ಸುಟ್ಟ ಊರ ಹೊರಗಿನ ಹನುಮಪ್ಪನ ಹಿಂದೆ ಬಿದ್ದು: ಅಮರ್ ದೀಪ್ ಪಿ.ಎಸ್.

ರಾತ್ರಿ ಸುಮಾರು ಒಂಭತ್ತು ಮುಕ್ಕಾಲರ ಸಮಯಕ್ಕೆ ವೇದಿಕೆಯಲ್ಲಿ ಕಲಾವಿದರೆಲ್ಲರಿಗೂ ಸನ್ಮಾನ ಮಾಡಿದರು.   ಆ ಐದು ದಿನದ ನಾಟಕೋತ್ಸವದ  ಕೊನೆಯ ದಿನವಾದ ಅಂದು ಆ ಕಾರ್ಯಕ್ರಮದ ರುವಾರಿಗಳಿಗೆ ಅಭಿನಂದಿಸಲಾಯಿತು.  ಮುಕ್ತಾಯಕ್ಕೂ ಮುನ್ನ ಆ ನಾಟಕದ ಕತೃವನ್ನು ಸನ್ಮಾನಿಸಲಾಗಿತ್ತು.   ಅಂತಿಮವಾಗಿ ಆಯೋಜಕರು ಆ ನಾಟಕದ ರಚನೆ ಮಾಡಿದ ಲೇಖಕನಿಗೆ ಮೈಕನ್ನು ಹಸ್ತಾಂತರಿಸಿದರು.   ಲೇಖಕ ಮೂಲತ: ತಾನು ಬರೆದ ಸಣ್ಣ ಕತೆಯೊಂದನ್ನು ಆಧರಿಸಿ ಅದೇ ಕತೆಗೆ ನಾಟಕದ ರೂಪಕ ಲೇಪಿಸಿ ರಚಿಸಿದ ನಾಟಕದ ಅಂದಿನ ಪ್ರದರ್ಶನದ ನಂತರ ಲೇಖಕನಿಗೆ ಒಂದೆರಡು ಮಾತುಗಳನ್ನಾಡಲು ವೇದಿಕೆಯಲ್ಲಿ ಆಹ್ವಾನಿಸಲಾಗಿತ್ತು.   ಲೇಖಕ, “ಈ ನಾಟಕದ ರಚನೆ ಮತ್ತು ಉದ್ದೇಶ ಯಾವುದೇ ಧಾರ್ಮಿಕ ಭಾವನೆಗಳ ಭಂಗ ತರುವುದಲ್ಲ, ಬದಲಾಗಿ ಸುಮಾರು ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ಎರಡು ಊರುಗಳ ಜನತೆ ನಡುವೆ ನಡೆದ ನೈಜ ಘಟನೆ ಆಧರಿಸಿದ ನಾಟಕ ಇದಾಗಿದೆ” ಎಂದು ಹೇಳಿ ಮಾತು ಮುಗಿಸುತ್ತಿದ್ದಂತೆಯೇ ಕೆಳಗಿನಿಂದ ಪ್ರೇಕ್ಷಕರ ಗುಂಪಿನಲ್ಲಿ ನಿವೃತ್ತರಾದ ಇಬ್ಬರು ಹಿರಿಯರು ಲೇಖಕನನ್ನು ವೇದಿಕೆಯಿಂದ ಕೆಳಗಿಳಿಸಿ “ಈ ನಾಟಕದಿಂದ ನೀವು ಸಮಾಜಕ್ಕೆ ಏನ್ ಮೆಸೇಜ್ ಕೊಡ್ತೀರಿ?,  ನೀವು ಹಿಂದೂ ಧರ್ಮದ  ದೇವರಿಗೆ ಅವಮಾನ  ಮಾಡ್ತಿದೀರಿ” ಅಂತೆಲ್ಲಾ ತಮ್ಮ ಅಸಹನೆಯನ್ನು ವ್ಯಕ್ತಪಡಿಸಲು ಶುರು ಮಾಡಿದರು. ಅಲ್ಲಿ ಸೇರಿದ ಪ್ರೇಕ್ಷಕರು, ಆಯೋಜಕರು ಸೇರಿ ಪ್ರಶ್ನೆ ಮಾಡಿದವರಿಗೆ ಸಾಧ್ಯಂತವಾಗಿ ನಾಟಕದ ಆಶಯವನ್ನು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು.  ಆದರೆ, ಮೂಲತ: ಪ್ರಶ್ನೆ ಮಾಡಿದ ವ್ಯಕ್ತಿ ನಾಟಕದ  ಬಿತ್ತರವನ್ನೇ ತಕರಾರು ಮಾಡುವ ಹುಕಿಯಲ್ಲಿದ್ದರು. ಕೆಲ ಹೊತ್ತು ಈ ಚರ್ಚಾರೋಪ ನಡೆದೇ ಇತ್ತು.  “ಅವರಾದರೂ ತಾವು ನಂಬಿದ ದೈವಕ್ಕೆ, ಸಂಪ್ರದಾಯಗಳಿಗೆ, ನೈತಿಕತೆಗೆ ಎಷ್ಟರಮಟ್ಟಿಗೆ ನಿಷ್ಠರಾಗಿದ್ದಾರೆ? ಮತ್ತು ಅದನ್ನು ಅವರ ಕುಟುಂಬದ ಅವಲಂಭಿತರಲ್ಲೇ ಅದನ್ನು ಪಾಲನೆ ಮಾಡುವಲ್ಲಿ ಎಷ್ಟು ಕಟಿಬದ್ಧರಾಗಿದ್ದಾರೆ? ಎಂಬ ಮರುಪ್ರಶ್ನೆಗೆ ಆ ವ್ಯಕ್ತಿಯು ಉತ್ತರಿಸುವ, ಸಮರ್ಥಿಸಿಕೊಳ್ಳಲು ತನಗಿರುವ ಸಾಧ್ಯತೆಗಳ ಬಗ್ಗೆ ಆತ್ಮಾವಾಲೋಕನ ಮಾಡಿಕೊಳ್ಳಲಿ” ಎಂಬುದು ಅಲ್ಲಿದ್ದವರ ಆಗ್ರಹವಾಗಿತ್ತು. ನಿಜ, ಯಾವುದೇ ಸಾರ್ವಜನಿಕ ಬಿತ್ತರಗಳು, ಪ್ರದರ್ಶನಗಳು, ನಾಟಕಗಳು,ಲೇಖನ, ಬರಹ, ಕಥೆ, ಕಾದಂಬರಿ ವಿಮರ್ಶೆಗೆ, ಚರ್ಚೆಗೆ ಒಳಗಾಗಬೇಕೆಂಬುದು ಒಳ್ಳೆಯ ಆಶಯ.   ಆದರೆ, ಒಟ್ಟಾರೆ ಸಾರಂಶವನ್ನೇ ಗ್ರಹಿಸದೇ ವಾದಿಸುವವರು ಮಂಚೂಣಿಗೆ ಬಂದರೆ ಅವರ ತಕರಾರು ಮತ್ತು ವಾದ ಎರಡೂ ಅಪಹಾಸ್ಯಕ್ಕೆ ಈಡಾಗುವ ಸಂಭವವೇ ಹೆಚ್ಚಿರುತ್ತದೆ.  

ಅಷ್ಟಕ್ಕೂ ನಾನು ಹೇಳುತ್ತಿರುವುದು, ನನ್ನ ಇತ್ತೀಚಿನ ಸ್ನೇಹಿತರಾದ ಹನುಮಂತ ಹಾಲಗೇರಿ ಇವರು ತಮ್ಮ “ಊರು ಸುಟ್ರೂ ಹನುಮಪ್ಪ ಹೊರಗ”  ಸಣ್ಣ ಕತೆಗೆ ನಾಟಕ ರೂಪ ಕೊಟ್ಟು ರಚಿಸಿದ್ದರು.  ಆ ನಾಟಕವನ್ನು ಚಿತ್ರದುರ್ಗದ ಜಮುರಾ ಸಂಚಾರಿ ತಂಡದವರು ಮಹದೇವ್ ಹಡಪದ ಅವರ ನಿರ್ದೇಶನದಲ್ಲಿ ನಿನ್ನೆ ಮುಂಡರಗಿಯಲ್ಲಿ ಬಸವಾ ಸೇವಾ ಸಮಿತಿಯವರು ಪ್ರತಿ ವರ್ಷದಂತೆ ನಡೆಸುವ ನಾಟಕೋತ್ಸವದ ಕೊನೆಯ ದಿನ ಪ್ರದರ್ಶನ ನೀಡಿದರು.  ನಾನು ಮೂಲ ಸಣ್ಣ ಕತೆಯನ್ನು ಓದಿದ್ದರಿಂದ ಕತೆಯ ತಿರುಳು ಗೊತ್ತಿತ್ತು.  ಆದರೆ, ಅದನ್ನು ರಂಗಕ್ಕೆ ಅಳವಡಿಸಿ ನೀಡುವ ಪ್ರದರ್ಶನ ನೋಡಲು ನನಗೆ ಕಾತರ ಇದ್ದುದರಿಂದಲೇ ನಾಟಕ ನೋಡಲು ಹೋಗಿದ್ದೆ.  ನಾಟಕ ಮುಗಿದ ನಂತರದ್ದೇ ನಡೆದ  ಈ ಪ್ರಸಂಗ.

ಕತೆಯಲ್ಲಿ ವಜ್ರಗಟ್ಟಿ ಮತ್ತು ಧರೆಗಟ್ಟಿ ಎರಡೂರಿನ ನಡುವೆ ಇದ್ದ ಒಬ್ಬೇ ಒಬ್ಬ ಹನುಮಪ್ಪ ದೇವರ ಮೂರ್ತಿಯನ್ನು ಪೂಜಾರಿ ಸಹೋದರರಿಬ್ಬರಲ್ಲಿ ಒಬ್ಬನ ಹೆಂಡತಿ ಗುಡಿಗೆ ನೀಡುವ ಕಾಣಿಕೆ, ದೇಣಿಗೆ, ದಕ್ಷಿಣೆ, ಆದಾಯದ ಆಸೆಗಾಗಿ ಗಂಡನಿಗೆ ಹನುಮಪ್ಪ ಕನಸಿನಲ್ಲಿ ಬಂದು ಧರೆಗಟ್ಟಿಯಲ್ಲಿ ತನ್ನನ್ನು ಪ್ರತಿಷ್ಠಾಪಿಸುವಂತೆ ಆಜ್ಞಾಪಿಸಿರುವನೆಂದು ಸುಳ್ಳು ಹೇಳುವ ಮೂಲಕ ಆರಂಭವಾಗುವ ನಾಟಕದಲ್ಲಿ ವಜ್ರಗಟ್ಟಿಯಿಂದ ರಾತ್ರೋ ರಾತ್ರಿ ಹನುಮಪ್ಪನ ಮೂರ್ತಿಯನ್ನು ಧರೇಗಟ್ಟಿಯ ಯುವಕ ಸಂಘದ ಮುಖಂಡ ಹನುಮೇಶ ಮತ್ತು ಸಂಗಡಿಗರು ಕದ್ದ್ಯೋಯುವುದರೊಂದಿಗೆ ಕಿಚ್ಚು ಹಬ್ಬುತ್ತದೆ.  ಎರಡೂರಿನ ಮುಖಂಡರು, ಎಮ್ಮೆಲ್ಲೆ, ಪೋಲೀಸು, ಕೋರ್ಟಿನವರೆಗೂ ಸಾಗುವ ಹನುಮಪ್ಪನ ಕತೆಯಲ್ಲಿ  ವಜ್ರಗಟ್ಟಿಯ ಪಡದಜ್ಜಯ್ಯ, ಊರ ಜನರು, ಧರೆಗಟ್ಟಿಯ ಬಸಯ್ಯ,  ಪೂಜಾರಪ್ಪ, ಆತನ ಹೆಂಡತಿ ರಿಂದಮ್ಮ, ಯುವಕ ಸಂಘದ ಹನುಮೇಶ, ಆತನ ಗೆಳೆಯರು ಪೋಲಿಸ್ ಸ್ಟೇಷನ್ ಮಟ್ಟಿಲೇರುತ್ತಾರೆ. ಹನುಮಪ್ಪ ದೇವರನ್ನು ಪೋಲಿಸರು ಅರೆಸ್ಟ್ ಮಾಡಿ, ನಂತರ ವಜ್ರಗಟ್ಟಿ ಮತ್ತು ಧರೆಗಟ್ಟಿ ಜನರ ಜಿದ್ದಿನ ಕಾರಣವಾಗಿ ಕೋರ್ಟಿನ ಸುಪರ್ದಿಗೆ ಒಪ್ಪಿಸಲಾಗುತ್ತೆ.  ತಮ್ಮ ತಮ್ಮ ಊರುಗಳಲ್ಲೇ ಹನುಮಪ್ಪ ದೇವರನ್ನು ಪ್ರತಿಷ್ಠಾಪಿಸುವ ಪ್ರತಿಷ್ಠೆಗೆ, ಜಿದ್ದಿಗೆ ಬಿದ್ದು ತಮ್ಮ ದುಡಿಮೆ, ಆಸ್ತಿಯ ಹಣ ಕಳೆದುಕೊಂಡು ಕಡೆಗೆ ಸಾಲವನ್ನೂ ಮಾಡಿ ಕೋರ್ಟಿಗೆ ಅಲೆದಾಡಿ ವಕೀಲರಿಗೆ ದುಡಿಮೆ ಮಾಡಿ ರೋಸಿ, ವರ್ಷಗಳ ನಂತರ ಕೊನೆಗೊಂದು ದಿನ ಕೋರ್ಟಿನಿಂದ “ವಜ್ರಗಟ್ಟಿಯಿಂದ ಹನುಮಪ್ಪ ದೇವರ ಮೂರ್ತಿಯನ್ನು ಧರೆಗಟ್ಟಿ ಜನರು ಕದ್ದ್ಯೋದಿದ್ದು ತಪ್ಪೆಂದು ಪುನ: ವಜ್ರಗಟ್ಟಿ ಗ್ರಾಮದಲ್ಲೇ ಹನುಮಪ್ಪ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ  ಆದೇಶಿಸಿದ ನಂತರ ಪೋಲಿಸರು ಹನುಮಪ್ಪನ ಮೂರ್ತಿಯನ್ನು  ವಜ್ರಗಟ್ಟಿ ಗ್ರಾಮಕ್ಕೆ ತರುವ ಹೊತ್ತಿಗೆ ಊರ ಜನರು ದುಡಿಮೆಗಿಲ್ಲದೇ ಸಾಲಸೋಲದ ಬದುಕನ್ನು ನೀಗಿಸಲು ಗುಳೇ ಹೋಗುವ ಅನಿವಾರ್ಯತೆಯಲ್ಲಿ ಹನುಮಪ್ಪ ದೇವರ ಮೂರ್ತಿ ಪ್ರತಿಷ್ಠಾಪನೆ ಸಹವಾಸವೇ ಬೇಡವೆನ್ನುತ್ತಾರೆ.  ಧರೇಗಟ್ಟಿ ಗ್ರಾಮಕ್ಕೆ ಪೋಲೀಸರು ಹನುಮಪ್ಪನನ್ನು ತಂದರೆ ಅಲ್ಲೂ ಅದೇ ಹಣೇ ಬರಹ. ಅತ್ತ ವಜ್ರಗಟ್ಟಿಯಲ್ಲೂ ನೆಲೆ ಕಾಣದೇ ಇತ್ತ ಧರೇಗಟ್ಟಿಯ ಜನರು ತಿರುಗಿ ನೋಡದೇ ಹನುಮಪ್ಪ ಎರಡೂ ಊರಿನ ನಡುವೆ ಏಕಾಂಗಿಯಾಗಿ ನಿಲ್ಲುವುದೇ ನಾಟಕದ ತಿರುಳು.  ನಾಟಕಕಾರ ರಚಿಸಿರುವ ಈ ನಾಟಕದ ವಿಷಯ ಒಂದು ಕಾಲದಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಎರಡು ಗ್ರಾಮಗಳ ನಡುವೆ ನಡೆದ ನೈಜ ಘಟನೆಯನ್ನು ಆಧರಿಸಿ ರಚಿಸಿದ್ದರೂ ಅದಕ್ಕೆ ಹಾಸ್ಯವನ್ನು ಲೇಪಿಸಿದ್ದಾರೆ.  ಜೊತೆಗೆ ಮನುಷ್ಯರ ನಡುವೆ ನಡೆವ ಸಹಜ ಅಸೂಯೆ, ಈರ್ಷೆ, ಮತ್ತು ಸ್ವಾರ್ಥ ಸಾಧನೆಗೆ ಅಮಾಯಕ ಜನರನ್ನು, ತಟಸ್ಥನಾಗಿ ಎಲ್ಲೋ ಒಂದು ಕಡೆ ದೇಗುಲದಲ್ಲಿ ಕುಳಿತ ದೇವರನ್ನೂ ಎಳೆದು ಬೀದಿಗೆ ತಂದು ನಿಲ್ಲಿಸುವ ಸಾಕಷ್ಟು ಗುಣಗಳನ್ನು ವಿಡಂಬನಾತ್ಮಕವಾಗಿಯೇ ರಚಿಸಿದ್ದಾರೆ, ಮತ್ತು ಪರಿಣಾಮಗಳ ಚಿತ್ರಣವನ್ನೂ ಸಹ. ಅದೂ ಪಕ್ಕಾ ಉತ್ತರ ಕರ್ನಾಟಕದ ಜವಾರಿ ಭಾಷೆಯ ಸಂಭಾಷಣೆಯಲ್ಲಿ.   ನಾಟಕದಲ್ಲಿ ಕುಣಿಯುತ್ತಾ ಹನುಮಪ್ಪನನ್ನು ತೆಗಳಿ ತನಗೆ ತಿಳಿದಂತೆ ಒದರಿ ಗೌಡರಿಂದ ಹಿಡಿದು ಊರ ಜನರವರೆಗೆ ಬೈಸಿಕೊಂಡೇ ಹಲ್ಲುಕಿರಿಯುವ ಹುಚ್ಚ ಮಲ್ಲನ ಪಾತ್ರ, ಎದುರಾಗುವ ಸಂಗತಿಗಳನ್ನು ಮುಂಚೆಯೇ ಒಗಟಾಗಿ ಒದರುತ್ತಾನಾದರೂ ಅವನಲ್ಲಿ ಒಬ್ಬ ಬುದ್ಧಿವಾದ ಹೇಳುವವ ಕಂಡರೆ ಅತಿಶಯೋಕ್ತಿಯೇನಲ್ಲ.

ಇಲ್ಲಿ ಮತ್ತೊಂದು ಅಂಶವನ್ನು ಹೇಳಬೇಕೆಂದರೆ, ನಾಟಕದ ಓಟ ಸರಾಗವಿದೆ. ರಂಗಕರ್ಮಿಗಳ ಅಭಿನಯ, ಸನ್ನಿವೇಶಕ್ಕೆ ಅವಶ್ಯವಿರುವ ಸಲಕರಣೆಗಳು ತೀರ ಸರಳ ರೀತಿಯಲ್ಲಿ ಬಳಸಿಕೊಂಡಿದ್ದು, ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯೂ ಚೆನ್ನಾಗಿ ಮೂಡಿ ಬಂದಿದೆ.  ಮುಂಡರಗಿಯಂಥ ತಾಲೂಕು ಕೇಂದ್ರದಲ್ಲಿ ಈ ನಾಟಕವನ್ನು ನೋಡಲು ಬಯಲ ಚಳಿಯಲ್ಲಿ ಸುಮಾರು ಎರಡು ಸಾವಿರದಷ್ಟು ಜನ ಪ್ರೇಕ್ಷಕರು ಕುಟುಂಬ ಸಮೇತ ಆಗಮಿಸಿದ್ದು, ಹೆಚ್ಚಿನ ಖುಷಿ. ನಾಟಕದ ಒಂದೆರಡು ಸನ್ನಿವೇಶಗಳಲ್ಲಿ ಎರಡರ್ಥಕ್ಕೆ ಈಡಾಗುವಂಥ ಸಂಭಾಷಣೆಗಳನ್ನು ಕಡಿತಗೊಳಿಸಿದರೆ ಮತ್ತು ವಾಗ್ವಾದಕ್ಕೆ ಎಡೆಯಾಗುವಂಥ ಒಂದರೆಡು ಸಾಲುಗಳನ್ನು ಕಡಿತಗೊಳಿಸಿದಲ್ಲಿ ನಾಟಕದ ಪ್ರದರ್ಶನ ಮತ್ತು ರಂಗಕರ್ಮಿಗಳ ಶ್ರಮ ನಿಜಕ್ಕೂ ಶ್ಲಾಘನೀಯ.  ನಾಟಕದ ಮುಕ್ತಾಯದ ನಂತರ ಪಾತ್ರಧಾರಿಗಳನ್ನು ಪ್ರೇಕ್ಷಕರಿಗೆ ಪರಿಚಯಿಸುತ್ತಾರೆ.  ಅಷ್ಟಾದರೂ ಅವರ ಹೆಸರು ನೆನಪಿರದೇ, ಪೂಜಾರಪ್ಪ, ರಿಂದಮ್ಮ, ಪಡದಜ್ಜಯ್ಯ, ಬಸಯ್ಯ, ಹುಚ್ಚು ಮಲ್ಲ, ಪಿ.ಸಿ.124, ಪಿ.ಎಸ್. ಐ ಸಾಹೇಬ, ಎಮ್ಮೆಲ್ಲೆ, ಪಾತ್ರಗಳ ಹೆಸರು ಕಣ್ಣ ಮುಂದೆ ಬಂದರೆ ಅದು ಅವರ ಶ್ರಮದ ಸಾರ್ಥಕತೆ. ಇಲ್ಲಿ ನನಗೆ ಕಂಡಿದ್ದೂ ಅದೇ.

ನಾಟಕ ರಚಿಸಿದವರಾಗಲೀ ನಿರ್ದೇಶನ ಮಾಡಿದವರಾಗಲೀ ನಾಟಕ ಪ್ರದರ್ಶನ ವೇಳೆಯಲ್ಲಿ ಇದ್ದರೂ ಇರದಿದ್ದರೂ ಒಮ್ಮೊಮ್ಮೆ ಪ್ರೇಕ್ಷಕರಿಂದ ಇರುಸುಮುರುಸುಂಟಾಗುವ ಸಂಧರ್ಭದಲ್ಲಿ ತಕ್ಷಣಕ್ಕೆ ಸಿಗುವುದು ಆಯೋಜಕರು ಮತ್ತು ಕಲಾವಿದರು.  ಆಕ್ಷೇಪಣೆ ಅಥವಾ ವಿರೋಧಗಳನ್ನು ಅನಿರೀಕ್ಷಿತವಾಗಿ ಈ ನಾಟಕ ಪ್ರದರ್ಶನದಂದು ಎದುರಾದಂತೆ ಪ್ರಸಂಗಗಳನ್ನು ಎದುರಿಸಲು ಸಿದ್ಧರಿರಬೇಕು.

ನಮ್ಮ ಜನ ಆಕ್ಷೇಪಿತ ಸನ್ನಿವೇಶಗಳು, ಸಂಧರ್ಭಗಳಿದ್ದರೂ ಸಿನಿಮಾಗಳನ್ನು ಪರದೆ ಮೇಲೆ ನೋಡಿ ಎದ್ದು ಬರುತ್ತಾರೆ.  ದಿನವೂ ಟೀವಿ ಚಾನಲ್ ಗಳಲ್ಲಿ ಇತರೆ ಅಪರಾಧಿ ಲೋಕದ ಪಾತ್ರಗಳ ಜೊತೆ ಸ್ವಯಂಘೋಷಿತ ದೇವಮಾನವರು, ದೇವರ ಪ್ರತಿನಿಧಿಗಳು ಅವರ ಸಾಮಾಜಿಕ ನೈತಿಕತೆಗೆ ವಿರುದ್ಧವಾದ ಹಲವಾರು ಪ್ರಕರಣಗಳಲ್ಲಿ ಆರೋಪಿತರಾಗಿರುವ ಬಗ್ಗೆ ವೀಡಿಯೋ ಕ್ಲಿಪ್ಪಿಂಗ್ ಗಳನ್ನು ಬೆಳಗ್ಗೆಯಿಂದ ಸಂಜೆವರೆಗೆ ಪ್ರಸಾರ ಮಾಡುತ್ತಿದ್ದರೂ ತಾವದನ್ನು ಆಕ್ಷೇಪಿಸಿ ಖಂಡಿಸುವುದಿರಲಿ, ಕನಿಷ್ಠ ಪಕ್ಷ ತಮ್ಮ ಮನೆಯಲ್ಲೇ ಇರುವ ವಯಸ್ಸಿಗೆ ಬಂದ, ಬರುತ್ತಿರುವ ಮಕ್ಕಳ ಹಿತದೃಷ್ಟಿಯಿಂದ ಚಾನಲ್ಲಾದರೂ ಬದಲಾಯಿಸಿರುತ್ತಾರಾ? ಒಮ್ಮೆ ಕೇಳಬೇಕು.  ಇಲ್ಲಾ ಅಂತಾದರೆ, ಅಂಥವರು ಬೀದಿಯಲ್ಲಿ ನೈತಿಕತೆ, ಭಾವನಾತ್ಮಕತೆ, ವೈಚಾರಿಕತೆ, ದೈವಿಕತೆಗಳ ಬಗ್ಗೆ ಬಾಯಿ ಬಡಿದುಕೊಳ್ಳಲು ಅರ್ಹರಲ್ಲ.  ನಾಟಕದ ಬಗೆಗಿನ ಅಭಿಪ್ರಾಯ ಮತ್ತು ತರ್ಕಬದ್ಧವಿಲ್ಲದೇ ವಾದಿಸುವವರ ಕುರಿತು ಈ ಅನಿಸಿಕೆ ನನ್ನ ಸ್ವಂತದ್ದು ಮಾತ್ರ. ದಯವಿಟ್ಟು ವಿಮರ್ಶೆ ಎಂದು ಹೆಸರಿಸಬೇಡಿ, ನಾನಿನ್ನೂ ಆ ಹಂತ ತಲುಪಿಲ್ಲ……

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
vidyashankar
vidyashankar
9 years ago

"ಅಂಥವರು ಬೀದಿಯಲ್ಲಿ ನೈತಿಕತೆ, ಭಾವನಾತ್ಮಕತೆ, ವೈಚಾರಿಕತೆ, ದೈವಿಕತೆಗಳ ಬಗ್ಗೆ ಬಾಯಿ ಬಡಿದುಕೊಳ್ಳಲು ಅರ್ಹರಲ್ಲ."  I agree 

ganesh
ganesh
9 years ago

ನಿಮ್ಮ ಲೇಖನ ಚೆನ್ನಾಗಿತ್ತು. ಎಲ್ಲ ಕಾಲದಲ್ಲೂ ದೇವರನ್ನು ಮುಂದೆ ಇಟ್ಟುಕೊಂಡು ದುಡ್ಡು ಮಾಡುವ ದಂದೆ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದೆ.  ಸ್ವತ: ದೇವರೇ ತನ್ನನ್ನು ತಾನೆ ರಕ್ಷಿಸಿಕೊಳ್ಳಲು ಹೆಣಗಾಡುತ್ತಿದ್ದಾನೆ. 

ಕೆ.ಬಿ.ರುದ್ರೇಶ್
ಕೆ.ಬಿ.ರುದ್ರೇಶ್
7 years ago

ವಾಸ್ತವತೆಗೆ ತೀರ ಹತ್ತಿರವಾದ ಲೇಖನ, ನಾಟಕದ ನೈಜತೆ ಮತ್ತು ಹಂದರವನ್ನು  ಜನ ಅರ್ಥೈಸಿಕೊಳ್ಳಬೇಕಷ್ಟೆ ಅಮರ್ ದೀಪ್

3
0
Would love your thoughts, please comment.x
()
x