ತ್ರಿಪದಿ ಕಥೆ: ಶುಭಶ್ರೀ ಭಟ್ಟ, ಬೆಂಗಳೂರು

shubhashree

#ತ್ರಿಪದಿ_ಕಥೆ-1: ನಕ್ಷತ್ರ
ಮನೆಯವರೆಲ್ಲರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದ್ದರು ವಿಶ್ವಾಸ-ವಾಣಿ. ಆರತಿಗೊಬ್ಬ ಮಗಳು-ಕೀರ್ತಿಗೊಬ್ಬ ಮಗಳೆಂಬಂತೆ ಸುಂದರ ಕುಟುಂಬವಾಗಿತ್ತು. 'ಊರಕಣ್ಣೋ ಮಾರಿಕಣ್ಣೋ' ಯಾರ ಕಣ್ಣೋ ಗೊತ್ತಿಲ್ಲ, ದೃಷ್ಟಿಬಿತ್ತು ಅವರ ಕುಟುಂಬಕ್ಕೆ. ಇದ್ದಕ್ಕಿದ್ದಂತೆ ವಾಣಿ ಹೃದಯಾಘಾತದಿಂದ ನಿಧನಳಾದಳು. ಆಗ ಮಗನಿಗಿನ್ನೂ ಒಂದುವರೆ ವರುಷ. ಮಗಳಿಗೆ ಮೂರು ವರುಷ. ಸಾವೆಂದರೆನೆಂದು ತಿಳಿಯದ ವಯಸ್ಸಲ್ಲಿ ಅಮ್ಮನ ಕಳೆದುಕೊಂಡರು. ಎಲ್ಲಾದ್ರಲ್ಲೂ ವಿಶ್ವಾಸ ಕಳೆದುಕೊಂಡ ವಿಶ್ವಾಸ ಕರ್ತವ್ಯದಿಂದ ವಿಮುಖನಾದ, ಮಕ್ಕಳು ಅಜ್ಜಿಮನೆ ಸೇರಿದರು. 
ನಕ್ಷತ್ರವಾದ ಅಮ್ಮನ್ನ ಇನ್ನೂ ಹುಡುಕುತಿಹರು ಮಕ್ಕಳು
ನೀಲಿಬಾನ ತೇರಿನಲ್ಲಿಹುದು ಸಹಸ್ರಾರು ನಕ್ಷತ್ರಗಳು
ಅಮ್ಮನಾರು ಅದರಲ್ಲಿ?ಉತ್ತರವಿಲ್ಲ ಯಾರಲ್ಲೂ||

#ತ್ರಿಪದಿ_ಕಥೆ-2: ಮಾನವಿಯತೆ
ಹೋಟೆಲ್ ಬಾಗಿಲಲ್ಲೊಬ್ಬ ವೃದ್ಧೆ ಬಿಕ್ಷುಕಿ ಊಟದ ತಟ್ಟೆಯನ್ನೇ ಆಸೆಗಣ್ಣಿಂದ ನೋಡುತ್ತಿದ್ದಳು. ಹೊರಗಡೆ ಸುರಿಯುವ ಧಾರಾಕಾರ ಮಳೆಗವಳು ತೋಯ್ದು ತೊಪ್ಪೆಯಾಗಿದ್ದಳು. ಹೋಟೆಲ್ ಮಾಣಿ ಅವಳನ್ನು ಒಳಗೆ ಬರಲೂ ಬಿಡುತ್ತಿರಲಿಲ್ಲ. ಅವಳನ್ನು ನೋಡಿದ ಮಾಲಿಕ ಮಾಣಿಗೆ ಬೈದು ಬಿಸಿಯಾದ ಊಟ ತರಲು ಕಳಿಸಿದ. ಆ ಅಜ್ಜಿಯನ್ನು ಒಳಕರೆದು ತಾನೇ ಕೈಯಾರೆ ಊಟ ಬಡಿಸತೊಡಗಿದ. ಖುಷಿಯಿಂದ ಅಜ್ಜಿ ಕಣ್ಣೀರಾಗುತ್ತಲೇ ಹೊಟ್ಟೆ ತುಂಬಾ ಊಟ ಮಾಡಿ ವಾರದ ಹಸಿವ ನೀಗಿಸಿಕೊಂಡಳು. ಮಾಲಿಕ ಅಜ್ಜಿಗೆ ಇನ್ನು ಮೇಲೆ ದಿನವೂ ಇಲ್ಲಿಗೆ ಊಟಕ್ಕೆ ಬರಬೇಕೆಂದು ಹೇಳಿ ಬಿಕ್ಷುಕಿ ಅಜ್ಜಿಯನ್ನು ಕಳುಹಿಸಿಕೊಟ್ಟ. ಮಾಲಿಕನಿಗೆ ಎಲ್ಲವೂ ಎಲ್ಲರೂ ಇದ್ದು ಕುಷ್ಠರೋಗಿಯಾಗಿದ್ದಕ್ಕೆ ಮನೆಯಿಂದ ಹೊರದೂಡಲ್ಪಟ್ಟ ಅಮ್ಮನ ನೆನಪಾಗಿ ಕಣ್ಣಂಚು ಒದ್ದೆಯಾಗಿತ್ತು. 
ಅರಿವಿಲ್ಲದೇ ಬಾಲ್ಯದೀ ಕಳೆದುಕೊಂಡ
ಅಮ್ಮ ಬಿಕ್ಷುಕಿಯಲ್ಲಿ ಮತ್ತೆ ಕಂಡಳು
ಸ್ವರ್ಗದಲ್ಲಿಹ ಅಮ್ಮ ತೃಪ್ತಿಗೊಂಡು ನಕ್ಕಳು||

#ತ್ರಿಪದಿ_ಕಥೆ-3: ಶಬರಿ
ರತ್ನಮ್ಮನಿಗೆ ಇತ್ತಿಚಿಗೆ ಸರಿಯಾಗಿ ಕಣ್ಣು ಕಾಣಿಸದೇ ನಡೆಯುವಾಗ ಎಡವುತ್ತಲೇ ಇರುತ್ತಿದ್ದರು. ಅದಕ್ಕೆ ಕೆಲಸದಾಳು ರೂಪ ಅವರ ಹಿಂದೆ-ಮುಂದೆ ಓಡಾಡುತ್ತಿದ್ದಳು. ತುಂಬಾ ಪ್ರೀತಿಸುವ ಮಕ್ಕಳು-ಸೊಸೆಯಂದಿರು, ಕೈಕಾಲಿಗೆ ಎಡತಾಗುವ ಮೊಮ್ಮಕ್ಕಳು, ಎಲ್ಲಾದಕ್ಕೂ ಕೆಲಸದವರೂ, ಸಮಯಕ್ಕೆ ಸರಿಯಾಗಿ ತಯಾರಾಗುವ ರುಚಿರುಚಿಯಾದ ತಿಂಡಿತಿನಿಸು ಹೀಗೆ ಯಾವುದಕ್ಕೂ ಕೊರತೆಯಿರಲಿಲ್ಲ. ಆದರೂ ಅವರ ಕಾಯುವಿಕೆ ನಿರಂತರವಾಗಿತ್ತು. ಅವರೇನೇ ಮಾಡುತ್ತಿದ್ದರೂ, ಅವರ ಕಣ್ಣೊಂದು ಬಾಗಿಲನೆಡೆಗೆ ನೆಟ್ಟಿರುತ್ತಿತ್ತು. ಯಾರೇ ಬಂದರೂ ರತ್ನಮ್ಮ ಓಡಿ ಬಂದು ಬಾಗಿಲನ್ನು ಸಂಭ್ರಮದಿ. . . ಂದ ತೆಗೆದು ನಿರಾಶರಾಗುತ್ತಿದ್ದರು, ಅದರ ಹಿಂದೆ ಮನಯವರೆಲ್ಲರ ನಿಟ್ಟಿಸಿರು ಗಾಳಿಯಲ್ಲೆಲ್ಲೋ ಕಾಣದೇ ಮರೆಯಾಗುತ್ತಿತ್ತು ಯಾರಿಗೂ ಕಾಣದೆ. 
ತಮ್ಮ ಪ್ರಿಯ ಹೆಂಡತಿಗೆ ಸೀರೆತರಲು 
ಹೋದ ಪತಿ ಬಂದಿದ್ದು ಹೆಣವಾಗಿ
ಅದ ನಂಬದೇ ಕಾಯುತ್ತಿದ್ದರಿವರು ಶಬರಿಯಂತೆ||

#ತ್ರಿಪದಿ_ಕಥೆ-4 : ಅಪ್ಪ-ಮಗ
ಹುಟ್ಟಿದಾಗಲಿನಿಂದ ಅಮ್ಮನ ಮಗನಾಗಿ ಬೆಳೆದ ಸೂರ್ಯನಿಗ್ಯಾಕೋ ಅಪ್ಪನ ಮೇಲೆ ಪ್ರೀತಿ-ಮಮತೆಯೆಲ್ಲ ಅಷ್ಟಕಷ್ಟೆ. ಸೇನೆಯಲ್ಲಿದ್ದು ನಿವೃತ್ತಿಯಾದರೂ ಅಪ್ಪನ ಶಿಸ್ತು ಪಾಲನೆ ಅವನಿಗೆ ನುಂಗಲಾರದ ಬಿಸಿತುಪ್ಪ. ಅಪ್ಪ ಏನೇ ಮಾಡಿದ್ರೂ ಅವನಿಗೆ ಸಹನೆಯಾಗುತ್ತಿರಲಿಲ್ಲ, ಅಪ್ಪನ ಕಂಡರೆ ಬರೀ ಸಿಡಿಮಿಡಿ. ಅದೊಂದು ದಿನ ಅಮ್ಮ ಅವರ ತವರುಮನೆಗೆ ಹೋದ ಸಮಯ. ಮನೇಲಿದ್ರೆ ಅಪ್ಪನ ಕಾಟ ಬೇಡವೆಂದು ಅಪ್ಪನಿಗೆ ತಿಳಿಸದೇ, ಗೆಳೆಯರ ಗುಂಪಿನ ಜೊತೆ ತನ್ನ ಹೊಸ ಬೈ. . . ಕಿನಲ್ಲಿ ಪ್ರವಾಸ ಹೊರಟಿದ್ದ ಸೂರ್ಯ. ಇತ್ತ ಅಪ್ಪ ಮಗ ಬರುವನೆಂದು ಊಟಕ್ಕೆಲ್ಲಾ ತಯಾರಿ ಮಾಡಿ ಕಾಯುತ್ತಿದ್ದಾಗ ಮಗನಿಗೆ ಆಕ್ಸಿಡೆಂಟ್ ಆಗಿದೆಯೆಂದು ಆಸ್ಪತ್ರೆಯಿಂದ ಟೆಲಿಪೋನ್ ಬಂತು. 

ಆಸ್ಪತ್ರೆಯಿಂದ ಮರಳಿ ಬರುವಾಗ 
ಮಗನಲ್ಲಿ ಮತ್ತೆ ಅಪ್ಪನ ರಕ್ತ ಹರಿಯುತಿತ್ತು
ಅಪ್ಪನಿಗೆ ಹೊಸಜೀವನ ಸಿಕ್ಕಿತ್ತು||

#ತ್ರಿಪದಿ_ಕಥೆ-5 : ಅವಳು
ಭೂಮಿಯಷ್ಟೇ ಸಹನೆ, ತಾಳ್ಮೆಯ ಅಪರಾವತಾರ. ಅವಳು ಎಲ್ಲರೊಡನೆ ಮಾತೃತ್ವದ ಭಾವನೆಯಲ್ಲಿ ಒಡನಾಡುತ್ತಿದ್ದಳು. ಅದೊಂದು ದಿನ ಎಂದಿನಂತೆ ಅವಳು ದಿನಸಿ ತರಲು ಶೆಟ್ಟರ ಅಂಗಡಿಗೆ ಬಂದಳು. ತಿಂಗಳ ದಿನಸಿಯನ್ನೆಲ್ಲಾ ಆರಿಸಿಟ್ಟ ಮೇಲೆ ಶೆಟ್ಟರು ಕೆಲಸದ ಹುಡುಗನನ್ನು ಅವಳ ಜೊತೆಗೇ ಮನೆಗೆ ಕಳಿಸುತ್ತೆನೆಂದರು. ಆ ಕೆಲಸದ ಹುಡುಗನಿಗೆ ತನ್ನೆಡೆ ನೋಡಿ ಮುಗುಳುನಗುವ ಅವಳ ಕಂಡರೆ ಅದೇನೋ ಆಕರ್ಷಣೆ, ಸೆಳೆತ. ಶೆಟ್ಟರು ಹೇಳುವುದೇ ತಡ, ಮಾಡುತ್ತಿದ್ದ ಕೆಲಸ ಬಿಟ್ಟು ಅವಳ ಹಿಂದೆ ಹೊರಟ. ಅವಳ ನಿಲುವು, ನಿತಂಬ, ಸೊಂಟಗಳನ್ನು ಕಣ್ಣಲ್ಲೇ ಅಳೆಯುತ್ತಾ, ಮನಸ್ಸಲ್ಲೇ ಕೊಳಕು ಮಂಡಿಗೆ ತಿನ್ನುತ್ತಾ ಹಿಂಬಾಲಿಸಿದ. ಅವಳು ಮನೆ ಬಾಗಿಲು ತೆರೆದು ಒಳಕರೆದಳು. ಅವಳ ಮನೆ ಹೊಕ್ಕಿದ್ದೆ ಅವ ಮೂಕಸ್ತಬ್ಧ, ಕಣ್ಣಂಚಲ್ಲಿ ನೀರು, ಮನದಲ್ಲಿ ಹೇಳಲಾಗದ ವೇತನೆ, ಪಾಪಪ್ರಜ್ನೆ. . ಕಾರಣ ಅವಳು ಅದೇಷ್ಟೋ ಬುದ್ಧಿಮಾಂದ್ಯ ಮಕ್ಕಳಿಗೆ ತಾಯಾಗಿದ್ದಳು, ಅದರಲ್ಲಿ ಅವನ ಅಪ್ಪ-ಅಮ್ಮ ದಾರಿಯಲ್ಲಿ ಬಿಟ್ಟುಹೋದ ತಮ್ಮನೂ ಇದ್ದ. 
ಅವನು ಪಾಪಪ್ರಜ್ನೆಯಿಂದ ಬಳಲಿ
ಕೊಳಕು ಮನವ ಬಿಡದೇ ಶಪಿಸಿದ ಮರುಕ್ಷಣ
ಅವಳಿಗೆ ಅವ ಮಗುವಾಗಿದ್ದ ಮತ್ತೊಮ್ಮೆ||

#ತ್ರಿಪದಿ_ಕಥೆ-6: ಅವನು-ಅವಳು
ಅವನು ಆಫೀಸ್ ಕೆಲಸ ಮುಗಿಸಿ ಮನೆಗೆ ಬರುವಾಗಲೇ ಶುರುವಗಿತ್ತು ಚಿಟಿಪಿಟಿ ಮಳೆ. ಬಸ್ಸಿಂದಿಳಿಯುವಾಗ ಸೋನೆಸುರಿಯುತ್ತಿತ್ತು, ಸುತ್ತ ಕತ್ತಲಾಗತೊಡಗಿತ್ತು. ಕೈಯಲ್ಲಿರುವ ಕೊಡೆಯ ಬಿಡಿಸಲಾಗದೇ, ಅಲ್ಲೇ ಇದ್ದ ಆಲದಮರದಡಿ ಓಡೀ ಬಂದು ನಿಂತನವ. ಪಕ್ಕ ಕಣ್ಣಾಡಿಸಿದರೆ ತಿಳಿಗುಲಾಬಿ ಬಣ್ಣದ ಸೀರೆಯನ್ನುಟ್ಟು, ಉದ್ದನೆಯ ಜಡೆಬಿಟ್ಟು, ಮಳೆಯ ಛಳಿಗೆ ನಡಗುತ್ತಾ ನಿಂತಿದ್ದಳವಳು. . ಜಿಂಕೆಕಂಗಳ ಅವಳಿಗೆ ಇವನು ಮರುಳಾದ ಮರುಕ್ಷಣ ಇವನ ಕೊಡೆ ಅವಳ ಬಳಿಯಿತ್ತು. 
ಸುರಿಯುತ್ತಿತ್ತು ವರ್ಷಧಾರೆ ಸೋನೆಸುರಿದು. . . 
ನೆನೆಯುತ್ತಲಿದ್ದನವ ಕೊಡೆಯಡಿಯಿದ್ದಳವಳು
ವರ್ಷ ಮುಗಿದಮೇಲೆ ಅವರಿಗಾಯ್ತು ಜವಳಿ ಮಕ್ಕಳು||

#ತ್ರಿಪದಿ_ಕಥೆ-7: ಅಂಗವಿಕಲತೆ 
ಸಾಕ್ಷಾತ್ ಭೂರಮೆಯಂತೆ ತಂಪಾದ-ಇಂಪಾದ ವ್ಯಕ್ತಿತ್ವ ಭೂಮಿಯದು. ಕಿಟಕಿಯಲ್ಲಿ ಕೂತು ತನ್ನಷ್ಟಕ್ಕೆ ತಾನು ಹಾಡುವಂತೆ ಆಲಾಪ ಮಾಡುತ್ತಿರುವ ಭೂಮಿಯನ್ನು ಆಕಾಶ್ ದಿನವೂ ನೋಡುತ್ತಿದ್ದ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆಂಬ ವ್ಯಕ್ತಿತ್ವದ ಭೂಮಿಗೆ ಆಕಾಶ್ ಮರುಳಾಗಿದ್ದ. ಅವರಿಬ್ಬರ ನಡುವೆ ಕಣ್ಣಲ್ಲೇ ಸಂಭಾಷಣೆಯಾಗುತ್ತಿತ್ತು. ಅವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುವುದ ಮನಗಂಡು ಮನೆಯವರೆಲ್ಲಾ ಒಮ್ಮತದಿಂದ ಒಪ್ಪಿ ಮದುವೆ ಮಾಡಿ. . . ಸಿದ್ದರು. ತದನಂತರ ಎಲ್ಲವೂ ಸುಖಾಂತ್ಯ. . . . 

ಅವಳಿಗವನು ಊರುಗೋಲಾದ
ಅವನಿಗವಳು ಭಾಷೆಯಾದಳು
ಪ್ರೇಮಕ್ಕೆ ಅಂಗವೈಕಲ್ಯವಿರಲಿಲ್ಲ||

#ತ್ರಿಪದಿ_ಕಥೆ-8: ಅನಾಥರು
ತಂಬಾ ಅನುಕೂಲವುಳ್ಳ ಕುಟುಂಬದ ಸುಂದರ ದಂಪತಿಗಳವರು. ಯಾವುದಕ್ಕೂ ಕೊರತೆಯಿರದಿದ್ದರೂ, ಮಗುವಿಲ್ಲದ ಜೀವನ ಖಾಲಿಯೆನಿಸತೊಡಗಿತ್ತು. ಅವರ ಹೃದಯ ವೈಶಾಲ್ಯತೆಯಿಂದ ಅನಾಥಾಶ್ರಮದ ಮುದ್ದು ಮಗುವೊಂದು ಅವರ ಮಡಿಲು ತುಂಬಿತ್ತು. ಅನಾಥಾಶ್ರಮದಲ್ಲಿ ಹುಟ್ಟಿದವನೆಂಬ ನೆನಪೇ ಬರದಂತೆ ಮುದ್ದಾಗಿ ಸಾಕಿದರು. ಆದರೆ ದುರದೃಷ್ಟವಶಾತ್ ಕೊನೆಗೂ ಅವನಿಗೆ ತಾನು ಅನಾಥಾಶ್ರಮದಲ್ಲಿ ಬೆಳೆದ ನೆನಪೇ ಬರಲಿಲ್ಲ. . 

ಅವನು ಹುಟ್ಟಿದ್ದು ಅನಾಥಾಲಯದಲ್ಲಿ. . . 
ಬೆಳೆದದ್ದು ಶ್ರೀಮಂತ ಹೃದಯುವುಳ್ಳವರ ಮನೆಯಲ್ಲಿ
ಸಾಕಿದವರನ್ನೇ ಅವನು ನೂಕಿದ್ದು ವೃದ್ಧಾಶ್ರಮದಲ್ಲಿ||

-ಶುಭಶ್ರೀ ಭಟ್ಟ, ಬೆಂಗಳೂರು
 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x