ಅಂತರಾಗ್ನಿ (ಭಾಗ ೨): ಕಿರಣ್. ವ್ಹಿ

ಇಲ್ಲಿಯವರೆಗೆ

ಆಗಲೇ ಮೊವತ್ತು ಕಿಲೋಮೀಟರ್ ಪ್ರಯಾಣಿಸಿಯಾಗಿತ್ತು. ಮುಂದೆ ಸಿಗುವುದು ಬರೀ ಕಾನನ, ತಿರುವು-ಮುರುವು ರಸ್ತೆ ಹಾಗು ನೀರವ ಮೌನವೆಂದು ಅವನಿಗೆ ಗೊತ್ತಿತ್ತು. ಇದನ್ನೇ ಅರಸಿ ಅವನ ಅಂತರಾಳ ಇಲ್ಲಿಗೆ ಕರೆದುಕೊಂಡು ಬಂದಿತ್ತೊ ಏನೊ…! ಸಪ್ತಗಿರಿಯದು ದೊಡ್ಡ ಘಾಟ್ ಆಗಿತ್ತು. ಸುಮಾರು ನಲವತ್ತು ಕಿಲೋಮೀಟರ್ ನಷ್ಟು ರಸ್ತೆ ತಿರುವಿನಿಂದಲೆ ಕೂಡಿತ್ತು. ಒಂದು ಬದಿಗೆ ಮುಗಿಲು ಮುಟ್ಟುವಷ್ಟು ಎತ್ತರದ ಗುಡ್ಡ, ಮತ್ತೊಂದು ಬದಿಗೆ ನೆಲ ಕಾಣಿಸದಷ್ಟು ಆಳವಾದ ಪ್ರಪಾತ. ಅದೆಷ್ಟು ಅಮಾಯಕ ಜೀವಿಗಳು ಪ್ರಾಣ ತೆತ್ತಿವೆಯೋ ಏನೊ. ಕಾಡು ಎಷ್ಟೊಂದು ದಟ್ಟವಾಗಿತ್ತೆಂದರೆ, ಸೂರ್ಯನ ಕಿರಣಗಳೂ ಸಹ ನೆಲವನ್ನು ಮುಟ್ಟಲು ಹಿಂದುಮುಂದು ನೋಡುತ್ತಿದ್ದವು. ಹಕ್ಕಿಗಳ ಕಲರವ, ಮಂಗಗಳ ಚೇಷ್ಟೆ, ತಂಪಾದ ಗಾಳಿ ಎಲ್ಲವೂ ಹಿತವೆನಿಸಿತು. ಆಹಾ…! ನಿಸರ್ಗವೆಷ್ಟು ಅದ್ಭುತ. ಯುಗಯುಗಗಳು ಕಳೆದರೂ, ತನ್ನ ನೀರವತೆಯನ್ನು ಎಂದೂ ಬಿಟ್ಟುಕೊಡುವುದಿಲ್ಲ. ಪಾಪ….! ಮಾನವನ ಕ್ರೂರ ದೃಷ್ಟಿಗೆ ಸಿಲುಕಿ ಭಸ್ಮವಾಗುತ್ತಿದೆ. ಎಂತಹ ಪಾಪಿ ಈ ಮನುಷ್ಯ. ನನ್ನಲ್ಲಿ ಲೀನವಾಗಿ, ಎಂದು ಬಿಗಿದಪ್ಪಿಕೊಳ್ಳಲು ಬಂದ ಪ್ರಕೃತಿಮಾತೆಯನ್ನೆ ಕತ್ತರಿಸಿ, ತುಂಡರಿಸಿ ತಿನ್ನುವಷ್ಟು ಕೀಳುಮಟ್ಟಕ್ಕೆ ಇಳಿದು ಬಿಟ್ಟಿದ್ದಾನೆ. ಛೀ…! ಎಂದು ಬೈದುಕೊಂಡ. ತನಗ್ಯಾಕೆ ಹೀಗೆನ್ನಿಸುತ್ತಿದ?. ಬಹುಶಃ ಇದು ನೊರನೇ ಬಾರಿ ಏನೊ.ತೊಂಭತ್ತೊಂಭತ್ತು ಬಾರಿ ಬಂದಾಗಲೂ ಹೀಗೆನ್ನಿಸಿರಲಿಲ್ಲ. ಇದೇನು ವಿಚಿತ್ರ ಅನುಭವ ಎಂದು ವಿಸ್ಮಿತನಾದ.

ಒಂದೊಂದು ತಿರುವು ಅದ್ಭುತ. ನಿಸರ್ಗದಲ್ಲಿ ನಾನು ಕೂಡ ಲೀನವಾಗಿ ಬಿಟ್ಟೆನೇನೋ ಎಂದೆನಿಸಿತು ಅವನಿಗೆ. ಎಲ್ಲಾದರೊಂದು ಬೆಟ್ಟದ ಅಂಚಿನಲ್ಲಿ ನಿಂತು ಶೂನ್ಯವನ್ನೆ ದಿಟ್ಟಿಸಬೇಕೆನ್ನಿಸಿತು. ಮುಂದೆ ಕಾಣಿಸುತ್ತಿದ್ದ ಅಂಚಿನಿಂದ ಸಪ್ತಗಿರಿಯ ಬೆಟ್ಟಗಳ ಸಾಲು ಅದ್ಭುತವಾಗಿ ಕಾಣಿಸುತ್ತಿತ್ತು. ಅಲ್ಲಿ ತನ್ನ ಬೈಕನ್ನು ನಿಲ್ಲಿಸಿ ಇಳಿದು ಬಂದ. ನಿಸರ್ಗವನ್ನು ನೋಡುತ್ತಾ ಮೂಕವಿಸ್ಮಿತನಾಗಿಬಿಟ್ಟ. ತನ್ನಲ್ಲಿ ಕವಿದ ಕಾರ್ಮೋಡವು ಇಂದು ಮಳೆಯಾಗಿ ಸುರಿಯುತ್ತಿದೆ ಎನಿಸಿತು. ತನ್ನಂತೆ ಬೆಟ್ಟಗಳನ್ನು ನೋಡಲು ನಿಂತಿದ್ದ ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳುವಲ್ಲಿ ಮಗ್ನರಾಗಿದ್ದರೆ, ಹರಿಗೆ ತನ್ನ ಮೊಬೈಲ್ ಎಲ್ಲಿದೆ ಎನ್ನುವುದೇ ನೆನಪಿರಲಿಲ್ಲ. ಜೀವನದಲ್ಲಿ ಹಾಗೆ ನೋಡಿ ಯಾವುದೋ ಒಂದು ವಿಷಯದಲ್ಲಿ ಗಾಢವಾದ ತಲ್ಲೀನತೆ ಬಂದುಬಿಟ್ಟರೆ ಲೋಕದ ಅರಿವೆ ಇರುವುದಿಲ್ಲ.

“ಹೇ ಇನ್ನೊಂದು ಅರ್ಧ ಗಂಟೆಯಾದರೆ ಸನ್ಸೆಟ್ ಆಗುತ್ತೆ. ಐeಣs ತಿಚಿiಣ.” ಎಂದು ಯಾರು ಮಾತನಾಡಿಕೊಂಡಿದ್ದು ಕೇಳಿಸಿತು. ಹರಿಗೂ ಸನ್ ಸೆಟ್ಟನ್ನು ನೋಡಿಕೊಂಡು ಹೋಗುವುದೇ ಒಳ್ಳೆಯದು ಎನಿಸಿತು. ಹೇಗಿದ್ದರೂ ಇನ್ನೊಂದು ಐವತ್ತು ಕಿಲೋಮೀಟರ್ ಪ್ರಯಾಣ ಮಾಡಿದರಾಯಿತು ಎಂದು ಅಲ್ಲೇ ಕಾಯುತ್ತಾ, ಒಂದು ಬಂಡೆಗಲ್ಲಿನ ಮೇಲೆ ಕುಳಿತ. ‘ಟಕ್’ ಎಂದು ತನ್ನ ಮೊಬೈಲ್ ನೆನಪಾಗಿ, ಎಲ್ಲಿದೆ ಎಂದು ಹುಡುಕಲಾರಂಭಿಸಿದ. ಅದೃಷ್ಟವಶಾತ್ ಮನೆ ಬಿಡುವಾಗ ಪಾಕೆಟ್ನಲ್ಲಿ ಇಟ್ಟುಕೊಂಡಿದ್ದ. ಮನುಷ್ಯರು ಎಂತಹ ದುಃಖದಲ್ಲಿದ್ದರೂ ಮೊಬೈಲನ್ನು ಮಾತ್ರ ಬಿಡುವುದಿಲ್ಲ ನೋಡಿ. ಅಷ್ಟು ಅಡಿಕ್ಟಾಗಿಬಿಟ್ಟಿದ್ದೇವೆ ಮೋಬೈಲಿಗೆ….!.

ಮೊಬೈಲ್ ಜೊತೆಗಿದ್ದರೂ ನೆಟ್ವರ್ಕ್ ಇಲ್ಲದ್ದರಿಂದ ಸುಮ್ಮನೆ ಪಾಕೆಟ್ ನಲ್ಲಿ ತುರುಕಿಕೊಳ್ಳಬೇಕಾಯಿತು. ಸುಮ್ಮನೆ ಬೆಟ್ಟಗಳನ್ನು ಹಾಗೂ ರಸ್ತೆಗಳನ್ನು ನೋಡುತ್ತಾ ಕುಳಿತಿದ್ದ ಹರಿಗೆ, ಎದುರಿನಿಂದ ಬೈಕ್ ಮೇಲೆ ಬರುತ್ತಿದ್ದ ಇಬ್ಬರು ಪ್ರೇಮಿಗಳು ಕಣ್ಣಿಗೆ ಬಿದ್ದರು. ಅದೇ ರಾಯಲ್ ಎನ್ಫೀಲ್ಡ್ ಬೈಕ್. ಅದೇ ಕಲರ್. ಇಬ್ಬರು ಎಷ್ಟು ಚೆನ್ನಾಗಿ ಮಾತನಾಡುತ್ತಾ ಹೋಗುತ್ತಿದ್ದಾರೆ. ಹರಿಯ ಹ್ರದಯ ವಿಲವಿಲನೆ ಒದ್ದಾಡಿತು. ಹಳೆಯದೆಲ್ಲ ನೆನಪಾಯಿತು. ಹಿಂದೊಮ್ಮೆ ತಾನು ತನ್ನ ಪ್ರೇಯಸಿಯ ಜೊತೆ ಹೀಗೆ ಸುತ್ತಾಡುತ್ತಿದ್ದ ಸುಂದರ ದಿನಗಳು ಇನ್ನೆಂದು ಮರಳಿ ಬರಲಾರವು. ಕಣ್ಣೀರ ಹನಿಗಳು ಒಡೆದು ಹೊರ ಪುಟಿದವು. ಮೆಲ್ಲಗೆ ಕಣ್ಣನ್ನು ಒತ್ತಿಕೊಂಡ.

ಸೂರ್ಯ ಮೆಲ್ಲಗೆ ಇಂದಿನ ಕಾರ್ಯ ಮುಗಿಯಿತು ಹೊರಡುತ್ತೇನೆ ಎಂಬ  ಸೂಚನೆ ನೀಡುತ್ತಾ ಹೊರಟಿದ್ದ. ಅದ್ಭುತ ನೋಟವದು. ಮಧ್ಯಾಹ್ನವೆಲ್ಲ ಬಯ್ಯಿಸಿಕೊಳ್ಳುವ ಸೂರ್ಯ, ಸಂಜೆಯಾದರೆ ಅದೇ ಜನರಿಂದ ಮುದ್ದಿಸಿಕೊಳ್ಳುತಾನೆ. ಮಾನವನೆ ಹಾಗೆ, ಕಾಲಕಾಲಕ್ಕೆ ಬಣ್ಣ ಬದಲಾಯಿಸುತ್ತಲೇ ಇರುತ್ತಾನೆ. ಉಸರವಳ್ಳಿಯನ್ನೇ ಮೀರಿಸುವ ಪ್ರಚಂಡ.

ಕತ್ತಲು ಕವಿಯುತ್ತ ಬಂತು. ಎಲ್ಲರೂ ಹೊರಡಲು ಸಿದ್ಧರಾದರು. ಹರಿಯು ಕೂಡ ಬೈಕ್ ಹತ್ತಿದ. ಸಂಜೆಯಾದದ್ದರಿಂದ ನಿಧಾನವಾಗಿ ಸಾಗಬೇಕು, ರಾತ್ರಿಯಾದರೂ ಸರಿ ಸಪ್ತಗಿರಿಯನ್ನು ತಲುಪಬೇಕು ಎಂದು ಹೊರಟ. ಪ್ರಾಣಿಗಳಿಗಿಂತ ಅಪಾಯಕಾರಿ, ಈ ವಾಹನಗಳು. ಅಕ್ಷರಶಃ ಯಮಸ್ವರೂಪಿಗಳೇ, ಎಂದು ಬೈದುಕೊಳ್ಳುತ್ತಾ ಮುಂದೆ ಸಾಗಿದ.

ಸಪ್ತಗಿರಿ ಘಾಟ್ ನ ಕೊನೆಯ ತಿರುವುದು ಅಲ್ಲಿಂದ ಸಪ್ತಗಿರಿ ಕೇವಲ ಇಪ್ಪತ್ತೈದು ಕಿಲೋಮೀಟರ್. ಆಗಲೇ ಟೈಮ್ ಏಳು ಗಂಟೆಯಾಗಿತ್ತು. ಇನ್ನೊಂದು ಅರ್ಧ ಗಂಟೆ ಪ್ರಯಾಣ ಮಾಡಿದರಾಯಿತು ಎಂದುಕೊಂಡ. ನೂರಡಿ ಮುಂದೆ ಹೋಗುವಷ್ಟರಲ್ಲಿ ಮುಂದಿನ ಟೈರು ‘ಟುಸ್’ ಎಂದು ಪಂಚರಾಗಿ ನಿಂತುಬಿಟ್ಟಿತು. ಅಯ್ಯೋ ಇದೇನಪ್ಪಾ, ಈ ಕತ್ತಲಲ್ಲಿ ಇದೇನಾಯಿತು ಎಂದು ಕಂಗಾಲಾದ. ಬೈಕನ್ನು ಬಯ್ಯತೊಡಗಿದ. ಟೈರಿಗೆ ಜಾಡಿಸಿ ಒದೆದ. ” ಅಮ್ಮಾ” ಎಂದು ಕಾಲನ್ನು ಹಿಂದು ತೆಗೆದುಕೊಳ್ಳಬೇಕಾಗಿಯಿತೆ ವಿನಃ ಬೇರೇನು ಆಗಲಿಲ್ಲ. ಕಾಲಿಗೆ ಸ್ವಲ್ಪ ಪೆಟ್ಟಾಗಿತ್ತು. ಏನು ತೋಚದವನಂತಾಗಿ ಸುಮ್ಮನೆ ಪಕ್ಕದಲ್ಲಿ ಕುಳಿತ. ಈಗ ಯಾರಾದರೂ ಸಿಕ್ಕದಿದ್ದರೆ ತನ್ನ ಪ್ರಾಣ ಹೋದಂತೆ ಎಂದು ಗಾಬರಿಯಾದ. ಎಲ್ಲಿ ಹೋಯಿತು ತನ್ನ ನೋವು? ಎಲ್ಲಿ ಹೋದಳು ಪ್ರೇಯಸಿ? ಎಲ್ಲಿಯ ತಾಪತ್ರಯಗಳು?. ಯಾವುದು ನೆನಪಿನಲ್ಲಿಲ್ಲ ಹರಿಗೆ. ಈಗವನ ಲಕ್ಷದಲ್ಲಿರುವುದು ಕೇವಲ ತನ್ನ ಪ್ರಾಣ ರಕ್ಷಣೆ. ಇನ್ನೇನೂ ಅಲ್ಲ, ಜೀವನ ಕಲಿಸಿಕೊಡುವ ಪಾಠವದು.

ಅರ್ಧ ಗಂಟೆ ಕಳೆಯಿತು. ಒಂದು ಗಾಡಿಯು ಪತ್ತೆ ಇರಲಿಲ್ಲ. ಇಂದೇ ನನ್ನ ಕೊನೆಯ ದಿನ ಎಂದು ಗಾಬರಿಯಾಗಿ ಸುಮ್ಮನೆ ಕುಳಿತಬಿಟ್ಟ. ಪಂಚರ್ ಆದರೇನಾಯಿತು, ನಿಧಾನವಾಗಿ ಓಡಿಸಿದರಾಯಿತು ಎಂದು ಬೈಕ್ ಸ್ಟಾರ್ಟ್ ಮಾಡಿದ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಗಡಗಡ ಎಂದು ಶಬ್ದ ಬರಲಾರಂಭಿಸಿತು. ಇದರ ಜೊತೆಗೆ ಮತ್ತೊಂದು ತೊಂದರೆ ಅಂಟಿಕೊಂಡರೆ ಕಷ್ಟವೆಂದು ಸುಮ್ಮನಾದ. ಐದು ನಿಮಿಷದ ನಂತರ ದೂರದಲ್ಲೆಲ್ಲೋ ಹಾರ್ನ ಮಾಡಿದ ಶಬ್ದವಾಯಿತು. ಹೋದ ಜೀವ ಮರಳಿ ಬಂದಂತಾಯಿತು ಅವನಿಗೆ. ಹೌದು ಯಾವುದೊ ವಾಹನ ಸಮೀಪಿಸುತ್ತಿದೆ. ಕಣ್ಣುಕುಕ್ಕುವ ಹೆಡ್ಲೈಟ್ ನಿಂದಾಗಿ ಯಾವ ವಾಹನ ಎಂದು ಗೊತ್ತಾಗಲಿಲ್ಲ. ಆದರೂ ಕೈಮಾಡಿ “ಹೆಲ್ಪ್ ಹೆಲ್ಪ್” ಎಂದು ಕೂಗಿದ. ಅವನ ಹತ್ತಿರಕ್ಕೆ ಬಂದು ನಿಂತ ಕಾರಿನೊಳಗೆ  ಮೂರ್ನಾಲ್ಕು ಜನ ಪ್ರಯಾಣ ಮಾಡುತ್ತಿದ್ದರು. ವಿಂಡೋ ಕೆಳಗಿಳಿಸಿದ ಕಾರಿನವರು, ” ಹಲೋ ಮಿಸ್ಟರ್. ಏನಾಯ್ತು? ” ಎಂದು ಕೇಳಿದರು. ಆಗಿರುವ ಅವಾಂತರವನ್ನಲ್ಲ ವಿವರಿಸಿದ ಹರಿ.

” ಅದಕ್ಕೇನಂತೆ ನಮ್ಮ ಕಾರಿನಲ್ಲಿ ಒಂದು ಸೀಟ್ ಖಾಲಿ ಇದೆ. ಹೇಗಿದ್ದರೂ ನೀವು ಆ ಕಡೆಗೆ ಹೋಗುತ್ತಿದ್ದೀರಿ ಅನ್ಸುತ್ತೆ. ಬನ್ನಿ ಡ್ರಾಪ್ ಮಾಡ್ತೀವಿ.” ಎಂದರು.

” ಹೌದು ಸರ್. ಸಪ್ತಗಿರಿಗೆ ಹೋಗ್ತಾ ಇದ್ದೀನಿ” ಎಂದ  ಹರಿ.

” ಓಹ್….. ನಾವು ಅಲ್ಲಿಗೆ ಹೋಗ್ತಾ ಇದ್ದೇವೆ. ಬನ್ನಿ.” ಎಂದು ಕರೆದರು.

ಬೈಕನ್ನು ಅಲ್ಲಿಯೆ ಒಂದು ಮೂಲೆಯಲ್ಲಿ ನಿಲ್ಲಿಸಿ, ಕಾರು ಹತ್ತಿದ. ಕಾರು ಹತ್ತುವ  ವೇಳೆಗೆ, ಹರಿಗೆ ಸಾಕುಸಾಕಾಗಿ ಹೋಗಿತ್ತು. ಕ್ಷಣಕ್ಷಣಕ್ಕೂ ಅಂಜಿಕೆ ಮೂಡಿಸುವ ಕಾಡಿನಲ್ಲಿ ಒಬ್ಬಂಟಿ ಜೀವ. ಕಾಡುಪ್ರಾಣಿಗಳ ಕಣ್ಣಿಗೆ ಬಿದ್ದಿದ್ದರೆ  ಸುಮ್ಮನೆ ಬಿಡುತ್ತಿದ್ದವೆ…?.

” ಹಾಯ್. ನಿಮ್ಮ ಹೆಸರು ಗೊತ್ತಾಗಲಿಲ್ಲ ಮಿಸ್ಟರ್” ಎಂದು ಕಾರಿನವರೇ ಮಾತನಾಡಿಸಿದರು.

” ಸಾರಿ, ನನ್ನ ಹೆಸರು ಹರಿ ಅಂತ. ಬೆಂಗಳೂರಿನಿಂದ ಬಂದೆ .ಹಿಂಗೆ ಬರುವಾಗ ದಾರಿಯಲ್ಲಿ ಗಾಡಿ ಕೈಕೊಟ್ಟಿತ್ತು.”

” ಈ ರಾತ್ರಿ ನೀವೊಬ್ಬರೇ ಕೊಟ್ಟಿದ್ರಲ್ಲ. ಯು ಆರ್ ಗ್ರೇಟ ಮಿಸ್ಟರ್” ಎಂದು ಉದ್ಗರಿಸಿದರು. ಇದಕ್ಕೆ ಪ್ರತ್ಯುತ್ತರವಾಗಿ ಸಣ್ಣದಾಗಿ ಸ್ಮೈಲ್ ಮಾಡಿ,” ಸ್ವಲ್ಪ ಹೆದರಿಕೆಯಾಗಿತ್ತು ಸರ್” ಎಂದ.

” ಇನ್ನೇನು ಬಂದೇ ಬಿಡ್ತು ಸಪ್ತಗಿರಿ. ನಮ್ಮ ಪುಣ್ಯ ನೋಡಿ ,ಮಳೆಯಲ್ಲಿ ಸಿಕ್ಹಾಕ್ಕೊಂಡಿಲ್ಲ ನಾವು. ನೀವು ಕೂಡ….”

” ಹೌದು ಸರ್….” ಎಂದು ಸುಮ್ಮನಾಗಿಬಿಟ್ಟ.

” ಅಂದ್ಹಾಗೆ, ನನ್ನ ಹೆಸರು ಡಾ. ಗೋಪಾಲ್ ವರ್ಮಾ. ಮೈಸೂರಿನವನು. ನಾನೊಬ್ಬ ಸೈಕಾಲಜಿಸ್ಟ್. ಆಕೆ ನನ್ನ ಹೆಂಡತಿ ಹಾಗೂ ಅವನು ನನ್ನ ಮಗ” ಎಂದು ಅಲ್ಲಿ ಕೂತವರನ್ನು ತೋರಿಸಿ ಹೇಳಿದರು.

” ಸುಸ್ತಾಗಿ ಮಲಗಿಬಿಟ್ಟಿದ್ದಾರೆ. ಇನ್ನೊಂದು ದಿನ ಪರಿಚಯಿಸುತ್ತೇನೆ.” ಎಂದು ಅವರ ಫ್ಯಾಮಿಲಿ ಬಗ್ಗೆ ಹೇಳಿದರು. ಇದನ್ನೆಲ್ಲಾ ಕೇಳಲು ತಾಳ್ಮೆ ಹಾಗೂ ಇಚ್ಛೆ ಎರಡೂ ಹರಿಗೆ ಇರಲಿಲ್ಲ .ಡ್ರಾಪ್ ಕೊಡುತ್ತಿದ್ದಾರೆ ಎನ್ನುವ ಒಂದೇ ಒಂದು ಕಾರಣಕ್ಕೆ ತೆಪ್ಪಗೆ ಕೂತ್ಕೋಬೇಕಲ್ಲಪ್ಪ ಎಂದು ಗೊಣಗಿದ.

” ಸರ್ ನಾನು ಸ್ವಲ್ಪ ಮಲಗಿರ್ತಿನಿ. ಸಪ್ತಗಿರಿ ಬಂದಮೇಲೆ ಎಬ್ಬಿಸಿ.” ಎಂದು ಹೇಳಿ ಸೂಕ್ಷ್ಮವಾಗಿ ಸರಿದುಕೊಂಡ.” ” ಹೂ ಆಯ್ತು .” ಎಂದು ಗೋಪಾಲ್ ವರ್ಮಾರವರೂ ಸುಮ್ಮನಾದರು.

ಕಣ್ಣುಮುಚ್ಚಿದರೆ ಸಾಕು, ಅದೇನೋ ಸುಖ. ಹಾಯಾಗಿ ನಿದ್ರಿಸಬೇಕೆನಿಸಿತು. ಕೂತು ಕೂತು ಕೊಂಡಿಗಳೆರಡು ವಿಲವಿಲನೆ ಒದ್ದಾಡುತ್ತಿದ್ದವು. ಬೈಕ್ನಲ್ಲಿ ಹೋಗುವವರಿಗೆ ಅದರ ಅನುಭವ ಚೆನ್ನಾಗಿ ಗೊತ್ತಿರುತ್ತದೆ. ಆದರೂ, ಬೈಕ್ ರೈಡಿಂಗ್ ನಲ್ಲಿ ಅದೇನೊ ಒಂದು ಮಜವಿರುತ್ತದೆ.

” ಒಂದು ಗಂಟೆಯ ನಂತರ ಸಪ್ತಗಿರಿ ತಲುಪಿದರು. ಮೊದಲೇ ಹೇಳಿದಂತೆ, ಸಪ್ತಗಿರಿ ಒಂದು ಅದ್ಭುತ ತಾಣವಾಗಿತ್ತು. ಪ್ರವಾಸಿಗರನ್ನು, ದಶಕಗಳಿಂದ ಕೈಬೀಸಿ ಕರೆಯುವಲ್ಲಿ ಯಶಸ್ವಿಯಾಗಿತ್ತು. ಸಪ್ತಗಿರಿಯಲ್ಲಿ ಉಳಿದುಕೊಳ್ಳಲು ಅಷ್ಟೇನೂ ಸರಿಯಾದ ವ್ಯವಸ್ಥೆ ಇರಲಿಲ್ಲ. ಇಡೀ ಊರಿಗೆ, ಪ್ರವಾಸಿಗರಿಗಾಗಿ ಕೇವಲ ಮೂರು ಲಾಡ್ಜ್ ಗಳಿದ್ದವು. ಅದರಲ್ಲಿ ಎರಡು ಸರ್ಕಾರದ ಒಡೆತನದಲ್ಲಿದ್ದವು. ಇನ್ನೂಂದು ಖಾಸಗಿ ಮಾಲೀಕತ್ವದ್ದಾಗಿತ್ತು. ಹರಿ ಸ್ನೇಹಿತರ ಜೊತೆಗೆ ಹೋದಾಗಲೆಲ್ಲ ಸಪ್ತಗಿರಿ ಕಾಟೇಜ್ನಲ್ಲಿ ಉಳಿದುಕೊಳ್ಳುತ್ತಿದ್ದ. ಅಂದರೆ ಖಾಸಗಿ ಮಾಲಿಕತ್ವದ್ದು. ಇದರ ನಿರ್ಮಾಣದಲ್ಲಿ ಹರಿಯ ತಂದೆ ಕೂಡ ಹಣವನ್ನು ನೀಡಿದ್ದರು. ಹೀಗಾಗಿ, ಹೋದಾಗಲೆಲ್ಲ ಹರಿಗೆ ಸುಲಭವಾಗಿ ರೂಮ್ ಸಿಗುತ್ತಿತ್ತು. ಹೋದಾಗಲೆಲ್ಲ ಎಣ್ಣೆ ಪಾರ್ಟಿ, ಅದು-ಇದು ಎಂದು ತುಂಬಾ ಮಜಾ ಮಾಡುತ್ತಿದ್ದರು. ಕುಡಿತದ ಚಟವಿಲ್ಲದಿದ್ದರೂ, ಹರಿ ಕೇವಲ ಒಂದೆರಡು ಪೆಗ್ ಸ್ನೇಹಿತರ ಜೊತೆಗೆ ಏರಿಸುತ್ತಿದ್ದ. ಇದೇ ಮೊದಲ ಬಾರಿಗೆ, ಹರಿ ಒಬ್ಬನೆ ಕಾಟೇಜ್ ಗೆ ಬಂದದ್ದು.

” ಹಲೋ ಜಂಟಲ್ಮ್ಯಾನ್, ಸಪ್ತಗಿರಿ ಬಂತು. ತಾವು ಎಲ್ಲಿ ಇಳ್ಕೊತೀರಿ?” ಎಂದು ಗೋಪಾಲ್ ವರ್ಮಾ ಹರಿಯನ್ನು ಎಬ್ಬಿಸಿದರು.

” ಸರ್ ನಾನು ಇಲ್ಲೇ ಇಳ್ಕೋತೀನಿ. ನನಗೆ ಸಪ್ತಗಿರಿ ಕಾಟೇಜಿನಲ್ಲಿ ರೂಮ್ ಸಿಗುತ್ತೆ “ಎಂದು ಬಾಯಿ ತಪ್ಪಿ ನುಡಿದುಬಿಟ್ಟ.

” ಅಯ್ಯೋ ಹೌದಾ..! ವೆರಿ ನೈಸ್ ..ವೆರಿ ನೈಸ್. ನಾವು ಅಲ್ಲೇ ರೂಮ್ ಮಾಡಿದ್ದೇವೆ. ಬನ್ನಿ ಹೋಗೋಣ” ಎಂದರು. ಇದೆಂತಹ ಗ್ರಹಚಾರವಪ್ಪ ಎಂದು ಗೊಣಗಿಕೊಂಡ. ಸಪ್ತಗಿರಿ ಕಾಟೇಜಿನ ಮುಂದೆ ಕಾರು ನಿಂತಿತು. ಗಂಟೆಗಟ್ಟಲೆ ಕೆಲಸ ಮಾಡಿದ ಇಂಜಿನ್ ಗೆ ತುಸು ವಿಶ್ರಾಂತಿ ಸಿಕ್ಕಂತಾಯಿತು.

ಅದೃಷ್ಟವೋ ದುರಾದೃಷ್ಟವೋ ಹರಿಯ ರೂಂ, ಗೋಪಾಲ್ ವರ್ಮಾ ಅವರ ರೂಂ ಪಕ್ಕದಲ್ಲಿಯೆ ಇತ್ತು. ಹರಿ ಮತ್ತೊಮ್ಮೆ ತಲೆ ಚಚ್ಚಿಕೊಂಡ……!. ಕಾಟೇಜ್ ಮ್ಯಾನೇಜರ್ ರವಿ ತುಂಬಾ ಪರಿಚಯವಿದ್ದುದರಿಂದ, ಆಫೀಸ್ಗೆ ಹೋಗಿ “ಏ ರವಿ ನಂಗೆ ಬೇರೆ ರೂಮ್ ಕೊಡು” ಎಂದು ಕೇಳಿಕೊಂಡ. ರವಿ, ಹರಿಯ ಸ್ನೇಹಿತನೇ ಆಗಿದ್ದ. ಹೀಗಾಗಿ ಅವನಿಗೆ ರೂಮ್ ಸಿಗುತ್ತಿತ್ತು. ಅಲ್ಲದೆ ಹರಿಯ ತಂದೆ ಧನ ಸಹಾಯ ಮಾಡಿದ್ದರಿಂದ, ಅವನಿಗೆ ಇಲ್ಲವೆಂದು ಹೇಳುತ್ತಿರಲಿಲ್ಲ.

“ಸಾರಿ ಹರಿ. ಲಾಸ್ಟ್ ನಿಂದೊಂದೆ ರೂಮ್ ಉಳಿದಿರೋದು. ಇವತ್ತು ರಾತ್ರಿ ನಿನಗೆ ಕಾಲ್ ಮಾಡಿ ಅದನ್ನು ಸಹ ಕೊಡಬೇಕೆಂದು ಯೋಚನೆ ಮಾಡ್ತಾ ಇದ್ದೆ . ಸರಿಯಾದ ಟೈಮಿಗೆ ಬಂದೆ ನೀನು.”

“ಆಯ್ತು ಬಿಡು. ಅದರಲ್ಲೆ ಬಿದ್ದು ಸಾಯ್ತಿನಿ.” ಎಂದು ಗೊಣಗುತ್ತಾ ರೂಮಿನೆಡೆಗೆ ಹೂರಟುಹೋದ. ” ಹರಿ ಸಿಟ್ಟಾಗ ಬೇಡೊ.” ಎಂದು ಕೂಗಿದರೂ ತಿರುಗದೆ ಹೋಗಿಬಿಟ್ಟ. ಸೀಜನ್ ಆಗಿದ್ದರಿಂದ ರವಿಯೂ ಕೂಡ ಪುರುಸೊತ್ತಿಲ್ಲದೆ ಕಸ್ಟಮರ್ ಗಳ ಹಿಂದೆ ಓಡಾಡುತ್ತಿದ್ದ.

ಸಪ್ತಗಿರಿಯ ಮುಂಜಾವು ಎಂಥವರನ್ನೂ ಮೂಕವಿಸ್ಮಿತರನ್ನಾಗಿಸಿ ಬಿಡುವಂತಹದ್ದು. ಮಳೆಗಾಲ ಅಥವ ಚಳಿಗಾಲದಲ್ಲಂತೂ ಆ ಸೊಬಗನ್ನು ಸವಿಯುತ್ತ, ಮೈಯೊಡ್ಡಿ ಪ್ರಕೃತಿಯೊಂದಿಗೆ ಬೆರೆತು ಬಿಡಬೇಕು ಎನಿಸುತ್ತಿತ್ತು. ಹರಿಯು ಸಹ ಬಂದದ್ದು ಮಳೆಗಾಲದಲ್ಲೆ ಆಗಿದ್ದರಿಂದ, ಪ್ರಕೃತಿಯ ಜೊತೆ ಕೆಲಕಾಲ ಕಳೆಯಬೇಕೆನಿಸಿತು ಅವನಿಗೆ. ಮುಂಜಾವಿನ ಕೊರೆಯುವ ಚಳಿ ಹರಿಯನ್ನು ಆರು ಗಂಟೆಗೆ ಎಬ್ಬಿಸಿತ್ತು. ಸುಸ್ತಿನ ಮತ್ತಿನಲ್ಲಿ ರಾತ್ರಿಯಿಡೀ ಕಳೆದದ್ದೆ ಗೊತ್ತಾಗಲಿಲ್ಲ. ವಿಶಾಲವಾದ ರೂಮಿನೊಳಗೆ ಎಲ್ಲವೂ ತಿದ್ದಿ-ತೀಡಿ ಮಾಡಿಸಿದಂತಹ ವಸ್ತುಗಳಿದ್ದುವು. ಕೊಂಚ ಬಲಕ್ಕೆ ನಡೆದು ಹೋದರೆ, ವಿಶಾಲವಾದ ಬಾಲ್ಕನಿ. ಅದು ಕೇವಲ ಬಾಲ್ಕನಿ ಆಗಿರಲಿಲ್ಲ, ಪ್ರಕೃತಿಯ ಸೊಬಗನ್ನು ಎತ್ತಿ ತೋರಿಸುವ ರಂಗಮಂದಿರವಾಗಿತ್ತು. ಹರಿ ಎದ್ದು, ಕಣ್ಣು ತಿಕ್ಕಿಕೊಳ್ಳುತ್ತಾ ಬಾಲ್ಕನಿಯಡೆಗೆ ನಡೆದ. ಕೊರೆಯುವ ಚಳಿ ಅವನನ್ನು ಮುದುಡಿಕೊಳ್ಳುವಂತೆ ಮಾಡಿತು. ಆಗಸದಲ್ಲಿ ಆಗ ತಾನೆ ಮೂಡಿದ್ದ ರವಿ ಎಲ್ಲೆಡೆ ಶಕ್ತಿಯ ರಸವನ್ನು ಚೆಲ್ಲುತ್ತಿದ್ದ. ಕಣ್ಣು ಹಾಯಿಸಿದಷ್ಟು ದೂರ ಕಾಣುವ ದಟ್ಟ ಕಾನನ, ದೂರದಲ್ಲಿ ಸುಂದರವಾಗಿ ಕಾಣಿಸುತ್ತಿದ್ದ ಬೆಟ್ಟಗಳು. ಎಲ್ಲವೂ ಹರಿಯ ಮನಸನ್ನು ಹಗುರಗೊಳಿಸಿದವು. ಬದುಕಿನಲ್ಲಿ ಹಿಂದೆ ನಡೆದಿದ್ದಲ್ಲ ಸುಳ್ಳು. ಮುಂದೆ ಬರುವುದೂ ಸುಳ್ಳು. ಈ ಕ್ಷಣ ಮಾತ್ರ ಸತ್ಯ. ಇದೆ ಜೀವನವೆನಿಸಿತು.  ಆದರೆ, ತನ್ನ ಮನಸ್ಥಿತಿ ತನಗೇ ಅರ್ಥವಾಗದಂತಾಯಿತು. ಹಾಗೆ ಹತ್ತು ನಿಮಿಷ ನೋಡುತ್ತಾ ಸುಮ್ಮನೆ ನಿಂತುಬಿಟ್ಟ. ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಏನೋ ನೆನಪಾದಂತಾಗಿ ಈ ಲೋಕಕ್ಕೆ ಮರಳಿದ. ನೀರವಾಗಿ ಬಾತ್ ರೂಮಿಗೆ ಹೋಗಿ ತನ್ನೆಲ್ಲ ಕಾರ್ಯಗಳನ್ನು ಮುಗಿಸಿ ಸಿದ್ಧನಾಗಿ ನಿಂತ. ಮುಂದೇನು ಮಾಡುವುದೆಂದು ತಿಳಿಯಲಿಲ್ಲ. ಊರು ಸುತ್ತಿಕೊಂಡು ಬರೋಣ, ನಂತರ ಗಾಡಿಯನ್ನು ರಿಪೇರಿ ಮಾಡಿಸಿಕೊಂಡರಾಯಿತು ಎಂದುಕೊಂಡ.

ರೂಮಿನ ಬಾಗಿಲನ್ನು ಹಾಕಿಕೊಂಡು ಕೀಯನ್ನು ಕಿಸೆಯಲ್ಲಿರಿಸುತ್ತಲೇ, “ಹಲೋ ಜಂಟಲ್ ಮ್ಯಾನ್” ಎಂದು ಹಿಂದಿನಿಂದ ಯಾರೋ ಕರೆದಂತಾಯಿತು. ಹಿಂತಿರುಗಿ ನೋಡಿದರೆ ಅದೇ ಕೆಂಪು ಮುಖದ, ಫ್ರೆಂಚ್ ಗಡ್ಡದ, ಡಾ.ಗೋಪಾಲ್ ವರ್ಮಾ. ಟ್ರ್ಯಾಕ್ ಪ್ಯಾಂಟ್ ಧರಿಸಿ ಇವನ ಮುಂದೆ ನಿಂತಿದ್ದರು. ಇವನ್ಯಾಕೆ ಬಂದನಪ್ಪ ಇಲ್ಲಿ ಎಂದು ಗೊಣಗಿಕೊಂಡ.

” ಹೇ ಮಿಸ್ಟರ್…. ಏನಿದು ಇಷ್ಟು ಬೇಗ ರೆಡಿಯಾಗಿ ಎಲ್ಲಿಗೊ ಹೊರಟಿದ್ದೀರಿ? ”

” ಹಾ ಸರ್, ಹೀಗೆ ಊರು ಸುತ್ತಿಕೊಂಡು, ನಂತರ ಬೈಕ್ ರಿಪೇರಿ ಮಾಡಿಸಿದರಾಯಿತೆಂದು ಹೊರಟೆ”

” ವೆರಿ ನೈಸ್…. ಆದರೆ ಒಬ್ಬರೇ ಎಲ್ಲಿ ಅಂತ ಸುತ್ತಾಡುತ್ತೀರಿ?. ಬನ್ನಿ ನನ್ನ ಜೊತೆ ಜಾಗಿಂಗ್ ಹೋಗಿ ಬರೋಣ.” ಎಂದರು ಗೋಪಾಲ್ ವರ್ಮಾ.

” ಇರ್ಲಿ ಸರ್ ಪರವಾಗಿಲ್ಲ. ನೀವ್ ಹೋಗ್ಬನ್ನಿ. ಇವತ್ತು ತುಂಬಾ ಮೈಕೈನೋವು ,ನಾಳೆಯಿಂದ ಬರ್ತೀನಿ.”

” ಕಮಾನ್ ಜೆಂಟಲ್ ಮ್ಯಾನ್, ಏನಿದು ಮೈಕೈ ನೋವು ಅಂತ ರಾಗ ಎಳಿತಿದ್ದೀರಾ. ಬನ್ನಿ ನನ್ನ ಜೊತೆ, ಒಂದೇ ಒಂದು ರೌಂಡ್ ಗೆ ಎಲ್ಲ ಸರಿ ಹೋಗತ್ತೆ.” ಎಂದು ಕೈ ಎಳಿದರು.

” ಸರಿ ಸರ್ ನಡಿರಿ. ಒಂದ್ ರೌಂಡ್ ಹೋಗಿಬರೋಣ.” ಎಂದು ಗೊಣಗಿಕೊಳ್ಳುತ್ತಾ ಮುಂದೆ ನಡೆದ ಹರಿ.

” ಅಯ್ಯೋ ಇದೇನು ಜೀನ್ಸ್ ಪ್ಯಾಂಟ್ ಮೇಲೆ ಜಾಗಿಂಗ್ ಗೆ ಬರ್ತೀರಾ..?” ಬದಲಾಯಿಸಿಕೊಂಡು ಬನ್ನಿ.

” ಇಲ್ಲ ಸರ್ ನನ್ನ ಹತ್ತಿರ ಇರೋದು ಇದೊಂದೇ ಪ್ಯಾಂಟ್. ಇದೂ ಸ್ವಲ್ಪ ಹಸಿ ಇದೆ. ಇರಲಿ ಪರವಾಗಿಲ್ಲ. ನಡಿರಿ.” ಎಂದ. ಪ್ಯಾಂಟ್ ಹಸಿಯಾಗಿದೆ ಎನ್ನುವುದನ್ನು ಕೇಳಿ ಬಿಡಬಹುದೆಂದು, ಆಶಾಭಾವದಿಂದ ಹೇಳುತ್ತಿದ್ದ ಹರಿಗೆ, ಮತ್ತೆ ನಿರಾಶೆಯಾಯಿತು.

” ಓಹ್… ಹೌದಲ್ವ, ಮರೆತೆಬಿಟ್ಟಿದ್ದೆ. ಪ್ಯಾಂಟ್ ಹಸಿ ಇದೆ ಅಂದ್ರಲ್ಲ, ಗಾಳಿಗೆ ಒಣಗುತ್ತೆ ಸ್ವಲ್ಪ.” ಎಂದುಬಿಟ್ಟರು ಗೋಪಾಲ್ ವರ್ಮಾ. ” ಎಲ್ಲಾ ನನ್ನ ಹಣೆಬರಹ ಎಂದು ಹಲ್ಲು ಬಿಗಿಹಿಡಿದು ಬಯ್ಯತೊಡಗಿದ.

” ನಡೀರಿ ಸರ್ ಹೋಗೋಣ.” ಎಂದ ಕೂಡಲೆ ಇಬ್ಬರು ಗುಡ್ಡದ ಕಡೆಗೆ ನಡೆದರು.

ಎರಡು ರೌಂಡ್ ಓಡುತ್ತಲೇ, ಸುಸ್ತಾಗಿ ಎದುಸಿರು ಬಿಡುತ್ತಾ ನಿಂತುಬಿಟ್ಟ ಹರಿ.

” ಇದೇನು ಯಂಗ್ ಮ್ಯಾನ್…? ಹೀಗೆ ಸುಸ್ತಾಗಿ ಬಿಟ್ರಲ್ಲ ನಿಮ್ಮ ವಯಸ್ಸಿನವರು ಹೇಗಿರಬೇಕು ಗೊತ್ತಾ…?. ಬನ್ನಿ ಇನ್ನೊಂದೆರಡು ರೌಂಡ್ ಹಾಕೋಣ.”

” ಇಲ್ಲ ಸರ್ ನನ್ನ ಕೈಯಲ್ಲಿ ಆಗ್ತಿಲ್ಲ. ನಿನ್ನೆ ಮಧ್ಯಾಹ್ನದಿಂದ ಹೊಟ್ಟೆಲಿ ಏನು ಇಲ್ಲ. ತುಂಬಾ ಸುಸ್ತಾಗುತ್ತಿದೆ. ನೀವು ಹೋಗಿಬನ್ನಿ, ಇಲ್ಲೇ ಕೂತಿರ್ತಿನಿ.”

” ನೆನ್ನೆಯಿಂದ ಹೊಟ್ಟೆ ಖಾಲಿ ಇಟ್ಕೊಂಡು ಹೇಗಿದ್ದೀರ ಜಂಟಲ್ಮ್ಯಾನ್…?, ಬನ್ನಿ ಏನಾದ್ರೂ ತಿನ್ನೋಣ. ನಡೀರಿ.”

” ಪರ್ವಾಗಿಲ್ಲ ಸರ್, ನೀವು ನಿಮ್ಮ ಜಾಗಿಂಗ್ ಮುಗಿಸಿ. ಆಮೇಲೆ ಹೋಗೋಣ.”

” ನೋ ನೋ. ಎದ್ದೇಳಿ ಈ ವಯಸ್ಸಿನಲ್ಲಿ ಕರೆಕ್ಟಾಗಿ ಊಟ-ತಿಂಡಿ ಮಾಡಿದಿದ್ದರೆ ಮುಂದೆ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ, ನಡೆಯಿರಿ.” ಎಂದು ಹರಿಯನ್ನು ಕಾಟೇಜಿನ ಕಡೆಗೆ ಕರೆದುಕೊಂಡು ಹೋದರು.

ಕಾಟೇಜಿನ ಬಳಿ ಬರುವುದರೊಳಗೆ ಎಂಟು ಗಂಟೆಯಾಗಿತ್ತು. ತುಂಬಾ ಹಸಿದಿದ್ದರಿಂದ ಹೊಟ್ಟೆತುಂಬಾ ತಿನ್ನಲು ಮುಕ್ಕಾಲು ಗಂಟೆಯೇ ಬೇಕಾಯಿತು.

” ಸರ್ ಕಾಫಿ ಕುಡಿತೀರಾ? ಸಪ್ತಗಿರಿಯಲ್ಲಿ ಕಾಫಿ ತುಂಬಾ ಚೆನ್ನಾಗಿರುತ್ತೆ..”  ಎಂದ ಹರಿ.

” ಓಹ್ ಹೌದಾ…. ಕಾಫಿನೆ ಕುಡಿಯೋಣ ಹಾಗಿದ್ರೆ.” ಎಂದರು ಗೋಪಾಲ್ ವರ್ಮಾ.

ಕಾಫಿ ಕುಡಿದ ನಂತರ ಹೊರಬರುತ್ತಾ, ” ಜಂಟಲ್ಮ್ಯಾನ್, ನಿಮಗೆ ಸಪ್ತಗಿರಿ ತುಂಬಾ ಪರಿಚಯವಿದ್ದಂತೆ ಅನ್ಸತ್ತೆ.” ಎಂದರು. ಏನು ಹೇಳಬೇಕೆಂದು ಗೊತ್ತಾಗಲಿಲ್ಲ ಹರಿಗೆ. ಗೊತ್ತು ಎಂದು ಹೇಳಿಬಿಟ್ಟರೆ ಮತ್ತೆ ಹಿಂದಿನ ಕಥೆಯನ್ನೆಲ್ಲ ಹೇಳಬೇಕೆಂದು ಕಳವಳಗೊಂಡ. ಏನಾದರೂ ಆಗಲಿ ಸತ್ಯವನ್ನು ಹೇಳೋಣವೆಂದು, “ಹೌದು ಸರ್,  ನಾನು ಇಲ್ಲಿಗೆ ತುಂಬಾ ಸರಿ ಬಂದಿದೀನಿ. ಹೀಗಾಗಿ ನನಗೆ ಈ ಕಾಟೇಜ್ ತುಂಬಾ ಪರಿಚಯವಾಗಿದೆ.” ಎಂದ.

” ಓಹ್ ಹೌದಾ…. ವೆರಿ ನೈಸ್. ಅಂದಹಾಗೆ ಇನ್ನೊಂದು ಮಾತು, ನೀವು ನನ್ನನ್ನು ಸರ್.. ಸರ್ ಎಂದು ಕರೆಯುವ ಅವಶ್ಯಕತೆ ಇಲ್ಲ. ಪ್ರೀತಿಯಿಂದ  ಅಂಕಲ್ ಎಂದು ಕರೆಯಬಹುದು. ಈ ಸರ್  ಅನ್ನೊ  ಪದ ನಮ್ಮನ್ನು ದೂರ ಮಾಡುತ್ತೆ ಅನ್ನೋ ಫೀಲಿಂಗ್. ಸೋ ಅಂಕಲ್ ಅಂತಾನೆ ಕರೀರಿ. ಹೇಗಿದ್ರೂ ನಿಮ್ಮ ಅಂಕಲ್ ವಯಸ್ಸಿನವನೇ ಇದೀನಿ.”

” ಆಯ್ತು ಸರ್. ಇನ್ಮೇಲೆ ಅಂಕಲ್ ಅಂತಾನೆ ಕರೀತೀನಿ.”

” ನೋಡಿ ,ಮತ್ತೆ ಸಾರ್ ಅಂತಿದ್ದೀರ….ಹ್ಹ..ಹ್ಹ…”

” ಸಾರಿ ಅಂಕಲ್. ಹ್ಹ…ಹ್ಹ…” ಇಬ್ಬರು ನಗುತ್ತಾ ಮುಂದೆ ಸಾಗಿದರು.

” ಅಂಕಲ್, ನಾನೊಂದು ವಿಷಯ ಹೇಳಬೇಕು. ನೀವು ಕೂಡ ನನ್ನ ಹೋಗಿ ಬನ್ನಿ ಅಂತ ಕರೀಬಾರ್ದು. ಈ ಬಹುವಚನವೆಲ್ಲ ಬೇಡ್ವೆ ಬೇಡ ಆಯ್ತಾ.”

” ಓ ಎಸ್. ಹಾಗೇ ಆಗಲಿ ಜೆಂಟಲ್ ಮ್ಯಾನ್.” ಎಂದರು ಗೋಪಾಲ್ ವರ್ಮಾ.

ಒಂದು ಜಾಗಿಂಗ್ ನಿಂದಲೇ ಹರಿಯ ಮನಸ್ಸು ಅದೆಷ್ಟೊ ಹಗುರಗೊಂಡಿತ್ತು. ಅದು ಪ್ರಕೃತಿಯ ಕೈಚಳಕವೂ ಅಥವಾ ಗೋಪಾಲ್ ವರ್ಮಾರ ಸ್ನೇಹದಿಂದಲೊ,  ಅವನಿಗೆ ಗೊತ್ತು. ಮೊದಮೊದಲು ಅವರನ್ನು ಕಂಡರೆ, ಯಾಕಪ್ಪ ಬಂದ ಎನ್ನುತ್ತಿದ್ದ ಹರಿ. ಈಗ ಅವರನ್ನೇ ಅಂಕಲ್ ಎನ್ನುವಷ್ಟು ಹತ್ತಿರವಾಗಿದ್ದ. ಹರಿಯ ಸಹಜ ಸ್ವಭಾವವೇ ಹಾಗಿತ್ತು, ಯಾರೆ ಆದರು ಅವರೊಂದಿಗೆ ಬಹುಬೇಗ ಸ್ನೇಹ ಬೆಳೆಸಿಕೊಂಡುಬಿಡುತ್ತಿದ್ದ. ಆದರೆ ಈ ಬಾರಿ ಅವನಿಗೆ ಸ್ವಲ್ಪ ಸಮಯ ಬೇಕಿತ್ತು.

-ಕಿರಣ್. ವ್ಹಿ


(ಮುಂದುವರೆಯುವುದು)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
trackback

[…] ಇಲ್ಲಿಯವರೆಗೆ […]

1
0
Would love your thoughts, please comment.x
()
x