ತುರುಬಿಗೆ ತರುಬಿದ ಮನಸು: ನಾಗರಾಜ ಅಂಗಡಿ


ನಾನು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಕನ್ನಡ ಪಾಠ ಮಾಡುತ್ತಿದ್ದೆ. ಅದು ಚಂದ್ರಶೇಖರ ಕಂಬಾರವರ ಆಹ್ವಾನವೆಂಬ ಪದ್ಯವನ್ನು  ವಿಶ್ಲೇಷಿಸುತ್ತಿರುವಾಗ ಆ ಪದ್ಯದಲ್ಲಿಯ ಒಂದು ಸಾಲು  ಹಳೆಯ ಪ್ರಕೃತಿಯ ತುರುಬು ಜಗ್ಗಿ ಆಚೆಗೆ ನೂಕಿ ಎಂಬುದು ಗಕ್ಕನೆ ನನ್ನ ಮನಸ್ಸು ತರುಣಿಯ ತುರುಬಿಗೆ ವಾಲಿಸಿತು. ಪಾಠವನ್ನು ಮುಗಿಸಿ ಬಂದ ಮೇಲೆ ತುರುಬಿನ ಬಗ್ಗೆಯೇ ಚಿಂತೆಯೇ ಶುರುವಾಯಿತು.

ಹಾಗೆ ನೋಡಿದರೆ ಪಂಪನಿಂದ ಹಿಡಿದು ಕುವೆಂಪುವರೆಗೆ ಕೂದಲಿನ ಬಗ್ಗೆ ಬರೆಯದವರೇ ಇಲ್ಲವೆಂದು ಹೇಳಬೇಕು. ನಾರಿಗೆ ಗುಣವೇ ಶೃಂಗಾರವೆಂಬಂತೆ ನಾರಿಗೆ ಕೇಶವೇ ಶೃಂಗಾರವೆಂದು ಹೇಳಬಹುದು. ನಾರಿಗೆ ಕೂದಲು ಇರದಿದ್ದರೆ ಆಕೆಯ ಅಂದದ ಮುಖಕ್ಕೆ ಕುಂದೇ ಎಂದು ಹೇಳಬೇಕು. ನನ್ನ ದೃಷ್ಟಿಯಂತೂ ಯಾವಾಗಲೂ ಮಹಿಳೆಯ ಕೂದಲ ಮೇಲೆಯೇ ನಿಟ್ಟಿರುತ್ತದೆ. ಎಡಕ್ಕೆ ಬೈತಲೆ ಬಲಕ್ಕೆ ಬೈತಲೆ,ನಡುವೆ ಬೈತಲೆ ಇಲ್ಲದೆ ಸಿಮೆಂಟ್ ರೋಡಿನ ಮೂರು ದಾರಿಯಂತೆ ನಾನಾ ರೀತಿಯಲ್ಲಿ ಕೇಶ ವಿನ್ಯಾಸ ಮಾಡಿಕೊಂಡಿರುತ್ತಾರೆ.

ತಲೆಗೂದಲೆಂದರೆ ಮಹಿಳೆಯರಿಗೆ ಕಿರೀಟವಿದ್ದಂತೆ. ಈ ¸ಸ್ತ್ರೀಯ ತಲೆಯ ಕೇಶದ ಬಗ್ಗೆ ನಮ್ಮ ಕವಿಗಳು. ಲೇಖಕರು ಬರೆಯದವರೇ ಇಲ್ಲವೆಂದು ಹೇಳಿದರೆ ತಪ್ಪಾಗಲಾರದು. ಕೇಶವನ್ನು ಒಪ್ಪ ಓರಣವಾಗಿ ಬಾಚಿಕೊಂಡು ಹೂ ಮುಡಿದುಕೊಂಡು ಬಂದು ನಿಂತಾಗ ಎಂಥಹ ಅರಸಿಕನೂ ತುಂಬಾ ತುಂಟ ರಸಿಕನಾಗಿ ಬಿಡುತ್ತಾನೆ. ಆ ಕೇಶದ ವಿನ್ಯಾಸ ಮನಸ್ಸನ್ನೂ ತರುಬಿ ನಿಲ್ಲಿಸಿ ಬಿಡುತ್ತದೆ. ಈಗಂತೂ ಕೇಶವಿನ್ಯಾಸಗಳ ಪುಸ್ತಕಗಳೇ ಬಂದಿವೆ. ಗಲ್ಲಿ ಗಲ್ಲಿಗೂ ಬ್ಯೂಟಿ ಪಾರ್ಲರಗಳು ಹೀಗಾಗಿ ಕೇಶ ವಿನ್ಯಾಸ ವೈವಿಧ್ಯತೆಯನ್ನು   ಹೊಂದುತ್ತಲೇ ನಡೆದಿದೆ. ಮಹಿಳೆಗೆ ಕೇಶ ವಿನ್ಯಾಸವಿರದಿದ್ದರೆ ಅದೊಂದು ಶಾಪವೆಂದೇ ಭಾವಿಸುತ್ತಾರೆ. ಆಕೆ ಎಷ್ಟು ಚೆಲುವೆಯಾಗಿದ್ದರೂ ಬೋಳು ತಲೆ ಸೌಂದರ್ಯವನ್ನು ಹಾಳುಮಾಡಿಬಿಡುತ್ತದೆ. ಹೀಗಾಗಿ ಕೇಶವಿರದ ಮಹಿಳೆಯರಿಗೆ ಇದೊಂದು ಕ್ಲೇಶವೆಂದೇ ಹೇಳಬೇಕು.

ನಾನೂ ಪ್ರಾಯದಲ್ಲಿ ತುಂಬಾ ಸುಂದರನಾಗಿದ್ದೆ ( ನನ್ನ ೩೦ ವರ್ಷದ ದಿಂದ ಫೋಟೋ ನೋಡಿರಿ) ಅಂದಾಗ ಸುಂದ ಮಹಿಳೆಯನ್ನು, ಸಂಗಾತಿಯನ್ನು ಅರಸುವದು  ಸ್ವಾಭಾವಿಕವಲ್ಲವೇ? ಅಂತೂ ಕನ್ಯಾನ್ವೇಷಣೆ ಆರಂಭವಾಯಿತು. ಕನ್ಯೆಯ ಮನೆಗೆ ಹೋಗಲು  ಒಬ್ಬ ಹಿರಿಯ ಬೇಕು. ಒಬ್ಬ ಗೆಳೆಯಬೇಕು, ಒಬ್ಬ ಸಂಬಂಧಿ ಹೀಗೆ ನಾಲ್ಕೂ ಜನ ಕೂಡಿ ಹೋದೆವು. ಕನ್ಯಾ ಬಂದಂತಾಯಿತು. ಔಪಚಾರಿಕವಾಗಿ ಮಾತುಗಳಾದವು. ………ಕೇಶದ ಮೇಲೆಯೇ ಇತ್ತು  ಒತ್ತಾಗಿ ಕಪ್ಪಾಗಿ ತುಂಬಾ ಸಮೃದ್ಧವಾಗಿ ಬೆಳೆದಿದ್ದವು. ಕೆ.ಎಸ್.  ನರಸಿಂಹಸ್ವಾಮಿಯವರು ತಮ್ಮ ಕವನದಲ್ಲಿ  ಬರೆದಂತೆ ಆ ಸಾಲುಗಳು ನೆನಪಿಸಿದವು. ಅವಳೊಮ್ಮೆ ಹೆರಳ ಕೆದರಿ ಕಪ್ಪು ಕರುಳಿನ ಬೆನ್ನ ಮೇಲೆಲ್ಲಾ ಹರಡಿದರೆ ದೂರದ ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ ಎಂಬುದು ನೆನೆದು ಮನಸ್ಸಿಗೆ ಕೂದಲು ತುಂಬಾ ಮೆಚ್ಚಿಗೆಯಾದವು. ನಾವು ಮನೆಗೆ ಬಂದೆವು. ಕನ್ಯೆಯ ಬಗ್ಗೆ ಚರ್ಚೆ ನಡೆಯಿತು.

ಹಿರಿಯರು ನನ್ನ ಅಭಿಪ್ರಾಯ ಕೇಳಿದಾಗ ನಾನು ಆ ಕನ್ಯಾ ಒಪ್ಪಿಗೆ ಎಂದು ಹೇಳಿದಾಗ. ಆ ಹಿರಿಯರು ತಟ್ಟನೆ – ಎ- ಮಳ್ಳಾ  ಆ ಹುಡುಗೀನ, ಮದುವೆ ಆಗೀದಿ. ನಿನ್ನ ಪಗಾರ ಆ ಹುಡುಗಿ ತಲೆಗೂದಲಕ್ಕ ಕೊಟ್ರಿ ಎಣ್ಣೆಗೆ ಸಾಲಾಕಿಲ್ಲ ತಿಳೀತೇನು? ಎಂದಾಗ ನಾನು  ಪೆಚ್ಚು ಮೋರೆ ಹಾಕಿಕೊಂಡು ತೆಪ್ಪಗೆ ಕುಳಿತುಕೊಳ್ಳಬೇಕಾಯಿತು. ಕಡೆಗೂ ಹೋದಾಗ ಅಂಗಲಾಗಿ ಬೆಳೆದಯ ಜ್ವಾಳದ ಬೆಳೆಯಂತೆ ತಲೆಗೂದಲಿರುವ ಹೆಣ್ಣನ್ನೇ ಗಂಟು ಹಾಕಿದರು. ಈಗಂತೂ ನನ್ನ  ಮಡದಿಯ ತಲೆಯಲ್ಲಿ  ನನ್ನ ಕೃತಿಗಳಷ್ಟು ಮಾತ್ರ  ಕೂದಲುಗಳಿವೆ. ಅಂತ, ನಾನು ಹೊರಗಿನ ಮಹಿಳೆಯರ ಕೂದಲನ್ನು ನೋಡಿಯೆ ಸಂತೋಷ ಪಡುವಂತಾಯಿತು.

ಹಾಗೆ ನೋಡಿದರೆ ಈ ಕೇಶದ ಬಗ್ಗೆ ರಾಮಾಯಣ- ಮಹಾಭಾರತ  ದೊರೆಯುತ್ತದೆ.  ಸೀತಾ ಸ್ವಂಯವರವಂತೂ ಎಲ್ಲರಿಗೂ ಗೊತ್ತೆ ಇದೆ.  ಸೀತೆಯನ್ನು ಪಡೆಯಬೇಕಾದರೆ ಶಿವಧನಸ್ಸನ್ನು ಎತ್ತಲೇಬೇಕು ಅನೇಕ ತರುಣ ರಾಜರು ಮತ್ತು ರಾವಣನೂ ಆಗಮಿಸಿದ್ದರು. ಇವರಾರಿಗೂ ಶಿವಧನಸ್ಸನ್ನು  ಎತ್ತಲಾಗಲಿಲ್ಲ. ಕೊನೆಗೆ ಶ್ರೀರಾಮ ಚಂದ್ರ ಬಂದು ಎತ್ತಲು  ಹೋದಾಗ ಸಾಧ್ಯವಾಗಲಿಲ್ಲ. ನಂತರ ದೂರದಲ್ಲಿ  ಸೀತೆಯು ಹೂವಿನ ಜಡೆ ಹಾಕಿಕೊಂಡು ಲಕ್ಷಣವಾಗಿ ಕುಳಿತಿರುವದನ್ನು ಕಂಡಾಗ ಒಮ್ಮೆಲೆ ಸ್ಫೂರ್ತಿ ಉಕ್ಕಿ ಧನಸ್ಸನ್ನು ಲೀಲಾಜಾಲವಾಗಿ  ಎತ್ತಿದಂತೆ ಇದು ಸೀತೆಯ ಕೇಶದ ಪ್ರಭಾವವೆಂದೇ ಹೇಳಬೇಕು.

ಮಹಾಭಾರತದಲ್ಲಿಯೂ ಕುಮಾರವ್ಯಾಸನು ದ್ರೌಪದಿಯ ತಲೆಗೂದಲನ್ನು  ತುಂಬಾ ಮನೋಜ್ಞವಾಗಿ ವರ್ಣಿಸಿದ್ದಾನೆ. ಕರಿಮೋಡಕ್ಕೆ ಹೋಲಿಸುತ್ತ ತುಂಬಾ ಸಮೃದ್ಧವಾದ  ಕೂದಲುಗಳು ಎಂದು ಬಣ್ಣಿಸಿದ್ದಾನೆ. ಅರ್ಜುನ ಮತ್ಸ್ಯ ಯಂತ್ರವನ್ನು  ಬೇಧಿಸಲು ಬಂದಾಗ ದ್ರೌಪದಿಯ ಕಡೆಗೊಮ್ಮೆ ದೃಷ್ಟಿಯಿಟ್ಟು ನೋಡಿದ ಆಕೆಯ ಬೆನ್ನ ಮೇಲೆ ತುಂಬಾ ಕೂದಲುಗಳು  ಹಕಕೊಂಡು ಮಿರಿ ಮಿರಿ ಮಿಂಚುತ್ತಿದ್ದವು. ಕೂಡಲೇ ಧನಸ್ಸು ಎತ್ತಿ ಮತ್ಸ್ಯವನ್ನು  ಬೇಧಿಸಲು ಈ ರಾಮಾಯಣ- ಮಹಾಭಾರತಕ್ಕೆ ಕೇಶವೇ ಕಾರಣವೆನ್ನಬಹುದೇನೋ.

ಇನ್ನು ಶರಣೆ ಅಕ್ಕ ಮಹಾದೇವಿಯಂತೂ ಕೇಶವನ್ನೇ ವಸ್ತ್ರವನ್ನಾಗಿ ಮಾಡಿಕೊಂಡಿದ್ದಳು. ಇದೇ ಪಿ.ಯು.ಸಿ ಕ್ಲಾಸಿಗೆ ಗಿರೀಶ ಕಾರ್ನಾಡರ, ಯಯಾತಿ ನಾಟಕ ಪಲಿಸುವ ಸುಯೋಗ ನನಗೆ ಒದಗಿತ್ತು.  ಆ ನಾಟಕದಲ್ಲಿ  ಶರ್ಮಿಷ್ಟೆಯ ಕೂದಲುಗಳು ಮೊಣಕಾಲದವರೆಗೂ ಬೀಳುತ್ತಿದ್ದವು ಎಂದು ತಾಯಿ ಆಗಾಗ್ಗ ಹೇಳುತ್ತಾಳೆ. ಇಂಥವರ ಭಾಗ್ಯ ತೆರೆಯುತ್ತದೆ ಎಂದು ಹೆಮ್ಮೆ ಬಿಡುತ್ತಿದ್ದಳು. ’ವೇಣಿ ಸಂಹಾರ’ನಾಟಕವಂತೂ ಕೇಶದ ಬಗ್ಗೆ ಇರುವ ಪ್ರಸಿದ್ಧ ನಾಟಕ.

ಜನಪದ ಸಾಹಿತ್ಯದಲ್ಲಿಯೂ ಈ ತುರುಬಿನ ಬಗ್ಗೆಯಾಗಲಿ ಉದ್ದನೆಯ ಕೇಶದ ಬಗ್ಗೆಯಾಗಲಿ ಸಾಕಷ್ಟು ಹಾಡುಗಳು ರಚನೆಯಾಗಿವೆ.

ಕುಂತಾಡು ಮಗಳಿಗೆ ಕೂದಲು ಬಿಟ್ಟೇನ ಎಂದು ಗರತಿ ಹಾಡುತ್ತ ತನ್ನ ಮಗಳಿಗೆ ಉದ್ದನೆಯ ಕೂದಲೇ ಚಂದ ಹೆಣ್ಣಿಗೆ ಉದ್ದ ಕೂದಲಿದ್ದರೆ ಆಕೆ …. ಮುತ್ತೈದೆ ಎಂದು ಹೆಮ್ಮೆ ಪಡುತ್ತಾಳೆ. ಗರತಿಯು  ತನ್ನ ಒಲವಿನ  ಪ್ರೇಯಸನನ್ನು ಕೆರೆವಾಗ ಹೂವಾಗಿ ಬಾರೋ ನನ್ನ ತುರುಬಿಗೆ ಎಂದು ತನ್ನ ದುಂಡು ತುರುಬಿನ ಸುಂದರತೆಯನ್ನು ಹೇಳುತ್ತಾಳೆ, ನೀನು ತುರುಬ ಬಾಳಿಗೆನಿ ನನ್ನ ಹೆರಳ ನಾಗರ ಫಣಿ ಮುಂತಾಗಿ ಕೇಶದ ವರ್ಣನೆ ಜನಪದರ ಬಾಯಲ್ಲಿ ಸಾಕಷ್ಟು ಹಾಡುಗಳು ಹೊರ ಹೊಮ್ಮಿವೆ. ದುಂಡಾಗಿ  ಕಟ್ಟಿಕೊಂಡ ತುರುಬಿಗೆ ನಡುವೆ ಒಂದು ಕೆಂಪು ಹೂವನ್ನೋ ಅಥವಾ ಬಿಳಿ ಮಲ್ಲಿಗೆ ಹೂವನ್ನೋ ಇಟ್ಟುಕೊಂಡರೆ ತುರುಬಿನೊಂದಿಗೆ ಆಕೆಯ ಚೆಲುವು ಇಮ್ಮಡಿಸುತ್ತದೆ. ಇಂಥ ಸ್ತ್ರೀಯನ್ನು ನೋಡಿಯೇ ಕವಿಯು- ಕಿರಿಯ ನಿಲುವಿಕೆ ಹೆಣ್ಣ.  ತುರುಬು ಹೂವಿನ ಬಣ್ಣ ಎಂದು ಬಣ್ಣಿಸುತ್ತಾನೆ. ನಮ್ಮ ಉತ್ತರ ಕರ್ನಾಟಕದಲ್ಲಿ ಒಂದು ಗಾದೆಯ ಮಾತಿದೆ- ಕೂದಲಿದ್ದಾಕಿ ಹ್ಯಾಂಗ ತುರುಬು ಕಟ್ಟಿದರೂ ಚಂದ – ಅಂತಾ. ಸಮೃದ್ಧ ಕೂದಲು ಇದ್ದ ಮಹಿಳೆಯರು ದೊಡ್ಡದೊಂದು…….. ತುರುಬನ್ನು  ಕಟ್ಟಿಕೊಂಡರೆ ಎಲ್ಲರೂ ಆ ತುರುಬನ್ನೇ ನೋಡುವವರು ತನ್ನ  ತುರುಬನ್ನು ಎಲ್ಲರೂ ನೋಡಲೆಂದೇ ಎಲ್ಲರಿಗೂ ಕಾಣುವಂತೆ ಆಕೆ ತನ್ನ ಭುಜದ ಮೇಲೆ ಸೆರಗು ಹೊತ್ತು ತೋರಿಸುತ್ತಿದ್ದಳು. ಅಂಥ ದೊಡ್ಡ ತುರುಬು ಆಕೆಗೆ ಹೆಮ್ಮೆಯನ್ನು ತರುತ್ತಿತ್ತು. ಆ ಬಗ್ಗೆ ಆಕೆ ಹೆಚ್ಚು ಬೀಗುವಂಥವಳೇ ಆ  ಮಹಿಳೆ ತನ್ನ ಮುಪ್ಪಾವಸ್ಥೆಯಲ್ಲಿ ಕೂದಲು ಸಣ್ಣದಾಗಿ ಎಲ್ಲರೆದರು ಹಿಂದಿನ ತನ್ನ ಯೌವ್ವನದ ಸಮಯದಲ್ಲಿಯ ತುರುಬನ್ನು ಎಲ್ಲರ ಮುಂದೆ ವರ್ಣನೆ ಮಾಡುವವರೇ ಹೀಗೆ  ಮಹಿಳೆಯರಿಗೆ ಕೇಶವಿದ್ದರೆ ಅದೊಂದು ದೊಡ್ಡ ಆಸ್ತಿ.

ಆದರೆ ಇತ್ತೀಚಿನ ತರುಣಿಯರು ಉದ್ದ ಕೂದಲು ಬಿಡುವದಕ್ಕೆ ಮನಸ್ಸು ಮಾಡುವದಿಲ್ಲ. ಉದ್ದನೆಯ ಜಡೆ ಹಾಕುವದಂತೂ ಹೋದಂತೆ ಕಾಣುತ್ತದೆ. ಇಂದಿನ ಯುವತಿಯ ಜಡೆಯನ್ನು- ಚೋಟು ಜಡೆ, ಮೋಟು ಜಡೆ ಚೇಳಿನ ಕೊಂಡಿಯಂಥ ಜಡೆಯಂದು ಈಗಿನ ಕವಿಗಳು ಬೇಸರ ಪಟ್ಟುಕೊಳ್ಳುತ್ತಾರೆ. ಇಂದಿನ ಯುವತಿಯರಿಗೆ ಉದ್ದನೆಯ ಕೂದಲನ್ನು  ಬಿಟ್ಟು ಅದನ್ನು ಒಪ್ಪ ಓರಣವಾಗಿಡಲಿಕ್ಕೆ ಸಮಯದ ಅಭಾವ ಎದ್ದು ಕಾಣುತ್ತದೆ. ಇಂದಿನ ತ್ವರಿತ ಜಗತ್ತಿನಲ್ಲಿ  ಪ್ರತಿಯೊಂದು ಪಾಸ್ಟಾಗಿಯೇ ನಡೆಯಬೇಕು. ಈಗಂತೂ ಹೆಜ್ಜೆ ಹೆಜ್ಜೆಗೂ ಬ್ಯೂಟಿಪಾರ್ಲರಗಳು ಬಳಕೆಯಲ್ಲಿ ಬಂದು ಬಿಟ್ಟಿವೆ. ಈಗ ಹೇರ್ ಸ್ಟಾಯಿಲ್ ಮಾಡಿಸಿಕೊಳ್ಳುವದು ಒಂದು ಫ್ಯಾಶನ್ ಮತ್ತು ಸೊಫೋಸ್ಟಿಕೇಶನ್ ವಿಶೇಷವಾಗಿ ಕಂಡು ಬರುತ್ತದೆ. ನಾನಂತೂ ಹಳೆ ತಲೆಮಾರಿನವ ೬೦ ರಿಂದ ೪೦ರ  ದಶಕದಲ್ಲಿ  ಸಿನಿಮಾತಾರೆ ಚಿರಯವ್ವನೆಯರಾದ ಮೀಮಾಕುಮಾರಿ ವಹೀದಾರೆಹಮಾನ್  ಮಧುಬಾಲಾ ನರ್ಗಿಸ್ ಮುಂತಾದವರೆಲ್ಲ ತಮ್ಮ ತಮ್ಮ ವಿಶಿಷ್ಟ ಹೇರ್ ಸ್ಟಾಯಿಲನ್ನು  ಪ್ರದರ್ಶಿಸಿ ಯುವತಿಯರಿಗೆ ಹುಚ್ಚು  ಹಿಡಿಸಿದ್ದರು. ಮಧುಬಾಲಾ ಮೀನಾಕುಮಾರಿಯರು ತನ್ನ ತಲೆಗೂದಲನ್ನು ಮುಖದ ಅರ್ಧಭಾಗ ಮುಚ್ಚುವಂತೆ ತಲೆಯ ಎರಡೂ ಬದಿಗೆ ಕೂದಲು ಇಳಿಬಿಟ್ಟು ಮುಕ್ಕಾಲು ಭಾಗ ಮುಖ ಮುಚ್ಚಿಕೊಂಡು ಉದ್ದ ಕೂದಲನ್ನು ಬೆನ್ನ ಮೇಲೆ ಹರಡಿ ಬಿಡುತ್ತಿದ್ದರು.  ಮಧುಬಾಲಾ ಮೀನಾಕುಮಾರಿಯರು ತಮ್ಮ ತಲೆಗೂದಲನ್ನು ಮುಖದ ಅರ್ಧಭಾಗ ಮುಚ್ಚುವಂತೆ ತಲೆಯ ಎರಡೂ ಬದಿಗೆ ಕೂದಲು ಇಳಿಬಿಟ್ಟು  ಮುಕ್ಕಾಲು ಭಾಗ ಮುಖ ಮುಚ್ಚಿಕೊಂಡು ಉದ್ದ ಕೂದಲನ್ನು ಬೆನ್ನ ಮೇಲೆ ಹರಡಿಬಿಡುತ್ತಿದ್ದರು. ಇದನ್ನು ಕಂಡು ತರುಣಿಯರು ತಾವು ಇದೇ ರೀತಿ ಅನುಸರಿಸತೊಡಗಿದರು. ನರ್ಗಿಸ್ಂತೂ ವಿಶೇಷ ತನ್ನ ಹೆಸರಿನ ನರ್ಗಿಸ್ ಕಟ್ಟನ್ನು ಬಳಕೆಯಲ್ಲಿ  ತಂದಳು. ಮುಂದೆ ಇದೇ ಬಾಬ್ ಕಟ್ಟಾಗಿ ಪರಿಣಮಿಸಿತು.

ಈಗಂತೂ ನಾನಾ ತರದ ಕೇಶಸ್ಟಾಯಿಲ್‌ಗಳು ಬಳಕೆಯಲ್ಲಿ ಬಂದಿವೆ. ಡೀಪ್, ವಿ. ಬಾಚ್, ಫೆದರ್ ಲೇಯರ್, ಸ್ಟೆಪ್ ಕಟ್ ಮುಂತಾಗಿ ಹೆಸರಿಡಬಹುದು. ನಾನು ಎಪ್ಪತ್ತರ ದಶಕದಲ್ಲಿ  ಪಿ.ಯು.ಸಿ. ವಿದ್ಯಾರ್ಥಿ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ  ಓದುತ್ತಿರುವಾಗ ನನ್ನ ಕ್ಲಾಸ್ ಮೇಟ್ಸ್‌ದ ಮಾನು- ಸೋಮು ತುಂಬಾ ಕಿಡಿಗೇಡಿಗಳು.  ಕ್ಲಾಸಿನಲ್ಲಿ ಹುಡುಗಿಯರನ್ನು  ಚುಡಾಯಿಸುವದೇ ಅವರ ಕೆಲಸವಾಗಿತ್ತು. ನಾನು ಎಷ್ಟು ಹೇಳಿದರೂ ಅವರು ನನ್ನ ಮಾತನ್ನು ಕೇಳುತ್ತಿರಲಿಲ್ಲ. ತಮ್ಮ ಆಟ ಮುಂದುವರೆಸುತ್ತಲೇ ಇದ್ದರು. ಬೆಳಗಾವಿಯಲ್ಲಿ ಗಣೇಶನ ಹಬ್ಬ ತುಂಬಾ ಅದ್ದೂರಿಯಾಗಿಯೇ ನಡೆಯುತ್ತದೆ. ಸಾರ್ವಜನಿಕ ಗಣಪತಿಯನ್ನು ನೋಡಲು ಸುಮಾರು ಹಳ್ಳಿಗಳಿಂದ ಜನರು ತಂಡ ತಂಡವಾಗಿ ಬರುತ್ತಾರೆ ಇವತ್ತಿಗೂ ಇದು ನಡೆದು ಬಂದ ಹಬ್ಬದ ವಿಶೇಷ  ನಾನು ಮಾನು, ಸೋಮು ಇನ್ನಿತರರು ಕೂಡಿ ರಾತ್ರಿ ಬೆಳಗಾವಿಯ ಸಾರ್ವಜನಿಕ ಗಣಪತಿಗಳನ್ನು ನೋಡಲು  ಬರುತ್ತಿದ್ದರು.  ನಾವೆಲ್ಲರೂ ಮಗ್ನರಾಗಿ ಆ ದೃಶ್ಯವನ್ನು ನೋಡುತ್ತಿರುವದಾಗಿ ಸೋಮು ಉಪದ್ವಾಪಿ ಕೆಲಸ ಮಾಡುತ್ತಿದ್ದ ನಾವು ಹೊರಗೆ ಬಂದಾಗ ಉದ್ದನೆಯ ಜಡೆಯ ತುಂಡನ್ನು ಕೈಯಲ್ಲಿ  ಹಿಡಿದಿದ್ದ ಒಂದು ಹುಡುಗಿ ಉದ್ದನೆಯ ಎರಡು ಜಡೆಯನ್ನು ಹಾಕಿಕೊಂಡ ದೃಶ್ಯವನ್ನು ನೋಡುತ್ತಿರುವಾಗ ಆಕೆಗೆ ಗೊತ್ತಿಲ್ಲದೆಯೇ ಬಂದು  ಜಡೆಯ ತುಂಡನ್ನು ಕತ್ತರಿಸಿದ್ದು ನಮಗೆಲ್ಲರಿಗೂ ಒಂದು ರೀತಿಯಿಂದ ಮೋಜೆನಿಸಿತು. ಎಲ್ಲರೂ ನಗಾಡಿದೆವು. ಆದರೆ ಸೋಮುವಿಗೆ ಬುದ್ದಿ ಹೇಳದೆ ಇಂಥ ಕೆಲಸ ಮಾಡಬಾರದು ಉದ್ದನೆಯ ಕೂದಲನ್ನು ಬೆಳೆಸಿಕೊಂಡು ಆ ತರುಣಿಗೆ ಎಷ್ಟೊಂದು ಖೇದವಾಗಿರಬೇಡ. ಆಮಹಿಳೆಯ ಉದ್ದನೆಯ ಕೂದಲನ್ನು ನೋಡಿ ನಾವು ಸಂತೋಷ ಪಡಬೇಕು. ಅದೂ ಒಂದು ಕೊಡುಗೆ ಎಲ್ಲ ತರುಣಿಯರಿಗೂ ಹೀಗೆ ಕೂದಲು ಬೆಳೆಸಿಕೊಟ್ಟಿತು. ಸಾಧ್ಯವಿಲ್ಲ ಎಂದು ಸೋಮುವಿಗೆ  ತಿಳಿ ಹೇಳಿದೆ.

ಏನೇ ಆದರೂ ಇವತ್ತು ಬಾಬ್ ಕಟ್ಟಿನ ಹುಡುಗಿಯರೇ ಜಾಸ್ತಿ ಎಂದು ಹೇಳಬೇಕು. ಫಣಿಯಮ್ಮ ಕಾದಂಬರಿಯಲ್ಲಿ ಎಂ.ಕೆ. ಇಂದಿರಾರವರು ಇಂಥ ಒಂದು ಸನ್ನಿವೇಶವನ್ನು  ತೋರಿಸಿರುವದು ಈ ಕೇಶದ ಬಗ್ಗೆ ಎಷ್ಟೋ ಕತೆಗಳೂ ಹುಟ್ಟಿಕೊಂಡಿವೆ. ಕೆಲವು ಸತ್ಯ ಘಟನೆಗಳೂ ನಡೆದಿವೆ.

  ಇಂಗ್ಲೀಷ್ ಕತೆಗಾರ ಓ. ಹೆನ್ರಿ ತಮ್ಮ ಒಂದು ಕತೆಯಲ್ಲಿ  ಒಂದು ಸನ್ನಿವೇಶವನ್ನು ತರುತ್ತಾರೆ.  ನಾಯಕಿಗೆ ಉದ್ದನೆಯ ನುಣುಪಾದ ಕೂದಲು ನಾಯಕನಿಗೆ ಕೈ ಗಡಿಯಾರ ಇದೆ. ಆದರೆ ಕಟ್ಟಿ ಕೊಳ್ಳಲು ಬೆಲ್ಟ್ ಇಲ್ಲ ಸಣ್ಣ ಸಂಬಳ ಆದರೆ ಬರ್ತಡೇಗೆ ಒಬ್ಬರಿಗೊಬ್ಬರು ಉಡುಗೊರೆ ವಿನಿಮಯ ಮಾಡಿಕೊಳ್ಳುವದಾಗಿ ನಿರ್ಧರಿಸುತ್ತಾರೆ. ಇದು ಇಬ್ಬರಿಗೂ ಸರ್ ಪ್ರಾಯಿಜ್ ಉಡುಗೊರೆ  ನಾಯಕಿ ತನ್ನತಲೆಗೂದಲು ಮಾರಿ ವಾಚ್‌ಗೆ ಬೆಲ್ಟ್ ತಂದಿರುತ್ತಾಳೆ. ಆತ ತನ್ನ  ಕೈಗಡಿಯಾರ ಮಾರಿ ಹೆಂಡತಿಯ ಕೂದಲಕ್ಕೆ ಬೇಕಾಗುವ ಸೌಂದರ್ಯ  ಪ್ರಸಾದನಗಳನ್ನು  ತಂದಿರುತ್ತಾನೆ. ಹೇಗಿದೆ ನೋಡಿ ಉದ್ದನೆಯ ಕೂದಲಿನ ಪ್ರಭಾವ.

ಈ ಲೇಖನ ಬರೆಯುವ ಸಮಯಕ್ಕೆ ಪೂರಕವೆಂಬಂತೆ ತಾ.೧೭-೩-೧೩ ರ ಉದಯವಾಣಿ ದಿನ ಪತ್ರಿಕೆಯಲ್ಲಿ  ಒಂದು ಸಮಾಚಾರ ಪ್ರಕಟವಾಗಿತ್ತು. ಅದೇನೆಂದರೆ ೩೧ ಇಂಚು  ಉದ್ದದ ತಲೆಗೂದಲು ಕೊಟ್ಟರೆ ತಿಮ್ಮಪ್ಪನ ಪ್ರಸಾದದ ೫ ಲಾಡುಗಳು ಉಚಿತವೆಂದು. ಉದ್ದನೆಯ ಮಹಿಳೆಯರ ಕೂದಲಿಗೆ ಪರದೇಶದಲ್ಲಿ  ಎಲ್ಲಿಲ್ಲದ ಬೇಡಿಕೆ. ಇಂಥಹ ಉದ್ದನೆಯ ಕೂದಲು ಪ್ರತಿ ಕೆ.ಜಿಗೆ ೨೫೦೦೦ ರೂಪಾಯಿಯಂತೆ  ನೋಡಿರಿ. ಉದ್ದನೆಯ ಕೂದಲಿನ ಬೇಡಿಕೆ.

ಅಂತೂ ಉದ್ದನೆಯ ಕೂದಲಿಗೆ ಅತ್ಯಂತ ಮಹತ್ವವಿದೆ ಎಂಬುದು ಎಲ್ಲರಿಗೂ  ತಿಳಿದ  ವಿಷಯ. ತಲೆಗೂದಲನ್ನು ಮಾರುವದಕ್ಕಂತೂ ಅದನ್ನು  ಸೌಂದರ್ಯಕ್ಕಾಗಿ ಬಳಸಿದರೆ ಚೆನ್ನ ಎಂಬುದು ನನ್ನ ಅಭಿಮತ. ಸ್ತ್ರೀ ಸೌಂದರ್ಯ ಅದಾಗಿರುವದೇ ಕಾಣುತ್ತದೆ.  ನಾನು ಜಮಖಂಡಿಯಲ್ಲಿದ್ದಾಗ ಅಲ್ಲಿ ದೇವದಾಸಿಯರು ಬಹಳ ಅವರೇನೂ  ಚಲುವೆಯರಾಗಿರಲಿಲ್ಲ.  ಆದರೆ ತಮ್ಮ ಆಕರ್ಷಕ ಕೇಶವಿನ್ಯಾಸದಿಂದ ತುಂಬಾ ಚಲುವೆಯರಾಗಿ  ಕಾಣಿಸುತ್ತಿದ್ದರು.  ಒಬ್ಬರಂತೆ  ಇನ್ನೊಬ್ಬರ ಹೇರ್  ಸ್ಟಾಯಿಲ್ ಇರುತ್ತಿರಲಿಲ್ಲ. ಕೇಶ ವಿನ್ಯಾಸದಲ್ಲಿ  ಅಷ್ಟೊಂದು ಪರಿಣತಿ ಪಡೆದವರಾಗಿದ್ದರು.

ಇತ್ತೀಚಿಗಂತೂ ಕೇಶದ ಬಗ್ಗೆ ಸಾಕಷ್ಟು ತರಬೇತಿಗಳು ನಡೆಯುತ್ತವೆ. ಅನೇಕರು ಮಹಿಳೆಯ ಕೇಶ ವಿನ್ಯಾಸದ ಬಗ್ಗೆ ಮಾಸ್ಟರ್ ಡಿಗ್ರಿಯನ್ನು ಪಡೆದಿದ್ದಾರೆ. ಎಂಥ ಕೇಶರಾಶಿಗೆ ಎಂಥಹ ವಿನ್ಯಾಸ ಒಪ್ಪುತ್ತದೆ ಎಂಬುದನ್ನು  ಅವರು ನಿರ್ಧರಿಸುತ್ತಾರೆ. ಕೂದಲುಗಳಲ್ಲಿ  ಅನೇಕ ಪ್ರಕರಣಗಳನ್ನು ಗೊತ್ತು ಪಡಿಸಿದ್ದರೆ ಕೇಶ ವಿನ್ಯಾಸದ ಬಗ್ಗೆ  ದೊಡ್ಡ ದೊಡ್ಡ ಸಿಬಿರಗಳೇ ನಡೆಯುತ್ತವೆ. ಪ್ರಾನ್ಸ್ ದೇಶದಲ್ಲಿ ಫ್ಯಾಶನ್‌ಲೋಕ. ದಿನಾಲು ಅನಾವರಣಗೊಳ್ಳುತ್ತಲೇ ಇರುತ್ತದೆ. ಸೌಂದರ್ಯಕ್ಕೆ ಪ್ರಾನ್ಸ್ ದೇಶ ಹೆಸರಾದುದು. ಅದು ಹೊಸ ಹೊಸ ಫ್ಯಾಶನ್‌ಗಳ ಅವಿಸ್ಕಾರಗಳ ದೇಶ ಎಂದು  ಹೇಳಬಹುದು.

ನಮ್ಮ ದೇಶದಲ್ಲಿ ಸೌಂದರ್ಯ ಪ್ರಜ್ಞೆ ಕಡಿಮೆಯೆಂದೇನೂ ಇಲ್ಲ. ಪುರಾತನ  ಕಾಲದಿಂದಲೂ ಈ ಕೇಶವಿನ್ಯಾಸ ಬೆಳೆದು ಬಂದಿದೆ. ಋಷಿ ಮುನಿಗಳ ಮಡದಿಯರು ನೆತ್ತಿಯ ಮೇಲೆ ತುರುಬು ಕಟ್ಟಿ ಹೂವನ್ನು ಮುಡಿಯುತ್ತಿದ್ದರು. ಈಗಲೂ ಸನ್ಯಾಸಿನಿಯರನ್ನು ಈ ರೀತಿಯಲ್ಲಿ ತುರುಬು ಕಟ್ಟುವವರನ್ನು ಕಾಣುತ್ತೇವೆ.

ನಮ್ಮ ಔನತ್ಯ ಸಂಸ್ಕೃತಿ ಪರಂಪರೆಯಲ್ಲಿ ಕೇಶ ಶೃಂಗಾರಕ್ಕೆ ಮಹತ್ವ ಕೊಡುತ್ತಲೇ ಬಂದಿದ್ದಾರೆ. ಎಂಥಹ ರೈತಾಪಿ ಮಹಿಳೆಯರಿದ್ದರೂ ಸಹ ದಿನದ ಒಟ್ಟು ಕೆಲಸಗಳಲ್ಲಿ  ತುಸು ವೇಳೆಯನ್ನಾದರೂ ಈ ಕೇಶ ಶೃಂಗಾರಕ್ಕಾಗಿ ಮೀಸಲಿಡುತ್ತಾಳೆ. ತಾನು ಕೆಲಸಕ್ಕೆ  ಹೋಗುವ ಮುನ್ನ  ಕನ್ನಡಿಯ ಮುಂದೆ ಕುಳಿತು ತಲೆಯನ್ನು  ಬಾಚಿಕೊಂಡು ಒಂದು ಕೆಂಪು ರಿಬ್ಬನ್ನು ಕಟ್ಟಿಕೊಂಡು ಹಣೆಗೆ ಕುಂಕುಮ ಬೊಟ್ಟು ಇಟ್ಟುಕೊಂಡೇ ಕೆಲಸಕ್ಕೆ ಹೊರಡುತ್ತಾಳೆ.

ಮಹಿಳೆಯರಿಗೆ ಕರ್ರಗಿರಲಿ, ಬೆಳ್ಳಗಿರಲಿ ಕೂದಲು ಮಾತ್ರ ಬೇರೆ ಬೇಕು. ಕೂದಲಿಲ್ಲದೆ ಬೋಳು ತಲೆಯಾದರೆ ಆಕೆಗೆ ಅದೊಂದು ಶಾಪವೆಂದೇ ಹೇಳಬೇಕು. ಆದ್ದರಿಂದ ತಲೆಗೂದಲನ್ನು  ಬೆಳೆಸಿಕೊಳ್ಳಬೇಕು. ಇಂದಿನ ಒತ್ತಡದ ಯಾಂತ್ರಿಕ ಯುಗದಲ್ಲಿ  ಉದ್ದನೆಯ ಕೂದಲನ್ನು ಬೆಳೆಸಿ ಸೊಂಪಾಗಿ ನಯವಾಗಿ ಇಟ್ಟುಕೊಳ್ಳುವದು ದುಸ್ತರವಾಗಬಹುದು. ಆದರೆ ಕೂದಲು ಮಾತ್ರ ಚೆನ್ನಾಗಿ ಬೆಳೆಸಿಕೊಂಡು ಸೌಂದರ್ಯ ಇಮ್ಮಡಿಗೊಂಡರೆ ಅದು ಅವರಿಗೆ ಶೋಭಾಯಮಾನ ಅದರಲ್ಲಿ  ಗುಂಗುರು ಕೂದಲು ತಲೆಯನ್ನು ಬಾಚಿಕೊಂಡಾಗ ಸ್ವಾಭಾವಿಕವಾಗಿ ತಗ್ಗು ದಿನ್ನೆಗಳಾಗುವ ಚಪ್ಪಟೆಯ ಕೂದಲಿಗಳು ಮಹಿಳೆಯರಿಗೆ ಯಾವ ಪ್ರಯಾಸವಿಲ್ಲದೇ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹಾಗೂ ಮನಸ್ಸಿಗೆ ಮುದವನ್ನುಂಟು ಮಾಡುತ್ತವೆ. ಅದಕ್ಕಾಗಿ  ಕವಿ ನಾಗಚಂದ್ರ ಸೀತೆಯಕೂದಲನ್ನು ಬೃಂಗಕುಂತಳಂ ಎಂದು ವರ್ಣನೆ ಮಾಡಿದ್ದಾನೆ.

ಸ್ತ್ರೀಯರಿಗೆ ಸೌಂದರ್ಯವನ್ನು ಭಗವಂತ ಅತ್ಯಮುಲ್ಯ ಕೊಡುಗೆಯನ್ನು ನೀಡಿದ್ದಾನೆ. ಅದರಲ್ಲಿ ಕೇಶವಂತೂ ಬಳುವಳಿಯಾಗಿ ಬಂದ ಕೊಡುಗೆ. ಆದರೆ  ಇಂದು ಮಹಿಳೆಯರು ಹೆಚ್ಚು ಹೆಚ್ಚು ಉದ್ದ ಕೂದಲನ್ನು ಬೆಳೆಸಿಕೊಳ್ಳಬೇಕು ಎಂಬುದು. ನೇಮಿಚಂದ್ರ ತನ್ನ ಲೀಲಾವತಿ ಪ್ರಬಂಧದಲ್ಲಿ – ಸ್ತ್ರೀ ರೂಪಮೆ ರೂಪಂ ಶೃಂಗಾರ ರಸಮೆ ರಸಂ ಎಂದು ಹೇಳಿದಂತೆ ಸ್ತ್ರೀಯರ ಸೌಂದರ್ಯ ವರ್ಧಿಸುತ್ತಲೇ ಇರಲಿ ರಸಿಕಾ ಮನವನ್ನು ತಣಿಸುತ್ತಲೇ ಇರಲಿ. ಸೌಂದರ್ಯದಲ್ಲಿ ಶಿವತ್ವವನ್ನು ಸರ್ವರೂ ಕಾಣುವಂತಾಗಲಿ ಎಂದು ಆಶಿಸಿ ಈ ಪ್ರಬಂಧಕ್ಕೆ ವಿರಾಮ ಕೊಡುತ್ತೇನೆ.

ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಗೆಳೆಯರಾದ ಮಾನು- ಸೋಮು ಹುಡುಗಿಯರಿಗೆ ಚುಡಾಯಿಸುವವರೇ ನೀಳ ಜಡೆಯಾಕೆಗೆ ನೀಳವೇಣಿ ಎಂದು ಕಪ್ಪು ಜಡೆಯಾಕೆಗೆ ಕೃಷ್ಣ ವೇಣಿಯೆಂದು ಹೆಸರಿಡುತ್ತಿದ್ದರು. ಕ್ಲಾಸಿನಲ್ಲಿ ಹುಡುಗಿಯರ ಗುಂಪು ಬಂದು ಕುಳಿತುಕೊಂಡರೆ ಅವರಲ್ಲಿ ಕೆಲವು ಹುಡುಗಿಯರು ಎರಡೆರಡು ಜಡೆ ಹಾಕಿಕೊಳ್ಳುತ್ತಿದ್ದರು.

ಜೋಡು ಜಡೆಯ ಜಮುನ

ಎತ್ತ ನಿನ್ನಯ ಗಮನ

ಎಂದು ಮಾನು ಚುಡಾಯಿಸುತ್ತಿದ್ದ ಮತ್ತೆ ಸೋಮು ಸಹ ಅವರೂ ಸ್ಪೂರ್ತಿ ಬಂದು ಕವನವನ್ನು  ರಚಿಸಿಯೇ ಬಿಟ್ಟ.

ಕತ್ತರಿಸಿ ಇಳಿಬಿಟ್ಟ ಕೇಶ

ನನ್ನ ಮನಸ್ಸನ್ನು ಹಿಡಿದಿಟ್ಟ ಪಾಶ

ಹೀಗೆ ನಮ್ಮ ಗುಂಪಿನಲ್ಲಿ  ಹೀಗೆ ಹುಡುಗಿಯರನ್ನೂ ಚುಡಾಯಿಸುತ್ತ ಎಂಜಾಯ್ ಮಾಡುತ್ತಿದ್ದೇವು. ನಾನು ಎಷ್ಟೋಸಾರೆ ಮಾನುವಿಗೆ ಹೇಳುತ್ತಿದ್ದೆ. ಹುಡುಗಿಯರಿಗೆ ಚುಡಾಯಿಸಬಾರದು ಅವರನ್ನೂ ನಮ್ಮ ಸಹೋದರಿಯಂತೆ ಕಾಣಬೇಕೆಂದು, ಆದರೆ  ಅವರ ಮಂಗನ ಮನಸ್ಸು ಕೇಳುತ್ತಿರಲಿಲ್ಲ. ಆದರೆ ನಾವು ಮಾಡುವ ಜೋಕುಗಳು  ಅವರಿಗೆ ಕೇಳಿಸುತ್ತಿರಲಿಲ್ಲ. ಹೀಗಾಗಿ ನಾನು ಬಚಾವ್ ಆಗುತ್ತಿದ್ದೆವು.

ನನ್ನ ಕ್ಲಾಸ್‌ಮೆಟ್ಸ್‌ರಾದ ಮಾನು- ಸೋಮು ಹೀಗೆ ಗೇಲಿ ಮಾಡುವದರಲ್ಲಿಯೇ ಕಾಲ ಹರಣ ಮಾಡುತ್ತ ಪರೀಕ್ಷೆಯಲ್ಲಿ  ಡುಮಕಿ ಹೊಡೆದೇ ಬಿಟ್ಟರು.

ಈಗಂತೂ ತುರುಬು ಜಡೆಗಳು ಮಾಯವಾಗುತ್ತಲಿವೆ. ಒಂದು ಕಾಲಕ್ಕೆ ಈ ಜಡೆ- ತುರುಬುಗಳು ಉಚ್ಚ್ರಾಯ ಸ್ಥಾನದಲ್ಲಿದ್ದವು. ಇಂದು ವಿದೇಶಿಯರ ಆಕರ್ಷಣೆಗಳೊಳಗಾಗಿ ಕೂದಲುಗಳನ್ನು ಕತ್ತರಿಸಿಕೊಳ್ಳತೊಡಗಿದ್ದಾರೆ. ಹಿಂದೆ ಜಡೆ ಭರಿತ ಈ (      ) ವಾದ ಕೇಶಕ್ಕೆ ಜಡಬಡಿದಂತಾಗಿದೆ. ಯಾರೂ ಏನೂ ಮಾಡುವಂತಿಲ್ಲ ಏನೂ ಆನ್ನುವಂತಿಲ್ಲ.  

ಕಾಲಾಯ ತಸ್ಮೈ ನಮಃ ಎನ್ನುದೊಂದೇ ಬಾಕಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
suman desai
suman desai
10 years ago

ಭಾಳ ಛಂದ ಬರೆದೀರಿ……..

sharada.m
sharada.m
10 years ago

ತುರುಬಿನ ಬಗ್ಗೆ   ಹಾಸ್ಯಮಿಶ್ರಿತ  ಬರಹ..

amardeep.p.s.
amardeep.p.s.
10 years ago

ಲೇಖನ ಚೆನ್ನಾಗಿ ಬಂದಿದೆ …. ತುರುಬಿನ ಬಗ್ಗೆ …. ಅಭಿನಂದನೆಗಳು …..

3
0
Would love your thoughts, please comment.x
()
x