ಕೆಂಗುಲಾಬಿ (ಭಾಗ 13): ಹನುಮಂತ ಹಾಲಿಗೇರಿ


ಅವತ್ತು ಪೂರ್ತಿ ನಾನು ರೂಮಿನಲ್ಲಿ ಏಳಲೂ ಆಗದೆ ಮಲಗಲು ಆಗದೆ ಬಿದ್ದುಕೊಂಡಿದ್ದೆ. ಕಿವಿಯಲ್ಲಿ ಶಾರಿಯ ಮಾತುಗಳೆ ಗುಂಯ್ಗುಡುತ್ತಿದ್ದವು. ಒಂದಿಷ್ಟು ಮಂಪರು, ಒಂದಿಷ್ಟು ಅರೆ ಎಚ್ಚರ ಮತ್ತೆ ಮಂಪರು. ಶಾರಿ ಬದುಕಿನ ಗೋಳಿಗೆ ಇತಿಶ್ರೀ ಹಾಡುವುದೆಂತು ಎಂದು ಯೋಚಿಸಿದ್ದೇ ಬಂತು. ಒಮ್ಮೊಮ್ಮೆ ನೆಮ್ಮದಿಯಿಂದ ಇರುವ ನಾನು ಶಾರಿಯ ಗದ್ದಲದಲ್ಲಿ ಯಾಕೆ ಸಿಲುಕಿಕೊಳ್ಳಬೇಕು? ನಾನು ಮೊದಲಿನಂತಾಗಬೇಕಾದರೆ ಶಾರಿಯನ್ನು ಮತ್ತೆ ಭೇಟಿಯಾಗಲೇಬಾರದು ಎನಿಸಿತು. ಆದ್ರೆ ಮನಸ್ಸಿಗೆ ಒಗ್ಗಲಿಲ್ಲ. ವರದಿ ತಯಾರಿಸಿಕೊಂಡು ಬಾ ಎಂದ ರಾಜನ್ ಹೇಳಿದ್ದು ನೆನಪಾಯಿತು. ಈಗ ಆಗಿರೋದನ್ನ ಆಕ್ಷರಕ್ಕಿಳಿಸಿದೆರೆ ಸ್ವಲ್ಪ ಬಿಡುಗಡೆ ಹೊಂದಬಹುದು ಎಂದೆನಿಸಿ ಹಾಸಿಗೆಯಿಂದ ಮೇಲೆದ್ದೆ. ಬಿಸಿ ಬಿಸಿ ನೀರು ಸುರಿದುಕೊಂಡು ಜಳಕ ಮಾಡಿದೆ. ಎಳೆಂಟು ಪುಟದ ರಿಪೋರ್ಟ್ ತಯಾರಿಸಿದ ನಂತರವೇ ಮನಸ್ಸು ಹಿಡಿತಕ್ಕೆ ಸಿಕ್ಕಿದ್ದು. ಮರುದಿನ ಆಫೀಸಿನಲ್ಲಿ ಸರ್ ಒಳ್ಳೆ ಮೂಡಿನಲ್ಲಿದ್ದರು. ನಿನ್ನೆ ಶಾರದೆಯ ಮನೆಯಲ್ಲಿ ನಡೆದದ್ದನ್ನೆಲ್ಲ ವಿವರವಾಗಿ ಹೇಳಿದೆ. ಸರ್ ಬಹಳ ಆಸಕ್ತಿಯಿಂದ ಕೇಳಿಸಿಕೊಂಡರು. ನನ್ನ ಕಥೆ ಮುಗಿದ ಮೇಲೆ ಎಷ್ಟೋ ಹೊತ್ತಿನವರೆಗೆ ಸುಮ್ಮನೆ ಕುಳಿತಿದ್ದರು. ನಡು ನಡುವೆ ನನ್ನನ್ನು ಮೆಚ್ಚುಗೆಯಿಂದ ನೋಡುತ್ತಿದ್ದರು. ಅವರ ಕಣ್ಣುಗಳು ಆದ್ರ್ರವಾಗಿದ್ದವು. ನಿಧಾನಕ್ಕೆ ಮಾತಾಡಲು ಶುರುಹಚ್ಚಿಕೊಂಡರು. ಅವರ ಮಾತುಗಳಲ್ಲಿ ಅವರ ಇಲ್ಲಿಯವರೆಗಿನ ಅನುಭವ, ಕಾಳಜಿ ಎಲ್ಲವೂ ಕಂಡು ಬಂದವು. ಬಹುಶಃ ಅವರು ತಮ್ಮೊಳಗಿನ ಸಂಕಟವನ್ನು ಯಾರ ಮುಂದಾದರೂ ಹಂಚಿಕೊಳ್ಳಬೇಕೆಂದು ಕಾಯುತ್ತಿದ್ದಂತೆ ಕಾಣುತ್ತೆ.
 
 ‘ಈ ನಿಮ್ಮ ರಿಪೋರ್ಟನಲ್ಲಿ ಈ ಹಾಳು ಪೊಲೀಸರು, ವಕೀಲರು, ಪಿಂಪ್‍ಗಳು, ಘರವಾಲಿಗಳು, ಬಾಡಿಗೆ ಗಂಡಂದಿರು ಹೇಗೆಲ್ಲ ಆ ಹೆಣ್ಣುಮಕ್ಕಳ ದುಡಿಮೆಯಲ್ಲಿ ಪಾಲು ಪಡಿತಾರೆ ಆನ್ನೊದನ್ನು ಚನ್ನಾಗಿ ವಿವರಿಸಿದ್ದಿರಿ ಮಲ್ಲೇಶಿ. ಆದರೆ, ಈ ಪಟ್ಟಿಗೆ ಇನ್ನು ಒಂದಿಷ್ಟು ಪಾಲುದಾರರ ಹೆಸರು ಸೇರಬೇಕು, ವೈದ್ಯರು, ರಾಜಕಾರಣಿಗಳು, ಇವರ ಒಡವೆ ಅಡ ಇಟ್ಟುಕೊಂಡು ಸಾಲ ಕೊಡುವ ಬಡ್ಡಿ ದಂದಾ ಮಾಡುವವರು ಇವರ ದುಡಿಮೆಯ ಬಹುಪಾಲು ಹಣ ನುಂಗತಾರೆ.
 
ಒಮ್ಮೆ ಪೊಲೀಸರ ಕೈಗೆ ಸಿಕ್ಕಿಕೊಂಡರೆ ಈ ಎಲ್ಲ ಪಾಲುದಾರರಿಗೆ ಪಾಲು ಹೋಗುವ ವ್ಯವಸ್ಥೆ ಇದೆ. ಕೆಲವೊಮ್ಮೆ ಅವರನ್ನು ನ್ಯಾಯಾಲಯದೊಳಕ್ಕೆ ಒಯ್ಯದೇ ಕಪ್ಪು ಕೋಟುಗಳ ಮನುಷ್ಯರು ಕೋರ್ಟಿನ ಬಾಗಿಲಲ್ಲಿಯೇ ನ್ಯಾಯ ಪ್ರಪಂಚ ತೋರಿಸಿ ಹಣ ಕೀಳುತ್ತಾರೆ. ಅವರ ಮಂಗನ ನ್ಯಾಯಕ್ಕೆ ಒಪ್ಪದಿದ್ದರೆ ಜೈಲೇ ಗತಿ. ಜೈಲಿನ ಹೊರ ಬರುವ ಖರ್ಚುಗಳನ್ನು ನಿಭಾಯಿಸಲು ಈ ಹೆಣ್ಣಮಕ್ಕಳು ತಮ್ಮ ಮೈಮೇಲಿನ ಓಲೆ, ಕಾಲು ಚೈನು, ಉಂಗುರ ಹೀಗೆ ತಮ್ಮ ಮೈಮೇಲಿನ ಚೂರುಪಾರು ಬಂಗಾರನ್ನು ಅಡವಿಡಬೇಕಾಗಿ ಬರುತ್ತೆ.
 
ಹೀಗೆ ಈ ಹೆಣ್ಣುಮಕ್ಕಳ ಆಭರಣಗಳನ್ನು ಅಡವಿಟ್ಟು ಬಂದ ಹಣದಿಂದ ಅವರನ್ನು ಬಿಡಿಸಿಕೊಳ್ಳುವ ಅವಳ ಬಾಡಿಗೆ ಗಂಡಂದಿರು, ಪಿಂಪ್‍ಗಳೂ ಬಿಡಿಸಿಕೊಂಡಾದ ಮೇಲೆ ತಮ್ಮ ಸುಲಿಗೆ ಸುರುವಿಟ್ಟುಕೊಳ್ಳುತ್ತಾರೆ. ಅವರಿಗೆ ಏನಾದರೂ ಖುಷಿ ಕೊಡಬೇಕು. ಹಣ ಇಲ್ಲದಿದ್ದರೆ ಮೈ ಆದರೂ ಆದೀತು. ಒಮ್ಮೆ ಬಂಧನವಾದರೆ ಏನಿಲ್ಲ ಅಂದರೂ ಕನಿಷ್ಟ ಸಾವಿರ ರೂಪಾಯಿಗಳವರೆಗೆ ಸುಲಿಗೆಯಾಗುತ್ತೆ.  
 
ವೈದ್ಯೋ ನಾರಾಯಣ ಹರಿ ಎಣಿಸಿಕೊಳ್ಳುವ ಡಾಕ್ಟರುಗಳು ಸುಲಿಯುವ ರೀತಿಯಂತೂ ಅತ್ಯಂತ ಅಮಾನುಷ. ಪಾಪ ಈ ಹೆಣ್ಣಮಕ್ಕಳು "ಯಾಕೋ ಉಷ್ಣ ಆಗೈತಿ" ಅಂತ ಒಂದೆರಡು ಮಾತ್ರೆ ತಗೋತಾರೆ. ಆದ್ರೆ ಲೈಂಗಿಕ ಸೊಂಕುಗಳು ಕಡಿಮೆಯಾಗೋದೆ ಇಲ್ಲ. ಉರಿ, ತುರಿತ, ನೋವುಗಳು ಹೆಚ್ಚಾಗುತ್ತವೆ. ಕೆಳ ಹೊಟ್ಟೆನೋವು, ಸೊಂಟನೋವು, ವಿಪರೀತ ರಕ್ತಸ್ರಾವ, ಅನಿಯಮಿತ ಋತುಚಕ್ರಗಳು, ಕಾಲುನೋವು, ಕಿಬ್ಬೊಟ್ಟೆ ನೋವು. ಇವುಗಳು ಲೈಂಗಿಕ ವೃತ್ತಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯವಾದ ಲೈಂಗಿಕ ಸೋಂಕಿನ ಲಕ್ಷಣಗಳು. ಸಾಮಾನ್ಯವಾಗಿ ಈ ಮಹಿಳೆಯರು ಖಾಸಗಿ ವೈದ್ಯರಲ್ಲಿಗೆ ಹೋಗುತ್ತಾರೆ. ಈ ರೋಗ ಲಕ್ಷಣಗಳನ್ನು ಗುರುತಿಸಿದ ಬೆನ್ನಲ್ಲೇ ಆ ವೈದ್ಯರುಗಳು ಈ ಮಹಿಳೆಯರ ಬಗ್ಗೆಯೂ ಗುಮಾನಿ ಶುರು ಮಾಡುತ್ತಾರೆ. ಹೇಗೊ ಇದರಿಂದ ಪಾರಾಗುವ ತವಕ ಅವಳದ್ದು. ಅನೈತಿಕವಾಗಿ ಬೇಕಾದಷ್ಟು ಸಂಪಾದಿಸುತ್ತಾರೆ ಅನ್ನೋ ಒಳಸುಳಿ ಇಂತಹ ವೈದ್ಯರದ್ದು. ಇಂತಹ ಹೆಣ್ಣುಗಳನ್ನು ಪರೀಕ್ಷಿಸಿದಕ್ಕಾಗಿ, ಚಿಕಿತ್ಸೆ ನೀಡಿದಕ್ಕಾಗಿ ಎರಡ್ಮೂರು ಪಟ್ಟು ಹಣ ವಸೂಲಿ ಮಾಡುತ್ತಾರೆ. ಪೊಲೀಸರ ನಂತರ ಈ ದಂಧೆಯ ಫಲಾನುಭವಿಗಳಲ್ಲಿ ಈ ವೈದ್ಯರು ಹಾಗೂ ಔಷಧಿ ತಯಾರಕರೂ ನಂತರದ ಸಾಲಿನಲ್ಲಿ ಬರುತ್ತಾರೆ.  ಲೈಂಗಿಕ ಕಾರ್ಯಕರ್ತೆಯೊಬ್ಳು ಸಾಮಾನ್ಯವಾಗಿ ತಿಂಗಳಿಗೊಮ್ಮೆ ವೈದ್ಯರಲ್ಲಿಗೆ ಹೋಗಲೇಬೇಕು. ಅವರು ಆದೇಶಿಸಿದ ಔಷಧಿಗಳಿಗೆ ಅಂದಾಜು ಮುನ್ನೂರು ರೂ.ಗಳವರೆಗೆ ಕೊಡಬೇಕು. ಎಷ್ಟೇ ಸರ್ಕಾರಿ ಆಸ್ಪತ್ರೆಗಳಿದ್ದರೂ ಅಲ್ಲಿಯ ಸಿಬ್ಬಂದಿ ಮತ್ತು ವೈದ್ಯರುಗಳ ವರ್ತನೆಗಳಿಂದಾಗಿ ಈ ಮಹಿಳೆಯರು ಖಾಸಗಿ ವೈದ್ಯರನ್ನೇ ಅವಲಂಬಿಸುವುದು ಅನಿವಾರ್ಯ. 
 
ಸರ್ಕಾರಿ ವೈದ್ಯರುಗಳೂ ಕೂಡ ಈ ಗುಮಾನಿಯಿಂದಲೇ ಹಣ ವಸೂಲಿ ಮಾಡುತ್ತಾರೆ. ಅದಕ್ಕಿಂತ ಹೆಚ್ಚಾಗಿ ಅಲ್ಲಿ ಕ್ಯೂ ನಿಲ್ಲುವುದು, ಕಾಯುವುದು, ಅವರ ಹೀಯಾಳಿಕೆ ಅನುಭವಿಸುವುದು ಸಹಿಸಲಸಾಧ್ಯ ಎನ್ನತ್ತಾರೆ ಈ ಮಹಿಳೆಯರು. ಹಣ ಹೆಚ್ಚಾದರೂ, ಚಿಕಿತ್ಸೆ ನೀಡುವ, ಸುಲಭವಾಗಿ ಹೊರಬರಬಹುದಾದ ಖಾಸಗಿ ವೈದ್ಯರೇ ಇವರುಗಳಿಗೆ ಅನುಕೂಲ. ಇವತ್ತಿನ ಪರಿಸ್ಥತಿಗಂತೂ ಎಚ್.ಐ.ವಿ ಸೊಂಕು ಮತ್ತು ಅದರ ಸುತ್ತಲಿನ ದೈಹಿಕ -ಮಾನಸಿಕ ತುಮುಲಗಳು, ನೋವು, ಸಂಕಟಗಳು ಕೂಡ ಈ ಮಹಿಳೆಯರ ಬದುಕಿಗೆ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿವೆ. ಎಚ್.ಐ.ವಿ ನಿಯಂತ್ರಣಕ್ಕೆ ಸರ್ಕಾರ ಹಾಗೂ ವಿದೇಶಿ ಸಂಸ್ಥೆಗಳು ಹೆಣಗಾಡಿದರೂ ಎಲ್ಲ ಲೆಕ್ಕಚಾರಗಳನ್ನು ಬುಡಮೇಲೂ ಮಾಡಿ ಈ ಸೊಂಕು ತನ್ನ ಬಾಹುಗಳನ್ನು ಹರಡುತ್ತಲೇ ಇದೆ. 
 
ಉಡುಗೆ ತೊಡುಗೆ ಅಲಂಕಾರ ಸಾಮಗ್ರಿಗಳನ್ನು ಕೊಳ್ಳಲಿಕ್ಕಾಗಿಯೇ ಇವರ ದುಡಿಮೆ ದೊಡ್ಡ ಪಾಲನ್ನು ಖರ್ಚು ಮಾಡಬೇಕಾಗಿದ್ದು, ಅಲ್ಲಿಯೂ ಇವರ ಮೇಲೆ ಶೋಷಣೆ ನಡೆಯುತ್ತದೆ. ಸಾಮಾನ್ಯವಾಗಿ ಈ ಮಹಿಳೆಯರಲ್ಲಿ ಒಮ್ಮೆ ಕೊಳ್ಳಲು ಹಣ ಇರುವುದಿಲ್ಲವಾದ್ದರಿಂದ ಕಂತಿನಲ್ಲಿ ಬಹುತೇಕ ಬಟ್ಟೆಗಳನ್ನು, ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ. ಕಂತಿನಲ್ಲಿ ಕೊಳ್ಳುವುದರಿಂದ ಆ ವಸ್ತುವಿನ ಬೆಲೆಗಿಂತ ಹೆಚ್ಚು ಬೆಲೆ ಇದ್ದರೂ ಅನಿವಾರ್ಯವಾಗಿ ಆ ಬೆಲೆ ತೆರುತ್ತಾರೆ. ಒಟ್ಟಾರೆ ಸಾಲ ಸಿಕ್ಕಿದರೆ ಸಾಕು ಎನ್ನುವಂತೆ ಬೇಕಾದ್ದನ್ನು ಕೊಂಡುಕೊಳ್ಳುತ್ತಾರೆ. ಬೀದಿ ಬದಿಯ ಮಹಿಳೆಯರೂ ಕೂಡ ತಾವು ಬಂದು ನಿಲ್ಲುವ ಸ್ಥಳಗಳ ಸುತ್ತಮುತ್ತಲಿನ ಮಾರ್ಕೆಟ್ ಪ್ರದೇಶದಲ್ಲಿಯೂ ವ್ಯಾಪಾರಸ್ಥರಿಂದ ಬಡ್ಡಿಯಲ್ಲಿ ಸಾಲವಾಗಿ ಪಡೆಯುತ್ತಾರೆ. ಇಲ್ಲಿಯೂ ಅವರು ಹೇಳಿದ್ದೇ ಬೆಲೆ.
 
ಈ ಬಡ್ಡಿ ವಹಿವಾಟು ವಸ್ತುಗಳನ್ನು ಕೊಳ್ಳಲಷ್ಟೇ ಸೀಮಿತವಾಗಿರದೆ, ಇದರ ವಿಸ್ತಾರದ ಬಹಳ ದೊಡ್ಡದಿದೆ. ಹಿಂದೆ ಮಾಡಿದ ಸಾಲ ತೀರಿಸಲು ಮತ್ತೆ ಸಾಲ, ಆ ಸಾಲವೂ ಪೂರ್ತಿ ತೀರದೆ ಹೊಸ ಸಾಲದ ಮೇಲೆ ಸಾಲ ಪದರುಪದರಾಗಿ ಬೆಳೆಯುತ್ತಲೇ ಹೋಗುತ್ತದೆ. ಅನಾರೋಗ್ಯವಾದಾಗ, ನ್ಯಾಯಾಲಯಕ್ಕೆ ದಂಡ ತೆರಲು, ಕೆಲವೊಮ್ಮೆ ಪೊಲೀಸರಿಗೆ ನೀಡಲು, ಮಕ್ಕಳಿಗಾಗಿ, ಕುಟುಂಬದವರ ಅವಲಂಬಿತರಿಗಾಗಿ ನಿರೀಕ್ಷೆಗಳನ್ನು ಪೂರೈಸಲು, ಹೆರಿಗೆ ಸಮಯದಲ್ಲಿ, ಗಿರಾಕಿಗಳು ಸಿಗದಿದ್ದಾಗ ಹೀಗೆ ಅವಳು ಸಾಲ ಪಡೆಯಲು ನೂರಾರು ಅನಿವಾರ್ಯಗಳು ಎದುರಾಗುತ್ತವೆ. ಅದರಲ್ಲಿ ಬೀದಿ ಬದಿಯ ಮಹಿಳೆಗಂತೂ ಇವು ಅನಿವಾರ್ಯ. ಇವರಿಗೆ ಸಾಲವನ್ನಾದರೂ ಯಾರೂ ಕೊಡುತ್ತಾರೆ? ಯಾವ ಗ್ಯಾರಂಟಿಯಲ್ಲಿ ಇವರಿಗೆ ಸಾಲ ಕೊಡುತ್ತಾರೆ.
ಇವರಿಗೆ ಸಾಲ ಕೊಡುವ ದಂಧೆಯನ್ನೇ ಜೀವನಾಧಾರವನ್ನಾಗಿಸಿಕೊಂಡಿರುವ ಒಂದು ಜಾಲವೇ ನಗರಗಳಲ್ಲಿ ಬೀಡು ಬಿಟ್ಟಿರುತ್ತದೆ. ಸಾಮಾನ್ಯವಾಗಿ ಪೊರ್ಕಿಗಳು, ರೌಡಿಗಳು, ಬ್ರೋಕರ್‍ಗಳು, ಬಾಡಿಗೆ ಗಂಡಂದಿರು, ಈ ಲೇವಾದೇವಿ ನಡೆಸುತ್ತಾರೆ. ಇವರುಗಳಿಗೆ ಈ ಮಹಿಳೆಯರು ಪರಿಚಿತರು ಒಡನಾಡಿಗಳು ಆಗಿರುತ್ತಾರೆ. ಈ ಮಹಿಳೆಯರು ಬಂಧನಕ್ಕೊಳಗಾದಾಗ ದಂಡ, ಮಾಮೂಲಿ ಕೊಟ್ಟು ಬಿಡಿಸಿರುತ್ತಾರೆ. ಈ ಮಹಿಳೆಯರಿಗೆ ಅಗತ್ಯವಿದ್ದಾಗಲೆಲ್ಲ ಆಪದ್ಬಾಂದವರಂತೆ ಇರುತ್ತಾರೆ. ಆದರೆ ಸಾಲಗಾರನಿಗೆ ಲೈಂಗಿಕ ವೃತ್ತಿ ಮಹಿಳೆಯ ಬಗ್ಗೆ ಇರುವ ಒಂದೇ ಗ್ಯಾರಂಟಿ ಅವರ ವೃತ್ತಿ. ಇವರ ಸಾಲ ತೀರಿಸಲಾದರೂ ಅವರು ಈ ವೃತ್ತಿಗೆ ಬರಲೇಬೇಕು. ಹಣ ವಸೂಲಿಗಾಗಿ ವ್ಯಾಪಾರ ಕುದುರಿಸುವುದರಿಂದ ಹಿಡಿದು ಅವಳು ಸೀರೆ ಕೊಡವಿಕೊಂಡು ಲಾಡ್ಜನಿಂದ ಹಿಂತಿರುಗಿ ಬರುವವರೆಗೂ ಅವರು ಅವಳ ಮೇಲೆ ಒಂದು ಕಣ್ಣಿಟ್ಟರುತ್ತಾರೆ. ಅವಳು ಕೂಡ ಚಾಲಾಕಿ ಲಾಡ್ಜಿನೊಳಗಡೆಯೇ ಒಂದಷ್ಟು ದುಡ್ಡನ್ನು ಎದೆಯೊಳಗೆ ತುರುಕಿಕೊಂಡು ಇನ್ನುಳಿದ ಅರ್ಧದಷ್ಟನ್ನು ತಂದು ಸಾಲಗಾರನಿಗೆ ಒಪ್ಪಿಸುತ್ತಾಳೆ. ಆದರೆ, ಇದು ಮುಗಿಯಲಾರದ ಸಾಲ. ಬಡ್ಡಿ ಮತ್ತು ಅಸಲು ಏರುತ್ತಲೇ ಹೋಗುತ್ತಿರುತ್ತದೆ. 
 
ಇನ್ನು ದಿನನಿತ್ಯದ ಖರ್ಚುಗಳು ಇವಳನ್ನು ಎಳೆದಾಡುತ್ತಲೇ ಇರುತ್ತವೆ. ಕುಡಿಯಲು, ಕುಡಿದು ಮೈ ಮರೆಯಲು, ಮೈ-ಮನಗಳನ್ನು ಮರೆತು ಗಿರಾಕಿಗಳಿಗೆ ತನ್ನನ್ನು ಸರಕಾಗಿಸಲು ಹೆಣಗಾಡುತ್ತಲೇ ಇರುತ್ತಾಳೆ. ಕೆಲವೊಮ್ಮೆ ಗಿರಾಕಿಗಳೇ ಇವರಿಗೆ ಕುಡಿಸುತ್ತಾರೆ. ಊಟ ಕೊಡಿಸುತ್ತಾರೆ. ಇದರ ಜೊತೆಗೆ ಸದಾ ಜಗಿಯುತ್ತಲೇ ಹಗಲು ರಾತ್ರಿಗಳನ್ನು ಉರುಳಿಸಲು ಪಾನ್‍ಪರಾಗ್ ಮಾಣಿಕ್‍ಚಂದ್ ಅಥವಾ ಅದೇ ತರಹದ ಪೊಟ್ಟಣಗಳಿಗೆ ಸುಮಾರು ಹತ್ತಿಪ್ಪತ್ತು ರೂ.ಗಳನ್ನು ಖರ್ಚು ಮಾಡುತ್ತಾಳೆ. 
ತನಗಾಗಿ ಕಾಯುತ್ತಿರುವ ಮಕ್ಕಳನ್ನು ಬೇರೆ ಯಾರದ್ದೋ ಹಂಗಿಗೆ ಬಿಟ್ಟು ಬಂದ ತಪ್ಪಿಗೆ, ತನಗೆ ಖುಷಿಯಾದಾಗ, ಹಣ ಅಥವಾ ಸಾಲ ದಕ್ಕಿದಾಗ, ತಾನು ಹೆಚ್ಚು ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಎನ್ನುವ ಗಿಲ್ಟ್ ಕಾಡಿದಾಗ, ಗಿರಾಕಿಗಳು ಹೋಗುವರೆಗೂ ಹೊರಗೆ ಆಟವಾಡಿಕೊಂಡೋ, ಕಾಯ್ದುಕೊಂಡೋ, ಇರುವ ಮಕ್ಕಳನ್ನು ಸಂತೈಸುವಾಗ ತನ್ನ ಕಂದಮ್ಮಗಳಿಗೆ ಖುಷಿಯಿಂದ ಬಟ್ಟೆನೋ ಮತ್ತೇನನ್ನೋ ಕೊಡಿಸತಾಳೆ. ಅವಳು ಮಕ್ಕಳಿಗಾಗಿ ಉಳಿತಾಯ ಮಾಡುವ ಸಾಧ್ಯತೆಯೇ ಕಡಿಮೆ. ಆಸೆಯಿದ್ದರೂ ಸಾಧ್ಯವಾಗುವುದಿಲ್ಲ. ಮಕ್ಕಳು ಅವರ ಬದುಕಿನೊಂದಿಗೆ ಸಹಜ ಮಕ್ಕಳಾಗಿ ಬದುಕು ರೂಪಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ.’
ಈ ಎಲ್ಲ ವಿಚಾರಗಳನ್ನು ಅವತ್ತು ಎಷ್ಟೊ ಹೊತ್ತಿನವರೆಗೆ ರಾಜನ್ ಸರ್ ಮಾತಾಡುತ್ತಲೇ ಇದ್ದರು. ಈ ಲೈಂಗಿಕ ಕಾರ್ಮಿಕರ ಬಗೆಗಿನ ಅವರ ಕಾಳಜಿ, ಅನುಭವ ಮತ್ತು ಅಧ್ಯಯನ ಸಾಕಷ್ಟು ಒಳನೋಟಗಳಿಂದ ಕೂಡಿತ್ತು. ಅವರು ಹೇಳುತ್ತಿದ್ದುದನ್ನು ನಾನು ಆಗಾಗ ನೋಟ್ ಮಾಡಿಕೊಳ್ಳುತ್ತಿದ್ದೆ. ಅವರಿಂದ ಬೀಳ್ಕೊಡುವ ಮುನ್ನ ಅವರು ತಮ್ಮ ಡ್ರಾಯರ್‍ನಿಂದ ಒಂದು ದಪ್ಪ ಪುಸ್ತಕವನ್ನು ಕೊಟ್ಟು ‘ಇದರಲ್ಲಿ ನಮ್ಮ ಈ ಯೋಜನೆಯ ಉದ್ದೇಶ, ಹಣದ ಮೂಲ, ಫಲಾನುಭವಿಗಳು, ಕಾರ್ಯಚಟುವಟಿಕೆಗಳು, ಇಲ್ಲಿಯವರೆಗೆ ಸಾಧಿಸಲಾಗಿರುವ ಪಕ್ಷಿನೋಟ ಎಲ್ಲವೂ ಇದೆ. ಮುಖ್ಯವಾಗಿ ಇದರಲ್ಲಿ ಕೆಲವು ಮಹಿಳೆಯರು ಸ್ವತಃ ತಾವು ಯಾಕೆ ಈ ವೃತ್ತಿಗೆ ಬಂದೆವು ಎಂಬುದನ್ನು ಹೇಳಿಕೊಂಡಿದ್ದನ್ನು ದಾಖಲಿಸಲಾಗಿದೆ. ದಯವಿಟ್ಟು ಓದಿಕೊಂಡು ಬನ್ನಿ. ಬೆಸ್ಟ್ ಆಫ್ ಲಕ್' ಎಂದು ಹರಸಿ ಬಿಳ್ಕೊಟ್ಟರು.
* * *
 
ಮರುದಿನ ನಾನು ಬೆಂಗೇರಿಯಲ್ಲಿರುವ ನನ್ನ ಗೆಳೆಯ ಅನಾಥ ಮಕ್ಕಳಿಗಾಗಿ ನಡೆಸುತ್ತಿದ್ದ ಶಾಲೆಗೆ ಭೇಟಿ ನೀಡಿ ರಾಜಿಯ ಅಡ್ಮಿಷನ್ ಮಾಡಿಸಲು ತಯಾರಾದೆ. ರಾಜಿಗಾಗಿ ಚಂದನೆಯ ಮೂರು ಜೊತೆ ಬಟ್ಟೆಗಳನ್ನು ತೆಗೆದುಕೊಂಡು ಹೋದೆ. ಶಾರಿ ಈಗಲೂ ಕೂಡ ರಾಜಿಯನ್ನು ಕಳುಹಿಸಿ ಕೊಡುವ ಕುರಿತ ದುಗುಡದಲ್ಲಿಯೆ ಇದ್ದಳು. ನಾನು ಮಗುವನ್ನು ಕಳುಹಿಸಿಕೊಡುವುದಿಲ್ಲವೆಂದು ಮತ್ತೆ ವರಾತ ತೆಗೆಯುತ್ತಾಳೆಯೋ ಎಂಬ ಭಯದಲ್ಲಿಯೇ ಇದ್ದೆ. ಆದರೆ, ತನ್ನ ಮಗುವಿಗೆ ಒಳ್ಳೆಯದಾಗುವುದಾದರೆ ಸಾಕು ಎಂಬ ತೀರ್ಮಾನಕ್ಕೆ ಅವಳು ಬಂದಂತಿತ್ತು. ಮುದುಕಿ ಕೂಡ ಸಂಭ್ರಮದಲ್ಲಿದ್ದಳು. 
ಅಂದು ಶಾರಿ ಇದ್ದುದರಲ್ಲಿಯೆ ಒಳ್ಳೆಯ ಒಂದು ಸೀರೆ ಉಟ್ಟುಕೊಂಡು ನನ್ನ ಜೊತೆ ಬಂದಿದ್ದಳು. ಆ ಶಾಲೆಯ ಅನಾಥ ಮಕ್ಕಳು ನಮ್ಮನ್ನು ಅರಳುಗಣ್ಣುಗಳನ್ನು ಬಿಟ್ಟುಕೊಂಡು ಸ್ವಾಗತಿಸಿದವು. ಆಶ್ರಮದ ಮುಖ್ಯಸ್ಥೆ ನಮ್ಮಿಬ್ಬರಿಂದ ಒಂದೆರಡು ಸಹಿಗಳನ್ನು ಮಾಡಿಸಿಕೊಂಡಳು. ಹುಡುಗಿಯ ಖರ್ಚಿಗೆ ಪ್ರತಿ ತಿಂಗಳು ಒಂದು ಸಾವಿರ ರೂ. ಕಟ್ಟಬೇಕಾಗುತ್ತದೆ ಎಂದು ಹೇಳಿದಳು. ನಾನು ಅದಕ್ಕೆ ಸಿದ್ದನಾಗಿಯೇ ಇದ್ದೆ.
 
ಅಡ್ವಾನ್ಸ್ ಐದು ಸಾವಿರ ರೂ.ಗಳನ್ನು ಕಟ್ಟಿದೆ. ಶಾರಿ ಕಣ್ಣು ತುಂಬಿ ಬಂದು ನನ್ನನ್ನೇ ನೋಡುತ್ತಿದ್ದಳು. ರಾಜಿ ಆಶ್ರಮದ ತುಂಬಾ ತನ್ನ ಕುತೂಹಲದ ಕಣ್ಣುಗಳನ್ನು ಚಲ್ಲಿದ್ದಳು. ಆಶ್ರಮದ ಕೊಠಡಿಗಳಿಂದ ರಾಜಿಯ ವಯಸ್ಸಿನ ಹತ್ತಾರು ಹುಡುಗಿಯರು ಮತ್ತೊಬ್ಬ ಹೊಸ ಗೆಳತಿ ತಮ್ಮ ಆಶ್ರಮಕ್ಕೆ ಬಂದಿದ್ದಾಳೆ ಎಂದು ಕಿಡಕಿಗೆ ಜೋತುಬಿದ್ದು ನೋಡುತ್ತಾ ಮುಖದಲ್ಲಿಯೆ ನಗುತ್ತಾ ರಾಜಿಯನ್ನು ಸ್ವಾಗತಿಸುತ್ತಿದ್ದರು.
ಅಡ್ಮಿಷನ್ನಿನ ಕೆಲಸವೆಲ್ಲವೂ ಮುಗಿದಾದ ಮೇಲೆ ಶಾರಿ ರಾಜಿಯನ್ನು ಪಕ್ಕಕ್ಕೆ ಕರೆದು ಒಂದಿಷ್ಟು ಬುದ್ದಿ ಮಾತು ಹೇಳಿದಳು. ಕೊನೆಗೆ ಭಾರವಾದ ಮನಸ್ಸಿನಿಂದ ಆಶ್ರಮದಿಂದ ಹೊರ ಬಿವು. ನನ್ನಲ್ಲಿ ಹಳೆಯ ಆಸೆಯೊಂದು ಚಿಗುರಿ ಹೆಡೆಬಿಚ್ಚಿ ಮತ್ತೆ ನನ್ನನ್ನು ಕಾಡತೊಡಗಿತು. ಅಲ್ಲಿಂದ ಮನೆಗೆ ಬಂದ ಮೇಲೆ ನಾನು ಹೆದರುತ್ತಲೇ ಶಾರಿಯನ್ನು ಒಂದು ಮಾತು ಕೇಳಿದೆ. 'ಈಗಲಾದರೂ ಕಾಲ ಮಿಂಚಿಲ್ಲ ಶಾರಿ. ನೀ ಹೂಂ ಅಂದ್ರ ನಾನು ನಿನ್ನ ಮದುವಿಯಾಗತೇನಿ'. ಹಿಂದೆಂದೆಲ್ಲಾ ಮರೆತು ಇಬ್ಬರೂ ಆರಾಮ ಇರೂನು.'
 
ಶಾರಿ ಒಂದು ಗಳಿಗೆ ನನ್ನತ್ತ ದೀನನೇತ್ರಳಾಗಿ ನೋಡಿದಳು, ಅವಳ ಮುಖದಲ್ಲಿ ಆ ಗಳಿಗೆಯಲ್ಲಿ ಎಂದೂ ಇಲ್ಲದ ಹರ್ಷದ ಎಳೆಯೊಂದು ಕಂಡಿತು. ಒಡನೆಯೇ ಅದು ಮಾಯವಾಗಿ ಮುಖ ಮತ್ತೆ ಹಳೆಯ ಗಂಭೀರತೆಯನ್ನು ಧರಿಸಿತು. ಅವಳಿಗೆ ಇನ್ನೇನು ಅಳು ಬರುವುದರಲ್ಲಿತ್ತು, ಅದನ್ನು ತಡೆದುಕೊಂಡು ಅವಳು ಹೇಳಿದಳು. 'ನಿನ್ನ ದೊಡ್ಡ ಮನಸ್ಸಿಗೆ ನನಗ ಕಣ್ಣೀರ ಬರತಾವು ಮಲ್ಲೇಶಿ. ಆದ್ರ ನೀ ಚೆಲೊತಂಗ ಇರಬೇಕಂತ ನಾ ಬಯಸಾಕಿ. ಎಂಥೆಂಥೋರಿಗೆ ಮೈ ಮನ ಒಪ್ಪಿಸಿದೋಳು ನಾನು. ನೀನು ಕಲ್ತಾವ. ನನ್ನ ಕಟಗೊಂಡು ಏನು ಮಾಡ್ತಿ. ನೀನಾದ್ರೂ ಚಲೊತಂಗ ಇರು. ಚಲೋ ಕಲ್ತ ಹೆಣ್ಣು ಮದುವಿಯಾಗು. ನಿನ್ನ ಬದುಕಾದ್ರು ಚಲೋ ಆಗಲಿ' ಎಂದು ಏನೇನೋ ಹೇಳಿ ಒಪ್ಪದೆ ಹೋದಳು. 
 
ನಾನು ಊರಿಗೆ ಹೋದಾಗೊಮ್ಮೆ ಅವ್ವ ನನ್ನನ್ನು ಮದುವೆಯಾಗೆಂದು ಪೀಡಿಸುತ್ತಲೆ ಇದ್ದಳು. ನಾನು ಅದೂ ಇದೂ ಕಾರಣಗಳನ್ನು ಹೇಳಿ ಮುಂದಕ್ಕೆ ಹಾಕುತ್ತಲೆ ಇದ್ದೆ. ಅಲ್ಲದೆ ನನ್ನಂಥ ದೇವದಾಸಿಯ ಮಗನಿಗೆ ಕನ್ಯಾ ಕೊಡುವವರಾದರೂ ಯಾರು? ಆದ್ರೆ  ಇಲ್ಲಿ ಶಾರಿ ಬೇರೆ ‘ನೀನು ಮದುವೆಯಾಗುವ ಮಟಾ ನಿನ್ನ ಮುಖ ನನಗ ತೋರಿಸಬೇಡ. ನಿನ್ನ ಕೂಡ ನಾ ಮಾತಾಡುದಿಲ್ಲ' ಎಂದು ಹಟ ಹಿಡಿದಿದ್ದಳು. ಇದರ ಮಧ್ಯೆ ನಾನು ನನ್ನ ಎನ್‍ಜಿಓ ಒಂದರಲ್ಲಿ ಕೆಲಸ ಮಾಡುತ್ತಿದ್ದ ಗೆಳೆಯನನ್ನು ಒಮ್ಮೆ ಕರೆದುಕೊಂಡು ನಮ್ಮೂರಿಗೆ ಹೋಗಿದ್ದೆ. ಆಗ ನಾನು ಅವ್ವಳಿಗೆ ಇಲ್ಲಿ ಒಬ್ಬಳೆ ಇರೋದು ಬೇಡ. ನನ್ನ ಜೊತೆ ಬಂದು ಬಿಡು ಎಂದು ಗಂಟು ಬಿದ್ದೆ. ಆದ್ರೆ ಅವಳು ಹಟಮಾರಿ. ನೀ ಮದುವೆಯಾದ್ರೆ ಮಾತ್ರ ಬರ್ತಿನಿ. ಎಂದ್ಲು. ಅಷ್ಟೆ ಅಂದಿದ್ದರೆ ಸಾಕಾಗಿತ್ತು. ಆದರೆ ನನ್ನ ಗೆಳೆಯನ ಮುಂದೆಯೂ ನನ್ನ ಮದುವೆಯ ಪ್ರಸ್ತಾಪ ಮಾಡಿದಳು. ಗೆಳೆಯ ಆಗಲೆ ಏನನ್ನೋ ಎಣಿಕೆ ಹಾಕತೊಡಗಿದ್ದ.
 
ಗೆಳೆಯ ಕೂಡ ನಮ್ಮ ಸಮುದಾಯದವನೇ ಆದುದ್ದರಿಂದ ಮುಂದಿನ ಹಬ್ಬಕ್ಕೆ ಆತ ನನ್ನನ್ನು ತನ್ನ ಮನೆಗೆ ಕರೆದುಕೊಂಡ ಹೋದ. ಅಲ್ಲಿ ಅವನ ತಂಗಿಗೆ ನಾನು ಒಪ್ಪಿಗೆಯಾಗಿದ್ದೆ. ಅದನ್ನು ನಮ್ಮವ್ವನವರೆಗೂ ಸುದ್ದಿ ಮಾಡಿದರು. ನಾನಿಲ್ಲಿ ಹುಬ್ಬಳ್ಳಿಯಲ್ಲಿ ಕೆಲಸದಲ್ಲಿ ಬಿಜಿಯಾಗಿದ್ದರೆ, ಅಲ್ಲಿ ಅವ್ವ ನನ್ನ ಗೆಳೆಯನ ಮನೆಗೆ ಹೋಗಿ ಅವನ ತಂಗಿಯನ್ನು ನೋಡಿಕೊಂಡು ಬಂದಿದ್ದಳು. ಎರಡು ಕಡೆಯ ಮನೆಗಳಿಗೂ ಒಪ್ಪಿಗೆಯಾಗಿತ್ತು. ನನ್ನ ಒಪ್ಪಿಗೆಯ ಬಗ್ಗೆ ಯಾರೂ ಕೇಳಲೆ ಇಲ್ಲ. ಒಂದು ದಿನ ಹಣ್ಣು ಕಾಯಿ ಇಟ್ಟು ನಿಶ್ಚಿತಾರ್ಥ ಕಾರ್ಯ ಮುಗಿಸಿದ್ದರು. ನಾನು ಮುಂದಿನ ರಜೆಗೆ ಊರಿಗೆ ಹೋದಾಗ ಮದುವೆಯ ಅಧ್ಯಾಯ ಮುಗಿದು ಹೋಯಿತು.


(ಮುಂದುವರೆಯುವುದು)
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
sharada.m
sharada.m
10 years ago

nice story

1
0
Would love your thoughts, please comment.x
()
x