ಪುಸ್ತಕ ಯಾವುದೇ ಇರಲಿ ಮೊದಲು ಪುಸ್ತಕದ ಶೀರ್ಷಿಕೆ ಓದುಗರನ್ನ ಸೆಳೆಯಬೇಕು.. ಅಲ್ಲಿಗೆ ಆ ಪುಸ್ತಕ ಅರ್ಧ ಗೆದ್ದಂತೆಯೇ ಸರಿ..! ಆ ವಿಷಯದಲ್ಲಿ ಲೇಖಕರಾದ ಸಂತೋಷಕುಮಾರ್ ಮೆಹಂದಳೆಯವರು ಎಂದಿಗೂ ರಾಜಿಯಾದವರಲ್ಲ ಎನಿಸುತ್ತದೆ..!
ಜೊತೆಗೆ ಅವರ ಪುಸ್ತಕ ಓದುಗನನ್ನು ತನ್ನೊಳಗೆ ಲೀನವಾಗಿಸಿಕೊಳ್ಳುತ್ತದೆ ಎಂಬುದಕ್ಕೆ ನಾ ಹಿಂದೆ ಓದಿದ್ದ ಅಘೋರಿಗಳ ಲೋಕದ ಪುಸ್ತಕದ ಬಗ್ಗೆ ಬರೆದಾಗಲೇ ಹೇಳಿದ್ದೆ ಎಂದರೆ ತಪ್ಪಾಗಲಾರದು.
ತಡವಾಗಿ ಬಿದ್ದ ಮಳೆ ಮೊದಲು ಆಕರ್ಷಿಸಿದ್ದು ಶೀರ್ಷಿಕೆಯೇ.. ಅದೇ ಕುತೂಹಲದಿಂದ ಓದಲು ಶುರು ಮಾಡಿದ ನಾನು ಒಂದೇ ಗುಕ್ಕಿಗೆ ಓದಿ ಮುಗಿಸಿದೆ.. ಪೂರ್ತಿ ಆಗುವವರೆಗೂ ಪುಸಕ್ತ ಇಡಲು ಮನಸಾಗಲಿಲ್ಲ ಎಂದರೆ ಅದು ಆ ಬರಹದ, ಅಲ್ಲಿದ್ದ ವಸ್ತು ವಿಷಯ ಮನಸ್ಸನ್ನು ಹಿಡಿದಿಟ್ಟುಕೊಂಡಿತ್ತು ಎಂದರೆ ಅತಿಶಯವಲ್ಲ..
ಇದರಲ್ಲಿನ ಒಂದೊಂದು ಕತೆಗಳು ಭಿನ್ನ.. ಆದರೆ ಸಂಪೂರ್ಣ ಹೆಣ್ಣಿನ ದೃಷ್ಟಿಯಿಂದ ಬರೆದಿರುವುದು ನನಗೆ ಇಷ್ಟು ಆಪ್ತ ಎನಿಸಲು ಕಾರಣವೂ ಇರಬಹುದು..
ಇಂದಿನ ನೆಲೆಗಟ್ಟಿನಲ್ಲಿ ನಡೆಯುತ್ತಿರುವ ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳಿಗೆ ಕತೆಯ ರೂಪ ನೀಡಿ ನಮ್ಮೊಳಗೇ ಪ್ರಶ್ನೆಗಳನ್ನು ಎಬ್ಬಿಸಿ.. ಆ ಪ್ರಶ್ನೆಗಳಿಗೆ ನಮ್ಮಿಂದಲೇ ನಾವೇ ಉತ್ತರವನ್ನು ಪಡೆಯುವಂತೆ ಮಾಡುತ್ತದೆ.. ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ..
ನಿಜ ಗಂಡು ಕೆಟ್ಟವನೆಂದು ಹೇಳದೆ, ಹೆಣ್ಣು ಒಳ್ಳೆಯವಳೆಂದು ಹೇಳದೆ.. ಸಮಾಜದಲ್ಲಾಗಲಿ, ಕುಟುಂಬದಲ್ಲಾಗಲಿ ಆಗುವ ಅನಾಹುತಗಳಿಗೆ ಇಬ್ಬರು ಹೇಗೆ ಸಮಾನರು ಎಂಬುದನ್ನು ತೋರಿಸಿಕೊಡುತ್ತವೆ ಇಲ್ಲಿನ ಕತೆಗಳು..
ಅದಷ್ಟೇ ಅಲ್ಲದೆ.. ಹೆಣ್ಣು ಬಹಿರಂಗವಾಗಿ ಅನ್ನೋದಕ್ಕಿಂತ ಆಂತರಿಕವಾಗಿ ಎಷ್ಟೆಲ್ಲ ಅತ್ಯಾಚಾರಕ್ಕೆ ಒಳಗಾಗುತ್ತಾಳೋ ಅದನ್ನ ಅವಳೇ ಬಲ್ಲಳು ಎಂಬ ಸತ್ಯವನ್ನ ಎಳೆ ಎಳೆಯಾಗಿ ಹೇಳೀದ್ದಾರೆ.. ಅದನ್ನು ಒಪ್ಪಲೇಬೇಕು.. ಒಬ್ಬ ತಂದೆಯೇ ಮಗಳನ್ನು ಬಳಸಿಕೊಳ್ಳುವುದು..! ಸತ್ಯ ಹೇಳಿದರು ಸಮಾಜ ಅದನ್ನ ಅಷ್ಟು ಬೇಗ ನಂಬುವುದು ಇಲ್ಲ ಎಂಬುವುದು ವಿಪರ್ಯಾಸವೇ ಸರಿ..
ಇಲ್ಲಿ ಗಂಡು ತಪ್ಪು ಮಾಡಲಿ ಹೆಣ್ಣು ತಪ್ಪು ಮಾಡಲಿ ಅದರ ಅಪವಾದ ಕೊನೆಗೆ ಹೆಣ್ಣಿನ ತಲೆಗೆ..!
ಆದರೆ ಎಲ್ಲಾ ಕತೆಯನ್ನು ಓದಿ ಕೊನೆಯ ಕಥೆಗೆ ಬಂದಾಗ ಸಮಾಧಾನ ಎನಿಸಿದರೆ ಅದು ಅತಿಶಯವಲ್ಲ..
ಏಕೆಂದರೆ ಮೊದಲು ಹೆಣ್ಣನ್ನು ಕಟ್ಟಿಹಾಕುವ ಮೊದಲ ಮಾರ್ಗವೆಂದರೆ emotional balckmail ನೀ ಹೀಗೆ ಮಾಡಿದ್ರೆ ಅವರು ಏನಂತಾರೆ ಇವರು ಏನಂತಾರೆ ಅನ್ನೋ ಮಾತುಗಳಿಂದ.. ಮಕ್ಕಳಿದ್ದಾರೆ.. ಗಂಡ.. ಮನೆ.. ಮರ್ಯಾದೆ ಎಂದು ಹೇಳುತ್ತಲೇ ಅವಳ ಕನಸು ಆಸೆಗೆಲ್ಲ ಗೋಡೆ ಕಟ್ಟಿಬಿಡುತ್ತಾರೆ..
ಕೊಂಚ ತಡವಾದರೂ ಸರಿ ಅಂತಹ ಭಾವನಾತ್ಮಕತೆಯಿಂದ ದೂರ ಸರಿದು ವಾಸ್ತವತೆಗೆ ಒಗ್ಗಿಕೊಂಡಾಗಲಷ್ಟೇ ಆಕೆಯ ಬದುಕು ಒಂದು ಹಂತಕ್ಕೆ ಬಂದು ಅವಳ ಕನಸು ಆಸೆಗಳು ನೆರವೇರಲು ಸಾಧ್ಯವಾಗುವುದು..!
ಇದಷ್ಟೇ ಅಲ್ಲದೆ ಇಲ್ಲಿನ ಭಾಷಾ ಶೈಲಿ, ನೈಸರ್ಗಿಕ ಚಿತ್ರಣ, ಹೃದಯಸ್ಪರ್ಶಿ ವಿಷಯ ವಸ್ತು ಕೇವಲ ಕತೆ ಎನಿಸದೆ ನಮ್ಮ ನಿಮ್ಮ ಬದುಕಿನಲ್ಲಿ ನಡೆಯುವ ವಾಸ್ತವತೆಯನ್ನು ಕಣ್ಣ ಮುಂದೆ ದೃಶ್ಯದಂತೆ ತೆರೆದಿಡುತ್ತದೆ..
ಹೆಣ್ಣಿನ ಪರವಾದ ಲೇಖಕರ ನಿಲುವು ಇಲ್ಲಿ ಕಾಣುತ್ತದೆ..
ನಿಜ..ಮಳೆ ತಡವಾಗಿ ಬಿದ್ದರೂ ಅದು ನೈಜ ಮತ್ತು ಪ್ರಾಮಾಣಿಕ.. ಅದು ನೀಡುವ ತಂಪಿಗೆ ಜೀವನೋತ್ಸಾಹ ತುಂಬಿಸೋ ಶಕ್ತಿಗೆ ಸಮವಾದದ್ದು ಬೇರಾವುದೂ ಇಲ್ಲ..!
-ನಂದಾದೀಪ, ಮಂಡ್ಯ