ಕಾಗಿ ಕಾಗಿ ಕವ್ವಾ…:ಸುಮನ್ ದೇಸಾಯಿ ನಗೆ ಅಂಕಣ


ಮುಂಝಾನೆ ಹತ್ತು ಗಂಟೆ ಸುಮಾರ ನಾ ಆಫೀಸನ್ಯಾಗ ಇದ್ದೆ. ನಮ್ಮ ತಮ್ಮನ ಫೋನ್ ಬಂತು. ಇಗ ಇನ್ನ ಹೊಸದಾಗಿ ಮದುವಿ ಮಾಡಕೊಂಡಾನ. ಮದ್ವಿಕಿಂತಾ ಮದಲ ಯಾವಾಗರೆ ಒಮ್ಮೆ ಫೋನ್ ಮಾಡಾಂವಾ ಈಗೀಗ ಎರಡ ದಿನಕ್ಕ ಒಮ್ಮೆ ಮಾಡತಿದ್ದಾ. ತನ್ನ ಗೋಳ ತೋಡ್ಕೊತಿದ್ದಾ.  ಪಾಪ ಇತ್ಲಾಕಡೆ ಅಮ್ಮ ಮತ್ತ ಅತ್ಲಾಕಡೆ ಹೆಂಡ್ತಿ ಕೈಯ್ಯಾಗ ಸಿಕ್ಕು ’ಧೋಬಿ ಕಾ ಕುತ್ತಾ ನಾ ಘರ್ ಕಾ ನ ಘಾಟ್ ಕ’ ಅನ್ನೊಹಂಗ ಆಗಿತ್ತು ನನ್ನ ತಮ್ಮನ ಬಾಳು. ಆವತ್ತು ಫೋನ್ ಮಾಡಿದಾಗನೂ ಹಿಂಗ ಏನರೆ ಇರಬೇಕಂತ "ಯಾಕಪ್ಪಾ ಅತ್ತಿ ಸೊಸಿ ನಾಷ್ಟಾ ಮಾಡಿ ಹಾಕ್ಯಾರಿಲ್ಲೊ" ಅಂತ್ ಕೇಳಿದೆ. ಅದಕ್ಕ ಆಂವಾ "ಹೂಂ" ನಾಷ್ಟಾ ಆತು ಅಂದಾ. ಅದಕ್ಕ ನಾ ಏನ ನಾಷ್ಟಾನಪ್ಪ" ಅಂದೆ. ಅದಕ್ಕ ಆಂವಾ "ಮತ್ತೇನ ಮಾಡೊದ ಅದ "ಸಿದ್ದರಾಮಯ್ಯಾ" ಅಂದಾ. "ಇದ್ಯಾವ ನಾಷ್ಟಾನಪ್ಪಾ ಇವತ್ತ ಹೆಸರ ಕೇಳಿಕತ್ತೇನಿ ಇದರದು" ಅಂದೆ. ಆಂವಾ "ಮತ್ತ ದಿನಾಲು ಫಡ್ಡು, ದ್ವಾಸಿ ಮಾಡಕೊಂಡ ತಿನ್ರಿ ಅಂತ ಒಂದು ರೂಪಾಯಿಗೆ ಒಂದು ಕೇಜಿ. ಅಕ್ಕಿ ಮಾಡ್ಯಾನಲ್ಲ ಸಿದ್ದರಾಮಯ್ಯಾ, ರೇಶನ್‍ನ್ಯಾಗ ಹತ್ತು ಕೇಜಿ ಅಕ್ಕಿ ಕೊಡತಾರ ಮತ್ತ ದಿನಾಲು ಫಡ್ಡು, ದ್ವಾಸಿ, ಉತ್ತಪ್ಪ ಇದನ್ನ ತಿನ್ನೊದ ನೋಡು.  ಮತ್ತ ಅದಾ ಅಕ್ಕಿದು ರವಾ ವಡಸಿ ಇಡ್ಲಿ ಮಾಡೊದು. ನಾ ವಾರದಾಗ ಮೂರ ದಿನಾ ಮನ್ಯಾಗ ಇರತೇನಿ ಅಂದ್ರ ಸೋಮವಾರಾ, ಗುರುವಾರಾ, ಶನಿವಾರ. ಈ ಮೂರು ದಿನಾ ಆಕಿದ ಒಪ್ಪತ್ತ ಇರತದ. ಆವತ್ತಿನ ದಿನಾ ಭಕ್ರಿ, ಚಪಾತಿ ಅಂತ ಎಲ್ಲೆ ಅಡಗಿ ಮಾಡೊದಂತ ದ್ವಾಸಿನರ, ಇಡ್ಲಿನರ ಮಾಡಿ ಮೂರ ಹೊತ್ತು ಅದನ್ನ ತಿನ್ನಸತಾಳ. ಹತ್ತು ರೂಪಾಯಿನ್ಯಾಗ ಮನಿ ಮಂದಿದೆಲ್ಲಾ ತಿಂಗಳಿಡಿ ಹೊಟ್ಟಿ ತುಂಬ ನಾಷ್ಟಾ ಆಗತದ ಅಂತ ಉಳಿತಾಯ ಮಾಡಲಿಕ್ಕೆ ಹೋಗಿ ದಿನಾ ಅಕ್ಕಿ  ತಿನ್ನಿಸಿ ತಿನ್ನಿಸಿ ನನ್ನ ಹೊಟ್ಟಿ ಗ್ಯಾಸ ಸಿಲಿಂಡರ್ ಆಗಿ ಬಿಟ್ಟದ. ಸಿಕ್ಕಾಪಟ್ಟೆ ಗ್ಯಾಸ ಆಗಿ ಹೊಟ್ಟಿ ಯಾವಾಗಿದ್ರು ಗುರು ಗುರು ಅಂತಿರತದ. ಆಫೀಸಿನ್ಯಾಗ ಎಲ್ಲಾರು ಯಾಕ್ರಿ ಹೊಟ್ಟಿ ಸಮಾ ಇಲ್ಲೆನ್ರಿ. ವೈನಿಯವರು ರುಚಿ ರುಚಿ ಮಾಡಿ ಹಾಕ್ಯಾರ ಅಂತ ಎಗ್ಗಳಾಗಿ ಹೋಡದಿರೆನ್ರಿ? ಹೋಗಿ ಒಂದ ಸೋಡಾನರ ಕುಡದ ಬರ್ರಿ ಅಂತ ಒಂದ ನಮೂನಿ ನೋಡಕೊತ ಅಂತಾರ. ಹೊತ್ತಿಲ್ಲದ ಹೊತ್ತಿನ್ಯಾಗ ಸಿಲೆಂಡರ್ ಲೀಕ್ ಆಗತದ. ಒಂದ ಸ್ವಲ್ಪ ಜೋರಾಗಿ ಶೀನು ಹಂಗಿಲ್ಲಾ ಕೆಮ್ಮು ಹಂಗಿಲ್ಲಾ, ಹಂಗೆನಾದ್ರು ಆತಂದ್ರ ಸಾಕು "ಉತ್ತಮಂ ದದ್ಧದಾಥ ಪಾದಂ" ಅನ್ನೊಹಂಗ ಮಂದ್ಯಾಗ ಮರ್ಯಾದಿ ಹೋಗೇಬಿಡತದ. ಮೊನ್ನೆ ಹಿಂಗಾ ಆತು ಶನಿವಾರ ಹಣಮಪ್ಪನ ಗುಡಿಗೆ ಹೋಗಿ ಬರಬೇಕಾದ್ರ ಗಾಡಿ ಚಾಲು ಆಗಲೇ ಇಲ್ಲ. ಅದಕ್ಕ ಸ್ವಲ್ಪ ಜೋರಾಗಿ ಕಿಕ್ಕ್ ಹೋಡದೆ, ತಗೋ ಅಲ್ಲಿದ್ದ ಮಂದಿಯೆಲ್ಲಾ ಹೊಳ್ಳಿ ನೋಡಲಿಕ್ಕತ್ರು, ಲಗೂ ಲಗೂ ಗಾಡಿ ಚಾಲು ಮಾಡ್ಕೊಂಡ ಅಲ್ಲಿಂದ ಜಾಗಾ ಖಾಲಿ ಮಾಡಿದೆ. ಇಷ್ಟ ದಿನಾ ಗೆಳೆಯಾ ವಿನ್ಯಾನ ಮಕ್ಕಳು ನಾ ಹೋದ ಕೂಡಲೆ ಮಾಮಾ ಬಂದಾ ಮಾಮಾ ಬಂದಾ ಅಂತ ಓಡಿ ಬರತಿದ್ವು. ಆದ್ರ ಇಗೀಗ ನಾ ಅವರ ಮನಿಗೆ ಹೋದಕೂಡಲೆ  ನನ್ನ ನೋಡಿ…

’ಕಾಗಿ ಕಾಗಿ ಕವ್ವಾ, 

ಯಾರ ಬಂದಾರವ್ವಾ ?

ಮಾವಾ ಬಂದಾನವ್ವಾ, 

ಏನ ತಂದಾನವ್ವಾ ? 

ಹಂಡೆದಂಥಾ ಹೊಟ್ಟಿ ತುಂಬ 

ಗ್ಯಾಸ್ ತುಂಬಕೊಂಡ ಹಂಗ ಬಂದಾನವ್ವಾ’ 

ಅಂತ ಹಾಡಲಿಕ್ಕೆ ಶುರು ಮಾಡ್ಯಾರ" ಅಂತ ತನ್ನ ಗೋಳು ಹೇಳಿ ಮುಗಿಸಿದಾ. ಅದನ್ನ ಕೇಳಿ ಜೋರ ನಗು ಬಂತು ಆದ್ರು ತಡಕೊಂಡೆ. ಪಾಪ ತಮ್ಮನ ಆವಸ್ಥಿ ನೋಡಿ ಪಾಪ ಅನಿಸಿತ್ತು. ಆಂವಾ ಹೇಳೊಹಂಗ ತಮ್ಮನ ಹೆಂಡ್ತಿ ಒಂದ ಸ್ವಲ್ಪ ಜಿಪುಣಿನಾ ಇದ್ಲು. ಇಕಿಕಿಂತಾ ಇವರಪ್ಪಾ ಶೀನಪ್ಪಾ ಮಹಾ ಜಿಪುಣ. ಪಾಪಾ ಹೆಂಡ್ತಿ ಜೀಂವಾ ತಿಂದ ಇಡತಿದ್ದಾ. ಮನಿಯೊಳಗ ಅಡಗಿ ಮಾಡಲಿಕ್ಕೆ ಅಕ್ಕಿ, ಬ್ಯಾಳಿನ ಸುಧ್ಧಾ ದಿನಾವಂದಕ್ಕು ಅಳತಿಮಾಡಿನ ಕೊಡತಿದ್ದಾ. ಎಲ್ಲಾ ಕಿರಾಣಿ ಸಾಮಾನಗೊಳನ್ನ ದೊಡ್ಡದೊಂದ ಹಳೆಕಾಲದ್ದ ಪೆಟ್ಟಿಗಿಯೊಳಗ ಇಟ್ಟ ಕೀಲಿ ಹಾಕಿ, ಕೀಲಿಕೈನ ಕೊಳ್ಳಾಗ ಹಾಕ್ಕೊಂಡ ತಿರಗತಿದ್ದಾ. ಮುಂಝಾನೆ ಎದ್ದ ಪೂರಸೊತ್ತಿಗಿಲ್ಲದ ಆಂವನ ಜೀನ ತನಾ ಶುರು ಆಗೇ ಬಿಡತಿತ್ತು. ಹೇಂಗಂದ್ರ, ಮುಂಝಾನೆ ಮನಿ ಮುಂದ ರಂಗೋಲಿನೂ ಭಾಳ ದೊಡ್ಡದ ಹಾಕೊಹಂಗಿಲ್ಲಾ. ರಂಗೋಲಿ ಪುಡಿ ವೇಸ್ಟ್ ಆಗತದಂತ ಹೊಚ್ಚಲದ ಮ್ಯಾಲೆ ಎರಡೆಳಿ ಮತ್ತ ಅಂಗಳದಾಗ ಒಂದ ಸಣ್ಣ ಕೂಸಿನ ಅಂಗೈ ಅಗಲದ್ದ ರಂಗೋಲಿ ಹಾಕಬೇಕ. ಅಪ್ಪಿತಪ್ಪಿ ಒಂದ ಎಳಿ ದೊಡ್ಡಾದಾದ್ರು "ಇಡೀ ವಾರದ್ದ ರಂಗೋಲಿ ಇವತ್ತ ಹಾಕಿರೇನ?" ಅಂತ ಟರಾ ಟರಾ ಒದರಿ, ಮರುದಿನಾ ರಂಗೋಲಿ ಹಾಕಬ್ಯಾಡ್ರಿ ಅಂತಹೇಳಿ ಲೆಕ್ಕಾ ಸಮಾ ಮಾಡಕೊತಿದ್ದಾ. ಊದಿನ ಕಡ್ಡಿ ಬಂಡಲನ್ಯಾಗಿನ ಕಡ್ಡಿಗೊಳನ್ನೆಲ್ಲಾ ಒಂದರಾಗ ಎರಡ ತುಂಡ ಮಾಡಿ ಇಟ್ಟು, ದಿನಾ ತಾ ಒಬ್ಬನ ಒಂದ ಊದಿನಕಡ್ಡಿ ಹಚ್ಚತಿದ್ದಾ. ಇಂವಾ ಕಾಯಿ ಪಲ್ಯಾದ ಸಂತಿಗೆ ಹೋಗೊದ ಹೆಂಗ ಅಂದ್ರ, ಎಲ್ಲಾರು ಸಂತಿ ಮುಗಿಸಿ ಮನಿಗೆ ವಾಪಸ ಹೋಗೊಮುಂದ ಮೂರು ಸಂಜಿಲೆ ಹೋಗಿ ಉಳಕಲಾ ಬಳಕಲಾ ಎಲ್ಲಾ ಗುಂಪಿ ಹಚ್ಚಿ ಮಾರಲಿಕ್ಕಿಟ್ಟಿದ್ದನ್ನ ಸೋವಿದ್ರಾಗ ತಗೊಂಡ ಬರತಿದ್ದಾ. "ಜೀನರ ಬಾಳೆ ನುಶಿ ತಿಂತಂತ" ಅಂತಾರಲ್ಲಾ ಅದು ಈ ಶಿನಪ್ಪನ್ನ ನೋಡಿದ್ರ ಖರೆ ಅನಿಸ್ತದ. ನಮ್ಮ ತಮ್ಮನ್ನ ನಿಶ್ಚೆದ್ದ ಮುಂದ ಹಿಂಗಾ ಆಗಿತ್ತು, ತನ್ನ ಮನ್ಯಾಗ ನಿಶ್ಚೆದ್ದ ಕಾರ್ಯಕ್ರಮ ಇಟಗೊಂಡಿದ್ದಾ. ನಾವು ಅವರ ಮನಿಗೆ ಹೋಗೊದ ತಡಾ ಆಗೇದ ಈಗ ಫಳಾರ ಮಾಡಿದ್ರ ಯಾರು ಊಟಾ ಮಾಡುದಿಲ್ಲ ಅಂಥೇಳಿ ನಾಶ್ಟಾ ಏನು ಕೊಡಲಾರದ ಕಲಗಚ್ಚಿನಂಥಾ ಚಹಾ ಮಾಡಿ ಕುಡಿಸಿ ಮುಗಿಸಿಬಿಟ್ಟಿದ್ದಾ. ಎಲ್ಲಾ ಕಾರ್ಯಕ್ರಮ ಮುಗದ ಮ್ಯಾಲೆ ಊಟಕ್ಕ ಕೂತ್ರ ಎಲ್ಲಾರು ಎರಡ ತುತ್ತ ಅನ್ನ ಉಣ್ಣೊದ್ರಾಗ ಡರ್ರ್ ಡರ್ರ್ ಅಂತ ತೇಗಲಿಕ್ಕೆ ಶುರು ಮಾಡಿದ್ರು. ಯಾಕಂದ್ರ ಅನ್ನದಾಗ ಅಕ್ಕಿಕಿಂತಾ  ಸೋಡಾನ ಜಾಸ್ತಿ ಇತ್ತು. ಎರಡ ಕೇಜಿ ಅಕ್ಕಿ ಅನ್ನ ಮಾಡಿ ಬಂದ ಮಂದಿಗೆಲ್ಲಾ ಉಣಿಸಿದ್ದಾ. ವಾಪಸ ಬರಬೇಕಾದ್ರ ಎಲ್ಲರು ಹೊಟ್ಟಿ ಹಿಡಕೊಂಡ ಒದ್ದ್ಯಾಡಕೊತ ಬಂದಿದ್ವಿ. ಇದಿನ್ನು ಏನು ಅಲ್ಲ ಇಂವನ ಜಿಪುಣತನಾ ಯಾವ ಮಟ್ಟಕ್ಕ ಇತ್ತಂದ್ರ ಮನ್ಯಾಗ ಶ್ರಾಧ್ಧ ಇದ್ದ ದಿವಸಾ ಪಿಂಡಕ್ಕ ಮಾಡಿದ್ದ ಅನ್ನಾ ಆಕಳಿಗೆರ ಇಲ್ಲಾ ನೀರಿಗೆರ ಎಲ್ಲೆ ಹಾಕಿಬರೊದು ಸುಮ್ನ ವೇಸ್ಟ ಅಂಥೇಳಿ ಹಂಗ ಇಟ್ಟು ಮರುದಿನಾ ನಾಷ್ಟಾಕ್ಕ ಚಿತ್ರಾನ್ನ ಮಾಡಸತಿದ್ದಾ. ಇಂಥ ಜೀನರ ಪರಮಾವಧಿ ಇಧ್ಧಂಥಾ ಮನಶ್ಯಾನ ಮಗಳಿಗೆ ತಮ್ಮಪ್ಪನ ಕೆಲವೊಂದಿಷ್ಟ ಜೀನ್ಸ್ ಗೊಳ ಆಹೇರಿ ರೂಪದಾಗ ಬಂದಿದ್ವು. ಉಳಿತಾಯದ ಹೆಸರಲೇ ಪಾಪ ನಮ್ಮ ತಮ್ಮನ ಹೊಟ್ಟಿನ ಮಿನಿ ಗ್ಯಾಸ ಉತ್ಪಾದನಾ ಕೇಂದ್ರ ಮಾಡಿಬಿಟ್ಟಿದ್ಲು.  ಅದಕ್ಕ ನಾ "ಅಲ್ಲಾ  ಮತ್ತ ಜ್ವಾಕಿಂದ ಇರು, ಒಮ್ಮಿಗಲೇ ಸ್ಪೋಟ್ ಮಾಡಿಗಿಡ್ಯಾಳ ಅಂತ ಎಚ್ಚರಿಕಿ ಕೊಟ್ಟು, ದಿನಾ ಹಿಂಗಾಷ್ಟಕ ಚೂರ್ಣ ತಿನ್ನು ಅಂದ್ರ ನಿನ್ನ ಹೊಟ್ಟಿಗೆ ಆಕಿ ವಿರುಧ್ಧ ಹೋರಾಡಲಿಕ್ಕೆ ಶಕ್ತಿ ಬರತದ ಅಂಥೇಳಿ ಫೋನ್ ಕಟ್ಟ್ ಮಾಡಿದೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
Madhu
Madhu
10 years ago

ಸುಮಕ್ಕಾ, ಸೂಪರ …. ನಕ್ಕು ನಕ್ಕುಸಾಕಾತು.. ಇವತ್ತ ನಮ್ಮನ್ಯಾಗನು  "ಸಿದ್ದರಾಮಯ್ಯನ್ನ"(ಇಡ್ಲಿ) ಮಾಡೇವಿ…

amardeep.p.s.
amardeep.p.s.
10 years ago

ಲೇಖನ ಚೆನ್ನಾಗಿದೆ ಮೇಡಂ…. ಅಭಿನಂದನೆಗಳು ….

Akhilesh Chipli
Akhilesh Chipli
10 years ago

ನಿಮ್ಮ ಸಿದ್ದರಾಮಯ್ಯ ಓದಿ "ರಾಮ-ಶ್ಯಾಮ-ಭಾಮ"ದ ರಮೇಶ್ ಅರವಿಂದ ಹೆಣ್ತಿ ನೆನಪಾತು. ಅವಳು ಮೂರೊತ್ತು ಗಂಡನಿಗೆ ಇಡ್ಲಿ ತಿನ್ನಿ ಅಂತ ದುಂಬಾಲು ಬಿಳ್ತಾಳ. ನಕ್ಕೊ ನಕ್ಕು ಸಾಕಾತು…

ಶ್ರೀವಲ್ಲಭ ಕುಲಕರ್ಣಿ
ಶ್ರೀವಲ್ಲಭ ಕುಲಕರ್ಣಿ
10 years ago

ಹಾ ಹಾ ಹಾ,,,, ಪಾಪಾ,,,, ನಿಮ್ಮ ತಮ್ಮಾ ಒದ್ದಾಡೋದ ಕೇಳಿ ,,,,,, ನಗಬೇಕೋ ಅಳಬೇಕೋ ಗೊತ್ತಾಗ್ಲಿಲ್ಲ

ಸುಮನ್ ದೇಸಾಯಿ
ಸುಮನ್ ದೇಸಾಯಿ
10 years ago

ಲೇಖನ ಮೆಚ್ಚಿದ ಎಲ್ಲಾರಿಗು ನನ್ನ ಧನ್ಯವಾದಗಳು………………………………..ಸುಮನ್

umesh desai
umesh desai
10 years ago

ದೇಸಾಯರ ಲೇಖನ ರುಚಿಕಟ್ಟಾಗೇದ…!

prashasti
10 years ago

ಸಖತ್ತಾಗಿದೆ..
ಕಾಗೆ,ಹನುಮಪ್ಪನ ಗುಡಿ, ಶ್ರಾದ್ದದ ಅನ್ನದ ಚಿತ್ರಾನ್ನ !! ಯಪ್ಪಾ ಕಲ್ಪನೆಗೂ ಬಂದಿರದಂತ ಪ್ರಸಂಗಗಳು.. ಇವೆಲ್ಲಾ ನಿಮ್ಗೆ ಹೆಂಗೆ ಹೊಳಿತಾವೋ.. 🙂

7
0
Would love your thoughts, please comment.x
()
x