ತಂತು: ಎಸ್.ಎಲ್.ಭೈರಪ್ಪನವರ ಕಾದಂಬರಿಯ ಬಗ್ಗೆ ಒಂದು ಅನಿಸಿಕೆ, ಟಿಪ್ಪಣಿ: ಸಂತೋಷ್ ಕುಮಾರ್ ಎಲ್.ಎಂ.

 

ಬಸವನಪುರ ಎಂಬ ಊರಿನ ಪುರಾತನ ಚನ್ನಕೇಶವ ದೇವಾಲಯದಲ್ಲಿದ್ದ ದೊಡ್ಡ ಸರಸ್ವತಿಯ ವಿಗ್ರಹ ಕಳುವಾಗಿರುತ್ತದೆ. ಗ್ರಾಮದವರು ಇದರ ಬಗ್ಗೆ ಗಮನ ಹರಿಸುವುದಿಲ್ಲ. ಇದೇ ಊರಿನಲ್ಲಿ ಹುಟ್ಟಿ ತನ್ನ ಸ್ವಂತ ಪರಿಶ್ರಮದಿಂದ ದೊಡ್ಡ ಇಂಗ್ಲೀಷ್ ಪತ್ರಿಕೆಯೊಂದರಲ್ಲಿ ಸಂಪಾದಕನಾಗಿರುವ ರವೀಂದ್ರನಿಗೆ ಈ ಸುದ್ದಿ ತಲುಪುತ್ತದೆ. ತನ್ನ ಹುಟ್ಟೂರು ಎಂಬ ಕರುಳಬಳ್ಳಿಯ ಮಮತೆಯಿಂದ ಬೇರಾರನ್ನು ಕಳುಹಿಸಲು ಮನಸ್ಸಾಗದೇ ತಾನೇ ಹುಟ್ಟೂರಿಗೆ ಬರುತ್ತಾನೆ. ಈ ವಿಷಯದ ಮೂಲ ಹುಡುಕುತ್ತಿರುವಾಗಲೇ ತನ್ನ ತಾತ ವೆಂಕಟಸುಬ್ಬಯ್ಯನವರು ಊರಿಗೆ ದಾನವಾಗಿ ಕಟ್ಟಿಸಿಕೊಟ್ಟಿದ್ದ ಆಸ್ಪತ್ರೆಯ ಫಲಕವನ್ನು ಯಾರೋ ತೆಗೆದು ಹಾಕಿಸಿ ಬೇರೊಬ್ಬ ಮಂತ್ರಿಯೊಬ್ಬರ ಸೇವಾರ್ಥ ಎಂಬ ಫಲಕ ಹಾಕಿಸಿರುತ್ತಾರೆ.

ಚಿಕ್ಕವಯಸ್ಸಿನಲ್ಲೇ ತನ್ನ ತಂದೆತಾಯಿಗಳಿಬ್ಬರನ್ನೂ ಕಳೆದುಕೊಂಡ ಅಣ್ಣೇಗೌಡರು ಒಬ್ಬ ಧರ್ಮಾತ್ಮರ ಸಹಾಯದಿಂದಾಗಿ ಕಷ್ಟಪಟ್ಟು ಓದುತ್ತಾರೆ. ಮಹಾತ್ಮ ಗಾಂಧಿಯವರ ಮತ್ತು ಸ್ವಾಮಿ ವಿವೇಕಾನಂದರ ಶೈಕ್ಷಣಿಕ ಸಂಸ್ಥೆಗಳ ಬಗ್ಗೆ ಇರುವ ವಿಚಾರದಿಂದ ಪ್ರಭಾವಿತರಾಗಿ ಸರ್ಕಾರದಿಂದ ಮುಕ್ತವಾಗಿ ನಡೆಸಲ್ಪಡುವ ಒಂದು ಶಾಲೆಯನ್ನು ತೆರೆಯಲು ಅದೇ ಊರಿನ ಸೌದ್ರೇಗೌಡರ ಮನವೊಲಿಸುತ್ತಾರೆ. ಸೌದ್ರೇಗೌಡರು ಉದಾರ ಮನಸ್ಸಿನಿಂದ ತಮ್ಮ ಹಾಲಕೆರೆಯ ಇನ್ನೂರು ಎಕರೆ ಜಮೀನನ್ನು ಅದಕ್ಕಾಗಿ ದಾನವಾಗಿ ನೀಡಿ ಶಾಲೆ ತೆರೆಯಲು ಸಹಾಯ ಮಾಡುತ್ತಾರೆ. ಸುತ್ತಮುತ್ತಲ ಜನಗಳ ದೇಣಿಗೆಯ ಜತೆ ಉಳಿದ ಜಮೀನಿನಲ್ಲಿ ಕಲಿಯುವ ವಿದ್ಯಾರ್ಥಿಗಳಿಂದಲೇ ಸಾಧ್ಯವಾಗುವಂತಹ ಕೃಷಿ ಮಾಡಿಸಿ ಬಂದ ಆದಾಯದಲ್ಲಿ ಶಾಲೆ ನಡೆದಿರುತ್ತದೆ. ಬಡ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ಪಡೆಯದೇ ಉಚಿತ ಶಿಕ್ಷಣವನ್ನು ನೀಡುತ್ತಾ ಗುರುಕುಲ ಮಾದರಿಯಲ್ಲೇ ಎಲ್ಲ ಬಗೆಯ ಶಿಕ್ಷಣವನ್ನು ನೀಡಲಾಗುತ್ತಿರುತ್ತದೆ. ಅಲ್ಲಿಯ ಪಾಠ ಮಾಡುವ ಮೇಷ್ಟ್ರುಗಳೂ ಸಹ ಸಂಬಳ ಪಡೆಯದೇ ಸೇವೆ ಸಲ್ಲಿಸಿರುತ್ತಾರೆ. ಇಂತಹ ಸಂದರ್ಭದಲ್ಲಿ ಇದೀಗ ಪಕ್ಕದೂರಿನಲ್ಲಿ ಸರ್ಕಾರೀ ಉದ್ಯೋಗದಲ್ಲಿರುವ ಸೌದ್ರೇಗೌಡರ ಮೊಮ್ಮಗ ಪರಶುರಾಮೇಗೌಡನಿಗೆ ತನ್ನ ತಾತ ಕೊಟ್ಟ ದಾನದ ಜಮೀನನ್ನು ಮತ್ತೆ ಕಬಳಿಸಿಕೊಳ್ಳುವ ತವಕ. ಅದಕ್ಕೆ ಇಲ್ಲಸಲ್ಲದ ಕುತಂತ್ರ ಹೂಡುತ್ತಾನೆ.

ದಿಲ್ಲಿಯಲ್ಲಿ ಎಂಬಿಎ ಓದು ಮುಗಿಸಿ ಬೆಂಗಳೂರಿನ ಬ್ಯಾಂಕೊಂದರಲ್ಲಿ ಕೈತುಂಬ ಸಂಬಳ ಪಡೆಯುವ ಹೊನ್ನತ್ತಿಯವರಿಗೆ ಸಂಗೀತದಲ್ಲಿ ಏನಾದರೂ ಸಾಧಿಸಬೇಕೆಂಬ ಮಹದಾಶೆ. ಒಂದು ಉದ್ಯೋಗದಲ್ಲಿದ್ದು ಯಾವುದೇ ಕ್ಷೇತ್ರದಲ್ಲಿ ಮಹತ್ಸಾಧನೆ ಮಾಡಬೇಕೆಂದರೆ ಅದು ಅಸಾಧ್ಯ ಎಂದು ತಿಳಿದು ತನ್ನ ಉದ್ಯೋಗಕ್ಕೆ ಗುಡ್ ಬೈ ಹೇಳಿ, ಏಕಾಗ್ರತೆಗೆ ಭಂಗವಾಗದಿರಲೆಂದು ದೂರದ ಹಳ್ಳಿಯೊಂದರ ಬೆಟ್ಟದ ಮೇಲೆ ಎಡೆಬಿಡದೆ ಸಾಧನೆ ಮಾಡುತ್ತಿರುತ್ತಾರೆ.

ಅನೂಪ ಪ್ರಾಮಾಣಿಕ ಸಂಪಾದಕನ ಮಗನಾದರೂ ಬೆಂಗಳೂರಿನ ತನ್ನ ಶಾಲೆಯ ಸಹಪಾಠಿಗಳ ಸಹವಾಸದೋಷದಿಂದಾಗಿ ಶಾಲೆಯಲ್ಲೇ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿರುತ್ತಾನೆ. ಶಾಲೆಯ ಆಡಳಿತ ತಕ್ಕ ಕ್ರಮ ಕೈಗೊಂಡರೂ ಮತ್ತೆ ಗೆಳೆಯರೊಂದಿಗೆ ಸೇರಿ ಬ್ರಿಗೇಡ್ ರೋಡಿನಲ್ಲಿ ಕ್ಯಾಬರೆ ನೋಡುವ ಸಮಯದಲ್ಲಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಇಲ್ಲೇ ಇದ್ದರೆ ಇವ ಖಂಡಿತ ಹಾದಿ ತಪ್ಪುವನೆಂದು ತಿಳಿದ ಅವನ ತಂದೆ ತನ್ನ ಹೆಂಡತಿಯ ವಿರೋಧದ ಮಧ್ಯೆಯೂ ಬೆಂಗಳೂರಿನ ಶಾಲೆಯಿಂದ ಬಿಡಿಸಿ ಹಾಲಕೆರೆಯಲ್ಲಿರುವ ವಿದ್ಯಾಶ್ರಮಕ್ಕೆ ಸೇರಿಸುತ್ತಾನೆ.

ಗಂಡ ಪ್ರಾಮಾಣಿಕತೆಯಿಂದಿರುವವರೆಗೂ ತಾವು ವಿಲಾಸೀ ಜೀವನವನ್ನನುಭವಿಸಲು ಸಾಧ್ಯವಿಲ್ಲವೆಂಬುದನ್ನರಿತ ಕಾಂತಿಯ ನಡವಳಿಕೆಯಿಂದಾಗಿ ಮನೆಯಲ್ಲಿ ಯಾವಾಗಲೂ ಮನಸ್ತಾಪವಿದ್ದೇ ಇರುತ್ತದೆ. ಒಮ್ಮೆ ತಂದೆಯ ಎಪ್ಪತ್ತನೇ ವರ್ಷದ ಕಾರ್ಯಕ್ರಮಕ್ಕೆಂದು ದಿಲ್ಲಿಗೆ ಹೋಗುವ ಕಾಂತಿಗೆ ತನ್ನ ಹಳೆಯ ಗೆಳತಿ ವಿಚ್ಛೇದಿತೆ ಶೀತಲ್'ಳ ಭೇಟಿಯಾಗುತ್ತದೆ. ಆಕೆಯ ಮಾತಿಗೊಪ್ಪಿ ಬೆಂಗಳೂರಿಗೆ ವಾಪಸ್ಸು ಬರದೆ ಅಲ್ಲೇ ಆಕೆಯೊಂದಿಗೆ ಪಾಲುದಾರಿಕೆಯಲ್ಲಿ ಒಂದು ಉದ್ಯಮವನ್ನು ಶುರು ಮಾಡುವ ಆಕೆ ಗಂಡನಿಂದ ಇನ್ನೂ ದೂರವಾಗಿಬಿಡುತ್ತಾಳೆ.

ಉತ್ತರ ಕರ್ನಾಟಕದ ಒಂದಷ್ಟು ನಿರ್ಗತಿಕ ಜನಗಳನ್ನು ತಂದು ಕಲ್ಲುಕ್ವಾರಿಯ ಕೆಲಸದಲ್ಲಿ ಒತ್ತಾಯಪೂರ್ವಕವಾಗಿ ದುಡಿಸಿಕೊಳ್ಳುತ್ತಿರುವವರ ಬಗ್ಗೆ "ದಿ ಟ್ರಿಬ್ಯೂನ್" ಪತ್ರಿಕೆಗೆ ಸುಳಿವು ಸಿಗುತ್ತದೆ. ಗುಟ್ಟಾಗಿ  ಸ್ವಾತಂತ್ರ್ಯವನ್ನು ಕೊಡದೇ ಜೀತ ಮಾಡಿಸಿಕೊಳ್ಳುತ್ತಿರುವ ಈ ವಿಷಯವನ್ನು ಭೇದಿಸುವ ಪಣ ತೊಡುವ ಈ ಪತ್ರಿಕೆಯ ಕೆಲ ಧೈರ್ಯವಂತ ವರದಿಗಾರರು ಸಿನಿಮಾ ಚಿತ್ರಣಕ್ಕೆಂಬಂತೆ ವೇಷ ತೊಟ್ಟು ಆ ಸ್ಥಳಕ್ಕೆ ಹೋದಾಗ ಇದುವರೆಗೆ ತಿಳಿದಿರದಿದ್ದ ರಾಜಕೀಯ ಮುಖಂಡರ ಇನ್ನೊಂದು ವಿಷಯವೂ ಬಹಿರಂಗವಾಗುತ್ತದೆ.

ಈ ಮೇಲೆ ಹೇಳಿದ ಎಲ್ಲ ಭಾಗಗಳ ಕಡೆ ಕಣ್ಣಾಯಿಸಿದಾಗ ಎಲ್ಲವೂ ಸ್ವತಂತ್ರ್ಯವಾಗಿಯೂ, ಜತೆಗೆಒಂದಕ್ಕೊಂದು ಸಂಬಂಧವಿಲ್ಲದಂತೆ ಕಂಡರೂ "ತಂತು" ಕಾದಂಬರಿಯಲ್ಲಿ ಇವೆಲ್ಲಕ್ಕೂ ಒಂದು ಸಂಬಂಧವಿದೆ. ಇವೆಲ್ಲ ಭಾಗಗಳಲ್ಲಿನ ಪಾತ್ರಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಅತ್ಯಂತ ಜಾಗರೂಕತೆಯಿಂದ ಹೆಣೆದಿರುವ ಈ ಕಾದಂಬರಿಯಲ್ಲಿ ಎಲ್ಲೂ ಯಾವುದೇ ಪಾತ್ರಗಳು ಗೊಂದಲಕ್ಕೀಡುಮಾಡುವುದಿಲ್ಲ. 

ಸೌದ್ರೇಗೌಡರ ಮತ್ತು ಪರಶುರಾಮೇಗೌಡರ ಇಬ್ಬರ ವ್ಯಕ್ತಿತ್ವವೂ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ದಾನ ಧರ್ಮಗಳ ಬಗ್ಗೆ ಇರುವ ವಿಭಿನ್ನ ನಿಲುವನ್ನು ತೋರಿಸುತ್ತದೆ. ಯಾವುದೇ ಸ್ವಾರ್ಥವಿಲ್ಲದೇ ಕೇವಲ ಸಮಾಜಮುಖಿಯಾದ ಕಾರ್ಯಗಳನ್ನು ಮಾಡಬೇಕೆಂದರೂ ರಾಜಕೀಯ ಪರಿಸ್ಥಿತಿ ಹೇಗೆ ಅಂಥ ಪ್ರಯತ್ನಗಳಿಗೆ ಕೊಡಲಿ ಹಾಕುತ್ತದೆ ಎಂಬುದನ್ನು ಅಣ್ಣೇಗೌಡರ ಪಾತ್ರದ ಮೂಲಕ ವಿವರಿಸಲಾಗಿದೆ. 

ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ಭಾರತೀಯರ ಕೌಟುಂಬಿಕ ಜೀವನದಲ್ಲಿ ಹೇಗೆ ಕೆಡುಕನ್ನುಂಟು ಮಾಡಬಲ್ಲುದು ಎಂಬುದನ್ನು ಕಾಂತಿ,ಶೀತಲ್ ಮತ್ತು ಅನೂಪನ ಜೀವನದಲ್ಲಾದ ಬದಲಾವಣೆಗಳೊಂದಿಗೆ ರವೀಂದ್ರನ ಪಾತ್ರ ಯಾವುದೇ ತಪ್ಪು ಮಾಡದಿದ್ದರೂ ಎಲ್ಲ ಕಡೆ ಅನುಭವಿಸುವ ಸಂಕಟ ಓದುಗನನ್ನು ಚಿಂತನೆಗೆ ಹಚ್ಚುತ್ತವೆ. ಅನೂಪನ ವಿದ್ಯಾರ್ಥಿ ಜೀವನದಲ್ಲಿ ಒಟ್ಟು ನಾಲ್ಕು ಶಾಲೆ/ಕಾಲೇಜುಗಳನ್ನು ಬದಲಾಯಿಸುತ್ತಾನೆ. ಅಲ್ಲಿ ಓದುವಾಗಿನ ಆತನ ಅಲೋಚನೆಗಳ ಮೂಲಕ ಶಾಲೆಗಳ ವಾತಾವರಣ ಮನುಷ್ಯನ  ಜೀವನದಲ್ಲಿ ಹೇಗೆ ಪ್ರಭಾವ ಬೀರಬಲ್ಲವು ಅಂತ ತಿಳಿದುಕೊಳ್ಳಬಹುದು. ಅಣ್ಣೇಗೌಡರ ವಿದ್ಯಾಶ್ರಮದ ಬಗ್ಗೆ ಹೇಳುವಾಗಲಂತೂ ಇಂತಹ ಶಾಲೆಗಳು ನಮ್ಮಲ್ಲೂ ಇರಬಾರದೇ ಅಂತ ಒಮ್ಮೆಯಾದರೂ ಅನ್ನಿಸದೇ ಇರಲಾರದು.

ಅನೂಪ ವಿದ್ಯಾಭ್ಯಾಸಕ್ಕೆಂದು ಅಮೇರಿಕಾಗೆ ಹೋಗುವುದು, ಹಾಗೆಯೇ ಸಂಪಾದನೆ ಮಾಡಬೇಕೆಂದು ಅಲ್ಲೇ ನೆಲೆಸುವುದು. ತಾಯಿ ಸತ್ತಾಗಲೂ ಆತ ಅಂತ್ಯಸಂಸ್ಕಾರಕ್ಕೆ ಬರದೇ ಹೋಗುವುದು. ವ್ಯವಹಾರದಲ್ಲಿ ತಾನೂ ಗಂಡಿನಂತೆಯೇ ಯಶಸ್ವಿಯಾಗಿ ಆರ್ಥಿಕವಾಗಿ ಸಬಲಳಾಗುವ ಕನಸು ಹೊತ್ತ ಕಾಂತಿ ಕಡೆಗೆ ಗಂಡನಿಂದಲೇ ದೂರವಾಗುವುದು ಇವೆಲ್ಲ ಅಂಶಗಳು ಹಣದ ಆಸೆಗಾಗಿ ನಮ್ಮ ಸಂಬಂಧಗಳನ್ನು ಬಲಿ ಕೊಡುವ ಅನೇಕ ಕುಟುಂಬಗಳ ಈಗಿನ ವಾಸ್ತವದ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

ಸಾಯುವ ಮುನ್ನ ಧ್ಯಾನಶಾಲೆಗೆ ತನ್ನೆಲ್ಲ ಸಂಪತ್ತನ್ನು ದಾನಮಾಡುವುದು ಕಾಂತಿಯ ಬಯಕೆಯಾಗಿರುತ್ತದೆ. ಅದಕ್ಕಾಗಿಯೇ ವಕೀಲರನ್ನೂ ಕರೆಸಿ ಮಾತನಾಡಿರುತ್ತಾಳೆ. ಆಕೆ ಸತ್ತ ಅದೆಷ್ಟೋ ದಿನಗಳ ನಂತರ ಅಮೇರಿಕಾದಿಂದ ಬರುವ ಆಕೆಯ ಮಗ ವಕೀಲರೊಂದಿಗೆ ಮಾತನಾಡಿದ ಮೇಲೆ ತನ್ನ ತಾಯಿ ಯಾವುದೇ ಆಸ್ತಿಯನ್ನು ಧ್ಯಾನಶಾಲೆಗೆ ಬರೆದಿಲ್ಲ. ಎಲ್ಲವನ್ನೂ ನನ್ನ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು ಹೇಳುವ ವಿಚಾರವು ಓದುಗನಿಗೆ ಶಾಕ್ ಕೊಡುತ್ತದೆ. ಆದರೆ ಅಲ್ಲೂ ಕೂಡ ಮಗನೇ ಏನೋ ಮೋಸ ಮಾಡಿ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡನೇ ಎಂಬ ದ್ವಂದ್ವ ಓದುಗನ ಮನಸ್ಸಿನಲ್ಲಿ ಅಚ್ಚೊತ್ತಿ ಕಾಡತೊಡಗುತ್ತದೆ. ಅಣ್ಣೇಗೌಡರ ದಾನ ಮಾಡಿದ ಆಸ್ತಿಯನ್ನು ಅವರ ಮೊಮ್ಮಗನೇ ಮತ್ತೆ ಕಸಿದುಕೊಳ್ಳಲು ಮಾಡುವ ಪ್ರಯತ್ನದೊಂದಿಗೆ ಈ ವಿಷಯವನ್ನೂ ಸಮೀಕರಿಸಿಕೊಳ್ಳಬಹುದು.

ಸಂಗೀತಕ್ಕೆಂದು ತನ್ನ ಸರ್ವಸ್ವವನ್ನು ಪಣಕ್ಕಿಡುವ ಹೊನ್ನತ್ತಿ ಎಲ್ಲ ರಾಜಕೀಯ ಪರಿಸ್ಥಿತಿಗೆ ತುತ್ತಾಗಿ ಹಾಲಕೆರೆಯಿಂದ ಬೆಂಗಳೂರಿಗೆ, ನಂತರ ದಿಲ್ಲಿಗೆ, ಮುಂಬಯಿಗೆ,ಕಾಶಿಗೆ ಹೀಗೆ ಎಲ್ಲ ಕಡೆಯೂ ಸುತ್ತುತ್ತಾ ಕಡೆಗೆ  ಅನೈತಿಕ ಸಂಬಂಧವೊಂದರ ಗೊಂಬೆಯಾಗಿ ಹೋಗುವುದು ಮರುಕ ಹುಟ್ಟಿಸುತ್ತದೆ. ತನಗಿಷ್ಟವಿಲ್ಲದಿದ್ದರೂ ತಾನಿಲ್ಲದೇ ಅದು ನಡೆಯಲಿಲ್ಲ ಎಂಬ ಆತ್ಮವಿಮರ್ಶೆಯನ್ನು ಮಾಡಿಕೊಂಡು ಪಶ್ಚಾತ್ತಾಪಕ್ಕೆ ತನ್ನ ಮಹಾತ್ವಾಕಾಂಕ್ಷೆಯನ್ನೇ ಕೈಬಿಡುವ ಸಂದರ್ಭವಂತೂ ನಮ್ಮನ್ನು ಆಲೋಚನೆಗೆ ದೂಡುತ್ತದೆ. ಕಥೆಯನ್ನು ಹೇಳುವಾಗಲೇ ಪಾತ್ರಗಳ ಆಲೋಚನಾ ಕ್ರಮವನ್ನು ಸಮರ್ಥವಾಗಿ ಹೇಳುವುದು ಭೈರಪ್ಪನವರ ವಿಶೇಷತೆಗಳಲ್ಲೊಂದು. ಹೊನ್ನತ್ತಿಯ ಪಯಣವನ್ನು ಹೇಳುವಾಗ ದೇಶದ ಸಾಂಸ್ಕೃತಿಕ ರಂಗದಲ್ಲೂ ನಡೆಯುವ ರಾಜಕೀಯವನ್ನು ಹೇಳುತ್ತಾರೆ.

ಇಡೀ ಕಾದಂಬರಿಯಲ್ಲಿ ತೆರೆಮರೆಯ ಸೂತ್ರಧಾರಿಯಂತೆ ರಾಜಕೀಯ ಎದ್ದು ಕಾಣುತ್ತದೆ. ಪ್ರತೀ ಪಾತ್ರದ ಏಳುಬೀಳುಗಳಲ್ಲಿ ರಾಜಕೀಯವು ಗಹಗಹಿಸಿ ನಗುತ್ತಿರುತ್ತದೆ. ತಾವೇ ಗದ್ದುಗೆಯಲ್ಲಿರಬೇಕೆಂಬ ಉತ್ಕಟ ವಾಂಛೆ, ತಮ್ಮ ಕೆಟ್ಟ ಕೆಲಸಗಳು ಎಲ್ಲೂ ಹೊರಬರದಂತೆ ಮಾಡುವ ಹುನ್ನಾರಗಳು, ಅದನ್ನು ವಿರೋಧಿಸಿದವರಿಗೆ ತಮ್ಮ ಕುಟುಂಬದೊಳಗೇ ಉಂಟಾಗುವ ಆಘಾತಗಳು, ತಮ್ಮ ಏಜೆಂಟರಂತೆ ವರ್ತಿಸಬೇಕೆಂದು ಮಾಧ್ಯಮಗಳನ್ನು ತಮ್ಮ ಮುಷ್ಠಿಯಲ್ಲಿ ಬಂಧಿಸಲು ಹರಸಾಹಸಪಡುವ ಸರಕಾರಗಳ ನಡೆಗಳು, ಇವೆಲ್ಲ ಸೇರಿದಂತೆ ತಮ್ಮ ತಮ್ಮ ಮಕ್ಕಳೇ ಮುಂದಿನ ರಾಜಕೀಯ ನಾಯಕರುಗಳಾಗಬೇಕೆಂಬ ದುರ್ಬುದ್ಧಿ ಹೊಂದಿರುವ ರಾಜಕಾರಣಿಗಳ ಮನಸ್ಸನ್ನು ಚಿತ್ರಿಸುತ್ತಾ ಕಡೆಗೆ ಪ್ರಧಾನಿಯು ತನ್ನ ಎದುರು ನಿಂತವರನ್ನು ಹತ್ತಿಕ್ಕಲು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಪ್ರಜಾಪ್ರಭುತ್ವಕ್ಕೆ ಧಕ್ಕೆಯನ್ನುಂಟುಮಾಡಬಲ್ಲ ಮೋಸದ ತುರ್ತು ಪರಿಸ್ಥಿತಿಯನ್ನು ಘೋಷಿಸಿ ತಮ್ಮ ವಿರುದ್ಧದ ನಾಯಕರುಗಳನ್ನು, ಪತ್ರಿಕೆಯವರನ್ನು, ಸಮಾಜಸೇವಕರನ್ನು ಜೈಲಿಗೆ ನೂಕುವುದರೊಂದಿಗೆ ಕಾದಂಬರಿ ಅಂತ್ಯವಾಗುತ್ತದೆ.

ಭೈರಪ್ಪನವರೇ ಹೇಳುವಂತೆ ಸ್ವಾತಂತ್ರ್ಯಾನಂತರದ ನಮ್ಮ ಜೀವನವನ್ನು ಕುರಿತು ಒಂದು ಕೃತಿಯನ್ನು ಬರೆಯುವ ಒತ್ತಡ ಬಹಳ ದಿನಗಳಿಂದ ಅವರಿಗೆ ಇತ್ತಂತೆ. ಭಾರತದಂತಹ ವಿಶಾಲ ರಾಷ್ಟ್ರದ ಸಂಕೀರ್ಣ ಜೀವನವನ್ನು ಒಂದು ಕಾದಂಬರಿಯ ಸ್ವರೂಪಕ್ಕೆ ತರುವ ದಾರಿ ತಿಳಿಯದೆ ಮೂಕನಾಗಿ ಬಹಳ ವರ್ಷ ಸುಮ್ಮನಿದ್ದರಂತೆ. ನಂತರ ಈ ಕೃತಿಯನ್ನು ರಚಿಸಿದ್ದು 1988ರಿಂದ 1989 ರ ಮಧ್ಯದಲ್ಲಿ.

ಬರೋಬ್ಬರಿ 888 ಪುಟಗಳ ಈ ಕಾದಂಬರಿಯನ್ನು ಓದುವಾಗ ಒಂದಷ್ಟು ಪುಟಗಳನ್ನು ಕಡಿಮೆಯಾಗಿಸಬಹುದಿತ್ತೇನೋ ಅನ್ನಿಸಿದರೂ ಆಯ್ದುಕೊಂಡಿರುವ ವಿಷಯ ಮತ್ತು ಅದರ ಸಂಕೀರ್ಣತೆಯನ್ನು ಗಮನಿಸಿದರೆ ಹೆಚ್ಚೇನೂ ಅನ್ನಿಸುವುದಿಲ್ಲ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
9 years ago

ಚೆನ್ನಾಗಿದೆ ಸಂತೋಷ್……

vidyashankar
vidyashankar
9 years ago

do you think this novel is still relevent for us? I would be more interested in your experience in the reading process than…

2
0
Would love your thoughts, please comment.x
()
x