ದಟ್ಟ ಮೌನ ಕವಿದಿದೆ. ತಾತನ ಗೋರಿಯ ಪಕ್ಕದಲ್ಲಿ ಕುಳಿತು ಸುತ್ತಲೂ ದಿಟ್ಟಿಸಿದರೆ ಹಸಿರು ಹೊಲಗಳು, ಬೆಟ್ಟದ ನೆತ್ತಿಗೆ ಮುತ್ತುಗರೆವ ಕೆಂಪುಮೋಡಗಳು, ಸುತ್ತಣ ಮರಗಳ ಗೂಡುಗಳಲ್ಲಿನ ಹಕ್ಕಿಮರಿಗಳು ಚಿಲಿಪಿಲಿಗುಟ್ಟುತ್ತಿವೆ, ತಣ್ಣನೆ ಸಂಜೆಯ ಹೊತ್ತು. ಸೂರ್ಯ ನನಗೆ ಟಾಟಾ ಹೇಳುತ್ತಿದ್ದಾನೆ ಅನ್ನಿಸುತ್ತಿದೆ. ಆಕಾಶದಗಲ ಹಕ್ಕಿಗಳು ಚಿತ್ರ ಬಿಡಿಸಿದಂತೆ ಹಾರುತ್ತಿವೆ. ಪಡುವಣ ಕೆಂಪಾಗುತ್ತಿದೆ. ತಲೆಯ ಮೇಲೆ ಹುಲ್ಲುಹೊರೆ ಹೊತ್ತ ವ್ಯಕ್ತಿ ಒಂದು ಜೊತೆ ಎತ್ತಿನೊಂದಿಗೆ ಊರ ಕಡೆ ಹೊರಟಿದ್ದಾನೆ. ಒಂದು ಜಿಂಕೆಯೋ, ಸಾರಂಗವೋ ಕಣ್ಣೆದುರೇ ಛಂಗನೆ ಹಾರಿದಂತೆ ಭಾಸ, ತುಸು ದೂರದಲ್ಲೇ ಇರುವ ಊರಿನ ಬೀದಿಲೈಟುಗಳು ಹತ್ತಿಕೊಳ್ಳುತ್ತವೆ, ಸುತ್ತಲೂ ಕತ್ತಲು ಮುತ್ತುತ್ತದೆ. ಕಣ್ಣಿಗೆ ಕಣ್ಣು ಕೊಡುವ ಮಿಂಚುಹುಳುಗಳು, ಕಾಡಿನ ಕಡೆಯಿಂದ ಜೀರುಂಡೆ ಹಾಡು, ಇಲ್ಲೆಲ್ಲೋ ನರಿ ಕೂಗಿದಂತೆ ಅನ್ನಿಸಿ ರಾತ್ರಿ ಕಳೆಗಟ್ಟುತ್ತದೆ. ಗೋರಿಯೊಳಗಿನ ತಾತ ತನ್ನೊಡನೆ ಕಳೆದ ನನ್ನ ಬಾಲ್ಯದ ಕ್ಷಣಗಳನ್ನು ಹೆಕ್ಕಿಕೊಡುತ್ತಾನೆ.
ಏನೇನು ಹೆಕ್ಕಿ ಕೊಡುತ್ತಾನೆ? ಯಾಕಾಗಿ ಹೆಕ್ಕಿ ಕೊಡುತ್ತಾನೆ?
ನನಗಾಗ ಐದಾರು ವರ್ಷ ವಯಸ್ಸಿರಬಹುದು. ಆಗ ಸಾಹಿತ್ಯದ ಬಗ್ಗೆ ನನಗೆ ಚೂರೂನು ಸಂಬಂಧವಿಲ್ಲದ ಕಾಲ. ನಾನೊಂದು ಸ್ವಚ್ಚಂದ ಮೊಗ್ಗಿನಂತೆ ಮುದುಡಿ ನಿದ್ರಿಸುತ್ತಿದ್ದ ಕಾಲಮಾನ. ಹಿಮ ಬಿದ್ದ ಗರಿಗೆ ಹುಲ್ಲಿನ ಮೇಲೆ ಪುಟ್ಟ ಪುಟ್ಟ ಅಂಗಾಲುಗಳನ್ನಿಡುತ್ತಾ ಹೊಲದ ತೆವರಿಗಳ ಮೇಲೆ ನಡೆದು ಸಂಭ್ರಮಿಸುತ್ತಿದ್ದ ದಿನಗಳು. ನನ್ನ ಮನಸನ್ನು ತಬ್ಬುತ್ತಿದ್ದ ಸಂತೋಷ ನಿಜಕ್ಕೂ ನನ್ನ ಬಾಳಿನ ಗಳಿಕೆ. ಆ ಖುಷಿಯನ್ನು ಪುನಃ ಅನುಭವಿಸಲು ಬಾಲ್ಯವೇ ಬರಬೇಕಷ್ಟೇ. ಆ ದಿನಗಳಲ್ಲಿಯೇ ನನಗೆ 'ಲವಕುಶ' ಎಂಬ ಪುಸ್ತಕವನ್ನು ತಾತ ಓದಲು ಕೊಟ್ಟಿದ್ದು. ಶಾಲೆಯಲ್ಲಿ ಕಾಡಯ್ಯ ಮೇಷ್ಟ್ರು ಬೋಧಿಸುತ್ತಿದ್ದ ಪುಸ್ತಕಗಳಾಚೆಗಿನ ಬೇರೆಯದೇ ಪುಸ್ತಕವೊಂದು ನನ್ನಿಂದ ಮೊದಲಬಾರಿಗೆ ಓದಿಸಿಕೊಂಡಿದ್ದು.
ಹೆಚ್ಚು ಕಮ್ಮಿ ಅದೇ ವಯಸ್ಸಿನಲ್ಲಿ ನನಗೆ ಕಥೆ ಕೇಳುವ ಹುಚ್ಚು ಶುರುವಾಯಿತು. ಅದೂ ರಾಮಾಯಣ, ಮಹಾಭಾರತ. ಪೌರಾಣಿಕ ಕಥೆಗಳ ಬಗ್ಗೆ ಹೆಚ್ಚು ಆಸಕ್ತನಾಗಿದ್ದ ನಾನು ಹೊಲದಲ್ಲಿ ಬೆಳೆ ಬರುತ್ತಿದ್ದ ದಿನಗಳಲ್ಲಿ ಶಾಲೆ, ಆಟ ಎಲ್ಲಕ್ಕಿಂತ ಮಿಗಿಲಾಗಿ ನನ್ನ ತಾತನ ಜೊತೆಯಲ್ಲಿರಲು ಇಚ್ಚಿಸುತ್ತಿದ್ದುದು, ಆತನೊಡನೆ ರಾತ್ರಿ ಹೊಲ ಕಾಯಲು ಹೋಗುವುದು, ತೆವರಿ ಮೇಲೆ ಅಟ್ಟಣೆ ಕೊಟ್ಟು ನಿರ್ಮಿಸಿರುತ್ತಿದ್ದ ಪುಟ್ಟ ಗುಡಿಸಲಿನಲ್ಲಿ ಆತನ ಕಂಬಳಿಯೊಳಗೆ ತೂರಿಕೊಂಡು ಕಥೆ ಕೇಳುತ್ತಿದ್ದುದು ಇಂದಿಗೂ ವಿಸ್ಮಯ. ಆಗಿನ ಕಾಲಕ್ಕೆ ಅಪಾರ ದೈವಭಕ್ತನಾಗಿದ್ದ ನಾನು ತಾತನ ಕಥೆ ಕೇಳದಿದ್ದರೆ, ಅಲ್ಲಿಯ ರಾಮ, ಕೃಷ್ಣ ಮುಂತಾದವರನ್ನು ಭಕ್ತಿಯಿಂದ ಊಹಿಸಿಕೊಳ್ಳದಿದ್ದರೆ ಒಂದು ಬಗೆಯ ಅಸಯಾಕತೆಯಿಂದ ಬಳಲಿಹೋಗುತ್ತಿದ್ದೆ. ಅದೆಷ್ಟೋ ಬಾರಿ ಯುದ್ಧ, ರಕ್ತಪಾತ, ಕತ್ತಿಯ ಝಳಪು, ಕುದುರೆ ಕೆನೆತ, ಆನೆಯ ಘೀಳುಗಳೇ ತುಂಬಿರುತ್ತಿದ್ದ ಕನಸುಗಳು ಬಿದ್ದು ಒಮ್ಮೆಲೇ ಬೆಚ್ಚಿ ಕಣ್ದೆರೆಯುತ್ತಿದ್ದ ನನಗೆ ನರೆಗೂದಲ, ಕನ್ನಡಕದ ತಾತ ಧೈರ್ಯ ತುಂಬುವವನಾಗಿ ಕಾಣುತ್ತಿದ್ದ. ಅಂತಹ ಕನಸು ಬಿದ್ದ ಮಾರನೆಯ ಬೆಳಗ್ಗೆ ನನ್ನ ಮೈಮೇಲೆಲ್ಲಾ ಒಂದು ಬಗೆಯ ಗಂಧೆಗಳು ಉಕ್ಕಿರುತ್ತಿದ್ದವು. ಕ್ರಮೇಣ ಆ ಕನಸೂ, ಗಂಧೆಗಳು ಎಲ್ಲಿ ಹೋದವೋ ಗೊತ್ತಿಲ್ಲ.
ನಾನು ಪ್ರೀತಿಯಿಂದ ಸಾಕಿದ್ದ ಕೆಂಚಿ (ನಾಯಿ) ಬರೋಬ್ಬರಿ ಆರೇಳು ಮರಿಗಳನ್ನು ಹಾಕಿದಾಗ ಅನುಭವಿಸಿದ ಖುಷಿ ಮತ್ತು ದುಃಖ ಅಷ್ಟಿಷ್ಟಲ್ಲ. ನನ್ನ ಆತ್ಮೀಯ ಹಸು ಕರು ಹಾಕಿದಾಗ, ನನ್ನನ್ನು ಅಚ್ಚಿಕೊಂಡಿದ್ದ ಬೆಕ್ಕು ಅಟ್ಟದಲ್ಲಿ ಮರಿ ಹಾಕಿದಾಗ ಪಡುತ್ತಿದ್ದದ್ದಷ್ಟೇ ಪ್ರಮಾಣದ ಸಂತಸವನ್ನು ಕಪ್ಪು, ಬಿಳಿ, ಕೆಂಚು ಬಣ್ಣದ ನುಣುಪು ಮೈಯ, ಮುದ್ದು ಮೂತಿಯ ನಾಯಿಮರಿಗಳ ಜನನದಿಂದ ಪಡೆದಿದ್ದೆ. ಮುಡುಸೋ ಆಟ, ಗೋಲಿಯಾಟ, ದೇವರಾಟ, ಮದುವೆಯಾಟಗಳಲ್ಲಿ ಆರಾಮಗಿರುತ್ತಿದ್ದ ನಾನು ಈ ಮುದ್ದುಮುದ್ದಾದ ನಾಯಿಮರಿಗಳು, ಅವುಗಳ ಪ್ರಪಂಚದೆದುರು ಪರವಶನಾಗುತ್ತಿದ್ದೆ. ಈ ವಿಷಯ ಹೇಳಲು ಕಾರಣ, ಈ ನನ್ನ ಪರವಶತೆ, ಮಾನವರಾಚೆಗಿನ ಜಗತ್ತಿನಲ್ಲಿ ಬೆರೆಯಲು, ಅಂತರಂಗದ ಭಾಷೆಯೊಂದಿಗೆ ವ್ಯವಹರಿಸಲು ಅದು ಸಹಾಯಕವಾಯಿತು ಎಂದು. ಎಷ್ಟು ಭಾವುಕನಾಗಿದ್ದೆ ಅಂದರೆ, ನಾನು ಶಾಲೆಗೆ ಹೋಗಿದ್ದ ವೇಳೆ ತಾತ ನಾಯಿಮರಿಗಳನ್ನು ಮಂಕರಿಯಲ್ಲಿ ಹೊತ್ತುಕೊಂಡು ಹೋಗಿ ಹಳ್ಳದಲ್ಲಿ ನೀರಿದ ಮಡುವಿಗೆ ಹಾಕಿದ್ದು ಅಕಸ್ಮಾತ್ ತಿಳಿಯುತ್ತಿದ್ದಂತೆಯೇ ಶಾಲೆಯಿಂದ ಎದ್ದು ಓಡಿ, ನೀರು ಕುಡಿದು ಊದಿದ್ದ ಮರಿಗಳನ್ನು ಅಪ್ಪಿ ಗೋಳಾಡಿ, ಹೇಗೋ ಇನ್ನೂ ಬದುಕುಳಿದಿದ್ದ ಎರಡು ಮರಿಗಳನ್ನು ಉಳಿಸಿಕೊಂಡಿದ್ದು ಮಾತ್ರವಲ್ಲ, ಹಿಂದಲ ಹಟ್ಟಿಯಲ್ಲಿ ಅಣೆ ಕೊಟ್ಟು ಜೋಡಿಸಿದ್ದ ರಾಗಿಮೂಟೆಗಳ ಅಡಿಯಲ್ಲಿ ಅವನ್ನು ಪಾಲನೆ ಮಾಡುತ್ತಲೇ ತಾತನನ್ನು ಒಳಗೊಳಗೇ ಕ್ರೂರಿ ಎಂದುಕೊಳ್ಳುತ್ತಿದ್ದೆ.
ಅದು ತಾತ್ಕಾಲಿಕ ಸಿಟ್ಟು ಮಾತ್ರ. ಸಂಕ್ರಾಂತಿಯ ಸಂಜೆ ತಾತನ ಆಣತಿಯಂತೆ ಗಟ್ಟಿಯಾಗಿ ಗೋವಿನಹಾಡು ಓದುತ್ತಿದ್ದೆ. ಅರ್ಥವಾಗದಿದ್ದರೂ ಆತನ ಬಾಯಿಯಿಂದ ಅಮರಕೋಶದ ಬಗ್ಗೆ, ಆಗಮಗಳ ಬಗ್ಗೆ, ಹಾಲುಮತ ಪುರಾಣದ ಬಗ್ಗೆ ಕೇಳಿಸಿಕೊಳ್ಳುತ್ತಿದ್ದೆ. ಅವನ್ನು ನಾನು ಗಂಭೀರವಾಗಿ ಆಲಿಸತೊಡಗಿದ್ದು ನನ್ನೊಳಗಿನ ಕೇಳುಗನ ಅತೀವ ನಿಷ್ಠೆಯ ಸಲುವಾಗಿ ಮಾತ್ರ. ಕೇಳುವ, ಗ್ರಹಿಸುವ, ಧ್ಯಾನಿಸುವ, ಚಿಂತಿಸುವ ಈ ವಿದ್ಯಮಾನ ನಿಜಕ್ಕೂ ಬೆರಗು ಮೂಡಿಸುವಂಥದ್ದು.
ಯಾವ ನೆನಪು, ಅನುಭವ ನನ್ನ ತಾತನ ನೆಪದಲ್ಲಿ ನನ್ನನ್ನು ಕೆಣಕುತ್ತದೆ ಅಥವಾ ಕಾಡುತ್ತದೆ ಎಂಬ ಪ್ರಶ್ನೆಗೆ ನನ್ನಲ್ಲಿ ಖಂಡಿತ ಉತ್ತರಲಿಲ್ಲ. ಆತನ ಆಸೆಯಂತೆ ತಮ್ಮಡಿಯಾಗಿ, ಅವರಿವರ ಮನೆಯಲ್ಲಿ ಉಣ್ಣಬಾರದು ಎಂಬ ಕಾರಣಕ್ಕೆ ಹೊಸದುರ್ಗದ ದೊಡ್ದವ್ವನ ಮನೆಯಲ್ಲಿದ್ದುಕೊಂಡು ಮಾಧ್ಯಮಿಕ ಶಾಲೆ ಓದಲು ಶುರುಮಾಡಿದಾಗ ಆದ ಗೊಂದಲವೇ ತಾತನ ಇಚ್ಛೆಗೆ ವಿರುದ್ಧವಾಗಿ ನಡೆದು ಆ ಮನೆಯನ್ನು ಬಿಟ್ಟು ಸರ್ಕಾರಿ ಹಾಸ್ಟೆಲ್ಲು ಸೇರಿದಾಗಲೂ ಆಯಿತು. ಅದೆಷ್ಟೋ, ಅದ್ಯಾವ್ಯಾವುದೋ ಜಾತಿಗೆ ಸೇರಿದ ವಿದ್ಯಾರ್ಥಿಗಳ ನಡುವೆ ಉಣ್ಣುವ, ಕೂರುವ, ಮಲಗುವ ವಿದ್ಯಮಾನ ನನ್ನ ಮಟ್ಟಿಗೆ ಕ್ರಾಂತಿಕಾರಿಕವಾದುದು ಎಂದುಕೊಳ್ಳುತ್ತಿದ್ದುದ್ದರಲ್ಲಿಯೂ ಒಂದು ಬಗೆಯ ಮೂರ್ಖತನವಿತ್ತು. ನಾವೇ ತೋಡಿದ ಗುಂಡಿಗೆ ನಾವೇ ಬಿದ್ದು ಮತ್ತೆ ನಾವೇ ಎದ್ದು ಬರುವುದರಲ್ಲಿ ಅಂಥಾದ್ದೇನೂ ದೊಡ್ಡಸ್ತಿಕೆ ಇಲ್ಲ ಅನ್ನಿಸತೊಡಗಿತ್ತು. ನನ್ನಂಥವರಿಗೆ ಕೋಳಿಮೊಟ್ಟೆ ಬದಲು ಬಾಳೆಹಣ್ಣು ಕೊಡಿ ಎಂಬ ಮಾತನ್ನು ನಾನು ಹೇಳಿದಾಗ ನನಗೆ ಮತ್ತು ಹಾಸ್ಟೆಲ್ಲಿನ ಮೇಲ್ವಿಚಾರಕರಿಗೆ ಆಗುತ್ತಿದ್ದ ಅನುಭವಕ್ಕೂ ಮಾಂಸಾಹಾರಿ ಹುಡುಗರು ವಾರದಲ್ಲೊಂದು ದಿನ ಬಾಡೂಟ ಹಾಕಿ ಎಂದು ಬೇಡಿಕೆಯಿಟ್ಟಂತೆಲ್ಲಾ ಈ ತುಮುಲ ಇಮ್ಮಡಿಗೊಳ್ಳುತ್ತಿತ್ತು. ನನ್ನ ತಾತನೋ, ಇನ್ನೊಬ್ಬನ ತಾತನೋ ನನ್ನ ಗೊಂದಲವನ್ನು ನಿವಾರಿಸಲಾರರು ಅನ್ನಿಸಿತು. ಅದಕ್ಕೆ ನನ್ನೊಳಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಿದೆ. ಸಸ್ಯಾಹಾರವಾಗಲೀ, ಮಾಂಸಾಹಾರವಾಗಲೀ, ಹಿಂಸೆಯಾಗಲೀ, ಅಹಿಂಸೆಯಾಗಲೀ- ನನ್ನದೇ ಕೋನಕ್ಕೆ ಹೇಗೆ ನೇರ, ಹೇಗೆ ವಕ್ರ ಮತ್ತು ಎರಡೂ ಬಗೆಯವರೂ ಒಂದೇ ಬಗೆಯಲ್ಲಿ ಪ್ರೀತಿ, ಸ್ನೇಹ, ದ್ವೇಷ, ಅಸೂಯೆ, ಕರುಣೆ, ಮಮತೆಗಳನ್ನು ಅನುಭವಿಸುವವರಾದ್ದರಿಂದ ಈ ಪಾರಂಪರಿಕ ನಿಲುವುಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಒಂದು ಅಂದಾಜಿನಲ್ಲಿ ಚಿಂತಿಸತೊಡಗಿದೆ. ಆದ್ದರಿಂದ ನನ್ನ ತುಮುಲ ನಿಧಾನವಾಗಿ ಕರಗುತ್ತಾ ಹೋಗಿ ಆಹಾರಕ್ಕೂ ದೇವರಿಗೂ ಸಂಬಂಧವಿಲ್ಲ ಎಂಬ ತೀರ್ಮಾನಕ್ಕೆ ಬಂದೆ.
ನನ್ನ ಇಷ್ಟುಕಾಲದ ಅನುಭವಗಳಲ್ಲಿ ತಾತನ ಪಾತ್ರ ಕುರಿತು ಕೆಲವೊಂದನ್ನಷ್ಟೇ ಇಲ್ಲಿ ಹೇಳಿದ್ದೇನೆ. ಮಾನವ ತನ್ನ ಸಾಂಪ್ರದಾಯಿಕ ಪಥವನ್ನು ಮೀರಲು, ಮೀರಿ ದಕ್ಕಿಸಿಕೊಳ್ಳಲು ಬೇರೆ ಬೇರೆ ಮಾರ್ಗಗಳನ್ನು ಶೋಧಿಸಿಕೊಳ್ಳುತ್ತಾನೆ. ಆದರೆ ಹೊಸದೇನನ್ನೋ ಪಡೆದೆನೆಂಬ ಭ್ರಮೆಯಲ್ಲಿ, ಹೊಸದಾರಿಯಲ್ಲಿ ನಡೆಯುತ್ತಿದ್ದೇನೆಂಬ ಹುಂಬತನದಲ್ಲಿ ಇವೆಲ್ಲವುಗಳ ಹೊರತಾದ, ಈ ಪರಿಧಿಯಾಚೆಗಿನ ಇನ್ನೇನೋ ಒಂದು ಮಹತ್ವವಾದುದನ್ನು ಪಡೆದುಕೊಳ್ಳುವಲ್ಲಿನ ವೈಫಲ್ಯತೆ ಆತನನ್ನು ದುರಂತಮಯ ಅಧಃಪತನದೆಡೆಗೆ ನೂಕುತ್ತದೆ. ಜಾತೀಯತೆಯನ್ನು ವಿರೋಧಿಸುವ ನಾನು ಮಲ್ಲಿಗೆ, ಕನಕಾಂಬರ, ಗುಲಾಬಿ, ಸೇವಂತಿಗೆ, ಸೂರ್ಯಕಾಂತಿ ಎಂದು ಹೂವುಗಳನ್ನು ವಿಂಗಡಿಸುತ್ತೇನೆ. ಗುಬ್ಬಚ್ಚಿ, ಪಾರಿವಾಳ, ಗಿಳಿ, ಕೊಕ್ಕರೆ, ಹಂಸಗಳೆಂದು ಪಕ್ಷಿಗಳನ್ನು ವಿಭಾಗಿಸುತ್ತೇನೆ. ಹೂವುಗಳ ಲೋಕ, ಪ್ರಾಣಿಗಳ ಲೋಕ, ಪಕ್ಷಿಗಳ ಲೋಕ, ಕೀಟಗಳ ಲೋಕ, ಜಲಚರಗಳ ಲೋಕಗಳಲ್ಲಿ ಇಲ್ಲದ ಧರ್ಮಗಳು, ಧರ್ಮ ಗ್ರಂಥಗಳು, ನೀತಿ ಬೋಧೆಗಳನ್ನು ಕಂಡುಕೊಂಡಿರುವ ಮನುಷ್ಯನ ನೀಚತನ, ಕ್ರೌರ್ಯ, ಮೃಗತ್ವ, ಭ್ರಷ್ಟತೆ, ಅಪ್ರಾಮಾಣಿಕತೆಗಳನ್ನು ಕಂಡು ಮನುಷ್ಯ ಕುಲಕ್ಕೆ ಸೇರಿರುವ ನಾನು ಅವಮಾನ, ಅಪರಾಧಿಭಾವದಿಂದ ತಲೆ ತಗ್ಗಿಸುತ್ತೇನೆ.
ದಯಮಾಡಿ ಮನ್ನಿಸಬೇಕು. ನನ್ನ ಹಾಗೆಯೇ ಅದೆಷ್ಟೋ ಜನರಿಗೆ ತಾತಂದಿರು ಇರಬಹುದು. ಅವರು ನನ್ನ ತಾತನಂತೆಯೇ ಅಥವಾ ಅವನ ವಿರುದ್ಧ ದಿಕ್ಕಿನ ವಿಚಾರವಂತರೂ, ಮೇಧಾವಿಗಳೂ ಆಗಿರಬಹುದು ಅಥವಾ ಅವನಿಗಿಂತಲೂ ಎಡವಟ್ಟುಗಳಾಗಿದ್ದು ಕತ್ತಲು ಬೆಳಕು ಎರಡನ್ನೂ ಗ್ರಹಿಸದೆ ಕಣ್ಣು ಮುಚ್ಚಿಕೊಂಡು ಬದುಕುತ್ತಿರಬಹುದು. ಆದ್ದರಿಂದ ಈ ಅನುಭಗಳ ಕುರಿತಾಗಲೀ, ನಾನು ಕಳೆದುಕೊಂಡ ಮತ್ತು ಯಾವತ್ತಿಗೂ ನನ್ನ ಹಿಂಬಾಲಿಸುವ ಹಳೆಯ ನೆನಪುಗಳ ಕುರಿತಾಗಲೀ ಬರೆದರೆ, ಮಾತಾಡಿದರೆ ಆತ್ಮದ ಸ್ವಗತ ಧ್ವನಿಹೀನವಾಗಿ ಕೇವಲ ದನಿಯಾಗಿ ಉಳಿಯುವ ಸಂಭವವಿದೆ.
ಇದನ್ನು ಕೂತು ಬರೆಯುತ್ತಿರುವ ಈ ಹೊಲ, ತಾತನ ಗೋರಿಯಿರುವ ಈ ಜಾಗ ನನ್ನ ಚಿಕ್ಕಪ್ಪನದು. ವರ್ಷಗಳ ಹಿಂದೆಯಷ್ಟೇ ಅಪ್ಪ ಮತ್ತು ಚಿಕ್ಕಪ್ಪಂದಿರಿಬ್ಬರು ಹೊಲ, ತೋಟ, ಮನೆಗಳನ್ನು ಭಾಗ ಮಾಡಿಕೊಂಡರು. ನನ್ನ ಅಪ್ಪ ಚಿಕ್ಕಪ್ಪಂದಿರು ಕೊಟ್ಟ ಹೊಲ, ತೋಟ, ಮನೆಯನ್ನು ಒಪ್ಪಿಕೊಂಡು ಬಂದ. ಈ ಬೇಲಿಯೇಳದ ಹೊಲ, ತೋಟಗಳಲ್ಲಿ ಹಿಂದೊಮ್ಮೆ ತಾತನೊಡನೆ ಸುತ್ತಾಡಿದ, ಈ ಗೋಡೆಯೇಳದ ಮನೆಯಲ್ಲಿ ತಾತನ ಕಂಚಿನ ತಟ್ಟೆಯಲ್ಲಿ ಒಟ್ಟಿಗೆ ಕೂತು ಉಂಡ, ಬೆತ್ತದೇಟು ತಿಂದು ಮಗ್ಗಿ, ಕಾಗುಣಿತ ಕಲಿತ ನೆನಪುಗಳು ಒಮ್ಮೆಲೇ ರೊಯ್ಯನೆ ರಾಚಿ ನನ್ನನ್ನು ಘಾಸಿಗೊಳಿಸುತ್ತವೆ. ಹೀಗೆ ಬದುಕಿನ ಚೋದ್ಯಕ್ಕೆ ನಾನಾ ಕಾರಣಗಳಿರುತ್ತವೆ. ಮತ್ತೆ ಮತ್ತೆ ಹಳೆಯದನ್ನು ನೆನೆಯುತ್ತ ಹೊಸತಿನೆಡೆಗೆ ಹೆಜ್ಜೆ ಇಡುವ ಈ ವಿಚಿತ್ರ ಸುಖದಲ್ಲಿ ಬದುಕನ್ನು ದಾಖಲಿಸುವ ತೆವಲಿಗೆ ಬದಲಾಗಿ ಬೆನ್ನನ್ನು ಕನ್ನಡಿಯಾಗಿಸಿಕೊಳ್ಳುವ ತಹತಹವಿರುತ್ತದೆ. ನಾಳೆಯ ಬೆಳಗಿಗೆ ಕಣ್ಣು ಬಿಟ್ಟುಕೊಳ್ಳುವ ಕೌತುಕವಿರುತ್ತದೆ.
ಬೀದಿಲೈಟುಗಳ ಕಾಂತಿಯಲ್ಲಿ ಮಿಂಚುಹುಳುಗಳು ಅನಾಥವಾಗದಿರಲಿ, ನನ್ನ ಗೊಂದಲಕ್ಕೆ ನಾನೇ ಪರಿಹಾರ ಕಂಡುಕೊಳ್ಳುವ ಮತ್ತು ಅನಂತತೆಯ ಬಗ್ಗೆ ಧ್ಯಾನಿಸುವ ಗುಣ ನನ್ನೊಳಗೆ ವೃದ್ಧಿಸಲಿ.
-ಹೃದಯಶಿವ
******
ಬಾಲ್ಯದ ನೆನಪುಗಳು…ತಾತನ ಸಾಂಗತ್ಯ, ಹೇಳಿದ ಕಥೆಗಳು, ನಡೆದ ಘಟನೆಗಳು, ಆಸ್ತಿ ಭಾಗ, ಪರಿಸರ, ಕಲಿತ ಕಾಗುಣಿತ… ಎಲ್ಲವೂ ನಮ್ಮ ಹೊಲವಿರದ ನನ್ನ ಊರು, ತಾತ, ಅಜ್ಜಿಯ ದಿನಗಳನ್ನು ಮೆಲುಕು ಹಾಕಿದಂತಾಯಿತು… ಅಭಿನಂದನೆಗಳು ಕವಿಗಳೇ…
ಅಧ್ಬುತ ಬರಹ.
ಧನ್ಯವಾದಗಳು ಶಿವ.
ಹೃದಯಶಿವ ಅವರೇ ಈ ಲೇಖನಕ್ಕಾಗಿ ಧನ್ಯವಾದಗಳು. ನಾನು ಮೊದಲು ಓದಿದ ಪುಸ್ತಕ ವಚನ ಮಹಾಭಾರತ. ನನ್ನ ಮುತ್ತಾತನ ಬಳಿಯಿದ್ದದ್ದು. ಅವರ ನೆನಪಾಯಿತು.
ನಿಮ್ಮ ಲೇಖನ ಓದ್ತಾ ಇದ್ರೆ ಮೊದಲು ಕೇಳುಗನಾಗು ಅನ್ನೋ ಮಾತು ನೆನಪಾಗುತ್ತೆ ಶಿವಣ್ಣ 🙂
ಓದ್ತಾ ಓದ್ತಾ ಏನನ್ಬೇಕೋ ಗೊತ್ತಾಗದೇ 🙁
ನಾಯಿಮರಿಗಳ ಪ್ರಸಂಗ, ಹಾಸ್ಟೆಲ್ಲು, ಕತೆ ಕೇಳೋದು.. ಹೀಗೆ ಬರೆದ ಎಲ್ಲಾ ಪ್ರಸಂಗಗಳೂ ನಾನೇ ಕಾಲಚಕ್ರದಲ್ಲಿ ಹಿಂದೆ ಹೋಗಿ ಇಣುಕಿದ ಅನುಭವ ಕೊಟ್ತಿದ್ವು.. ಸೂಪರ್ರು…
ಧನ್ಯವಾದಗಳು
ಶಿವಾ, ಲೇಖನ ಚೆನ್ನಾಗಿದೆ! ನಿಮ್ಮ ಬರವಣಿಗೆಯ ಶೈಲಿ ಅಂತೂ ಮಸ್ತ್!