ತಿರಂಗಾ ಧ್ವಜದ ರೂವಾರಿ ಪಿಂಗಳಿ ವೆಂಕಯ್ಯ: ನಾರಾಯಣ ಬಾಬಾನಗರ

ಏರುತಿಹುದು. . ಹಾರುತಿಹುದು ನೋಡು ನಮ್ಮ ಬಾವುಟಾ!!

ಪುಟಾಣಿಗಳೇ, ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ನೀವು ಉಂಡಿರಬಹುದು. ಝೇಂಡಾ ಊಂಚಾ ರಹೇ ಹಮಾರಾ…ದಂತಹ ಹಾಡುಗಳನ್ನು ಹಾಡಿ, ಹೆಮ್ಮೆ ಗೌರವದಿಂದ ತಲೆ ಎತ್ತಿ, ನಮ್ಮ ದೇಶದ ಬಾವುಟಕ್ಕೆ ವಂದನೆ ಸಲ್ಲಿಸುತ್ತೀರಿ. ಬಾನಂಗಳದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕೂಡಿದ ಧ್ವಜ ಪಟ. . ಪಟನೆ ಹಾರಾಡುತ್ತಿದ್ದರೆ ನಮ್ಮ ಕಣ್ಣಿಗೆ ಹಬ್ಬ. ನಮ್ಮ ಭಾರತದ ಬಾವುಟ ನಮಗೆಷ್ಟು ಆಪ್ತವಾದದ್ದು, ಆಪ್ಯಾಯಮಾನವಾದದ್ದು ಎಂದನಿಸುತ್ತದಲ್ಲವೇ?

ಬಾವುಟದ ಚಿತ್ರ ಬಿಡಿಸಿ ಹೆಮ್ಮೆಯಿಂದ ನೀವು ಬೀಗಿರಲೂ ಸಾಕು. ನೀವು ಚಿತ್ರ ಬಿಡಿಸಿದ ಅಳತೆಗೂ ವಾಸ್ತವವಾಗಿ ಬಾವುಟದ ಅಳತೆಗೂ ವ್ಯತ್ಯಾಸವಿದೆ ಎನ್ನವುದನ್ನು ಗಮನಿಸಿ. . ಧ್ವಜ ರೂಪಿಸುವಾಗ ಒಂದಿಷ್ಟು ನಿಯಮಗಳಿವೆ. ನಮ್ಮ ಬಾವುಟವನ್ನು ಖಾದಿ ಬಟ್ಟೆಯಿಂದಲೇ ರೂಪಿಸಬೇಕು. ಧ್ವಜದ ಅಳತೆಯು ಕರಾರುವಕ್ಕಾಗಿರಬೇಕು, ಅಂದರೆ ಉದ್ದವು ಯಾವಾಗಲೂ ಅಗಲಕ್ಕಿಂತ 1. 5 ಪಟ್ಟು ಹೆಚ್ಚಿರಬೇಕು. ಕೇಸರಿ, ಹಸಿರು, ಬಿಳಿ ಬಣ್ಣದ ಪಟ್ಟಿಗಳು ಒಂದೇ ಅಳತೆಯಲ್ಲಿರಬೇಕು. ಹೆಚ್ಚು ಕಡಿಮೆ ಇರಕೂಡದು.

ಧ್ವಜದಲ್ಲಿನ ಬಣ್ಣಗಳೂ ಒಂದೊಂದು ಸಾಂಕೇತಿಕ ಅರ್ಥವನ್ನು ತಿಳಿಸಿಕೊಡುತ್ತವೆ. ಕೇಸರಿಯು ಧೈರ್ಯ, ತ್ಯಾಗವನ್ನು ಪ್ರತಿಬಿಂಬಿಸಿದರೆ ಬಿಳಿ ಬಣ್ಣವು ಸತ್ಯ, ಶಾಂತಿ, ಶುದ್ಧತೆಯ ಸಂಕೇತ. ಹಸಿರು ಬಣ್ಣ ಅಭಿವೃದ್ಧಿಯನ್ನು ಸಾಂಕೇತಿಸುತ್ತದೆ. ಬಿಳಿಯ ಬಣ್ಣದ ಮಧ್ಯದಲ್ಲಿ ನೀಲಿ ಬಣ್ಣದ ಚಕ್ರವಿದೆ. ಚಕ್ರದಲ್ಲಿ ಇರುವ ಕಡ್ಡಿಗಳ ಸಂಕೇತ 24. ಚಕ್ರ ಧರ್ಮ ಮತ್ತು ನ್ಯಾಯದ ಸಂಕೇತ.

ನಮ್ಮ ದೇಶದ ಬಾವುಟದ ರೂವಾರಿ ಪಿಂಗಳಿ ವೆಂಕಯ್ಯ. ಸ್ವಾತಂತ್ರ್ಯ ಯೋಧನಾಗಿದ್ದ ಪಿಂಗಳಿ ವೆಂಕಯ್ಯ ಭೂಗರ್ಭ ಶಾಸ್ತ್ರ, ಕೃಷಿ, ಶಿಕ್ಷಣ ವಿಷಯಗಳಲ್ಲಿ ಪಾಂಡಿತ್ಯ ಗಳಿಸಿದ್ದರು. ಪಿಂಗಳಿ ವೆಂಕಯ್ಯ 1921 ರಲ್ಲಿ ಬಾವುಟದ ವಿನ್ಯಾಸ ಮಾಡಿದ್ದು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಾವೇಶಕ್ಕಾಗಿ ಬಾವುಟದ ರಚನೆಯಾಗಿತ್ತು. ಈ ರೀತಿ ತಯಾರಿಸಿದ ಬಾವುಟ ಕೇವಲ ಕೇಸರಿ, ಹಸಿರು ಎರಡು ಬಣ್ಣಗಳನ್ನು ಮಾತ್ರ ಒಳಗೊಂಡಿತ್ತು. ಬಿಳಿ ಬಣ್ಣವಾಗಲೀ ಚಕ್ರವಾಗಲೀ ಇರಲಿಲ್ಲ. ಮಹಾತ್ಮಾ ಗಾಂಧಿ ಬಿಳಿ ಬಣ್ಣದ ಸೇರ್ಪಡೆಗೆ ಸಲಹೆ ನೀಡಿದರು. ಅವರ ಸಲಹೆ ಮೇರೆಗೆ ಬಿಳಿ ಬಣ್ಣವನ್ನು ಸೇರಿಸಲಾಯಿತು. ಅನಂತರ 22 ಜುಲೈ 1947 ರಂದು ಈಗಿನ ಬಾವುಟವನ್ನು ಅಧಿಕೃತವಾಗಿ ಒಪ್ಪಿಕೊಳ್ಳಲಾಯಿತು.

ಪಿಂಗಳಿ ವೆಂಕಯ್ಯ ರಚಿಸಿದ ಬಾವುಟ ಒಂದಿಷ್ಟು ಬದಲಾವಣೆಗಳನ್ನು ಕಂಡು ಸ್ವತಂತ್ರ ಭಾರತದ ಬಾವುಟವಾಗಿ ಹಾರಾಡಿತು. ಪಿಂಗಳಿ ವೆಂಕಯ್ಯ ಮಛಲೀಪಟ್ಟಣದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಆದರೆ ಬಡತನದ ಬೇಗೆಯಲ್ಲಿಯೇ ಅವರು ಅಸು ನೀಗಬೇಕಾಯಿತು. ಅವರ ಗೌರವಾರ್ಥ ಭಾರತ ಸರಕಾರ 2009 ರಲ್ಲಿ ಅಂಚೆ ಚೀಟಿಯನ್ನು ಹೊರತಂದಿತು. ಮರಣೋತ್ತರವಾಗಿ ಪಿಂಗಳಿ ವೆಂಕಯ್ಯ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಎದ್ದ ಕೂಗು ಎತ್ತರಕ್ಕೆ ಏರಲಿಲ್ಲ. ಅದು ವಿಪರ್ಯಾಸದ ಸಂಗತಿ.

ಮಕ್ಕಳೇ, ಸಡಗರದಿಂದ ಪ್ರಭಾತ ಫೇರಿ ಮಾಡಿಯಾದ ಮೇಲೆ, ಮನೆಯಲ್ಲಿನ ನಿಮ್ಮ ಅಜ್ಜ-ಅಜ್ಜಿಯಿಂದ ಸ್ವಾತಂತ್ರ್ಯ ಸಿಕ್ಕಾಗ ಅವರಿಗಾಗಿದ್ದ ಅನುಭವಗಳನ್ನು, ದೇಶದಲ್ಲಿ ಆಗ ನಡೆದ ಸಂಭ್ರಮಾಚರಣೆಗಳನ್ನು ಕೇಳಿ ಆನಂದಿಸಿರಿ.

-ನಾರಾಯಣ ಬಾಬಾನಗರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಭಾಗ್ಯ.Teggelli
ಭಾಗ್ಯ.Teggelli
4 years ago

ರಾಷ್ಟ್ರ ಧ್ವಜದ ರೂವಾರಿ ಯಾರು ಅಂತ ತಿಳಿಸಿಕೊಡುವುದರ ಜೊತೆಗೆ ಅದರ ಒಂದು ಅಳತೆಯ ಕುರಿತಾಗಿ ಒಳ್ಳೆಯ ಮಾಹಿತಿ ಇದೆ..ಮೊದಲಿಗೆ ರೂಪುಗೊಂಡಾಗ ಎರಡು ಬಣ್ಣಗಳಿದ್ದು ನಂತರ ಗಾಂಧೀಜಿಯವರ ಸಲಹೆಯಂತೆ ಶ್ವೇತ ವರ್ಣವು ಸೇರ್ಪಡೆಯಾಗಿದ್ದು ವಿಶೇಷ ಮಾಹಿತಿ..ಕನ್ನಡದಲ್ಲಿ ಇಂತಹ ಬರೆಹಗಳು ಇನ್ನೂ ಮೂಡಿಬರಲಿ..

1
0
Would love your thoughts, please comment.x
()
x