದು ಎಲ್ಲರಿಗು ತಿಳಿದಿರುವ ವಿಷಯ. ಆದರೆ ಹಳ್ಳಿಗಳಲ್ಲಿ ಲವಂಗದ ರುಚಿಯನ್ನು ಹೋಲುವ ಚಿಕ್ಕ ಹಳದಿ ಕಾಡು ಪುಷ್ಪವೊಂದನ್ನು ಹಲ್ಲಿಗೆ ಇಡುತ್ತಾರೆ. ತತ್ ಕ್ಷಣ ನೋವು ಕೂಡ ಮಾಯವಾಗಿಬಿಡುತ್ತದೆ.
ಡೆಂಟಲ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಚಿಕಿತ್ಸೆಗೆ ಜನ ಎಷ್ಟಿದ್ದರು ಬೇಕಾಗುತ್ತದೆ.ಯಾರೆ ಆದರು ಕಲಿಯುತ್ತಿರುವ ವಿದ್ಯಾರ್ಥಿಗಳ ಬಳಿಗೆ ಹೋಗಲು ಹಿಂದೇಟು ಹಾಕುವುದು ಸಾಮಾನ್ಯ. ಜನರನ್ನು ನೀವೇನು ಹಣ ಕೊಡುವುದು ಬೇಡವೆಂದು ಹೇಳಿ ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಾರೆ. ವಿದ್ಯಾರ್ಥಿಗಳಾದರು ಏನು ಮಾಡಲು ಸಾಧ್ಯ ,ರೋಗಿಗಳು ಸಿಕ್ಕರೆ ಮಾತ್ರ ತಾನೆ ಅವರು ಕಲಿಯುವುದು? ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ತಂದೆಯ ಗೆಳೆಯರೊಬ್ಬರು ಮನೆಗೆ ಬಂದಾಗ ಹೇಳಿದ ಮಾತು ನೆನಪಾಗುತ್ತಿದೆ. ಅವರು ಅಸಾಧ್ಯ ಹಲ್ಲುನೋವಿನಿಂದ ಬಳಲುತ್ತಲೆ ಇದ್ದರು . ಮಗಳು ಬಿಡಿಎಸ್ ಮುಗಿಸಿದ್ದಳೆಂದು ಹುಳುಕಾದ ಹಲ್ಲೊಂದನ್ನು ಅವಳಲ್ಲಿ ಕೀಳಿಸಿದೆ , ಆ ನೋವು ಇನ್ನು ಶಮನಗೊಳ್ಳಲಿಲ್ಲ ಎಂದು ತಮ್ಮ ಉಬ್ಬಿದ ದವಡೆ ಮೇಲೆ ಕೈಯಿರಿಸಿಕೊಂಡರು. ಮಗಳಿಗೆ ಚಿಕಿತ್ಸೆಗೆ ಜನ ಬೇಕೆಂದು ಹಲವು ಸಲ ಅದೇನನ್ನೊ ಮಾಡಿಸಿಕೊಂಡು ಅಸಾಧ್ಯ ನೋವು ತಿಂದೆ ಎಂದು ಹೇಳಿಕೊಂಡರು. ತಂದೆಯ ಪ್ರೀತಿ ಎಂದರು ಇದೆ ಅಲ್ಲವೇ? ನನ್ನ ಗೆಳತಿಯ ಅಕ್ಕ ಕಲಿಯುತ್ತಿರುವಾಗ ನಾನು ಚಿಕಿತ್ಸೆಗೆ ಹೋಗಿ ಬಂದಿದ್ದೆ. ಆಗ ಹುಳುಕು ಏನು ಆಗದಿದ್ದ ಕಾರಣ ‘ಕ್ಲೀನಿಂಗ್ “ ಮಾತ್ರ ಮಾಡಿದರು. ಸ್ವಚ್ಛ ಮಾಡಿ ಹಲ್ಲು ಮಾತ್ರ ಬಿಳುಪಾಗಿ ತುಂಬಾ ಚೆನ್ನಾಗಿ ಕಾಣುತ್ತಿತ್ತು. ವರ್ಷಕ್ಕೊಮ್ಮೆ ಸ್ವಚ್ಛ ಗೊಳಿಸತ್ತಿರಬೇಕು ಎಂಬ ಉಚಿತ ಸಲಹೆಯನ್ನು ನೀಡಿದರು.ಹಲ್ಲುನೋವಿನಿಂದಾಗಿ ಎಷ್ಟೊಂದು ಹಣ ವ್ಯಯಿಸಿದ್ದೇನೆ ಎಂದು ಹೇಳಿದವರನ್ನು ಕೇಳಿದ್ದೇನೆ.
ಹಲ್ಲುನೋವಿನಿಂದ ಇನ್ನೊಂದು ಸಂಕಷ್ಟದ ವಿಚಾರವೆಂದರೆ ಬಾಯಿ ವಾಸನೆ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಬೇರೆ ಕಾರಣಗಳು ಇದ್ದರು ಸಹ ಹಲ್ಲು ನೋವಿನಿಂದಲು ಬರುತ್ತದೆ ಎಂಬುದನ್ನು ಅನುಭವಿಸಿದವರು ಹೇಳಿದ್ದಾರೆ. ನನ್ನ ಆತ್ಮೀಯ ಗೆಳತಿಯೊಬ್ಬಳು ಮದುವೆಗಾಗಿ ನೋಡಿದ ಹುಡುಗನನ್ನೆ ಬಾಯಿ ವಾಸನೆ ಬರುತ್ತದೆ ಎಂಬ ಕಾರಣಕ್ಕೆ ಮದುವೆಯನ್ನೆ ರದ್ದು ಮಾಡಿದ್ದಾಳೆ ಎಂಬ ಸತ್ಯವನ್ನು ನೀವೆಲ್ಲ ಅರಗಿಸಿಕೊಳ್ಳಬೇಕು! ಹಲ್ಲನೋವಿನ ಕಾರಣವನ್ನು ಹುಡುಗ ನೀಡಿದರು ಎರಡ್ಮೂರು ಸಲ ಬೇಟಿಯಾದಗಲೂ ವಾಸನೆ ಬರುತಿತ್ತು ಎಂಬುದು ಅವಳ ವಾದ. ಅದೇನೆ ಇರಲಿ ಬಾಯೊಳಗಿನ ದಂತಕೆ ಈ ಪರಿಯ ಗೌರವ ಇದೆ ಎಂಬುದನ್ನು ನಾವೆಲ್ಲ ಮೆಚ್ಚಲೇಬೇಕು. ಆದರಿಂದ ಪ್ರತಿಯೊಬ್ಬರು ದಂತವನ್ನು ಪ್ರೀತಿಯಿಂದ ಪೊರೆಯುವುದು ಅನಿವಾರ್ಯವಾಗಬೇಕು. ಇತ್ತೀಚೆಗೆ ನನ್ನ ಗೆಳತಿಯೊಬ್ಬಳು ಚಾಕೋಲೇಟ್ ತಿಂದ ಕೂಡಲೆ ನೀರು ಕುಡಿದು ಬಾಯಿ ಸ್ವಚ್ಛಗೊಳಿಸಿಕೊಂಡಳು.ಗಮನಿಸಿ ಕೇಳಿದಾಗ ಸಿಹಿ ಅಲ್ಲಿಯೆ ಉಳಿದುಕೊಂಡರೆ ಹುಳುಕಾಗಿಬಿಡುತ್ತದೆ ಎಂದಳು. ಚಿಕ್ಕಂದಿನಿಂದಲೆ ತಿಂಡಿಪೋತಿಯಾದ ನಾನು ಯಾವಾಗಲೂ ತಿಂಡಿ ತಿಂದು ಹೆಚ್ಚಾಗಿ ಬಾಯಿ ಹಾಗೆ ಇರುತ್ತಿದ್ದದು ನೆನಪಾಗಿ . ನನ್ನ ಹಲ್ಲು ನೋವಿಗೆ ಇದೆ ಕಾರಣವಿರಬಹುದೆ ಎಂದು ಕಸಿವಿಸಿಯಾಯಿತು. ಅವಳ ಹಲ್ಲುಗಳು ಕ್ಯಾವಿಟಿ ಆಗಿದ್ದವು ಎಂಬುದಂತು ಸತ್ಯ!
ಈಗ ಕೊರೋನಾದಿಂದ ಹಲ್ಲನೇಕೆ ಬಾಯಿಯನ್ನು ಮುಚ್ಚಿಕೊಳ್ಳುವ ಪರಿಸ್ಥಿತಿ ಬಂದಿದೆ . ಅದೆಷ್ಟೊ ಜನರು ಬಾಯಿವಾಸನೆಯಿಂದಲು ತಪ್ಪಸಿಕೊಂಡರೆನ್ನಿ. ದಾಳಿಂಬೆ ಬೀಜದಂತೆ ಎಂದು ವರ್ಣಿಸುವ ಸುಂದರ ದಂತಪಂಕ್ತಿಯ ನಗುವಿಗು ಆಸ್ಪದವಿಲ್ಲ. ನಕ್ಕರು ಕಾಣಿಸುವುದಿಲ್ಲ. ಹಲ್ಲನ್ನುಜ್ಜದೆ ಹಾಗೆ ಹೋದರು ಪರವಾಗಿಲ್ಲ ಎನ್ನುವವರು ಇರಬಹುದು . ದುಡ್ಡಿಗನುಸಾರವಾಗಿ ಕಟ್ಟಿಸಿದ ಚಿನ್ನದ ಹಲ್ಲು , ಬೆಳ್ಳಿ ಹಲ್ಲು ಕಾಣಿಸುವುದಿಲ್ಲ ಎಂಬ ಚಿಂತೆಯಲ್ಲಿ ಇದ್ದವರು ಇರಬಹುದು. ಎಲ್ಲರನ್ನು, ಎಲ್ಲವನ್ನು ಗಮನಿಸುವ ಚಿಕ್ಕ ಮಗು ದೊಡ್ಡವರು ಯಾವಾಗಲೂ ಮಾಸ್ಕ್ ಧರಿಸಿಕೊಂಡೆ ಇರುವುದನ್ನು ನೋಡಿ ಬಾಯಿಯನ್ನು ಇದೊಂದು ಖಾಸಗಿ ಸ್ಥಳ ಎಂದು ನಂಬಿಕೊಂಡರು ಆಶ್ಚರ್ಯವಿಲ್ಲ! ಕೊರೋನಾದ ಪರಿಣಾಮದಿಂದ ಮೊದಲಿಗೆ ದಂತವೈದ್ಯರುಗಳೆಲ್ಲ ಕ್ಲಿನಿಕ್ ತೆಗೆಯಬಾರದು ಎಂಬ ಫರ್ಮಾನು ಹೊರಡಿಸಿದರು. ಅದರ ಕಾರಣವು ಎಲ್ಲರಿಗು ತಿಳಿದಿರಬಹುದು. ಕೀಟಾಣು ಬಾಯಿಗೆ ಸೇರಿ ಗಂಟಲಿನ ಮೂಲಕ ಶ್ವಾಸಕೋಶಕ್ಕೆ ಹೋಗುವ ಕಾರಣ ಬಾಯಿಗೆ ಸಂಬಂಧಪಟ್ಟ ಚಿಕಿತ್ಸೆಯನ್ನು ರದ್ದುಪಡಿಸಿದರು. ಈ ಕಾರಣದಿಂದ ಹಲವು ಜನರು ಹಲ್ಲು ನೋವಿನಿಂದ ಯಾತನೆ ಪಟ್ಟಿದ್ದಾರೆ.
ಚಿಕ್ಕ ಮಕ್ಕಳಿಗೆ ಹಲ್ಲು ಕೀಳುವ ಸಂದರ್ಭ ಬಂದಾಗ ಅದೇನೋ ಭಯ ಮಿಶ್ರಿತ ಖುಷಿ .ಹೆತ್ತವರಿಗೆ ಇನ್ನು ಬರುವಂತಹ ಮಕ್ಕಳ ಹಲ್ಲುಗಳನ್ನು ಚೆನ್ನಾಗಿ ನೋಡೊಕೊಳ್ಳಬೇಕೆಂಬ ಅಪೇಕ್ಷೆ. ಹಲ್ಲಿಗೆ ನೂಲು ಕಟ್ಟಿ ಎಳೆಯುವ ಕ್ರಮ ಒಂದಾದರೆ , ಇನ್ನು ಹಲವಾರು ಕ್ರಮಗಳಿವೆ. ತೆಗೆದ ಹಲ್ಲನ್ನು ಕಲ್ಲಿನಡಿಗೆ ಹಾಕಬೇಕು ತಪ್ಪಿದರೆ ಮನೆಯ ಹೆಂಚುವಿನ ಮೇಲೆ ಹಾಕಿ ಹಳೆ ಹಲ್ಲು ಕೊಡುವೆ ಹೊಸ ಹಲ್ಲು ಕೊಡು ಎನ್ನಬೇಕಂತೆ. ಇಂತಹ ವಿಶೇಷವಾದ ಹಲ್ಲು ನಮ್ಮ ಜೀವನದಲ್ಲಿ ಎರಡು ಸಲ ಬರುವುದು ವರವೇ ಸರಿ! ಇಲ್ಲದಿದ್ದರೆ ಐವತ್ತರ ಮೊದಲೇ ನಮ್ಮ ಹಲ್ಲುಗಳೆಲ್ಲ ಉದುರಿ ಖಾಲಿಯಾಗಿಬಿಡುತ್ತಿತ್ತು .ನಮ್ಮ ಗುರುಗಳೊಬ್ಬರು ನಿಮ್ಮ ಹಲ್ಲುಗಳನ್ನೆಲ್ಲಾ ಉದುರಿಸಿಬಿಡುತ್ತೇನೆ ಎನ್ನುತ್ತಿದ್ದರು .ಅಷ್ಟು ಸುಲಭವಾಗಿ ಹಲ್ಲೆಲ್ಲ ಹಾಗೆ ಉದುರಿಹೋಗುವಂತಿದ್ದರೆ ಹೇಗಿರಬಹುದು ಅಂತ ನಾವೆಲ್ಲ ಗುಸು ಗುಸು ಮಾತನಾಡಿಕೊಳ್ಳುತ್ತಿದ್ದವು.
ಪ್ರಥಮ ಚುಂಬನಂ ದಂತ ಭಗ್ನಂ ಎಂಬ ಪ್ರಸಿದ್ಧ ಗಾದೆಯಿದೆ . ಈ ಗಾದೆಯ ಒಳಾರ್ಥ ಹಲ್ಲಿಗೆ ಸಂಬಂಧಪಡದಿದ್ದರು ,ಗಾದೆಯ ಸೃಷ್ಠಿಕರ್ತನ ಬುದ್ಧಿವಂತಿಕೆಗೆ ತಲೆದೂಗಲೇಬೇಕು. ಮೊದಲ ಪ್ರಯತ್ನದಲ್ಲಿ ಸೋತವರಿಗೆ ಹೇಳುವ ಅತಿ ಸೂಕ್ತ ಗಾದೆಯೆಂದರೆ ಇದುವೆ ಆಗಿದೆ. ಗಣಪತಿಯಿಂದ ಪ್ರಾರಂಭವಾದ ದಂತದ ಪುರಾಣ ಕೊನೆಗೆ ಗಾದೆಯಲ್ಲು ತನ್ನ ಕೈ ಚಳಕ ತೋರಿಸಿದೆ . ಮೂವತ್ತೆರಡು ದಂತಪಂಕ್ತಿಯ ನಮ್ಮ ಬಾಯಿ ಒಂದು ವರದಾನವೆಂದರು ಸರಿ. ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿಗಳಿಗು ಅವರ ಅನುಕೂಲಕ್ಕೆ ತಕ್ಕಂತಹ ಹಲ್ಲುಗಳೆಂಬ ವಿಶಿಷ್ಟತೆಯಿದೆ. ಹಲ್ಲಿನ ದೈನಂದಿನ ಚಟುವಟಿಕೆಗಳ ನಮ್ಮರಿವಿನ ಲೋಕದಲ್ಲಿ ದಂತಗಳನ್ನು ಅಲಕ್ಷಿಸದೆ ರಕ್ಷಿಸುತ್ತ, ಸಾಗುವುದು ಒಂದು ಹೊಣೆ ಅಲ್ಲವೇ?
–ಸಂಗೀತ ರವಿರಾಜ್
ಧನ್ಯವಾದಗಳು ಪಂಜು