ಬಾಡಿಗೆ ಮನೆಗಾಗಿ ಬಾಡಿದ ಮನಗಳು….: ಸಂತೋಷ ಗುಡ್ಡಿಯಂಗಡಿ

೧೯೧೮ರಲ್ಲಿ ನಾನು ಭಾರತಕ್ಕೆ ಮರಳಿ ಬಂದೆ. ನಾನು ಬರೋಡಾ ರಾಜ್ಯದ ಹಣಕಾಸಿನ ಸಹಾಯದಿಂದ ಉಚ್ಛ ಶಿಕ್ಷಣ ಪಡೆದವನಾದ್ದರಿಂದ ಒಪ್ಪಂದಕ್ಕೆ ಅನುಗುಣವಾಗಿ ಆ ರಾಜ್ಯಕ್ಕೆ ನನ್ನ ಸೇವೆಯನ್ನು ಸಲ್ಲಿಸಬೇಕಾಗಿತ್ತು. ಹೀಗಾಗಿ ಭಾರತಕ್ಕೆ ಮರಳಿದ ಕೂಡಲೇ ನೇರವಾಗಿ ಬರೋಡಾಕ್ಕೆ ಬಂದೆ. ಯುರೋಪ್ ಮತ್ತು ಅಮೆರಿಕೆಯಲ್ಲಿನ ಐದು ವರುಷಗಳ ವಾಸ್ತವ್ಯವು ನಾನು ಅಸ್ಪೃಶ್ಯನೆಂಬ ಪ್ರಜ್ಞೆಯನ್ನು ಸಂಪೂರ್ಣವಾಗಿ ಅಳಿಸಿಹಾಕಿತ್ತು. ಬರೋಡಾದಲ್ಲಿ ’ವಿಶಿ’ ಎಂದು ಕರೆದುಕೊಳ್ಳುವ ಹಿಂದೂ ಹೋಟೆಲ್ಲುಗಳು ಇದ್ದದ್ದು ನನಗೆ ತಿಳಿದಿದ್ದವು. ಅವು ನನಗೆ ಪ್ರವೇಶ ನೀಡಲಾರವು. ಅವುಗಳಲ್ಲಿ ಪ್ರವೇಶಿಸಲು ಇದ್ದ ಒಂದೇ ಒಂದು ಮಾರ್ಗವೆಂದರೆ ಅಸ್ಪೃಶ್ಯನಲ್ಲವೆಂಬಂತೆ ನಟಿಸುವುದು. ಇದಕ್ಕೆ ನಾನು ಸಿದ್ಧನಿರಲಿಲ್ಲ. ಏನು ಮಾಡಬೇಕು ಎಂದು ಚಿಂತಾಮಗ್ನನಾದೆ. ಗಾಡಿಯವನಿಂದ ಪಾರ್ಸಿಗಳ ಒಂದು ಸಾರ್ವಜನಿಕ ಪ್ರವಾಸಿಗೃಹ ಇರುವುದಾಗಿಯೂ, ಅದು ದುಡ್ಡು ಕೊಟ್ಟು ಆತಿಥ್ಯ ಪಡೆಯುವ ವ್ಯವಸ್ಥೆ ಹೊಂದಿರುವುದಾಗಿಯೂ ತಿಳಿಯಿತು. ಪಾರ್ಸಿಗಳ ಯಜಮಾನಿಕೆಯಲ್ಲಿರುವ ಪ್ರವಾಸಿಗೃಹ ಇರುವುದನ್ನು ಕೇಳಿ ನನ್ನ ಹೃದಯ ಸಂತೋಷದಿಂದ ಉಬ್ಬಿಹೋಯಿತು…..

….. ಬಲಶಾಲಿಗಳಾದ ಹನ್ನೆರಡು ಜನ ಪಾರ್ಸಿಗಳು ಕೋಲುಗಳನ್ನು ಹಿಡಿದು ನನ್ನ ಕೋಣೆಯ ಬಾಗಿಲನ್ನು ಸುತ್ತುವರಿದು ನಿಂತರು. ಸಾಯಂಕಾಲದೊಳಗಾಗಿ ಯಾವುದೇ ಕಾರಣಕ್ಕೂ ಇಲ್ಲಿರಕೂಡದೆಂದು ಅಂತಿಮ ಗಡುವು ಕೊಟ್ಟರು. ಅತೀವ ವ್ಯಥೆಯಿಂದ ಕಣ್ಣೀರು ಕೋಡಿಯಾಗಿ ಹರಿಯಿತು. ಕೈದಿಗಳ ಕತ್ತಲು ಕೋಣೆಗಿಂತಲೂ ಕನಿಷ್ಠವಾಗಿದ್ದ ನನಗೆ ಮೌಲಿಕವಾದ ವಸತಿ ಸೌಲಭ್ಯದಿಂದ ವಂಚಿತನಾಗಿದ್ದೆ.

ಇದು ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಈ ದೇಶದ ಜಾತಿ ವ್ಯವಸ್ಥೆ ತನ್ನನ್ನು ವಸತಿಹೀನನ್ನಾಗಿಸಿದ ಘಟನೆಯೊಂದನ್ನು ಶತಮಾನದ ಹಿಂದೆಯೆ ದಾಖಸಿದ್ದು. ಅಂಬೇಡ್ಕರ್ ನಮ್ಮೊಡನಿಲ್ಲ. ಸ್ವಾತಂತ್ರ್ಯದ ಹೆಬ್ಬಾಗಿಲನ್ನು ಪ್ರವೇಶಿಸುವುದಕ್ಕೆ ಭಾರತ ಕಾತರವಾಗಿದ್ದ ಕಾಲದಲ್ಲಿಯೇ, ಶತಮಾನಗಳಿಂದ ಈ ನೆಲದಲ್ಲಿ ತುಳಿತಕ್ಕೊಳಗಾದ ಜನರು ಆ ಸ್ವಾತಂತ್ರ್ಯವೆಂಬ ಹೊಸ ವ್ಯವಸ್ಥೆಯಲ್ಲಿ ಬದುಕು ಕಟ್ಟಿಕೊಳ್ಳಲು ಶಿಕ್ಷಣವೊಂದೆ ದಾರಿ ಎಂಬುದನ್ನು ಕಂಡುಕೊಂಡರು. ಸಂವಿಧಾನದ ಮೂಲಕ ಕಡ್ಡಾಯ ಶಿಕ್ಷಣವನ್ನು ಸಾಧ್ಯವಾಗಿಸಿಕೊಟ್ಟರು. ಅಂಬೇಡ್ಕರರಿಗಾದ ಅವಮಾನ, ನೋವುಗಳನ್ನು ಸ್ವತಂತ್ರ ಭಾರತ ಮಕ್ಕಳಿಗೆ ಪಠ್ಯಗಳನ್ನಾಗಿಸಿ ನೀಡುತ್ತಿದೆ. ಚಿತ್ರ, ಸಿನಿಮಾ, ಪುಸ್ತಕಗಳ ಮೂಲಕವೂ ತಿಳಿಸುತ್ತಿದೆ. ಘೋರ ಜಾತಿ ವ್ಯವಸ್ಥೆಯ ನಡುವಿಂದ ಬಂದು ಜಗತ್ತಿನಲ್ಲಿಯೆ ಅಪರೂಪದ ಸಂವಿಧಾನ ರೂಪಿಸಿದ ಮಹಾನ್ ಚೇತನದ ಜೀವನದ ಘಟನೆಗಳನ್ನು ಪಾಠಗಳನ್ನಾಗಿ ಓದಿ ಉರುಹೊಡೆದು ಅಂಕಗಳಿಸಿದರೂ ಈ ಸಮಾಜದೊಳಗೆ ರೂಪುಗೊಳ್ಳಬೇಕಿದ್ದ ನೈತಿಕ ಮೌಲ್ಯ ಮಾತ್ರ ಬದಲಾಗದೆ ಹಾಗೆಯೇ ಉಳಿದಿದೆ. ಜಾತಿ ತಾರತಮ್ಯ ಮಾತ್ರ ಅವ್ಯಾಹತವಾಗಿ ನಡೆಯುತ್ತಲೇ ಇದೆ.

ಸೌಹಾರ್ದ, ಜಾತ್ಯಾತೀತ, ಭಾವೈಕ್ಯದ ಭಾರತವೆಂದು ಕರೆಸಿಕೊಳ್ಳುವ ಈ ದೇಶ ಆಧುನೀಕತೆಯ ಪ್ರವಾಹಕ್ಕೆ ಸಿಕ್ಕು ಹೊಸ ಹೊಸ ಜೀವನಕ್ರಮವನ್ನು ಮೈಗೂಡಿಸಿಕೊಂಡು ಅಭಿವೃದ್ಧಿಯ ಹಾದಿಯಲ್ಲಿ ವೇಗವಾಗಿ ಸಾಗಿದೆ. ಆದರೆ ದಲಿತರು ಮತ್ತು ಮೇಲ್ಜಾತಿ ಎಂಬ ವಿಚಾರದಲ್ಲಿ? ಹಿಂದಕ್ಕೆ ಸಾಗಿದೆ. ಅವಮಾನಗೊಳಿಸುವ, ದೌರ್‍ಜನ್ಯ ನಡೆಸುವ ಹೊಸ ಹೊಸ ಪಟ್ಟುಗಳನ್ನು ಕಂಡುಕೊಂಡು ಜಾತ್ಯಾತೀತತೆಗೆ ಸೆಡ್ಡುಹೊಡೆದು ನಿಂತಿದೆ. ದಲಿತರು ಇಂದು ರಾಜಕಾರಣಿಗಳಾಗಿದ್ದಾರೆ, ಉನ್ನತ ಅಧಿಕಾರಿಗಳಾಗಿದ್ದಾರೆ, ಉದ್ಯಮಿಗಳಾಗಿದ್ದಾರೆ, ಸಾಹಿತಿಗಳಾಗಿದ್ದಾರೆ, ಶಿಕ್ಷಕರಾಗಿದ್ದಾರೆ, ಸಮಾಜದ ಬೇರೆ ಬೇರೆ ಸ್ತರಗಳಲ್ಲಿ ಕರ್‍ತವ್ಯ ನಿರ್‍ವಹಿಸುತ್ತಿದ್ದಾರೆ. ಅವರು ಏನೇ ಆಗಿದ್ದರೂ ದಲಿತರೆಂದೇ ಗುರುತಿಸುತ್ತಾರೆ. ಬರೆದದ್ದು ದಲಿತ ಸಾಹಿತ್ಯ, ಮಾಡಿದ ಚಳುವಳಿ ದಲಿತ ಚಳುವಳಿ, ಸಂಘಟನೆ ದಲಿತ ಸಂಘಟನೆ. ರಾಜಕೀಯಕ್ಕಿಳಿದರೆ ದಲಿತ ರಾಜಕಾರಣಿ ಹೀಗೆ…. ದಲಿತರು ಏನೇ ಆದರೂ ಅವರನ್ನು ಜಾತಿಯ ನೆಲೆಯಲ್ಲಿ ಗುರುತಿಸುವುದು ಈ ಸಮಾಜಕ್ಕೆ ಅಭ್ಯಾಸವಾಗಿಬಿಟ್ಟಿದೆ ಅಥವಾ ಅಂಥದ್ದೊಂದು ಪರೋಕ್ಷ ಶಿಕ್ಷಣ ಕ್ರಮವನ್ನು ನಮ್ಮ ಸಮಾಜ  ಅನುಸರಿಸಿಕೊಂಡು ಬರುತ್ತಿದೆ.

ದಲಿತರು ಈಗೀಗ ಸಮಾಜದ ಮುಖ್ಯವಾಹಿನಿ ಎನ್ನುತ್ತಾರಲ್ಲ ಅದರತ್ತ ಬರುತ್ತಿದ್ದಾರೆ. ಹಾಗಾಗಿ ಯಾವ ಹಳ್ಳಿ, ಪಟ್ಟಣ, ನಗರಗಳಲ್ಲಿ ಶ್ರೀಮಂತ ದಲಿತರು ಕಂಡು ಬರುವುದು ಕಡಿಮೆ. ನೌಕರಿ ಸಿಕ್ಕಿ ಊರುಬಿಟ್ಟು ಪರವೂರಿಗೆ ಬರುವ ದಲಿತ ನೌಕರರಿಗೆ ವಾಸದ ಮನೆಗಾಗಿ ಬೇರೆ ಜಾತಿಯವರ ಬಾಡಿಗೆ ಮನೆಗಳನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಇದೆ. ಆದರೆ ಹಾಗೊಂದು ಬಾಡಿಗೆ ಮನೆಯನ್ನು ಹುಡುಕುವುದೆಂದರೆ ಅದಕ್ಕಿಂತ ಅವಮಾನದ ಸಂಗತಿ ಮತ್ತೊಂದಿಲ್ಲ. ಎಲ್ಲಿ ಹೋದರೂ ಮೊದಲ ಮಾತೆ ಜಾತಿ ಯಾವುದು? ಮನೆ ಕೊಡಿಸುವ ದಲ್ಲಾಳಿಯಿಂದಲೇ ಮೊದಲ ಆಘಾತ ಆರಂಭಗೊಳ್ಳುತ್ತದೆ. ಜಾತಿ ಹೇಳಿದರೆ ಮನೆಯಿಲ್ಲ, ಸ್ವಾಭಿಮಾನಬಿಟ್ಟು ಸುಳ್ಳು ಹೇಳುವುದು ಇನ್ನೊಂದು ನೋವಿನ ಸಂಗತಿ. ಎರಡೂ ಬಿಟ್ಟರೆ ವಾಸಕ್ಕೆ ಮನೆಯಿಲ್ಲ!

ಒಂದಿಷ್ಟು ಉದಾಹರಣೆ ನೋಡೋಣ

  • ಮೆರಿಟ್‌ನಲ್ಲಿ ಆಯ್ಕೆಗೊಂಡ ಪ್ರೌಢಶಾಲೆಯೊಂದರ ಶಿಕ್ಷಕಿಯೊಬ್ಬರ ಅನುಭವ. ಶಾಲೆಯ ಉಳಿದ ಶಿಕ್ಷಕರಿಗೆ ಮೊದಲ ಕುತೂಹಲವೆ ಇವರ ಜಾತಿಯಾವುದು. ಮೆರಿಟ್‌ನಲ್ಲಿ ಆಯ್ಕೆಗೊಂಡಿರುವುದರಿಂದ ಜಾತಿ ತಕ್ಷಣಕ್ಕೆ ತಿಳಿಯುವುದಿಲ್ಲವಲ್ಲ. ಹಾಗಾಗಿ ಉಳಿದ ಒಂದೇ ಒಂದು ಉಪಾಯವೆಂದರೆ ಸರ್‍ವೀಸ್ ರಿಜಿಸ್ಟರ್ ತುಂಬುವಾಗ ಜಾತಿ ಕಾಲಮನ್ನು ನೋಡುವುದು.
  • ಮನೆ ಹುಡುಕುತ್ತಿದ್ದ ದಲಿತ ಶಿಕ್ಷಕರೊಬ್ಬರ ಅನುಭವ. ಅಡ್ವಾನ್ಸ್ ಪಡೆದು ಆಮೇಲೆ ಜಾತಿ ಕೇಳಿ ಹಣವನ್ನು ಹಿಂತಿರುಗಿಸಿದ ಮನೆ ಮಾಲೀಕ.
  • ದಲಿತ ನೌಕರರೊಬ್ಬರಿಗಾದ ಇನ್ನೊಂದು ಅನುಭವ. ಹಣವನ್ನೂ ನೀಡಿದ್ದರು. ವಾಸಕ್ಕೆಂದು ಸಂಸಾರ ಸಮೇತ ಮನೆ ಮುಂದೆ ಬಂದು ನಿಂತಿದ್ದಾರೆ. ಮನೆ ಮಾಲೀಕ ಪಕ್ಕದ ಮನೆಯವರಿಂದ ಜಾತಿ ತಿಳಿದು ಒಳಗೆಬಿಟ್ಟುಕೊಳ್ಳದೆ ಹಣವನ್ನು ವಾಪಾಸ್ಸು ನೀಡುತ್ತಾನೆ.
  • ದಲಿತ ಪತ್ರಕರ್ತ. ಜಿಲ್ಲಾವರದಿಗಾರನಾಗಿ ನಗರಕ್ಕೆ ಬಂದಿದ್ದಾರೆ. ವಾಸಕ್ಕೆ ಮನೆ ಬೇಕಾಗಿದೆ. ಹುಡುಕಿದ್ದಾರೆ ಜಾತಿ ಕಾರಣದಿಂದಾಗಿ ಮನೆಗಳು ಸಿಕ್ಕಿಲ್ಲ. ಕಡೆಗೆ ದಲಿತರೇ ಹೆಚ್ಚಾಗಿ ವಾಸ ಮಾಡುವ ಸ್ಥಳವನ್ನು ಹುಡುಕಬೇಕಾಯಿತು.
  • ದಲಿತ ಪತ್ರಕರ್‍ತರ ಇನ್ನೊಂದು ಘಟನೆ. ಅವರೂ ಕೂಡ ಜಿಲ್ಲಾವರದಿಗಾರರಾಗಿ ನಗರಕ್ಕೆ ಬಂದವರು. ಮನೆ ಸಿಕ್ಕಿತು. ಆಮೇಲೆ ಮಾಲೀಕನಿಗೆ ಜಾತಿ ತಿಳಿದು ಕಟ್ಟಿಕೊಂಡ ಪಾಯಿಖಾನೆ ದುರಸ್ತಿ ಮಾಡದೆ, ನೀರಿನ ಸಮಸ್ಯೆ ಸೃಷ್ಠಿಸಿ ವಿನಾಕಾರಣ ಜಗಳ ತೆಗೆದು ಮನೆ ಖಾಲಿ ಮಾಡಿಸುತ್ತಾರೆ.
  • ನೌಕರಿಯ ನಿಮಿತ್ತ ನಗರ ಸೇರಿಕೊಂಡ ದಲಿತ ದಂಪತಿಯ ಅನುಭವ. ಗಂಡನದ್ದು ವ್ಯಾಪಾರಿ ಮನೋಭಾವ ಹೆಂಡತಿಯದ್ದು ಸಂಪ್ರದಾಯ. ವ್ಯಾಪಾರಿಗೆ ಜಾತಿ ಯಾವುದಾದರೇನು ಹಣ ಮುಖ್ಯ, ಸಂಪ್ರದಾಯವಾದಿ ಮಹಿಳೆಗೆ ತಮ್ಮ ಮಡಿ ಮಯ್ಲಿಗೆಗೆ ತೊಡಕು ಎಂಬ ಧಾರ್‍ಮಿಕ ನಿಷ್ಠೆ. ಕಡೆಗೆ ಧಾರ್ಮಿಕ ನಿಷ್ಠೆಗೆ ಗೆಲುವಾಗಿ ದಲಿತ ದಂಪತಿಗೆ ಮನೆ ಸಿಗುವುದಿಲ್ಲ.

ಇಂತಹ ನೂರಾರು ಸಾವಿರಾರು ಘಟನೆಗಳನ್ನು ಪಟ್ಟಿ ಮಾಡಬಹುದು. ಹಾಗೆ ಪಟ್ಟಿ ಮಾಡುತ್ತಾ ಹೋದರೆ ಈ ಜಾತ್ಯಾತೀತ ಭಾರತದ ಪ್ರತಿಯೊಂದು ಹಳ್ಳಿ, ಪಟ್ಟಣ, ನಗರಗಳ ಹೆಸರುಗಳನ್ನೂ ಬರೆಯಬೇಕಾಗಬಹುದು. ಆದರೆ ಇಲ್ಲಿ ಮನೆ ಸಿಗದಿದ್ದರೂ ಜಾತಿಯ ಕಾರಣಕ್ಕಾಗಿ ಅವಮಾನ ಎದುರಿಸುವ ದಲಿತರ ಮಾನಸಿಕ ವೇದನೆ ಹೇಗಿರಬಹುದು? ಆ ಕ್ಷಣದ ಸಂಕಟ ಸಾವು ಉಂಟುಮಾಡುವ ನೋವಿಗಿಂತಲೂ ಘೋರವಾದುದಲ್ಲವೆ? ಕೆಲವು ಮನೆ ಮಾಲೀಕರದ್ದು ಸೌಮ್ಯ ಸ್ವಭಾವ. ಅವರು ನೇರವಾಗಿ ಜಾತಿ ಕೇಳುವುದಿಲ್ಲ. ನೀವು ವೆಜ್ಜಾ ಅಥವಾ ನಾನ್‌ವೆಜ್ಜಾ? ಎಂಬ ಪರೋಕ್ಷ ಪ್ರಶ್ನೆ ಹಾಕುತ್ತಾರೆ. ದಲಿತರಷ್ಟೇ ಈ ದೇಶದಲ್ಲಿ ಮಾಂಸಾಹಾರಿಗಳಲ್ಲ. ದಲಿತರಲ್ಲದ ಬಹಳಷ್ಟು ಜಾತಿಯವರು ಮಾಂಸಾಹಾರಿಗಳು. ಮಾಂಸ ಈ ದೇಶದ ಬಹುಸಂಖ್ಯಾತರ ಆಹಾರ. ಮಾಂಸಾಹಾರ ಸೇವಿಸುವ ಇತರೆ ಜಾತಿಯವರಿಗೆ ಸಲೀಸಾಗಿ ಮನೆಗಳು ಸಿಗುತ್ತವೆ ಎಂದ ಮೇಲೆ ಮಾಂಸಾಹಾರ ಮನೆ ನೀಡುವುದಕ್ಕೆ ಒಂದು ಕಾರಣವೇ ಅಲ್ಲ. ಆಹಾರ ಕ್ರಮವನ್ನು ಮುಂದಿಟ್ಟುಕೊಂಡು, ನೀವು ಯಾವ ಕೆಟಗರಿಗೆ ಬರುತ್ತೀರಿ ಎಂದೂ ಜಾತಿಯನ್ನು ಗೊತ್ತುಪಡಿಸಿಕೊಂಡು ಖಾಲಿಯಿದ್ದರೂ ಬೇರೆಯವರಿಗೆ ಆಗಿದೆ ಎಂದು ನಿರಾಕರಿಸುವ ವ್ಯವಸ್ಥೆ ನಮ್ಮ ನಡುವಿದೆ. ಮನೆ ಕೇಳಲು ಬಂದ ದಲಿತ ನೌಕರ ಎಂತಹುದೇ ಗೌರವಾನ್ವಿತ ಹುದ್ದೆಯಲ್ಲಿರಲಿ ಜಾತಿಯನ್ನು ಹೇಳಿಕೊಂಡರೆ ಮನೆ ಸಿಗದು. ಜಾತಿಯ ಹೆಸರನ್ನು ಸುಳ್ಳು ಹೇಳಿ ಮನೆ ಪಡೆದು ಬದುಕಬೇಕಾದ ದುರವಸ್ಥೆ ನಮ್ಮ ಸಮಾಜದಲ್ಲಿದೆ. ಜಾತಿಯನ್ನು ಹೇಳದೆ ಕರ್ತವ್ಯಪಾಲನೆಯಲ್ಲಿ ತೊಡಗುವ ನೌಕರನ ಜಾತಿಯನ್ನು ಪತ್ತೆಹಚ್ಚಲು ವಿದ್ಯಾವಂತರಿಂದಲೇ ನಡೆಯುವ ಹುಡುಕಾಟ ಅಸಹ್ಯ ಹುಟ್ಟಿಸುತ್ತದೆ.

ಮೇಲಿನ ಎಲ್ಲಾ ಘಟನೆಗಳು ನಗರಗಳದ್ದು. ಅಭಿವೃದ್ಧಿ ಹೊಂದುತ್ತಿರುವ ಭಾರತದ ನಗರಗಳ ಬೆಳವಣಿಗೆಯಂತೂ ದಲಿತರ ಪಾಲಿಗೆ ಆಘಾತಕಾರಿಯಾಗಿದೆ. ದಲಿತರ ಬದುಕುವ ಹಕ್ಕನ್ನೇ ಕಸಿಯುವ ಹುನ್ನಾರ ಅವುಗಳ ಅಭಿವೃದ್ಧಿಯ ತಳಹದಿಯಲ್ಲೇ ಅಡಗಿ ಕುಳಿತಿದೆ. ಬಡಾವಣೆಗಳು ನಿರ್‍ಮಾಣಗೊಳ್ಳುವಾಗಲೇ ಅದು ನಿರ್ದಿಷ್ಟ ಜಾತಿಯವರಿಗೆ ಎಂಬ ಆಂತರಿಕ ಒಳ ಒಪ್ಪಂದಗಳಾಗಿಬಿಟ್ಟಿರುತ್ತದೆ. ಅಂತಲ್ಲಿ ಬಾಡಿಗೆಗಿರಲಿ ದಲಿತರಿಗೆ ಕ್ರಯಕ್ಕೆ ಸೈಟು ಕೂಡ ಸಿಗದ ವಾತಾವರಣ ರೂಪುಗೊಳ್ಳುತ್ತಿದೆ. ಶೈಕ್ಷಣಿಕವಾಗಿ, ಆರ್‍ಥಿಕವಾಗಿ ಈಗಷ್ಟೆ ಮುನ್ನಲೆಗೆ ಬರುತ್ತಿರುವ ಕೆಳವರ್‍ಗಗಳಿಗೆ ಈ ಅಭಿವೃದ್ಧಿಶೀಲ ಸಮಾಜದಲ್ಲಿ ಬದುಕುವ ಹಕ್ಕಿಲ್ಲವೇ? ಸಂವಿಧಾನವನ್ನೇ ಧರ್‍ಮಗ್ರಂಥವೆಂದು ನಂಬಿಕೊಂಡಿರಬೇಕಾದ ಈ ದೇಶದಲ್ಲಿ ಜಾತಿ ಆಧಾರಿತ ಕಟ್ಟುಪಾಡುಗಳ ಆಚರಣೆಗಳು ದೇಶವನ್ನು ನಾಗರಿಕತೆಯಿಂದ ವಿಮುಖಗೊಳಿಸುತ್ತಿವೆಯೇ? ಹೊಸ ಹೊಸ ಪಠ್ಯಗಳ ಆವಿಷ್ಕರಣೆಗೊಳಿಸಿಕೊಂಡು ನಾವೆಲ್ಲ ಪಡೆಯುತ್ತಿರುವುದು ನಿಜವಾದ ಶಿಕ್ಷಣವನ್ನೇ? ಇತಿಹಾಸಗಳಿಂದ ನಾವೆಲ್ಲ ಪಾಠವನ್ನು ಕಲಿತಿಲ್ಲವೇ ಅಥವಾ ಇತಿಹಾಸವನ್ನೇ ಅರಿತಿಲ್ಲವೇ? ಅಂಬೇಡ್ಕರರ ಮಾತು ನೆನಪಾಗುತ್ತದೆ-ಇತಿಹಾಸವನ್ನು ಅರಿಯದವನು ಇತಿಹಾಸವನ್ನು ನಿರ್ಮಿಸಲಾರ. ಹೌದು ನಮಗೆ ಜಾತ್ಯಾತೀತ ಭಾರತವೆಂದು ಹೇಳಿಕೊಳ್ಳುವುದು ತಿಳಿದಿದೆಯೆ ಹೊರತು ಅಂಥದ್ದೊಂದು ಭಾರತವನ್ನು ಕಟ್ಟಲು ಸಾಧ್ಯವಾಗಿಲ್ಲ; ನಾವು ಇತಿಹಾಸವನ್ನು ಅರಿತಿಲ್ಲ.

ನಮ್ಮ ರಾಜಕಾರಣವೂ ಕೂಡ ಜಾತಿಯ ಆಧಾರದಲ್ಲಿ ಮತಗಳನ್ನು ಲೆಕ್ಕ ಹಾಕುವುದರಿಂದ ಅದಕ್ಕೆ ಜಾತೀಯವಾಗಿ ಜನರು ಛಿದ್ರವಾಗುವುದು ಬೇಕಾಗಿದೆ. ಜಾತಿಯ ಭೂತ ಈ ದೇಶದಲ್ಲಿ ಹೊಸ ರೂಪ ಪಡೆದುಕೊಂಡು ವೇಷಕಟ್ಟಿದೆ. ಜಾತಿಗೊಂದು ಸಂಘ, ಸಮುದಾಯ ಭವನಗಳನ್ನು ನಿರ್ಮಿಸಿಕೊಟ್ಟು ಜಾತಿಗಳನ್ನು ಓಲೈಸಿಕೊಳ್ಳುವ ಕೆಲಸ ರಾಜಕಾರಣದಿಂದ ನಡೆದಿದೆ.

ನೌಕರಿ ಹಿಡಿದು ಊರುಬಿಟ್ಟು ಪರವೂರಿಗೆ ಬಂದ ದಲಿತರು ಸ್ವಾಭಿಮಾನವನ್ನು ಬಿಟ್ಟು ಸುಳ್ಳು ಹೇಳಿ ಬಾಡಿಗೆ ಮನೆ ಪಡೆದು ಅಂಜಿಕೆಯಲ್ಲಿ ಬದುಕುವಂತ ಸ್ಥಿತಿ ನಮ್ಮ ವಿದ್ಯಾವಂತ ದಲಿತರಲ್ಲಿದೆ. ಇನ್ನು ಅವಿದ್ಯಾವಂತ ದಲಿತರ ಸ್ಥಿತಿಯಂತೂ ಇನ್ನೂ ಭಯಾನಕವಾಗಿದೆ. ಈಗೀಗ ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತವಾಗಿ ಮಾತನಾಡುವ ಗೆಳೆಯರು ಸಿಕ್ಕಿ ದಲಿತರಿಗೆ ಮನೆ ಸಿಗದ ಹೊಸ ಹೊಸ ಘಟನೆಗಳು ಒಂದೊಂದಾಗಿ ತೇಲಿ ಬರುತ್ತಿವೆ. ಹಲವಾರು ಜಾತ್ಯಾತೀತ ಮನಸುಗಳು ದಲಿತ ಗೆಳೆಯರ ಸಂಕಟಕ್ಕೆ ದನಿಗೂಡಿಸಿ ಬೆಂಬಲ ಸೂಚಿಸುತ್ತಿವೆ. ಆದರೆ ವ್ಯವಸ್ಥೆ ಮಾತ್ರ ತನ್ನ ಹಾದಿಯಲ್ಲಿ ನಾಗಾಲೋಟದಲ್ಲಿ ಸಾಗಿದೆ. ಬಾಡಿಗೆಗೆ ಮನೆ ಸಿಗದೆ ಹೊಸ ಹೊಸ ಮನಗಳು ದಿನದಿನ ಬಾಡುತ್ತಿವೆ. ಆಹಾರ ಪದ್ಧತಿ ಏನೇ ಇದ್ದರೂ ಈ ಸೌಹಾರ್ದ, ಜಾತ್ಯಾತೀತ, ಭಾವೈಕ್ಯದ ಭಾರತದಲ್ಲಿ ಮಾಂಸ ತಿನ್ನದ ದಲಿತರಿಗೂ ಬಾಡಿಗೆಗೆ ಮನೆ ಸಿಕ್ಕುವುದಿಲ್ಲ. ಹಾಗಂತ ಸಿಗುವುದೇ ಇಲ್ಲ ಅಂತಲ್ಲ. ಎಲ್ಲೋ ಅಪರೂಪದ ಮನುಷ್ಯರು ಮನೆ ನೀಡುತ್ತಾರೆ. ಅಂಥವರ ಸಂತತಿ ಬೆಳೆಯಲಿ.

ನಾವೆಲ್ಲ ಅಂಬೇಡ್ಕರ್ ಬದುಕಿದ್ದ ಕಾಲದಲ್ಲಿ ಇಲ್ಲ. ಅಭಿವೃದ್ಧಿಯ ಧಾವಂತದಲ್ಲಿ ಸಾಗುತ್ತಿರುವ ಆಧುನಿಕ ಯುಗದಲ್ಲಿದ್ದೇವೆ. ಶತಮಾನ ಕಳೆದಿದೆ. ನಮ್ಮೆದುರು ಬುದ್ಧನ ಶಾಂತಿಯ ಮಾರ್ಗ, ಬಸವಣ್ಣನ ಆದರ್ಶ, ಅಂಬೇಡ್ಕರರ ವಿಚಾರಧಾರೆಗಳಿವೆ, ಓದಿಯೂ ಇದ್ದೇವೆ! ಆದರೆ ಈ ಭಾರತ ಅವ್ಯಾವುದನ್ನೂ ಮೈಗೂಡಿಸಿಕೊಂಡಿಲ್ಲ. ಯಾಕೆಂದರೆ ಅದರ ಮಯ್ಯಲ್ಲಿ ಜಾತಿಯ ಕವಚವಿದೆ!!

-ಸಂತೋಷ ಗುಡ್ಡಿಯಂಗಡಿ 

 ****** 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
9 years ago

ನೀವು ಹೇಳುವುದು ನೂರಕ್ಕೆ ನೂರು ನಿಜ.
ಜಾತಿಯೆಂಬ ತಾರತಮ್ಯ ಮಾಡುವವರಿಗೆ ಧಿಕ್ಕಾರ.

prashasti.p
9 years ago

ನೀವಂದಂತೆ ಜನರ ಮನಸ್ಸುಗಳು ಬದಲಾಗಬೇಕೇ ಹೊರತು ಅವರ ನಡುವಿನ ವರ್ಗ, ಪ್ರವರ್ವ, ಹೇರುವಿಕೆಗಳಲ್ಲ.. ನಿಮ್ಮೊಂದು ಮಾತು ಇಷ್ಟವಾಯ್ತು
====
ನಮ್ಮ ರಾಜಕಾರಣವೂ ಕೂಡ ಜಾತಿಯ ಆಧಾರದಲ್ಲಿ ಮತಗಳನ್ನು ಲೆಕ್ಕ ಹಾಕುವುದರಿಂದ ಅದಕ್ಕೆ ಜಾತೀಯವಾಗಿ ಜನರು ಛಿದ್ರವಾಗುವುದು ಬೇಕಾಗಿದೆ. ಜಾತಿಯ ಭೂತ ಈ ದೇಶದಲ್ಲಿ ಹೊಸ ರೂಪ ಪಡೆದುಕೊಂಡು ವೇಷಕಟ್ಟಿದೆ. ಜಾತಿಗೊಂದು ಸಂಘ, ಸಮುದಾಯ ಭವನಗಳನ್ನು ನಿರ್ಮಿಸಿಕೊಟ್ಟು ಜಾತಿಗಳನ್ನು ಓಲೈಸಿಕೊಳ್ಳುವ ಕೆಲಸ ರಾಜಕಾರಣದಿಂದ ನಡೆದಿದೆ.
======
ಜಾತಿಗೊಂದು ಮೀಸಲಾತಿಯಿಟ್ಟು , ಆ ಮೀಸಲ ಭೂತದ ಪ್ರಯೋಜನವನ್ನು ಮತ್ತೆ ಶ್ರೀಮಂತರೇ ಪಡೆಯಲನುವ ಮಾಡಿಕೊಟ್ಟು ಬಡವರು ಎಲ್ಲಿದ್ದರೂ ಬಡವರೇ, ಸೌಲಭ್ಯವಂಚಿತರೇ ಆಗಿರೋ ಪರಿಸ್ಥಿತಿಗೆ ದೂಡಲ್ಪಟ್ಟಿದ್ದೇವೆ. ಪ್ರತಿಭೆಯಿದ್ದಲ್ಲಿ, ಕಷ್ಟಪಟ್ಟಿದ್ದಲ್ಲಿ ಬೆಲೆಯಿರಲಿ. ಆತ ಹುಟ್ಟಿದ್ದೆಲ್ಲಿ, ಆತನ ತಂದೆಯ ಉದ್ಯೋಗವೇನಾಗಿತ್ತೆಂಬುದಕ್ಕಲ್ಲ. ಹುಟ್ಟಿದ ಜಾಗಕ್ಕೆ, ಆತನ ತಂದೆಯ ಉದ್ಯೋಗಕ್ಕೆ ಕಿಂಚಿತ್ತೂ ಬಾಜುದಾರನಲ್ಲದ ಜೀವವ ತಾರತಮ್ಯದಿ ಕಾಣುವ ಜೀವಗಳಿಗೆ ಧಿಕ್ಕಾರವೂ ಇರಲಿ 🙁

ದತ್ತಾತ್ರಿ ಹೆಚ್.ಎಂ.
ದತ್ತಾತ್ರಿ ಹೆಚ್.ಎಂ.
9 years ago

ವಿದ್ಯೆಗಿರಲಿ, ಉದ್ಯೊಗಕ್ಕಿರಲಿ ಇನ್ನಾವುದಕ್ಕೇ ಇರಲಿ, ಜಾತಿ ಸಂಪೂರ್ಣವಾಗಿ ಅಪ್ರಸ್ತುತವಾಗಲೇಬೇಕಾಗಿದೆ. ಆದರೆ ಎಲ್ಲಾ ಬೆಳವಣಿಗೆಗಳೂ ವಿರುಧ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಇದಕ್ಕೆ ಮದ್ದು ಮಾತ್ರ ಎಲ್ಲೂ ಕಾಣದಾಗಿದೆ.

3
0
Would love your thoughts, please comment.x
()
x